RSS

Tag Archives: SUCCESS STORY

ಕಷ್ಟ ಮೆಟ್ಟಿ ನಿಂತು ಯಶಸ್ಸಿನ ಬೆಟ್ಟ ಹತ್ತಿದವಳು ಲಿಜ್

ಲಿಜ್ ಮುರ್ರೆ. ಹುಟ್ಟಿದ್ದು ಸೆಪ್ಟಂಬರ್ ೨೩, ೧೯೮೦ರಂದು. ನ್ಯೂಯಾರ್ಕ್‌ನ ಬ್ರೋಂಕ್ಸ್ ಪಟ್ಟಣದಲ್ಲಿ. ಕಣ್ಣಬಿಟ್ಟಾಗ ಕಂಡಿದ್ದು ಕತ್ತಲಿನಲ್ಲಿದ್ದ ಬದುಕು. ಕೊನೆಗಾಣವೆನೋ ಎಂದೆನಿಸುವ ಸಮಸ್ಯೆಗಳು. ಯಾವ ಬಾಲ್ಯ ಬದುಕಿನುದ್ದಕ್ಕು ನೆಮ್ಮದಿಯ ನೆರಳಾಗಿ ಹಿಂಬಾಲಿಸಬೇಕಿತ್ತೊ, ಅದೇ ಬಾಲ್ಯ ಮರೆಯಾಗದ ಬವಣೆಗಳನ್ನ ಬೆನ್ನಿಗೆ ಕಟ್ಟಿಬಿಡ್ತು. ಆಡಿ, ನಲಿದು ಬೆಳೆಯಬೆಕಿದ್ದ ಕಂದಮ್ಮ ಬೇಡಿ, ಹಸಿದು ಮಲಗುವ ಸ್ಥಿತಿ ಮನೆಯಲ್ಲಿತ್ತು.

ಅಗಿನ್ನು ಅವಳಿಗೆ ಕೇವಲ ಮೂರರ ಆಸು, ಪಾಸು. ಆಗ ಅದೊಂದು ಅರ್ಥವೇ ಆಗದ ಸಂಗತಿ ಅವಳ ಗಮನಕ್ಕೆ ಬಂದಿತ್ತು. ಕೈ ಹಿಡಿದು ನಡೆಸಬೇಕಾದ ಅಪ್ಪ ಅಮ್ಮನೆ, ಹೆಜ್ಜೆ ತಪ್ಪಿ ನಡೆಯುತ್ತಿದ್ದಾರೆ ಎಂಬುದು ಮನವರಿಕೆಯಾಗಿದ್ದು, ಯಾಕಂದ್ರೆ ಅವರಿಬ್ಬರು ಮಾದಕ ವ್ಯಸನಿಗಳಾಗಿದ್ರು. ಅಡುಗೆಮನೆ ಸೇರಿಬಿಡುತ್ತಿದ್ದ ಲಿಜ್ನ ಅಪ್ಪ ಅಮ್ಮ ಮಕ್ಕಳ ಹಸಿವೆಯ ಪರಿವೇ ಇಲ್ಲದಂತೆ ಮಾದಕ ಲೋಕದಲ್ಲಿ ಮುಳುಗಿಬಿಡುತ್ತಿದ್ದರು.

ಲಿಜ್ಳ ತಾಯಿಗೆ ಹುಟ್ಟಿನಿಂದಲೇ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಜೊತೆಗೆ ವಿಪರೀತ ಬಡತನ. ತೀರದ ಸಮಸ್ಯೆಗಳಿಂದ ಪಾರಾಗುವದಕ್ಕೆ ಆಕೆ ಮೊರೆ ಹೋಗಿದ್ದು ಡ್ರಗ್ಸ್‌ನ ಚಟಕ್ಕೆ. ಸಾಲದ್ದಕ್ಕೆ ಮೈಮಾರುವ ದಂಧೆ. ಹೀಗೆ ವೇಶಾವೃತ್ತಿಯಲ್ಲಿದ್ದಾಗ ಸಾಂಗತ್ಯ ಬಯಸಿ ಬಂದವನೆ ಆಕೆಯ ಸಂಗಾತಿ ಆದ.

Featured image

ಲಿಜ್ ಎಂಬ ಛಲದಂಕ ಮಲ್ಲೆ

ಲಿಜ್ ಬೆಳೆದು ದೊಡ್ಡವಳಾಗುತ್ತಿದ್ದಂತೆ ಅವಳಿಗೆ ಮನೆಯ ಸ್ಥಿತಿ ಮೆಲ್ಲನೆ ಅರ್ಥವಾಗುತ್ತಾ ಹೋಯ್ತು. ಕುರುಡು ತಾಯಿಗೆ ಸರ್ಕಾರ ನೀಡುವ ಮಾಸಾಶನಕ್ಕೆ ಮನೆಮಂದಿಯೆಲ್ಲಾ ಬಾಯಿಬಿಟ್ಟು ಕುಳಿತುಕೊಂಡಿರುತ್ತಿದ್ರು. ತಿಂಗಳಿನ ಮೊದಲ ವಾರ ಮನೆಯಲ್ಲೆಲ್ಲ ಹಬ್ಬ. ವಾರ ಕಳೆದ್ರೆ ಸಿಗುತ್ತಿದ್ದದ್ದು ಐಸ್ ಕ್ಯೂಬ್‌ಗಳು, ಟೂಥ್‌ಪೇಸ್ಟ್, ಹಾಳಾದ ಮೊಟ್ಟೆಗಳು. ಮಕ್ಕಳು ಹೊಟ್ಟೆಗಿಲ್ಲದೆ ಪರಿತಪಿಸ್ತಿದ್ರೆ, ಪಾಲಕರು ನಶೆಯ ಪರಕಾಷ್ಠೆಯಲ್ಲಿ ತೇಲಿಹೋಗಿರುತ್ತಿದ್ರು.

ಲಿಜ್ ಅಪ್ಪ ಕದ್ದು ತಂದ ಪುಸ್ತಕದೆಡೆಗೆ ಮಸ್ತಕ ತಿರುಗಿಸಿದ್ದು. ಓದಿನೆಡೆಗೆ ಅವಳಿಗೆ ತೀರದ ಕುತೂಹಲ ಆರಂಭಗೊಂಡುಬಿಡ್ತು. ಈ ಸಮಯದಲ್ಲಿಯೇ ಲಿಜ್ ಅಪ್ಪ ಅಮ್ಮ ಬೇರೆಯಾಗಿಬಿಟ್ರು. ಆಗ ಲಿಜ್ಳ ತಾಯಿಗೆ ಮತ್ತೊಬ್ಬ ವ್ಯಕ್ತಿಯ ಪರಿಚಯವಾಯ್ತು. ಹೊಸ ಬದುಕು ಅವನೊಡನೆ ಪ್ರಾರಂಭವಾದ್ರು, ಹಳೆಯ ಚಟಗಳು ದೂರಸರಿದಿರಲೇಯಿಲ್ಲಾ. ಲಿಜ್ಗೆ ತಂದೆಯ ಜೊತೆಗಿರುವುದು ತುಸು ಕಷ್ಟವೇ ಆಗಿ ಮತ್ತೆ ಅಮ್ಮನೆಡೆಗೆ ತಿರುಗಿ ಬಂದುಬಿಟ್ಟಳು.

ಆದ್ರೆ ಹೊಸ ಅಪ್ಪನ ಕಟ್ಟುನಿಟ್ಟು ಲಿಜ್ಳಿಗೆ ಉಸಿರುಗಟ್ಟಿಸುತ್ತಿತ್ತು. ದಿನದ ಅಧಿಕ ಸಮಯವನ್ನ ಆಕೆ ಸ್ನೇಹಿತರ ಜೊತೆಗೆ ಕಳೆಯುತ್ತಿದ್ದಳು. ಹಗಲು ಕಳೆದು ಕತ್ತಲು ಆವರಿಸಿದ್ರೆ ಲಿಜ್ ರಾತ್ರಿ ಪಾಳೆಯ ಟ್ರೇನ್‌ನಲ್ಲೋ, ಪಾರ್ಕಿನ ಬೆಂಚಿನ ಮೇಲೆಯೋ ಮಲಗಿ ನಿದ್ರೆಗೆ ಜಾರುತ್ತಿದ್ದಳು. ಬದುಕು ಅಕ್ಷರಶಃ ಬೀದಿಗೆ ಬಿದ್ದುಬಿಟ್ಟಿತ್ತು. ಅವಳು ಮನೆಯ ಕಡೆ ಹೆಜ್ಜೆ ಹಾಕುವುದನ್ನೆ ಮರೆತು ಬಿಟ್ಟಿದ್ದಳು. ಈ ಸಮಯದಲ್ಲಿಯೇ ಲಿಜ್ಳ ತಾಯಿ ಏಡ್ಸ್‌ಗೆ ಬಲಿಯಾಗಿಬಿಟ್ಟಳು.

ತಾಯಿ ತೀರಿಕೊಂಡ ಮೇಲೆ ಬದುಕು ಮತ್ತಷ್ಟು ತಲ್ಲಣಗೊಂಡಿತು. ಆದ್ರೆ ಕಡಿತಗೊಂಡ ಓದನ್ನು ಹೇಗಾದ್ರು ಮಾಡಿ ಮುಂದುವರೆಸಬೇಕು ಎಂಬ ಛಲ ಚಿಗುರೊಡೆದುಬಿಡ್ತು. ಲಿಜ್ಳನ್ನ ಓದಿಸಲು ಪೆರ್ರಿ ವೈನರ್ ಎಂಬ ವ್ಯಕ್ತಿ ಸಹಾಯಕ್ಕೆ ಮುಂದಾದ. ಅಲ್ಲಿಂದ ಲಿಜ್ಳ ಬದುಕು ಮೆಲ್ಲನೆ ಗರಿಗೆದರಲಾರಂಭಿಸಿತು.

ಲಿಜ್ ತರಗತಿಗೆ ಅತೀ ಹೆಚ್ಚಿನ ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿಬಿಟ್ಟಳು. ನಾಲ್ಕು ವರ್ಷದ ಹೈಸ್ಕೂಲ್ ಎರಡೇ ವರ್ಷಕ್ಕೆ ಮುಗಿದು ಬಿಟ್ಟಿತ್ತು. ಮೊಟ್ಟ ಮೊದಲ ಬಾರಿಗೆ ಲಿಜ್ ಬೋಸ್ಟನ್‌ಗೆ ಕರೆದುಕೊಂಡು ಹೋಗುವ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿ ಆಯ್ಕೆಯಾಗಿಬಿಟ್ಟಳು.

ಹಾರ್ವರ್ಡ್‌ನ ಹುಲ್ಲು ಹಾಸಿನ ಮೇಲೆ ಪಾದ ಇಟ್ಟವಳಿಗೆ ನಾನು ಮುಂದೆ ಓದುವುದಾದ್ರೆ ಅದು ಇಲ್ಲಿಯೇ ಎಂಬ ಆಸೆ ಗಟ್ಟಿಯಾಗಿಬಿಡ್ತು. ಆದ್ರೆ ಹಾರ್ವರ್ಡ್‌ನಲ್ಲಿ ಓದುವುದು ಅವಳಿಗೆ ಅಕ್ಷರಶಃ ಗಗನ ಕುಸುಮವಾಗಿತ್ತು. ಒಪ್ಪತ್ತಿನ ಊಟಕ್ಕೆ ಪರಿತಪಿಸುತ್ತಿರುವವಳಿಗೆ ಹಾರ್ವರ್ಡ್‌ನ ಹಾದಿ ಏಳು ಬೆಟ್ಟ ಏರಿದಷ್ಟೆ ದುರ್ಭರವಾಗಿತ್ತು.

ಆದ್ರೆ ಅರ್ಜಿ ಕೈಗೆತ್ತಿಕೊಂಡವಳಿಗೆ ಗೋಚರಿಸಿದ್ದು ಬದುಕಿನ ಕಷ್ಟ ಹೇಳಿಕೊಳ್ಳಬೇಕಾದ ಪುಟ್ಟದೊಂದು ಪ್ರಭಂಧ ಬರೆಯಬೇಕಾಗಿದ್ದು. ಪೆನ್ ಕೈಗೆತ್ತಿಕೊಂಡ್ರೆ ಹಾಳೆಯ ಮೇಲೆ ಅಕ್ಷರಗಳ ಮಹಾಪೂರವೇ ಹರಿದುಬಿಡ್ತು. ನ್ಯೂಯಾರ್ಕ್‌ಟೈಮ್ಸ್, ಬಡತನದಲ್ಲಿ ನಲುಗುತ್ತಿರುವ ಪ್ರತಿಭಾವಂತರಿಗೆ ಹಾರ್ವ್‌ರ್ಡ್‌ನಲ್ಲಿ ಓದುವುದಕ್ಕೆ ೧೨ ಸಾವಿರ ಡಾಲರ್‌ಗಳನ್ನ ನೀಡುತ್ತಿತ್ತು. ಆದ್ರೆ ಇರುವ ಆರು ಸ್ಕಾಲರ್‌ಶಿಪ್‌ಗೆ ಆಯ್ಕೆಬಯಸಿದವರು ಮೂರು ಸಾವಿರ ಹೈಸ್ಕೂಲ್ ವಿದ್ಯಾರ್ಥಿಗಳು.

ಕೊನೆಗು ಆ ಸಮಯ ಬಂದೇಬಿಡ್ತು. ನ್ಯೂಯಾರ್ಕ್‌ಟೈಮ್ಸ್‌ನ ಸ್ಕಾಲರ್‌ಶಿಪ್ ಲಿಜ್ಳನ್ನ ಅರಸಿ ಬಂದೇಬಿಡ್ತು. ಲಿಜ್ ೨೦೦೯ರಲ್ಲಿ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಹಾರ್ವರ್ಡ್‌ನಿಂದ ಪದವಿ ದಕ್ಕಿಸಿಕೊಂಡುಬಿಟ್ಟಳು. ನಿರ್ಗತಿಕಳಾದವಳು ನಿಬ್ಬೆರಗಾಗುವಂಥಹ ಸಾಧನೆ ಮಾಡಿಬಿಟ್ಟಳು. ಖುದ್ದು ಲಿಜ್ ತನ್ನ ಯಶೋಗಾಥೆಯನ್ನ ಪುಸ್ತಕವಾಗಿ ಹೊರತಂದ್ರೆ ಬಿಸಿದೋಸೆಯಂತೆ ಖರ್ಚಾಗಿ ಅದು ಕೂಡಾ ದಾಖಲೆಯ ಪುಟ ಸೇರಿಬಿಡ್ತು. ಅದೊಮ್ಮೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದವಳು, ಇಂದು ಸಂತಸದ ಅಲೆಯಲ್ಲಿ ತೇಲುತ್ತಿದ್ದಾಳೆ. ಕಷ್ಟಗಳು ಎದುರಾದವೆಂದು ಬದುಕಿಗೆ ಬೆನ್ನುತೋರಿಸದೆ ದಿಟ್ಟವಾಗಿ ಎದುರಿಸಿ ಗಟ್ಟಿಗಿತ್ತಿ ಎಂದು ಲೋಕಕ್ಕೆಲ್ಲಾ ಸಾರಿಬಿಟ್ಟಳು.

Advertisements
 

ಟ್ಯಾಗ್ ಗಳು: ,

 
%d bloggers like this: