RSS

Monthly Archives: ಮಾರ್ಚ್ 2012

ಗೂಂಡಾ ಲಾಯರ್, ಅಂಧಾ ಸರ್ಕಾರ

(ಇದೇ ಶೀರ್ಷಿಕೆಯೊಂದಿಗೆ ದಿನಾಂಕ 04.03.2012ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನನ್ನ ಕಿರು ಅಭಿಪ್ರಾಯ ಪ್ರಕಟಗೊಂಡಿರುತ್ತದೆ)

ಇದು ಕೇವಲ ದುರಂತವಲ್ಲ ಈ ರಾಜ್ಯದ ದೌರ್ಭಾಗ್ಯ ಎಂದು ವಿಶ್ಲೇಷಿಸಿದರೆ ತಪ್ಪಲ್ಲ. ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ. ಸತ್ಯ, ನ್ಯಾಯಕ್ಕೆ ತಲೆ ಬಾಗುತ್ತೇವೆ ಎಂದು ಪ್ರಮಾಣ ಮಾಡಿದ ಎರಡು ವ್ಯವಸ್ಥೆಗಳ ಬೇಜವಾಬ್ದಾರಿತನದ ಪ್ರತಿಫಲನವೇ ಮಾಧ್ಯಮದ ಮೇಲಿನ ಹಲ್ಲೆ. ಜನೇವರಿ 17ರಂದು ರಾಜಧಾನಿಯಲ್ಲಿ ಸತತ 7 ಗಂಟೆ ರಸ್ತೆ ಬಂದ್ ಮಾಡಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಳಿಸಿ ಎಲ್ಲರ ಕಟು ಟೀಕೆಗೆ ಒಳಗಾಗಿದ್ದ ಪುಂಡ ವಕೀಲರುಗಳು ನಿನ್ನೆ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿದ್ದು ಇಡೀ ನಾಗರಿಕ ಸಮಾಜವೆ ತಲೆ ತಗ್ಗಿಸುವಂತಹ ವರ್ತನೆ. ಒಂದು ಅಕ್ಷಮ್ಯ ಅಪರಾಧಕ್ಕೆ ಕಾನೂನು ಬಲ್ಲ ವಕೀಲರೆ ಕಾರಣವಾಗಿದ್ದು ಪ್ರಜಾಪ್ರಭುತ್ವ ಬಹು ದೊಡ್ಡ ಅಣಕ. ಸಂವಿಧಾನ ಒದಗಿಸಿರುವ ಹಕ್ಕಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ಅದರ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುವ ಮಾಧ್ಯಮದ ಕರ್ತವ್ಯಕ್ಕೆ ಚ್ಯುತಿ ತಂದಿದ್ದಲ್ಲದೆ ಮನಬಂದಂತೆ ಥಳಿಸಿದ ವಕೀಲರುಗಳು ಯಾವ ಗೂಂಡಾಗಳಿಗು ಕಡಿಮೆ ಇಲ್ಲ ಎನ್ನಬಹುದು. ಆದರೆ ಇಷ್ಟಕ್ಕೆಲ್ಲಾ ಮೂಕ ಸಾಕ್ಷಿಯಾದ ಪೊಲೀಸ್ ಇಲಾಖೆ ಹಾಗೂ ಸರ್ಕಾರಗಳು ಕೈ ಕಟ್ಟು ಕುಳಿತಿದ್ದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆಯೇ ಪ್ರತಿಯೊಬ್ಬರ ಮನದಲ್ಲಿ ಉಳಿದದ್ದು. ಸಾರ್ವಜನಿಕರು, ರೈತರು ಪ್ರತಿಭಟಿಸಿದರೆ ಕುರಿಗಳಂತೆ ವಾಹನದಲ್ಲಿ ತುಂಬಿಕೊಂಡು ಹೋಗಿ ಇಲ್ಲದ ಕೇಸುಗಳನ್ನೆಲ್ಲಾ ಹಾಕಿ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಸರ್ಕಾರ ಇಲ್ಲಿಯವರೆಗೂ ವಕೀಲರುಗಳ ದುಂಡಾವರ್ತನೆಗೆ ಯಾವ ಕ್ರಮಗಳನ್ನು ಕೈಗೊಳ್ಳದಿರುವುದನ್ನು ನೋಡಿದರೆ, ಇಲ್ಲಿ ಸರ್ಕಾರ ಅಸ್ತಿತ್ವದಲ್ಲಾದರು ಇದೆಯಾ ಎಂಬ ಅನುಮಾನ ಕಾಡುತ್ತೆ.

ಇವರೇನಾ ನ್ಯಾಯಪಾಲಕರು?

ಇವರೇನಾ ನ್ಯಾಯಪಾಲಕರು?

ಹಿಂದಿನಿಂದಲೂ ಹಲವು ಕಾನೂನು ವಿರೋಧಿ ಪುಂಡಾಟಗಳನ್ನು ಎಗ್ಗಿಲ್ಲದೆ ನಡೆಸಿಕೊಂಡು ಬರುತ್ತಿರುವ ವಕೀಲರಿಗೆ ಖಂಡಿತವಾಗಿಯೂ ಪಾಠ ಕಲಿಸಬೇಕಾದ ಅಗತ್ಯವಿದೆ. ತಮ್ಮ ಇತಿ-ಮಿತಿಗಳು ಮತ್ತು ಜವಾಬ್ದಾರಿಗಳನ್ನು ಮರೆತು ಮನಬಂದತೆ ವರ್ತಿಸಿದ ವಕೀಲರ ಈ ನಡುವಳಿಕೆ ಇಡೀ ವಕೀಲಿ ವೃತ್ತಿಯೆಡಗಿನ ಗೌರವದ ಸೌಧವೇ ಕುಸಿದು ಬೀಳುವಂತೆ ಮಾಡುತ್ತದೆ. ತಕ್ಷಣ ಸರ್ಕಾರ  ಗೂಂಡಾ ವರ್ತನೆ ತೋರಿದ ವಕೀಲರ ಮೇಲೆ ಕಠಿಣಾತಿ ಕಠಿಣ ಕ್ರಮ ಜರುಗಿಸದಿದ್ದರೆ, ಮುಂದೊಂದು ದಿನ ಸಾರ್ವಜನಿಕರೆ ಕೈಗೆ ಸಿಕ್ಕ ವಕೀಲರನ್ನು ಅಟ್ಟಾಡಿಸಿ ಹೊಡೆಯುವ ದುಸ್ಸಾಹಸಕ್ಕಿಳಿಯಬಹುದು. ಆ ಮೂಲಕ ಇಡೀ ಕಾನೂನು ವ್ಯವಸ್ಥೆಯೆ ಅಯೋಮಯಗೊಳ್ಳುವುದು ಖಂಡಿತಾ. ಇನ್ನಾದರು ಸರ್ಕಾರ  ಎಚ್ಚೆತ್ತು ಜವಾಬ್ದಾರಿಯುತವಾಗಿ ವರ್ತಿಸಲಿ ಎಂಬುದು ಪ್ರತಿಯೊಬ್ಬರ ಆಶಯ. ಆದರೆ ನಿಜಕ್ಕೂ ಅನಾಗರಿಕರಂತೆ ವರ್ತಿಸಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ವಕೀಲರುಗಳ ವರ್ತನೆ ಖಂಡನೀಯ. ಅವರುಗಳಿಗೆಲ್ಲಾ ಧಿಕ್ಕಾರವಿರಲಿ…

ಆದರೆ ದುರಂತವೆಂದರೆ ಘಟನೆಯ ನಂತರ ಸರ್ಕಾರ ಹಾಗೂ ಪೊಲೀಸ್ ರು ಎಚ್ಚೆತ್ತು ಕ್ರಮ ಕೈಗೊಂಡ ತಕ್ಷಣ ಮೆಲ್ಲಗೆ ಈ ಘಟನೆ ರಾಜಕೀಯ ಬಣ್ಣ ಬಳಿದುಕೊಳ್ಳುತ್ತಿದ್ದು, ಪರಿಸ್ಥಿತಿ ತಿಳಿಗೊಳ್ಳುವ ಬದಲು ಮತ್ತಷ್ಟು ವಿಕೋಪಕ್ಕೆ ತಿರುಗುತ್ತಿರುವುದು ಮಾತ್ರ ವಿಪರ್ಯಾಸ. ಕಾರಣ ವಕೀಲರ ಪರಿಷತ್ತಿನಲ್ಲಿರುವ ಅನೇಕ ಪ್ರತಿನಿಧಿಗಳು ಒಂದಲ್ಲಾ ಒಂದು ರಾಜಕೀಯ ಪಕ್ಷಗಳೆ ಜೊತೆ ಗುರುತಿಸಿ ಕೊಂಡಿರುವವರೆ. ಖುದ್ದು ಅಧ್ಯಕ್ಷರೇ ಬಿಜೆಪಿ ಪಕ್ಷದ ಮಾಜಿ ಶಾಸಕರು. ಹೀಗಿರುವಾಗ ಇದರ ಹಿಂದಿನ ಕಾಣದ ಕೈ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ನಿಜಕ್ಕೂ ಇದು ದುರದೃಷ್ಟಕರ. ಪೆಟ್ಟು ತಿಂದ ಮಾಧ್ಯಮದವರ ಬಗ್ಗೆ ಯಾರು ಬೆಂಬಲಕ್ಕೆ ನಿಲ್ಲದೆ, ಒಬ್ಬರ ಮೇಲೊಬ್ಬರು ರಾಡಿ ಎರೆಚುತ್ತಾ ವಿಷಯಕ್ಕೆ ರಾಜಕೀಯದ ವಿಷ ಬೆರಸುವಲ್ಲಿ ನಿರತರಾಗಿದ್ದಾರೆ. ಅಲ್ಲಿಗೆ ಇದರ ಮುಂದಿನ ಫಲಿತಾಂಶ ಏನು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಭವಿಷ್ಯದ ಸಾಮರಸ್ಯ ಹಾಗೂ ಮಾಧ್ಯಮಗಳಿಗೆ ಬೇಕಾದ ನಿರ್ಭಿಢೆ ಸ್ವಾತಂತ್ರದ ದೃಷ್ಟಿಯಿಂದ ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಾಧ್ಯಮದ ಹಿರಿಯರು ಮತ್ತು ವಕೀಲರು ನಿಷ್ಪಕ್ಷವಾಗಿ ಒಂದು ನಿಲುವಿಗೆ ಬರಬೇಕೆಂಬುದೆ ಪ್ರತಿಯೊಬ್ಬರ ಆಶಯ.

Advertisements
 
ನಿಮ್ಮ ಟಿಪ್ಪಣಿ ಬರೆಯಿರಿ

Posted by on ಮಾರ್ಚ್ 5, 2012 in ಅವಿಭಾಗೀಕೃತ

 
 
%d bloggers like this: