RSS

ಗೂಂಡಾ ಲಾಯರ್, ಅಂಧಾ ಸರ್ಕಾರ

(ಇದೇ ಶೀರ್ಷಿಕೆಯೊಂದಿಗೆ ದಿನಾಂಕ 04.03.2012ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನನ್ನ ಕಿರು ಅಭಿಪ್ರಾಯ ಪ್ರಕಟಗೊಂಡಿರುತ್ತದೆ)

ಇದು ಕೇವಲ ದುರಂತವಲ್ಲ ಈ ರಾಜ್ಯದ ದೌರ್ಭಾಗ್ಯ ಎಂದು ವಿಶ್ಲೇಷಿಸಿದರೆ ತಪ್ಪಲ್ಲ. ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ. ಸತ್ಯ, ನ್ಯಾಯಕ್ಕೆ ತಲೆ ಬಾಗುತ್ತೇವೆ ಎಂದು ಪ್ರಮಾಣ ಮಾಡಿದ ಎರಡು ವ್ಯವಸ್ಥೆಗಳ ಬೇಜವಾಬ್ದಾರಿತನದ ಪ್ರತಿಫಲನವೇ ಮಾಧ್ಯಮದ ಮೇಲಿನ ಹಲ್ಲೆ. ಜನೇವರಿ 17ರಂದು ರಾಜಧಾನಿಯಲ್ಲಿ ಸತತ 7 ಗಂಟೆ ರಸ್ತೆ ಬಂದ್ ಮಾಡಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಳಿಸಿ ಎಲ್ಲರ ಕಟು ಟೀಕೆಗೆ ಒಳಗಾಗಿದ್ದ ಪುಂಡ ವಕೀಲರುಗಳು ನಿನ್ನೆ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿದ್ದು ಇಡೀ ನಾಗರಿಕ ಸಮಾಜವೆ ತಲೆ ತಗ್ಗಿಸುವಂತಹ ವರ್ತನೆ. ಒಂದು ಅಕ್ಷಮ್ಯ ಅಪರಾಧಕ್ಕೆ ಕಾನೂನು ಬಲ್ಲ ವಕೀಲರೆ ಕಾರಣವಾಗಿದ್ದು ಪ್ರಜಾಪ್ರಭುತ್ವ ಬಹು ದೊಡ್ಡ ಅಣಕ. ಸಂವಿಧಾನ ಒದಗಿಸಿರುವ ಹಕ್ಕಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ಅದರ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುವ ಮಾಧ್ಯಮದ ಕರ್ತವ್ಯಕ್ಕೆ ಚ್ಯುತಿ ತಂದಿದ್ದಲ್ಲದೆ ಮನಬಂದಂತೆ ಥಳಿಸಿದ ವಕೀಲರುಗಳು ಯಾವ ಗೂಂಡಾಗಳಿಗು ಕಡಿಮೆ ಇಲ್ಲ ಎನ್ನಬಹುದು. ಆದರೆ ಇಷ್ಟಕ್ಕೆಲ್ಲಾ ಮೂಕ ಸಾಕ್ಷಿಯಾದ ಪೊಲೀಸ್ ಇಲಾಖೆ ಹಾಗೂ ಸರ್ಕಾರಗಳು ಕೈ ಕಟ್ಟು ಕುಳಿತಿದ್ದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆಯೇ ಪ್ರತಿಯೊಬ್ಬರ ಮನದಲ್ಲಿ ಉಳಿದದ್ದು. ಸಾರ್ವಜನಿಕರು, ರೈತರು ಪ್ರತಿಭಟಿಸಿದರೆ ಕುರಿಗಳಂತೆ ವಾಹನದಲ್ಲಿ ತುಂಬಿಕೊಂಡು ಹೋಗಿ ಇಲ್ಲದ ಕೇಸುಗಳನ್ನೆಲ್ಲಾ ಹಾಕಿ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಸರ್ಕಾರ ಇಲ್ಲಿಯವರೆಗೂ ವಕೀಲರುಗಳ ದುಂಡಾವರ್ತನೆಗೆ ಯಾವ ಕ್ರಮಗಳನ್ನು ಕೈಗೊಳ್ಳದಿರುವುದನ್ನು ನೋಡಿದರೆ, ಇಲ್ಲಿ ಸರ್ಕಾರ ಅಸ್ತಿತ್ವದಲ್ಲಾದರು ಇದೆಯಾ ಎಂಬ ಅನುಮಾನ ಕಾಡುತ್ತೆ.

ಇವರೇನಾ ನ್ಯಾಯಪಾಲಕರು?

ಇವರೇನಾ ನ್ಯಾಯಪಾಲಕರು?

ಹಿಂದಿನಿಂದಲೂ ಹಲವು ಕಾನೂನು ವಿರೋಧಿ ಪುಂಡಾಟಗಳನ್ನು ಎಗ್ಗಿಲ್ಲದೆ ನಡೆಸಿಕೊಂಡು ಬರುತ್ತಿರುವ ವಕೀಲರಿಗೆ ಖಂಡಿತವಾಗಿಯೂ ಪಾಠ ಕಲಿಸಬೇಕಾದ ಅಗತ್ಯವಿದೆ. ತಮ್ಮ ಇತಿ-ಮಿತಿಗಳು ಮತ್ತು ಜವಾಬ್ದಾರಿಗಳನ್ನು ಮರೆತು ಮನಬಂದತೆ ವರ್ತಿಸಿದ ವಕೀಲರ ಈ ನಡುವಳಿಕೆ ಇಡೀ ವಕೀಲಿ ವೃತ್ತಿಯೆಡಗಿನ ಗೌರವದ ಸೌಧವೇ ಕುಸಿದು ಬೀಳುವಂತೆ ಮಾಡುತ್ತದೆ. ತಕ್ಷಣ ಸರ್ಕಾರ  ಗೂಂಡಾ ವರ್ತನೆ ತೋರಿದ ವಕೀಲರ ಮೇಲೆ ಕಠಿಣಾತಿ ಕಠಿಣ ಕ್ರಮ ಜರುಗಿಸದಿದ್ದರೆ, ಮುಂದೊಂದು ದಿನ ಸಾರ್ವಜನಿಕರೆ ಕೈಗೆ ಸಿಕ್ಕ ವಕೀಲರನ್ನು ಅಟ್ಟಾಡಿಸಿ ಹೊಡೆಯುವ ದುಸ್ಸಾಹಸಕ್ಕಿಳಿಯಬಹುದು. ಆ ಮೂಲಕ ಇಡೀ ಕಾನೂನು ವ್ಯವಸ್ಥೆಯೆ ಅಯೋಮಯಗೊಳ್ಳುವುದು ಖಂಡಿತಾ. ಇನ್ನಾದರು ಸರ್ಕಾರ  ಎಚ್ಚೆತ್ತು ಜವಾಬ್ದಾರಿಯುತವಾಗಿ ವರ್ತಿಸಲಿ ಎಂಬುದು ಪ್ರತಿಯೊಬ್ಬರ ಆಶಯ. ಆದರೆ ನಿಜಕ್ಕೂ ಅನಾಗರಿಕರಂತೆ ವರ್ತಿಸಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ವಕೀಲರುಗಳ ವರ್ತನೆ ಖಂಡನೀಯ. ಅವರುಗಳಿಗೆಲ್ಲಾ ಧಿಕ್ಕಾರವಿರಲಿ…

ಆದರೆ ದುರಂತವೆಂದರೆ ಘಟನೆಯ ನಂತರ ಸರ್ಕಾರ ಹಾಗೂ ಪೊಲೀಸ್ ರು ಎಚ್ಚೆತ್ತು ಕ್ರಮ ಕೈಗೊಂಡ ತಕ್ಷಣ ಮೆಲ್ಲಗೆ ಈ ಘಟನೆ ರಾಜಕೀಯ ಬಣ್ಣ ಬಳಿದುಕೊಳ್ಳುತ್ತಿದ್ದು, ಪರಿಸ್ಥಿತಿ ತಿಳಿಗೊಳ್ಳುವ ಬದಲು ಮತ್ತಷ್ಟು ವಿಕೋಪಕ್ಕೆ ತಿರುಗುತ್ತಿರುವುದು ಮಾತ್ರ ವಿಪರ್ಯಾಸ. ಕಾರಣ ವಕೀಲರ ಪರಿಷತ್ತಿನಲ್ಲಿರುವ ಅನೇಕ ಪ್ರತಿನಿಧಿಗಳು ಒಂದಲ್ಲಾ ಒಂದು ರಾಜಕೀಯ ಪಕ್ಷಗಳೆ ಜೊತೆ ಗುರುತಿಸಿ ಕೊಂಡಿರುವವರೆ. ಖುದ್ದು ಅಧ್ಯಕ್ಷರೇ ಬಿಜೆಪಿ ಪಕ್ಷದ ಮಾಜಿ ಶಾಸಕರು. ಹೀಗಿರುವಾಗ ಇದರ ಹಿಂದಿನ ಕಾಣದ ಕೈ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ನಿಜಕ್ಕೂ ಇದು ದುರದೃಷ್ಟಕರ. ಪೆಟ್ಟು ತಿಂದ ಮಾಧ್ಯಮದವರ ಬಗ್ಗೆ ಯಾರು ಬೆಂಬಲಕ್ಕೆ ನಿಲ್ಲದೆ, ಒಬ್ಬರ ಮೇಲೊಬ್ಬರು ರಾಡಿ ಎರೆಚುತ್ತಾ ವಿಷಯಕ್ಕೆ ರಾಜಕೀಯದ ವಿಷ ಬೆರಸುವಲ್ಲಿ ನಿರತರಾಗಿದ್ದಾರೆ. ಅಲ್ಲಿಗೆ ಇದರ ಮುಂದಿನ ಫಲಿತಾಂಶ ಏನು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಭವಿಷ್ಯದ ಸಾಮರಸ್ಯ ಹಾಗೂ ಮಾಧ್ಯಮಗಳಿಗೆ ಬೇಕಾದ ನಿರ್ಭಿಢೆ ಸ್ವಾತಂತ್ರದ ದೃಷ್ಟಿಯಿಂದ ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಾಧ್ಯಮದ ಹಿರಿಯರು ಮತ್ತು ವಕೀಲರು ನಿಷ್ಪಕ್ಷವಾಗಿ ಒಂದು ನಿಲುವಿಗೆ ಬರಬೇಕೆಂಬುದೆ ಪ್ರತಿಯೊಬ್ಬರ ಆಶಯ.

Advertisements
 
ನಿಮ್ಮ ಟಿಪ್ಪಣಿ ಬರೆಯಿರಿ

Posted by on ಮಾರ್ಚ್ 5, 2012 in ಅವಿಭಾಗೀಕೃತ

 

ಆಕಾಶ್ ಗಿಂತ ಎತ್ತರಕ್ಕೆ ಬೇಡಿಕೆ ಹೆಚ್ಚಿಸಿಕೊಂಡ ಯುಬಿಸ್ಲೇಟ್ 7+ ಟ್ಯಾಬ್ಲೆಟ್

ಇದ್ಯಾವ ಮಾತ್ರೆ ಮಾರಾಯ ಅಷ್ಟೊಂದು ಬೇಡಿಕೆಯಲ್ಲಿರುವುದು ಎಂಬ ಕುತೂಹಲ ನಿಮ್ಮನ್ನು ಕೆಣಕಿದರೆ ಅಚ್ಚರಿಯಿಲ್ಲ. ಏಕೆಂದರೆ ಈ ಮೊದಲು ಕೆಲವು ಮಾತ್ರೆಗಳು ವಿದೇಶಗಳಿಂದ, ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಸಾಕಷ್ಟು ಸಂಚಲನ ಉಂಟುಮಾಡಿದ್ದವು. ಈಗ ಇದ್ಯಾವುದು ಮತ್ತೊಂದು ಮಾತ್ರೆ ಎಂಬ ಹುಳು ತಲೆಗೆ ಹೋಗುವುದು ಸಾಮಾನ್ಯ.

ಬಿಡಿ! ಇದ್ಯಾವುದು ಆ ತರಹದ ಟ್ಯಾಬ್ಲೆಟ್ ಅಲ್ಲ. ಈಗ ಹೇಳ ಹೊರಟಿರುವುದು ಕೇಂದ್ರ ಸರ್ಕಾರ ಎಲ್ಲರ ಕೈಯಲ್ಲಿ ಕಡಿಮೆ ದುಡ್ಡಿಗೆ ಟ್ಯಾಬ್ಲೆಟ್ ಕೊಡ್ತೀನಿ ಎಂದು ಹೇಳಿ ಕಿವಿ ಮೇಲೆ ಹೂ ಇಟ್ಟಿರುವ ಕಥೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ಆಕಾಶ್’ ಟ್ಯಾಬ್ಲೆಟ್-ಪಿಸಿ. ಹೌದು ತಂತ್ರಜ್ಞಾನದ ತೀವ್ರ ಆವಿಷ್ಕಾರದ ಫಲವಾಗಿ ಕಂಪ್ಯೂಟರ್ ಗೆ ಹತ್ತಿರದ ಸಂಬಂಧಿಯಾಗಿ ರೂಪ ತಳೆದ ಅಂಗೈಯಗಲದಷ್ಟು ಆಕಾರವಿರುವುದು ಈ ಟ್ಯಾಬ್ಲೆಟ್. ಮಾರುಕಟ್ಟೆಯಲ್ಲಿ ಸರಿ ಸುಮಾರು ರೂ.10,000 ದಷ್ಟು ಕನಿಷ್ಠ ಬೆಲೆಯಿಂದ ರೂ.40,000 ಸಾವಿರದಷ್ಟು ಗರಿಷ್ಠ ಬೆಲೆಯ ಟ್ಯಾಬ್ಲೆಟ್ಗಳಿರುವಾಗ ಕೇಂದ್ರ ಸರ್ಕಾರ ಘೊಷಿಸಿದ ‘ಆಕಾಶ್’ ಟ್ಯಾಬ್ಲೆಟ್ ಕೇವಲ 2000ದ ಸನಿಹದಲ್ಲಿ ಲಭ್ಯವಾಗುವುದು ಎಂದು ಘೋಷಿಸಿದ್ದು ಅತೀವ ಅಚ್ಚರಿಯನ್ನೆ ಹುಟ್ಟು ಹಾಕಿತ್ತು. ಅದು ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅನ್ನೊದಾದರೆ ನಾವು ಯಾಕೆ ಪ್ರಯತ್ನಿಸಬಾರದು ಎಂದು ಮಧ್ಯಮ ವರ್ಗದವರು ಕನಸು ಕಂಡಿದ್ದರು. ಹೀಗಾಗಿ ಆಕಾಶ್ ಯಾವಾಗ ಮಾರುಕಟ್ಟೆಗೆ ಬರುತ್ತದೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು. ಆದರೆ ಸರ್ಕಾರ ಇದನ್ನು ಮೊದಲು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ಹೇಳಿ ಕೊಂಚ ನಿರಾಸೆ ಉಂಟು ಮಾಡಿತ್ತು. ಆದರೆ ಇತ್ತೀಚಿನ ಸುದ್ದಿಯ ಪ್ರಕಾರ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದ ಆಕಾಶ್ ಸಂಪೂರ್ಣ ವಿಫಲ ಏನಿಸಿಕೊಂಡಿದೆ. ಕಪಿಲ್ ಸಿಬಲ್ ಅಂದು ಕೈಯಲ್ಲಿ ಹಿಡಿದಿದ್ದ ಟ್ಯಾಬ್ಲೆಟ್ ಮೂಲಕ ರಾಷ್ಟ್ರಕ್ಕೆಲ್ಲಾ ಕಾಗೆ ಹಾರಿಸಿದ್ದಾರೆ. ಹಾಗೆಯೇ ಆಕಾಶ್ ವಿತರಿಸುವ ಹೊಣೆ ಹೊತ್ತ ಡಾಟಾವಿಂಡ್ ಕೂಡಾ ಇಷ್ಟು ಕಡಿಮೆ ಮೊತ್ತಕ್ಕೆ ಆಕಾಶ್ ಕೊಡುವುದು ಅಸಾಧ್ಯ ಎಂಬ ರಾಗ ಹಾಡುತ್ತಿದೆ. ಹೀಗಾಗಿ ಸರ್ಕಾರದ ಹೇಳಿಕೆಯಂತೆ ಅಂಗೈಯಲ್ಲಿ ಆಕಾಶ ತೋರಿಸುವ  ಈ ಕನಸು ಠುಸ್ಸ.

ನೆನಪಿರಲಿ ಇದು ಕಪಿಲ್ ಸಿಬಲ್ ರ ಅಂಗೈಯಲ್ಲಿ ಆಕಾಶವಲ್ಲ.

ನೆನಪಿರಲಿ ಇದು ಕಪಿಲ್ ಸಿಬಲ್ ರ ಅಂಗೈಯಲ್ಲಿ ಆಕಾಶವಲ್ಲ.

 ಆದರೆ ಈ ವಿಷಯದಿಂದ ನೀವು ಬೇಸರಗೊಳ್ಳುವ ಅಗತ್ಯವಿಲ್ಲ. ಸಂತಸದ ಸಂಗತಿ ಎಂದರೆ ಮುಕ್ತ ಮಾರುಕಟ್ಟೆಯಲ್ಲಿ ರೂ.2999ಕ್ಕೆ ಲಭ್ಯವಿರುವ ಟ್ಯಾಬ್ಲೆಟ್ ಬೇಡಿಕೆ ಆಗಸಕ್ಕೇರಿದೆ. ಇದಕ್ಕೆ “ಯುಬಿಸ್ಲೇಟ್ 7+” ಎಂದು ಹೆಸರಿಡಲಾಗಿದ್ದು, ಇದು ಆಕಾಶ್ ನ ಮುಂದುವರೆದ ಅವತರಣಿಕೆಯಾಗಿದೆ.  ಆಕಾಶ್ ಗಿಂತ ಎತ್ತರಕ್ಕೆ ಬೇಡಿಕೆ ಹೆಚ್ಚಿಸಿಕೊಂಡ ಯುಬಿಸ್ಲೇಟ್  ಕಂಪನಿಯು ಇದನ್ನು ಒದಗಿಸುತ್ತಿದೆ.ಕೇಂದ್ರ ಸರ್ಕಾರ ತನ್ಮೂಲಕ ವಿತರಿಸುವ ಸೆಟ್ ಗಳಿಗೆ ಆಕಾಶ್ ಎಂಬ ಹೆಸರು ಸೂಚಿಸಿತ್ತು. ಆದರೆ ಈಗ ಲಭ್ಯವಿರುವ ಸೆಟ್ ಆಕಾಶ್ ಅಲ್ಲ ಅದು ಯುಬಿಸ್ಲೇಟ್ 7+ ಈಗ ಮಾರ್ಚ್ ನಲ್ಲಿ ವಿತರಿಸುವ ಟ್ಯಾಬ್ಲೆಟ್ ಗಳ ಬುಕಿಂಗ್ ಲಭ್ಯವಿದ್ದು, ಇಲ್ಲಿವರೆಗು 20 ಲಕ್ಷ ಬುಕಿಂಗ್ ಮಾಡಲಾಗಿದೆಯಂತೆ. ಈ ಸಂಖ್ಯೆಯನ್ನು ಗಮನಿಸಿದರೆ ಇದರ ಬೇಡಿಕೆ ಅರ್ಥವಾಗುತ್ತದೆ.

ಇಷ್ಟಕ್ಕು ಯುಬಿಸ್ಲೇಟ್ 7+ ನಲ್ಲೇನಿದೆ ಎಂಬ ಕುತೂಹಲ ಸಹಜ. ಇದು 7 ಇಂಚಿನ ಸ್ಪರ್ಶ ಪರದೆಯನ್ನು ಹೊಂದಿದ್ದು, ಅತೀ ಸರಳವಾಗಿ ಅಂದರೆ ವೈ-ಫೈ ಹಾಗೂ ಜಿಪಿಆರ್ ಎಸ್ ಮೂಲಕ ಅಂತರ್ಜಾಲಕ್ಕೆ ಸಂಬಂಧ ಜೋಡಿಸುತ್ತದೆ. ಆಂಡ್ರಾಯ್ಡ್ 2.3 ಕಾರ್ಯಚಾಲನೆ ವ್ಯವಸ್ಥೆಯಿದ್ದು, 700ಮೆ.ಹಟ್ಜ್ ಪ್ರೊಸೆಸರ್ ಜೊತೆಗೆ ಉತ್ಕೃಷ್ಠ ಗುಣಮಟ್ಟದ ದೃಶ್ಯಾವಳಿಯನ್ನು ಬೆಂಬಲಿಸುತ್ತದೆ. ಹಾಗೆಯೇ ಬಾಹ್ಯವಾಗಿ 2ಜಿಬಿ ಇಂದ 32ಜಿಬಿ ವರೆಗೆ ಶೇಖರಣೆಯ ಸಾಮರ್ಥ್ಯವಿದ್ದು, 256 ಎಂಬಿ ರಾಮ್ ಹೊಂದಿದೆ. ಇನ್ನೂ ಅನೇಕ ಆಕರ್ಷಕ ವೈವಿಧ್ಯತೆಗಳನ್ನು ಒಳಗೊಂಡ ಯುಬಿಸ್ಲಾಟ್ 7+ ನೀಡುವ ಬೆಲೆಗಿಂತ ಅಧಿಕ ಅನುಕೂಲಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ ಆಕಾಶ್ ಸಿಗದೆಂದು ಬೇಸರಪಡುವ ಅಗತ್ಯವಿಲ್ಲ. ಈಗ ಅದಕ್ಕಿಂತಲೂ ಎಲ್ಲ ವಿಧದಲ್ಲಿ ಅತ್ಯುತ್ತಮವಾದ  ಯುಬಿಸ್ಲೇಟ್ 7+ ಲಭ್ಯವಿದೆ (http://www.ubislate.com/prebook.html) ಈಗಲೇ ಕಾಯ್ದಿರಿಸಿ.

 
ನಿಮ್ಮ ಟಿಪ್ಪಣಿ ಬರೆಯಿರಿ

Posted by on ಜನವರಿ 13, 2012 in ಅವಿಭಾಗೀಕೃತ

 

ಟ್ಯಾಗ್ ಗಳು:

ಹುಡುಗಿಯರೆ, ‘ಎದೆ’ಗಾರಿಕೆ ತೋರಿಸಿದರೆ ಅಪಾಯ ತಪ್ಪಿದ್ದಲ್ಲ!

ಅದ್ಯಾವ ಸಮೀಕ್ಷೆಯಿಂದ  ಆಂಧ್ರದ ಡಿಜಿಪಿ ಅವರಿಗೆ ಈ ವಿಷಯ ಗೊತ್ತಾಯಿತೋ ತಿಳಿಯದು. ಅಂತು ತಮ್ಮ ಇಷ್ಟು ವರ್ಷಗಳ ಅನುಭವವನ್ನು ಬಳಸಿ ಒಂದು ಫರ್ಮಾನು ಹೊರಡಿಸಿಯೇ ಬಿಟ್ಟರು. ಪಾಪ! ಅವರಿಗೆ ಅದರ ಸಾಧಕ, ಬಾಧಕಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲಕ್ಕೆ ಹೀಗೆ ಹೇಳಿರಬಹುದು. ಆದರೆ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಇಲಾಖೆಯ ಮಂತ್ರಿಗಳಾದ ಸಿ.ಸಿ.ಪಾಟೀಲ್ ಅವರು ಇದು ತಮ್ಮ ಖಾತೆಗೆ ಸಂಬಂಧಿಸಿದ ವಿಚಾರವೆಂದೋ ಏನೋ ಡಿಜಿಪಿ ಅವರು ಹೇಳಿದ್ದು ದೇವರಾಣೆಗು ಸತ್ಯ ಎಂದು ಸಮಸ್ತ ನಾಡಿನ ಮಹಿಳಾ ಮಣಿಗಳ ಘನತೆ ಕಾಪಾಡುವ ಹೊಣೆ ಹೊತ್ತರು. ಅಲ್ಲಿಗೆ ಶುರುವಾಯಿತು ಎಲ್ಲಮ್ಮಾ ನಿನ್ನಾಲ್ಕು ಉಧೋ… ಉಧೋ… ಉಧೋ…….

ಇಷ್ಟಕ್ಕು ನಡೆದೆದ್ದೆನೆಂದರೆ ಆಂಧ್ರದ ಡಿಜಿಪಿಯವರು ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಪ್ರೇರಣೆ ಅವರು ತೋಡುವ  ಉಡುಪುಗಳೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ್ಥ ಮಹಿಳೆಯರು ಮಾದಕವಾಗಿ ಕಾಣುವಂತೆ ಬಟ್ಟೆ ತೋಡುವುದು ಗಂಡಿಸಿಗೆ ಕಾಮ ಪ್ರಚೋದನೆ ನೀಡುತ್ತದೆ ಎಂಬುದನ್ನು ಸೂಚ್ಯವಾಗಿ ಧ್ವನಿಸುತ್ತದೆ. ಇದು ಅವರ ತನಿಖೆಯಿಂದ ಬಯಲಾದ ಸತ್ಯವೋ ಅಥವಾ ಗುಪ್ತಚರ ಮಾಹಿತಿಯೋ ಅಂತು ಅತ್ಯಾಚಾರದ ಹಿಂದಿನ ರಹಸ್ಯವನ್ನು ಭೇಧಿಸಿದರು. ಇದಕ್ಕೆ ನಮ್ಮ ರಾಜ್ಯದ ಮಂತ್ರಿಗಳಾದ ಸಿ.ಸಿ.ಪಾಟೀಲ್ ಅವರು ಕೂಡಾ ಧ್ವನಿಗೂಡಿಸಿದರು. ಅಲ್ಲಿಗೆ ಹೊತ್ತಿಕೊಂಡಿತು “ವಸ್ತ್ರ ಜ್ವಾಲೆ”.

ಇಂತಹದ್ದೊಂದು ಹೇಳಿಕೆ ತೀರಾ ಬಾಲಿಶ ಅಂದೆನಿಸದಿದ್ದರು, ಅತ್ಯಾಚಾರ ಹೆಚ್ಚುತ್ತಿರುವದಕ್ಕೆ ಈ ಕಾರಣ ಕೇವಲ ಶೇ.2ರಷ್ಟು(ಒಂದು ಊಹೆ ಮಾತ್ರ) ಕಾಣಿಕೆ ಸಂದಾಯ ಮಾಡಿರಬಹುದೆನೋ. ಆದರೆ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರರು ಖಡಾಖಂಡಿತವಾಗಿ ಏಡಗೈಯಲ್ಲಿ ನೀವಾಳಿಸಿ ಎಸೆದಿದ್ದಾರೆ. ಅವುಗಳು ಅರ್ಥಪೂರ್ಣವಾಗಿವೆ ಮತ್ತು ಸಮಂಜಸ  ಎಂದೆನಿಸುತ್ತವೆ. ಕಾರಣ ಅತ್ಯಚಾರಕ್ಕೆ ಪ್ರೇರಣೆ ಕೇವಲ ತೊಡುವ ಉಡುಪುಗಳೆ ಆಗಿದ್ದರೆ ಅಪ್ರಾಪ್ತ ಬಾಲಕಿಯರ ಮೇಲೆ, ಹಸುಳೆಗಳ ಮೇಲಿನ ಕಾಮುಕರ ನಿರ್ಲಜ್ಜ ತನಕ್ಕೆ ಯಾವ ಪ್ರೇರಣೆ ಎಂಬುದು ಅವರ ಒಕ್ಕೂರಲಿನ ಪ್ರಶ್ನೆ. ಹಾಗೆಯೇ ಕೆಲವೊಂದು ಮುಸ್ಲಿಂ ರಾಷ್ಟ್ರಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದ್ದರೂ, ಅತ್ಯಾಚಾರಿಗಳಿಗೆ ಕಠಿಣಾತಿ, ಕಠಿಣ ಶಿಕ್ಷೆ ವಿಧಿಸಿದರು ಅಲ್ಲಿ ಇಂದಿಗೂ ಅತ್ಯಾಚಾರವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಇದಕ್ಕೇನು ಪ್ರೇರಣೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅತ್ಯಾಚಾರಕ್ಕೆ ಕಾರಣ ಒಂದು ಹೀನ ಮನಸ್ಥಿತಿ. ಅಲ್ಲಿ ವ್ಯಕ್ತಿಗೆ ಕಾಮ ತೃಷೆ ಮಾತ್ರ ಮುಖ್ಯ. ಅದನ್ನು ತೀರಿಸಿ ಕೊಳ್ಳಲು ಅವನಿಗೆ ಹೆಣ್ಣು ಬೇಕು. ಅದಕ್ಕೆ ಎಷ್ಟೋ ಸಾರಿ ವಯಸ್ಸು, ಸಂಬಂಧ ಮತ್ತು ಸಂದರ್ಭಗಳ ಪರಿವೇ ಇರುವುದಿಲ್ಲ. ಸಂಸ್ಕೃತದ “ಕಾಮಾತುರಾಣಾಂ ನ ಭಯಂ, ನ ಲಜ್ಜಾ” ಎಂಬ ಘೋಷವಾಕ್ಯವನ್ನು ಉದಾಹರಿಸುವುದಾದರೆ ಈ ಪ್ರಕ್ರಿಯೆ ಶತ, ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು ಎಂಬುದು ವೇದ್ಯವಾಗುತ್ತದೆ. ಹೀಗಿರುವಾಗ ತೀರಾ ಮಡಿವಂತಿಕೆ ಯ ಸಮಾಜ ಅಸ್ತಿತ್ವದಲ್ಲಿದ್ದಾಗಲು ಅತ್ಯಾಚಾರವಿರಲಿಲ್ಲ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವೇ!?

ಇನ್ನೂ ಉಡುಪು ಕೇವಲ ಮಾನ ಮುಚ್ಚುವ ವಸ್ತ್ರವಷ್ಟೇ ಆಗಿ ಉಳಿದಿಲ್ಲ ಎಂಬುದನ್ನು ಮನಗಾಣಬೇಕು. ಇಲ್ಲಿ ಹಲವು ಸಂಪ್ರದಾಯಗಳವರು ತೋಡುವ ಉಡುಪಿನಲ್ಲಿ ಅನೇಕ ವೈರುಧ್ಯತೆಯನ್ನು ಗಮನಿಸಬಹುದು. ಅವು ರೂಢಿಸಿಕೊಂಡು ಬಂದಂತಹವು. ಅದರಲ್ಲಿ ಪ್ರಚೋದನೆಯ ಅಂಶವನ್ನು ಹುಡುಕಲಾದೀತೆ. ಜನಾಂಗದಿಂದ ಜನಾಂಗಕ್ಕೆ, ಧರ್ಮಗಳಿಂದ, ಧರ್ಮಕ್ಕೆ, ದೇಶಗಳಿಂದ, ದೇಶಕ್ಕೆ ಉಡುಪುಗಳಲ್ಲಿ ಭಿನ್ನತೆ ಸಾಮಾನ್ಯವಾದದ್ದು. ಅದು ಅಲ್ಲಿನ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ. ಹೀಗಿರುವಾಗ  ಅತ್ಯಚಾರಕ್ಕು ಉಡುಪಿಗು ಸಂಬಂಧ ಹೆಣೆಯುವದು ಪಲಾಯನಾವಾದ ಎನಿಸಿಕೊಳ್ಳುತ್ತದೆ. ಎಲ್ಲೋ ಗಂಡಿನ ಹೀನ ಮನಸ್ಥಿತಿಯ ಸಮರ್ಥನೆಯಾಗಿ ಗೋಚರಿಸುತ್ತದೆ. ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ, ಶೈಕ್ಷಣಿಕವಾಗಿ ಸಾಕಷ್ಟು ಯಶಸ್ಸುಗಳಿಸಿರುವಲ್ಲಿಯು ಅತ್ಯಾಚಾರವೆಂಬ ಪಿಡುಗು ಶಮನವಾಗಿಲ್ಲ. ಅಷ್ಟೇ ಏಕೆ ನಮ್ಮಲ್ಲಿಯೆ ಪ್ರತಿ ವರ್ಷ ಕೇಳಿ ಬರುವ ಲೈಂಗಿಕ ಶೋಷಣೆಯ ಕೂಗುಗಳೂ ಏಳುವುದು ಕಾಲೇಜು, ವಿಶ್ವವಿದ್ಯಾಲಯಗಳಿಂದಲೇ. ಇದಕ್ಕೇನು ಹೇಳಲು ಸಾಧ್ಯ. ಹೆಣ್ಣನ್ನು ಭೋಗದ ವಸ್ತು ಎಂದು ರಾಮಾಯಣ, ಮಹಾಭಾರತ ಕಾಲದಿಂದಲೂ ಚಿತ್ರಿಸುತ್ತಲೆ ಬಂದಿರುವಾಗ ಇಂದು ಆ ಮನಸ್ಥಿತಿಯನ್ನೆ ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಹಾಕಲು ಸಾಧ್ಯವೇ?

ಮನುಷ್ಯ ಎಷ್ಟೇ ಆಧುನಿಕತೆಯನ್ನು ಒಪ್ಪಿಕೊಂಡರು ಕೆಲವು ಬದಲಾವಣೆಗಳು ಅಸಾಧ್ಯ. ಅದರಲ್ಲಿ ಈ ಅತ್ಯಾಚಾರವು ಒಂದು. ಮತ್ತೊಂದು ವಿಷಯವೆಂದರೆ ಸದಾ ಮುಚ್ಚಿಟ್ಟಿದ್ದರ ಬಗ್ಗೆಯೆ ಮನುಷ್ಯನಿಗೆ ಕುತೂಹಲ ಹೆಚ್ಚು. ಚಿಕ್ಕ ಮಕ್ಕಳನ್ನು ಕೇಳಿದರೆ ಹೇಳುತ್ತಾರೆ. ಆದರು ನಮ್ಮಲ್ಲಿ ಇನ್ನು “ಚೋಲಿ ಕೆ ಫೀಛೆ ಕ್ಯಾ ಹೈ” ಎಂಬ ತುಂಟ ಪ್ರಶ್ನೆ ಕೇಳುವದನ್ನು ಬಿಟ್ಟಿಲ್ಲ. ಕಾಲಾಂತರದಿಂದ ಗಮನಿಸುತ್ತಾ ಬನ್ನಿ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಹೆಕ್ಕಿ ತೆಗೆದು ನೋಡಿದರು ಅಲ್ಲಿ ಅತ್ಯಾಚಾರದ ದೃಶ್ಯ ಕಾಣುವುದು ಗೌರಮ್ಮನಂತೆ ಸೀರೆ ಹುಟ್ಟ ಹೆಂಗಸಿನ ಮೇಲೆಯೇ, ಇದಕ್ಕೇನು ಹೇಳೋಣ. ಅದಕ್ಕೆ ನೀವು ಮಡಿವಂತಿಕೆಯಿಂದ ಬಟ್ಟೆ ತೊಟ್ಟ ತಕ್ಷಣ ಕಾಮಣ್ಣರು, ಸಜ್ಜನರಾಗುವುದಿಲ್ಲ.

ಹಾಗೆಂದ ಮಾತ್ರಕ್ಕೆ ಹೇಗೆ ಬಟ್ಟೆ ತೊಟ್ಟರು ನಡೆಯುತ್ತೆ ಎಂಬ ಅಸಡ್ಡೆಯು ಸಲ್ಲದು. ನಮ್ಮದು ಸುಸಂಸ್ಕತ ರಾಷ್ಟ್ರ. ಇದು ತೀರಾ ಮನುವಾದವಲ್ಲ. ಆದರೆ ತೊಡುವ ಬಟ್ಟೆ ಮಾನ ಮುಚ್ಚುವ ಜೊತೆಗೆ ಆಕರ್ಷಕವಾಗಿರಬೇಕು.ಹಾಗೆಂದು ಸಭ್ಯತೆ ಎಲ್ಲೆಯನ್ನು ಮೀರಬಾರದು. ಎದೆ ಕಾಣುವಂತೆ, ತೊಡೆ ಕಾಣುವಂತೆ ಬಟ್ಟೆ ತೊಡುವುದು ಫ್ಯಾಷನ್ ಏನಿಸುವದಿಲ್ಲ. ಪ್ರಾಪರ್ಟಿ ಪ್ರದರ್ಶನ ಏನಿಸುತ್ತೆ. ಅದಕ್ಕೆ ಎಲ್ಲೆ ಮೀರದ ಉಡುಪು ತೋಡುವುದು ಕೇವಲ ಸಂಸ್ಕೃತಿಯ  ಪಾಲನೆ ಅಷ್ಟೇ ಅಲ್ಲ, ಸಂಸ್ಕಾರದ ಪ್ರತಿಬಿಂಬವು ಎಂಬುದನ್ನು ಮರೆಯಬಾರದು.

 

ಟ್ಯಾಗ್ ಗಳು:

ಈ ವಿಷಯದಲ್ಲಿ ಜಾಗೃತಿ ಖಂಡಿತಾ ಅಗತ್ಯ.ಎಚ್ಚರ ತಪ್ಪೀರಾ..ಹುಷಾರ್…!

ಮನುಷ್ಯ ಬದುಕಲು ಏನು ಬೇಕು ಎಂದು ಇಂದಿನ ಯುವ ಜನಾಂಗವನ್ನು ಕೇಳಿದರೆ ಖಂಡಿತಾ ನಿಮಗೆ ನೀವು ನೀರಿಕ್ಷಿಸುತ್ತಿರುವ ಉತ್ತರ ಸಿಗಲಾರದು. ನೀರು, ಗಾಳಿ, ಆಹಾರ ಎಂದೆಲ್ಲ ನೀವೇನಾದರು ಅಪ್ಪಿ, ತಪ್ಪಿ ಹೇಳಿದರೆ ಅವರ ಮಟ್ಟಿಗೆ ನೀವು ಪೆದ್ದಪ್ಪರೆ. ಕಾಲ ಬದಲಾಗಿದೆಯೋ ಅಣ್ಣಾ, ಇದು ತಂತ್ರಜ್ಞಾನದ ಯುಗ ಕಾಣಣ್ಣ ಎಂದು ಬುದ್ಧಿ ಹೇಳುತ್ತಾರೆ.
ನಿಜ! ಇದು ಗ್ಯಾಡ್ಜೆಟ್ ಯುಗ. ಇಲ್ಲಿ ಮನುಷ್ಯರು ಮಾತನಾಡುವುದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಆವಿಷ್ಕಾರಗಳು ಮಾತನಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಯುವಜನತೆ ಇನ್ನಿಲ್ಲದಂತೆ ಹುಚ್ಚಿಗೆ ಬಿದ್ದಿರುವುದೆಂದರೆ ಮೊಬೈಲ್ ಮತ್ತು ಟ್ಯಾಬ್ ಗಳಿಲ್ಲದೆ ಅವರ ದಿನ ಆರಂಭವಾಗುವುದಿಲ್ಲ. ಹಾಗೆಯೇ ಮುಗಿಯುವದು ಇಲ್ಲಾ. ಅದಕ್ಕೆ ಇದನ್ನೆ ಗ್ಯಾಡ್ಜೆಟ್ ಮೇನಿಯಾ ಎಂದು ಕರೆಯುವದು. ಇದು ಇಂದಿನ ಯುವಕರ ಜೀವನದ ಒಂದು ಭಾಗವೇ ಆಗಿದೆ. ಏನೇ ಇದ್ದರು ಅಂದರೆ ಹಾಡು ಕೇಳಲು, ಇಂಟರ್ನೆಟ್ ಬಳಸಲು, ಮಾತನಾಡಲು, ಸಿನಿಮಾ ನೋಡಲು ಕೊನೆಗೆ ಲೆಕ್ಕಾಚಾರಕ್ಕೂ ಇಂದು ಯುವಕರು ಬಳಸುವುದು ಮೊಬೈಲ್ಗಳನ್ನೆ.
ಒಂದು ಅಂದಾಜಿನ ಪ್ರಕಾರ ಶೇ.58ರಷ್ಟು ಯುವ ಪೀಳಿಗೆ ಮೊಬೈಲನಲ್ಲಿ ಸಂಗೀತ ಕೇಳಿದರೆ, ಶೇ.57ರಷ್ಟು ಎಸ್ಎಂಎಸ್ಗಳಿಗೆಂದೇ ಮೊಬೈಲ್ಗಳನ್ನು ಬಳಸುತ್ತಾರೆ. ಶೇ.51 ರಷ್ಟು ಫೋಟೋ ತೆಗೆಯಲು ಬಳಸಿದರೆ, ಶೇ.46 ರಷ್ಟು ವಿಡಿಯೋ ಗೇಮ್ಗಳಿಗಾಗಿ ಮೊಬೈಲ್ ಅಪ್ಪಿಕೊಳ್ಳುತ್ತಾರೆ. ಈ ಸಂಖ್ಯೆಗಳು ಕೇವಲ ಒಂದು ಅಂದಾಜು ಅಷ್ಟೇ ವಾಸ್ತವ ಇದಕ್ಕಿಂತ ಭಯಾನಕವಾಗಿದ್ರು ಆಶ್ಚರ್ಯ ಪಡಬೇಕಿಲ್ಲ. ಇಂದು ಯಾವುದೇ ಕಾಲೇಜಿಗೆ ಹೋಗುವ ಯುವಕ/ಯುವತಿಯರನ್ನು ಗಮನಿಸಿದರೆ ಅವರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ.

ಏನೇನೋ ಹುದುಗಿರಬಹುದು ಹುಷಾರ್!

ಏನೇನೋ ಹುದುಗಿರಬಹುದು ಹುಷಾರ್!

ಇಷ್ಟೇಲ್ಲಾ ಹೇಳಲು ಕಾರಣ ಮೊಬೈಲ್ನ ಬಳಕೆ ತೆರೆದು ಕೊಳ್ಳುತ್ತಿರುವುದು ಮತ್ತೊಂದು ಅಪಾಯಕಾರಿ ಮಗ್ಗುಲಿಗೆ. ಮೊಬೈಲ್ ಹುಚ್ಚಿನ ಪರಿಣಾಮ ದುರಂತದ ಬೆಳವಣಿಗೆಗೆ ನಾಂದಿ ಹಾಡುತ್ತಿದೆ. ಮೇಲೆ ಹೇಳಿದ ಅಂಕಿ, ಅಂಶಗಳು ಹೊರತಾಗಿ ಚರ್ಚೆಗೆ ಗ್ರಾಸವಾಗಿರುವುದು ಸಾಮಾಜಿಕ ಪರಿಣಾಮದ ಬಗ್ಗೆ. ಇಷ್ಟಕ್ಕು ಮೊಬೈಲ್, ಸಾಮಾಜಿಕ ಪರಿಣಾಮಕ್ಕು ಅದ್ಯಾವ ಬಾದರಾಯಣ ಸಂಬಂಧ ಎಂದು ನೀವು ತಲೆ ಕೆರೆದು ಕೊಳ್ಳಬೇಡಿ. ವಿಷಯ ಇಷ್ಟೇ ಇಂದಿನ ಹಲವು ಪ್ರೇಮ ಪ್ರಕರಣಗಳಲ್ಲಿ ಏಜೆಂಟ್ನಂತೆ ಕೆಲಸ ಮಾಡುತ್ತಿರುವುದು ಈ ಮೊಬೈಲ್ಗಳೆ ಎಂದರೆ ನೀವು ನಂಬಲೇ ಬೇಕು. ಹದಿ, ಹರೆಯದ ಯುವಕ, ಯುವತಿಯರು ಮೊಬೈಲ್ನಿಂದಾಗಿಯೇ ಹೆಜ್ಜೆ ತಪ್ಪುತ್ತಿದ್ದಾರೆ. ವಯಸ್ಸಿಗೆ ಮೀರಿದ ನಡವಳಿಕೆಗಳನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ. ಅರೆ ಬೆಂದ ಪ್ರೇಮ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ಮೊಬೈಲ್. ಕಾಲೇಜಿಗೆ ಹೋಗುವ ಬಹು ಸಂಖ್ಯೆಯ ಯುವಕ/ಯುವತಿಯರ ಮಧ್ಯೆ ಉಂಟಾಗುವ ಪ್ರೀತಿಗೆ ಮಧ್ಯವರ್ತಿ ಎಂದರೆ ಈ ಮೊಬೈಲ್ಲೇ. ಹಲವು ಪಾಲಕರಿಗೆ ತಮ್ಮ ಮಕ್ಕಳ ಪ್ರೇಮದ ವಾಸನೆ ಸ್ವಲ್ಪವು ತಟ್ಟುವುದಿಲ್ಲ ಎಂದರೆ ಅದರ ಹಿಂದಿನ ಕರಾಮತ್ತು ಮೊಬೈಲ್ನಲ್ಲಿ ಬೆಚ್ಚಗೆ ಅಡಗಿ ಕುಳಿತಿರುವ ಇನ್ಬಾಕ್ಸ. ಇತ್ತೀಚಿಗೆ ಹದಿ, ಹರೆಯದ ಹುಡುಗಿ ಪ್ರೇಮದ ಬಲೆಗೆ ಬಿದ್ದು, ದುರಂತ ಅಂತ್ಯ ಕಂಡಿದ್ದರ ಬಗ್ಗೆ ಆಕೆಯ ಅಕ್ಕ ಗೋಳಾಡುತ್ತಾ ಹೇಳಿದ್ದೆಂದರೆ ಇಂದಿನ ನನ್ನ ತಂಗಿಯ ಸ್ಥಿತಿಗೆ ಕಾರಣ ಈ ಮೋಬೆಲ್ಲೇ. ಅವಳು ಯಾರೋ ಕಾಲೇಜಿನ ಗೆಳತಿ ಹತ್ತಿರ ಮಾತನಾಡುತ್ತಿದ್ದಾಳೆ ಎಂದು ಭಾವಿಸಿದ್ದೇವು. ಆದರೇ ಅವಳು ಪ್ರೀತಿಯ ಬಲೆಗೆ ಬಿದ್ದಿದ್ದಾಳೆ ಎಂಬ ಸಣ್ಣ ಸುಳಿವು ಸಿಕ್ಕಲಿಲ್ಲ ಎಂದು ದುಃಖಿಸುತ್ತಿದ್ದಳು. ಇದು ಕೇವಲ ಒಂದು ಪ್ರೇಮ ಪ್ರಕರಣದಿಂದ ತಳೆದ ನಿಲುವಲ್ಲ. ಬೆಳಕಿಗೆ ಬರುತ್ತಿರುವ ಹಲವು ಪ್ರೇಮ ಪ್ರಕರಣಗಳ ಹಿಂದಿನ ಮೂಲ ಕಾರಣ ಮೊಬೈಲ್ಲೇ. ದಯವಿಟ್ಟು ಪಾಲಕರೇ ಎಚ್ಚರ. ನಿಮ್ಮ ಮಕ್ಕಳ ಕೈಯಲ್ಲಿರುವ ಮೊಬೈಲ್ ನ ಒಳಗಿನ ಜಗತ್ತನ್ನು ನೀವು ತೆರೆದು ನೋಡದಿದ್ದರೆ, ಅವರು ಬೇರೆಯದೇ ಜಗತ್ತನ್ನು ಹುಡುಕಿಕೊಂಡು ಹೋಗುವ ಸಾಧ್ಯತೆ ಖಂಡಿತಾ ಇದೆ.

 

ಟ್ಯಾಗ್ ಗಳು:

ಮೈಲಿಗೆಯಾದ ಮನಸ್ಸುಗಳಿಗೆ ಮಡೆಸ್ನಾನವೇ ಮೇಧ್ಯ

ಬಹುಶಃ ನಮ್ಮೆಲ್ಲರ ಮನಸ್ಥಿತಿಯೇ ಅಂತಹದ್ದು ಏನಿಸುತ್ತೆ. ಯಾವುದಕ್ಕಾದರು ಅತಿಯಾಗಿ ಪ್ರತಿಕ್ರಿಯೆ ನೀಡುತ್ತೇವೆ. ಅದು ತಾರ್ಕಿಕ ಅಂತ್ಯ ಕಾಣುವುದರೊಳಗಾಗಿ ಆ ಚರ್ಚೆಯಿಂದ ಅಥವಾ ಮಂಥನದಿಂದ ವಿಮುಖರಾಗಿ ಮತ್ತೆಲ್ಲೋ, ಇನ್ನೆನನ್ನೋ ಅರಸುತ್ತಿರುತ್ತೇವೆ. ಹೀಗಾಗಿ ನಮ್ಮ ನಡುವಿನ ಎಲ್ಲ ಸಮಸ್ಯೆಗಳು ಜೀವಂತವಾಗಿವೆ ಹಾಗೂ ಸೀಸನಲ್ ಆಗಿ  ಪದೇ, ಪದೇ ಧುತ್ತನೆ ಎದ್ದು ನಿಲ್ಲುತ್ತವೆ.

ಸುಮಾರು ಚರ್ಚೆಗಳು, ಲೇಖನಗಳು ಬಂದ ನಂತರ ನಾನೀಗ ಈ ವಿಷಯ ಪ್ರಸ್ತಾಪಿಸುತ್ತಿರುವುದಕ್ಕೆ ಹಲವರು ಮನಸ್ಸಿನಲ್ಲಿ Issue is outdated ಎಂದು ಮೂಗು ಮುರಿದರೆ ಅಚ್ಚರಿಯಿಲ್ಲ. ಆದರೆ ಎಲ್ಲ ಚರ್ಚೆಗೆ ತೆರೆದು ಕೊಂಡು, ಪ್ರತಿ ಬರಹಗಳ ಮೇಲೆ ಕಣ್ಣಾಡಿಸಿದ ನಂತರ ನನ್ನ ಅವಗಾಹನೆಗೆ ನಿಲುಕಿದ ಅಭಿಪ್ರಾಯವನ್ನು ಹಂಚಿಕೊಳ್ಳುವ ಮನಸ್ಸಾಗಿ ಮತ್ತೆ ವಿಷಯವನ್ನು ಮೆದುಳಿನ ಮೇಲೆ ಎಳೆದು ಕೊಳ್ಳುತ್ತಿದ್ದೇನೆ.

ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ಈಗಾಗಲೇ ಅನೇಕ ಅಭಿಪ್ರಾಯ ಬೇಧಗಳಿಗೆ ಆಹಾರವಾಗಿ ಎಂಜಲೆಲೆ ಛೀದ್ರ, ಛೀದ್ರವಾಗಿದೆ. ಹಾಗೆಯೇ ಅನೇಕ ವಿಚಾರವಾದಿಗಳು ಮುಸರೆಯಾದಲ್ಲಿ ಗೋಮ ಹಚ್ಚುವ ಕಾಯಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಆದರು ಸಮಸ್ಯೆಗೆ ಪರಿಹಾರ ಲಭಿಸಲೇ ಇಲ್ಲಾ. ಎಲ್ಲಾ ಗೋಜಲು, ಗೋಜಲಾಗಿ ಉಂಡೆದ್ದ  ಎಲೆಯ ಮೇಲೆ ಉರುಳಾಡಿದ ನಂತರ ಎಲ್ಲ ಪದಾರ್ಥಗಳು ಕಲಸೋಗರ, ಮೇಲಸೋಗರ ಆಗುವಂತೆ ವಿಷಯ ಕೂಡಾ ಹಾಗೆಯೇ ಬದಿಗೆ ಸರಿದು ಹೋಗುತ್ತಿದೆ. ಮಾಧ್ಯಮಗಳು, ಚಿಂತಕರು ಹೊಸ ವಿಷಯಕ್ಕೆ ತಡಕಾಡುತ್ತಿದ್ದಾರೆ.

ವಿಪರ್ಯಾಸವೆಂದರೆ ಮಡೆಸ್ನಾನ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಬ್ರಾಹ್ಮಣ ಮತ್ತು ಅಬ್ರಾಹ್ಮಣ ನಡುವಿನ ಕಂದಕವನ್ನು ಮತ್ತಷ್ಟು ಗೆಬರಿ ಹಾಕಿತೇ ಹೊರತು, ವಿಷಯದ ಗಂಭೀರತೆ ಮತ್ತು ಮೌಢ್ಯವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಯಾವಂದು ಫಲಕಾರಿ ನಿರ್ಣಯಗಳು ಜೀವ ತಳಿಯಲೇ ಇಲ್ಲಾ. ಇಲ್ಲಿ ಕೇವಲ ಜಾತಿಯ ನೆಲೆಗಟ್ಟಿನಲ್ಲಿ ಒಂದು ವಿಷಯವನ್ನು ಹರಡಿಕೊಂಡು ಕುಳಿತಿದ್ದರ ಫಲವಾಗಿ ಮೂಲ ವಿಷಯ ಮರೆಯಾಗಿ ಕೆಲಸಕ್ಕೆ ಬಾರದ ಹೇಳಿಕೆಗಳು, ವಾದ, ಪ್ರತಿವಾದಗಳು ಕೇಳಿಬಂದವು ವಿನಹಃ ಯಾರು ಮೌಲಿಕವಾಗಿ ಮಾತನಾಡುವ ಧೈರ್ಯ ತೋರಲೆ ಇಲ್ಲಾ. ಈ ಮಡೆಸ್ನಾನ ಬಗ್ಗೆ, ತಮ್ಮ ತಥಾಗಥಿತ ಚಿಂತನೆ ಮಂಡಿಸಿದ ಎಷ್ಟೋ ಬುದ್ಧಜೀವಿಗಳು, ಪ್ರಗತಿಪರರು ಬೆಂಗಳೂರಿನಲ್ಲಿ ಕುಳಿತು ಚರ್ಚೆ ಮಾಡಿದರೆ ವಿನಃ ಎಷ್ಟು ಜನ ಕುಕ್ಕೆಗೆ ಹೋಗಿ, ಅಲ್ಲಿನ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವಾಸ್ತವವನ್ನು ಓರೆಗೆ ಹಚ್ಚಿದರೋ ಆ ಸುಬ್ರಹ್ಮಣ್ಯನೇ ಬಲ್ಲ.

ಇಲ್ಲಿ ಕೆಲವು ಹೇಳಿಕೆಗಳ ಅದೆಷ್ಟು ಅಪ್ರಸ್ತುತ ಎಂಬುದನ್ನು ಕೂಡಾ ಗಮನಿಸಬೇಕು. “ದಲಿತರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಬೇಕು”. “ಪೇಜಾವರರು ದಲಿತರ ಜೊತೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಲಿ”, “ಮಡೆಸ್ನಾನದ ಜೊತೆ ಪಂಕ್ತಿ ಭೇಧವೂ ನಿಷೇಧವಾಗಬೇಕು”, ಇಂತಹ ಹೇಳಿಕೆಗಳಿಂದ ಆರೋಗ್ಯವಂತ ಸಮಾಜದ ಸೃಷ್ಟಿ ಖಂಡಿತಾ ಸಾಧ್ಯವಿಲ್ಲ  ಎಂಬುದನ್ನು ಮನಗಾಣಬೇಕು. ವಿಧವೆಯರ ಕೈಯಿಂದ ರಥವನ್ನೆಳೆಸಿದ್ದ ಪೂಜಾರಿಯವರು ಮಡೆಸ್ನಾನದ ವಿಷಯದಲ್ಲೇಕೆ ಕುಕ್ಕೆಗೆ ಹೋಗಿ ತಿಳಿ ಹೇಳುವ ಪ್ರಯತ್ನ ಮಾಡಲಿಲ್ಲ. ಯಾಕೆ ಆಚಾರ್ಯ, ಪೇಜಾವರರು, ಸುರೇಶಕುಮಾರ್ ಮಡೆಸ್ನಾವನ್ನು ವಿರೋಧಿಸುವಂತಹ ಹೇಳಿಕೆ ನೀಡಲಿಲ್ಲ. ಅಷ್ಟೇಕೆ ವಿರೋಧ ಪಕ್ಷದ ಪ್ರಮುಖರೇಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆಚರಣೆಯ ವಿರುದ್ಧ ಸಿಡಿದೇಳಲಿಲ್ಲ. ವಿಷಯ very simple. ಇದು  ನಾಳೆ ವಿರೋಧಿಸುವವರ ಓಟಿಗೆ ಕನ್ನ ಬೀಳುವ ಸಾಧ್ಯತೆ ಇರುವಂತಹದ್ದು.ಹೀಗಾಗಿ ಯಾರಿಗೂ ಸುಖಾ ಸುಮ್ಮನೆ ತೊಂದರೆಯನ್ನು ಮೈಮೇಲೆ ಎಳೆದು ಕೊಳ್ಳುವ ಧೈರ್ಯವಿಲ್ಲ.

ಹಾಗೆಯೇ ವಿರೋಧಿಸಲು ನಮ್ಮಲ್ಲಿ ಕೇವಲ ಮಡೆಸ್ನಾನ ಒಂದೇ ಅಲ್ಲ. ಪ್ರತಿ ಹಳ್ಳಿ, ಹಳ್ಳಿಯಲ್ಲು ಇಂತಹ ನೂರೆಂಟು ಮೌಢ್ಯಗಳು ಮನೆ ಮಾಡಿವೆ. ಅವುಗಳ ಬಗ್ಗೆ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲ. ಬಕ್ರೀದ್ ಸಮಯದಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಡುವುದು, ಮೊಹರಂನಲ್ಲಿ ಸ್ವಶಿಕ್ಷೆ ಎಂಬಂತೆ ಮೈತುಂಬಾ ಗಾಯ ಮಾಡಿಕೊಳ್ಳುವಂತಹ ವಿಷಯಗಳ ಬಗ್ಗೇಕೆ ಬಹಿರಂಗ ಚರ್ಚೆಗಳಾಗುತ್ತಿಲ್ಲ. ಪ್ಯಾನೆಲ್ ಡಿಸ್ಕಷನ್ ಮಾಡುವ ನಮ್ಮ ಮೀಡಿಯಾಗಳು ವಾರಕ್ಕೊಮ್ಮೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಏನೋ ರಹಸ್ಯವನ್ನು ದೃಶ್ಯೀಕರಿಸಿಕೊಂಡು ಬಂದವರಂತೆ ದೇವರು, ದೆವ್ವ, ಅಚ್ಚರಿ, ಪವಾಡ ಎಂದೆಲ್ಲ ಬಾಯಿ ಹರಿದು ಕೊಳ್ಳುವುದನ್ನು ವಿರೋಧಿಸುತ್ತಿಲ್ಲ. ಪ್ರಜಾಪ್ರಭುತ್ವ ನೀಡಿರುವ ಬಹು ದೊಡ್ಡ ವರದಾನವಾಗಿರುವ ಮತದಾನದ ನಂತರ ಯಾರಿಗೆ ಗೆಲುವು ಒಲಿಯಬಹುದು ಎಂಬುದನ್ನು ಜೋತಿಷಿಗಳ ಮೂಲಕ, ಸಂಖ್ಯಾಶಾಸ್ತ್ರಜ್ಞರ ಮೂಲಕ ವಿಮರ್ಶೆಗೆ ಒಳಪಡಿಸುವ ಕಾರ್ಯಕ್ರಮ ಮತದಾರರಿಗೆ ಅವಮಾನ ಮಾಡಿದಂತಲ್ಲವೇ! ಇದನ್ನೇಕೆ ಪ್ರಶ್ನಿಸುತ್ತಿಲ್ಲ. ಕೆದಕುತ್ತಾ ಹೋದರೆ ಇಂತಹ ನೂರೆಂಟು ಸಮಸ್ಯೆಗಳು ಕಾಲಿಗೆ ತೊಡರಿಕೊಳ್ಳುತ್ತವೆ. ಇವನ್ನೆಲ್ಲವನ್ನು ಚರ್ಚೆಗೆ ಎಳೆಯುವದು ಕೂಡಾ ಪ್ರಜ್ಞಾವಂತರ ಕರ್ತವ್ಯವಲ್ಲವೇ. ಈ ಕೆಲಸವೇಕೆ ಆಗುತ್ತಿಲ್ಲ.

ಮೌಢ್ಯವನ್ನು ವಿರೊಧಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಶ್ನೆಯನ್ನು ಎರಡು ಜಾತಿಗಳ ಮಧ್ಯ ಸಮೀಕರಿಸಿ ನೋಡುವ ದುರ್ದಾದರು ಏನಿತ್ತು. ಇವತ್ತು ಮೌಢ್ಯತೆ ಜಾತಿ, ಧರ್ಮ, ರಾಜ್ಯ, ದೇಶ ಇವುಗಳನ್ನೆಲ್ಲಾ ಮೀರಿದ್ದು. ಹೀಗಿರುವಾಗ ಮಡೆಸ್ನಾನವನ್ನು ಒಂದು ಜಾತಿಯವರು ಬಲವಂತವಾಗಿ ಮತ್ತೊಂದು ಜಾತಿಯ ಮೇಲೆ ಹೇರುವ ಕ್ರಿಯೆ ಎಂದು ನೋಡುವ ಮನಸ್ಥಿತಿ ಖಂಡಿತಾ ತಪ್ಪು. ಈ ಕಾರಣದಿಂದಾಗಿಯೇ ಮಡೆಸ್ನಾನದ ನಿಜವಾದ ಚರ್ಚೆ ನಡೆಯಲೇ ಇಲ್ಲಾ. ತಲೆ, ತಲಾಂತರದಿಂದ ನಡೆದುಕೊಂಡ ಬಂದ ಈ ಆಚರಣೆ ಬಲವಾಗಿ ಬೇರೂರಿದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಕೇವಲ ವಿರೋಧ, ಪ್ರತಿಭಟನೆ, ಚರ್ಚೆಗಳ ಬದಲಾಗಿ ಪ್ರತಿಯೊಬ್ಬರಿಗೆ ಸೂಕ್ತವಾದ counselling ಮಾಡುವ ಅಗತ್ಯವಿದೆ. ಯಾಕೆ ಮಡೆಸ್ನಾನ ಮೂಢ ಆಚರಣೆ ಎಂಬುದನ್ನು ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕಿದೆ. ಅಂದಾಗ ಮಾತ್ರ ಮನಸ್ಸಿನ ಅಂಧಕಾರವನ್ನು ಹೊರ ನೂಕಲು ಸಾಧ್ಯ.

ದಯವಿಟ್ಟು ಮಡೆಸ್ನಾನಕ್ಕೆ ಜಾತಿಯ ಬಣ್ಣ ಬಳಿಯುವದು ಬೇಡ. ಹಾಗೆಯೇ ರಾಜ್ಯದಲ್ಲಿ ಜಾಗೃತಿ ಮೂಡಿಸಲು ಇರುವುದು ಕೇವಲ ಮಡೆಸ್ನಾನ ಒಂದೇ ಅಲ್ಲ  ಇಂತಹ ನೂರೆಂಟು ಸಮಸ್ಯೆಗಳಿವೆ. ಎಲ್ಲವನ್ನು ಮುಖ್ಯವಾಹಿನಿಗೆ ತಂದು ಚರ್ಚೆಗೆ ದಾರಿ ಮಾಡಿ ಕೊಡೋಣ. ಪ್ರತಿಯೊಂದು ಮೌಢ್ಯತೆಗೆ ಸೂಕ್ತ ತಾರ್ಕಿಕ ಅಂತ್ಯ ದೊರಕಲಿ. ಅದು ಬಿಟ್ಟು ಆಳಕ್ಕೆ ಬಿದ್ದವರ ಮೇಲೆ ಆಳಿಗೊಂದು ಕಲ್ಲು ಎಂಬಂತೆ ಕೇವಲ ಮಡೆಸ್ನಾನದ ಬಗ್ಗೆಯೇ ಏಕೆ ಬೊಬ್ಬೆ ಹೊಡೆಯುವದು ಅಲ್ಲವೇ!

 
1 ಟಿಪ್ಪಣಿ

Posted by on ಡಿಸೆಂಬರ್ 11, 2011 in ಭಾವದ ಬಿಂಬಗಳು

 

ಟ್ಯಾಗ್ ಗಳು:

ಮತ್ತೊಮ್ಮೆ ಮಿಸ್ಡ ಕಾಲ್ ….

ಟೈಮ್ ಸುಮಾರು 11 ಮುಕ್ಕಾಲು ಆಗಿರಬಹುದಾ ಎಂದು ಕ್ರಿಶ್ ವಾಚ್ ನೋಡಿಕೊಳ್ಳುತ್ತಾನೆ. ಅವನ ಊಹೆ ಸರಿಯಾಗಿತ್ತು. ಘಂಟೆ 11:40. ಪ್ರತಿ ದಿನ 12ರ ಆಸುಪಾಸು ಅವನು ಕಾಫಿ ಹೀರಲು ರೆಸ್ಟ್ ರೂಮಿಗೆ ಹೋಗುವುದು ವಾಡಿಕೆ.“CREATIVE CREATOR”  ಎಂಬ Advertising Company  ಅವನ ಕೆಲಸ. ಬೆಳಗ್ಗೆ ಶಾರ್ಪ ಹತ್ತಕ್ಕೆ chairಗೆ ಒರಗಿದನೆಂದರೆ ಮತ್ತೆ ಕಾಫಿ ನೆನಪಾದಾಗಲೆ ಚಿತ್ತ ಬದಲಾಗುವುದು. ಅವನು ಕಂಪನಿಯ ದೊಡ್ಡ ಅಸೆಟ್. ಅವನು ಡಿಸೈನ್ ಮಾಡಿದ ಹಲವು ಆರ್ಡರ್ ಗಳಿಗೆ ಪ್ರಶಸ್ತಿ ಬಂದಿದೆ. ಕಂಪನಿಗೆ ಹೆಚ್ಚಿನ ಆರ್ಡರ್ ಗಳು ದಕ್ಕಿವೆ. ಆದರೆ ಯಶಸ್ಸಿನ ಕಿಕ್ ಯಾವತ್ತು ಅವನ ತಲೆ ಏರಿಲ್ಲ. ತಲೆ ಬಗ್ಗಿಸಿಕೊಂಡು ಕೆಲಸ ಮಾಡುವುದಷ್ಟೆ ಅವನಿಗೆ ಗೊತ್ತು. ಕೃಷ್ಣ ಎಂಬ ಅವನ ಹೆಸರು ಕಾರ್ಪೊರೆಟ್ ಜನಗಳ ಬಾಯಿಗೆ ಸಿಕ್ಕು ಕ್ರಿಶ್ ಆಗಿ ಹೋಗಿದೆ. ಇನ್ನೇನು ಕುರ್ಚಿಯಿಂದ ಏಳ ಬೇಕು ಅನ್ನುವಷ್ಟರಲ್ಲಿ ಕ್ರಿಶ್  ಫೋನ್ ರಿಂಗಾಯಿತು. ಅವನ ಮೊಬೈಲ್ ರಿಂಗಣಿಸುವುದು ಅಪ್ಪಟ ಕನ್ನಡ ಗೀತೆ “ಎನ್ನ ಹೃದಯ ಬನದಲಿ, ನಿನ್ನ ಪ್ರೀತಿಯ ಹೂವು ಅರಳಲಿ, ನೋವೋ, ನಲಿವೋ ನಿನ್ನ ಧ್ಯಾನವೇ ಈ ಜೀವಕೆ ಉಸಿರಾಗಿರಲಿ”, ಎಂಬ ಮಧುರ ಗೀತೆ ತೇಲಿ ಬರುತ್ತದೆ. ಹಿಪ್-ಹಾಪ್, ಹಿಂದಿ ರಿಂಗ್ಟೋನ್ಗಳ ಮಧ್ಯೆ ಇವನದು ಅಪ್ಪಟ ಕನ್ನಡ ಢಿಂ, ಢಿಮ. ಹೀಗಾಗಿ ಅದು ಅವನ ಮೊಬೈಲ್ ರಿಂಗ್ ಎಂದು ಯಾರು ಪ್ರತ್ಯೇಕವಾಗಿ ಹೇಳಬೇಕಿರಲಿಲ್ಲ. ಆದರೆ ಅದೇಕೋ ಎನ್ನ ಹೃದಯ ಬನದಲಿ, ನಿನ್ನ ಪ್ರೀತಿ ಅಂದ ತಕ್ಷಣ ಕಾಲ್ ಕಟ್ಟಾಯ್ತು. ಯಾವದಕ್ಕು ಅತಿಯಾಗಿ ಪ್ರತಿಕ್ರಿಯೆಸದ ಕ್ರಿಶ್ ಯಾಕೋ ಒಂದು ಕ್ಷಣ ಕಿರಿ,ಕಿರಿ ಪಟ್ಟ. ಅದು ಅವನಿಗೆ ನೋವಿನ ಗೀತೆ. ಆದರು ಅದನ್ನು ವಿಚಿತ್ರವಾಗಿ ಎಂಜಾಯ್ ಮಾಡುತ್ತಾನೆ ಎಂಬುದು ಅವನಿಗಷ್ಟೆ ಗೊತ್ತು. ‘ತಥ್’! ಎಂದು ಕೊಂಡು ನಂಬರ್ ಕೂಡಾ ಚೆಕ್ ಮಾಡದೆ ಮೊಬೈಲ್ನ ಜೇಬಿಗೆ ಇಳಿಸಿ ಕಾಫಿ ಹೀರಲು ಹೊರಡುತ್ತಾನೆ.

ಕ್ರಿಶ್ ಹಾಗೆಲ್ಲ ಹರಟೆ ಹೊಡೆಯುವ ಜಾಯಮಾನದವನಲ್ಲ. ಒಂದು ರೀತಿ ರಿಸರ್ವ ಪರ್ಸನ್. ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವವನು. ಇದು ಎಷ್ಟೋ ಜನರ ಟೀಕೆಗೆ ಗ್ರಾಸವಾಗಿದ್ದರೆ, ಮತ್ತೆಷ್ಟೊ ಜನಕ್ಕೆ ಪ್ರಶಂಸೆ ಪಡುವಂತಿತ್ತು. ಅಂದು ಹಾಗೇ. ಒಂದಿಬ್ಬರು ಕಾಫಿ ಹೀರುತ್ತಾ, ಸೀಗರೇಟ್ ಎಳೆಯುತ್ತಿದ್ದರು. ಆದರೆ ಕ್ರಿಶ್ ಅವರ್ಯಾರು ತನಗೆ ಪರಿಚಯಸ್ಥರಲ್ಲ ಎಂಬಂತೆ ತನ್ನ ಪಾಡಿಗೆ ತಾನು ಹೋಗಿ ‘ಶ್ರೀನಿವಾಸ್ ಕಾಫಿ ಕೊಡು’, ಎಂದು ಹೇಳಿ ಒಂದು ಕಾಫಿ ತೆಗೆದುಕೊಂಡು ಸಿಗರೇಟಿಗೆ ಕಿಡಿ ಹೊತ್ತಿಸಿ ಅಲ್ಲೇ ಜೋರಾಗಿ ಒಂದು ದಮ್ ಎಳೆದು ಹಾಗೆಯೇ ನಿರಾಳವಗಿ ಹೊಗೆ ಬಿಟ್ಟು ಕಪ್ ಹಿಡಿದು ಸ್ಮೊಕಿಂಗ್ ಝೋನ್ ಕಡೆ ಹೆಜ್ಜೆ ಹಾಕುತ್ತಾನೆ.
*****
ಕ್ರಿಶ್ನ ಹೊಟ್ಟೆಯೊಳಗೆ ಕಾಫಿ ಮತ್ತು ಸಿಗರೇಟ್ನ ಹೊಗೆ ಇಳಿದರೆ ಅವನ ಕೆಲಸ ಮತ್ತೆರಡು ಗಂಟೆ ಎಡೆಬಿಡದೆ ಓಡುತ್ತೆ ಅಂತಾನೇ ಅರ್ಥ. ಹಾಗೇ chairಗೆ ಒರಗಿ ಮೊಬೈಲ್ ಟೇಬಲ್ ಮೇಲಿಟ್ಟು ಕಂಪ್ಯೂಟರ್ ಸ್ಕ್ರೀನ್ ಆನ್ ಮಾಡಿದ ತಕ್ಷಣ ಮತ್ತೆ ಮೊಬೈಲ್ ರಿಂಗಣಿಸಲು ಪ್ರಾರಭಿಸಿತು. ಧ್ಯಾನ ಭಗ್ನಗೊಂಡವರಂತೆ ಒಲ್ಲದ ಮನಸಿನಿಂದ ನಂಬರ್ ಕೂಡಾ ನೋಡದೆ ಕಾಲ್  ರಿಸೀವ್ ಮಾಡಿದಾಗ, ಆ ಕಡೆಯಿಂದ,

“ಇಡಿಯಟ್, ಮಿಸ್ ಕಾಲ್ ಕೊಟ್ಟ ತಕ್ಷಣ ಫೋನ್ ಮಾಡಬೇಕು ಅಂತಾ ಗೊತ್ತಾಗಲ್ವ” ಎಂಬ ಹೆಣ್ಣು ಧ್ವನಿ ಕಿರುಚುತ್ತಿತ್ತು. ಅವನು ಒಂದು ಕ್ಷಣ ತಬ್ಬಿಬ್ಬಾಗಿ ಮರುತ್ತರ ನೀಡಬೇಕು ಅನ್ನುವಷ್ಟರಲ್ಲಿ, ಮತ್ತೆ ಆ ಕಡೆಯಿಂದ “ಆಗಲೇ 15 ನಿಮಿಷದಿಂದ ಕಾಯ್ತಾ ಇದ್ದೀನಿ. ವೇಸ್ಟ ಫೆಲೋ. ಹುಡಗಿಯರ ಒಂದೇ ಒಂದು ಮಿಸ್ ಕಾಲ್ಗೆ ಎಷ್ಟೋ ಹುಡುಗರು ಜೊಲ್ಲು ಸುರಿಸ್ತಾ ಕಾಯ್ತಾ ಇರ್ತಾರೆ ಗೊತ್ತಾ. ನೀನು ಇದ್ದೀಯಾ. ಬೇಗ ಕಾಲ್ ಮಾಡೋಕೆ ಆಗಲ್ವಾ ಗುಬಾಲ್ಡು. ನಿನಗೋಸ್ಕರ ಕತ್ರಿಗುಪ್ಪೆ ಕಾಫಿ ಶಾಪ್ನಲ್ಲಿ ಕಾಯ್ತಾ ಇದ್ದೀನಿ. ಬೇಗ ಬಾ. ಇವತ್ತು ಟ್ರೀಟ್ ನಂದೇ. ನಿನ್ನೆ ಫೋನ್ ಕಳೆದದ್ದಕ್ಕೆ ಹೊಸ ಟಚ್ ಸ್ಕ್ರೀನ್ ತಗೊಂಡಿದ್ದೀನಿ. ನಿನಗೆ ಈಗಲೇ ತೋರಿಸಬೇಕು, ಬೇಗ ಬರದಿದ್ದರೆ ಕೊಂದು ಹಾಕಿ ಬಿಡ್ತೀನಿ ಹುಷಾರ್” ಎಂದ್ಹೇಳಿ ಟಪ್ ಅಂತ ಫೋನ್ ಕಟ್ ಮಾಡ್ತಾಳೆ. ಹುಡುಗಿಯ ಸಹವಾಸಕ್ಕೆ ಬಿದ್ದು ಪೆಟ್ಟು ತಿಂದ ಸಾಹೇಬ್ರಿಗೆ ಈಗ ಗರ್ಲಫ್ರೆಂಡ್ ಅಂದರೆ ಬೆಂಕಿ ತುಳಿದಂತೆ ಆಡುತ್ತಾರೆ. ಅಂತಹದ್ದರಲ್ಲಿ ‘ಇವಳ್ಯಾರು ತಗುಲಿ ಹಾಕ್ಕೊಂಡಳು’, ಎಂದು ತಲೆಗೆ ಹುಳ ಬಿಟ್ಟು ಕೊಳ್ಳುತ್ತಾನೆ. ಅನಗತ್ಯ ವಿಚಾರಕ್ಕೆ ಎಂದು ತಲೆ ಕೆಡಿಸಿ ಕೊಳ್ಳದ ಕ್ರಿಶ್ಗೆ ಯಾಕೋ ಧ್ವನಿ ಯಾರದ್ದು ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಆದರೆ ತಿಪ್ಪರಲಾಗ ಹಾಕಿದರು ನಂಬರ್ ಯಾರದ್ದು ಎಂದು ತಿಳಿಯುವದಿಲ್ಲ. ಎಲ್ಲೋ ಒಂದು ಕಡೆ ‘ಹೋಗಿ ಬಿಡ್ಲಾ’, ಎಂಬ ಅನುಮಾನ ಬಂದರು, ‘ಯಾಕೆ ಇಲ್ಲದ ಉಸಾಬರಿ, ಅವಳ್ಯಾವಳೋ, ಯಾವನಿಗೋ ಕಾಯ್ತಾ ಇದ್ದರೆ ನಾನ್ಯಾಕೆ ತಲೆ ಕೆಡಿಸಿ ಕೊಳ್ಳಬೇಕು’, ಎಂದು ಹಿಂದಿನ ಅನುಭವ ಎಚ್ಚರಿಸಲಾರಂಭಿಸುತ್ತದೆ. ಯಾಕೆಂದರೆ ಸಾಹೇಬ್ರು ಈಗಾಗಲೇ ಒಂದು ಹುಡುಗಿಯ ಹಿಂದೆ ಹೋಗಿ ಅಪ್ರತಿಮ ಅನುಭವ ಹೊಂದಿ ಮರಳಿ ಸಮಸ್ಥಿತಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮತ್ತೆ ಯಾಕೆ ಇಲ್ಲದ ಪ್ರಯಾಸ ಎಂಬ ಭಯ ಅವನನ್ನು ಹಿಡಿದೆಳೆಯಲು ಪ್ರಾರಂಭಿಸುತ್ತದೆ.

Missed Call

ಆದರೆ ಹತ್ತೆ ನಿಮಿಷ. ಮತ್ತೆ ಮಿಸ್ ಕಾಲ್ ಬಂದಾಗ ಈ ಹೂ ಹೃದಯ ಬನದಿ ಅರಳಬಹುದೆನೋ ಎಂಬ ಆಸೆ ಚಿಗುರಲಾರಂಭಿಸುತ್ತದೆ. ‘ಬಹುಶಃ ನನ್ನನ್ನು ಎಲ್ಲೊ ಗಮನಿಸಿರಬೇಕು. ಅದಕ್ಕೆ ಹೇಗೋ ನಂಬರ್ ಜಮಾಯಿಸಿ ಕಾಲ್ ಹೊಡೆದಿದ್ದಾಳೆ’, ಎಂಬ ಅದ್ಭುತ ಜ್ಞಾನೋದಯವಾಗಲಾರಂಭಿಸುತ್ತದೆ. ಇಷ್ಟಕ್ಕು ಕ್ರಿಶ್, ಹುಡುಗಿಯರು ಹಿಂದೆ ಬೀಳುವಂತಹ ಹುಡುಗನೆ. 6 ಅಡಿ ಎತ್ತರ, ಜಿಮ್ನಲ್ಲಿ ಬೆಂಡೆತ್ತಿದ ಬಾಡಿ, ಕಾಲಿಗೆ ಒರಗಿದ ಜೀನ್ಸ, ಸದಾ ಹಾಕುವ ಕ್ಯಾಸುವಲ್ ಶಟ್ರ್ಸ ಎಂತಹ ಹುಡುಗಿ ಕೂಡಾ ಒಂದು ಕ್ಷಣ ನಿಂತು ನೋಡಬಹುದು, ಹಾಗಿದ್ದಾನೆ. ಹೀಗಿರುವಾಗ ಕಾಲ್ ಮಾಡಿ ಬರೋದಿಕ್ಕೆ ಹೇಳ್ತಿದ್ದಾಳೆ ಎಂದರೆ ಅವಳಿಗೆ ನಾನು ಚೆನ್ನಾಗಿ ಗೊತ್ತಿರಬಹುದು ಎಂಬ ಯುರೇಕಾ ತಲೆಗೆ ಬಂದು ಹೋಗುವುದೇ ಸರಿ ಎಂಬ ನಿರ್ಧಾರಕ್ಕೆ ಬರುತ್ತಾನೆ.

ಸಿಇಓ ಚೆಂಬರ್ಗೆ ಬಂದು, ಸರ್ ಅರ್ಧ ದಿನ ರಜೆಗೆ ಪರ್ಮಿಶನ್ ಬೇಕಿತ್ತು. ಯಾರೋ ಗೆಸ್ಟ ಸಿಗೋಕೆ ಹೇಳಿದಾರೆ, ಎಂದು ತಡವರಿಸುತ್ತಾ ಕೇಳಿದಾಗ ದಣಿವರಿಯದೆ ತಲೆ ತಗ್ಗಿಸಿಕೊಂಡು ಕೆಲಸ ಮಾಡಿದ ಇವನಿಗೆ ಇಲ್ಲಾ ಎಂದು ಹೇಳುವ ಮನಸು ಬರದೆ ಕ್ಯಾರಿ ಆನ್ ಎಂದು ಹೇಳಿ ಕಳಿಸುತ್ತಾರೆ. ಯಾವುದೋ ಅವ್ಯಕ್ತ ಸಂಭ್ರಮದಿಂದ ಹೊರಟ ಕ್ರಿಶ್ ಮುಖದಲ್ಲಿ ಸಹೋದ್ಯೋಗಿಗಳಿಗೆ ಒಂದು ಹೊಸ ಹೊಳಪು ಅಪರೂಪಕ್ಕೆಂಬಂತೆ ಗೋಚರಿಸುತ್ತದೆ.
*****
ಸೀದಾ ಕಾಫಿ ಶಾಪ್ ಮುಂದೆ ಬೈಕ್ ಪಾರ್ಕ ಮಾಡಿದ ಕ್ರಿಶ್ನ ಎದೆ ಹೊಡೆದುಕೊಳ್ಳಲಾರಂಭಿಸುತ್ತದೆ.
‘ಬರುವುದೇನೋ ಬಂದೆ, ಅವಳನ್ನ ಹೇಗೆ ಗುರುತಿಸುವುದು’,
‘ಅಥವಾ ಅವಳೇ ಗುರುತು ಹಿಡಿದು ಮಾತನಾಡಿಸಬಹುದು’.
‘ಒಂದು ವೇಳೆ ಅವಳು ತುಂಬಾ ಹೊತ್ತಾಯ್ತೆಂದು ಎದ್ದು ಹೋಗಿದ್ದರೆ’,
‘ಹೋಗೊಳು ಆಗಿದ್ದರೆ ಬರೋಕೆ ಯಾಕೆ ಹೇಳ್ತಿದ್ದಳು’,
ಹೀಗೆ ಗೊಂದಲಗಳ ಮಹಾಪೂರವೇ ಹರಿದು ಬರಲಾರಂಭಿಸುತ್ತದೆ. ಅವನಿಗೆ ಯಾಕೋ ಮತ್ತೆ ಬೇಡದ ರಿಸ್ಕ ತೆಗೆದು ಕೊಳ್ತಿದ್ದೀನಿ ಎಂದು ಅನಿಸಲಾರಂಭಿಸುತ್ತದೆ. ಒಂದು ಹೊಡೆತ ಮತ್ತೆ ತನ್ನನ್ನು ಇಂದಿಗು ಸಂಪೂರ್ಣವಾಗಿ ಮೊದಲಿನಂತೆ ಮಾಡಿಲ್ಲ. ಅವಳು ಘಾಸಿ ಮಾಡಿದ್ದು ವಾಸಿಯಾಗಿದ್ದರು, ಕಲೆ ಇನ್ನು ಹಸಿ,ಹಸಿ. ಹೀಗಿರುವಾಗ ಮತ್ತೇಕೆ ಈ ಹೊಸ ಅಪಾಯ ಎಂದು ಮನಸ್ಸು ಜಾಗೃತಗೊಳಿಸುತ್ತದೆ. ಆದರೆ ಕ್ರಿಶ್ಗೆ ಎಲ್ಲೊ ಒಂದು ಕಡೆ ಮತ್ತೆ ಹೊಸ ಪ್ರೀತಿ ಚಿಗುರೊಡೆಯಬಹುದು ಎಂಬ ಬಯಕೆ ಸೆಲೆಯೊಡೆಯಲಾರಂಭಿಸುತ್ತದೆ. ಹೇಗು ಇಲ್ಲಿಯವರೆಗೆ ಬಂದಾಗಿದೆ. ಮತ್ತ್ಯಾಕೆ ಹಾಗೇ ಹೋಗುವುದು ಎಂದು ನಿರ್ಧರಿಸಿ. ಹೆಲ್ಮೆಟ್  locker ಹಾಕಿ ಹೊರಡಲನುವಾಗುತ್ತಾನೆ.
*****
ಕಾಫಿ ಶಾಪ್ ಒಳಗೆ ಬಂದ ಕ್ರಿಶ್ಗೆ ಅಲ್ಲಿ ಕುಳಿತ ಹತ್ತಾರು ಹುಡುಗಿಯರಲ್ಲಿ ಅವಳ್ಯಾರು ಬೆಳದಿಂಗಳ ಬಾಲೆ ಎಂಬ ಗೊಂದಲ. ಹೇಗಿದ್ದರು ರೀಸಿವ್ಡ ಕಾಲ್ ಲಿಸ್ಟ್ನಲ್ಲಿ ಅವಳ ನಂಬರ್ ಇದೆ ಡಯಲ್ ಮಾಡಿದ್ರೆ ತಾನೇ ಗೊತ್ತಾಗುತ್ತೆ ಎಂದು ಕಾಲ್ ಮಾಡುತ್ತಾನೆ. ಅಲ್ಲೆ ಎರಡು ಟೇಬಲ್ ಮುಂದಕ್ಕೆ ಬೆನ್ನು ಮಾಡಿ ಕುಳಿತ ಹುಡುಗಿ ಪಟ್ ಅಂತ ಕಾಲ್ ರಿಸೀವ್ ಮಾಡಿ ಹಾಗೇ ಯು ಫೂಲ್ ಎಷ್ಟೊತ್ತು ಬರೋಕೆ ಎಂದು ತಿರುಗಿದ್ದೆ ಕೊನೆ, ಇಬ್ಬರಿಗು ಮೈಯೆಲ್ಲ ಉರಿ ಹೊತ್ತಿಕೊಂಡಂತೆ ಭಾಸವಾಗುತ್ತೆ. ಕೇವಲ 3 ತಿಂಗಳ ಹಿಂದೆ,

“ನಿನ್ನ ಮುಖ ನೋಡೋಕೆ ಅಸಹ್ಯ ಏನಿಸುತ್ತೆ.
ಯಾವತ್ತು ನನ್ನ ಮುಂದೇನು ಸುಳಿಬೇಡ”

ಎಂದು ಹೇಳಿ ಬಂದಿದ್ದನೋ ಅದೇ ಸಂಪ್ರೀತಾ ಅವನ ಮುಂದೆ ನಿಂತಿದ್ದಾಳೆ. ಅವನ ಕಣ್ಣು ಕೆಂಪಗಾಗುತ್ತಿವೆ. ಹಾವು ತುಳಿದವರಂತೆ ಸಂಪ್ರೀತಾ ಮುಂದೆ ಬಂದು, ಪರಿಚಯವೇ ಇಲ್ಲವೇನೋ ಎಂಬಂತೆ, ಸ್ಸಾರಿ ಸರ್. ಬೇರೆ ಯಾರದ್ದೊ ನಂಬರ್ಗೆ ಮಾಡಬೇಕಾದದ್ದು, ಮಿಸ್ ಆಗಿ ನಿಮಗೆ ಬಂದಿದೆ. ಒನ್ಸ ಅಗೇನ್ ಸ್ಸಾರಿ, ಎಂದು ಹೇಳಿ ಭರ,ಭರನೆ ನಡೆದು ಮರೆಯಾಗುತ್ತಾಳೆ. ಬಾಯ್ ಫ್ರೆಂಡ್ ಬದಲಾಗಿದ್ದಾನೆ. ಆದರೆ ಬಾಯಿಪಾಠ ಆಗಿರುವ ಹಳೆಯ ನಂಬರ್ ಇನ್ನು ಹಾಗೇ ಉಳಿದಿದೆ. ಅದಕ್ಕೆ ಕಳೆದು ಹೋದ ಮೊಬೈಲ್ನಿಂದಾಗಿ ಕಳೆದುಕೊಂಡ ಹುಡುಗನಿಗೆ ಮಿಸ್ ಆಗಿ ಮಿಸ್ಡ ಕಾಲ್ ಮಾಡಿದ್ದಾಳೆ ಎಂದು ಖಾತ್ರಿಯಾಗುತ್ತದೆ. ಮತ್ತೆ ಫೋನ್ ರಿಂಗಣಿಸುತ್ತದೆ.
ಎನ್ನ ಹೃದಯ ಬನದಲಿ, ನಿನ್ನ ಪ್ರೀತಿಯ ಹೂವು ಅರಳಲಿ, ನೋವೋ… ಬರುತ್ತಿರುವ ಕೋಪವನ್ನೆಲ್ಲಾ ಹತ್ತಿಕ್ಕಿ ಮುಂದಿನ ಸಾಲುಗಳು ಬರುವುದರೊಳಗೆ ಕಾಲ್ ರಿಸೀವ್ ಮಾಡುತ್ತಾನೆ. ಕ್ರಿಶ್ ವ್ಯಾಲೆಂಟೈನ್ ಡೇಗೆ ಹೊಸ ಆರ್ಡರ್ ಬಂದಿದೆ. ನಾಳೆನೆ ಡಮ್ಮಿ ಕೊಡಬೇಕು ಎಷ್ಟೇ ಹೊತ್ತಾದರು ಪರ್ವಾಗಿಲ್ಲ ಆಫೀಸ್ಗೆ ಬಾ, ಎಂದು ಬಾಸ್ ಹೇಳಿದ ಮಾತುಗಳು ರಿಂಗ್ ಟೋನ್ನಂತೆ ಹಾಗೇ ರಿಂಗಣಿಸುತ್ತಲೆ ಇದ್ದವು.

                                                 ********************************

 

ಟ್ಯಾಗ್ ಗಳು:

ಇಂಧನ ತೀರಿದೊಡನೆ ಮತ್ತೆ ಮೂರ್ತ ಪ್ರೇಮದೆಡೆಗೆ ಬಂದೇ ಬರುವುದೆ…?

ಯಾಕೋ ಬಿ.ಆರ್.ಲಕ್ಷ್ಮಣ್ ರಾವ್ ಅವರ “ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು” ಹಾಡನ್ನು ಪದೇ, ಪದೇ ಕೇಳುತ್ತಿದ್ದೇನೆ. ಹಿಂದೊಮ್ಮೆ ನನ್ನ ಸ್ಥಿತಿಯನ್ನು ನೆನಪಿಸಿ ಕೊಂಡಾಗಲೇ ಈ ಹಾಡು ಬಹುವಾಗಿ ಕಾಡಿತ್ತು. ಈಗ ಮತ್ತೆ ಊರಿಂದ ಅಚ್ಚಕ್ಕ ಫೋನ್ ಮಾಡಿ ನಮ್ಮ ಮನೆಯ ಕೈದೊಟದಲ್ಲಿನ ಪುಟ್ಟ ಸಂಸಾರದ ಕಥೆ ಹೇಳಿದಾಗಿಂದ  ಈ ಕವಿತೆ  ಮತ್ತಷ್ಟು ತೀವ್ರವಾಗಿ ಕಾಡುತ್ತಿದೆ. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇದಕ್ಕಿಂತ ಪರಿಣಾಮಕಾರಿಯಾಗಿ ಬಿಡಿಸಿಡುವ  ಇನ್ನೊಂದು ಕವನ ನನಗೆ ತಿಳಿದಂತೆ ಇರಲಿಕ್ಕಿಲ್ಲ.

ದಸರೆಗೆಂದು ನಾನು ಹಾಗು ರೂಪಾ ಕೊಪ್ಪಳಕ್ಕೆ ಹೋಗಿದ್ದೇವು. ಹೋದ ತಕ್ಷಣ ಪುಳಕಗೊಳ್ಳುವಂತಹ ಒಂದು ಸಂಗತಿಯನ್ನು ರಾಘಣ್ಣ ತಿಳಿಸಿದ. ಮನೆಯ ಕೈದೋಟದ ಸಣ್ಣ ಹೂವಿನ ಗಿಡದ ಎಲೆಯ ಅಡಿಯಲ್ಲಿ ಪುಟ್ಟ ಗುಬ್ಬಿ (ಗುಬ್ಬಿಯ ಜಾತಿಗೆ ಸೇರಿದ್ದು. ಪ್ರಭೇಧ ಗೊತ್ತಿಲ್ಲ)ಯೊಂದು ಬೆಚ್ಚನೆಯ ಗೂಡು ಕಟ್ಟಿ ಅದರಲ್ಲಿ 3 ಮೊಟ್ಟೆಗಳನ್ನು ಇಟ್ಟಿತ್ತು. ಕಂದು ಬಣ್ಣದ  ಆ ಮೊಟ್ಟೆಗಳು ಫಳ,ಫಳ ಅಂತ ಮಿನುಗುತ್ತಿದ್ದವು. ಸಾಮಾನ್ಯವಾಗಿ ಈ ರೀತಿಯ ಮೊಟ್ಟೆ ಮತ್ತು ಗೂಡು ನೋಡದ ನನಗೆ ಅದೊಂದು ಅಚ್ಚರಿಯಂತೆ ಭಾಸವಾಯಿತು. ಆದರೆ ನಮ್ಮ ಮನೆಯ ಮಹಾನ್ ತುಂಟ ವಾದಿರಾಜ್ ನ ಕಣ್ಣಿನಿಂದ ಪಾರಾಗಿ ಆ ಮೊಟ್ಟೆಗಳು ಮರಿಯಾಗುವುದು ನನಗೇನೋ ಅನುಮಾನವಿತ್ತು. ಅಷ್ಟಕ್ಕು ರಾಘಣ್ಣ ಅವನಿಗೆ ಅವುಗಳ ಇರುವಿಕೆ ತೋರಿಸಿದ ಮೇಲಂತು ನನಗೆ ಸ್ಪಷ್ಟವಾಗಿ ಹೋಯಿತು. ಇನ್ನು ಆ ಮೊಟ್ಟೆ ಮರಿಯಾಗುವುದು ಅನುಮಾನವೇ ಎಂದು. ಅದಾದ ನಂತರ ಒಂದೆರಡು ಸಾರಿ ಅವನು ಗೂಡೊಳಗೆ ಕೈ ಹಾಕಿ ತನ್ನ ಕರಾಮತ್ತು ತೋರಿಸುವಷ್ಟರಲ್ಲಿ ನಾನು ಆಗುವ ಅಪಾಯ ತಪ್ಪಿಸಿದ್ದೆ. ಹೇಗೋ ನಾನಿರುವ ನಾಲ್ಕು ದಿನ ಮೊಟ್ಟೆಗಳು ಸುರಕ್ಷಿತವಾಗಿದ್ದವು. ತಾಯಿ ಗುಬ್ಬಿ ಆಗಾಗ ಚಿಂವ, ಚಿಂವ ಎಂದು ಕೂಗುತ್ತಾ  ಸುತ್ತಲು ಗಮನಿಸಿ ಯಾರು ಇರದನ್ನು ಖಾತ್ರಿ ಪಡಿಸಿಕೊಂಡು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಅದರ ಸೂಕ್ಷ್ಮತೆ ನಿಜಕ್ಕೂ ವರ್ಣಿಸಲಸಾಧ್ಯ. ಈ ಪ್ರಕ್ರಿಯೆ ನಾನಿರುವಷ್ಟು ದಿನ ನಿತ್ಯ ಗಮನಿಸುತ್ತಿದ್ದೆ. ಆದರೆ ಕೇವಲ ನಾಲ್ಕೂ ದಿನಕ್ಕೆಂದು ಹೋದ ನಾನು ಮತ್ತೆ ಬೆಂಗಳೂರಿಗೆ ಬಂದು ಬಿಟ್ಟೆ.

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ನಾನು ಇಲ್ಲಿಗೆ ಬಂದ ನಂತರ  ನಿತ್ಯ ಜಂಜಾಟಗಳ ಮಧ್ಯೆ ಈ ಸಂಗತಿ ಮರೆತೆ ಹೋಗಿತ್ತು. ಮೊನ್ನೆ ಅಚ್ಚಕ್ಕ ಪೋನು ಮಾಡಿದಾಗ ಮತ್ತೆ ಗುಬ್ಬಿಯ ಪ್ರಸ್ತಾಪವಾಯಿತು. ಅದೃಷ್ಟವಶಾತ್ ಎಲ್ಲ ಮೊಟ್ಟೆಗಳು ಒಡೆದು ಮರಿ ಆಗಿದ್ದವಂತೆ. ಇವರು ಗಮನಿಸುವದರೊಳಗಾಗಲೆ ಸಣ್ಣಗೆ ರೆಕ್ಕೆ ಬಂದಿದ್ದವಂತೆ. ಇವರೆಲ್ಲ ಹೋಗಿ ನೋಡಿದ ತಕ್ಷಣ ಅವುಗಳು ಗೂಡಿನಿಂದಾಚೆ ಹಾರಿದ್ದಾವೆ. “ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ, ಬ್ರಹ್ಮಾಂಡವನ್ನೆ ಬೆದಕಿ” ಎಂಬಂತೆ  ಹಾಗೇ ಸಣ್ಣ, ಸಣ್ಣ ನೆಗೆತ  ಆಕಾಶದೆಡೆಗೆ ಜಿಗಿಸಿದೆ. ಇದು ಒಂದು ರೀತಿಯ ಸಂಭ್ರಮದ ವಿಷಯವೇ. ಪುಟ್ಟ ಸಂಸಾರ ನಮ್ಮ ಮನೆಯಂಗಳದಲ್ಲಿ ಗೂಡು ಕಟ್ಟಿ ಹೊಸ ಜೀವಗಳಿಗೆ ಹುಟ್ಟು ನೀಡಿದ್ದು ಮನೆಯವರಿಗೆಲ್ಲ ಸಂತಸವನ್ನೇನು ತಂದಿತ್ತು ಆದರೆ ಅವುಗಳು ಹಾರಿ ಹೋದ ನಂತರದ ಸ್ಥಿತಿ ಎಲ್ಲರ ಮನ ಕಲುಕಿದೆ. ಅಚ್ಚಕ್ಕ ಆ ವಿಷಯ ಹೇಳಿದಾಗ  ನನಗು ಜೀವ ಚುರ್ರ  ಎಂದಿತು. ಯಾಕೆಂದರೆ ಸಂಜೆ ಗೂಡಿಗೆ ಮರಿಗಳಿಗೆ ಆಹಾರ ತಂದ ತಾಯಿ ಗುಬ್ಬಿ ಮರಿಗಳು ಕಾಣದೆ ಕಂಗಾಲಾಗಿ ತೋಟದ ಗಿಡದ ಪ್ರತಿ ಎಲೆಯನ್ನು ಜೋರಾಗಿ ಅರಚುತ್ತಾ ಅರಸುವಾಗ ಮನೆಯವರೆಲ್ಲರ ಕಣ್ಣುಗಳು ತೇವಗೊಂಡಿದ್ದವಂತೆ. ಮೂಕ ಜೀವಕ್ಕು ತಾಯಿ ಕರುಳು  ಎಷ್ಟು ಬಲವಾಗಿ ಕಾಡುತ್ತೆ ಎಂಬುದಕ್ಕೆ ಸತತ ಮೂರು ದಿನಗಳು ಮನೆಯವರೆಲ್ಲ ಸಾಕ್ಷಿಯಾದರಂತೆ.

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ಸಂಬಂಧಗಳ ಕೊಂಡಿಗಳು ಮನುಷ್ಯನಲ್ಲಿ ಈ ನಡುವೆ ಸಡಿಲಾಗುತ್ತಿವೆ. ಆದರೆ ನಮ್ಮ ನಡುವೆ ಇರುವ ಮೂಕ ಜೀವಗಳು ಇಂತಹ ಪಾಠಗಳನ್ನು ಎಷ್ಟು ಸರಳವಾಗಿ ಕಲಿಸಿಕೊಡುತ್ತವೆ. ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಆದರೆ ಪ್ರಾಣಿ, ಪಕ್ಷಿಗಳು ಎಷ್ಟು ಶತಮಾನ ಕಳೆದರು ತಮ್ಮೊಳಗಿನ ಅಂತಃಕರಣವನ್ನು ಕಳೆದು ಕೊಳ್ಳಲಾರವು ಅಲ್ಲವೇ!

 
 

ಟ್ಯಾಗ್ ಗಳು:

 
%d bloggers like this: