RSS

Monthly Archives: ಸೆಪ್ಟೆಂಬರ್ 2012

ಇಲ್ಲಿ ‘ಭರ’ಪೂರ ವನವಾಸ ; ಅಲ್ಲಿ ಭರ್ಜರಿ ಪ್ರವಾಸ

ಇಂತಹ ನಾಯಕರನ್ನು ಚುನಾಯಿಸಿದ್ದು ನಮ್ಮ ದುರಂತವೋ ಅಥವಾ ಇವರು ಆಯ್ಕೆಯಾಗಿದ್ದೆ ನಮ್ಮ ದುರಾದೃಷ್ಟವೋ ದೇವರೆ ಬಲ್ಲ. ಆದರೆ ಕನಿಷ್ಠ ಹೊಣೆಗಾರಿಕೆಯನ್ನು ಮರೆತು ಮನಸೋ ಇಚ್ಛೆ ವರ್ತಿಸುವವರು ನಮ್ಮ ನಡುವಿನ ಚುನಾಯಿತ ಪ್ರತಿನಿಧಿಗಳು ಎಂದು ಹೇಳಿಕೊಳ್ಳ ಬೇಕಾಗಿರುವುದು ಈ ನಾಡಿನ ದೌರ್ಭಾಗ್ಯ..

ಎಲ್ಲ ಅಡೆತಡೆಗಳನ್ನು ಮೀರಿ 13 ಜನ ಶಾಸಕರು ವಿದೇಶ ಪ್ರವಾಸದಲ್ಲಿ ವಿಹರಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಆದಿಯಾಗಿ ಮಾಧ್ಯಮ, ಸಾರ್ವಜನಿಕ ವಲಯದಿಂದಲೂ ತೀವ್ರ ವಿರೊಧ ವ್ಯಕ್ತವಾದರು ಕೂಡಾ ಇವರ ಪ್ರವಾಸಕ್ಕೆ ಯಾವುದು ಅಡ್ಡ ‘ಬರ’ಲಿಲ್ಲ. ಇಷ್ಟಕ್ಕೂ ಈ ಶಾಸಕರು ವಿದೇಶ ಸುತ್ತಿ ಬಂದು ಕಡಿದು ಕಟ್ಟೆ ಹಾಕುವುದು ಏನು ಎಂಬುದು ಮಾತ್ರ ಅನುಮತಿ ಇತ್ತ ಶೆಟ್ಟರ್ ಮತ್ತು ಬೋಪಯ್ಯ ಆಣೆಯಾಗಿ ಯಾರಿಗು ಗೊತ್ತಿಲ್ಲ. ಕಾರಣ ಪ್ರತಿ ಸರ್ಕಾರದಲ್ಲು ಒಂದು ವಿದೇಶ ಪ್ರವಾಸ, ಎರಡು ದೇಶಿ ಪ್ರವಾಸಗಳಿಗೆ ಹೋಗಲು ಅವಕಾಶವಿದ್ದಿದ್ದರಿಂದ ತಮ್ಮ ಕೋಟಾ ಯಾಕೆ ಸುಖಾಸುಮ್ಮನೆ ಕಳೆದುಕೊಳ್ಳಬೇಕು ಎಂದು ಶಾಸಕರು ಇದನ್ನು ಅವ್ಯಾಹತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವೇ ಈಗ ‘ಸಾರ್ವಜನಿಕ ಉದ್ದಿಮೆಗಳ ಸಮಿತಿ’ಯ ಸದಸ್ಯರು ದಕ್ಷಿಣ ಅಮೆರಿಕಾಕ್ಕೆಹಾರಿದ್ದು.

ಇದು ಅಪರಾಧವಾಗಿರಲಿಕ್ಕಿಲ್ಲ, ಆದರೆ ಇಂತಹ ಹೊಣೆಗೇಡಿ ವರ್ತನೆಯ ಅಗತ್ಯವಿತ್ತೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ರಾಜ್ಯದಲ್ಲಿ ಹಿಂಗಾರು ಕೈಕೊಟ್ಟು ಭೀಕರ ಬರಗಾಲ ತಾಂಡವವಾಡ್ತಿದೆ. ಜನ ಕೂಲಿ ಸಿಗದೆ ಪಟ್ಟಣದೆಡೆಗೆ ಗುಳೆ ಹೋಗ್ತಿದ್ದಾರೆ. ರೈತರು ಪಾಳು ಬಿದ್ದ ಹೋಲಕ್ಕೆ ಹನಿ ನೀರಾದರು ಚೆಲ್ಲಲಿ ಎಂದು ಮೋಡಗಳೆಡೆಗೆ ನೆಟ್ಟ ಕಣ್ಣು ಮಿಟುಕಿಸದೆ ನೋಡುತ್ತಿರುವಾಗ ನಮ್ಮ ಜನಪ್ರತಿನಿಧಿಗಳಿಗೆ ವಿದೇಶದ ಮೋಹ ಬೇಕಿತ್ತಾ? ಯಾವನಿಗ್ಗೊತ್ತು…! ಬರಗಾಲ ಕಾಮಗಾರಿ, ನರೇಗಾ ಅಂತ ಎನೇನೋ ಯೋಜನೆಗಳು ಜನ್ಮ ತಾಳುತ್ತವೆ. ಆದರೆ ಅವೆಲ್ಲ ಎಷ್ಟು ಸಾದ್ಯಂತವಾಗಿ ಉಸಿರಾಡುತ್ತಿವೆ ಎಂಬುದು ದೊಡ್ಡ ಯಕ್ಷಪ್ರಶ್ನೆ. ಕೂಲಿಗಾಗಿ ಕಾಳು ಅಂತಾರೆ. ಆದರು ಹೊಟ್ಟೆಗಿಲ್ಲದೆ ಜನ ಒದ್ದಾಡುವುದು ತಪ್ಪಿಲ್ಲ. ನೂರಾರು ಆಳಕ್ಕೆ ಬೊರ್ ವೆಲ್ ಕೊರೆದರು ಹನಿ ನೀರು ಜಿನುಗುವುದಿಲ್ಲ. ಕೆರೆಗಳಲ್ಲಿ ಹೂಳು ತುಂಬಿಕೊಂಡು ಬೊಗಸೆ ನೀರು ನಿಲ್ಲುವುದು ದುಸ್ತರ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವಾಗ ಇನ್ನು ಅಂತರ್ಜಲದ ಮಾತೇ ಉದ್ಭವವಾಗದು. ಹೇಳುತ್ತಾ ಹೋದರೆ ಸಮಸ್ಯೆಗಳಿಗೆ ಬರವೇ ಇಲ್ಲಾ. ಆದರೆ ನಮ್ಮ ನಾಯಕರ ವಿವೇಚನೆಗೇಕೆ ಇಷ್ಟೊಂದು ಬರ ಆವರಿಸಿದೆಯೋ ಬಿಡಿಸದಾಗದು.

ನಾಡಲ್ಲಿ ಬರ... ಶಾಸಕರ ವಿದೇಶ ಸಂಚಾರ

ನಾಡಲ್ಲಿ ಬರ… ಶಾಸಕರ ವಿದೇಶ ಸಂಚಾರ
ಕೃಪೆ:daijiworld

ನಾಡಿನ ಪ್ರಖ್ಯಾತ ಸಾಹಿತಿ ಕಂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 13 ಜನ ಮಹಾನ್ ಘನಂದಾರಿ ಕೆಲಸಕ್ಕೆ ಹೊರಟವರಂತೆ ನಾಡಿನ ಜನರ ಸಮಸ್ಯೆಗಳನ್ನೆಲ್ಲಾ ಎಡಗಾಲಲ್ಲಿ ಒದ್ದು, ಬಲು ಸಂಭ್ರಮದಿಂದ ವಿಮಾನದಲ್ಲಿ ಬಲಗಾಲಿಟ್ಟು ವಿದೇಶಕ್ಕೆ ಹಾರಿದ್ದಾರೆ. ಆ ಸಮಯದಲ್ಲಿ ಮಾಧ್ಯಮಗಳಿಗೆ ಒಬ್ಬ ಶಾಸಕ ಮಹಾಶಯರು ಹೇಳಿದ್ದು, “ರೂ. 6 ಲಕ್ಷದಿಂದ ಯಾವ ಬರಗಾಲ ನೀಗಿಸಲು ಆಗಲ್ಲ. ಜನ ಬರಗಾಲ ಇದೆ ಅಂತ ಊಟಾ, ಮದುವೆ ನಿಲ್ಲಿಸಿದ್ದಾರಾ” ಎಂದು ಬರ ಪರಿಸ್ಥಿತಿಯನ್ನು ಬಲು ಸಮರ್ಥವಾಗಿ ವಿಶ್ಲೇಷಿಸಿದರು. ಸ್ವಾಮಿ ತಮ್ಮ ಅವಗಾಹನೆಗೆ ಇರಲಿ ಎಂದು ಈ ಮಾತು, 6 ಲಕ್ಷ ರೂಪಾಯಿ ಬರಕ್ಕೆ ತುತ್ತಾದ ಅನ್ನದಾತನ 8-10 ವರ್ಷಗಳ ವಾರ್ಷಿಕ ವರಮಾನ. ಕೆಲವು ಪರಿಸ್ಥಿತಿಯಲ್ಲಿ ಇದು 15 ವರ್ಷಗಳಿಗಾದರು ಅಚ್ಚರಿಯಿಲ್ಲ. ಹಾಗಿರುವಾಗ ತಮಗೆ 6 ಲಕ್ಷ ರೂಪಾಯಿ ಕೇವಲವಾಗಿ ಕಂಡಿದ್ದು ವಿಪರ್ಯಾಸ. ಟ್ಯಾಂಗೋ ಡ್ಯಾನ್ಸು, ಮಾಚು ಪೀಕು ಪರ್ವತವೇ ತಲೆಯಲ್ಲಿ ತುಂಬಿಕೊಂಡಿರುವವರಿಗೆ ಬಡವನ ಒಂದೊಪ್ಪತ್ತಿನ ಊಟಕ್ಕಾಗಿನ ತತ್ವಾರ ಅರ್ಥವಾಗುವುದಾದರು ಹೇಗೆ ಸಾಧ್ಯ ಬಿಡಿ.

ಇನ್ನು ಈ ಶಾಸಕೋತ್ತಮರ ಅಧ್ಯಯನದ ವಿಷಯಕ್ಕೆ ಬರೋಣ. ಇಲ್ಲಿಯವರೆಗೆ ಅದೆಷ್ಟು ಶಾಸಕರು ವಿದೇಶ ಪ್ರವಾಸ ಕೈಗೊಂಡು ವರದಿ ಒಪ್ಪಿಸಿದ್ದಾರೆ ಮತ್ತು ಅವುಗಳ ಅನುಷ್ಠಾನವಾಗಿದೆ ಎಂಬುದೆ ವಿಶೇಷವಾಗಿ ಅಧ್ಯಯನ ಮಾಡಬೇಕಾದ ವಿಷಯವಾಗಿದೆ. ಕೇವಲ ಸರ್ಕಾರದ ಹಣದಲ್ಲಿ ಮೊಜು ಮಾಡುವುದಷ್ಟೆ ಈ ಪ್ರವಾಸದ ಒನ್ ಲೈನ್ ಅಜೆಂಡಾ ಎಂದರೆ ತಪ್ಪಲ್ಲ. ಇಲ್ಲಿಯವರೆಗು ನಿರ್ದಿಷ್ಟವಾಗಿ ಯಾವ ಅಧ್ಯಯನಕ್ಕೆಂದು ಈ 13 ಶಾಸಕರು ವಿದೇಶಕ್ಕೆ ಹೊರಟರು ಎಂಬುದು ಎಲ್ಲಿಯೂ ಕೇಳಿ ಬರುತ್ತಿಲ್ಲ. ಕೊನೆ ಪಕ್ಷ ಮಾಧ್ಯಮಗಳಿಂದ ಇಷ್ಟೊಂದು ಟೀಕೆಗಳು ಬಂದ ನಂತರವಾದರು ವಿಮಾನ ನಿಲ್ದಾಣದಲ್ಲಿ ಈ ಶಾಸಕರು ತಮ್ಮ ವಿದೇಶ ಪ್ರವಾಸದ ಉದ್ದೇಶ ಮತ್ತು ಅಧ್ಯಯನದ ವಸ್ತು ವಿಷಯವನ್ನು ವಿವರಿಸಿ ಅದನ್ನು ಸಮರ್ಥಿಸಿಕೊಳ್ಳಬಹುದಿತ್ತಲ್ಲವೆ. ಯಾಕೆ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಇಷ್ಟೊಂದು ಟೀಕೆಗೆ ಗ್ರಾಸವಾದರು. ಅಸಲಿಯತ್ತು ಏನೆಂದರೆ ಮುಖ್ಯವಾಗಿ ಹೋಗುವುದಕ್ಕೆ ಕಾರಣವೇ ಇಲ್ಲಾ. ಅಧ್ಯಯನ ಎಂಬುದು ಕೇವಲ ನೆಪವಷ್ಟೆ. ಇಷ್ಟಕ್ಕು ಅಧ್ಯಯನಕ್ಕೆ ಹೋಗುವವರ ಜೊತೆ ಹೆಂಡತಿ, ಮಕ್ಕಳ ಅಗತ್ಯವಾದರು ಏನಿತ್ತು. ಹೋಗಲಿ ಇವರ ಅಧಿಕೃತ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ ಅಧ್ಯಯನದ ವಾಸನೆ ಎನಾದರು ಬಡಿಯುತ್ತಾ ಎಂದು ಮೂಸಿದರೆ ಅಲ್ಲಿ ಬರೀ ವಿದೇಶಿ ಐಷಾರಾಮಿ ಹೋಟೆಲ್ ಗಳ ಘಮಲು. ಇದು ನಮ್ಮ-ನಿಮ್ಮೆಲ್ಲರ ದುರಾದೃಷ್ಟ ಮತ್ತು ಎಂದಿಗು ತೊಲಗದ ಅನಿಷ್ಟ.

ಸರ್ಕಾರ ಖಡಾಖಂಡಿತವಾಗಿ ವರ್ತಿಸಿದ್ದರೆ ಇಂದು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವಂತಹ ಸನ್ನವೇಶ ಸೃಷ್ಟಿಯಾಗುತ್ತಿರಲಿಲ್ಲ. ಇಷ್ಟಕ್ಕು ಸರ್ಕಾರದ ಬೊಕ್ಕಸದಿಂದ ಎತ್ತಿ ದುಡ್ಡು ಕೊಟ್ಟು ವಿದೇಶ ಪ್ರವಾಸ ಮಾಡಿಸುವ ದುರ್ದು ಯಾರಿಗೂ ಇರಲಿಲ್ಲ. ಅದ್ಯಾಕೋ ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಜನ ಮೆಚ್ಚುಗೆಯ ನಿರ್ಧಾರ ತೆಗೆದು ಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಂತು ಸ್ಪಷ್ಟ. ಆದರೆ ಈ ಎಲ್ಲ ಶಾಸಕರ ವಿದೇಶಿ ವೆಚ್ಚವನ್ನು ಅವರ ಜೇಬಿನಿಂದಲೇ ಭರಿಸುವಂತೆ ಮಾಡಿ ಆದ ಅವಮಾನವನ್ನು ಕೊಂಚ ಮಟ್ಟಿಗಾದರು ತಗ್ಗಿಸುವ ಧೈರ್ಯ ಸರ್ಕಾರ ತಾಳಲಿ ಎಂಬುದೆ ಎಲ್ಲ ಜನರ ಆಶಯ. ಆದರೆ ಇವೆಲ್ಲವುಗಳ ಮಧ್ಯೆ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಇನ್ನು ಐದಾರು ತಿಂಗಳಿಗೆ ಚುನಾವಣೆ ಘೋಷಣೆಯಾಗಿ ಮತ್ತೆ ಈ ಎಲ್ಲ ಮಹಾನುಭಾವರು ಮತ ಕೇಳಲು ನಮ್ಮ ಮುಂದೆ ಬಂದು ನಿಲ್ಲುತ್ತಾರೆ. ಒಂದು ವೇಳೆ ಮತ್ತೆ ಇವರೆ ಶಾಸಕರಾಗಿ ಚುನಾಯಿತರಾದರೆ…… ಶಂಭೋ…. ಶಂಕರಾ…

 
1 ಟಿಪ್ಪಣಿ

Posted by on ಸೆಪ್ಟೆಂಬರ್ 8, 2012 in ರಾಜ್ಕೀಯ

 

ಟ್ಯಾಗ್ ಗಳು: