RSS

Category Archives: ಚೋಲೋ ಪಿಚ್ಚರ್

ಕಥೆಯೊಳಗಿನ ವ್ಯಥೆ, ಅದರಲ್ಲಿರುವ ಸತ್ಯಾಸತ್ಯತೆ…

ನಿಮಗೆಲ್ಲಾ ನೆನಪಿರಬಹುದು ಗಣೇಶ ಕಾಸರಗೋಡ ಅವರು “ಬಣ್ಣ ಮಾಸಿದ ಬದುಕು” ಎಂಬ ಲೇಖನ ಸರಣಿಯನ್ನು ವಿಜಯ ಕರ್ನಾಟಕದಲ್ಲಿ ಬರೆದಿದ್ದರು. ಮುಂದೆ ಅದು ಪುಸ್ತಕ ರೂಪವಾಗಿ ಹೊರಬಂತು ನಂತರ ಈ ಟೀವಿಗಾಗಿ ಪ್ರತಿ ಭಾನುವಾರ ಅರ್ಧಗಂಟೆ ಕಾರ್ಯಕ್ರಮವನ್ನು ರೂಪಿಸಿದರು. ಅದು ಸಿನಿಮಾ ಪ್ರಪಂಚದಲ್ಲಿ ಒಂದು ಕಾಲಕ್ಕೆ ತೆರೆಯ ಮೇಲೆ ಮೆರೆದವರ ಇಂದಿನ ಕರುಣಾಜನಕ ಜೀವನದ ಪರಿಚಯವಿತ್ತು. ಅದು ಬಣ್ಣದ ಬದುಕಿನ ಒಂದು ಮಗ್ಗಲು. ಈ ಪ್ರಸ್ತಾಪಕ್ಕೆ ಕಾರಣ ಇಷ್ಟೇ, ನೀವು ಗಮನಿಸಿದಂತೆ ತೆಲುಗಿನಲ್ಲಿ ರಾಮ್ ಗೋಪಾಲ ವರ್ಮಾ ಹೊಸ ಚಿತ್ರ ಬಿಡುಗಡೆಯಾಗಿದೆ. ಇದರ ಹೆಸರು “ಅಪ್ಪಲ್ರಾಜ”.  ಇಮಾಮ್ ಸಾಬಗು, ಗೋಕುಲಾಷ್ಠಮಿಗು ಎತ್ತಣ ಸಂಬಂಧ ಎಂಬ ಜಿಜ್ಞಾಸೆ ಮೂಡಬಹುದು. ಕತೆಯ ಹೂರಣವೇ ಅಲ್ಲಿದೆ.

ಹಿಂದಿನ ಕಾಲಕ್ಕೆ ಚಿತ್ರರಂಗ ಹೇಗಿತ್ತು. ಪ್ರಾಮಾಣಿಕವಾಗಿ ದುಡಿದ ಕಲಾವಿದರು ಇಂದು ಅದೆಷ್ಟು ದುರ್ಬರ ಬದುಕು ನಡೆಸುತ್ತಿದ್ದಾರೆ ಎಂದು ಗಣೇಶ ಕಾಸರಗೋಡು ಅವರು ನಮ್ಮ ಮುಂದೆ ತೆರೆದಿಟ್ಟಿದ್ದರು. ಅದೇ ಚಿತ್ರರಂಗ ಇಂದು ಅದೆಷ್ಟು ಕೆಳ ಮಟ್ಟಕ್ಕೆ ಕುಸಿದಿದೆ.  ಒಂದು ಸಿನಿಮಾ ನಿರ್ಮಾಣದ ಹಿಂದೆ ಅದೆಷ್ಟು ನಾಟಕಗಳು ನಡೆಯುತ್ತವೆ ಎಂಬುದನ್ನು ಹಿರಿಯ ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳುತ್ತಾ ಹೋಗುತ್ತಾರೆ.

ಸ್ವತಃ  ನಿರ್ದೇಶಕ, ನಿರ್ಮಾಪಕರಾದ ವರ್ಮಾ ತಮ್ಮನ್ನು ಒಳಗೊಂಡು ಇಡೀ ಚಿತ್ರರಂಗವನ್ನು ಟೀಕಿಸುತ್ತಾ, ಅದರಲ್ಲಿನ ಒಳ ಜಾಲಗಳನ್ನು ಎಳೆ..ಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಒಟ್ಟಾರೆಯಾಗಿ ನೋಡುವುದಾದರೆ ಇದೊಂದು ತೀರಾ ಸಾಧಾರಣ ಕಥೆ. ಆದರೆ ಜಾಣ ವರ್ಮಾ ಈ ಕಥೆಯನ್ನು ಚಿತ್ರರಂಗದ ಕರಾಳ ಮುಖವನ್ನು ಪರಿಚಯಿಸಲು ಬಳಸಿಕೊಂಡಿರುವುದು ವ್ಯವಹಾರಿಕ ದೃಷ್ಟಿಯಿಂದಲೋ, ಅಥವಾ ವೃತ್ತಿ ಜವಾಬ್ದಾರಿ ಮೆರೆಯಲೋ ಎಂಬ ಗೊಂದಲ ಕಾಡದೆ ಇರದು. ಈ ಚಿತ್ರದ ಒಂದು ಹಾಡಿನ ಸಾಲನ್ನು ಹೇಳಿ ಕಥೆಯನ್ನು ಪರಿಚಯಿಸುವುದು ಹೆಚ್ಚು ಸೂಕ್ತ  ಎಂದು ನನಗೆ ಅನಿಸುತ್ತದೆ. ಅದೆನೆಂದರೆ “ಹಿಚ್ಕಾಕ ಸಿನಿಮಾ ಚೂಸಿ.. ದಯ್ಯಾಲು ಸಿನಿಮಾ ತೇಸೆ..ರಾಮ ಗೋಪಾಲ ವರ್ಮಾ ಡೈರೆಕ್ಟರ್ ಕರ್ಮಾ”.

ಕಥಾ-ಸ್ಕ್ರಿನ್ ಪ್ಲೇ-ದರ್ಶಕತ್ವಂ ಅಪ್ಪಲ್ರಾಜ

ಕಥಾ-ಸ್ಕ್ರಿನ್ ಪ್ಲೇ-ದರ್ಶಕತ್ವಂ ಅಪ್ಪಲ್ರಾಜ

ಇಂತಹ ವರ್ಮಾ ಹೆಣೆದ ಕಥೆಯಲ್ಲಿ ಅಮಲಾಪುರಂನ ಥೇಟರ್ ನಲ್ಲಿ ಕೆಟ್ಟ ಸಿನಿಮಾಗಳನ್ನು ನೋಡಿ ಬೇಸತ್ತ ಒಬ್ಬಯುವಕ ತಾನೇ ಒಂದು ಅದ್ಭುತ ಸೆಂಟಿಮೆಂಟ್ ಕಥೆ ಇಟ್ಟುಕೊಂಡು ಹೈದರಾಬಾದಗೆ ಬರುತ್ತಾನೆ. ತಾನು ಹುಡುಕಿಕೊಂಡು ಬಂದ ಗೆಳೆಯ ಸಿನಿಮಾದಲ್ಲಿ ಹೀರೋ ಅಂದುಕೊಂಡವನಿಗೆ ನಂತರ ಅವನು ಅತಿಯಲ್ಲೇ, ಅತಿಯಾದ ಸಣ್ಣ ಪಾತ್ರ ಮಾಡುವನು ಅಂತ ಗೊತ್ತಾಗುತ್ತದೆ. ನಂತರ ಹಾಗು ಹೀಗು ಮಾಡಿ ಒಬ್ಬ ಕಾಸಿಲ್ಲದ ನಿರ್ಮಾಪಕನನ್ನು ಹುಡುಕುತ್ತಾನೆ. ಅವನ ಜೊತೆ ಇರುವ ಲಾಜಿಕ್ ಗೊತ್ತಿರದ ಕ್ರಿಯೇಟಿವ್ ಹೆಡ್, ನಂತರ ಸಿನಿಮಾಕ್ಕೆ ಹಣ ಹಾಕಲು ಮುಂದಾಗುವ  ತಲೆ ಮಾಸಿದ ಫೈನಾನ್ಷಿಯರ್ ಗಳು, ಕೊನೆಗೂ ಅಂಡರ್ ವರ್ಲ್ಡ ಡಾನ್ ಸುರಿಯುವ ಹಣ, ಆ ಕಾರಣಕ್ಕೆ ತೇವಲು ತೀರಿಸಿಕೊಳ್ಳಲು ಬರೆಯುವ ಸಾಹಿತ್ಯ, ಅದಕ್ಕೆ ರಿಂಗ್ ಟೋನ್ ಗಳಿಗೆ ಸಂಗೀತ ಕೊಡುವವನು ಈ ಚಿತ್ರಕ್ಕೆ ಮ್ಯೂಸಿಕ್  ಡೈರೆಕ್ಟರ್ ಆಗುವುದು. ಚೋಟುದ್ದಾ ಬಟ್ಟೆ ಹಾಕುವ ನಾಯಕಿ ಅಪ್ಪಟ ಸೆಂಟಿಮೆಂಟ್ ಚಿತ್ರದ “ನಾಯಕಿ”(ಚಿತ್ರದಲ್ಲಿನ ಚಿತ್ರದ ಹೆಸರು)ಯಾಗುವುದು. ಅವಳ ಕೃಪೆಯಿಂದ ಜೊತೆಗಿರುವ ಮತ್ತೊಬ್ಬ ದೊಡ್ಡ ನಟ ಹಿರೋ ಆಗುವುದು. ಅವರಿಬ್ಬರ ಸಂಬಂಧ ಮುರಿದು ಬಿದ್ದಾಗ ಇನ್ನೊಬ್ಬ ಬಾಯ್ ಪ್ರೆಂಡ್ ಆ ಜಾಗ ತುಂಬುವುದು.ನಾಯಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೊದಲು ಒಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದು. ಹೀಗೆ ಎಲ್ಲರು ಸೇರಿ ಮೂಲ ಚಿತ್ರಕ್ಕೆ ತಮ್ಮ ಕೈಯ್ಯಲ್ಲಾದ “ಕೊಡುಗೆ”? ಸಲ್ಲಿಸುತ್ತಾರೆ. ಹಾಡುಗಳು ಹಿಟ್ ಆಗುತ್ತವೆ. ನಾಯಕಿಯ ಮೊದಲ ಬಾಯ್ ಫ್ರೆಂಡ್ ಕೂಡಾ ಚಿತ್ರರಂಗದಲ್ಲಿ ಪ್ರಭಾವಶಾಲಿಯಾಗಿದ್ದರಿಂದ ಡಿಸ್ಟ್ರಿಬ್ಯೂಟರ್, ಫಿಲ್ಮ ಜರ್ನಲಿಸ್ಟ್ ಮೂಲಕ ಸೇಡು ತೀರಿಸಿ ಕೊಳ್ಳಲು ಇನ್ನಿಲ್ಲದ ಯೋಜನೆಗಳನ್ನು ರೂಪಿಸುತ್ತಾನೆ. ಅವೆಲ್ಲವುಗಳನ್ನು ದಾಟಿ ಮೊದ, ಮೊದಲು ಫ್ಲಾಫ್ ಎಂದು ಹೇಳಲ್ಪಟ್ಟ ಚಿತ್ರ ನಂತರ ಸೂಪರ್ ಹಿಟ್ ಆಗುತ್ತೆ. ಎಲ್ಲ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತೆ. ಚಿತ್ರದ ನಿಜವಾದ ಉದ್ದೇಶ ಅಡಗಿರುವುದೇ ಇಲ್ಲಿಯೇ…

ಚಿತ್ರದ ಉದ್ದಕ್ಕು ವರ್ಮಾ ಚಿತ್ರರಂಗದ ಕರಾಳ ಮುಖವನ್ನು ಕೊಂಚ ಅತಿ ರಂಜಿತವಾಗಿಯೇ ತೋರಿಸುತ್ತಾ ಹೋಗುತ್ತಾರೆ. ಹಿರೋ ಕಥೆ ಹಿಡಿದುಕೊಂಡು ಬಂದ ನಂತರ ಬರುವ ಎಲ್ಲ ಪಾತ್ರಗಳು ಕಥೆಯಲ್ಲಿ ಹೇಗೆ ಪುಕ್ಕಟೆ ಸಲಹೆ  ನೀಡುತ್ತತವೆ. ಕಥೆ ಹೇಗೆ ಬೇರೆ, ಬೇರೆ ಆಯಾಮ ಪಡೆದು ಕೊಳ್ಳುತ್ತೆ ಎಂಬುದನ್ನು ಹಾಸ್ಯದ ಲೇಪನದ ಮೂಲಕ ಬಿಂಬಿಸುತ್ತಾ ಹೋಗುತ್ತಾರೆ.

ಒಟ್ಟಿನಲ್ಲಿ ವರ್ಮಾ  ತಾನೇನು ಸಾಚಾ ಅಲ್ಲ ಎಂಬುದನ್ನು ಹೇಳುತ್ತಾ ಸಿನಿಮಾದವರು ಮತ್ತು ಅವರ ಸುತ್ತದ ಪ್ರಪಂಚವನ್ನು ಬೆತ್ತಲೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಆದರೆ ಅವರ ಕೆಲವು ಪಾತ್ರಗಳು ಮತ್ತು ಕಠೋರ ನಿರೂಪಣೆ ಹೊಸ ವಿವಾದಕ್ಕೆ ಕಾರಣವಾಗಿವೆ. ಸಿನಿಮಾ ಕಳಪೆಯಾಗಿದೆ. ವರ್ಮಾಗೆ ಸಕ್ಸೆಸ್ ಪಿತ್ತ ನೆತ್ತಿಗೇರಿ ಬೇಕಾ ಬಿಟ್ಟು ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚಿಗೆ TV9 ಪ್ರಸಾರ ಮಾಡಿದ ವಿಶೇಷ ಕಾರ್ಯಕ್ರಮದ ವಿರುದ್ಧ ವರ್ಮಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆ ವಿವಾದದ ಮಾಹಿತಿಯನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸುತ್ತೇನೆ. ಸಧ್ಯ ಸಾಧ್ಯವಾದರೆ ನೀವು ಒಂದು ಸಾರಿ ಅಪ್ಪಲ್ರಾಜನ ನೊಡಬಹುದು.

Advertisements
 

ಟ್ಯಾಗ್ ಗಳು: ,

ಮುಗ್ಧ ಮನಸಿನ “ಮರ್ಯಾದ ರಾಮನ್ನ”

ಇಂದು ಚಿತ್ರರಂಗ ಎಂತಹ ದುಸ್ಥಿತಿಯಲ್ಲಿದೆ ಎಂದರೆ ಜನರನ್ನು ಪುಕ್ಕಟೆ ಬಂದು ಚಿತ್ರ ನೋಡಿ ಹೋಗಿ ಎಂದರು ಯಾರು ಚಿತ್ರಮಂದಿರದ ಕಡೆ ತಲೆ ಹಾಕಲು ಹೆದರುತ್ತಾರೆ. ಅದಕ್ಕೆ ಕಾರಣ ಹೊಸತನ ಮತ್ತು ಲವಲವಿಕೆ ಇಲ್ಲದ ಏಕರೂಪದ ಕೇವಲ ಅಧ್ಧುರಿತನವನ್ನೆ ಬಂಡವಾಳವಾಗಿಸಿಕೊಂಡ ಚಿತ್ರಗಳ ನಿರ್ಮಾಣ ಎಂದೇ ಹೇಳಬಹುದು. ಬಹು ನಿರೀಕ್ಷಿತ ಚಿತ್ರಗಳು ಕೂಡ ನೆಲ ಕಚ್ಚುತ್ತಿವೆ. ಇದಕ್ಕೆ ಯಾವ ಭಾಷೆಯು ಹೊರತಾಗಿಲ್ಲ ಎಂದೇ ಹೇಳಬಹುದು. ಪ್ರತಿ ಚಿತ್ರೋದ್ಯಮಿಗಳು ಸಿನಿಮಾ ಗೆಲ್ಲಿಸಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ಚಿತ್ರ 50 ದಿನ ಓಡಿಸಲು ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಹಿಂದಿಯಲ್ಲಿ ಕೈಟ್ಸ ಮತ್ತು ರಾವಣ್ ಅಂತಹ ಚಿತ್ರಗಳು ಒಂದೇ ವಾರಕ್ಕೆ ಎತ್ತಂಗಡಿ ಆಗುವಂತಹ ಸ್ಥಿತಿ ತಂದುಕೊಂಡವು ಎಂದರೆ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.

ಇಂತಹ ವಾತಾವರಣದಲ್ಲು ಅಲ್ಲೊಂದು, ಇಲ್ಲೊಂದು ಚಿತ್ರಗಳು ಗಮನ ಸೆಳೆಯುತ್ತಿರುವುದು ನಿಜಕ್ಕು ಅಭಿಮಾನದ ವಿಷಯವೇ. ಅಂತಹ ಚಿತ್ರಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ತೆಲಗು ಚಿತ್ರ “ಮರ್ಯಾದ ರಾಮಣ್ಣ”. ಇದು ತೆಲುಗಿನಲ್ಲಿ ಇತ್ತೀಚಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಅರ್ಕಾ ಮಿಡೀಯಾ ಅವರ ಎರಡನೇ ಕೊಡುಗೆ (ಮೊದಲ ನಿರ್ಮಾಣ “ವೇದಂ”. ಅದು ಕೂಡಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಿತ್ರ ಎಂಬುದು ಗಮನಾರ್ಹ). ಸತತ ಹಿಟ್ ಚಿತ್ರಗಳನ್ನು ನೀಡಿದ ರಾಜಮೌಳಿ (ಮಗಧೀರ, ವಿಕ್ರಮಾರ್ಕಡು, ಯಮದೊಂಗ…..) ನಿರ್ದೇಶನದಲ್ಲಿ ಬಂದ ಈ ಚಿತ್ರ ನಿಜಕ್ಕು ಕೊಂಚ ಭಿನ್ನವಾಗಿದೆ ಎಂದು ಹೇಳಬಹುದು. ಸರಳ ಕಥೆ, ಅಷ್ಟೇ ಸರಳ ನಿರೂಪಣೆ. ತಿಳಿ ಹಾಸ್ಯ, ಕೊಂಚ ಬೆರಗಾಗಿಸುವ ಸಾಹಸ, ಮುದ ನೀಡುವ ಛಾಯಾಗ್ರಹಣ, ಸಂದರ್ಭಕ್ಕೆ ಸರಿಯಾದ ಹಿನ್ನೆಲೆ ಸಂಗೀತ ಹಾಗು ಇಂಪಾದ ಹಾಡುಗಳು. ಒಟ್ಟಾರೆಯಾಗಿ ಎಲ್ಲ ವಿಭಾಗದಲ್ಲು ತನ್ನ ಗಟ್ಟಿತನದಿಂದಲೆ ಚಿತ್ರ ನೋಡುಗರನ್ನು ಕೊನೆಯ ಕ್ಷಣದವರೆಗು ಹಿಡಿದಿಡುತ್ತದೆ.

ಚಿತ್ರ ಕೃಪೆ : ಟಾಲಿ2ಬಾಲಿ.ಕಾಂ

ಇಷ್ಟಕ್ಕು ಯಾವ ಚಿತ್ರದಲ್ಲಿಯು ಇಲ್ಲದ ಕತೆ ಇಲ್ಲೇನಿದೆ ಎಂಬ ಪ್ರಶ್ನೆ ಸಹಜ. ಆದರೆ ಕತೆ ಇರುವುದು ಇಷ್ಟೆ. ರಾಮು (ಸುನೀಲ್) ಅನಾಥ. ಅವನಿಗೆ ಒಂದು ಗೂಡ್ಸ ಆಟೋ ಖರೀದಿಸುವ ಕನಸು. ಅದಕ್ಕಾಗಿ ಹನಿ ಹನಿ ಕುಡಿದರೆ ಹಳ್ಳ ಎಂಬಂತೆ ತನ್ನ ಪ್ರೀತಿಯ ಸೈಕಲ್ ಮೇಲೆ ಮೂಟೆ ಹೊರುತ್ತಾ ಕೂಲಿ ಕೆಲಸ ಮಾಡಿ ಹಣ ಕೂಡಿಸುವ ಉದ್ದೇಶ. ಆದರೆ ಅದು ಕೈಗೂಡದು ಎಂದು ತಿಳಿಯುತ್ತದೆ. ಅದೇ ಸಮಯಕ್ಕೆ ಹಳ್ಳಿಯಲ್ಲಿರುವ 5 ಏಕರೆ ಭೂಮಿ ಸರಕಾರದಿಂದ ಸಿಕ್ಕಿರುವ ಟೆಲಿಗ್ರಾಂ ಬರುತ್ತದೆ. ಆ ಜಮೀನನ್ನು ಮಾರಿ ಬಂದ ಹಣದಿಂದ ಾಟೋ ಖರೀದಿಸುವ ಕನಸಿನೊಂದಿಗೆ ರಾಮು ತನ್ನ ಹುಟ್ಟುರಾದ ರಾಯಲಸೀಮೆಯ ೊಂದು ಹಳ್ಳಿಗೆ ಹೊರಡುತ್ತಾನೆ.

ರೈಲಿನಲ್ಲಿ ಹೋಗುತ್ತಿರುವಾಗ ನಾಯಕಿ ಅರ್ಚನಾಳ ಮುಂದೆ ಅವನ ಮುಗ್ಧತೆಯ ದರ್ಶನ, ಸುಂದರ ಹಾಡು ಮತ್ತು ದೃಶ್ಯ ಕಾವ್ಯ, ಅವಳು ಟ್ರೇನ್ ಇಳಿಯುವಾಗ ಚಿತ್ರ ಬಿಡಿಸಿರುವ ಬುಕ್ ಕೆಳಗೆ ಬೀಳುತ್ತದೆ. ಅದನ್ನು ಗಮನಿಸಿದ ರಾಮು ಆ ಬುಕ್ ಹುಡುಕಿ ಅವಳಿಗೆ ಕೊಡಬೇಕೆನ್ನುವಷ್ಟರಲ್ಲಿ ಟ್ರೇನ್ ಹೋಗುತ್ತದೆ. ಇದೆಲ್ಲಾ ಆಗುವ ಮೊದಲೆ  ನಾಯಕಿಯ ಮನೆತನ ಅವರ ಶ್ರೀಮಂತಿಕೆ ರಾಯಲಸೀಮೆಯ ಕ್ರೌರ್ಯ ಅನಾವರಣಗೊಂಡಿರುತ್ತದೆ. ಅವಳು ಟ್ರೇನ್ ಇಳಿದು ಹೋಗುವಾಗ ಮನೆಯಲ್ಲಿ ಅವಳನ್ನು ಮದುವೆಯಾಗುವ ಹುಡುಗನಿದ್ದರು ಇಬ್ಬರಿಗೂ ತಾವಿಬ್ಬರು ಗಂಡ ಹೆಂಡತಿ ಆಗುವ ಆಸೆ ಇರುವುದಿಲ್ಲ. ಮಾತುಕತೆ ಕೇವಲ ಹಿರಿಯರ ಹಂತದಲ್ಲಿ ನಿರ್ಧಾರವಾಗಿರುತ್ತದೆ.

ಮರ್ಯಾದ ರಾಮಣ್ಣ

ಚಿತ್ರ ಕೃಪೆ : ಚಕ್ರಿ ಮಸ್ತಿ.ಕಾಂ

ರಾಮು ತನ್ನ ಹಳ್ಳಿಗೆ ಬಂದಾಗ ಮೊದಲು ಅವನಿಗೆ ನಾಯಕಿಯ ಅಣ್ಣನೇ ಪರಿಚಯವಾಗುತ್ತದೆ. ರಾಮು ಹೇಳಿದ ಕಡೆ ಅವನನ್ನು ಡ್ರಾಪ್ ಮಾಡಿದ ನಂತರ ರಾಮು ತಮ್ಮ ವೈರಿಗಳ ಮಗನೆಂದು ಗೊತ್ತಾಗಿ ಅವನನ್ನು ಸೀಳಿ ಹಾಕಲು ಬೆನ್ನ ಹತ್ತುತ್ತಾನೆ. ತನಗೆ ಗೊತ್ತಿಲ್ಲದಂತೆ ರಾಮು ಅವನಿಂದ ಪಾರಾಗುತ್ತಾನೆ. ಭೂಮಿ ಮಾರಿಸುವ ಏಕೈಕ ವ್ಯಕ್ತಿ ನಾಯಕಿಯ ತಂದೆ. ಆ ಮನೆತನ ಕ್ರೌರ್ಯಕ್ಕೆ ಹೆಸರಾದಷ್ಟು, ಅತಿಥಿಗಳಿಗೆ ಗೌರವ ಮಾಡುವುದರಲ್ಲಿಯು ಅಷ್ಟೇ ಎತ್ತಿದ ಕೈ. ರಾಮುನನ್ನು ತಮ್ಮ ಮನೆಗೆ ಅತಿಥಿ ಸತ್ಕಾರಕ್ಕೆ ಕರೆದುಕೊಂಡು ಹೋಗುವ ನಾಯಕಿಯ ತಂದೆಗೆ ನಂತರ ಅಂದರೆ ರಾಮುವಿನ ಜತೆಗೆ ಊಟಕ್ಕೆ ಕುಳಿತಾಗ ಹಿರಿ ಮಗ ಬಂದು ಅವನು ತಮ್ಮ ಬದ್ಧ ವೈರಿಗಳ ಮಗನೆಂದು ತಿಳಿಯುತ್ತದೆ. ಆ ಕುಟುಂಬದಲ್ಲಿ ಈಗ ಉಳಿದವನು ರಾಮು ಮಾತ್ರ ಅವನನ್ನು ಕೊಂದರೆ ಅವರ ಸೇಡು ಪೂರ್ಣವಾಗುತ್ತದೆ. ಆದರೆ ಒಂದು ಸಂಪ್ರದಾಯ ಎಂದರೆ ಅತಿಥಿ ಮನೆಯೊಳಗೆ ಇರುವವರೆಗು ಅವನಿಗೆ ರಾಜ ಮರ್ಯಾದೆ ಮಾಡಲೆ ಬೇಕು. ಅವನು ಹೊಸ್ತಿಲು ದಾಟಿದರೆ ಅವನ ಕತ್ತು ಕತ್ತರಿಸಿ ಹಾಕಬೇಕೆಂದು ಇಡೀ ಕುಟುಂಬವೇ ಸಜ್ಜಾಗುತ್ತದೆ. ಮನೆಗೆ ಬಂದ ಕೆಲವೆ ಸಮಯದಲ್ಲಿ ರಾಮುಗೆ ವಿಷಯ ತಿಳಿದು ಅವನು ಮನೆ ಹೊಸ್ತಿಲು ದಾಟಿ ಹೋಗಲೆ ಕೂಡದು ಎಂದು ನಿರ್ಧರಿಸುತ್ತಾನೆ. ಆದರೆ ನಾಯಕಿಯ ತಂದೆ, ಅಣ್ಣಂದಿರು ಅವನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಹರಸಾಹಸ ಮಾಡುತ್ತಾರೆ. ಆದರೆ ಈ ಯಾವುದೆ ವಿಷಯ ನಾಯಕಿಗೆ ತಿಳಿಯುವದೆ ಇಲ್ಲಾ. ರಾಮು ಹೇಗೆ ಆ ಮನೆಯಲ್ಲಿ ಉಳಿಯಲು ಯೋಜನೆಗಳನ್ನು ರೂಪಿಸುತ್ತಾನೆ. ನಾಯಕಿ ಮತ್ತು ಅವಳ ಭಾವ ಮದುವೆಯಾಗ್ತಾರಾ. ಇದರಲ್ಲಿ ರಾಮುವಿನ ಪಾತ್ರವೇನು. ಅವರ ಸೇಡು ಪೂರ್ಣವಾಗುತ್ತಾ, ಈ ಎಲ್ಲ ಕುತೂಹಲಗಳಿಗೆ ಚಿತ್ರವನ್ನೆ ಗಮನಿಸಬೇಕು.

ಮುಗ್ಧ ರಾಮುವಿನ ಪಾತ್ರದಲ್ಲಿ ಸುನೀಲ್ ಅಭಿನಯ ಮನೋಜ್ಞವಾಗಿದೆ. ನಾಯಕಿ ಹಳ್ಳಿಗು ಸೈ, ದಿಲ್ಲಿಗು ಸೈ ಎಂಬಂತಿದ್ದಾಳೆ. ಅವಳ ತಂದೆ, ಅಣ್ಣಂದಿರು ರಾಯಲಸೀಮೆಯ ಕ್ರೌರ್ಯತೆಗೆ ಥೇಟು ಜೀವ ತುಂಬಿದಂತೆ ಅಭಿನಯಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ರಾಜಮೌಳಿಯ ನಿರ್ದೇಶನ ಮತ್ತು ಸಿ ರಾಂ ಪ್ರಸಾದ ಛಾಯಾಗ್ರಹಣ ಅದ್ಭುತ ಎಂಬಂತಿದೆ. “ಅಮ್ಮಾಯಿ ಕಿಟಕಿ ಪಕ್ಕನ….” ಹಾಡು ಇಡೀ ಚಿತ್ರದ ಹೈಲೈಟ್ಸ ಎಂದೇ ಹೇಳಬಹುದು.  ಒಟ್ಟಾರೆಯಾಗಿ ಅರ್ಕಾ ಮಿಡೀಯಾ ನಿರ್ಮಾಣದಲ್ಲಿ ಮತ್ತೊಂದು ಯಶಸ್ವೀ ಚಿತ್ರ. ಈಗ ಶೋಬು ಮತ್ತು ಪ್ರಸಾದ ಹ್ಯಾಟ್ರಿಕ್ ಕನಸಿನಲ್ಲಿದ್ದಾರೆ.

 
 

ಟ್ಯಾಗ್ ಗಳು:

 
%d bloggers like this: