RSS

Category Archives: ಭಾವದ ಬಿಂಬಗಳು

ನೀರಾಡಂಬರ ಯೋಗಿಯ ನಿರಪೇಕ್ಷ ನಿರ್ಗಮನ

(ಈಗ್ಗೆ ಮೂರುವರೆ ವರ್ಷಗಳ ಹಿಂದೆ ನನ್ನ ಮೆಚ್ಚಿನ ಕ್ರಿಕೆಟರ್ ರಾಹುಲ್ ದ್ರಾವಿಡ್ ನಿವೃತ್ತಿ ಘೋಷಿಸಿದಾಗ ಬರೆದ ಲೇಖನವಿದು. ಆದ್ರೆ ಅನಿವಾರ್ಯ ಕಾರಣಗಳಿಂದ ಇದನ್ನ ಪೂರ್ಣಗೊಳಿಸುವದಕ್ಕೆ ಆಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ನನ್ನ ಡ್ರಾಫ್ಟ್ ಬಾಕ್ಸ್ನಲ್ಲಿ ಬೆಚ್ಚಗೆ ಕುಳಿತಿದ್ದು ಕಾಣಿಸಿತು. ಹೀಗಾಗಿ ಅಂದು ಬರೆದಿದ್ದನ್ನೆ ಯಾವುದೇ ಬದಲಾವಣೆ ಇಲ್ಲದೆ ಯಥಾವತ್ತಾಗಿ ಪಬ್ಲಿಷ್ ಮಾಡುತ್ತಿದ್ದೇನೆ. ಲೇಖನ ಅಪೂರ್ಣವಾಗಿದೆ, ಕ್ಷಮೆ ಇರಲಿ).

ಅವನಿಗೆ ಕೇವಲ ಆಟ ಒಂದು ವೃತ್ತಿಯಾಗಿರಲಿಲ್ಲ.ಅದನ್ನು ತಪಸ್ಸಿನಂತೆ ಆರಾಧಿಸಿದ. ಕ್ರಿಕೆಟ್ ಎಂಬ ಕ್ರೀಡೆಯನ್ನು ಯಾವುದೇ ವೈಯಕ್ತಿಕ ದಾಖಲೆಗಳಿಗೆ ಬಳಸಿಕೊಳ್ಳದೆ, ಗೆಲುವಿನ ಏಕಮೇವ ಉದ್ದೇಶಕ್ಕೆ ಹೋರಾಡಿದ. ಸತತ 16 ವರ್ಷಗಳ ಕ್ರಿಕೆಟ್ ಬದುಕಿಗೆ ಭಾರವಾದ ಹೃದಯದಿಂದ ಗೌರವಯುತ ವಿದಾಯ ಹೇಳಿದ ದ್ರಾವಿಡ ಕ್ರಿಕೆಟ್ ಗೆ ಒಂದು ಸಜ್ಜನಿಕೆ ಕಲಿಸಿದ ಮಹಾನ್ ಕ್ರೀಡಾಳು ಎಂಬುದು ಅತಿಶಯೋಕ್ತಿ ಪದವಾಗಲಿಕ್ಕಿಲ್ಲ.

ರಾಹುಲ್ ಶರತ್ ದ್ರಾವಿಡ ತನ್ನ 23ನೇ ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ಆಗ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರು. ಕ್ರಿಕೆಟ್ ನ ಸ್ವರ್ಗ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಬ್ಯಾಟು ಹಿಡಿದು ಆಟಕ್ಕೆ ಇಳಿದ ರಾಹುಲ್ ಮುಂದೊಂದು ದಿನ ಭಾರತದ ಗೋಡೆ ಎಂಬ ಜವಾಬ್ದಾರಿಯುತ ಪದದಿಂದ ಬಣ್ಣೀಸಬಹುದಾದಂತಹ ವ್ಯಕ್ತಿಯಾಗುತ್ತಾನೆ ಎಂದು ಯಾರು ಊಹಿಸಿರಲಿಲ್ಲ. ಅಂದು ದ್ರಾವಿಡ್ ಗಳಿಸಿದ್ದು ಬರೋಬ್ಬರಿ 96 ರನ್ಸ್. ಅಂದು ಗಾವಸ್ಕರ್ ಹೇಳಿದ್ದು ಭಾರತಕ್ಕೆ ಒಬ್ಬ ಭರವಸೆಯ ಆಟಗಾರನಾಗಿ ದ್ರಾವಿಡ್ ಬಹುಕಾಲ ತಂಡದಲ್ಲುಳಿಯಬಲ್ಲ ಎಂಬ ಮಾತುಗಳನ್ನಾಡಿದ್ದರು. ಅದರ ಮುಂದಿನ ಇತಿಹಾಸ ಈಗ ರಾಹುಲ್ ನಿವೃತ್ತಿ ಘೊಷಿಸುವ ಮೂಲಕ ಎಲ್ಲೆಡೆ ಮೆಲುಕು ಹಾಕಲಾಗುತ್ತಿದೆ.

ಕ್ರಿಕೆಟ್ ನ ಮರೆಯದ ಮಾಣಿಕ್ಯ

ಕ್ರಿಕೆಟ್ ನ ಮರೆಯದ ಮಾಣಿಕ್ಯ

ಆದರೆ ದ್ರಾವಿಡ್ ನ ಕಲಾತ್ಮಕ ಆಟವನ್ನ ಮೊದ, ಮೊದಲು ತೆಗಳಿದವರೆ ಹೆಚ್ಚು ಜನ. ಇಂದು ಗೋಡೆ. Mr.dependent ಎಂದೆಲ್ಲಾ ಬಣ್ಣೀಸುವವರು ಅಂದು ಇದೇ ದ್ರಾವಿಡ್ ನ  ನಿತ್ರಾಣ ಎಂದು ಮೂಗು ಮುರಿದಿದ್ದರು. ಅದು ಕ್ರಿಕೆಟ್ ಒಂಡೇ ಎಡೆಗೆ ವಿಮುಖಗೊಳ್ಳುವ ಪರ್ವಕಾಲ ಎಂದೇ ಹೇಳಬಹುದು. ಅದು ಸಚಿನ್ ನಂತೆ, ಜಡೇಜಾನಂತೆ, ರಾಬಿನ್ ಸಿಂಗ್ ತರಹ ಅಷ್ಟೇ ಏಕೆ ಗಂಗೂಲಿಯಂತೆ ಬೀಡು, ಬೀಸಾಗಿ ಬ್ಯಾಟ್ ಬೀಸುವವರೆಗೆ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಿತ್ತು. ಆದರೆ ದ್ರಾವಿಡ್ ಎಂದರೆ ಕೇವಲ ಟೆಸ್ಟ್ ಗೆ ಮಾತ್ರ ಸೀಮಿತ ಎಂಬ ಅಭಿಮತ ಎಲ್ಲರದ್ದಾಗಿತ್ತು. ಅವರ ತಾಳ್ಮೆಯ ಆಟ, ಕಲಾತ್ಮಕ ಹೊಡೆತಗಳು,ಒಂದೊಂದೆ ರನ್ ಗಳ ಮೂಲಕ ಇನ್ನಿಂಗ್ಸ್ ಕಟ್ಟುವ ಛಾತಿ ಯಾರೊಬ್ಬರಿಗು ಇಷ್ಟವಾಗುತ್ತಿರಲಿಲ್ಲ. ದ್ರಾವಿಡ್ ಬಂದ ಎಂದರೆ Entertainment ಮುಗಿಯಿತು ಎಂದು ಟಿವಿ ಬಿಟ್ಟು ಎದ್ದು ಹೋಗುತ್ತಿದ್ದರು. ಆದರೆ ದ್ರಾವಿಡ್  ಇದೆಲ್ಲಾ ಗೊತ್ತಿದ್ದರು ಅವರು ಎಂದು ಅಸಂಪ್ರದಾಯಿಕ ಹೊಡೆತಗಳಿಗೆ ಮುಂದಾಗಲಿಲ್ಲ. ತಮ್ಮ ನೈಜ ಆಟದಿಂದ ವಿಮುಖರಾಗಲಿಲ್ಲ. ಹಾಗಂತ ದ್ರಾವಿಡ್ ತಮಗೆ ಭರ್ಜರಿ ಹೊಡೆತ ಹೊಡೆಯುವದಕ್ಕು ಬರುತ್ತದೆ ಎಂಬುದನ್ನು ಕಲಾತ್ಮಕ ಶೈಲಿಯಲ್ಲಿಯೆ ಆಡಿ ಪ್ರಚುರ ಪಡಿಸಿದ ಅಪರೂಪದ ಆಟಗಾರ.

ಸಜ್ಜನ, ಸಂಭಾವಿತ ಎಂದೆಲ್ಲ ಬಣ್ಣಿಸುವ ದ್ರಾವಿಡ್ ಒಮ್ಮೆ ಚೆಂಡು ವಿರೂಪಗೊಳಿಸಿದ ಆಪಾದನೆಗೆ ಒಳಗಾಗಿದ್ದರು ಎಂದು ಕೇಳಿದರೆ ನಂಬಲಸಾಧ್ಯ ಎಂದೆನಿಸುವುದು ಸುಳ್ಳಲ್ಲ. ಆದರೆ ಇದು ಉದ್ದೇಶಪೂರ್ವಕ ಕಾರ್ಯ ಅಲ್ಲದಿದ್ದರೂ, ಮ್ಯಾಚ್ ರೆಫ್ರಿ ವಿಧಿಸಿದ ದಂಡವನ್ನು ತೆರುವುದು ತಪ್ಪಲಿಲ್ಲ. ಹಾಗೆಯೇ ಸಚಿನ್ ಅವರು 196 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೆರ್ಡ್ ಮಾಡಿಕೊಂಡು ದ್ವಿಶತಕ ತಪ್ಪಿಸಿದರು ಎಂಬ ಆಪಾದನೆಗೊಳಗಾಗಿದ್ದರು. ಇದನ್ನು ಹೊರತು ಪಡಿಸಿದರೆ ದ್ರಾವಿಡ್ ಹತ್ತಿರ ಯಾವುದೇ ವಿವಾದದ ಗುಂಜು ಸುಳಿಯಲಿಲ್ಲ.

ತಂಡದಲ್ಲಿ ಎಲ್ಲ ರೀತಿಯಿಂದಲೂ ಸೇವೆ ಸಲ್ಲಿಸಿದ ಏಕೈಕ ಆಟಗಾರನೆಂದರೆ ಅದು ರಾಹುಲ್ ಮಾತ್ರ ಎಂಬುದು ನನ್ನ ಅನಿಸಿಕೆ. ಅವರು ಎಲ್ಲ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಎಲ್ಲ ಫೀಲ್ಡ್ ಪಾಯಿಂಟ್ ಗಳಲ್ಲಿ

Advertisements
 

ಟ್ಯಾಗ್ ಗಳು: , , ,

ಮೈಲಿಗೆಯಾದ ಮನಸ್ಸುಗಳಿಗೆ ಮಡೆಸ್ನಾನವೇ ಮೇಧ್ಯ

ಬಹುಶಃ ನಮ್ಮೆಲ್ಲರ ಮನಸ್ಥಿತಿಯೇ ಅಂತಹದ್ದು ಏನಿಸುತ್ತೆ. ಯಾವುದಕ್ಕಾದರು ಅತಿಯಾಗಿ ಪ್ರತಿಕ್ರಿಯೆ ನೀಡುತ್ತೇವೆ. ಅದು ತಾರ್ಕಿಕ ಅಂತ್ಯ ಕಾಣುವುದರೊಳಗಾಗಿ ಆ ಚರ್ಚೆಯಿಂದ ಅಥವಾ ಮಂಥನದಿಂದ ವಿಮುಖರಾಗಿ ಮತ್ತೆಲ್ಲೋ, ಇನ್ನೆನನ್ನೋ ಅರಸುತ್ತಿರುತ್ತೇವೆ. ಹೀಗಾಗಿ ನಮ್ಮ ನಡುವಿನ ಎಲ್ಲ ಸಮಸ್ಯೆಗಳು ಜೀವಂತವಾಗಿವೆ ಹಾಗೂ ಸೀಸನಲ್ ಆಗಿ  ಪದೇ, ಪದೇ ಧುತ್ತನೆ ಎದ್ದು ನಿಲ್ಲುತ್ತವೆ.

ಸುಮಾರು ಚರ್ಚೆಗಳು, ಲೇಖನಗಳು ಬಂದ ನಂತರ ನಾನೀಗ ಈ ವಿಷಯ ಪ್ರಸ್ತಾಪಿಸುತ್ತಿರುವುದಕ್ಕೆ ಹಲವರು ಮನಸ್ಸಿನಲ್ಲಿ Issue is outdated ಎಂದು ಮೂಗು ಮುರಿದರೆ ಅಚ್ಚರಿಯಿಲ್ಲ. ಆದರೆ ಎಲ್ಲ ಚರ್ಚೆಗೆ ತೆರೆದು ಕೊಂಡು, ಪ್ರತಿ ಬರಹಗಳ ಮೇಲೆ ಕಣ್ಣಾಡಿಸಿದ ನಂತರ ನನ್ನ ಅವಗಾಹನೆಗೆ ನಿಲುಕಿದ ಅಭಿಪ್ರಾಯವನ್ನು ಹಂಚಿಕೊಳ್ಳುವ ಮನಸ್ಸಾಗಿ ಮತ್ತೆ ವಿಷಯವನ್ನು ಮೆದುಳಿನ ಮೇಲೆ ಎಳೆದು ಕೊಳ್ಳುತ್ತಿದ್ದೇನೆ.

ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ಈಗಾಗಲೇ ಅನೇಕ ಅಭಿಪ್ರಾಯ ಬೇಧಗಳಿಗೆ ಆಹಾರವಾಗಿ ಎಂಜಲೆಲೆ ಛೀದ್ರ, ಛೀದ್ರವಾಗಿದೆ. ಹಾಗೆಯೇ ಅನೇಕ ವಿಚಾರವಾದಿಗಳು ಮುಸರೆಯಾದಲ್ಲಿ ಗೋಮ ಹಚ್ಚುವ ಕಾಯಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಆದರು ಸಮಸ್ಯೆಗೆ ಪರಿಹಾರ ಲಭಿಸಲೇ ಇಲ್ಲಾ. ಎಲ್ಲಾ ಗೋಜಲು, ಗೋಜಲಾಗಿ ಉಂಡೆದ್ದ  ಎಲೆಯ ಮೇಲೆ ಉರುಳಾಡಿದ ನಂತರ ಎಲ್ಲ ಪದಾರ್ಥಗಳು ಕಲಸೋಗರ, ಮೇಲಸೋಗರ ಆಗುವಂತೆ ವಿಷಯ ಕೂಡಾ ಹಾಗೆಯೇ ಬದಿಗೆ ಸರಿದು ಹೋಗುತ್ತಿದೆ. ಮಾಧ್ಯಮಗಳು, ಚಿಂತಕರು ಹೊಸ ವಿಷಯಕ್ಕೆ ತಡಕಾಡುತ್ತಿದ್ದಾರೆ.

ವಿಪರ್ಯಾಸವೆಂದರೆ ಮಡೆಸ್ನಾನ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಬ್ರಾಹ್ಮಣ ಮತ್ತು ಅಬ್ರಾಹ್ಮಣ ನಡುವಿನ ಕಂದಕವನ್ನು ಮತ್ತಷ್ಟು ಗೆಬರಿ ಹಾಕಿತೇ ಹೊರತು, ವಿಷಯದ ಗಂಭೀರತೆ ಮತ್ತು ಮೌಢ್ಯವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಯಾವಂದು ಫಲಕಾರಿ ನಿರ್ಣಯಗಳು ಜೀವ ತಳಿಯಲೇ ಇಲ್ಲಾ. ಇಲ್ಲಿ ಕೇವಲ ಜಾತಿಯ ನೆಲೆಗಟ್ಟಿನಲ್ಲಿ ಒಂದು ವಿಷಯವನ್ನು ಹರಡಿಕೊಂಡು ಕುಳಿತಿದ್ದರ ಫಲವಾಗಿ ಮೂಲ ವಿಷಯ ಮರೆಯಾಗಿ ಕೆಲಸಕ್ಕೆ ಬಾರದ ಹೇಳಿಕೆಗಳು, ವಾದ, ಪ್ರತಿವಾದಗಳು ಕೇಳಿಬಂದವು ವಿನಹಃ ಯಾರು ಮೌಲಿಕವಾಗಿ ಮಾತನಾಡುವ ಧೈರ್ಯ ತೋರಲೆ ಇಲ್ಲಾ. ಈ ಮಡೆಸ್ನಾನ ಬಗ್ಗೆ, ತಮ್ಮ ತಥಾಗಥಿತ ಚಿಂತನೆ ಮಂಡಿಸಿದ ಎಷ್ಟೋ ಬುದ್ಧಜೀವಿಗಳು, ಪ್ರಗತಿಪರರು ಬೆಂಗಳೂರಿನಲ್ಲಿ ಕುಳಿತು ಚರ್ಚೆ ಮಾಡಿದರೆ ವಿನಃ ಎಷ್ಟು ಜನ ಕುಕ್ಕೆಗೆ ಹೋಗಿ, ಅಲ್ಲಿನ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವಾಸ್ತವವನ್ನು ಓರೆಗೆ ಹಚ್ಚಿದರೋ ಆ ಸುಬ್ರಹ್ಮಣ್ಯನೇ ಬಲ್ಲ.

ಇಲ್ಲಿ ಕೆಲವು ಹೇಳಿಕೆಗಳ ಅದೆಷ್ಟು ಅಪ್ರಸ್ತುತ ಎಂಬುದನ್ನು ಕೂಡಾ ಗಮನಿಸಬೇಕು. “ದಲಿತರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಬೇಕು”. “ಪೇಜಾವರರು ದಲಿತರ ಜೊತೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಲಿ”, “ಮಡೆಸ್ನಾನದ ಜೊತೆ ಪಂಕ್ತಿ ಭೇಧವೂ ನಿಷೇಧವಾಗಬೇಕು”, ಇಂತಹ ಹೇಳಿಕೆಗಳಿಂದ ಆರೋಗ್ಯವಂತ ಸಮಾಜದ ಸೃಷ್ಟಿ ಖಂಡಿತಾ ಸಾಧ್ಯವಿಲ್ಲ  ಎಂಬುದನ್ನು ಮನಗಾಣಬೇಕು. ವಿಧವೆಯರ ಕೈಯಿಂದ ರಥವನ್ನೆಳೆಸಿದ್ದ ಪೂಜಾರಿಯವರು ಮಡೆಸ್ನಾನದ ವಿಷಯದಲ್ಲೇಕೆ ಕುಕ್ಕೆಗೆ ಹೋಗಿ ತಿಳಿ ಹೇಳುವ ಪ್ರಯತ್ನ ಮಾಡಲಿಲ್ಲ. ಯಾಕೆ ಆಚಾರ್ಯ, ಪೇಜಾವರರು, ಸುರೇಶಕುಮಾರ್ ಮಡೆಸ್ನಾವನ್ನು ವಿರೋಧಿಸುವಂತಹ ಹೇಳಿಕೆ ನೀಡಲಿಲ್ಲ. ಅಷ್ಟೇಕೆ ವಿರೋಧ ಪಕ್ಷದ ಪ್ರಮುಖರೇಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆಚರಣೆಯ ವಿರುದ್ಧ ಸಿಡಿದೇಳಲಿಲ್ಲ. ವಿಷಯ very simple. ಇದು  ನಾಳೆ ವಿರೋಧಿಸುವವರ ಓಟಿಗೆ ಕನ್ನ ಬೀಳುವ ಸಾಧ್ಯತೆ ಇರುವಂತಹದ್ದು.ಹೀಗಾಗಿ ಯಾರಿಗೂ ಸುಖಾ ಸುಮ್ಮನೆ ತೊಂದರೆಯನ್ನು ಮೈಮೇಲೆ ಎಳೆದು ಕೊಳ್ಳುವ ಧೈರ್ಯವಿಲ್ಲ.

ಹಾಗೆಯೇ ವಿರೋಧಿಸಲು ನಮ್ಮಲ್ಲಿ ಕೇವಲ ಮಡೆಸ್ನಾನ ಒಂದೇ ಅಲ್ಲ. ಪ್ರತಿ ಹಳ್ಳಿ, ಹಳ್ಳಿಯಲ್ಲು ಇಂತಹ ನೂರೆಂಟು ಮೌಢ್ಯಗಳು ಮನೆ ಮಾಡಿವೆ. ಅವುಗಳ ಬಗ್ಗೆ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲ. ಬಕ್ರೀದ್ ಸಮಯದಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಡುವುದು, ಮೊಹರಂನಲ್ಲಿ ಸ್ವಶಿಕ್ಷೆ ಎಂಬಂತೆ ಮೈತುಂಬಾ ಗಾಯ ಮಾಡಿಕೊಳ್ಳುವಂತಹ ವಿಷಯಗಳ ಬಗ್ಗೇಕೆ ಬಹಿರಂಗ ಚರ್ಚೆಗಳಾಗುತ್ತಿಲ್ಲ. ಪ್ಯಾನೆಲ್ ಡಿಸ್ಕಷನ್ ಮಾಡುವ ನಮ್ಮ ಮೀಡಿಯಾಗಳು ವಾರಕ್ಕೊಮ್ಮೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಏನೋ ರಹಸ್ಯವನ್ನು ದೃಶ್ಯೀಕರಿಸಿಕೊಂಡು ಬಂದವರಂತೆ ದೇವರು, ದೆವ್ವ, ಅಚ್ಚರಿ, ಪವಾಡ ಎಂದೆಲ್ಲ ಬಾಯಿ ಹರಿದು ಕೊಳ್ಳುವುದನ್ನು ವಿರೋಧಿಸುತ್ತಿಲ್ಲ. ಪ್ರಜಾಪ್ರಭುತ್ವ ನೀಡಿರುವ ಬಹು ದೊಡ್ಡ ವರದಾನವಾಗಿರುವ ಮತದಾನದ ನಂತರ ಯಾರಿಗೆ ಗೆಲುವು ಒಲಿಯಬಹುದು ಎಂಬುದನ್ನು ಜೋತಿಷಿಗಳ ಮೂಲಕ, ಸಂಖ್ಯಾಶಾಸ್ತ್ರಜ್ಞರ ಮೂಲಕ ವಿಮರ್ಶೆಗೆ ಒಳಪಡಿಸುವ ಕಾರ್ಯಕ್ರಮ ಮತದಾರರಿಗೆ ಅವಮಾನ ಮಾಡಿದಂತಲ್ಲವೇ! ಇದನ್ನೇಕೆ ಪ್ರಶ್ನಿಸುತ್ತಿಲ್ಲ. ಕೆದಕುತ್ತಾ ಹೋದರೆ ಇಂತಹ ನೂರೆಂಟು ಸಮಸ್ಯೆಗಳು ಕಾಲಿಗೆ ತೊಡರಿಕೊಳ್ಳುತ್ತವೆ. ಇವನ್ನೆಲ್ಲವನ್ನು ಚರ್ಚೆಗೆ ಎಳೆಯುವದು ಕೂಡಾ ಪ್ರಜ್ಞಾವಂತರ ಕರ್ತವ್ಯವಲ್ಲವೇ. ಈ ಕೆಲಸವೇಕೆ ಆಗುತ್ತಿಲ್ಲ.

ಮೌಢ್ಯವನ್ನು ವಿರೊಧಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಶ್ನೆಯನ್ನು ಎರಡು ಜಾತಿಗಳ ಮಧ್ಯ ಸಮೀಕರಿಸಿ ನೋಡುವ ದುರ್ದಾದರು ಏನಿತ್ತು. ಇವತ್ತು ಮೌಢ್ಯತೆ ಜಾತಿ, ಧರ್ಮ, ರಾಜ್ಯ, ದೇಶ ಇವುಗಳನ್ನೆಲ್ಲಾ ಮೀರಿದ್ದು. ಹೀಗಿರುವಾಗ ಮಡೆಸ್ನಾನವನ್ನು ಒಂದು ಜಾತಿಯವರು ಬಲವಂತವಾಗಿ ಮತ್ತೊಂದು ಜಾತಿಯ ಮೇಲೆ ಹೇರುವ ಕ್ರಿಯೆ ಎಂದು ನೋಡುವ ಮನಸ್ಥಿತಿ ಖಂಡಿತಾ ತಪ್ಪು. ಈ ಕಾರಣದಿಂದಾಗಿಯೇ ಮಡೆಸ್ನಾನದ ನಿಜವಾದ ಚರ್ಚೆ ನಡೆಯಲೇ ಇಲ್ಲಾ. ತಲೆ, ತಲಾಂತರದಿಂದ ನಡೆದುಕೊಂಡ ಬಂದ ಈ ಆಚರಣೆ ಬಲವಾಗಿ ಬೇರೂರಿದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಕೇವಲ ವಿರೋಧ, ಪ್ರತಿಭಟನೆ, ಚರ್ಚೆಗಳ ಬದಲಾಗಿ ಪ್ರತಿಯೊಬ್ಬರಿಗೆ ಸೂಕ್ತವಾದ counselling ಮಾಡುವ ಅಗತ್ಯವಿದೆ. ಯಾಕೆ ಮಡೆಸ್ನಾನ ಮೂಢ ಆಚರಣೆ ಎಂಬುದನ್ನು ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕಿದೆ. ಅಂದಾಗ ಮಾತ್ರ ಮನಸ್ಸಿನ ಅಂಧಕಾರವನ್ನು ಹೊರ ನೂಕಲು ಸಾಧ್ಯ.

ದಯವಿಟ್ಟು ಮಡೆಸ್ನಾನಕ್ಕೆ ಜಾತಿಯ ಬಣ್ಣ ಬಳಿಯುವದು ಬೇಡ. ಹಾಗೆಯೇ ರಾಜ್ಯದಲ್ಲಿ ಜಾಗೃತಿ ಮೂಡಿಸಲು ಇರುವುದು ಕೇವಲ ಮಡೆಸ್ನಾನ ಒಂದೇ ಅಲ್ಲ  ಇಂತಹ ನೂರೆಂಟು ಸಮಸ್ಯೆಗಳಿವೆ. ಎಲ್ಲವನ್ನು ಮುಖ್ಯವಾಹಿನಿಗೆ ತಂದು ಚರ್ಚೆಗೆ ದಾರಿ ಮಾಡಿ ಕೊಡೋಣ. ಪ್ರತಿಯೊಂದು ಮೌಢ್ಯತೆಗೆ ಸೂಕ್ತ ತಾರ್ಕಿಕ ಅಂತ್ಯ ದೊರಕಲಿ. ಅದು ಬಿಟ್ಟು ಆಳಕ್ಕೆ ಬಿದ್ದವರ ಮೇಲೆ ಆಳಿಗೊಂದು ಕಲ್ಲು ಎಂಬಂತೆ ಕೇವಲ ಮಡೆಸ್ನಾನದ ಬಗ್ಗೆಯೇ ಏಕೆ ಬೊಬ್ಬೆ ಹೊಡೆಯುವದು ಅಲ್ಲವೇ!

 
1 ಟಿಪ್ಪಣಿ

Posted by on ಡಿಸೆಂಬರ್ 11, 2011 in ಭಾವದ ಬಿಂಬಗಳು

 

ಟ್ಯಾಗ್ ಗಳು:

ಇಂಧನ ತೀರಿದೊಡನೆ ಮತ್ತೆ ಮೂರ್ತ ಪ್ರೇಮದೆಡೆಗೆ ಬಂದೇ ಬರುವುದೆ…?

ಯಾಕೋ ಬಿ.ಆರ್.ಲಕ್ಷ್ಮಣ್ ರಾವ್ ಅವರ “ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು” ಹಾಡನ್ನು ಪದೇ, ಪದೇ ಕೇಳುತ್ತಿದ್ದೇನೆ. ಹಿಂದೊಮ್ಮೆ ನನ್ನ ಸ್ಥಿತಿಯನ್ನು ನೆನಪಿಸಿ ಕೊಂಡಾಗಲೇ ಈ ಹಾಡು ಬಹುವಾಗಿ ಕಾಡಿತ್ತು. ಈಗ ಮತ್ತೆ ಊರಿಂದ ಅಚ್ಚಕ್ಕ ಫೋನ್ ಮಾಡಿ ನಮ್ಮ ಮನೆಯ ಕೈದೊಟದಲ್ಲಿನ ಪುಟ್ಟ ಸಂಸಾರದ ಕಥೆ ಹೇಳಿದಾಗಿಂದ  ಈ ಕವಿತೆ  ಮತ್ತಷ್ಟು ತೀವ್ರವಾಗಿ ಕಾಡುತ್ತಿದೆ. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇದಕ್ಕಿಂತ ಪರಿಣಾಮಕಾರಿಯಾಗಿ ಬಿಡಿಸಿಡುವ  ಇನ್ನೊಂದು ಕವನ ನನಗೆ ತಿಳಿದಂತೆ ಇರಲಿಕ್ಕಿಲ್ಲ.

ದಸರೆಗೆಂದು ನಾನು ಹಾಗು ರೂಪಾ ಕೊಪ್ಪಳಕ್ಕೆ ಹೋಗಿದ್ದೇವು. ಹೋದ ತಕ್ಷಣ ಪುಳಕಗೊಳ್ಳುವಂತಹ ಒಂದು ಸಂಗತಿಯನ್ನು ರಾಘಣ್ಣ ತಿಳಿಸಿದ. ಮನೆಯ ಕೈದೋಟದ ಸಣ್ಣ ಹೂವಿನ ಗಿಡದ ಎಲೆಯ ಅಡಿಯಲ್ಲಿ ಪುಟ್ಟ ಗುಬ್ಬಿ (ಗುಬ್ಬಿಯ ಜಾತಿಗೆ ಸೇರಿದ್ದು. ಪ್ರಭೇಧ ಗೊತ್ತಿಲ್ಲ)ಯೊಂದು ಬೆಚ್ಚನೆಯ ಗೂಡು ಕಟ್ಟಿ ಅದರಲ್ಲಿ 3 ಮೊಟ್ಟೆಗಳನ್ನು ಇಟ್ಟಿತ್ತು. ಕಂದು ಬಣ್ಣದ  ಆ ಮೊಟ್ಟೆಗಳು ಫಳ,ಫಳ ಅಂತ ಮಿನುಗುತ್ತಿದ್ದವು. ಸಾಮಾನ್ಯವಾಗಿ ಈ ರೀತಿಯ ಮೊಟ್ಟೆ ಮತ್ತು ಗೂಡು ನೋಡದ ನನಗೆ ಅದೊಂದು ಅಚ್ಚರಿಯಂತೆ ಭಾಸವಾಯಿತು. ಆದರೆ ನಮ್ಮ ಮನೆಯ ಮಹಾನ್ ತುಂಟ ವಾದಿರಾಜ್ ನ ಕಣ್ಣಿನಿಂದ ಪಾರಾಗಿ ಆ ಮೊಟ್ಟೆಗಳು ಮರಿಯಾಗುವುದು ನನಗೇನೋ ಅನುಮಾನವಿತ್ತು. ಅಷ್ಟಕ್ಕು ರಾಘಣ್ಣ ಅವನಿಗೆ ಅವುಗಳ ಇರುವಿಕೆ ತೋರಿಸಿದ ಮೇಲಂತು ನನಗೆ ಸ್ಪಷ್ಟವಾಗಿ ಹೋಯಿತು. ಇನ್ನು ಆ ಮೊಟ್ಟೆ ಮರಿಯಾಗುವುದು ಅನುಮಾನವೇ ಎಂದು. ಅದಾದ ನಂತರ ಒಂದೆರಡು ಸಾರಿ ಅವನು ಗೂಡೊಳಗೆ ಕೈ ಹಾಕಿ ತನ್ನ ಕರಾಮತ್ತು ತೋರಿಸುವಷ್ಟರಲ್ಲಿ ನಾನು ಆಗುವ ಅಪಾಯ ತಪ್ಪಿಸಿದ್ದೆ. ಹೇಗೋ ನಾನಿರುವ ನಾಲ್ಕು ದಿನ ಮೊಟ್ಟೆಗಳು ಸುರಕ್ಷಿತವಾಗಿದ್ದವು. ತಾಯಿ ಗುಬ್ಬಿ ಆಗಾಗ ಚಿಂವ, ಚಿಂವ ಎಂದು ಕೂಗುತ್ತಾ  ಸುತ್ತಲು ಗಮನಿಸಿ ಯಾರು ಇರದನ್ನು ಖಾತ್ರಿ ಪಡಿಸಿಕೊಂಡು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಅದರ ಸೂಕ್ಷ್ಮತೆ ನಿಜಕ್ಕೂ ವರ್ಣಿಸಲಸಾಧ್ಯ. ಈ ಪ್ರಕ್ರಿಯೆ ನಾನಿರುವಷ್ಟು ದಿನ ನಿತ್ಯ ಗಮನಿಸುತ್ತಿದ್ದೆ. ಆದರೆ ಕೇವಲ ನಾಲ್ಕೂ ದಿನಕ್ಕೆಂದು ಹೋದ ನಾನು ಮತ್ತೆ ಬೆಂಗಳೂರಿಗೆ ಬಂದು ಬಿಟ್ಟೆ.

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ನಾನು ಇಲ್ಲಿಗೆ ಬಂದ ನಂತರ  ನಿತ್ಯ ಜಂಜಾಟಗಳ ಮಧ್ಯೆ ಈ ಸಂಗತಿ ಮರೆತೆ ಹೋಗಿತ್ತು. ಮೊನ್ನೆ ಅಚ್ಚಕ್ಕ ಪೋನು ಮಾಡಿದಾಗ ಮತ್ತೆ ಗುಬ್ಬಿಯ ಪ್ರಸ್ತಾಪವಾಯಿತು. ಅದೃಷ್ಟವಶಾತ್ ಎಲ್ಲ ಮೊಟ್ಟೆಗಳು ಒಡೆದು ಮರಿ ಆಗಿದ್ದವಂತೆ. ಇವರು ಗಮನಿಸುವದರೊಳಗಾಗಲೆ ಸಣ್ಣಗೆ ರೆಕ್ಕೆ ಬಂದಿದ್ದವಂತೆ. ಇವರೆಲ್ಲ ಹೋಗಿ ನೋಡಿದ ತಕ್ಷಣ ಅವುಗಳು ಗೂಡಿನಿಂದಾಚೆ ಹಾರಿದ್ದಾವೆ. “ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ, ಬ್ರಹ್ಮಾಂಡವನ್ನೆ ಬೆದಕಿ” ಎಂಬಂತೆ  ಹಾಗೇ ಸಣ್ಣ, ಸಣ್ಣ ನೆಗೆತ  ಆಕಾಶದೆಡೆಗೆ ಜಿಗಿಸಿದೆ. ಇದು ಒಂದು ರೀತಿಯ ಸಂಭ್ರಮದ ವಿಷಯವೇ. ಪುಟ್ಟ ಸಂಸಾರ ನಮ್ಮ ಮನೆಯಂಗಳದಲ್ಲಿ ಗೂಡು ಕಟ್ಟಿ ಹೊಸ ಜೀವಗಳಿಗೆ ಹುಟ್ಟು ನೀಡಿದ್ದು ಮನೆಯವರಿಗೆಲ್ಲ ಸಂತಸವನ್ನೇನು ತಂದಿತ್ತು ಆದರೆ ಅವುಗಳು ಹಾರಿ ಹೋದ ನಂತರದ ಸ್ಥಿತಿ ಎಲ್ಲರ ಮನ ಕಲುಕಿದೆ. ಅಚ್ಚಕ್ಕ ಆ ವಿಷಯ ಹೇಳಿದಾಗ  ನನಗು ಜೀವ ಚುರ್ರ  ಎಂದಿತು. ಯಾಕೆಂದರೆ ಸಂಜೆ ಗೂಡಿಗೆ ಮರಿಗಳಿಗೆ ಆಹಾರ ತಂದ ತಾಯಿ ಗುಬ್ಬಿ ಮರಿಗಳು ಕಾಣದೆ ಕಂಗಾಲಾಗಿ ತೋಟದ ಗಿಡದ ಪ್ರತಿ ಎಲೆಯನ್ನು ಜೋರಾಗಿ ಅರಚುತ್ತಾ ಅರಸುವಾಗ ಮನೆಯವರೆಲ್ಲರ ಕಣ್ಣುಗಳು ತೇವಗೊಂಡಿದ್ದವಂತೆ. ಮೂಕ ಜೀವಕ್ಕು ತಾಯಿ ಕರುಳು  ಎಷ್ಟು ಬಲವಾಗಿ ಕಾಡುತ್ತೆ ಎಂಬುದಕ್ಕೆ ಸತತ ಮೂರು ದಿನಗಳು ಮನೆಯವರೆಲ್ಲ ಸಾಕ್ಷಿಯಾದರಂತೆ.

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ಸಂಬಂಧಗಳ ಕೊಂಡಿಗಳು ಮನುಷ್ಯನಲ್ಲಿ ಈ ನಡುವೆ ಸಡಿಲಾಗುತ್ತಿವೆ. ಆದರೆ ನಮ್ಮ ನಡುವೆ ಇರುವ ಮೂಕ ಜೀವಗಳು ಇಂತಹ ಪಾಠಗಳನ್ನು ಎಷ್ಟು ಸರಳವಾಗಿ ಕಲಿಸಿಕೊಡುತ್ತವೆ. ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಆದರೆ ಪ್ರಾಣಿ, ಪಕ್ಷಿಗಳು ಎಷ್ಟು ಶತಮಾನ ಕಳೆದರು ತಮ್ಮೊಳಗಿನ ಅಂತಃಕರಣವನ್ನು ಕಳೆದು ಕೊಳ್ಳಲಾರವು ಅಲ್ಲವೇ!

 
 

ಟ್ಯಾಗ್ ಗಳು:

ಜನಪದದ ಶಿಖರ ಸೂರ್ಯನಿಗು ಬಿಡದ ಅಪವಾದದ ಕರಿಛಾಯೆ

ಅಪರೂಪದ ಭಾಷಾ ಸೊಗಡಿನ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಕೃಷಿ ಮಾಡಿದ ಚಂದ್ರಶೇಖರ ಕಂಬಾರರಿಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಶ್ರೇಷ್ಠ ಪ್ರಶಸ್ತಿ ಜ್ಞಾನಪೀಠ ಒಲಿದು ಬಂದಿದೆ. ಬಯಲು ಸೀಮೆಯ ಗಡಸು ಭಾಷೆಯನ್ನೆ ತಮ್ಮ ಬರವಣಿಗೆಯ ಶೈಲಿಗೆ ಒಗ್ಗಿಸಿಕೊಂಡು ಬಂದ ಕಂಬಾರರ ಪ್ರತಿ ಕೃತಿಗಳಲ್ಲಿಯು ಅದರ ಸೊಗಡು ಗಾಢವಾಗಿ ಆವರಿಸಿರುವುದು ಅವರ ಬಹು ದೊಡ್ಡ ಹೆಗ್ಗಳಿಕೆ. ಜನಪದದ ಮೂಲಕ ಸಾಹಿತ್ಯಕ್ಕೆ ಕಂಬಾರರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ಕವಿತೆ, ಕಾದಂಬರಿ, ಸಂಶೋಧನಾ ಸಾಹಿತ್ಯ, ವಿಮರ್ಶೆ, ನಾಟಕಗಳು, ಚಲನಚಿತ್ರ ಗೀತೆಗಳಿಗೆ ಗೀತ ರಚನೆ, ನಿರ್ದೇಶನ ಹೀಗೆ ಹಲವು ಪ್ರಾಕಾರಗಳ ಮೂಲಕ ಕನ್ನಡ ಭಾಷೆಗೆ ಒಂದು ಔನ್ನತ್ಯ ತಂದು ಕೊಟ್ಟಿದ್ದಲ್ಲದೇ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸಾಕಾರಗೊಳಿಸಿ ನಾಡಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಸರಳ ಮಾತು ತಮ್ಮ ಎಂದಿನ ಜಾನಪದದ ಧಾಟಿಯಲ್ಲೇ ಸಮಕಾಲೀನ ಸ್ಥಿತಿಯನ್ನು ಅನಾವರಣಗೊಳಿಸುತ್ತಾ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧವಾಗಿಸಿದ ಕಂಬಾರರಿಗೆ ಜ್ಞಾನಪೀಠ ದಕ್ಕಿದ್ದು ಹೆಮ್ಮೆಯ ವಿಷಯ.

ಹಳ್ಳಿ ಸೊಗಡಿನ ಕವಿಗೆ ಹೆಮ್ಮಯ ಜ್ಞಾನಪೀಠ

ಹಳ್ಳಿ ಸೊಗಡಿನ ಕವಿಗೆ ಹೆಮ್ಮಯ ಜ್ಞಾನಪೀಠ

ಆದರೆ ಸಾಮಾನ್ಯವಾಗಿ ಪ್ರತಿ ಬಾರಿ ಯಾವುದೇ ಪ್ರಶಸ್ತಿಗಳು ಘೋಷಣೆಯಾದಾಗ ಅಪಸ್ವರದ ಅಲೆ ಎದ್ದೆ ಏಳುತ್ತದೆ. ಅರ್ಹ, ಅನರ್ಹ ಎಂಬ ಜಿಜ್ಞಾಸೆಗಳು ಗಿರಕಿ ಹೊಡೆಯಲಾರಂಭಿಸುತ್ತವೆ. ಅನಂತಮೂರ್ತಿ, ಕಾರ್ನಾಡರಿಗು ಜ್ಞಾನಪೀಠ ಬಂದಾಗ ಈ ರೀತಿಯ ‘ಚಕಾರಗಳು’ ಕೇಳಿ ಬಂದಿದ್ದವು. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಎಂಬ ಬಹು ದೊಡ್ಡ ಪ್ರಶ್ನೆಗಳು ಎದ್ದು ನಿಂತಿದ್ದವು. ಹೀಗಾಗಿ ಪ್ರಶಸ್ತಿಗಳ ಘೋಷಣೆ ಜೊತೆಗೆ ಅಪಸ್ವರಗಳು ಸಾಮಾನ್ಯ. ಆದರೆ ಇತ್ತೀಚಿಗೆ ಎಷ್ಟೋ ಪ್ರಶಸ್ತಿಗಳು ತಮ್ಮ ಘನತೆಯನ್ನು ಕಳೆದುಕೊಂಡು ಲಾಬಿದಾರರ ಪಾಲಾಗುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಗೆ ಅದೆಂತಹ ಗತಿ ಬಂದಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇತ್ತೀಚಿಗೆ ಯಾರಿಗಾದರು ಆ ಪ್ರಶಸ್ತಿ ಲಭಿಸಿದೆ ಎಂದರೆ ಅವರ ಅರ್ಹತೆಯನ್ನೆ ಒಂಟಿ ಕಣ್ಣಿನಿಂದ ನೋಡುವ ಹಂತ ತಲುಪಿದೆ. ಇದು ಕೇವಲ ರಾಜ್ಯೋತ್ಸವ ಪ್ರಶಸ್ತಿಗೆ ಮಾತ್ರವಲ್ಲ, ಆಸ್ಕರ್ ಘೋಷಣೆಯಾದಾಗಲು ಕೂಡಾ ಇಂತಹ ಕೂಗುಗಳು ಕೇಳಿ ಬರುತ್ತವೆ. ಅದರಲ್ಲಿಯು ‘ಸ್ಲಮ್ ಡಾಗ್ ಮಿಲೇನಿಯರ್ ‘ ಆಸ್ಕರ್ ದಕ್ಕಿದಾಗ ಅದರ ಹಿಂದೆ ಯಾವ ರೀತಿಯಲ್ಲಾ ಕಾಣದ ಕೈಗಳ ಕೆಲಸ ಇರಬಹುದು ಎಂಬ ದೊಡ್ಡ ಚರ್ಚೆ ಹುಟ್ಟು ಹಾಕಲಾಗಿತ್ತು. ಪ್ರಶಸ್ತಿ ದಕ್ಕಿಸಿಕೊಳ್ಳಲು ಎಂತೆಂತಹ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ, ಹೇಗೆಲ್ಲಾ ಓಲೈಕೆಗಳನ್ನು ಮಾಡಲಾಗುತ್ತದೆ ಎಂಬ ಊಹಾಲೋಕವೇ ಸೃಷ್ಟಿಯಾಗಿತ್ತು. ಅದರ ಸತ್ಯಾಸತ್ಯತೆ ಏನೇ ಇರಲಿ ಇಂದು ಪ್ರತಿ ಪ್ರಶಸ್ತಿಗು ಮಸಿ ಬಳಿಯುವದು ಒಂದು ಜಾಯಮಾನವೇ ಆಗಿದೆ. ಹಾಗೇ ಅನರ್ಹರು ಪ್ರಶಸ್ತಿಗಾಗಿ ಮುಗಿ ಬೀಳುವುದು ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಲೆ ಇದೆ.

ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 8ನೇ ಜ್ಞಾನಪೀಠ ಅವರ ಮುಡಿಗೇರಿದೆ. ಆದರೆ ಇಡೀ ನಾಡು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರೆ, ನಾಡೋಜ ಪಾಟೀಲ ಪುಟ್ಟಪ್ಪ  ಮಾತ್ರ ಪ್ರಶಸ್ತಿ ಬಂದಿದ್ದರ ಬಗ್ಗೆ ಪ್ರೀತಿಯ ಮಾತುಗಳನ್ನಾಡುವ ಬದಲಿಗೆ, ಕ್ಯಾತೆ ತೆಗೆದಿದ್ದಾರೆ. ಈ ನಡುವೆ ಅರ್ಹರಾದವರಿಗೆ ಪ್ರಶಸ್ತಿಗಳು ಬರುತ್ತಿಲ್ಲ, ಬರೀ ಲಾಬಿ ಮಾಡುವವರಿಗೆ ಕೊಡಲಾಗುತ್ತಿದೆ ಎಂದು ಹೇಳಿದ್ದು ವಾಸ್ತವಿಕವಾಗಿ ಸರಿಯಿದದ್ದರು ಕಂಬಾರರ ವಿಷಯದಲ್ಲಿ ಅವರು ಈ ಮಾತು ಹೇಳಿದ್ದು ನಿಜಕ್ಕೂ ಅವರ ಹಿರಿತನಕ್ಕೆ ಒಪ್ಪುವಂತಹದ್ದಲ್ಲ. ಅವರು ಹೇಳುವಂತೆ ಭೈರಪ್ಪನವರಿಗೆ ಈ ಪ್ರಶಸ್ತಿ ಬಂದಿದ್ದರೆ ಹೆಚ್ಚು ಸೂಕ್ತ ಎಂದಿರುವುದು ತೆಗೆದು ಹಾಕಬಹುದಾದ ಮಾತಲ್ಲದಾಗಿದ್ದರು, ಹಾಗಂತ ಕಂಬಾರರ ಅರ್ಹತೆಯನ್ನು ಪ್ರಶ್ನಿಸುವುದು ಖಂಡಿತಾ ಸರಿಯಲ್ಲ. ಸಮಕಾಲೀನ ಲೇಖಕರಲ್ಲಿ ನಿಜಕ್ಕು ಅತೀ ಹೆಚ್ಚಿನ ಜನ ಮನ್ನಣೆ, ಸಾಹಿತ್ಯ ಪ್ರೌಢಿಮೆ ಮೆರೆದ ಭೈರಪ್ಪ ನಾಡು ಕಂಡ ಅಪರೂಪದ ಲೇಖಕರಲ್ಲಿ ಪ್ರಮುಖರು. ಆದರೆ ಕಂಬಾರರು ಅವರಷ್ಟು ಯೋಗ್ಯರಲ್ಲ ಎಂದು ಫರ್ಮಾನು ಹೊರಡಿಸುವುದು ಪಾಪು ಅವರ ಘನತೆಗೆ ಹೊಂದುವಂತಹದ್ದಲ್ಲ. ಈಗ ತಾನೇ ಭೈರಪ್ಪ ‘ಸರಸ್ವತಿ ಸಮ್ಮಾನ’ ಗೆ ಭಾಜನರಾಗಿದ್ದಾರೆ. ಅದು ಕೂಡಾ ಜ್ಞಾನಪೀಠದಷ್ಟೇ ಗೌರವ ಮತ್ತು ಮನ್ನಣೆಯನ್ನು ಪಡೆದದ್ದು. ಹೀಗಿರುವಾಗ ಭೈರಪ್ಪನವರನ್ನು ಬದಿಗೊತ್ತಿ ಕಂಬಾರರು ಪ್ರಶಸ್ತಿಯನ್ನು ‘ಹೊಡೆದು ಕೊಂಡಿದ್ದಾರೆ’ ಎಂಬುದು ಬಾಲಿಷ ಅಪವಾದ ಎನಿಸಿಕೊಳ್ಳುತ್ತದೆ. ಇಂದಲ್ಲ ನಾಳೆ ಭೈರಪ್ಪ ಕೂಡಾ ಈ ಪ್ರಶಸ್ತಿಗೆ ಭಾಜನರಾಗಬಹುದು. ಹಾಗಂತ ಇದೇ ಸಾರಿ ಸರಸ್ವತಿ ಸಮ್ಮಾನ ಹಾಗೂ ಜ್ಞಾನಪೀಠ ಎರಡು ಅವರಿಗೆ ಲಭಿಸ ಬೇಕಿತ್ತು ಎಂಬ ಆತುರ ಯಾಕೆ. ಒಬ್ಬಲೇಖಕ ಯಾವ ಪ್ರಶಸ್ತಿ ಪಡೆದಿದ್ದಾನೆ ಎಂಬುದಕ್ಕಿಂತ, ಅವರ ಎಷ್ಟು ಲೇಖನಗಳು ಜನರನ್ನು ತಲುಪಿವೆ ಎಂಬುದು ಕೂಡಾ ಪ್ರಮುಖವಾಗುತ್ತದೆ. ಈ ವಿಷಯದಲ್ಲಿ ಭೈರಪ್ಪ ಮತ್ತು ಕಂಬಾರರು ಒಂದೇ ತೂಕ ತೂಗಬಲ್ಲರು ಎಂಬುದು ನನ್ನ  ವೈಯಕ್ತಿಕ ಅಭಿಪ್ರಾಯ. ಹಾಗಾಗಿ ಸಂಭ್ರಮದ ಸಮಯದಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿ ಎಲ್ಲವನ್ನು ಅಯೋಮಯಗೊಳಿಸುವ ಕೆಲಸ ನಿಜಕ್ಕು ಅಕ್ಷಮ್ಯ.

ಕಂಬಾರರು ತಮ್ಮ ದೇಸಿ ಬಾಷೆಯ ಸೊಗಡಿನಿಂದಲೆ ಎಲ್ಲರಿಗು ಹತ್ತಿರವಾದವರು. ಅವರ ನಾಟಕಗಳು, ಕಾದಂಬರಿ ಮತ್ತು ಕಾವ್ಯಗಳ ಮೂಲಕ ಸಮಕಾಲೀನ ಸ್ಥಿತಿಯನ್ನು ಪ್ರತಿಬಿಂಬಿಸಿದವರು. ಅವರು ಈ ಟೀವಿಯ ಮೂಡಲ ಮನೆ ಧಾರಾವಾಹಿಗೆ ಬರೆದ ಶೀರ್ಷಿಕೆ ಗೀತೆ ‘ರೆಂಬೆ ಕೊಂಬೆ ಮೇಲೆ ಗೂಡು ಕಟ್ಟಿದ ಹಕ್ಕಿ’  ಹಾಗೂ ಮಹಾನವಮಿ ಧಾರಾವಾಹಿಯ  ‘ಕೈಯ ಮುಗಿಯುವೆ’ ಹಾಡು ಇಂದಿಗು ಎಲ್ಲರ  ನಾಲಿಗೆ ಮೇಲೆ ಹರಿದಾಡುತ್ತಿವೆ. ಅದು ಕಂಬಾರರ ಸಾಹಿತ್ಯಕ್ಕಿರುವ ಸೆಳೆತ. ಕೇವಲ ಸಾಹಿತ್ಯ ರಚನೆಗಷ್ಟೇ ಅಲ್ಲ ,ಕನ್ನಡ ಭಾಷೆಯ ಕಳಕಳಿಗೆ ಕೂಡಾ ಈ ಪ್ರಶಸ್ತಿ ಸಂದಾಯವಾಗಬೇಕಾದದ್ದು. 1998ರಲ್ಲಿ ಕಾರ್ನಾಡರಿಗೆ ಲಭಿಸಿದ 13 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಜ್ಞಾನಪೀಠ ಬಂದದ್ದು ಅದರಲ್ಲು ಉತ್ತರ ಕರ್ನಾಟಕದ ಸೊಗಡಿನ ಬರಹಗಾರ ಕಂಬಾರರಿಗೆ ದೊರಕಿದ್ದು ಸಂಭ್ರಮಕ್ಕೆ ಪಾರವಿಲ್ಲದಂತಾಗಿದೆ.

ಕಂಬಾರರೇ, ನಿಮಗೆ ಕೋಟಿ ಅಭಿನಂದನೆಗಳು…….

 
1 ಟಿಪ್ಪಣಿ

Posted by on ಸೆಪ್ಟೆಂಬರ್ 24, 2011 in ಭಾವದ ಬಿಂಬಗಳು

 

ಟ್ಯಾಗ್ ಗಳು:

ಸತ್ಯಾಗ್ರಹವನ್ನೆ ಬಡಿದು ಸಾಯಿಸುತ್ತಿರುವಾಗ, ಸತ್ತಂತಿಹರನ್ನು ಬಡಿದೆಚ್ಚರಿಸುವುದಾದರೂ ಹೇಗೆ…?

ನಿಜಕ್ಕೂ ಇದೇನಾ ಲಕ್ಷಾಂತರ ದೇಶಭಕ್ತರು ನೆತ್ತರು ಸುರಿಸಿ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟ ದೇಶ ಎಂಬ ಅನುಮಾನ ಕಾಡಿದರೆ ಖಂಡಿತ ನೀವು ಭಾರತದ ಬಗ್ಗೇನೆ ಯೋಚಿಸುತ್ತಿದ್ದೀರಿ ಎಂದು ಹೇಳಬಹುದು. ಲೋಕಪಾಲ್ ಮಸೂದೆಗೆ ಪ್ರಧಾನಮಂತ್ರಿ ಆದಿಯಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕರು ಒಳಗೊಳ್ಳಬೇಕು ಎಂಬ ಸದುದ್ದೇಶದ ಧೋರಣೆ ಇಟ್ಟುಕೊಂಡು ಎರಡನೇ ಬಾರಿಗೆ ಉಪವಾಸ ಕುಳಿತು ಕೊಳ್ಳುತ್ತೇನೆ ಎಂದು ಘೋಷಿಸಿದಾಗಲೇ, ಕಾಂಗ್ರೇಸ್ ಸರಕಾರ ಪತರುಗುಟ್ಟಿ ಹೋಗಿತ್ತು. ಏಕೆಂದರೆ ಕಳೆದ ಸಾರಿ ಅಣ್ಣಾ ಬೆಂಬಲಕ್ಕೆ ಇಡೀ ದೇಶವಾಸಿಗಳೇ ನಿಂತಾಗ ಕೇಂದ್ರ ಸರಕಾರಕ್ಕೆ ಇದು ಎಂತಹ ಮಗ್ಗಲು ಮುಳ್ಳಾಗಬಹುದು ಎಂಬ ಸ್ಪಷ್ಟ ಸೂಚನೆ ಸಿಕ್ಕಿಯಾಗಿತ್ತು. ಹೀಗಾಗಿ ಹೇಗಾದರು ಮಾಡಿ ಚಳುವಳಿಯನ್ನು ಹತ್ತಿಕ್ಕುವ ಯೋಚನೆ ಮಾಡಿದ ಸರಕಾರ ನಿನ್ನೆ ರಾತ್ರಿಯೇ ಅಣ್ಣಾ ಮತ್ತು ಅರವಿಂದ ಕೆಜ್ರೀವಾಲಾ ಸೇರಿದಂತೆ 5 ಜನರನ್ನು ಬಂಧಿಸಿ, ಇಂದು ಅವರನ್ನು ದೇಶದ ವಿವಿಐಪಿ ಜೈಲು ಎಂದೇ ಕರೆಸಿಕೊಳ್ಳುವ ತಿಹಾರ ಬಂಧೀಖಾನೆಗೆ ರವಾನಿಸಿದ್ದಾರೆ. ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ ಎಂದು ಮತ್ತೆ ಕೇಳಿಕೊಳ್ಳಬೇಕಿದೆ.

ಇಂದು ಬೆಳಗ್ಗೆ  ಪ್ರಶಾಂತ ಭೂಷಣ ಖಾಸಗಿ ವಾಹಿನಿಗೆ ಫೋನ್ ಮುಖಾಂತರ ಮಾತನಾಡುತ್ತಾ “This bill is not anti-corruption, this is promoting the corruption” , ಎಂದು ಕೇಂದ್ರ ಸರಕಾರದ ಸೂಚಿತ ಲೋಕಪಾಲ್ ಬಿಲ್ ಬಗ್ಗೆ ತಮ್ಮ ಆಕ್ರೊಶ ಹೊರ ಹಾಕಿದರು. ಇಷ್ಟಕ್ಕು ಒಂದು ಗಂಭೀರ ವಿಚಾರಕ್ಕೆ ಸಜ್ಜನ ವ್ಯಕ್ತಿ ಶಾಂತಿಯುತ ಹೋರಾಟ ಮಾಡುತ್ತೇನೆ ಎಂದು ಹೇಳಿದರೆ, ಕಾನೂನು ಸುವ್ಯವಸ್ಥೆ ನೆಪವಿಟ್ಟುಕೊಂಡು ಅವರನ್ನು ಬಂಧಿಸುವ ಸರಕಾರ ಅದ್ಯಾವ ಸಂದೇಶ ರವಾನೆಗೆ ಪ್ರಯತ್ನಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಇಷ್ಟಕ್ಕೂ ಆಗಿನ ಬ್ರಿಟಿಷರಿಗು, ಇಂದಿನ ಕಾಂಗ್ರೇಸ್ಸಿಗರಿಗೂ ವ್ಯತ್ಯಾಸವಾದರು ಏನಿದೆ ಎಂಬ ಅನುಮಾನ ಮೂಡುವುದು ಸಹಜ ಅಲ್ಲವೇ!

ಇದೋ ಎಚ್ಚರಿಕೆ, ಭ್ರಷ್ಟರೇ ಹುಷಾರ್! (ಕೃಪೆ:ಎನ್.ಡಿ.ಟಿವಿ ವೆಬ್ ಸೈಟ್)

ಇದೋ ಎಚ್ಚರಿಕೆ, ಭ್ರಷ್ಟರೇ ಹುಷಾರ್! (ಕೃಪೆ:ಎನ್.ಡಿ.ಟಿವಿ ವೆಬ್ ಸೈಟ್)

ಮಾನ್ಯ ಪ್ರಧಾನ ಮಂತ್ರಿಗಳು 8ನೇ ಬಾರಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಅದೃಷ್ಟವಶಾತ್ ಅವರ ಭಾಷಣ ಕೇಳಲು ನೆರದಿದ್ದ ಎಷ್ಟೋ ಸಾಮಾನ್ಯ ಜನರಿಗೆ ಆ ಹಸಿ ಸುಳ್ಳುಗಳನ್ನು ಕೇಳಿ ಕಣ್ಣೀರು ಬಂದಿದ್ದರು ಅದು ಗೊತ್ತಾಗುವ ಹಾಗಿರಲಿಲ್ಲ. ಕಾರಣ ‘ಧೋ..’ ಎಂದು ಮಳೆ ಸುರಿಯುತ್ತಿತ್ತು. ಬ್ರಷ್ಟಾಚಾರದ ವಿಷಯದಲ್ಲಿ ಸರಕಾರ ಕೈ ಕಟ್ಟಿ ಕುಳಿತಿಲ್ಲ. ಆದರೆ ಇದು ಒಂದೆರಡು ದಿನಗಳಲ್ಲಿ ಬಗೆ ಹರಿಯುವ ವಿಚಾರ ಅಲ್ಲ. ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲು ನನ್ನ ಕೈಯಲ್ಲಿ ಮಂತ್ರದಂಡವಿಲ್ಲ ಎಂಬ ನಿಸ್ಸಾಹಯಕ ಮಾತುಗಳನ್ನಾಡುತ್ತಿದ್ದರೆ, ನಮ್ಮನ್ನಾಳುವ ನಾಯಕ ಅದೆಂತಹ ದುರ್ಬಲ ಮನುಷ್ಯ ಎಂದು ಮರುಕ ಹುಟ್ಟುತ್ತಿತ್ತು. ಬರಾಕ ಒಬಮಾ ತನ್ನ ದೇಶದ ಮಿಲಿಟರಿ ಲಾಡೆನ್ ನ್ನು ಹೊಡೆದು ಹಾಕಿದಾಗ ಅದೆಂತಹ ಕೆಚ್ಚೆದೆಯ ಭಾಷಣ ಮಾಡಿದ್ದ ಎಂದು ನೀವು ಕೇಳಿರಬಹುದು (ಇದೇ ಬ್ಲಾಗ್ ನಲ್ಲಿನ ಮೇ2ರ ಲೇಖನದಲ್ಲಿ ಯೂಟ್ಯೂಬ್ ಲಿಂಕ್ ನೀಡಲಾಗಿದೆ ಗಮನಿಸಿ). ನಮ್ಮ ರಾಷ್ಟ್ರಕ್ಕು ಅಂತೊಬ್ಬ ಧೀಮಂತ ನಾಯಕನ ಜರೂರತ್ತು ಖಂಡಿತಾ ಇದೇ ಎಂದು ನಿಮಗನ್ನಿಸುವದಿಲ್ಲವೇ. ನಮ್ಮ ಪ್ರಧಾನಿಗೆ ಬ್ರಷ್ಟಾಚಾರ ನಿರ್ಮೂಲನೆಯಲ್ಲಿ ಅಷ್ಟೊಂದು ಕಾಳಜಿ ಇರುವುದಾದಲ್ಲಿ ಸ್ವಾತಂತ್ರ ದಿನದಂತಹ ಪವಿತ್ರ ಘಳಿಗೆಯಲ್ಲಿಯೇ ಘಂಟಾ ಘೋಷವಾಗಿ ಪ್ರಧಾನಿಯು ಲೋಕಪಾಲ್ ವ್ಯಾಪ್ತಿಗೆ ಬರಲಿ ಎಂದು ಹೇಳಬಹುದಿತ್ತಲ್ಲವೇ? ಅದನ್ನು ಬಿಟ್ಟು ಕೈಲಾಗದವರಂತೆ ಕಾನೂನು ತೊಡಕು, ಸಂವಿಧಾನದ ಅಡೆತಡೆ ಎಂದು ಕಾಗಕ್ಕ, ಗುಬ್ಬಕ್ಕನ ಕಥೆ ಹೆಣೆಯುತ್ತಾ ಕುಳಿತರೆ ಈ ರಾಷ್ಟ್ರ ಉದ್ಧಾರ ಆಗುತ್ತಾ ಮ್ಯಾನ್ ನೀವೆ ಹೇಳಿ.

ಇಂದು ಭಯೋತ್ಪಾದನೆಯನ್ನು ಒದ್ದು ಓಡಿಸುವ ಜರೂರತ್ತು ಎಷ್ಟಿದೆಯೋ, ಬ್ರಷ್ಟಾಚಾರದ ವಿಷಯವು ಕೂಡಾ ಅಷ್ಟೇ! ಎರಡು ಒಂದೇ ಹೆಂಚಿನ ಎರಡು ಮುಖಗಳು. ನಮ್ಮ ದೇಶದ ಸುವ್ಯವಸ್ಥೆ ಕೇವಲ ಕಸಬ್ ನಂತಹ ಕ್ರೀಮಿಗಳಿಂದ ಮಾತ್ರ ಹದೆಗೆಡುತ್ತಿಲ್ಲ, ಇಲ್ಲೇ ಇರುವ ರಾಜಕಾರಣಿ, ಅಧಿಕಾರಶಾಹಿಗಳ ಮುಖವಾಡ ಧರಿಸಿರುವವರ ಪಾಲು ಸಮಾನವಾಗಿದೆ. ಒಬ್ಬ ಕಸಬ್ ನನ್ನು ಹೊಸಕಿ ಹಾಕಲು ಮೀನ ಮೇಷ ಎಣಿಸುತ್ತಿರುವ ಸರಕಾರದಿಂದ ಜನಪರ ಬದ್ಧತೆಯನ್ನಾದರು ನಿರೀಕ್ಷಿಸಲು ಹೇಗೆ ಸಾಧ್ಯ. ಈ ರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅನ್ಯಾಯವನ್ನು ವಿರೋಧಿಸಲು ಸತ್ಯಾಗ್ರಹ ಎಂಬುದು ಅತೀ ದೊಡ್ಡ ಸಾಧನ ಎಂದು ಹೇಳಿಕೊಟ್ಟ ಗಾಂಧಿ ಇಷ್ಟು ಬೇಗ ಈ ಸರಕಾರಕ್ಕೆ ಮರೆತು ಹೋದರೆ. ಇಷ್ಟಕ್ಕೂ ಅಣ್ಣಾಜೀ ಹೋರಾಟಕ್ಕೆ ಇಳಿದಿದ್ದು ಶಾಂತಿ ಮಂತ್ರ ಪಠಿಸುತ್ತಾ. ಅದನ್ನು ಎಲ್ಲರೂ ಅಷ್ಟೇ ಶಿಸ್ತು ಬದ್ಧವಾಗಿ ಪರಿಪಾಲಿಸುತ್ತಿರುವಾಗ ಸರಕಾರಕ್ಕೆ ಅದ್ಯಾವ ಘಳಿಗೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಎಂಬ ದಿವ್ಯಜ್ಞಾನ ಹೊಳೆದಿದ್ದು? ಈ ದೇಶದ ಕೊಟ್ಯಾಂತರ ಜನರ ಸ್ಪಂದನೆ ಭ್ರಷ್ಟಾಚಾರದಲ್ಲಿ ಕಠಿಣ ನಿಲುವು ಅಗತ್ಯ ಎಂಬ ಕಟು ನಿಲುವಿಗೆ ಒತ್ತಾಯಿಸುತ್ತಿರುವಾಗ, ಸರಕಾರವು ತನ್ನನ್ನು ಆಯ್ಕೆ ಮಾಡಿ ಕಳಿಸಿದ ಜನಕ್ಕೆ ಕಿಂಚಿತ್ತು ಕಿಮ್ಮತ್ತು ಕೊಡುತ್ತಿಲ್ಲ ಎಂದು ಮನವರಿಕೆ ಮಾಡಿಕೊಟ್ಟಂತಾಗುತ್ತಿಲ್ಲವೇ. ಅಷ್ಟಕ್ಕು ಒಂದು ದಿಟ್ಟ ನಿಲುವಿಗೆ ಬರದ ಸರಕಾರವಾದರು ಯಾಕೆ ಎಂಬ ಮೂಲಭೂತ ಪ್ರಶ್ನೆಯನ್ನು ಕೂಡಾ ಕೇಳಲು ಇದು ಸಕಾಲ ಎಂದೆನಿಸುತ್ತದೆ. ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಗೆ ಸರಕಾರವನ್ನು ದೂಡಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ. “ಧಿಕ್ಕಾರವಿರಲಿ ಈ ಭ್ರಷ್ಟ ಸರಕಾರಕ್ಕೆ”.

ಇದೆಲ್ಲದರ ಜೊತೆ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೆದಿದೆ. ಸರಕಾರ ಅಣ್ಣಾ ಅವರನ್ನು ತಿಹಾರ್ ಜೈಲಿಗೆ ಕಳಿಸಿದ್ದಲ್ಲದೆ, ಎ.ರಾಜಾ, ಕಲ್ಮಾಡಿಯಂತಹ ಭ್ರಷ್ಟ ವ್ಯಕ್ತಿಗಳಿರುವ ಸೆಲ್ ಗಳಿಗೆ  ಅವರನ್ನು ಮತ್ತು ಅರವಿಂದ ಕೆಜ್ರೀವಾಲಾರನ್ನು ಹಾಕಿದ್ದಾರೆ. ಭೇಷ್! ನಿಷ್ಠಾವಂತ ಹೋರಾಟಗಾರರನ್ನು ಅದೆಷ್ಟು ಮಾರ್ಯಾದಾ ಪೂರ್ವಕವಾಗಿ ಈ ಸರಕಾರ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನ ಸಾಕಲ್ಲವೇ! ಇನ್ನು ಮುಂದೆ ವಂದೇ ಮಾತರಂ ಎಂದು ಹೇಳುವುದು ಕೂಡಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಎಂಬ ಆಜ್ಞೆ ಹೊರಬಿದ್ದರೂ ಆಶ್ಚರ್ಯವಿಲ್ಲ ಬಿಡಿ. “……… ಮೇರಾ ಭಾರತ್ ಮಹಾನ್!?”

 

ಟ್ಯಾಗ್ ಗಳು:

ಸಣ್ಣ..ಸಣ್ಣ ಖುಷಿಗಳೆ ಬದುಕಿನ ನೂರೆಂಟು ಸಂಭ್ರಮದ ಕ್ಷಣಗಳು…

ಇದೊಂದು ಸಂತಸ ಹಂಚಿಕೊಳ್ಳಲೆಬೇಕೆಂದು ಈ ಒಕ್ಕಣಿ. ಯಾವುದೇ ಕೆಲಸವನ್ನು ಹಿಡಿದಷ್ಟು ಶ್ರದ್ಧೆಯಿಂದ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸವಲ್ಲ. ದೈನಂದಿನ ಒತ್ತಡಗಳು ನಮ್ಮ ಬದುಕಿನ ಓಘವನ್ನೆ ಬದಲಿಸಿ ಬಿಡುತ್ತವೆ. ಏನೋ ಮಾಡುವ ಉತ್ಸಾಹದಲ್ಲಿ ಮುನ್ನುಗ್ಗುತ್ತೇವೆ. ಆದರೆ ಯಾವುದೋ ಶಕ್ತಿ ನಮ್ಮನ್ನ ಮತ್ತೆಲ್ಲೋ ಏಳೆದು ಕೊಂಡು ಹೋಗಿರುತ್ತದೆ. ಎಲ್ಲೋ ಒಂದು ಕಡೆ ತಗುಲಿಕೊಳ್ಳಬೇಕಲ್ಲ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಲೆ ತಗ್ಗಿಸಿಕೊಂಡು ಹೊರಟು ಬಿಡುತ್ತೇವೆ. ಅದಕ್ಕೆ ಡಿವಿಜಿ ಹೇಳಿದ್ದು, “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ..” ಎಂಬುದು ನಮ್ಮೆಲ್ಲರ ಘೋಷವಾಕ್ಯವೇ!

ಈ ನನ್ನ “ಕಟುಗ ರೊಟ್ಟಿ”ಗೆ ಇಂದು ವರ್ಷದ ಸಂಭ್ರಮ. ಮಗು ಮೊದಲ ಕಿರು ಹೆಜ್ಜೆ ಇಟ್ಟ ಕ್ಷಣದಲ್ಲಿ ಪುಳಕಗೊಂಡಂತೆ ನಾನಾಗಿದ್ದೇನೆ. ಇದೊಂದು ದೊಡ್ಡ ಸಾಹಸವಲ್ಲ ಎಂಬುದು ನನಗೆ ಗೊತ್ತು. ಆದರೆ ನನ್ನ ಹಲವು ಪ್ರಯತ್ನಗಳು ಮೂರು ತಿಂಗಳಿಗೆ ಕಣ್ಣು ಮುಚ್ಚುವುದು ಸಾಮಾನ್ಯ. ಹಾಗಿರುವಾಗ ಈ ಕೆಲಸವು ಅವುಗಳಲ್ಲಿ ಒಂದಾಗಿ ಬಿಡುವುದೋ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆದರೆ ನನ್ನ ಪರಿಚಯದಲ್ಲಿ ಹೇಳಿದ ಹಾಗೆ ಬರೆಯುವುದು ನನಗೆ ಪ್ರೀತಿಯ ಹವ್ಯಾಸ. ಆದರೆ ಎಷ್ಟು ಬರೆಯುತ್ತೇನೆ. ಏನು ಬರೆಯುತ್ತೇನೆ ಎಂಬುದನ್ನು ಹೇಳಲಾರೆ. ಮನಸೆಂಬ ಮಂಗ್ಯಾ ಸಿಕ್ಕ, ಸಿಕ್ಕ ಮರಕ್ಕ್ಯಲ್ಲ ನೇತಾಡುವಂಗ ನಾನು ಏನೇನೋ ಅನಿಸಿದ್ದನ್ನೆಲ್ಲ ಗೀಚಿದೆ. ಅದರಲ್ಲಿ ಪ್ರಬುದ್ಧ, ಅಪ್ರಬುದ್ಧ ವಿಚಾರಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವ ಗೋಜಿಗೆ ಹೋಗಲಿಲ್ಲ. ಯಾಕೆಂದರೆ ಅದು ನನ್ನ ಕೈಯನ್ನ ಹಿಡಿದೆಳೆಯುವ ಸಾಧ್ಯತೆಯಿತ್ತು. ಹೀಗಾಗಿ ನನ್ನ ಯೋಚನಾ ಲಹರಿ ಮತ್ತು ಬುದ್ಧಿಮತ್ತೆಗೆ ನಿಲುಕಿದಷ್ಟು ವಿಚಾರಗಳನ್ನ ಮಂಡಿಸುತ್ತಾ ಮುನ್ನಡೆದೆ. ಮಧ್ಯ ಕೆಲವು ತಿಂಗಳು ಬ್ಲಾಗ್ ಲೇಖನಗಳಿಲ್ಲದೆ ಬಿಕೋ ಎಂದದ್ದಿದೆ. ಆದರೆ ಅದ್ಯಾವುದೋ ಶಕ್ತಿ ಮತ್ತೆ ಹಿಡಿದೆಳದು ಬರೆಯಲು ಪ್ರೇರೇಪಿಸಿತು. ಆ ಹಟಕ್ಕೆ ಈ ಮೊದಲ ಹುಟ್ಟು ಹಬ್ಬದ ಸಂಭ್ರಮ.

ನನಗಿಂದು ಮೊದಲ ಹುಟ್ಟು ಹಬ್ಬ (ಕೃಪೆ:flickr.com)

ನನಗಿಂದು ಮೊದಲ ಹುಟ್ಟು ಹಬ್ಬ (ಕೃಪೆ:flickr.com)

 ಖಂಡಿತಾ ನಾನು ಇನ್ನು ಬ್ಲಾಗಿಗೆ ಹೊಸ, ಹೊಸ ಬರವಣಿಗೆಗಳನ್ನ ಸೇರಿಸುತ್ತಿದ್ದೇನೆಂದರೆ ಅದಕ್ಕೆ ಓದುಗರಾದ ನೀವು ಕಾರಣ. ನಿಮಗೆ ಕೃತಜ್ಞತೆ ಸಲ್ಲಲೆಬೇಕು. ನನ್ನ ತುಮಲಗಳನ್ನು ಇಲ್ಲಿ ಬಿಡಿಸಿದ ಪ್ರತಿ ಸಾರಿಯು ನೀವು ಭೇಟಿ ಕೊಟ್ಟು ಹೋಗಿದ್ದೀರಿ. ನಿಮಗೆ ಇಷ್ಟವಾದಷ್ಟು ಅಕ್ಷರಗಳ ಮೇಲೆ ಕಣ್ಣಾಡಿಸಿದ್ದೀರಿ. ನಾನು ಬರೆದಿರುವುದು ನಿಮಗೆ ತೃಪ್ತಿ ನೀಡಿದೆಯೋ ಇಲ್ಲವೋ, ಇಂದಿಗು ಹೊಸ ಪೋಸ್ಟ ಹಾಕಿದಾಗ ಹಣಕಿ ಹಾಕಿ ಹೋಗ್ತೀರಿ. ಅದಕ್ಕೆ ಬ್ಲಾಗ 1,173 ಹಿಟ್ಸಗಳನ್ನು ಕಂಡಿರುವುದಲ್ಲವೇ! ಇದೇನು ದೊಡ್ಡ ಸಂಖ್ಯೆಯಲ್ಲದಿರಬಹುದು. ಆದರೆ ಅಷ್ಟು ಮಾತ್ರಕ್ಕೆ ನನ್ನ ಬರವಣಿಗೆ ಹಬ್ಬಿದೆಯಲ್ಲ ಎಂಬುದೆ ನನನ್ನು ಕುಣಿದು ಕುಪ್ಪಳಿಸುವಂತೆ ಮಾಡಿರುವುದು. ನಮ್ಮ ಬದುಕಿನಲ್ಲಿ ಚಿಕ್ಕ, ಚಿಕ್ಕ ಸಂತಸಗಳೆ ದೊಡ್ಡ ಸಂಭ್ರಮವನ್ನ ತಂದು ಕೊಡುವುದಲ್ಲವೆ. ಅದಕ್ಕೆ ನನಗಿಂದು ನನ್ನ ಮೊದಲ ಹುಟ್ಟು ಹಬ್ಬದಷ್ಟೆ ಖುಷಿಯಾಗಿರುವುದು.

ನಿಮ್ಮೆಲ್ಲರಿಗು ಧನ್ಯವಾದಗಳು...

ನಿಮ್ಮೆಲ್ಲರಿಗು ಧನ್ಯವಾದಗಳು...

ಮತ್ತೊಮ್ಮೆ ಹಣಕಿ ಹಾಕಿದ ನಿಮಗೆಲ್ಲ ಪ್ರೀತಿ ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸಲು ಬಯಸುತ್ತೇನೆ. ಪ್ರಾರಂಭದಲ್ಲಿ ಬೆನ್ನು ತಟ್ಟಿದ ಶೆಟ್ಟರ್ ಅವರಿಗೆ, ಸದಾ ನನ್ನ ಬರವಣಿಗೆಗಳ ಮೇಲೆ ಕಣ್ಣಾಡಿಸುವ ತಮ್ಮನಂತಿರುವ ವಾಸು.ಪುರೋಹಿತ್ ಗೆ, ಮೆಚ್ಚುಗೆಯ ಮಾತುಗಳನ್ನಾಡಿದ ರಂಜಿತ್ ಮತ್ತು ವಿನಾಯಕ ಕೋಡ್ಸರ ಅವರಿಗೆ, ದೂರದ ಅಮೆರಿಕಾದಲ್ಲಿದ್ದರು ಕನ್ನಡದ ಬಗ್ಗೆ ತುಂಬು ಅಭಿಮಾನ ಹೊಂದಿದ, ನನ್ನ ಲೇಖನಗಳ ಶೈಲಿಗೆ ಹೆಮ್ಮೆ ಪಟ್ಟ ಮಲ್ಲಿ ಸಣ್ಣಪ್ಪನವರಿಗೆ, ಕೆಲವು ದಿನಗಳಿಂದೀಚಿಗೆ ನನ್ನ ಪ್ರತಿ ಬರವಣಿಗೆಗೆ ಸ್ಪಂದಿಸುವ ಅಣ್ಣನ ಮಗಳಾದ ಸ್ಮೀತಾಳಿಗೆ, ಫೇಸ್ ಬುಕ್ನಲ್ಲಿ ನನ್ನ ಪೋಸ್ಟಗಳಿಗೆ ಲೈಕ್ ಬಟನ್ ಒತ್ತುವ ರಾಘು ಮತ್ತು ಹರ್ಷನಿಗೆ ಇವರೆಲ್ಲರ ಜೊತೆ ನಾನು ಬರೆದಾದ ನಂತರ ನನ್ನ ಬರವಣಿಗೆಯ ಓದಿಗೆ ಮೊದಲ ಕಿವಿಯಾಗುವ, ಅದನ್ನು ಕೇಳಿ ಸ್ಪೂರ್ತಿಯ ಮಾತುಗಳನ್ನಾಡುವ, ತೆಲಗು ನಾಡಲ್ಲಿ ಹುಟ್ಟಿ ಬೆಳದದ್ದಕ್ಕೆ  ಕನ್ನಡ ಭಾಷೆಯ ಅಷ್ಟೊಂದು ಪರಿಚಯವಿಲ್ಲದ ನನ್ನ ಪ್ರೀತಿಯ ಪತ್ನಿ ರೂಪಾಗೆ, ಇವರೆಲ್ಲರಿಗು ನನ್ನ ಮನದುಂಬಿದ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ನನ್ನ ವೃತ್ತಿ ಕೊಂಚ ಮಗ್ಗಲು ಬದಲಿಸಿದೆ. ಬದಲಾವಣೆ ಜಗದ ನಿಯಮ. ಅದು ನನ್ನ ವೃತ್ತಿಗು ಅನ್ವಯವಾಗಿದೆ. ವೃತ್ತಿಯ ಜೊತೆಗು ನಾನಿದ್ದ ಸ್ಥಳವು ಬದಲಾಗುತ್ತಿದೆ. ಮುಂದಿನ ಜುಲೈಗೆ ಹೊಸ ಇನ್ನಿಂಗ್ಸ ಪ್ರಾರಂಭವಾಗಲಿದೆ. ಅದನ್ನೆಲ್ಲ ಇಷ್ಟರಲ್ಲೆ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತೇನೆ. ಹಾಗೇ ಬ್ಲಾಗ್ ಗೆ ಕೂಡಾ ಹೊಸ ವಿನ್ಯಾಸ ಹಾಗು ಬರವಣಿಗೆ ನೀಡುವ ಉತ್ಸಾಹದಲ್ಲಿರುವೆ. ಎಲ್ಲವು ಅಂದುಕೊಂಡಂತೆ ಆದರೆ ನನ್ನ ಬದುಕಿನ ಕ್ಯಾನವಾಸಗೆ ಮತ್ತಷ್ಟು ರಂಗು ತುಂಬಲಿದೆ. ನಿಮ್ಮ ಅಭಿಮಾನ ಹೀಗೆ ಇರಲಿ ಎಂದಷ್ಟೆ ನನ್ನ ಕೋರಿಕೆ.

 

ಟ್ಯಾಗ್ ಗಳು:

ಹುಟ್ಟಿ ಬರಲಿ ಸುಧಾರಕ ಸತ್ಯಸಾಯಿ, ಅಂತ್ಯವಾಗಲಿ ಪವಾಡ ಬಾಬಾ ಯುಗ…

ಸಾವನ್ನು ಗೆದ್ದವರು ಯಾರೂ ಇಲ್ಲಾ. ಅದಕ್ಕೆ  ಬುದ್ದ ಸಾವು ಇರದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ಹೇಳಿದ್ದ. ಜನನವಾದ ಪ್ರತಿ ಜೀವಿಯು ಸಾವಿನಿಂದ ಹೊರತಾಗಿಲ್ಲ. ಅದಕ್ಕೆ ದೇವ ಮಾನವರು ಕೂಡಾ ತಮ್ಮ ಸುಭೀಕ್ಷೆಯ ಬದುಕಿಗೆ ಅಂತಿಮ ಸಲಾಂ ಹೇಳಿ ಸಾವಿನಡೆಗೆ ನಡೆದು ಹೋಗಿದ್ದಾರೆ.

ಸುಮಾರು ಅರ್ಧ ಶತಮಾನಕ್ಕು ಅಧಿಕ ಕಾಲ ತಮ್ಮ ಪವಾಡ ಮತ್ತು ಮಾಂತ್ರಿಕತೆಯಿಂದ ಲಕ್ಷಾಂತರ ಭಕ್ತರ ಪಾಲಿನ ದೇವಮಾನವ ಎಂದೆನಿಸಿದ್ದ ಪುಟ್ಟಪರ್ತಿಯ ಸಾಯಿಬಾಬಾ ಅವರ ಪ್ರಾಣಪಕ್ಷಿ  ಭಾನುವಾರ ಬೆಳಗ್ಗೆ 7.40ರ ಸುಮಾರಿಗೆ ಪ್ರಶಾಂತಿ ನಿಲಯದ ಅಂಗಳದಿಂದ ಹಾರಿ ಹೋಗಿದೆ. ಸತತ 28 ದಿನಗಳ ಕಾಲ ಸಾವಿನೊಂದಿಗೆ ಶತಾಯ ಗತಾಯ ಹೋರಾಡಿದ ಬಾಬಾ ಕೊನೆಗು ಮರಣದ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ಬಾಬಾ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.

ಇದು ತುಂಬಾ ಸಿಂಪಲ್ ಕಥೆ. ಆದರೆ ನಮ್ಮ ಜನಗಳ ಬಾಯಿಗೆ ಸಿಕ್ಕು ಅನೇಕ ರೋಚಕ ತಿರುವುಗಳನ್ನು ಪಡೆದು ಭಕ್ತಿಯ ಪರಾಕಾಷ್ಠೆಯ ತುದಿಗೆ ತಲುಪಿದೆ. ಆದರೆ ಸತ್ಯ ನಾರಾಯಣರಾಜು ತನ್ನ 14ನೇ ವಯಸ್ಸಿಗೆ ಸ್ವಯಂ ಘೋಷಿತ ಶಿರಡಿ ಸಾಯಿಬಾಬಾನ ಅವತಾರ ಎಂದು ಹೇಳಿಕೊಂಡಾಗ ನಿಜಕ್ಕೂ ಆತನಿಗೆ ಅದನ್ನು ಸಮರ್ಥಿಸಿಕೊಳ್ಳಲು ಕೆಲವು ವಿದ್ಯೆಗಳ ಅಗತ್ಯವಿತ್ತು. ಹೀಗಾಗಿ ಔಪಚಾರಿಕ ಶಿಕ್ಷಣ, ಸಂಗೀತ, ಧ್ಯಾನದಿಂದ ತಾನು ಅತ್ಯುನ್ನತೆಗೆ ಏರುವುದು ಅಸಾಧ್ಯ ಎಂದು ಮನವರಿಕೆಯಾಗಿತ್ತು. ಆದ್ದರಿಂದಲೆ ಸಾಯಿಬಾಬಾ, ಪವಾಡ ಬಾಬಾ ಆಗಿ ಲೋಕ ಖ್ಯಾತಿ ಪಡೆದದ್ದು. ನಮ್ಮ ಸಮಾಜದಲ್ಲಿ ಜನರನ್ನ ತನ್ನೆಡೆಗೆ ಸೆಳೆಯಬೇಕೆಂದರೆ, ಅವರು ಮರು ಮಾತಿಲ್ಲದೆ ತನ್ನನ್ನು ದೈವೀಕ ವ್ಯಕ್ತಿ ಎಂದು ಒಪ್ಪಿ ಕೊಳ್ಳಬೇಕಾದರೆ ಯಾವ ರೀತಿಯ ಸಿದ್ಧತೆ ಮಾಡಿ ಕೊಳ್ಳಬೇಕಾಗಬಹುದು ಎಂಬುದನ್ನ ಸ್ಪಷ್ಟವಾಗಿ ಅರಿತಿದ್ದ ಬಾಬಾ ತಮ್ಮ ಕೈಯಿಂದ ವಿಭೂತಿ, ಉಂಗುರ, ಚೈನ್ ಹೀಗೆ ಜನಗಳನ್ನು ಓಲೈಸುವಂತಹ ನಾಜೂಕಿನ ಕೆಲಸಕ್ಕೆ ಕೈ ಹಾಕಿದರು. ಒಬ್ಬ ಯಕ್ಷಣಿ ವಿದ್ಯೆ ಕಲಿತವನು ಮಾಡಬಹುದಾದಂತಹ ಕೆಲಸಗಳಿವು ಎಂದು ಮೇಲ್ನೋಟಕ್ಕೆ ಯಾರಿಗೆ ಬೇಕಾದರು ಅರ್ಥವಾಗಬಲ್ಲದು. ಹೀಗೆ ಬಾಬಾ ಪವಾಡಗಳನ್ನು ಮಾಡುತ್ತಾ ಪ್ರಶಾಂತಿ ನಿಲಯದ ಅಂಗಳದ ಸುತ್ತ ಭದ್ರ ಕೋಟೆಗಳನ್ನು ಕಟ್ಟುತ್ತಾ ಬಂದರು.

ಸತ್ತ ವ್ಯಕ್ತಿ ಬಗ್ಗೆ ಕೆಟ್ಟದ್ದನ್ನು ಆಡಬಾರದು ಎಂಬ ಅಲಿಖಿತ ಸೌಜನ್ಯದ ನಿಯಮ ಇದ್ದರು, ಇಂದು ಸಾಯಿಬಾಬಾ ಬಗ್ಗೆ ನಮ್ಮ ಮಾಧ್ಯಮಗಳ ದೃಷ್ಟಿಕೋನದೆಡೆಗೆ ಗಮನ ಹರಿಸಿದಾಗ ಕೊಂಚ ಆತ್ಮಾವಲೋಕನದ ಅಗತ್ಯ ಅವರೆಲ್ಲರಿಗಿದೆ ಎಂಬ ಅಭಿಪ್ರಾಯದಲ್ಲಿ ಈ ಲೇಖನಕ್ಕೆ ಅಕ್ಷರ ಹೆಣೆಯ ಬೇಕಾಯಿತು. ಇಲ್ಲಿ ನನ್ನ ಅಪಸ್ವರ ಇರುವುದು ಬಾಬಾ ಪವಾಡಗಳಿಂದ ಕಟ್ಟಿದ ಹುಸಿ ಸಾಮ್ರಾಜ್ಯದ ಬಗ್ಗೆ ಮಾತ್ರ. ಆದರೆ ಅದಾದ ನಂತರ ಅವರು ಮಾಡಿದ ಸಾಮಾಜಿಕ ಕ್ರಾಂತಿ ಇದೆಯಲ್ಲ ಅದು ಪ್ರಶ್ನಾತೀತ. ಬಾಬಾ ನಮ್ಮ ನಿಮ್ಮಂತೆ ತೀರಾ ಸಾಮಾನ್ಯ ವ್ಯಕ್ತಿ ಎಂಬುದನ್ನು ನಾವು ಮನವರಿಕೆ ಮಾಡಿ ಕೊಳ್ಳಬೇಕು. ಇಂದು ಮಾಧ್ಯಮಗಳು ಹೊಣೆಗಾರಿಕೆಯನ್ನು ಮರೆತು ಬಾಬಾ ಭೂಲೋಕದ ದೇವರು ಎಂಬಷ್ಟರ ಮಟ್ಟಿಗೆ ಬಿಂಬಿಸುತ್ತಿವೆಯಲ್ಲ, ಇದು ಜನರನ್ನು ಮತ್ತಷ್ಟು ಮೌಢ್ಯತೆಗೆ ತಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇನ್ನು 5, 6 ವರ್ಷಗಳಲ್ಲಿ ಇನ್ನೊಬ್ಬ ಯಾರಾದರು ಬಾಬಾ ನನಗೆ ಸ್ವಪ್ನದಲ್ಲಿ ಬಂದಿದ್ದರು, ನೀನೆ ಉತ್ತರಾಧಿಕಾರಿ ಎಂದು ಹೇಳಿದರು ಎಂದರೆ ನಮ್ಮ ಜನ ಕುರಿಗಳಂತೆ ಆತನನ್ನು ಹೀಗೆ ಹಿಂಬಾಲಿಸುತ್ತಾರೆ. ಅದು ಒಂದು ಆರೋಗ್ಯಯುತ ಸಮಾಜ ಹಳ್ಳ ಹಿಡಿಯುವದಕ್ಕೆ ಅವಕಾಶ ಮಾಡಿ ಕೊಟ್ಟಂತಲ್ಲವೆ.

ಬಾಬಾ ಬಂಗಾರದ ಮನುಷ್ಯನೆ...!?

ಬಾಬಾ ಬಂಗಾರದ ಮನುಷ್ಯನೆ...!?

 ಆದರೆ ಇಲ್ಲಿ ಬಾಬಾ ಮಾಡಿದ ಪವಾಡಗಳು, ಜನರಿಗೆ ತಾನೇ ದೇವರು ಎಂಬಂತೆ ದಾರಿ ತಪ್ಪಿಸಿದ್ದು, ಹಲವು ವಿವಾದಗಳು ತಲೆ ಎತ್ತಿದಾಗ ಬಾಬಾ ಮೌನವಹಿಸಿದ್ದು ಇವೆಲ್ಲ ಪ್ರಜ್ಞಾವಂತರಲ್ಲಿ ಅನೇಕ ಪ್ರಶ್ನೆಗಳೆಳುವಂತೆ ಮಾಡುತ್ತವೆ. ಬಾಬಾ ಇವನ್ನೆಲ್ಲಾ ಮಾಡದೆ ಜನಪ್ರಿಯರಾಗುತ್ತಿರಲಿಲ್ಲ, ಲೋಕ ಕಲ್ಯಾಣದ ಕೆಲಸ ಮಾಡಲಾಗುತ್ತಿರಲಿಲ್ಲ ಎಂದು ಹೇಳಬಹುದು. ಆದರೆ ಜನೋದ್ದಾರಕ್ಕಾಗಿ ಬಾಬಾ ಹಿಡಿದ ಮಾರ್ಗ ನಿಜವಾಗಿಯೂ ದೇವಮಾನವನಿಗೆ ಒಪ್ಪುವಂತಹದ್ದಲ್ಲ ಎಂಬುದಂತು ಸತ್ಯ. ಮೊದಲಿನಿಂದಲೂ ಬಾಬಾ ವಿವಾದತೀತರಾಗಿ ಲೋಕ ಖ್ಯಾತಿ ಪಡೆದವರಲ್ಲ. ಹಾಗಿದ್ದ ಮೇಲೆ. ಅವರು ಅತೀತರು ಎಂದು ಹೇಳುವುದು ಅಸಾಧ್ಯ. ಇಂದು ಬಾಬಾ ಕಟ್ಟಿದ ಸಾಮ್ರಾಜ್ಯ ಇದೆಯಲ್ಲ ಅದರತ್ತ ಯಾರು ಕಣ್ಣು ಹಾಕಿದರು ಒಂದು ಅಂದಾಜು ದಕ್ಕಬಲ್ಲದು. ಸುಮಾರು 40 ಸಾವಿರ ಕೋಟಿಯಿಂದ 1.50 ಲಕ್ಷ ಕೋಟಿಯ ಆಸುಪಾಸಿನಲ್ಲಿ ಇರಬಹುದಾದ ಸಂಪತ್ತಿಗೆ ಒಡೆಯರಾಗಿದ್ದರು ಬಾಬಾ ಎಂದರೆ ಇದೆಲ್ಲದರ ಮೂಲ ಹುಡುಕಿಕೊಂಡು ಹೋಗಲು ಸಾಧ್ಯವಿದೆಯೇ! ಅದಕ್ಕೆ ದಯವಿಟ್ಟು ಬಾಬಾ ಮಾಡಿದ MAGIC ಗಳ ಬಗ್ಗೆ ಮೌಢ್ಯತೆಯಿಂದ ಮಾತನಾಡುವುದು ಬೇಡ. ಇದೆಲ್ಲದರ ಹೊರತಾಗಿ ಜನ ಕಲ್ಯಾಣಕ್ಕಾಗಿ ಸಾಯಿಬಾಬಾ ಮಾಡಿದ ಪವಾಡವಿದೆಯಲ್ಲ ಆದು ಶ್ಲಾಘನೀಯ.

ಪುಟ್ಟಪರ್ತಿಯ ಸುತ್ತಲ ಹಳ್ಳಿಗಳಲ್ಲಿ ಇಂದೇನಾದರು ಜಲಕ್ರಾಂತಿಯಾಗಿದೆ ಎಂದರೆ ಅದರ ಹಿಂದೆ ಇರುವುದು ಬಾಬಾ ಪವಾಡವೇ. ಸುಮಾರು 700ಕ್ಕು ಹೆಚ್ಚು ಗ್ರಾಮಗಳಿಗೆ ಬಾಬಾ ತಮ್ಮ ಟ್ರಸ್ಟ ವತಿಯಿಂದ ಜೀವ ಜಲವನ್ನ ಹರಿಸಿದ್ದಾರೆ. ಒಂದು ಸಾರಿ ಅಲ್ಲಿನ ಕೈಂಕರ್ಯದತ್ತ ಕಣ್ಣು ಹಾಯಿಸಿದರೆ ಒಂದು ಸರಕಾರ ಮಾಡಬಹುದಾದಂತಹ ಕೆಲಸವನ್ನ ಬಾಬಾ ಹೇಗೆ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟು ಫಲಾನುಭವಿ ಗ್ರಾಮಗಳು 750
ಇದರ ಲಾಭ ಪಡೆದ ಒಟ್ಟು ಜನಸಂಖ್ಯೆ 900,000
ಲಾಭ ಪಡೆಯಬಹುದಾದ ಜನಸಂಖ್ಯೆ 1,250,000
ಯೋಜನೆಗೆ ತಗುಲಿದ ವೆಚ್ಚ US$63 million

ಇದು ಬಾಬಾ ಅವರಲ್ಲಿದ್ದ ಸಾಮಾಜಿಕ ಕಾಳಜಿಗೆ ಒಂದು ಉದಾಹರಣೆ. ಆದರೆ ಅವರ ಕಳಕಳಿ ಇಷ್ಟಕ್ಕೆ ಸೀಮಿತವಾಗಲಿಲ್ಲ. ಬಾಬಾ ಕಟ್ಟಿಸಿದ ಆಸ್ಪತ್ರೆಗಳಿವೆಯಲ್ಲ ಅವು ನಿಜಕ್ಕೂ ಬಡವರ ಪಾಲಿನ ಸಂಜೀವಿನಿ. ಪುಟ್ಟಪರ್ತಿ ಮತ್ತು ಬೆಂಗಳೂರಿನ ವೈಟ್ ಫಿಲ್ಡನಲ್ಲಿರುವ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯ ವೆಚ್ಚ ಎಷ್ಟೆ ಇದ್ದರೂ, ಯಾವುದೇ ರೀತಿಯ ಚಿಕಿತ್ಸೆ ಬೇಕಿದ್ದರೂ ಅದು ಉಚಿತವಾಗಿಯೇ ಲಭ್ಯವಿದೆ. ಇದು ಬಾಬಾ ಮಾಡಿದ ಪವಾಡವಲ್ಲದೆ ಇನ್ನೇನು! ಕೆಲವೊಮ್ಮೆ ಮಾನಸಿಕವಾಗಿ ಕುಗ್ಗಿದ ಜೀವಗಳಿಗೆ ಹಿಡಿ ಭರವಸೆಯ ಮಾತುಗಳು ಎಂತಹ ಜಾಢ್ಯವನ್ನಾದರು ಹೊಡೆದೊಡಿಸಬಲ್ಲವು. ಅದನ್ನು ಬಾಬಾ ತಮ್ಮ ಪ್ರವಚನಗಳ ಮೂಲಕ ಮಾಡುತ್ತಿದ್ದರು. ಅದು ನಿಜಕ್ಕೂ ಸತ್ಕಾರ್ಯವೇ. ಅದರೆಡೆಗೆ ಯಾರು ಬೊಟ್ಟು ಮಾಡಿ ತೋರಿಸರು. ಒಬ್ಬ ಮನಶಾಸ್ತ್ರಜ್ಞ ಮಾಡಬೇಕಾದ ಕೆಲಸವನ್ನ ಬಾಬಾ ಮಾಡುತ್ತಿದ್ದರು ಅಷ್ಟೇ! ವಿಶ್ವವ್ಯಾಪಿ ಹರಡಿದ ಬಾಬಾ ಅವರ ಆಶ್ರಮಗಳು ನೂರಾರು ಕೋಟಿಯನ್ನ ಪ್ರಶಾಂತಿಧಾಮದೆಡೆಗೆ ಹರಿಸಿರಬಹುದು. ಆದರೆ ಅದು ಸತ್ಕಾರ್ಯಗಳಿಗೆ ವಿನಿಯೋಗವಾಗುತ್ತಿದೆಯೆಂದರೆ ಅದಕ್ಕಿಂತ ಹೆಮ್ಮೆಯ ವಿಷಯ ಬೇರಿಲ್ಲ. ಬಾಬಾ ಕಟ್ಟಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರೇ ಇಂದು ಬಾಬಾ ಅವರ ಸೇವಾ ಕಾರ್ಯಗಳಿಗೆ ಹೆಗಲು ಕೊಡುತ್ತಿದ್ದರು. ಒಂದು ಸುಶಿಕ್ಷಣ ವ್ಯವಸ್ಥೆಯ ನಿರ್ಮಾಣಕ್ಕೆ ಇಷ್ಟು ಕಾಣಿಕೆ ಸಾಕು.

ಇನ್ನು ಬಾಬಾ ಬಿಟ್ಟು ಹೋದ ಒಡೆತನಕ್ಕೆ ಅಧಿಪತ್ಯ ಸಾಧಿಸಲು ಒಳಗೊಳಗೆ ಹವಣಿಕೆ ನಡೆದಿದೆ. ಬಾಬಾಗೆ ತೀರಾ ಆಪ್ತನಾಗಿದ್ದ ಸತ್ಯಜಿತ್ ಉತ್ತರಾಧಿಕಾರಿ ಎಂಬ ಗುಲ್ಲು ಹರಡಿದೆಯಂತೆ. ಯುವ ಸತ್ಯಜಿತ್ ಸುಮಾರು ವರುಷಗಳಿಂದ ಬಾಬಾ ಜೊತೆಗಿದ್ದ. ಅವರ ಕುಶಲೋಪರಿ ನೋಡಿಕೊಳ್ಳುತ್ತಿದ್ದ. ಹೀಗಾಗಿ ಪಟ್ಟ ಒಲಿದರು ಒಲಿಯಬಹುದು. ಆದರೆ ಯಾರೆ ಉತ್ತರಾಧಿಕಾರಿಯಾಗಲಿ ಬಾಬಾ ಮಾಡಿದ ಸೇವಾ ಕಾರ್ಯಗಳಿವೆಯಲ್ಲ ಅವುಗಳು ಅಬಾಧಿತವಾಗಿ ನಡೆದುಕೊಂಡು ಹೋಗಲಿ. ಆ ಉನ್ನತ ಕಾರ್ಯಗಳಿಂದಾಗಿ ಬಾಬಾ ಸದಾ ಎಲ್ಲರ ಮನದಲ್ಲಿ ಹಸನ್ಮಖಿಯಾಗಿ ಮಿಂಚುತಿರಲಿ. ಪ್ರೇಮಸಾಯಿಯಾಗಿ ನಾನು ಹುಟ್ಟಿ ಬರುತ್ತೇನೆ ಎಂದು ಬಾಬಾ ಹೇಳಿದ್ದರಂತೆ. ಸಮಾಜೋಪಕಾರಿ ಕೆಲಸಗಳನ್ನು ಮಾಡುವ ಪ್ರೇಮಸಾಯಿ ಪ್ರತಿ ಮನೆಯಲ್ಲಿ ಹುಟ್ಟಿ ಬರಲಿ.ಅದು ಪ್ರತಿ ಪ್ರಜ್ಞಾವಂತರ ಮನದ ಇಂಗಿತ.

ಈಗಾಗಲೇ ಕತ್ತಲೆ ಕೂಪಗಳು ಹರಡಿವೆ. ನಿನ್ನ ಕೈಗಳಿಂದ ಉದುರುತ್ತಿದ್ದ ಉಂಗುರ, ಲಿಂಗುಗಳ ಪವಾಡಗಳು ಪುನರಾವರ್ತನೆಯಾಗಲು ನೀ ಬರುವಂತಾಗದಿರಲಿ. ಬೆಳಕಿನಡೆಗೆ ನಡೆಸಲು ನೀ ಧರೆಗೆ ಬಾ…

 

ಟ್ಯಾಗ್ ಗಳು:

 
%d bloggers like this: