RSS

Category Archives: ರಾಜ್ಕೀಯ

ಇಲ್ಲಿ ‘ಭರ’ಪೂರ ವನವಾಸ ; ಅಲ್ಲಿ ಭರ್ಜರಿ ಪ್ರವಾಸ

ಇಂತಹ ನಾಯಕರನ್ನು ಚುನಾಯಿಸಿದ್ದು ನಮ್ಮ ದುರಂತವೋ ಅಥವಾ ಇವರು ಆಯ್ಕೆಯಾಗಿದ್ದೆ ನಮ್ಮ ದುರಾದೃಷ್ಟವೋ ದೇವರೆ ಬಲ್ಲ. ಆದರೆ ಕನಿಷ್ಠ ಹೊಣೆಗಾರಿಕೆಯನ್ನು ಮರೆತು ಮನಸೋ ಇಚ್ಛೆ ವರ್ತಿಸುವವರು ನಮ್ಮ ನಡುವಿನ ಚುನಾಯಿತ ಪ್ರತಿನಿಧಿಗಳು ಎಂದು ಹೇಳಿಕೊಳ್ಳ ಬೇಕಾಗಿರುವುದು ಈ ನಾಡಿನ ದೌರ್ಭಾಗ್ಯ..

ಎಲ್ಲ ಅಡೆತಡೆಗಳನ್ನು ಮೀರಿ 13 ಜನ ಶಾಸಕರು ವಿದೇಶ ಪ್ರವಾಸದಲ್ಲಿ ವಿಹರಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಆದಿಯಾಗಿ ಮಾಧ್ಯಮ, ಸಾರ್ವಜನಿಕ ವಲಯದಿಂದಲೂ ತೀವ್ರ ವಿರೊಧ ವ್ಯಕ್ತವಾದರು ಕೂಡಾ ಇವರ ಪ್ರವಾಸಕ್ಕೆ ಯಾವುದು ಅಡ್ಡ ‘ಬರ’ಲಿಲ್ಲ. ಇಷ್ಟಕ್ಕೂ ಈ ಶಾಸಕರು ವಿದೇಶ ಸುತ್ತಿ ಬಂದು ಕಡಿದು ಕಟ್ಟೆ ಹಾಕುವುದು ಏನು ಎಂಬುದು ಮಾತ್ರ ಅನುಮತಿ ಇತ್ತ ಶೆಟ್ಟರ್ ಮತ್ತು ಬೋಪಯ್ಯ ಆಣೆಯಾಗಿ ಯಾರಿಗು ಗೊತ್ತಿಲ್ಲ. ಕಾರಣ ಪ್ರತಿ ಸರ್ಕಾರದಲ್ಲು ಒಂದು ವಿದೇಶ ಪ್ರವಾಸ, ಎರಡು ದೇಶಿ ಪ್ರವಾಸಗಳಿಗೆ ಹೋಗಲು ಅವಕಾಶವಿದ್ದಿದ್ದರಿಂದ ತಮ್ಮ ಕೋಟಾ ಯಾಕೆ ಸುಖಾಸುಮ್ಮನೆ ಕಳೆದುಕೊಳ್ಳಬೇಕು ಎಂದು ಶಾಸಕರು ಇದನ್ನು ಅವ್ಯಾಹತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವೇ ಈಗ ‘ಸಾರ್ವಜನಿಕ ಉದ್ದಿಮೆಗಳ ಸಮಿತಿ’ಯ ಸದಸ್ಯರು ದಕ್ಷಿಣ ಅಮೆರಿಕಾಕ್ಕೆಹಾರಿದ್ದು.

ಇದು ಅಪರಾಧವಾಗಿರಲಿಕ್ಕಿಲ್ಲ, ಆದರೆ ಇಂತಹ ಹೊಣೆಗೇಡಿ ವರ್ತನೆಯ ಅಗತ್ಯವಿತ್ತೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ರಾಜ್ಯದಲ್ಲಿ ಹಿಂಗಾರು ಕೈಕೊಟ್ಟು ಭೀಕರ ಬರಗಾಲ ತಾಂಡವವಾಡ್ತಿದೆ. ಜನ ಕೂಲಿ ಸಿಗದೆ ಪಟ್ಟಣದೆಡೆಗೆ ಗುಳೆ ಹೋಗ್ತಿದ್ದಾರೆ. ರೈತರು ಪಾಳು ಬಿದ್ದ ಹೋಲಕ್ಕೆ ಹನಿ ನೀರಾದರು ಚೆಲ್ಲಲಿ ಎಂದು ಮೋಡಗಳೆಡೆಗೆ ನೆಟ್ಟ ಕಣ್ಣು ಮಿಟುಕಿಸದೆ ನೋಡುತ್ತಿರುವಾಗ ನಮ್ಮ ಜನಪ್ರತಿನಿಧಿಗಳಿಗೆ ವಿದೇಶದ ಮೋಹ ಬೇಕಿತ್ತಾ? ಯಾವನಿಗ್ಗೊತ್ತು…! ಬರಗಾಲ ಕಾಮಗಾರಿ, ನರೇಗಾ ಅಂತ ಎನೇನೋ ಯೋಜನೆಗಳು ಜನ್ಮ ತಾಳುತ್ತವೆ. ಆದರೆ ಅವೆಲ್ಲ ಎಷ್ಟು ಸಾದ್ಯಂತವಾಗಿ ಉಸಿರಾಡುತ್ತಿವೆ ಎಂಬುದು ದೊಡ್ಡ ಯಕ್ಷಪ್ರಶ್ನೆ. ಕೂಲಿಗಾಗಿ ಕಾಳು ಅಂತಾರೆ. ಆದರು ಹೊಟ್ಟೆಗಿಲ್ಲದೆ ಜನ ಒದ್ದಾಡುವುದು ತಪ್ಪಿಲ್ಲ. ನೂರಾರು ಆಳಕ್ಕೆ ಬೊರ್ ವೆಲ್ ಕೊರೆದರು ಹನಿ ನೀರು ಜಿನುಗುವುದಿಲ್ಲ. ಕೆರೆಗಳಲ್ಲಿ ಹೂಳು ತುಂಬಿಕೊಂಡು ಬೊಗಸೆ ನೀರು ನಿಲ್ಲುವುದು ದುಸ್ತರ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವಾಗ ಇನ್ನು ಅಂತರ್ಜಲದ ಮಾತೇ ಉದ್ಭವವಾಗದು. ಹೇಳುತ್ತಾ ಹೋದರೆ ಸಮಸ್ಯೆಗಳಿಗೆ ಬರವೇ ಇಲ್ಲಾ. ಆದರೆ ನಮ್ಮ ನಾಯಕರ ವಿವೇಚನೆಗೇಕೆ ಇಷ್ಟೊಂದು ಬರ ಆವರಿಸಿದೆಯೋ ಬಿಡಿಸದಾಗದು.

ನಾಡಲ್ಲಿ ಬರ... ಶಾಸಕರ ವಿದೇಶ ಸಂಚಾರ

ನಾಡಲ್ಲಿ ಬರ… ಶಾಸಕರ ವಿದೇಶ ಸಂಚಾರ
ಕೃಪೆ:daijiworld

ನಾಡಿನ ಪ್ರಖ್ಯಾತ ಸಾಹಿತಿ ಕಂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 13 ಜನ ಮಹಾನ್ ಘನಂದಾರಿ ಕೆಲಸಕ್ಕೆ ಹೊರಟವರಂತೆ ನಾಡಿನ ಜನರ ಸಮಸ್ಯೆಗಳನ್ನೆಲ್ಲಾ ಎಡಗಾಲಲ್ಲಿ ಒದ್ದು, ಬಲು ಸಂಭ್ರಮದಿಂದ ವಿಮಾನದಲ್ಲಿ ಬಲಗಾಲಿಟ್ಟು ವಿದೇಶಕ್ಕೆ ಹಾರಿದ್ದಾರೆ. ಆ ಸಮಯದಲ್ಲಿ ಮಾಧ್ಯಮಗಳಿಗೆ ಒಬ್ಬ ಶಾಸಕ ಮಹಾಶಯರು ಹೇಳಿದ್ದು, “ರೂ. 6 ಲಕ್ಷದಿಂದ ಯಾವ ಬರಗಾಲ ನೀಗಿಸಲು ಆಗಲ್ಲ. ಜನ ಬರಗಾಲ ಇದೆ ಅಂತ ಊಟಾ, ಮದುವೆ ನಿಲ್ಲಿಸಿದ್ದಾರಾ” ಎಂದು ಬರ ಪರಿಸ್ಥಿತಿಯನ್ನು ಬಲು ಸಮರ್ಥವಾಗಿ ವಿಶ್ಲೇಷಿಸಿದರು. ಸ್ವಾಮಿ ತಮ್ಮ ಅವಗಾಹನೆಗೆ ಇರಲಿ ಎಂದು ಈ ಮಾತು, 6 ಲಕ್ಷ ರೂಪಾಯಿ ಬರಕ್ಕೆ ತುತ್ತಾದ ಅನ್ನದಾತನ 8-10 ವರ್ಷಗಳ ವಾರ್ಷಿಕ ವರಮಾನ. ಕೆಲವು ಪರಿಸ್ಥಿತಿಯಲ್ಲಿ ಇದು 15 ವರ್ಷಗಳಿಗಾದರು ಅಚ್ಚರಿಯಿಲ್ಲ. ಹಾಗಿರುವಾಗ ತಮಗೆ 6 ಲಕ್ಷ ರೂಪಾಯಿ ಕೇವಲವಾಗಿ ಕಂಡಿದ್ದು ವಿಪರ್ಯಾಸ. ಟ್ಯಾಂಗೋ ಡ್ಯಾನ್ಸು, ಮಾಚು ಪೀಕು ಪರ್ವತವೇ ತಲೆಯಲ್ಲಿ ತುಂಬಿಕೊಂಡಿರುವವರಿಗೆ ಬಡವನ ಒಂದೊಪ್ಪತ್ತಿನ ಊಟಕ್ಕಾಗಿನ ತತ್ವಾರ ಅರ್ಥವಾಗುವುದಾದರು ಹೇಗೆ ಸಾಧ್ಯ ಬಿಡಿ.

ಇನ್ನು ಈ ಶಾಸಕೋತ್ತಮರ ಅಧ್ಯಯನದ ವಿಷಯಕ್ಕೆ ಬರೋಣ. ಇಲ್ಲಿಯವರೆಗೆ ಅದೆಷ್ಟು ಶಾಸಕರು ವಿದೇಶ ಪ್ರವಾಸ ಕೈಗೊಂಡು ವರದಿ ಒಪ್ಪಿಸಿದ್ದಾರೆ ಮತ್ತು ಅವುಗಳ ಅನುಷ್ಠಾನವಾಗಿದೆ ಎಂಬುದೆ ವಿಶೇಷವಾಗಿ ಅಧ್ಯಯನ ಮಾಡಬೇಕಾದ ವಿಷಯವಾಗಿದೆ. ಕೇವಲ ಸರ್ಕಾರದ ಹಣದಲ್ಲಿ ಮೊಜು ಮಾಡುವುದಷ್ಟೆ ಈ ಪ್ರವಾಸದ ಒನ್ ಲೈನ್ ಅಜೆಂಡಾ ಎಂದರೆ ತಪ್ಪಲ್ಲ. ಇಲ್ಲಿಯವರೆಗು ನಿರ್ದಿಷ್ಟವಾಗಿ ಯಾವ ಅಧ್ಯಯನಕ್ಕೆಂದು ಈ 13 ಶಾಸಕರು ವಿದೇಶಕ್ಕೆ ಹೊರಟರು ಎಂಬುದು ಎಲ್ಲಿಯೂ ಕೇಳಿ ಬರುತ್ತಿಲ್ಲ. ಕೊನೆ ಪಕ್ಷ ಮಾಧ್ಯಮಗಳಿಂದ ಇಷ್ಟೊಂದು ಟೀಕೆಗಳು ಬಂದ ನಂತರವಾದರು ವಿಮಾನ ನಿಲ್ದಾಣದಲ್ಲಿ ಈ ಶಾಸಕರು ತಮ್ಮ ವಿದೇಶ ಪ್ರವಾಸದ ಉದ್ದೇಶ ಮತ್ತು ಅಧ್ಯಯನದ ವಸ್ತು ವಿಷಯವನ್ನು ವಿವರಿಸಿ ಅದನ್ನು ಸಮರ್ಥಿಸಿಕೊಳ್ಳಬಹುದಿತ್ತಲ್ಲವೆ. ಯಾಕೆ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಇಷ್ಟೊಂದು ಟೀಕೆಗೆ ಗ್ರಾಸವಾದರು. ಅಸಲಿಯತ್ತು ಏನೆಂದರೆ ಮುಖ್ಯವಾಗಿ ಹೋಗುವುದಕ್ಕೆ ಕಾರಣವೇ ಇಲ್ಲಾ. ಅಧ್ಯಯನ ಎಂಬುದು ಕೇವಲ ನೆಪವಷ್ಟೆ. ಇಷ್ಟಕ್ಕು ಅಧ್ಯಯನಕ್ಕೆ ಹೋಗುವವರ ಜೊತೆ ಹೆಂಡತಿ, ಮಕ್ಕಳ ಅಗತ್ಯವಾದರು ಏನಿತ್ತು. ಹೋಗಲಿ ಇವರ ಅಧಿಕೃತ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ ಅಧ್ಯಯನದ ವಾಸನೆ ಎನಾದರು ಬಡಿಯುತ್ತಾ ಎಂದು ಮೂಸಿದರೆ ಅಲ್ಲಿ ಬರೀ ವಿದೇಶಿ ಐಷಾರಾಮಿ ಹೋಟೆಲ್ ಗಳ ಘಮಲು. ಇದು ನಮ್ಮ-ನಿಮ್ಮೆಲ್ಲರ ದುರಾದೃಷ್ಟ ಮತ್ತು ಎಂದಿಗು ತೊಲಗದ ಅನಿಷ್ಟ.

ಸರ್ಕಾರ ಖಡಾಖಂಡಿತವಾಗಿ ವರ್ತಿಸಿದ್ದರೆ ಇಂದು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವಂತಹ ಸನ್ನವೇಶ ಸೃಷ್ಟಿಯಾಗುತ್ತಿರಲಿಲ್ಲ. ಇಷ್ಟಕ್ಕು ಸರ್ಕಾರದ ಬೊಕ್ಕಸದಿಂದ ಎತ್ತಿ ದುಡ್ಡು ಕೊಟ್ಟು ವಿದೇಶ ಪ್ರವಾಸ ಮಾಡಿಸುವ ದುರ್ದು ಯಾರಿಗೂ ಇರಲಿಲ್ಲ. ಅದ್ಯಾಕೋ ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಜನ ಮೆಚ್ಚುಗೆಯ ನಿರ್ಧಾರ ತೆಗೆದು ಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಂತು ಸ್ಪಷ್ಟ. ಆದರೆ ಈ ಎಲ್ಲ ಶಾಸಕರ ವಿದೇಶಿ ವೆಚ್ಚವನ್ನು ಅವರ ಜೇಬಿನಿಂದಲೇ ಭರಿಸುವಂತೆ ಮಾಡಿ ಆದ ಅವಮಾನವನ್ನು ಕೊಂಚ ಮಟ್ಟಿಗಾದರು ತಗ್ಗಿಸುವ ಧೈರ್ಯ ಸರ್ಕಾರ ತಾಳಲಿ ಎಂಬುದೆ ಎಲ್ಲ ಜನರ ಆಶಯ. ಆದರೆ ಇವೆಲ್ಲವುಗಳ ಮಧ್ಯೆ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಇನ್ನು ಐದಾರು ತಿಂಗಳಿಗೆ ಚುನಾವಣೆ ಘೋಷಣೆಯಾಗಿ ಮತ್ತೆ ಈ ಎಲ್ಲ ಮಹಾನುಭಾವರು ಮತ ಕೇಳಲು ನಮ್ಮ ಮುಂದೆ ಬಂದು ನಿಲ್ಲುತ್ತಾರೆ. ಒಂದು ವೇಳೆ ಮತ್ತೆ ಇವರೆ ಶಾಸಕರಾಗಿ ಚುನಾಯಿತರಾದರೆ…… ಶಂಭೋ…. ಶಂಕರಾ…

Advertisements
 
1 ಟಿಪ್ಪಣಿ

Posted by on ಸೆಪ್ಟೆಂಬರ್ 8, 2012 in ರಾಜ್ಕೀಯ

 

ಟ್ಯಾಗ್ ಗಳು:

“ಸದಾ” ನಗುಮೊಗಕ್ಕೆ ಒಲಿದು ಬಂದ ಮುಖ್ಯಮಂತ್ರಿ ಪದವಿ;ಇನ್ನು ಸಿಡಿಯಲಿದೆ ಅಸಮಾಧಾನದ ಕಿಡಿ

ಕೊನೆಗೂ ಯಡಿಯೂರಪ್ಪ ಹೊಡೆದ ಗುಂಡು ಹೈಕಮಾಂಡ್ ಗೆ ಭರ್ಜರಿಯಾಗಿಯೇ ತಗುಲಿದೆ ಎಂದೇ ಹೇಳಬಹುದು. ಒಲ್ಲದ ಮನಸಿನಿಂದ ಕುರ್ಚಿ ಬಿಟ್ಟು ಕೆಳಗಿಳಿದ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಸದಾನಂದಗೌಡ್ರು ಎಂದು ದಾಳ ಉರುಳಿಸಿದಾಗ ಎಲ್ಲರಿಗೂ ಇದು ಆಗೋ, ಹೋಗೋ ಕೆಲಸವಲ್ಲ ಎಂದು ಅನಿಸಿದ್ದು ಸುಳ್ಳಲ್ಲ. ಕಾರಣ ಗೌಡ್ರು ಪಕ್ಷದ ಅಧ್ಯಕ್ಷರಾಗಿರಬಹುದು, ಅವರ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರಬಹುದು, ಆದರೆ ಅವರ ನಗು ಮೊಗಕ್ಕೆ ಅಂತಹ ಹಿಂಬಾಲಕರ ಪಡೆ ಇರಲಿಲ್ಲ ಎಂಬುದಂತು ಒಪ್ಪಲೆಬೇಕು. ಹೋಗಲಿ ಅವರು ಜಾತಿ ರಾಜಕಾರಣ ಮಾಡಿದ ಉದಾಹರಣೆಗಳು ಕೂಡಾ ಇಲ್ಲ. ಬಿಜೆಪಿ ಎಂದರೆ ಲಿಂಗಾಯಿತ ಬೆಂಬಲ ಎಂಬ ಅಲೆಯಿರುವಾಗ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಸಿಕ್ಕೀತೆ ಎಂಬ ಸಂದೇಹ ಕಾಡುತ್ತಿತ್ತು. ಆದರೆ ಇಲ್ಲಿ ಗಮನಿಸಬೇಕಾದದ್ದೆಂದರೆ ತಮ್ಮ ಹುದ್ದೆಯಿಂದ ಕೆಳಗಿಳಿದ ಮೇಲೂ ಯಡಿಯೂರಪ್ಪ ಅನೇಕ ಶಾಸಕರ, ಸಂಸದರ ಬೆಂಬಲ ಹೊಂದಿದ್ದರು. ಆದರೆ ಇವರ ಬಗ್ಗೆ ಒಳಗೊಳಗೆ ಅಸಮಾಧಾನ ಇರುವ ಈಶ್ವರಪ್ಪ, ಶೆಟ್ಟರ್ ಮತ್ತು ಅನಂತಕುಮಾರ್ ಒಂದು ಬಣ ಕಟ್ಟಿಕೊಂಡು ಶೆಟ್ಟರ್ ಮುಖ್ಯಮಂತ್ರಿ ಆಗಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರು. ಖಂಡಿತ ಇದು ಹೈಕಮಾಂಡ್ ಗೆ ದೊಡ್ಡ ನುಂಗಲಾರದ ತುತ್ತಾಗಿತ್ತು ಎಂಬುದು ಈ ಮೂರು ದಿನಗಳ ಬೆಳವಣಿಗೆ ಗಮನಿಸಿದ ಯಾರಿಗಾದರೂ ಈ ವಿಷಯ ಅರ್ಥವಾಗಿರುತ್ತದೆ.

ಯಾವುದೇ ನಿರ್ಧಾರವನ್ನು ಅಖೈರು ಗೊಳಿಸಲು ಹೆಣಗಿದ ವರಿಷ್ಠರು ಗುಪ್ತ ಮತದಾನದ ಮೂಲಕ ಸದಾನಂದಗೌಡ (62 ಮತಗಳು) ಮುಂದಿನ ಸಿಎಂ, ಜಗದೀಶ ಶೆಟ್ಟರ್ (55 ಮತಗಳು) ಉಪ ಮುಖ್ಯಮಂತ್ರಿ ಎಂದು ಘೊಷಿಸುವ ಮೂಲಕ ಯಡಿಯೂರಪ್ಪ ಓಡಿಸಿದ ಕುದರೆ ರೇಸ್ ಗೆದ್ದಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಅದರ ಬೆನ್ನ ಹಿಂದೆ ಶೆಟ್ಟರ್ ಉಪ ಮುಖ್ಯಮಂತ್ರಿ ಹುದ್ದೆ ತಮಗೆ ಬೇಡ ಎನ್ನುವುದರ ಮುಖಾಂತರ ಭಿನ್ನಮತ ಇನ್ನು ಶಮನವಾಗಿಲ್ಲ. ಇದು ಜ್ವಾಲಾಮುಖಿ ಎಂಬ ಸಂದೇಶ ರವಾನಿಸಿದ್ದಾರೆ. ಇದು ಮತ್ತೊಂದು ತಲೆ ನೋವಿಗೆ ನಾಂದಿ ಹಾಡುವುದರಲ್ಲಿ ಸಂಶಯವಿಲ್ಲ.

ಅಂತು,ಇಂತು ನಗು ಕೊಗಕ್ಕೆ ದಕ್ಕಿತು ಸಿಎಂ

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಹಲವು ಸಂದೇಹಗಳು ಕಾಡುವುದಂತು ಸತ್ಯ. ಮೊದಲು ಪಕ್ಷದಲ್ಲಿ ಸ್ಪಷ್ಟವಾಗಿ ಗುಂಪುಗಾರಿಕೆ ಮನೆ ಮಾಡಿದೆ ಎಂಬುದು ಸರ್ವವಿದಿತವಾಗಿದೆ. ಎರಡನೇಯದಾಗಿ ಆಯ್ಕೆಯಾದ ಸಿಎಂ, ಯಡಿಯೂರಪ್ಪ ಅವರ ಕೈಗೊಂಬೆ. ಅವರೇ ಸೂಪರ್ ಸಿಎಂ ಎಂಬುದು. ಇದರೊಂದಿಗೆ ಯಡ್ಡಿ ನಿಷ್ಠರೇ ಮಂತ್ರಿ ಮಂಡಲದಲ್ಲಿ ಹೆಚ್ಚು ಸ್ಥಾನ ಗಿಟ್ಟಿಸಿ ಕೊಳ್ಳುತ್ತಾರೆ. ಈ ಬೆಳವಣಿಗೆ ಇನ್ನೊಂದು ಬಣದ ಶಾಸಕರ ಬಂಡಾಯಕ್ಕೆ ರಹದಾರಿ ಆಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಲಿಂಗಾಯತ ಪ್ರಾಬಲ್ಯವಿರುವ ಉತರ ಕರ್ನಾಟಕದಲ್ಲಿ ಸದಾನಂದಗೌಡರ ನಗು ಮೊಗ ಯಾವುದೋ ಟೂತ್ ಪೇಸ್ಟ್ ಕಂಪನಿ ಮನುಷ್ಯ ಎಂಬ ಭಾವನೆ ಮೂಡಿಸುತ್ತದೆ. ಕಾರಣ ಅವರ ಪರಿಚಯ ಸಾಕಷ್ಟು ಜನಕ್ಕೆ ತಿಳಿದೇ ಇಲ್ಲ. ಹಾಗೆಯೇ ಲಿಂಗಾಯತ ನಾಯಕನಿಗೆ ತಪ್ಪಿದ ಸಿಎಂ ಪದವಿ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಕೊಂಚ ಹಿನ್ನೆಡೆ ಉಂಟು ಮಾಡಿದರು ಆಶ್ಚರ್ಯವಿಲ್ಲ. ಏಕೆಂದರೆ ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಿರಲಿಲ್ಲ. ಈ ಮೂಲಕ ಒಬ್ಬ ಜನಪ್ರಿಯ ನಾಯಕನನ್ನು ಆಯ್ಕೆ ಮಾಡುವುದರ ಜೊತೆಗೆ ಒಂದು ಬಲಿಷ್ಠ ಜಾತಿಯ ಮತಗಳನ್ನು ಹಾಗೆಯೇ ಡಿಪಾಸಿಟ್ ಮಾಡಿಕೊಂಡ ಲಾಭವಾಗುತ್ತಿತ್ತು.ಆದರೆ ಈ ಆಯ್ಕೆ ಬಿಜೆಪಿಗೆ ಯಾವ ರೀತಿ ಲಾಭ ತಂದು ಕೊಡುತ್ತದೋ ಹೇಳುವುದು ಕಷ್ಟ.

ಇಷ್ಟಕ್ಕು ಬಿಜೆಪಿಯ ನಿಜವಾದ ನಾಯಕರೆಲ್ಲರು ಆರ್ ಎಸ್ಎಸ್ ಹಿನ್ನೆಲೆಯುಳ್ಳವರಾಗಿದ್ದು, ಹೈಕಮಾಂಡ್ ಮಾತಿಗೆ ತುಟಿ ಬಿಚ್ಚುತ್ತಿರಲಿಲ್ಲ. ಆದರೆ ಅದೇ ಹಿನ್ನೆಲೆಯಿಂದ ಬಂದ ಯಡ್ಡಿ ತೊಡೆ ತಟ್ಟಿ ನಿಂತಿದ್ದರಿಂದ ವರಿಷ್ಠರು ತೀವ್ರ ಮುಖಭಂಗ ಎದುರಿಸ ಬೇಕಾಯಿತು. ಇದು ಸ್ಪಷ್ಟ ಶಿಸ್ತಿನ ಉಲ್ಲಂಘನೆ ಎಂದು ತಿಳಿದಿದ್ದರು ನಾಯಕರು ಅಸಹಾಯಕರಾಗಿದ್ದರು. ಇದರ ಲಾಭವನ್ನು ಯಡ್ಡಿ ಸದ್ವಿನಿಯೋಗ ಮಾಡಿಕೊಂಡಿದ್ದಾರೆ. ತಮ್ಮ ಬ್ರಷ್ಟಾಚಾರದ ಆಪಾದನೆಗಳಿಗೆ ಸಿಎಂ ಆಗುವವರು ಗುರಾಣಿಯಾಗುವ ಅವಶ್ಯಕತೆ ಇತ್ತು. ಅದಕ್ಕೆ ಅವರು ಸದಾನಂದರ ಹೆಸರು ಅಖೈರು ಮಾಡಿದ್ದರು. ಆ ಮೂಲಕ ಲೋಕಾಯುಕ್ತ ಸಲ್ಲಿಸಿದ ವರದಿಯನ್ನು ತಿರಸ್ಕರಿಸಬಹುದು ಮತ್ತು ಯಾವುದೇ ಕಾನೂನಾತ್ಮಕ ಹೋರಾಟಗಳಿಗೆ ಸರಕಾರದ ಬೆಂಬಲ ಇಟ್ಟುಕೊಳ್ಳುವುದು ಅವರ ಉದ್ದೇಶವಾಗಿತ್ತು. ಈ ಮೂಲಕ ಅದು ಈಡೇರಿದೆ. ಆದರೆ ಈಗಾಗಲೇ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವದರ ಬಾಣದಿಂದ ತಪ್ಪಿಸಿಕೊಳ್ಳಲು ಯಡ್ಡಿ ಹೊಸ ಮುಖ್ಯಮಂತ್ರಿ ಮೂಲಕ ಮಾರ್ಗ ಹುಡುಕಬೇಕಿದೆ. ಇದು ಅಷ್ಟು ಸುಲಭದ್ದಲ್ಲ ಎಂಬುದು ಬೇರೆ ಮಾತು. ಅದೇನೆ ಇರಲಿ ಸಧ್ಯಕ್ಕೆ ಎಲ್ಲ ಸರಿ ಹೋಯಿತು ಎಂದು ವರಿಷ್ಠರು ನಿಟ್ಟುಸಿರು ಬಿಡುವಂತಿಲ್ಲ. ಆಟ ಈಗ ಶುರು. ಅದು ದೊಡ್ಡಾಟವೋ, ಬಯಲಾಟವೋ ನೀವೆ ನೋಡಿ ಆನಂದಿಸಿ.

 
2 ಟಿಪ್ಪಣಿಗಳು

Posted by on ಆಗಷ್ಟ್ 3, 2011 in ರಾಜ್ಕೀಯ

 

ಟ್ಯಾಗ್ ಗಳು:

ಕಳ್ಳನ ಮನಸ್ಸು…ಹುಳ್ಳ..ಹುಳ್ಳಗೆ… ಎಂಬುದು ಇದಕ್ಕೇನಾ!?

ಕೊನೆಗೂ ನಮ್ಮನ್ನಾಳುವ ಘನ (ಗಟ್ಟಿ ಪಿಂಡ) ರಾಜಕಾರಣಿಗಳು ತಮ್ಮ ಬಂಡವಾಳವನ್ನ ತೆರೆದಿಟ್ಟಿದ್ದಾರೆ. ಖಂಡಿತ ಇದರಲ್ಲಿ ಯಾವ ವಿಶೇಷವೂ ಇಲ್ಲ. ನಮಗಿಂದು ಗೊಸುಂಬೆಗಳು ಕಾಣದಿರಬಹುದು. ಆದರೆ ಜಿರಲೆಗಳಂತೆ ಅಸಹ್ಯ ಹುಟ್ಟಿಸುವ ರಾಜಕಾರಣಿಗಳನ್ನು ಆ ಮೂಲಕ ನೋಡಬಹುದಾಗಿದೆ. ಒಂದು ಪಳೆಯುಳಿಕೆ ಜೀವಂತವಾಗಿಟ್ಟಿರುವ ಹೆಮ್ಮೆ ಈ ವರ್ಗಕ್ಕೆ ದಕ್ಕಬಹುದೇನೋ. ಖಂಡಿತಾ ಇದು ಕೇವಲ ರಾಜ್ಯ ರಾಜಕಾರಣಕ್ಕೆ ಅನ್ಯಯಿಸುವುದಿಲ್ಲ. ಇದಕ್ಕೆ ಕೇಂದ್ರದವರು ಸಮಾನ ಪಾಲುದಾರರು.

ನಿಜಕ್ಕೂ ಇದಕ್ಕಿಂತ ತಲೆ ತಗ್ಗಿಸುವಂತಹ ವಿಚಾರಗಳು ಬೇರೆ ಇರಲಾರವು. ಈಗ ಎಲ್ಲೆಡೆ ಲೋಕಪಾಲ ಮಸೂದೆಯ ಬಗ್ಗೆ ಬಿಸಿ,ಬಿಸಿ ಚರ್ಚೆ ಆರಂಭವಾಗಿದೆ. ಇದು ಅದೆಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತದೋ ದೇವರೆ ಬಲ್ಲ  ಆದರೆ, ಈ ಮಸೂದೆ ಬರುವುದರಿಂದ ದೇಶಕ್ಕೆ ಕೊಂಚವಾದರು ಒಳಿತಾದೀತು ಎಂಬುದು ಸಾಮಾನ್ಯ ಜನರ ಆಶಯ. ಅದಕ್ಕಾಗಿಯೇ ಒಕ್ಕೂರಲಿನಿಂದ ಬ್ರಷ್ಟಾಚಾರದ ವಿಷಯದಲ್ಲಿ ಯಾರು ಧ್ವನಿ ಎತ್ತಿದರು ನಮ್ಮ ಮನಸ್ಸು ಅವನನ್ನು ನಿಜ ನಾಯಕನಂತೆ ಹಿಂಬಾಲಿಸುತ್ತದೆ.ಅದು ಅಣ್ಣಾಜೀ ಇರಬಹುದು, ಬಾಬಾ ರಾಮದೇವ್ ಇರಬಹುದು. ಬ್ರಷ್ಟಾಚಾರದ ವಿಷಯದಲ್ಲಿ ಮನಸ್ಸು ಎಷ್ಟೊಂದು ರೋಸಿ ಹೋಗಿದೆಯೆಂದರೆ ಮನೆಯಲ್ಲಿ ಹಾವು ಹೊಕ್ಕರೆ ಹುಡುಕಾಡಿ ಹೊಡೆದು ಹಾಕುವಂತೆ ಈ ವಿಷ ಜಂತುವನ್ನು ನಿರ್ನಾಮ ಮಾಡಲು ಜನ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ.

ಯಾವುದೇ ದೇಶದಲ್ಲಾಯ್ತು ಅಭಿವೃದ್ಧಿಯ ಮಂತ್ರ ಜಪಿಸಬೇಕಾದದ್ದು ಮತ್ತು ಸಾಧಿಸಿ ತೋರಿಸಬೇಕಾದದ್ದು ಆ ಪ್ರದೇಶವನ್ನು ಪ್ರತಿನಿಧಿಸುವ ಸರಕಾರ. ನಾಲಿಗೆ ಒಳ್ಳೆಯದಾಗಿದ್ದರೆ ನಾಡೆಲ್ಲ ಒಳ್ಳೆಯದು ಎಂಬಂತೆ ನಮ್ಮ ಸರಕಾರಗಳೆ ಗಬ್ಬೆದ್ದು ಹೋಗಿರುವಾಗ ಮೂಗಿಗೆ ರಾಚುವುದೆಲ್ಲ ದುರ್ನಾತವೇ ಅಲ್ಲವೇ!

ವಿಪರ್ಯಾಸವೆಂದರೆ ಯಾರು ತನಿಖೆಗೆ ಹೆಚ್ಚು ಅರ್ಹರೊ, ಅವರನ್ನೆ ಇದರಿಂದ ಹೊರಗಿಡಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಲೋಕಪಾಲ ಮಸೂದೆ ರೂಪಿಸಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳ ವರ್ತನೆಗೆ ಅದೆಲ್ಲಿಂದ ಉಗಿಯ ಬೇಕೋ ಗೊತ್ತಾಗುತ್ತಿಲ್ಲ. ನಮ್ಮಲ್ಲಿ ಅತಿ ಭ್ರಷ್ಟಾಚಾರ ಇರುವುದೆ ರಾಜಕೀಯದಲ್ಲಿ, ಇನ್ನು ಅವರನ್ನೆ ಹೊರಗಿಟ್ಟು ಮಸೂದೆ ಮಾಡುವ ಔಚಿತ್ಯವಾದರು ಏನು? ಇದಕ್ಕೆ ನಮ್ಮ ನಾಯಕರೆ ಉತ್ತರಿಸಬೇಕು. ಯಾವಾಗಲು ಮಸೂದೆ ಮಾಡ ಹೊರಟಾಗ ಕರಡು ಸಮಿತಿ ಮತ್ತು ಸರಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ಕಾಯ್ದೆ ಜಾರಿಯಾಗಬೇಕಾದರು ಆಡಳಿತ ಪಕ್ಷ ಅದರಿಂದ ತನಗಾಗುವ ಒಳಿತು, ಕೆಡಕುಗಳನ್ನು ಅಂದಾಜಿಸಿಯೆ ಅಂಕಿತ ಒತ್ತುವುದು. ಹಾಗಿರುವಾಗ ಲೊಕಪಾಲ ಮಸೂದೆಯಲ್ಲಿನ ಕೆಲವು ನಿಯಮಗಳ ಜಾರಿಗೆ ಧೈರ್ಯ ತೋರದಿರುವ ಹಿಂದಿನ ಮರ್ಮ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ!

ಈ ರಾಷ್ಟ್ರದ ಸಂವಿಧಾನ ಮತ್ತು ಅದು ಒಳಗೊಂಡಿರುವ ಕಾನೂನಿನ ಮುಂದೆ ಎಲ್ಲರು ಸಮಾನರು ಎಂದು ಹೇಳಿದ ಮೇಲೆ, ಈ ಮಸೂದೆಗೆ ಪ್ರದಾನಿ, ಮುಖ್ಯ ನ್ಯಾಯಾಧೀಶರು, ಸಂಸತ್ತಿನ ಸದಸ್ಯರೂ ಒಳಪಟ್ಟರೆ ಅದರಲ್ಲಿ ತಪ್ಪೇನಿದೆ. ಇದೆಂಥ ಸಮಾನತೆಯ ಪಾಠ ಎಂಬುದು ಅರಿವಾಗುತ್ತಿಲ್ಲ. ಇವರೆಲ್ಲರೂ ಇಲ್ಲಿನ ಸಂವಿಧಾನಕ್ಕೆ ಬದ್ಧರಾದವರು ಮತ್ತು ಅದರ ವ್ಯಾಪ್ತಿಗೆ ಒಳಪಡುವವರು ಎಂದ ಮೇಲೆ ವಿಚಾರಣೆಗೆ ಹಿಂದೇಟೇಕೆ. ಅಂದರೆ ಇವರಿಗೆಲ್ಲ ಭವಿಷ್ಯದಲ್ಲಿ ಇದರಿಂದಾಗುವ ಅಪಾಯದ ಅರಿವಿರಲೇಬೇಕಲ್ಲವೆ.  ಇಲ್ಲದಿದ್ದರೆ ಕಳ್ಳನ ಮನಸ್ಸು ಹುಳ್ಳ..ಹುಳ್ಳಗೆ…ಏಕೆ ಆಗುತ್ತಿತ್ತು. ಇಷ್ಟೆ ಇವರೆಲ್ಲರ ಯೋಗ್ಯತೆ. ಯಾವುದೆ ಕಾಯ್ದೆಯಾದರು ಅದರಿಂದ ತಮ್ಮನ್ನು ಹೊರಗಿಟ್ಟು ನೋಡುವದಾದರೆ ನೀವು ಏನು ಭೂಲೋಕದ  ದೇವಮಾನವರೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಇಂತಹ ಕಾನೂನಿನಿಂದ ಯಾವ ಲಾಭವಾಗುತ್ತದೆ. ಹಿಡಿದರೆ ತಿಮಿಂಗಲೆ ಹಿಡಿಯಬೇಕು. ಅದು ಅಪಾಯಕಾರಿ. ಸಣ್ಣ ಪುಟ್ಟ ಮೀನುಗಳು ಯಾವಾಗ ಬೇಕಾದರು ಬಲೆಗೆ ಬೀಳಬಲ್ಲವು. ಇದಕ್ಕೆಲ್ಲಾ ಕಾರಣ ಇಚ್ಛಾಶಕ್ತಿಯ ಕೊರತೆ ಅಷ್ಟೇ! ಯಾವೊಬ್ಬ ರಾಜಕಾರಣಿಯು ಭ್ರಷ್ಟಾಚಾರದ ವಿಷಯದಲ್ಲಿ ಧ್ವನಿ ಎತ್ತರಿಸಿ ಮಾತನಾಡಲಾರ. ನಾನು ಸತ್ಯವಂತ ಎಂಬ ಸೋಗು ಹಾಕಲು ಮೇಲ್ಮಟ್ಟದ ಹೇಳಿಕೆಗಳನ್ನು ಕೊಡುತ್ತಿರಬಹುದು. ಆದರೆ ಮೂಲತಃ ಎಲ್ಲರು ಒಂದೇ ಜಾತಿಗೆ ಸೇರಿದವರು. ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತಹ ಅಸಡ್ಡೆತನ ನಮ್ಮ ನಾಯಕರದ್ದು.

ಅಣ್ಣಾ ಹಜಾರೆ ಸೇರಿದಂತೆ ನಾಗರಿಕ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ಬಿಗಿಪಟ್ಟು ಹಿಡಿದು ಕಾಯ್ದೆಯನ್ನು ಕಠಿಣಗೊಳಿಸಲು ಹೆಣಗುತ್ತಿದ್ದರೆ, ಸರ್ಕಾರದ ಪ್ರತಿನಿಧಿಗಳು ತಮ್ಮನ್ನು ಹೊರಗಿಟ್ಟುಕೊಂಡು ಕಾಯ್ದೆ ಮಾಡುವ ಸರ್ಕಸ್ ಮಾಡುತ್ತಿವೆ. ಹಾಗಾದಲ್ಲಿ ಲೋಕಪಾಲ ಮಸೂದೆಗೆ ಅರ್ಥವಾದರು ಇದ್ದೀತಾ! ಇದು ನಮ್ಮ ದೇಶದ ದುರಂತ. ಹಲ್ಲಿಲ್ಲದ ಹಾವಿಗೆ ಯಾರು ಅಂಜುವುದಿಲ್ಲ. ಹಾಗೇ ಈ ಕಾನೂನು ಆಗುವುದು ಎಂಬುದರಲ್ಲಿ ಯಾವ ಸಂದೇಹವಿದೆ. ಜನರ ಕಿಚ್ಚು, ರಾಷ್ಟ್ರದ ಏಳ್ಗೆ, ಒಂದು ಸುಂದರ ಸಮಾಜದ ಪರಿಕಲ್ಪನೆ ಈ ಯಾವ ಭಾವನೆಗಳು ಅರ್ಥವಾಗದ ಸರಕಾರ ನಾಮಾಕಾವಾಸ್ತೆ ಎಂಬಂತೆ ಮಸೂದೆಯನ್ನು ರೂಪಿಸಲು ಹೊಂಚು ಹಾಕಿದೆ. ಹೀಗಾಗಿಯೇ ಅದು ದಿಗ್ವಿಜಯ್ ಸಿಂಗನಂತಹ ಬಕೀಟ್ ರಾಜಕಾರಣಿ, ಕಪಿಲ್ ಸಿಬಲ್ ನಂತಹ ಎರಡು ನಾಲಿಗೆಯ ವ್ಯಕ್ತಿಗಳ ಮುಖಾಂತರ ನಾಗರಿಕ ಸಮಿತಿಯ ಸದಸ್ಯರ ವೈಯಕ್ತಿಕ ನಿಂದನೆಯಂತಹ ಕೀಳು ಮಟ್ಟಕ್ಕೆ ಇಳಿಯುತ್ತಿದೆ. ಇವರನ್ನೆಲ್ಲಾ ಸರಕಾರ ಮತ್ತು ಆ ಸರಕಾರವನ್ನ ನಿಯಂತ್ರಿಸುವ ವ್ಯಕ್ತಿಗಳು ಛೂ ಬಿಟ್ಟಿದ್ದಾರೆ ಎಂಬುದು ಸರ್ವವಿದಿತ. ಹಾಗಿರುವಾಗ ಮಸೂದೆ ರೂಪಿಸುವಲ್ಲಿ ಸರಕಾರಕ್ಕೆ ಯಾವುದೆ ಹಿಂಜರಿಕೆಯಿಲ್ಲ ಎಂಬ ಅವಿವೇಕದ ಹೇಳಿಕೆ ಬೇಕೆ.

ನಾವು ಎಷ್ಟೇ ಕೂಗು ಹಾಕಿದರು ಕಿವುಡ ಮತ್ತು ಭಂಡ ಜನ ಪ್ರತಿನಿಧಿಗಳ ಮುಂದೆ ಅದು ಅರಣ್ಯ ರೋಧನವಾಗುತ್ತದೆ. ಈಗಿನ ರಾಜಕಾರಣಿಗಳಿಂದ ಸುಶಿಕ್ಷಿತ ಮತ್ತು  ಸ್ವಚ್ಛ ಸಮಾಜದ ನಿರೀಕ್ಷೆಯೆ ಹಾಸ್ಯಾಸ್ಪವಾದದ್ದು. ಅದಕ್ಕಾಗಿ ನಾಯಿ ಬಾಲ ಡೊಂಕೆ ಎಂದು ಹಳ ಹಳಿಸುವದನ್ನು ಬಿಟ್ಟು ನಮಗೆ ಬೇರೆ ದಾರಿಯಿದೆಯೇ?

 

ಟ್ಯಾಗ್ ಗಳು:

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು….

ಥೂ!!! ಅಂತ ಕ್ಯಾಕರಿಸಿ ಉಗಿದರು ಈ ಜನ ಬದಲಾಗಲ್ಲರೀ. ರಾಜಕೀಯ ಅಂದೆರೇನೆ ಹಾಗೆನೇ. ಮೂರು ಬಿಟ್ಟವನು ಊರಿಗೆ ದೊಡ್ಡವನು ಎನ್ನುವಂತೆ. ಇತ್ತೀಚಿಗೆ ತತ್ವ, ಸಿದ್ಧಾಂತ ಆದರ್ಶದ ಮಾತುಗಳೇನಾದರು ರಾಜಕಾರಣಿ ಬಾಯಲ್ಲಿ ಬಂದರೆ ಅದು ಭೂತ ಭಗವದ್ಗೀತೆ ಹೇಳಿದಂತಾಗುತ್ತದೆ. ಇಲ್ಲಾ ಖಂಡಿತಾ ಅಸಾಮೀ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾನೆ ಎಂಬುದು ಸ್ಪಷ್ಟವಾಗುತ್ತೆ. ಉಘೇ..ಉಘೇ… ಇಂಡಿಯಾ….

ಆಡಿಸಿ ನೋಡು ಬೀಳಿಸಿ ನೋಡು ನಾ ಉರುಳೆನು

ಆಡಿಸಿ ನೋಡು ಬೀಳಿಸಿ ನೋಡು ನಾ ಉರುಳೆನು

 

ನೈತಿಕತೆಯ ಅಧಃಪತನದ ಬಗ್ಗೆ ನಾನು ಮಾತನಾಡಲು ಹೋಗುತ್ತಿಲ್ಲ. ಅದು ಇಂದು ರಾಜಕೀಯದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಆದರೆ ಜವಾಬ್ದಾರಿ ಕೂಡಾ ಮರೆತು ಹೋಗಿದೆ ಎಂದರೆ ನಮ್ಮೆಲ್ಲರ ದೌರ್ಭಾಗ್ಯ ಅಂದಷ್ಟೇ ಹೇಳಬಹುದೇನೋ. ಕಳೆದೊಂದು ವಾರದಿಂದ ಕರ್ನಾಟಕದ ರಾಜಕೀಯ ತಿಣುಕಾಟ ನೋಡುತ್ತಿರುವ ಎಲ್ಲರಿಗು ಈ ದೇಶದ ಭವಿಷ್ಯ ಸ್ಪಷ್ಟವಾಗಿ ಗೋಚರಿಸಿರುತ್ತದೆ. ನಾವು ಆಯ್ಕೆ ಮಾಡಿ ಕಳಿಸಿದ ಜನ ಪ್ರತಿನಿಧಿಯೆ ತೀರಾ ಲಜ್ಜೆಗೆಟ್ಟು ವರ್ತಿಸುವದನ್ನು ನೋಡುವ ಕರ್ಮ ನಮ್ಮದಾಗಿದ್ದಕ್ಕೆ ಯಾರನ್ನ ಹಳೆದು ಏನು ಪ್ರಯೋಜನ. “ಕಿಸ್ಸಾ ಕುರ್ಸಿ ಕಾ” ಎಂಬಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಮಾರಟಕ್ಕೆ ನಿಂತಿರುವದನ್ನು ನೋಡಿದರೆ ನಾವು ಆಯ್ಕೆ ಮಾಡಿದ್ದು ಅದೆಂತಹಾ ಅಯೋಗ್ಯರನ್ನ ಎಂಬುದು ಕಣ್ನಿಗೆ ರಾಚುತ್ತದೆ.ಸರಕಾರ ಉರುಳಿಸಲು ಹಣ, ಹಾಗೆಯೇ ಉಳಿಸಲು ಹಣ. ಅಬ್ಬಾ ಅದೆಷ್ಟು ಕೋಟಿಗೆ ನಮ್ಮ  ಶಾಸಕರು ಮಾರಾಟವಾದರು ಕೇಳಿದರೇನೆ ಅವರ ಯೋಗ್ಯತೆ ಅರ್ಥವಾಗುತ್ತೆ.

ಹಣವೊಂದಿದ್ದರೆ ರಾಜಕೀಯ ಎಷ್ಟು ಸರಾಗ  ಎಂಬುದನ್ನು ಈ ಇಡೀ ಪ್ರಹಸನ ತೋರಿಸಿ ಕೊಟ್ಟಿತು. ರೇಣುಕಾಚಾರ್ಯನಂತಹ ಗೊಸುಂಬೆ, ಅತೃಪ್ತ ಶಾಸಕರಂತಹ ಬೇಜವಾಬ್ದಾರಿಗಳು, ವರ್ತೂರಂತಹ ಸಮಯ ಸಾಧಕರು, ಬಿಜೆಪಿಯಂತಹ ಕಮಂಗಿಗಳು, ವಿರೋಧ ಪಕ್ಷಗಳಂತಹ ಅಧಿಕಾರ ದಾಹಿಗಳು ಇವೆಲ್ಲವುಗಳ ಒಟ್ಟು ಮೊತ್ತವೆ ಇಂದಿನ ದುರ್ಗತಿ ಎಂದು ಹೇಳಬಹುದು. ತೀರಾ ಹೊಣೆಗೇಡಿಗಳಂತೆ ವಿಧಾನಸಭೆಯಲ್ಲಿ ದೊಂಬಿ ಎಬ್ಬಿಸಿದಾಗಲೆ ಇವರ ಇಡೀ ಮುಖವಾಡ ಕಳಚಿ ಬಿದ್ದ್ದದ್ದು. ಎಲ್ಲರದ್ದು ಅದೇ ರಾಗ ಅದೇ ಹಾಡು. ಆದರೆ ಬಡಾಯಿ ಮಾತ್ರ ಊರಗಲ. ಒಟ್ಟಿನಲ್ಲಿ ಪ್ರಜಾ ಪ್ರಭುತ್ವದಲ್ಲಿ ಮಹತ್ತರ ಪಾತ್ರವಹಿಸುವ ಶಾಸಕಾಂಗದ ಭಾಗವಾದ ನಮ್ಮ ಶಾಸಕರು ನಡೆದು ಕೊಂಡ ರೀತಿ ಮಾತ್ರ ಇಡೀ ದೇಶವೆ ತಲೆ ತಗ್ಗಿಸುವಂತಹದ್ದು. ಸಮರ್ಥ ಸರಕಾರ ಸಿಗುತ್ತೆ ಎಂಬ ಜನಕ್ಕೆ ಎರಡುವರೆ ವರ್ಷದಲ್ಲಿಯೆ ಭ್ರಮನಿರಸನವಾಗಿದ್ದು ಮಾತ್ರ ವಿಪರ್ಯಾಸ.

 

 

ಟ್ಯಾಗ್ ಗಳು:

ಢೋಂಗಿ ಬುದ್ಧಿ ಜೀವಿಗಳಿಗೆ ಒಂದು ಚಾಟಿ ಏಟು

ಇತ್ತೀಚಿಗೆ ನಮ್ಮ ಸೋ ಕಾಲ್ಡ ಬುದ್ಧಿಜೀವಿಗಳಲ್ಲಿ ಒಬ್ಬರಾದ ಜಿ ಕೆ ಗೋವಿಂದರಾವ್ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳಲ್ಲಿ ಎಂಬ ಅಪ್ರಸ್ತುತ ಹೇಳಿಕೆ ನೀಡಿದ್ದಕ್ಕೆ “ವಿಜಯ ಕರ್ನಾಟಕ”ದ ವಾಚಕರ ವಿಜಯದಲ್ಲಿ ಓದುಗರೊಬ್ಬರು ಬೀಸಿದ ಚಾಟಿ ಏಟು ಹೀಗಿದೆ………….ಇದು ಬೇಕಿತ್ತಾ!!!!

 

ಟ್ಯಾಗ್ ಗಳು:

ಗಣಿ ಧೂಳಿಗೆ ಎದ್ದು ಹೋದ ಲೋಕಾಯುಕ್ತರು

ಗಣಿ ಮತ್ತೊಮ್ಮೆ ಧೂಳೆಬ್ಬಿಸಿದೆ. ಈ ಸಾರಿ ಕೇವಲ ಕಣ್ಣು ಮುಚ್ಚದೆ ಅಲ್ಲಿಂದಲೆ ಎದ್ದು ಹೋದವರು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ. ಸರಕಾರದ ಅಸಹಕಾರ, ಬ್ರಷ್ಟರಿಗೆ ಬರೆ ಬಿಳದಿರುವುದು, ಪರಮಾಧಿಕಾರ ಪರದೆ ಹಿಂದೆ ಉಳಿದಿರುವುದು ನನ್ನ ರಾಜೀನಾಮೆಗೆ ಕಾರಣ ಅಂತಾರೆ ಸಂತೋಷಕುಮಾರ. ಹೀಗೆ ಕೊಳೆ ತೊಳೆಯಬೇಕಾದ ವ್ಯಕ್ತಿಯೆ ಇಲ್ಲಿನ ಹೊಲಸಿಗೆ ಮುಗು ಮುಚ್ಚಿಕೊಂಡು ಹೋದರೆಂದರೆ ಭಾರತ್ ಮಾತಾ ಕಿ ಜೈ ಎಂದು ಹೇಳುವುದು ಬಿಟ್ಟು ಬೇರೆ ದಾರಿಯಿಲ್ಲ.
ಇಲ್ಲಿ ಒಂದು ವಿಚಾರ ಗಮನಿಸಬೇಕು. ಈ ಬೆಳವಣಿಗೆಗೆ ಜನಸ್ಪಂದನ, ಬಿಜೆಪಿ ಮೇಲಿನ ಭರವಸೆ ಹುಸಿಯಾಗಿದೆ ಎಂದೆ ಬೊಬ್ಬೆ ಹೊಡಿತಾ ಇದ್ದಾರೆ. ಅಲ್ರಪ್ಪಾ ಇವರೇನು ಸತ್ಯಹರಿಶ್ಚಂದ್ರನ ತುಂಡಾ, ಗಾಂಧಿಜಿ, ಶಾಸ್ತ್ರೀಯವರ ಝರಾಕ್ಸ ನಮ್ಮ ರಾಜ್ಯ ಉದ್ಧಾರ ಮಾಡೋದಿಕ್ಕೆ ಮರು ಜನ್ಮ ಪಡೆದು ಬಂದಿದ್ದಾರೆ ಎಂದು ಹೇಳೋದಿಕ್ಕೆ. ಅವರು ಸ್ವ ಉದ್ಧಾರಕ್ಕೆ ಅಲ್ವಾ ರಾಜಕೀಯ ಮಾಡುತ್ತಿರುವುದು.
ಅದೇನೆ ಇರಲಿ ವೆಂಕಟಾಚಲಯ್ಯನವರು ಲೋಕಾಯುಕ್ತ ಹುದ್ದೆಗೆ ಇರುವ ಗಾಂಭೀರ್ಯದ ಅರಿವು ಮಾಡಿಕೊಟ್ಟ ನಂತರ ಬಂದ ಸಂತೋಷ ಹೆಗಡೆಯವರು ಕೂಡಾ ಅದನ್ನು ಮುಂದುವರೆಸಿಕೊಂಡು ಹೊರಟಿದ್ದರು. ಯಾರ ಪ್ರಭಾವಕ್ಕು ಮಣಿಯದೆ ರಾಜ್ಯಾದ್ಯಂತ ಬ್ರಷ್ಟ ತಿಮಿಂಗಲುಗಳಿಗೆ ಬಲೆ ಬೀಸಿ ಹಿಡಿದು ಹಾಕಿದ್ದರು. ಈ ಸರಕಾರ ಕೊಂಚವಾದರು ಅವರ ಜೊತೆ ಕೈ ಜೋಡಿಸಿದ್ದರೆ, ಸರಕಾರದ ಬೊಕ್ಕಸಕ್ಕೆ ಒಂದಿಷ್ಟಾದರು ಹಣ ಹರಿದು ಬಂದಿರುವುದು. ನಾಚಿಕೆ ಬಿಟ್ಟು ಚಕ್ಕಳ ಮಕ್ಕಳ ಹಾಕಿಕೊಂಡು ಬಾಡೂಟ ಮಾಡಿದ್ದ ಎಷ್ಟೋ ಅಧಿಕಾರಿಗಳ ಮನೆಗೆ ಬೆಳ್ಳಂಬೆಳಿಗ್ಗೆನೆ ದಾಳಿ ಮಾಡಿದ್ದರು. ವೆಂಕಟಾಚಲಯ್ಯ ಮೊದಲು ಅಧಿಕಾರಿಗಳ ಬ್ರಷ್ಟತೆಯ ಪರಿಚಯ ಮಾಡಿಸಿದ್ದಾಗಲೆ ಬೆಚ್ಚಿ ಬಿದ್ದಿದ್ದ ಸಾಮಾನ್ಯ ಜನತೆ, ಹೆಗಡೆಯವರ ದಾಳಿಯ ನಂತರ ಅಧಿಕಾರಿಶಾಹಿಗಳ ಬಗ್ಗೆ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿದ್ದರು. ಆದರೆ ಸರಕಾರ ಅಮಾನತುಗೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಒಬ್ಬ ಉಪ ಲೋಕಾಯುಕ್ತರನ್ನು ನೇಮಕ ಮಾಡದಷ್ಟು ಅಸಹಾಯಕತೆ ತೋರ್ಪಡಿಸಿತು. ಇನ್ನು ಪರಮಾಧಿಕಾರದ ವಿಷಯಕ್ಕೆ ಬಂದರೆ ಎಲ್ಲ ಪಕ್ಷದವರು ಹಿಂದೇಟು ಹಾಕಿದಂತೆ ಈ ಸರಕಾರ ಕೂಡಾ ಅದೇ ಹಾದಿಯಲ್ಲಿ ಮುನ್ನಡೆಯಿತು. ಲಜ್ಜೆ ಬಿಟ್ಟವನಿಗೆ ಯಾರ ಹಂಗೇನು ಎಂಬಂತೆ ಬ್ರಷ್ಟರನ್ನು ತೆರೆಮರೆಯಲ್ಲಿ ರಕ್ಷಿಸುವ ಕೆಲಸ ಮಾಡಿತು. ದುರಂತ ಎಂದರೆ ಲೋಕಾಯುಕ್ತರ ಕೈಗೆ ನೇರಾ ನೇರವಾಗಿ ಸಿಕ್ಕಿ ಬಿದಿದ್ದ ಶಾಸಕ ಸಂಪಂಗಿ ಕೂಡಾ ಲೋಕಾಯುಕ್ತರು ತಮ್ಮ ರಾಜೀನಾಮೆ ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಕ್ರಿಯಿಸಿದಾಗ ಎಲ್ಲಿಂದ ನಗಬೇಕು ಎಂಬಂತಹ ಪರಿಸ್ಥಿತಿ.
ಸಂತೋಷ ಹೆಗಡೆಯವರು ತಮ್ಮ ನಿಧರ್ಾರವನ್ನು ಸಮಥರ್ಿಸಿಕೊಳ್ಳುತ್ತಾ, ನನ್ನ ರಾಜೀನಾಮೆ ಮುಂದಿನ ಲೋಕಾಯುಕ್ತರ ಕೈ ಬಲಪಡಿಸಲು ಸಾಧ್ಯವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ನೆರವೆರುತ್ತೊ ಕಾಲವೆ ಉತ್ತರಿಸಬೇಕು. ಆದರೆ ಒಂದಂತು ಸತ್ಯ. ಇಷ್ಟು ಅಧಿಕಾರಿಗಳನ್ನು ಹೆಡೆಮುರಿ ಕಟ್ಟಿ ಜನತೆಯ ಮುಂದೆ ಬೆತ್ತಲೆ ಮಾಡಿದಿರಲ್ಲಾ ಸಂತೋಷ ಹೆಗಡೆಯವರೆ ನಿಮಗೆ ಹೃದಯಪೂರ್ವಕ ಥ್ಯಾಂಕ್ಸ.

 

ಟ್ಯಾಗ್ ಗಳು:

 
%d bloggers like this: