RSS

Monthly Archives: ಡಿಸೆಂಬರ್ 2011

ಮೈಲಿಗೆಯಾದ ಮನಸ್ಸುಗಳಿಗೆ ಮಡೆಸ್ನಾನವೇ ಮೇಧ್ಯ

ಬಹುಶಃ ನಮ್ಮೆಲ್ಲರ ಮನಸ್ಥಿತಿಯೇ ಅಂತಹದ್ದು ಏನಿಸುತ್ತೆ. ಯಾವುದಕ್ಕಾದರು ಅತಿಯಾಗಿ ಪ್ರತಿಕ್ರಿಯೆ ನೀಡುತ್ತೇವೆ. ಅದು ತಾರ್ಕಿಕ ಅಂತ್ಯ ಕಾಣುವುದರೊಳಗಾಗಿ ಆ ಚರ್ಚೆಯಿಂದ ಅಥವಾ ಮಂಥನದಿಂದ ವಿಮುಖರಾಗಿ ಮತ್ತೆಲ್ಲೋ, ಇನ್ನೆನನ್ನೋ ಅರಸುತ್ತಿರುತ್ತೇವೆ. ಹೀಗಾಗಿ ನಮ್ಮ ನಡುವಿನ ಎಲ್ಲ ಸಮಸ್ಯೆಗಳು ಜೀವಂತವಾಗಿವೆ ಹಾಗೂ ಸೀಸನಲ್ ಆಗಿ  ಪದೇ, ಪದೇ ಧುತ್ತನೆ ಎದ್ದು ನಿಲ್ಲುತ್ತವೆ.

ಸುಮಾರು ಚರ್ಚೆಗಳು, ಲೇಖನಗಳು ಬಂದ ನಂತರ ನಾನೀಗ ಈ ವಿಷಯ ಪ್ರಸ್ತಾಪಿಸುತ್ತಿರುವುದಕ್ಕೆ ಹಲವರು ಮನಸ್ಸಿನಲ್ಲಿ Issue is outdated ಎಂದು ಮೂಗು ಮುರಿದರೆ ಅಚ್ಚರಿಯಿಲ್ಲ. ಆದರೆ ಎಲ್ಲ ಚರ್ಚೆಗೆ ತೆರೆದು ಕೊಂಡು, ಪ್ರತಿ ಬರಹಗಳ ಮೇಲೆ ಕಣ್ಣಾಡಿಸಿದ ನಂತರ ನನ್ನ ಅವಗಾಹನೆಗೆ ನಿಲುಕಿದ ಅಭಿಪ್ರಾಯವನ್ನು ಹಂಚಿಕೊಳ್ಳುವ ಮನಸ್ಸಾಗಿ ಮತ್ತೆ ವಿಷಯವನ್ನು ಮೆದುಳಿನ ಮೇಲೆ ಎಳೆದು ಕೊಳ್ಳುತ್ತಿದ್ದೇನೆ.

ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ಈಗಾಗಲೇ ಅನೇಕ ಅಭಿಪ್ರಾಯ ಬೇಧಗಳಿಗೆ ಆಹಾರವಾಗಿ ಎಂಜಲೆಲೆ ಛೀದ್ರ, ಛೀದ್ರವಾಗಿದೆ. ಹಾಗೆಯೇ ಅನೇಕ ವಿಚಾರವಾದಿಗಳು ಮುಸರೆಯಾದಲ್ಲಿ ಗೋಮ ಹಚ್ಚುವ ಕಾಯಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಆದರು ಸಮಸ್ಯೆಗೆ ಪರಿಹಾರ ಲಭಿಸಲೇ ಇಲ್ಲಾ. ಎಲ್ಲಾ ಗೋಜಲು, ಗೋಜಲಾಗಿ ಉಂಡೆದ್ದ  ಎಲೆಯ ಮೇಲೆ ಉರುಳಾಡಿದ ನಂತರ ಎಲ್ಲ ಪದಾರ್ಥಗಳು ಕಲಸೋಗರ, ಮೇಲಸೋಗರ ಆಗುವಂತೆ ವಿಷಯ ಕೂಡಾ ಹಾಗೆಯೇ ಬದಿಗೆ ಸರಿದು ಹೋಗುತ್ತಿದೆ. ಮಾಧ್ಯಮಗಳು, ಚಿಂತಕರು ಹೊಸ ವಿಷಯಕ್ಕೆ ತಡಕಾಡುತ್ತಿದ್ದಾರೆ.

ವಿಪರ್ಯಾಸವೆಂದರೆ ಮಡೆಸ್ನಾನ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಬ್ರಾಹ್ಮಣ ಮತ್ತು ಅಬ್ರಾಹ್ಮಣ ನಡುವಿನ ಕಂದಕವನ್ನು ಮತ್ತಷ್ಟು ಗೆಬರಿ ಹಾಕಿತೇ ಹೊರತು, ವಿಷಯದ ಗಂಭೀರತೆ ಮತ್ತು ಮೌಢ್ಯವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಯಾವಂದು ಫಲಕಾರಿ ನಿರ್ಣಯಗಳು ಜೀವ ತಳಿಯಲೇ ಇಲ್ಲಾ. ಇಲ್ಲಿ ಕೇವಲ ಜಾತಿಯ ನೆಲೆಗಟ್ಟಿನಲ್ಲಿ ಒಂದು ವಿಷಯವನ್ನು ಹರಡಿಕೊಂಡು ಕುಳಿತಿದ್ದರ ಫಲವಾಗಿ ಮೂಲ ವಿಷಯ ಮರೆಯಾಗಿ ಕೆಲಸಕ್ಕೆ ಬಾರದ ಹೇಳಿಕೆಗಳು, ವಾದ, ಪ್ರತಿವಾದಗಳು ಕೇಳಿಬಂದವು ವಿನಹಃ ಯಾರು ಮೌಲಿಕವಾಗಿ ಮಾತನಾಡುವ ಧೈರ್ಯ ತೋರಲೆ ಇಲ್ಲಾ. ಈ ಮಡೆಸ್ನಾನ ಬಗ್ಗೆ, ತಮ್ಮ ತಥಾಗಥಿತ ಚಿಂತನೆ ಮಂಡಿಸಿದ ಎಷ್ಟೋ ಬುದ್ಧಜೀವಿಗಳು, ಪ್ರಗತಿಪರರು ಬೆಂಗಳೂರಿನಲ್ಲಿ ಕುಳಿತು ಚರ್ಚೆ ಮಾಡಿದರೆ ವಿನಃ ಎಷ್ಟು ಜನ ಕುಕ್ಕೆಗೆ ಹೋಗಿ, ಅಲ್ಲಿನ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವಾಸ್ತವವನ್ನು ಓರೆಗೆ ಹಚ್ಚಿದರೋ ಆ ಸುಬ್ರಹ್ಮಣ್ಯನೇ ಬಲ್ಲ.

ಇಲ್ಲಿ ಕೆಲವು ಹೇಳಿಕೆಗಳ ಅದೆಷ್ಟು ಅಪ್ರಸ್ತುತ ಎಂಬುದನ್ನು ಕೂಡಾ ಗಮನಿಸಬೇಕು. “ದಲಿತರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಬೇಕು”. “ಪೇಜಾವರರು ದಲಿತರ ಜೊತೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಲಿ”, “ಮಡೆಸ್ನಾನದ ಜೊತೆ ಪಂಕ್ತಿ ಭೇಧವೂ ನಿಷೇಧವಾಗಬೇಕು”, ಇಂತಹ ಹೇಳಿಕೆಗಳಿಂದ ಆರೋಗ್ಯವಂತ ಸಮಾಜದ ಸೃಷ್ಟಿ ಖಂಡಿತಾ ಸಾಧ್ಯವಿಲ್ಲ  ಎಂಬುದನ್ನು ಮನಗಾಣಬೇಕು. ವಿಧವೆಯರ ಕೈಯಿಂದ ರಥವನ್ನೆಳೆಸಿದ್ದ ಪೂಜಾರಿಯವರು ಮಡೆಸ್ನಾನದ ವಿಷಯದಲ್ಲೇಕೆ ಕುಕ್ಕೆಗೆ ಹೋಗಿ ತಿಳಿ ಹೇಳುವ ಪ್ರಯತ್ನ ಮಾಡಲಿಲ್ಲ. ಯಾಕೆ ಆಚಾರ್ಯ, ಪೇಜಾವರರು, ಸುರೇಶಕುಮಾರ್ ಮಡೆಸ್ನಾವನ್ನು ವಿರೋಧಿಸುವಂತಹ ಹೇಳಿಕೆ ನೀಡಲಿಲ್ಲ. ಅಷ್ಟೇಕೆ ವಿರೋಧ ಪಕ್ಷದ ಪ್ರಮುಖರೇಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆಚರಣೆಯ ವಿರುದ್ಧ ಸಿಡಿದೇಳಲಿಲ್ಲ. ವಿಷಯ very simple. ಇದು  ನಾಳೆ ವಿರೋಧಿಸುವವರ ಓಟಿಗೆ ಕನ್ನ ಬೀಳುವ ಸಾಧ್ಯತೆ ಇರುವಂತಹದ್ದು.ಹೀಗಾಗಿ ಯಾರಿಗೂ ಸುಖಾ ಸುಮ್ಮನೆ ತೊಂದರೆಯನ್ನು ಮೈಮೇಲೆ ಎಳೆದು ಕೊಳ್ಳುವ ಧೈರ್ಯವಿಲ್ಲ.

ಹಾಗೆಯೇ ವಿರೋಧಿಸಲು ನಮ್ಮಲ್ಲಿ ಕೇವಲ ಮಡೆಸ್ನಾನ ಒಂದೇ ಅಲ್ಲ. ಪ್ರತಿ ಹಳ್ಳಿ, ಹಳ್ಳಿಯಲ್ಲು ಇಂತಹ ನೂರೆಂಟು ಮೌಢ್ಯಗಳು ಮನೆ ಮಾಡಿವೆ. ಅವುಗಳ ಬಗ್ಗೆ ಯಾಕೆ ಯಾರು ಧ್ವನಿ ಎತ್ತುತ್ತಿಲ್ಲ. ಬಕ್ರೀದ್ ಸಮಯದಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಡುವುದು, ಮೊಹರಂನಲ್ಲಿ ಸ್ವಶಿಕ್ಷೆ ಎಂಬಂತೆ ಮೈತುಂಬಾ ಗಾಯ ಮಾಡಿಕೊಳ್ಳುವಂತಹ ವಿಷಯಗಳ ಬಗ್ಗೇಕೆ ಬಹಿರಂಗ ಚರ್ಚೆಗಳಾಗುತ್ತಿಲ್ಲ. ಪ್ಯಾನೆಲ್ ಡಿಸ್ಕಷನ್ ಮಾಡುವ ನಮ್ಮ ಮೀಡಿಯಾಗಳು ವಾರಕ್ಕೊಮ್ಮೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಏನೋ ರಹಸ್ಯವನ್ನು ದೃಶ್ಯೀಕರಿಸಿಕೊಂಡು ಬಂದವರಂತೆ ದೇವರು, ದೆವ್ವ, ಅಚ್ಚರಿ, ಪವಾಡ ಎಂದೆಲ್ಲ ಬಾಯಿ ಹರಿದು ಕೊಳ್ಳುವುದನ್ನು ವಿರೋಧಿಸುತ್ತಿಲ್ಲ. ಪ್ರಜಾಪ್ರಭುತ್ವ ನೀಡಿರುವ ಬಹು ದೊಡ್ಡ ವರದಾನವಾಗಿರುವ ಮತದಾನದ ನಂತರ ಯಾರಿಗೆ ಗೆಲುವು ಒಲಿಯಬಹುದು ಎಂಬುದನ್ನು ಜೋತಿಷಿಗಳ ಮೂಲಕ, ಸಂಖ್ಯಾಶಾಸ್ತ್ರಜ್ಞರ ಮೂಲಕ ವಿಮರ್ಶೆಗೆ ಒಳಪಡಿಸುವ ಕಾರ್ಯಕ್ರಮ ಮತದಾರರಿಗೆ ಅವಮಾನ ಮಾಡಿದಂತಲ್ಲವೇ! ಇದನ್ನೇಕೆ ಪ್ರಶ್ನಿಸುತ್ತಿಲ್ಲ. ಕೆದಕುತ್ತಾ ಹೋದರೆ ಇಂತಹ ನೂರೆಂಟು ಸಮಸ್ಯೆಗಳು ಕಾಲಿಗೆ ತೊಡರಿಕೊಳ್ಳುತ್ತವೆ. ಇವನ್ನೆಲ್ಲವನ್ನು ಚರ್ಚೆಗೆ ಎಳೆಯುವದು ಕೂಡಾ ಪ್ರಜ್ಞಾವಂತರ ಕರ್ತವ್ಯವಲ್ಲವೇ. ಈ ಕೆಲಸವೇಕೆ ಆಗುತ್ತಿಲ್ಲ.

ಮೌಢ್ಯವನ್ನು ವಿರೊಧಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಶ್ನೆಯನ್ನು ಎರಡು ಜಾತಿಗಳ ಮಧ್ಯ ಸಮೀಕರಿಸಿ ನೋಡುವ ದುರ್ದಾದರು ಏನಿತ್ತು. ಇವತ್ತು ಮೌಢ್ಯತೆ ಜಾತಿ, ಧರ್ಮ, ರಾಜ್ಯ, ದೇಶ ಇವುಗಳನ್ನೆಲ್ಲಾ ಮೀರಿದ್ದು. ಹೀಗಿರುವಾಗ ಮಡೆಸ್ನಾನವನ್ನು ಒಂದು ಜಾತಿಯವರು ಬಲವಂತವಾಗಿ ಮತ್ತೊಂದು ಜಾತಿಯ ಮೇಲೆ ಹೇರುವ ಕ್ರಿಯೆ ಎಂದು ನೋಡುವ ಮನಸ್ಥಿತಿ ಖಂಡಿತಾ ತಪ್ಪು. ಈ ಕಾರಣದಿಂದಾಗಿಯೇ ಮಡೆಸ್ನಾನದ ನಿಜವಾದ ಚರ್ಚೆ ನಡೆಯಲೇ ಇಲ್ಲಾ. ತಲೆ, ತಲಾಂತರದಿಂದ ನಡೆದುಕೊಂಡ ಬಂದ ಈ ಆಚರಣೆ ಬಲವಾಗಿ ಬೇರೂರಿದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಕೇವಲ ವಿರೋಧ, ಪ್ರತಿಭಟನೆ, ಚರ್ಚೆಗಳ ಬದಲಾಗಿ ಪ್ರತಿಯೊಬ್ಬರಿಗೆ ಸೂಕ್ತವಾದ counselling ಮಾಡುವ ಅಗತ್ಯವಿದೆ. ಯಾಕೆ ಮಡೆಸ್ನಾನ ಮೂಢ ಆಚರಣೆ ಎಂಬುದನ್ನು ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕಿದೆ. ಅಂದಾಗ ಮಾತ್ರ ಮನಸ್ಸಿನ ಅಂಧಕಾರವನ್ನು ಹೊರ ನೂಕಲು ಸಾಧ್ಯ.

ದಯವಿಟ್ಟು ಮಡೆಸ್ನಾನಕ್ಕೆ ಜಾತಿಯ ಬಣ್ಣ ಬಳಿಯುವದು ಬೇಡ. ಹಾಗೆಯೇ ರಾಜ್ಯದಲ್ಲಿ ಜಾಗೃತಿ ಮೂಡಿಸಲು ಇರುವುದು ಕೇವಲ ಮಡೆಸ್ನಾನ ಒಂದೇ ಅಲ್ಲ  ಇಂತಹ ನೂರೆಂಟು ಸಮಸ್ಯೆಗಳಿವೆ. ಎಲ್ಲವನ್ನು ಮುಖ್ಯವಾಹಿನಿಗೆ ತಂದು ಚರ್ಚೆಗೆ ದಾರಿ ಮಾಡಿ ಕೊಡೋಣ. ಪ್ರತಿಯೊಂದು ಮೌಢ್ಯತೆಗೆ ಸೂಕ್ತ ತಾರ್ಕಿಕ ಅಂತ್ಯ ದೊರಕಲಿ. ಅದು ಬಿಟ್ಟು ಆಳಕ್ಕೆ ಬಿದ್ದವರ ಮೇಲೆ ಆಳಿಗೊಂದು ಕಲ್ಲು ಎಂಬಂತೆ ಕೇವಲ ಮಡೆಸ್ನಾನದ ಬಗ್ಗೆಯೇ ಏಕೆ ಬೊಬ್ಬೆ ಹೊಡೆಯುವದು ಅಲ್ಲವೇ!

Advertisements
 
1 ಟಿಪ್ಪಣಿ

Posted by on ಡಿಸೆಂಬರ್ 11, 2011 in ಭಾವದ ಬಿಂಬಗಳು

 

ಟ್ಯಾಗ್ ಗಳು:

ಮತ್ತೊಮ್ಮೆ ಮಿಸ್ಡ ಕಾಲ್ ….

ಟೈಮ್ ಸುಮಾರು 11 ಮುಕ್ಕಾಲು ಆಗಿರಬಹುದಾ ಎಂದು ಕ್ರಿಶ್ ವಾಚ್ ನೋಡಿಕೊಳ್ಳುತ್ತಾನೆ. ಅವನ ಊಹೆ ಸರಿಯಾಗಿತ್ತು. ಘಂಟೆ 11:40. ಪ್ರತಿ ದಿನ 12ರ ಆಸುಪಾಸು ಅವನು ಕಾಫಿ ಹೀರಲು ರೆಸ್ಟ್ ರೂಮಿಗೆ ಹೋಗುವುದು ವಾಡಿಕೆ.“CREATIVE CREATOR”  ಎಂಬ Advertising Company  ಅವನ ಕೆಲಸ. ಬೆಳಗ್ಗೆ ಶಾರ್ಪ ಹತ್ತಕ್ಕೆ chairಗೆ ಒರಗಿದನೆಂದರೆ ಮತ್ತೆ ಕಾಫಿ ನೆನಪಾದಾಗಲೆ ಚಿತ್ತ ಬದಲಾಗುವುದು. ಅವನು ಕಂಪನಿಯ ದೊಡ್ಡ ಅಸೆಟ್. ಅವನು ಡಿಸೈನ್ ಮಾಡಿದ ಹಲವು ಆರ್ಡರ್ ಗಳಿಗೆ ಪ್ರಶಸ್ತಿ ಬಂದಿದೆ. ಕಂಪನಿಗೆ ಹೆಚ್ಚಿನ ಆರ್ಡರ್ ಗಳು ದಕ್ಕಿವೆ. ಆದರೆ ಯಶಸ್ಸಿನ ಕಿಕ್ ಯಾವತ್ತು ಅವನ ತಲೆ ಏರಿಲ್ಲ. ತಲೆ ಬಗ್ಗಿಸಿಕೊಂಡು ಕೆಲಸ ಮಾಡುವುದಷ್ಟೆ ಅವನಿಗೆ ಗೊತ್ತು. ಕೃಷ್ಣ ಎಂಬ ಅವನ ಹೆಸರು ಕಾರ್ಪೊರೆಟ್ ಜನಗಳ ಬಾಯಿಗೆ ಸಿಕ್ಕು ಕ್ರಿಶ್ ಆಗಿ ಹೋಗಿದೆ. ಇನ್ನೇನು ಕುರ್ಚಿಯಿಂದ ಏಳ ಬೇಕು ಅನ್ನುವಷ್ಟರಲ್ಲಿ ಕ್ರಿಶ್  ಫೋನ್ ರಿಂಗಾಯಿತು. ಅವನ ಮೊಬೈಲ್ ರಿಂಗಣಿಸುವುದು ಅಪ್ಪಟ ಕನ್ನಡ ಗೀತೆ “ಎನ್ನ ಹೃದಯ ಬನದಲಿ, ನಿನ್ನ ಪ್ರೀತಿಯ ಹೂವು ಅರಳಲಿ, ನೋವೋ, ನಲಿವೋ ನಿನ್ನ ಧ್ಯಾನವೇ ಈ ಜೀವಕೆ ಉಸಿರಾಗಿರಲಿ”, ಎಂಬ ಮಧುರ ಗೀತೆ ತೇಲಿ ಬರುತ್ತದೆ. ಹಿಪ್-ಹಾಪ್, ಹಿಂದಿ ರಿಂಗ್ಟೋನ್ಗಳ ಮಧ್ಯೆ ಇವನದು ಅಪ್ಪಟ ಕನ್ನಡ ಢಿಂ, ಢಿಮ. ಹೀಗಾಗಿ ಅದು ಅವನ ಮೊಬೈಲ್ ರಿಂಗ್ ಎಂದು ಯಾರು ಪ್ರತ್ಯೇಕವಾಗಿ ಹೇಳಬೇಕಿರಲಿಲ್ಲ. ಆದರೆ ಅದೇಕೋ ಎನ್ನ ಹೃದಯ ಬನದಲಿ, ನಿನ್ನ ಪ್ರೀತಿ ಅಂದ ತಕ್ಷಣ ಕಾಲ್ ಕಟ್ಟಾಯ್ತು. ಯಾವದಕ್ಕು ಅತಿಯಾಗಿ ಪ್ರತಿಕ್ರಿಯೆಸದ ಕ್ರಿಶ್ ಯಾಕೋ ಒಂದು ಕ್ಷಣ ಕಿರಿ,ಕಿರಿ ಪಟ್ಟ. ಅದು ಅವನಿಗೆ ನೋವಿನ ಗೀತೆ. ಆದರು ಅದನ್ನು ವಿಚಿತ್ರವಾಗಿ ಎಂಜಾಯ್ ಮಾಡುತ್ತಾನೆ ಎಂಬುದು ಅವನಿಗಷ್ಟೆ ಗೊತ್ತು. ‘ತಥ್’! ಎಂದು ಕೊಂಡು ನಂಬರ್ ಕೂಡಾ ಚೆಕ್ ಮಾಡದೆ ಮೊಬೈಲ್ನ ಜೇಬಿಗೆ ಇಳಿಸಿ ಕಾಫಿ ಹೀರಲು ಹೊರಡುತ್ತಾನೆ.

ಕ್ರಿಶ್ ಹಾಗೆಲ್ಲ ಹರಟೆ ಹೊಡೆಯುವ ಜಾಯಮಾನದವನಲ್ಲ. ಒಂದು ರೀತಿ ರಿಸರ್ವ ಪರ್ಸನ್. ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವವನು. ಇದು ಎಷ್ಟೋ ಜನರ ಟೀಕೆಗೆ ಗ್ರಾಸವಾಗಿದ್ದರೆ, ಮತ್ತೆಷ್ಟೊ ಜನಕ್ಕೆ ಪ್ರಶಂಸೆ ಪಡುವಂತಿತ್ತು. ಅಂದು ಹಾಗೇ. ಒಂದಿಬ್ಬರು ಕಾಫಿ ಹೀರುತ್ತಾ, ಸೀಗರೇಟ್ ಎಳೆಯುತ್ತಿದ್ದರು. ಆದರೆ ಕ್ರಿಶ್ ಅವರ್ಯಾರು ತನಗೆ ಪರಿಚಯಸ್ಥರಲ್ಲ ಎಂಬಂತೆ ತನ್ನ ಪಾಡಿಗೆ ತಾನು ಹೋಗಿ ‘ಶ್ರೀನಿವಾಸ್ ಕಾಫಿ ಕೊಡು’, ಎಂದು ಹೇಳಿ ಒಂದು ಕಾಫಿ ತೆಗೆದುಕೊಂಡು ಸಿಗರೇಟಿಗೆ ಕಿಡಿ ಹೊತ್ತಿಸಿ ಅಲ್ಲೇ ಜೋರಾಗಿ ಒಂದು ದಮ್ ಎಳೆದು ಹಾಗೆಯೇ ನಿರಾಳವಗಿ ಹೊಗೆ ಬಿಟ್ಟು ಕಪ್ ಹಿಡಿದು ಸ್ಮೊಕಿಂಗ್ ಝೋನ್ ಕಡೆ ಹೆಜ್ಜೆ ಹಾಕುತ್ತಾನೆ.
*****
ಕ್ರಿಶ್ನ ಹೊಟ್ಟೆಯೊಳಗೆ ಕಾಫಿ ಮತ್ತು ಸಿಗರೇಟ್ನ ಹೊಗೆ ಇಳಿದರೆ ಅವನ ಕೆಲಸ ಮತ್ತೆರಡು ಗಂಟೆ ಎಡೆಬಿಡದೆ ಓಡುತ್ತೆ ಅಂತಾನೇ ಅರ್ಥ. ಹಾಗೇ chairಗೆ ಒರಗಿ ಮೊಬೈಲ್ ಟೇಬಲ್ ಮೇಲಿಟ್ಟು ಕಂಪ್ಯೂಟರ್ ಸ್ಕ್ರೀನ್ ಆನ್ ಮಾಡಿದ ತಕ್ಷಣ ಮತ್ತೆ ಮೊಬೈಲ್ ರಿಂಗಣಿಸಲು ಪ್ರಾರಭಿಸಿತು. ಧ್ಯಾನ ಭಗ್ನಗೊಂಡವರಂತೆ ಒಲ್ಲದ ಮನಸಿನಿಂದ ನಂಬರ್ ಕೂಡಾ ನೋಡದೆ ಕಾಲ್  ರಿಸೀವ್ ಮಾಡಿದಾಗ, ಆ ಕಡೆಯಿಂದ,

“ಇಡಿಯಟ್, ಮಿಸ್ ಕಾಲ್ ಕೊಟ್ಟ ತಕ್ಷಣ ಫೋನ್ ಮಾಡಬೇಕು ಅಂತಾ ಗೊತ್ತಾಗಲ್ವ” ಎಂಬ ಹೆಣ್ಣು ಧ್ವನಿ ಕಿರುಚುತ್ತಿತ್ತು. ಅವನು ಒಂದು ಕ್ಷಣ ತಬ್ಬಿಬ್ಬಾಗಿ ಮರುತ್ತರ ನೀಡಬೇಕು ಅನ್ನುವಷ್ಟರಲ್ಲಿ, ಮತ್ತೆ ಆ ಕಡೆಯಿಂದ “ಆಗಲೇ 15 ನಿಮಿಷದಿಂದ ಕಾಯ್ತಾ ಇದ್ದೀನಿ. ವೇಸ್ಟ ಫೆಲೋ. ಹುಡಗಿಯರ ಒಂದೇ ಒಂದು ಮಿಸ್ ಕಾಲ್ಗೆ ಎಷ್ಟೋ ಹುಡುಗರು ಜೊಲ್ಲು ಸುರಿಸ್ತಾ ಕಾಯ್ತಾ ಇರ್ತಾರೆ ಗೊತ್ತಾ. ನೀನು ಇದ್ದೀಯಾ. ಬೇಗ ಕಾಲ್ ಮಾಡೋಕೆ ಆಗಲ್ವಾ ಗುಬಾಲ್ಡು. ನಿನಗೋಸ್ಕರ ಕತ್ರಿಗುಪ್ಪೆ ಕಾಫಿ ಶಾಪ್ನಲ್ಲಿ ಕಾಯ್ತಾ ಇದ್ದೀನಿ. ಬೇಗ ಬಾ. ಇವತ್ತು ಟ್ರೀಟ್ ನಂದೇ. ನಿನ್ನೆ ಫೋನ್ ಕಳೆದದ್ದಕ್ಕೆ ಹೊಸ ಟಚ್ ಸ್ಕ್ರೀನ್ ತಗೊಂಡಿದ್ದೀನಿ. ನಿನಗೆ ಈಗಲೇ ತೋರಿಸಬೇಕು, ಬೇಗ ಬರದಿದ್ದರೆ ಕೊಂದು ಹಾಕಿ ಬಿಡ್ತೀನಿ ಹುಷಾರ್” ಎಂದ್ಹೇಳಿ ಟಪ್ ಅಂತ ಫೋನ್ ಕಟ್ ಮಾಡ್ತಾಳೆ. ಹುಡುಗಿಯ ಸಹವಾಸಕ್ಕೆ ಬಿದ್ದು ಪೆಟ್ಟು ತಿಂದ ಸಾಹೇಬ್ರಿಗೆ ಈಗ ಗರ್ಲಫ್ರೆಂಡ್ ಅಂದರೆ ಬೆಂಕಿ ತುಳಿದಂತೆ ಆಡುತ್ತಾರೆ. ಅಂತಹದ್ದರಲ್ಲಿ ‘ಇವಳ್ಯಾರು ತಗುಲಿ ಹಾಕ್ಕೊಂಡಳು’, ಎಂದು ತಲೆಗೆ ಹುಳ ಬಿಟ್ಟು ಕೊಳ್ಳುತ್ತಾನೆ. ಅನಗತ್ಯ ವಿಚಾರಕ್ಕೆ ಎಂದು ತಲೆ ಕೆಡಿಸಿ ಕೊಳ್ಳದ ಕ್ರಿಶ್ಗೆ ಯಾಕೋ ಧ್ವನಿ ಯಾರದ್ದು ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಆದರೆ ತಿಪ್ಪರಲಾಗ ಹಾಕಿದರು ನಂಬರ್ ಯಾರದ್ದು ಎಂದು ತಿಳಿಯುವದಿಲ್ಲ. ಎಲ್ಲೋ ಒಂದು ಕಡೆ ‘ಹೋಗಿ ಬಿಡ್ಲಾ’, ಎಂಬ ಅನುಮಾನ ಬಂದರು, ‘ಯಾಕೆ ಇಲ್ಲದ ಉಸಾಬರಿ, ಅವಳ್ಯಾವಳೋ, ಯಾವನಿಗೋ ಕಾಯ್ತಾ ಇದ್ದರೆ ನಾನ್ಯಾಕೆ ತಲೆ ಕೆಡಿಸಿ ಕೊಳ್ಳಬೇಕು’, ಎಂದು ಹಿಂದಿನ ಅನುಭವ ಎಚ್ಚರಿಸಲಾರಂಭಿಸುತ್ತದೆ. ಯಾಕೆಂದರೆ ಸಾಹೇಬ್ರು ಈಗಾಗಲೇ ಒಂದು ಹುಡುಗಿಯ ಹಿಂದೆ ಹೋಗಿ ಅಪ್ರತಿಮ ಅನುಭವ ಹೊಂದಿ ಮರಳಿ ಸಮಸ್ಥಿತಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮತ್ತೆ ಯಾಕೆ ಇಲ್ಲದ ಪ್ರಯಾಸ ಎಂಬ ಭಯ ಅವನನ್ನು ಹಿಡಿದೆಳೆಯಲು ಪ್ರಾರಂಭಿಸುತ್ತದೆ.

Missed Call

ಆದರೆ ಹತ್ತೆ ನಿಮಿಷ. ಮತ್ತೆ ಮಿಸ್ ಕಾಲ್ ಬಂದಾಗ ಈ ಹೂ ಹೃದಯ ಬನದಿ ಅರಳಬಹುದೆನೋ ಎಂಬ ಆಸೆ ಚಿಗುರಲಾರಂಭಿಸುತ್ತದೆ. ‘ಬಹುಶಃ ನನ್ನನ್ನು ಎಲ್ಲೊ ಗಮನಿಸಿರಬೇಕು. ಅದಕ್ಕೆ ಹೇಗೋ ನಂಬರ್ ಜಮಾಯಿಸಿ ಕಾಲ್ ಹೊಡೆದಿದ್ದಾಳೆ’, ಎಂಬ ಅದ್ಭುತ ಜ್ಞಾನೋದಯವಾಗಲಾರಂಭಿಸುತ್ತದೆ. ಇಷ್ಟಕ್ಕು ಕ್ರಿಶ್, ಹುಡುಗಿಯರು ಹಿಂದೆ ಬೀಳುವಂತಹ ಹುಡುಗನೆ. 6 ಅಡಿ ಎತ್ತರ, ಜಿಮ್ನಲ್ಲಿ ಬೆಂಡೆತ್ತಿದ ಬಾಡಿ, ಕಾಲಿಗೆ ಒರಗಿದ ಜೀನ್ಸ, ಸದಾ ಹಾಕುವ ಕ್ಯಾಸುವಲ್ ಶಟ್ರ್ಸ ಎಂತಹ ಹುಡುಗಿ ಕೂಡಾ ಒಂದು ಕ್ಷಣ ನಿಂತು ನೋಡಬಹುದು, ಹಾಗಿದ್ದಾನೆ. ಹೀಗಿರುವಾಗ ಕಾಲ್ ಮಾಡಿ ಬರೋದಿಕ್ಕೆ ಹೇಳ್ತಿದ್ದಾಳೆ ಎಂದರೆ ಅವಳಿಗೆ ನಾನು ಚೆನ್ನಾಗಿ ಗೊತ್ತಿರಬಹುದು ಎಂಬ ಯುರೇಕಾ ತಲೆಗೆ ಬಂದು ಹೋಗುವುದೇ ಸರಿ ಎಂಬ ನಿರ್ಧಾರಕ್ಕೆ ಬರುತ್ತಾನೆ.

ಸಿಇಓ ಚೆಂಬರ್ಗೆ ಬಂದು, ಸರ್ ಅರ್ಧ ದಿನ ರಜೆಗೆ ಪರ್ಮಿಶನ್ ಬೇಕಿತ್ತು. ಯಾರೋ ಗೆಸ್ಟ ಸಿಗೋಕೆ ಹೇಳಿದಾರೆ, ಎಂದು ತಡವರಿಸುತ್ತಾ ಕೇಳಿದಾಗ ದಣಿವರಿಯದೆ ತಲೆ ತಗ್ಗಿಸಿಕೊಂಡು ಕೆಲಸ ಮಾಡಿದ ಇವನಿಗೆ ಇಲ್ಲಾ ಎಂದು ಹೇಳುವ ಮನಸು ಬರದೆ ಕ್ಯಾರಿ ಆನ್ ಎಂದು ಹೇಳಿ ಕಳಿಸುತ್ತಾರೆ. ಯಾವುದೋ ಅವ್ಯಕ್ತ ಸಂಭ್ರಮದಿಂದ ಹೊರಟ ಕ್ರಿಶ್ ಮುಖದಲ್ಲಿ ಸಹೋದ್ಯೋಗಿಗಳಿಗೆ ಒಂದು ಹೊಸ ಹೊಳಪು ಅಪರೂಪಕ್ಕೆಂಬಂತೆ ಗೋಚರಿಸುತ್ತದೆ.
*****
ಸೀದಾ ಕಾಫಿ ಶಾಪ್ ಮುಂದೆ ಬೈಕ್ ಪಾರ್ಕ ಮಾಡಿದ ಕ್ರಿಶ್ನ ಎದೆ ಹೊಡೆದುಕೊಳ್ಳಲಾರಂಭಿಸುತ್ತದೆ.
‘ಬರುವುದೇನೋ ಬಂದೆ, ಅವಳನ್ನ ಹೇಗೆ ಗುರುತಿಸುವುದು’,
‘ಅಥವಾ ಅವಳೇ ಗುರುತು ಹಿಡಿದು ಮಾತನಾಡಿಸಬಹುದು’.
‘ಒಂದು ವೇಳೆ ಅವಳು ತುಂಬಾ ಹೊತ್ತಾಯ್ತೆಂದು ಎದ್ದು ಹೋಗಿದ್ದರೆ’,
‘ಹೋಗೊಳು ಆಗಿದ್ದರೆ ಬರೋಕೆ ಯಾಕೆ ಹೇಳ್ತಿದ್ದಳು’,
ಹೀಗೆ ಗೊಂದಲಗಳ ಮಹಾಪೂರವೇ ಹರಿದು ಬರಲಾರಂಭಿಸುತ್ತದೆ. ಅವನಿಗೆ ಯಾಕೋ ಮತ್ತೆ ಬೇಡದ ರಿಸ್ಕ ತೆಗೆದು ಕೊಳ್ತಿದ್ದೀನಿ ಎಂದು ಅನಿಸಲಾರಂಭಿಸುತ್ತದೆ. ಒಂದು ಹೊಡೆತ ಮತ್ತೆ ತನ್ನನ್ನು ಇಂದಿಗು ಸಂಪೂರ್ಣವಾಗಿ ಮೊದಲಿನಂತೆ ಮಾಡಿಲ್ಲ. ಅವಳು ಘಾಸಿ ಮಾಡಿದ್ದು ವಾಸಿಯಾಗಿದ್ದರು, ಕಲೆ ಇನ್ನು ಹಸಿ,ಹಸಿ. ಹೀಗಿರುವಾಗ ಮತ್ತೇಕೆ ಈ ಹೊಸ ಅಪಾಯ ಎಂದು ಮನಸ್ಸು ಜಾಗೃತಗೊಳಿಸುತ್ತದೆ. ಆದರೆ ಕ್ರಿಶ್ಗೆ ಎಲ್ಲೊ ಒಂದು ಕಡೆ ಮತ್ತೆ ಹೊಸ ಪ್ರೀತಿ ಚಿಗುರೊಡೆಯಬಹುದು ಎಂಬ ಬಯಕೆ ಸೆಲೆಯೊಡೆಯಲಾರಂಭಿಸುತ್ತದೆ. ಹೇಗು ಇಲ್ಲಿಯವರೆಗೆ ಬಂದಾಗಿದೆ. ಮತ್ತ್ಯಾಕೆ ಹಾಗೇ ಹೋಗುವುದು ಎಂದು ನಿರ್ಧರಿಸಿ. ಹೆಲ್ಮೆಟ್  locker ಹಾಕಿ ಹೊರಡಲನುವಾಗುತ್ತಾನೆ.
*****
ಕಾಫಿ ಶಾಪ್ ಒಳಗೆ ಬಂದ ಕ್ರಿಶ್ಗೆ ಅಲ್ಲಿ ಕುಳಿತ ಹತ್ತಾರು ಹುಡುಗಿಯರಲ್ಲಿ ಅವಳ್ಯಾರು ಬೆಳದಿಂಗಳ ಬಾಲೆ ಎಂಬ ಗೊಂದಲ. ಹೇಗಿದ್ದರು ರೀಸಿವ್ಡ ಕಾಲ್ ಲಿಸ್ಟ್ನಲ್ಲಿ ಅವಳ ನಂಬರ್ ಇದೆ ಡಯಲ್ ಮಾಡಿದ್ರೆ ತಾನೇ ಗೊತ್ತಾಗುತ್ತೆ ಎಂದು ಕಾಲ್ ಮಾಡುತ್ತಾನೆ. ಅಲ್ಲೆ ಎರಡು ಟೇಬಲ್ ಮುಂದಕ್ಕೆ ಬೆನ್ನು ಮಾಡಿ ಕುಳಿತ ಹುಡುಗಿ ಪಟ್ ಅಂತ ಕಾಲ್ ರಿಸೀವ್ ಮಾಡಿ ಹಾಗೇ ಯು ಫೂಲ್ ಎಷ್ಟೊತ್ತು ಬರೋಕೆ ಎಂದು ತಿರುಗಿದ್ದೆ ಕೊನೆ, ಇಬ್ಬರಿಗು ಮೈಯೆಲ್ಲ ಉರಿ ಹೊತ್ತಿಕೊಂಡಂತೆ ಭಾಸವಾಗುತ್ತೆ. ಕೇವಲ 3 ತಿಂಗಳ ಹಿಂದೆ,

“ನಿನ್ನ ಮುಖ ನೋಡೋಕೆ ಅಸಹ್ಯ ಏನಿಸುತ್ತೆ.
ಯಾವತ್ತು ನನ್ನ ಮುಂದೇನು ಸುಳಿಬೇಡ”

ಎಂದು ಹೇಳಿ ಬಂದಿದ್ದನೋ ಅದೇ ಸಂಪ್ರೀತಾ ಅವನ ಮುಂದೆ ನಿಂತಿದ್ದಾಳೆ. ಅವನ ಕಣ್ಣು ಕೆಂಪಗಾಗುತ್ತಿವೆ. ಹಾವು ತುಳಿದವರಂತೆ ಸಂಪ್ರೀತಾ ಮುಂದೆ ಬಂದು, ಪರಿಚಯವೇ ಇಲ್ಲವೇನೋ ಎಂಬಂತೆ, ಸ್ಸಾರಿ ಸರ್. ಬೇರೆ ಯಾರದ್ದೊ ನಂಬರ್ಗೆ ಮಾಡಬೇಕಾದದ್ದು, ಮಿಸ್ ಆಗಿ ನಿಮಗೆ ಬಂದಿದೆ. ಒನ್ಸ ಅಗೇನ್ ಸ್ಸಾರಿ, ಎಂದು ಹೇಳಿ ಭರ,ಭರನೆ ನಡೆದು ಮರೆಯಾಗುತ್ತಾಳೆ. ಬಾಯ್ ಫ್ರೆಂಡ್ ಬದಲಾಗಿದ್ದಾನೆ. ಆದರೆ ಬಾಯಿಪಾಠ ಆಗಿರುವ ಹಳೆಯ ನಂಬರ್ ಇನ್ನು ಹಾಗೇ ಉಳಿದಿದೆ. ಅದಕ್ಕೆ ಕಳೆದು ಹೋದ ಮೊಬೈಲ್ನಿಂದಾಗಿ ಕಳೆದುಕೊಂಡ ಹುಡುಗನಿಗೆ ಮಿಸ್ ಆಗಿ ಮಿಸ್ಡ ಕಾಲ್ ಮಾಡಿದ್ದಾಳೆ ಎಂದು ಖಾತ್ರಿಯಾಗುತ್ತದೆ. ಮತ್ತೆ ಫೋನ್ ರಿಂಗಣಿಸುತ್ತದೆ.
ಎನ್ನ ಹೃದಯ ಬನದಲಿ, ನಿನ್ನ ಪ್ರೀತಿಯ ಹೂವು ಅರಳಲಿ, ನೋವೋ… ಬರುತ್ತಿರುವ ಕೋಪವನ್ನೆಲ್ಲಾ ಹತ್ತಿಕ್ಕಿ ಮುಂದಿನ ಸಾಲುಗಳು ಬರುವುದರೊಳಗೆ ಕಾಲ್ ರಿಸೀವ್ ಮಾಡುತ್ತಾನೆ. ಕ್ರಿಶ್ ವ್ಯಾಲೆಂಟೈನ್ ಡೇಗೆ ಹೊಸ ಆರ್ಡರ್ ಬಂದಿದೆ. ನಾಳೆನೆ ಡಮ್ಮಿ ಕೊಡಬೇಕು ಎಷ್ಟೇ ಹೊತ್ತಾದರು ಪರ್ವಾಗಿಲ್ಲ ಆಫೀಸ್ಗೆ ಬಾ, ಎಂದು ಬಾಸ್ ಹೇಳಿದ ಮಾತುಗಳು ರಿಂಗ್ ಟೋನ್ನಂತೆ ಹಾಗೇ ರಿಂಗಣಿಸುತ್ತಲೆ ಇದ್ದವು.

                                                 ********************************

 

ಟ್ಯಾಗ್ ಗಳು:

 
%d bloggers like this: