RSS

ಒಳ್ಳೆಯ ಸಿನಿಮಾ ಮಾಡದ ನಮ್ಮ ಚಿತ್ರರಂಗದವರಿಗೆ “ಡಬ್ಬಿಂಗ್” ಡೊಂಕೆ..!

25 ಏಪ್ರಿಲ್

ಮೊದಲೆ ಸತತ ಸೋಲು ಹಾಗೂ ವಿವಾದಗಳಿಂದ ಕಂಗೆಟ್ಟ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸುಂಟರಗಾಳಿ ಎದ್ದಿದೆ. ಅದು ಡಬ್ಬಿಂಗ್ ಬೇಕೋ, ಬೇಡವೋ ಎಂಬ ಕೊನೆಗಾಣದ ವ್ಯರ್ಥ ಕಸರತ್ತಿನ ಚರ್ಚೆ. ಇಷ್ಟಕ್ಕೂ ಇದು ಕೇವಲ ನಿನ್ನೆ, ಮೊನ್ನೆ ಉದ್ಭವವಾದದ್ದಲ್ಲ, ಆಗಾಗ ಗುಮ್ಮನಂತೆ ಚಿತ್ರರಂಗದ ಕೆಲವರನ್ನು ಕಾಡುತ್ತಿದೆ. ಇಷ್ಟಕ್ಕೂ ಎಲ್ಲಿಯೂ ಸಮಸ್ಯೆಯನ್ನೆ ಸೃಷ್ಟಿಸಿದ ಡಬ್ಬಿಂಗ್ ವಿಷಯ ಕನ್ನಡ ಚಿತ್ರರಂಗದವರನ್ನು ಬೆಚ್ಚಿ, ಬೀಳಿಸುತ್ತಿರುವುದಾದರು ಯಾಕೆ?

ನಿಜಕ್ಕೂ ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಮಾರಕ, ಭಾಷೆ, ಕಾರ್ಮಿಕರು ಎಂದೆಲ್ಲ ಉದಾತ್ತತೆಯ ಬಗ್ಗೆ ಗಂಟಲು ಹರಿದುಕೊಳ್ಳುವ, ಪ್ರಾಣ ತ್ಯಾಗಕ್ಕು ಸಿದ್ಧರಾದ ನಮ್ಮ ಚಿತ್ರರಂಗದವರಿಗೆ ಕೆಲವು ಅಪಥ್ಯದ ಪ್ರಶ್ನೆಗಳು…

ನಿಜಕ್ಕೂ ಇಂದು ಯಾರೆಲ್ಲ ಡಬ್ಬಿಂಗ್ ಬೇಕು ಎಂದು ಹೇಳುತ್ತಿದ್ದೇವೋ ನಾವೆಲ್ಲ ಕನ್ನಡದ ಮೇಲೆ ಪ್ರೀತಿ ಇರುವವರು ಮತ್ತು ಹೆಚ್ಚಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೆ. ಆದರೆ ಭಾಷೆಯನ್ನೆ ಗುರಾಣಿಯಾಗಿಟ್ಟುಕೊಂಡು ಡಬ್ಬಿಂಗ್ ವಿರೋಧಿಸುವ ನೀವು ಕನ್ನಡದ ಉಳಿವಿಗೆ ಅದೆಂತಹ ಮಹಾತ್ಕಾರ್ಯಗಳನ್ನು ಕೈಗೊಂಡಿದ್ದೀರಿ ಸ್ವಲ್ಪ ವಿಶದವಾಗಿ ವಿವರಿಸಿ. ಹಾಗೆಯೇ ನಮ್ಮ ಇತ್ತೀಚಿನ ಕನ್ನಡ ಚಿತ್ರಗಳು ( ಏಕೆಂದರೆ ನಿಜುಕ್ಕೂ ಭಾಷೆಯನ್ನು ಸಮೃದ್ಧಗೊಳಿಸುವಂತಹ ಉತ್ತಮ ಸದುಭಿರುಚಿಯ ಚಿತ್ರಗಳು ಕನ್ನಡಕ್ಕೆ ಕಲಶದಂತಿದ್ದವು ಅದು ಆ ಕಾಲ) ಭಾಷೆಯನ್ನ ಕಾಪಾಡುವಲ್ಲಿ ಹೇಗೆಲ್ಲಾ ಶ್ರಮಿಸುತ್ತಿವೆ ಎಂದು ತಿಳಿಸಿ ಕೊಡಿ. ಅದ್ಯಾವ ಮಹಾನುಭಾವ ಇತ್ತೀಚಿನ ಕನ್ನಡ ಚಿತ್ರಗಳನ್ನು ನೋಡಿ ಕನ್ನಡದ ಭಾಷೆಯ ಬಗ್ಗೆ ಅಪ್ರತಿಮ ಅಭಿಮಾನವನ್ನು ಪ್ರದರ್ಶಿಸಿದ ಉದಾಹರಣೆಗಳಿದ್ದರೆ ನಮಗೂ ಸ್ವಲ್ಪ ಹೇಳಿ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಐದಾರು ದಶಕದೀಚೆಗೆ ಕಣ್ಣುಬಿಟ್ಟ ಚಿತ್ರರಂಗ ಸಾಕಿ, ಸಲುಹುತ್ತಿದೆ ಎಂಬೆಲ್ಲಾ ಬಿಲ್ಡ್ ಪ್ ಗಳು ದಯವಿಟ್ಟು ಬೇಡ. ಕನ್ನಡ ಭಾಷೆ ವಜ್ರ ಕಾಯವುಳ್ಳದ್ದು, ಅದರ ಒಂದಂಗುಲವನ್ನು ಡಬ್ಬಿಂಗ್ ಎಂಬ ಶಬ್ದ ಮಿಸುಕಾಡಿಸಲಾಗದು. ಅದಕ್ಕೆ ಚಿತ್ರರಂಗದವರ ರಕ್ಷಣೆಯ ಅಗತ್ಯವಿಲ್ಲ.

ಇನ್ನು ಎರಡನೇಯದಾಗಿ ತಾವು ಸೃಜನಶೀಲತೆಯ ಬಗ್ಗೆ ಮಾತನಾಡುತ್ತೀರಿ. ದಯವಿಟ್ಟು ಸ್ವಲ್ಪ ಮಾಹಿತಿ ಕೊಡಿ ಒಂದು ದಶಕದಿಂದೀಚೆಗೆ ಬಂದ ಅದೆಷ್ಟು ಕನ್ನಡ ಚಿತ್ರಗಳಲ್ಲಿ ಸ್ವಂತಿಕೆಯ ಘಮಲು ತುಂಬಿದೆ ಎಂದು ಹೇಳಬಲ್ಲಿರಾ? ನೀವು ಅದ್ಯಾವ ಚಿತ್ರದ ಕಥೆ, ಸಂಗೀತ, ಸಾಹಿತ್ಯ, ದೃಶ್ಯ ಕಲ್ಪನೆ, ಹಾಸ್ಯ, ಸಂಭಾಷಣೆ, ಕದಿಯುವದರ ಜೊತೆಗೆ ಅನ್ಯ ಭಾಷೆಯ ಇಡೀ ಚಿತ್ರವನ್ನೆ ಕನ್ನಡಕ್ಕೆ ಭಟ್ಟಿ ಇಳಿಸಿದ್ದೀರಿ ಎಂಬುದರ ಸಂಪೂರ್ಣ ವಿವರಗಳನ್ನು ಕನ್ನಡದ ಪ್ರೇಕ್ಷಕರು ನಿಮಗೆ ಇಂಚಿಂಚೂ ನೀಡಬಲ್ಲರು. ಸವಾಲು ಎದುರಿಸುವ ಧೈರ್ಯವಿದೆಯೇ? ಇಷ್ಟಕ್ಕೂ ಅದೆಷ್ಟು ಚಿತ್ರಗಳನ್ನು ಪ್ರೇಕ್ಷಕರ ಸದುಭಿರುಚಿಗಾಗಿ ಮಾಡಿದ್ದೀರಿ ಎಂಬುದನ್ನು ಹೇಳಬಲ್ಲಿರಾ? ಇಂದು ಕನ್ನಡ ಚಿತ್ರಗಳಲ್ಲಿ ಕಾಣುವ ಕೆಟ್ಟಾತೀಕೆಟ್ಟ ಐಟಂ ಸಾಂಗ್, ರಕ್ತದೋಕುಳಿ, ಕಥೆಯೇ ಇಲ್ಲದ ಚಿತ್ರಗಳು, ಕೀಳು ಅರ್ಥದ ಸಂಭಾಷಣೆಗಳು ಇವೆಲ್ಲಾ ಮೂಲತಃ ಕನ್ನಡ ಚಿತ್ರಗಳ ಪರಂಪರೆಯ ಪ್ರತೀಕವೇ? ಇವುಗಳನ್ನೆಲ್ಲಾ ಎಲ್ಲಿಂದ ಆಮದು  ಮಾಡಿ ಕೊಂಡಿರಿ ಎಂಬುದರ ಜಾತಕ ಬಿಚ್ಚಿಡುತ್ತೀರಾ? ಇಷ್ಟೆಲ್ಲಾ ಕದ್ದು ಚಿತ್ರ ಮಾಡುವ ಜನಗಳೆ ತುಂಬಿರುವ ಕನ್ನಡ ಚಿತ್ರರಂಗದವರು ಸೃಜನಶೀಲತೆಯ ಬಗ್ಗೆ ಮಾತನಾಡಿದರೆ ಅದೆಲ್ಲಿಂದ ನಗೋಣಾ ಸ್ವಾಮಿ.

ನಿಮ್ಮ ಬತ್ತಳಿಕೆಯಲ್ಲಿರುವ ಇನ್ನೊಂದು ಅಸ್ತ್ರ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ ಎಂಬುದು. ಇದಂತು ಮಹಾ ದೊಡ್ಡ ಜೋಕು. ಕಾರಣ ಇಂದಿನ ಪರಿಸ್ಥಿತಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಸೇರಿಸಿದರೆ ವರ್ಷಕ್ಕೆ 10 ಕನ್ನಡ ಭಾಷೆಗೆ ಡಬ್ಬಿಂಗ್ ಆಗಬಲ್ಲ ಚಿತ್ರಗಳು ದೊರಕುವುದು ದುರ್ಲಭ. ಅಂತಹದ್ದರಲ್ಲಿ ದಿನ ಬೆಳಗಾಗುವುದುರೊಳಗೆ ಕನ್ನಡ ಚಿತ್ರರಂಗ ಮುಚ್ಚಿಕೊಂಡು ಹೋಗಿ ಬಡುತ್ತದೆ ಎಂಬಂತೆ ಬೊಬ್ಬೆ ಹಾಕುವ ಅಗತ್ಯವಾದರು ಏನು? ಇಷ್ಟಕ್ಕೂ ತೆರೆ-ಮರೆಯಲ್ಲಿ ಬೆವರು ಸುರಿಸುವ ಕಾರ್ಮಿಕ ವರ್ಗಕ್ಕೆ ಇಂದು ಡಬ್ಬಿಂಗ್ ವಿರೋಧಿಸುವ ಜನ, ಕಾರ್ಮಿಕರು ಉಪವಾಸವಿದ್ದಾಗ ಊಟ ಕೊಟ್ಟು ಸಲುಹಿದ ನಿದರ್ಶನಗಳೇನಾದರು ಇವೆಯಾ? ಅದೆಷ್ಟೋ ಆಗಿನ ಸಹ ಕಲಾವಿದರು, ನಿರ್ದೇಶಕರು, ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ವ್ಯಕ್ತಿಗಳು ಇಂದು ಬದುಕಿನ ಒಂದೊಂದು ದಿನವನ್ನುಪಡಬಾರದ ಕಷ್ಟ ಪಟ್ಟು ಮುಂದೂಡುತ್ತಿರುವಾಗ ಯಾವ್ಯಾವ ನಿರ್ಮಾಪಕರು ಅವರ ಬೆಂಬಲಕ್ಕೆ ಹೋಗಿದ್ದಿದೆ ನೀವೆ ಹೇಳಿ. ತಮ್ಮದೆ ಚಿತ್ರದಲ್ಲಿ ದುಡಿದ ಎಲ್ಲಾ ಕಾರ್ಮಿಕರಿಗೆ ಅದೆಷ್ಟು ನ್ಯಾಯಬದ್ಧ ವೇತನ ನೀಡುತ್ತಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವೇ?

ಇನ್ನು ಟೆಲಿವಿಷನ್ ಅವರ ವಿಷಯಕ್ಕೆ ಬಂದರೆ ಇಲ್ಲಿಯೂ ಅದೇ ರಾಗ ಅದೇ ಹಾಡು. ಪರಭಾಷಾ ಧಾರಾವಾಹಿಗಳನ್ನು ಚಾನೆಲ್ ನವರಿಂದ ಎರವಲು ಪಡೆದು ಹೇಗಾದರು ಮಾಡಿ ಒಂದು ಸ್ಲಾಟ್ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ನಿರ್ಮಾಪಕರು ಅದೆಷ್ಟು ಉತ್ತಮ ಧಾರಾವಾಹಿಗಳನ್ನು ದಿನ ನಿತ್ಯ ಉಣ ಬಡಿಸುತ್ತಿದ್ದಾರೆ ಹೇಳಿ ನೋಡೋಣ. ಇಂದು ಕನ್ನಡದಲ್ಲಿರುವ ಎಲ್ಲಾ ಮನರಂಜನಾ (ಕಸ್ತೂರಿ ಹೊರತು ಪಡಿಸಿ) ಚಾನೆಲ್ಗಳು ಮೂಲತಃ ಬೇರೆ ರಾಜ್ಯದವರದ್ದು. ಅವರ ಒಡೆತನದ ಬೇರೆ, ಬೇರೆ ಭಾಷೆಯ ಧಾರಾವಾಹಿಗಳೆ ಇಂದು ಆಯಾ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ರಿಮೇಕ್ ನ್ನು ನೀವು ಅಷ್ಟೊಂದು ಆಪ್ತತೆಯಿಂದ ಅಪ್ಪಿಕೊಂಡಿರುವಾಗ ಅದರ ಬದಲು ಮೂಲ ಧಾರಾವಾಹಿಯನ್ನೆ ಡಬ್ಬಿಂಗ್ ಮಾಡಿ ನೋಡಬಹುದಲ್ವೆ. ಅದ್ಯಾವ ಘನ ಅಭಿಮಾನಕ್ಕೆ ನಿಮ್ಮ ನಿರ್ಮಾಣವನ್ನು ಬೆಂಬಲಿಸಬೇಕು.

ಇದೊಂದು ಕೈಲಾಗದವರು ಮೈಯೆಲ್ಲಾ ಪರಿಚಿ ಕೊಳ್ಳುವ ಪರಿ ಅಷ್ಟೆ. ಉತ್ತಮವಾದದ್ದು ಎಲ್ಲಿಯೇ ಇರಲಿ, ಯಾವ ಭಾಷೆಯಲ್ಲಾದರು ಇರಲಿ ಅದನ್ನು ಒಪ್ಪಿಕೊಳ್ಳಬೇಕು. ರಿಮೇಕ್ ಹೇಗೆ ಸ್ವೀಕರಿಸಿದ್ದೇವೋ, ಡಬ್ಬಿಂಗ್ ಕೂಡಾ ಹಾಗೆಯೇ. ಒಂದು ವೇಳೆ ನಿಮಗೆ ಚಿತ್ರರಂಗದ ಬಗ್ಗೆ ಅಷ್ಟೊಂದು ಕಾಳಜಿ ಇರುವುದಾದರೆ ರಿಮೇಕ್ ನ್ನು ಬಹಿಷ್ಕರಿಸಿ, ಅದನ್ನೂ ನಮ್ಮಲ್ಲಿ ಬ್ಯಾನ್ ಮಾಡೋಣ. ಅದು ಬಿಟ್ಟು “ ಕುಣಿಯಲು ಬರದವನಿಗೆ ನೆಲ ಡೊಂಕು “ ಎಂಬಂತೆ ನಿಮ್ಮ ಸ್ವ ಹಿತಾಸಕ್ತಿಗೆ ಡಬ್ಬಿಂಗ್ ವಿರೋಧದ ಮುಖವಾಡವೇಕೆ.

ಇಂದು ನಮ್ಮ ಸಂಸ್ಕೃತಿಯನ್ನೆ ಮರೆಸುತ್ತಿರುವ ತಲೆ ಬುಡವಿಲ್ಲದ ಚಿತ್ರಗಳ ಉದ್ಧಾರಕ್ಕೆ ಎನ್ ಜಿ ಸಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ನಲ್ಲಿ ಬರುವ ಅಪರೂಪದ ಮಾಹಿತಿಯೊಳಗೊಂಡ ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲಿಯೂ ಪ್ರಸಾರವಾಗಿ ಮಕ್ಕಳ ಜ್ಞಾನ ಬಂಢಾರ ಉತ್ತಮಗೊಳ್ಳಲಿ. ನಮ್ಮವರಿಂದ ಎಂದು ನಿರ್ಮಿಸಲಾಗದ ಹಾಲಿವುಡ್ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಆ ಅದ್ಭುತ ಅನುಭೂತಿಯನ್ನು ನಾವು ಅನುಭವಿಸುವಂತಾಗಲಿ. ಈಗಾಗಲೇ ಡಬ್ಬಿಂಗ್ ಗೆ ಬೆಂಬಲ ವ್ಯಕ್ತಪಡಿಸಿರುವ ಹಲವರು ಡಬ್ಬಿಂಗ್ ಯಾಕೆ ಬೇಕು ಎಂಬ ಪ್ರಬುದ್ಧ ಸಮರ್ಥನೆಯನ್ನು ಹಂಚಿಕೊಂಡಿದ್ದಾರೆ. ಜ್ಞಾನ ವೃದ್ಧಿಗೆ, ಹೊಸ ತನಕ್ಕೆ ಸದಾ ತೆರೆದು ಕೊಳ್ಳಲೆ ಬೇಕು. ಇಲ್ಲದಿದ್ದರೆ ನಿಂತ ನೀರು ರಾಡಿಯಾಗುತ್ತದೆ, ಕೊಚ್ಚೆಯಾಗುತ್ತದೆ. ಅದರ ಪ್ರತಿ ಫಲನ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಮ್ಮ ಬೇಳೆ ಬೇಯೋದಿಲ್ಲ ಎಂಬ ಒನ್ ಲೈನ್ ಅಜೆಂಡಾ ಇಟ್ಟಕೊಂಡವರು ಮಾತ್ರ ಡಬ್ಬಿಂಗ್ ನ್ನು ಹೇಗಾದರು ದೂರ ಇಡೋಣ ಎಂದು ಇಲ್ಲದ ಗುಲ್ಲೆಬ್ಬಿಸುತ್ತಿದ್ದಾರೆ. ಡಬ್ಬಿಂಗ್ ಬೇಕೋ, ಬೇಡವೋ ಎಂಬುದರ ಆಯ್ಕೆ ಪ್ರೇಕ್ಷಕರದ್ದೆ ಹೊರತು ಚಿತ್ರರಂಗದವರದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿಗೆ ಡಬ್ಬಿಂಗ್ ಅಪರಾಧವಲ್ಲ. ನ್ಯಾಯಾಲಯದ ಮೆಟ್ಟಿಲೇರಿದರೆ ತೀರ್ಪು ಏನಾಗಬಹುದು ಎಂಬುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಅಲ್ಲವೇ!

Advertisements
 

3 responses to “ಒಳ್ಳೆಯ ಸಿನಿಮಾ ಮಾಡದ ನಮ್ಮ ಚಿತ್ರರಂಗದವರಿಗೆ “ಡಬ್ಬಿಂಗ್” ಡೊಂಕೆ..!

 1. Smita hungund

  ಏಪ್ರಿಲ್ 30, 2012 at 12:57 ಅಪರಾಹ್ನ

  superb

   
 2. Shivaprakash

  ಜೂನ್ 3, 2012 at 2:32 ಫೂರ್ವಾಹ್ನ

  ವಿಜಯ ಕುಮಾರ್,
  ನೀವು ಅವಧಿ”ಯಲ್ಲಿ ಬರೆದ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ (http://avadhimag.com/?p=54457)
  ತಮ್ಮ ಬುಡ ಬೇರುಗಳನ್ನ ಭದ್ರಪಡಿಸಿಕೊಳ್ಳುವ ಹಪಾಹಪಿಯಲ್ಲಿ ಇಲ್ಲಸಲ್ಲದ ವಾದಗಳನ್ನ ಮುಂದಿಡುತ್ತಾ ಇದ್ದಾರೆ ಈ ಡಬ್ಬಿಂಗ್ ವಿರೋಧಿಗಳು. ಪರಭಾ್ಷಾ ಚಿತ್ರಗಳ ಬಿಡುಗಡೆಯನ್ನು ತಡೆಗಟ್ಟೋ ಶಕ್ತಿ ಇಲ್ಲದ ಈ ಮಂದಿ ಯಾವುದೇ ಸಂಘ/ಶಕ್ತಿಗಳ ಬೆಂಬಲವಿಲ್ಲದ ಸಾಮಾನ್ಯ ಜನತೆಗಳಾದ ಡಬ್ಬಿಂಗ್ ಪರ ವ್ಯಕ್ತಿಗಳ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಾ ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ. “Prevention is better than cure” ಎಂಬಂತೆ ಡಬ್ಬಿಂಗ್ ಅನ್ನು ಮೂಲದಲ್ಲಿಯೇ ಹೊಸಕಿಹಾಕುತ್ತಿದ್ದಾರೆ. ಇದಕ್ಕೆ ಕನ್ನಡದ ಪ್ರಮುಖ ಪತ್ರಿಕೆಯೊಂದು ತನ್ನ ಅಸ್ಖಲಿತ ಬೆಂಬಲವನ್ನೂ ನೀಡುತ್ತಿದೆ (ಏಕೆಂದರೆ ಆ ಪತ್ರಿಕೆ ಮಾಲಿಕರಿಗೂ ನಮ್ಮ ಕನ್ನಡ ಚಿತ್ರರಂಗದ ಕುಮಾರತ್ರಯರಿಗೂ ಹತ್ತಿರದ ಸಂಬಂಧ). ಸ್ವಂತ ಕಥೆಯುಳ್ಳ ಸಿನೆಮಾ ಹಾಗಿರಲಿ ರಿಮೇಕ್-ಅನ್ನೂ ಸರಿಯಾಗಿ ತಯಾರಿಸಲು ಬರದ ಇಂಥಾ ವ್ಯಕ್ತಿಗಳು ಇನ್ನೂ ಒಂದೆರಡು ದಶಕಗಳ ಕಾಲ ಹೀಗೇ ತಮ್ಮ ಮಚ್ಚುಲಾಂಗುಗಳ ಸಿನೆಮಾ ಮಾಡುತ್ತಿದ್ದರೆ ಕನ್ನಡ ಚಿತ್ರರಂಗದ ಅವನತಿ ಖಚಿತ.

   
  • vijaykumarnargund

   ಜೂನ್ 5, 2012 at 12:10 ಫೂರ್ವಾಹ್ನ

   ಶಿವಪ್ರಕಾಶ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಕೊನೆಯಲ್ಲಿ ಹೇಳಿದಂತೆ ಚಿತ್ರರಂಗ ತನ್ನ ಗುಣಾತ್ಮಕ ಚಿತ್ರಗಳನ್ನು ನಿರ್ಮಾಣ ಮಾಡುವ ಕುರಿತು ಗಂಭೀರ ಚಿಂತನೆ ಮಾಡದಿದ್ದರೆ ಅವನತಿ ಖಂಡಿತಾ. ಈಗಾಗಲೇ ಮರಾಠಿ, ಬೆಂಗಾಲಿ ಚಿತ್ರರಂಗಗಳು ಹಿಂದಿ ಭಾಷೆಯ ಹೊಡೆತಕ್ಕೆ ನಲುಗಿವೆ. ಅವರ ಸರಿ,ಸಮನಕ್ಕೆ ಚಿತ್ರ ನಿರ್ಮಿಸಲಾಗದೆ ಸ್ಪರ್ಧೆಯಿಂದ (ವಾಣಿಜ್ಯ ಚಿತ್ರಗಳು) ಹಿಂದೆ ಸರಿದಿವೆ. ಆ ಸ್ಥಿತಿ ಇಲ್ಲಿಗೂ ಬಂದರೆ ಅಚ್ಚರಿ ಪಡಬೇಕಿಲ್ಲ ಅಷ್ಟೇ!

    

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: