RSS

Monthly Archives: ಅಕ್ಟೋಬರ್ 2011

ಇಂಧನ ತೀರಿದೊಡನೆ ಮತ್ತೆ ಮೂರ್ತ ಪ್ರೇಮದೆಡೆಗೆ ಬಂದೇ ಬರುವುದೆ…?

ಯಾಕೋ ಬಿ.ಆರ್.ಲಕ್ಷ್ಮಣ್ ರಾವ್ ಅವರ “ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು” ಹಾಡನ್ನು ಪದೇ, ಪದೇ ಕೇಳುತ್ತಿದ್ದೇನೆ. ಹಿಂದೊಮ್ಮೆ ನನ್ನ ಸ್ಥಿತಿಯನ್ನು ನೆನಪಿಸಿ ಕೊಂಡಾಗಲೇ ಈ ಹಾಡು ಬಹುವಾಗಿ ಕಾಡಿತ್ತು. ಈಗ ಮತ್ತೆ ಊರಿಂದ ಅಚ್ಚಕ್ಕ ಫೋನ್ ಮಾಡಿ ನಮ್ಮ ಮನೆಯ ಕೈದೊಟದಲ್ಲಿನ ಪುಟ್ಟ ಸಂಸಾರದ ಕಥೆ ಹೇಳಿದಾಗಿಂದ  ಈ ಕವಿತೆ  ಮತ್ತಷ್ಟು ತೀವ್ರವಾಗಿ ಕಾಡುತ್ತಿದೆ. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇದಕ್ಕಿಂತ ಪರಿಣಾಮಕಾರಿಯಾಗಿ ಬಿಡಿಸಿಡುವ  ಇನ್ನೊಂದು ಕವನ ನನಗೆ ತಿಳಿದಂತೆ ಇರಲಿಕ್ಕಿಲ್ಲ.

ದಸರೆಗೆಂದು ನಾನು ಹಾಗು ರೂಪಾ ಕೊಪ್ಪಳಕ್ಕೆ ಹೋಗಿದ್ದೇವು. ಹೋದ ತಕ್ಷಣ ಪುಳಕಗೊಳ್ಳುವಂತಹ ಒಂದು ಸಂಗತಿಯನ್ನು ರಾಘಣ್ಣ ತಿಳಿಸಿದ. ಮನೆಯ ಕೈದೋಟದ ಸಣ್ಣ ಹೂವಿನ ಗಿಡದ ಎಲೆಯ ಅಡಿಯಲ್ಲಿ ಪುಟ್ಟ ಗುಬ್ಬಿ (ಗುಬ್ಬಿಯ ಜಾತಿಗೆ ಸೇರಿದ್ದು. ಪ್ರಭೇಧ ಗೊತ್ತಿಲ್ಲ)ಯೊಂದು ಬೆಚ್ಚನೆಯ ಗೂಡು ಕಟ್ಟಿ ಅದರಲ್ಲಿ 3 ಮೊಟ್ಟೆಗಳನ್ನು ಇಟ್ಟಿತ್ತು. ಕಂದು ಬಣ್ಣದ  ಆ ಮೊಟ್ಟೆಗಳು ಫಳ,ಫಳ ಅಂತ ಮಿನುಗುತ್ತಿದ್ದವು. ಸಾಮಾನ್ಯವಾಗಿ ಈ ರೀತಿಯ ಮೊಟ್ಟೆ ಮತ್ತು ಗೂಡು ನೋಡದ ನನಗೆ ಅದೊಂದು ಅಚ್ಚರಿಯಂತೆ ಭಾಸವಾಯಿತು. ಆದರೆ ನಮ್ಮ ಮನೆಯ ಮಹಾನ್ ತುಂಟ ವಾದಿರಾಜ್ ನ ಕಣ್ಣಿನಿಂದ ಪಾರಾಗಿ ಆ ಮೊಟ್ಟೆಗಳು ಮರಿಯಾಗುವುದು ನನಗೇನೋ ಅನುಮಾನವಿತ್ತು. ಅಷ್ಟಕ್ಕು ರಾಘಣ್ಣ ಅವನಿಗೆ ಅವುಗಳ ಇರುವಿಕೆ ತೋರಿಸಿದ ಮೇಲಂತು ನನಗೆ ಸ್ಪಷ್ಟವಾಗಿ ಹೋಯಿತು. ಇನ್ನು ಆ ಮೊಟ್ಟೆ ಮರಿಯಾಗುವುದು ಅನುಮಾನವೇ ಎಂದು. ಅದಾದ ನಂತರ ಒಂದೆರಡು ಸಾರಿ ಅವನು ಗೂಡೊಳಗೆ ಕೈ ಹಾಕಿ ತನ್ನ ಕರಾಮತ್ತು ತೋರಿಸುವಷ್ಟರಲ್ಲಿ ನಾನು ಆಗುವ ಅಪಾಯ ತಪ್ಪಿಸಿದ್ದೆ. ಹೇಗೋ ನಾನಿರುವ ನಾಲ್ಕು ದಿನ ಮೊಟ್ಟೆಗಳು ಸುರಕ್ಷಿತವಾಗಿದ್ದವು. ತಾಯಿ ಗುಬ್ಬಿ ಆಗಾಗ ಚಿಂವ, ಚಿಂವ ಎಂದು ಕೂಗುತ್ತಾ  ಸುತ್ತಲು ಗಮನಿಸಿ ಯಾರು ಇರದನ್ನು ಖಾತ್ರಿ ಪಡಿಸಿಕೊಂಡು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಅದರ ಸೂಕ್ಷ್ಮತೆ ನಿಜಕ್ಕೂ ವರ್ಣಿಸಲಸಾಧ್ಯ. ಈ ಪ್ರಕ್ರಿಯೆ ನಾನಿರುವಷ್ಟು ದಿನ ನಿತ್ಯ ಗಮನಿಸುತ್ತಿದ್ದೆ. ಆದರೆ ಕೇವಲ ನಾಲ್ಕೂ ದಿನಕ್ಕೆಂದು ಹೋದ ನಾನು ಮತ್ತೆ ಬೆಂಗಳೂರಿಗೆ ಬಂದು ಬಿಟ್ಟೆ.

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಗುಬ್ಬಿಯ ಗೂಡಲ್ಲಿದ್ದ ಮಿನುಗುವ ಮೊಟ್ಟೆಗಳು

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ಈ ಕೌಶಲ್ಯಕ್ಕೆ ಮಾರು ಹೋಗದೆ ಇರಲು ಸಾಧ್ಯವೇ!

ನಾನು ಇಲ್ಲಿಗೆ ಬಂದ ನಂತರ  ನಿತ್ಯ ಜಂಜಾಟಗಳ ಮಧ್ಯೆ ಈ ಸಂಗತಿ ಮರೆತೆ ಹೋಗಿತ್ತು. ಮೊನ್ನೆ ಅಚ್ಚಕ್ಕ ಪೋನು ಮಾಡಿದಾಗ ಮತ್ತೆ ಗುಬ್ಬಿಯ ಪ್ರಸ್ತಾಪವಾಯಿತು. ಅದೃಷ್ಟವಶಾತ್ ಎಲ್ಲ ಮೊಟ್ಟೆಗಳು ಒಡೆದು ಮರಿ ಆಗಿದ್ದವಂತೆ. ಇವರು ಗಮನಿಸುವದರೊಳಗಾಗಲೆ ಸಣ್ಣಗೆ ರೆಕ್ಕೆ ಬಂದಿದ್ದವಂತೆ. ಇವರೆಲ್ಲ ಹೋಗಿ ನೋಡಿದ ತಕ್ಷಣ ಅವುಗಳು ಗೂಡಿನಿಂದಾಚೆ ಹಾರಿದ್ದಾವೆ. “ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ, ಬ್ರಹ್ಮಾಂಡವನ್ನೆ ಬೆದಕಿ” ಎಂಬಂತೆ  ಹಾಗೇ ಸಣ್ಣ, ಸಣ್ಣ ನೆಗೆತ  ಆಕಾಶದೆಡೆಗೆ ಜಿಗಿಸಿದೆ. ಇದು ಒಂದು ರೀತಿಯ ಸಂಭ್ರಮದ ವಿಷಯವೇ. ಪುಟ್ಟ ಸಂಸಾರ ನಮ್ಮ ಮನೆಯಂಗಳದಲ್ಲಿ ಗೂಡು ಕಟ್ಟಿ ಹೊಸ ಜೀವಗಳಿಗೆ ಹುಟ್ಟು ನೀಡಿದ್ದು ಮನೆಯವರಿಗೆಲ್ಲ ಸಂತಸವನ್ನೇನು ತಂದಿತ್ತು ಆದರೆ ಅವುಗಳು ಹಾರಿ ಹೋದ ನಂತರದ ಸ್ಥಿತಿ ಎಲ್ಲರ ಮನ ಕಲುಕಿದೆ. ಅಚ್ಚಕ್ಕ ಆ ವಿಷಯ ಹೇಳಿದಾಗ  ನನಗು ಜೀವ ಚುರ್ರ  ಎಂದಿತು. ಯಾಕೆಂದರೆ ಸಂಜೆ ಗೂಡಿಗೆ ಮರಿಗಳಿಗೆ ಆಹಾರ ತಂದ ತಾಯಿ ಗುಬ್ಬಿ ಮರಿಗಳು ಕಾಣದೆ ಕಂಗಾಲಾಗಿ ತೋಟದ ಗಿಡದ ಪ್ರತಿ ಎಲೆಯನ್ನು ಜೋರಾಗಿ ಅರಚುತ್ತಾ ಅರಸುವಾಗ ಮನೆಯವರೆಲ್ಲರ ಕಣ್ಣುಗಳು ತೇವಗೊಂಡಿದ್ದವಂತೆ. ಮೂಕ ಜೀವಕ್ಕು ತಾಯಿ ಕರುಳು  ಎಷ್ಟು ಬಲವಾಗಿ ಕಾಡುತ್ತೆ ಎಂಬುದಕ್ಕೆ ಸತತ ಮೂರು ದಿನಗಳು ಮನೆಯವರೆಲ್ಲ ಸಾಕ್ಷಿಯಾದರಂತೆ.

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ನಿನ್ನ ಪ್ರಿತಿಗೆ ಅದರ ರಿತಿಗೆ ಏನು ಹೇಳಲಿ

ಸಂಬಂಧಗಳ ಕೊಂಡಿಗಳು ಮನುಷ್ಯನಲ್ಲಿ ಈ ನಡುವೆ ಸಡಿಲಾಗುತ್ತಿವೆ. ಆದರೆ ನಮ್ಮ ನಡುವೆ ಇರುವ ಮೂಕ ಜೀವಗಳು ಇಂತಹ ಪಾಠಗಳನ್ನು ಎಷ್ಟು ಸರಳವಾಗಿ ಕಲಿಸಿಕೊಡುತ್ತವೆ. ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಆದರೆ ಪ್ರಾಣಿ, ಪಕ್ಷಿಗಳು ಎಷ್ಟು ಶತಮಾನ ಕಳೆದರು ತಮ್ಮೊಳಗಿನ ಅಂತಃಕರಣವನ್ನು ಕಳೆದು ಕೊಳ್ಳಲಾರವು ಅಲ್ಲವೇ!

Advertisements
 
 

ಟ್ಯಾಗ್ ಗಳು:

 
%d bloggers like this: