RSS

Monthly Archives: ಆಗಷ್ಟ್ 2011

ಸತ್ಯಾಗ್ರಹವನ್ನೆ ಬಡಿದು ಸಾಯಿಸುತ್ತಿರುವಾಗ, ಸತ್ತಂತಿಹರನ್ನು ಬಡಿದೆಚ್ಚರಿಸುವುದಾದರೂ ಹೇಗೆ…?

ನಿಜಕ್ಕೂ ಇದೇನಾ ಲಕ್ಷಾಂತರ ದೇಶಭಕ್ತರು ನೆತ್ತರು ಸುರಿಸಿ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟ ದೇಶ ಎಂಬ ಅನುಮಾನ ಕಾಡಿದರೆ ಖಂಡಿತ ನೀವು ಭಾರತದ ಬಗ್ಗೇನೆ ಯೋಚಿಸುತ್ತಿದ್ದೀರಿ ಎಂದು ಹೇಳಬಹುದು. ಲೋಕಪಾಲ್ ಮಸೂದೆಗೆ ಪ್ರಧಾನಮಂತ್ರಿ ಆದಿಯಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕರು ಒಳಗೊಳ್ಳಬೇಕು ಎಂಬ ಸದುದ್ದೇಶದ ಧೋರಣೆ ಇಟ್ಟುಕೊಂಡು ಎರಡನೇ ಬಾರಿಗೆ ಉಪವಾಸ ಕುಳಿತು ಕೊಳ್ಳುತ್ತೇನೆ ಎಂದು ಘೋಷಿಸಿದಾಗಲೇ, ಕಾಂಗ್ರೇಸ್ ಸರಕಾರ ಪತರುಗುಟ್ಟಿ ಹೋಗಿತ್ತು. ಏಕೆಂದರೆ ಕಳೆದ ಸಾರಿ ಅಣ್ಣಾ ಬೆಂಬಲಕ್ಕೆ ಇಡೀ ದೇಶವಾಸಿಗಳೇ ನಿಂತಾಗ ಕೇಂದ್ರ ಸರಕಾರಕ್ಕೆ ಇದು ಎಂತಹ ಮಗ್ಗಲು ಮುಳ್ಳಾಗಬಹುದು ಎಂಬ ಸ್ಪಷ್ಟ ಸೂಚನೆ ಸಿಕ್ಕಿಯಾಗಿತ್ತು. ಹೀಗಾಗಿ ಹೇಗಾದರು ಮಾಡಿ ಚಳುವಳಿಯನ್ನು ಹತ್ತಿಕ್ಕುವ ಯೋಚನೆ ಮಾಡಿದ ಸರಕಾರ ನಿನ್ನೆ ರಾತ್ರಿಯೇ ಅಣ್ಣಾ ಮತ್ತು ಅರವಿಂದ ಕೆಜ್ರೀವಾಲಾ ಸೇರಿದಂತೆ 5 ಜನರನ್ನು ಬಂಧಿಸಿ, ಇಂದು ಅವರನ್ನು ದೇಶದ ವಿವಿಐಪಿ ಜೈಲು ಎಂದೇ ಕರೆಸಿಕೊಳ್ಳುವ ತಿಹಾರ ಬಂಧೀಖಾನೆಗೆ ರವಾನಿಸಿದ್ದಾರೆ. ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ ಎಂದು ಮತ್ತೆ ಕೇಳಿಕೊಳ್ಳಬೇಕಿದೆ.

ಇಂದು ಬೆಳಗ್ಗೆ  ಪ್ರಶಾಂತ ಭೂಷಣ ಖಾಸಗಿ ವಾಹಿನಿಗೆ ಫೋನ್ ಮುಖಾಂತರ ಮಾತನಾಡುತ್ತಾ “This bill is not anti-corruption, this is promoting the corruption” , ಎಂದು ಕೇಂದ್ರ ಸರಕಾರದ ಸೂಚಿತ ಲೋಕಪಾಲ್ ಬಿಲ್ ಬಗ್ಗೆ ತಮ್ಮ ಆಕ್ರೊಶ ಹೊರ ಹಾಕಿದರು. ಇಷ್ಟಕ್ಕು ಒಂದು ಗಂಭೀರ ವಿಚಾರಕ್ಕೆ ಸಜ್ಜನ ವ್ಯಕ್ತಿ ಶಾಂತಿಯುತ ಹೋರಾಟ ಮಾಡುತ್ತೇನೆ ಎಂದು ಹೇಳಿದರೆ, ಕಾನೂನು ಸುವ್ಯವಸ್ಥೆ ನೆಪವಿಟ್ಟುಕೊಂಡು ಅವರನ್ನು ಬಂಧಿಸುವ ಸರಕಾರ ಅದ್ಯಾವ ಸಂದೇಶ ರವಾನೆಗೆ ಪ್ರಯತ್ನಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಇಷ್ಟಕ್ಕೂ ಆಗಿನ ಬ್ರಿಟಿಷರಿಗು, ಇಂದಿನ ಕಾಂಗ್ರೇಸ್ಸಿಗರಿಗೂ ವ್ಯತ್ಯಾಸವಾದರು ಏನಿದೆ ಎಂಬ ಅನುಮಾನ ಮೂಡುವುದು ಸಹಜ ಅಲ್ಲವೇ!

ಇದೋ ಎಚ್ಚರಿಕೆ, ಭ್ರಷ್ಟರೇ ಹುಷಾರ್! (ಕೃಪೆ:ಎನ್.ಡಿ.ಟಿವಿ ವೆಬ್ ಸೈಟ್)

ಇದೋ ಎಚ್ಚರಿಕೆ, ಭ್ರಷ್ಟರೇ ಹುಷಾರ್! (ಕೃಪೆ:ಎನ್.ಡಿ.ಟಿವಿ ವೆಬ್ ಸೈಟ್)

ಮಾನ್ಯ ಪ್ರಧಾನ ಮಂತ್ರಿಗಳು 8ನೇ ಬಾರಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಅದೃಷ್ಟವಶಾತ್ ಅವರ ಭಾಷಣ ಕೇಳಲು ನೆರದಿದ್ದ ಎಷ್ಟೋ ಸಾಮಾನ್ಯ ಜನರಿಗೆ ಆ ಹಸಿ ಸುಳ್ಳುಗಳನ್ನು ಕೇಳಿ ಕಣ್ಣೀರು ಬಂದಿದ್ದರು ಅದು ಗೊತ್ತಾಗುವ ಹಾಗಿರಲಿಲ್ಲ. ಕಾರಣ ‘ಧೋ..’ ಎಂದು ಮಳೆ ಸುರಿಯುತ್ತಿತ್ತು. ಬ್ರಷ್ಟಾಚಾರದ ವಿಷಯದಲ್ಲಿ ಸರಕಾರ ಕೈ ಕಟ್ಟಿ ಕುಳಿತಿಲ್ಲ. ಆದರೆ ಇದು ಒಂದೆರಡು ದಿನಗಳಲ್ಲಿ ಬಗೆ ಹರಿಯುವ ವಿಚಾರ ಅಲ್ಲ. ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲು ನನ್ನ ಕೈಯಲ್ಲಿ ಮಂತ್ರದಂಡವಿಲ್ಲ ಎಂಬ ನಿಸ್ಸಾಹಯಕ ಮಾತುಗಳನ್ನಾಡುತ್ತಿದ್ದರೆ, ನಮ್ಮನ್ನಾಳುವ ನಾಯಕ ಅದೆಂತಹ ದುರ್ಬಲ ಮನುಷ್ಯ ಎಂದು ಮರುಕ ಹುಟ್ಟುತ್ತಿತ್ತು. ಬರಾಕ ಒಬಮಾ ತನ್ನ ದೇಶದ ಮಿಲಿಟರಿ ಲಾಡೆನ್ ನ್ನು ಹೊಡೆದು ಹಾಕಿದಾಗ ಅದೆಂತಹ ಕೆಚ್ಚೆದೆಯ ಭಾಷಣ ಮಾಡಿದ್ದ ಎಂದು ನೀವು ಕೇಳಿರಬಹುದು (ಇದೇ ಬ್ಲಾಗ್ ನಲ್ಲಿನ ಮೇ2ರ ಲೇಖನದಲ್ಲಿ ಯೂಟ್ಯೂಬ್ ಲಿಂಕ್ ನೀಡಲಾಗಿದೆ ಗಮನಿಸಿ). ನಮ್ಮ ರಾಷ್ಟ್ರಕ್ಕು ಅಂತೊಬ್ಬ ಧೀಮಂತ ನಾಯಕನ ಜರೂರತ್ತು ಖಂಡಿತಾ ಇದೇ ಎಂದು ನಿಮಗನ್ನಿಸುವದಿಲ್ಲವೇ. ನಮ್ಮ ಪ್ರಧಾನಿಗೆ ಬ್ರಷ್ಟಾಚಾರ ನಿರ್ಮೂಲನೆಯಲ್ಲಿ ಅಷ್ಟೊಂದು ಕಾಳಜಿ ಇರುವುದಾದಲ್ಲಿ ಸ್ವಾತಂತ್ರ ದಿನದಂತಹ ಪವಿತ್ರ ಘಳಿಗೆಯಲ್ಲಿಯೇ ಘಂಟಾ ಘೋಷವಾಗಿ ಪ್ರಧಾನಿಯು ಲೋಕಪಾಲ್ ವ್ಯಾಪ್ತಿಗೆ ಬರಲಿ ಎಂದು ಹೇಳಬಹುದಿತ್ತಲ್ಲವೇ? ಅದನ್ನು ಬಿಟ್ಟು ಕೈಲಾಗದವರಂತೆ ಕಾನೂನು ತೊಡಕು, ಸಂವಿಧಾನದ ಅಡೆತಡೆ ಎಂದು ಕಾಗಕ್ಕ, ಗುಬ್ಬಕ್ಕನ ಕಥೆ ಹೆಣೆಯುತ್ತಾ ಕುಳಿತರೆ ಈ ರಾಷ್ಟ್ರ ಉದ್ಧಾರ ಆಗುತ್ತಾ ಮ್ಯಾನ್ ನೀವೆ ಹೇಳಿ.

ಇಂದು ಭಯೋತ್ಪಾದನೆಯನ್ನು ಒದ್ದು ಓಡಿಸುವ ಜರೂರತ್ತು ಎಷ್ಟಿದೆಯೋ, ಬ್ರಷ್ಟಾಚಾರದ ವಿಷಯವು ಕೂಡಾ ಅಷ್ಟೇ! ಎರಡು ಒಂದೇ ಹೆಂಚಿನ ಎರಡು ಮುಖಗಳು. ನಮ್ಮ ದೇಶದ ಸುವ್ಯವಸ್ಥೆ ಕೇವಲ ಕಸಬ್ ನಂತಹ ಕ್ರೀಮಿಗಳಿಂದ ಮಾತ್ರ ಹದೆಗೆಡುತ್ತಿಲ್ಲ, ಇಲ್ಲೇ ಇರುವ ರಾಜಕಾರಣಿ, ಅಧಿಕಾರಶಾಹಿಗಳ ಮುಖವಾಡ ಧರಿಸಿರುವವರ ಪಾಲು ಸಮಾನವಾಗಿದೆ. ಒಬ್ಬ ಕಸಬ್ ನನ್ನು ಹೊಸಕಿ ಹಾಕಲು ಮೀನ ಮೇಷ ಎಣಿಸುತ್ತಿರುವ ಸರಕಾರದಿಂದ ಜನಪರ ಬದ್ಧತೆಯನ್ನಾದರು ನಿರೀಕ್ಷಿಸಲು ಹೇಗೆ ಸಾಧ್ಯ. ಈ ರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅನ್ಯಾಯವನ್ನು ವಿರೋಧಿಸಲು ಸತ್ಯಾಗ್ರಹ ಎಂಬುದು ಅತೀ ದೊಡ್ಡ ಸಾಧನ ಎಂದು ಹೇಳಿಕೊಟ್ಟ ಗಾಂಧಿ ಇಷ್ಟು ಬೇಗ ಈ ಸರಕಾರಕ್ಕೆ ಮರೆತು ಹೋದರೆ. ಇಷ್ಟಕ್ಕೂ ಅಣ್ಣಾಜೀ ಹೋರಾಟಕ್ಕೆ ಇಳಿದಿದ್ದು ಶಾಂತಿ ಮಂತ್ರ ಪಠಿಸುತ್ತಾ. ಅದನ್ನು ಎಲ್ಲರೂ ಅಷ್ಟೇ ಶಿಸ್ತು ಬದ್ಧವಾಗಿ ಪರಿಪಾಲಿಸುತ್ತಿರುವಾಗ ಸರಕಾರಕ್ಕೆ ಅದ್ಯಾವ ಘಳಿಗೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಎಂಬ ದಿವ್ಯಜ್ಞಾನ ಹೊಳೆದಿದ್ದು? ಈ ದೇಶದ ಕೊಟ್ಯಾಂತರ ಜನರ ಸ್ಪಂದನೆ ಭ್ರಷ್ಟಾಚಾರದಲ್ಲಿ ಕಠಿಣ ನಿಲುವು ಅಗತ್ಯ ಎಂಬ ಕಟು ನಿಲುವಿಗೆ ಒತ್ತಾಯಿಸುತ್ತಿರುವಾಗ, ಸರಕಾರವು ತನ್ನನ್ನು ಆಯ್ಕೆ ಮಾಡಿ ಕಳಿಸಿದ ಜನಕ್ಕೆ ಕಿಂಚಿತ್ತು ಕಿಮ್ಮತ್ತು ಕೊಡುತ್ತಿಲ್ಲ ಎಂದು ಮನವರಿಕೆ ಮಾಡಿಕೊಟ್ಟಂತಾಗುತ್ತಿಲ್ಲವೇ. ಅಷ್ಟಕ್ಕು ಒಂದು ದಿಟ್ಟ ನಿಲುವಿಗೆ ಬರದ ಸರಕಾರವಾದರು ಯಾಕೆ ಎಂಬ ಮೂಲಭೂತ ಪ್ರಶ್ನೆಯನ್ನು ಕೂಡಾ ಕೇಳಲು ಇದು ಸಕಾಲ ಎಂದೆನಿಸುತ್ತದೆ. ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಗೆ ಸರಕಾರವನ್ನು ದೂಡಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ. “ಧಿಕ್ಕಾರವಿರಲಿ ಈ ಭ್ರಷ್ಟ ಸರಕಾರಕ್ಕೆ”.

ಇದೆಲ್ಲದರ ಜೊತೆ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೆದಿದೆ. ಸರಕಾರ ಅಣ್ಣಾ ಅವರನ್ನು ತಿಹಾರ್ ಜೈಲಿಗೆ ಕಳಿಸಿದ್ದಲ್ಲದೆ, ಎ.ರಾಜಾ, ಕಲ್ಮಾಡಿಯಂತಹ ಭ್ರಷ್ಟ ವ್ಯಕ್ತಿಗಳಿರುವ ಸೆಲ್ ಗಳಿಗೆ  ಅವರನ್ನು ಮತ್ತು ಅರವಿಂದ ಕೆಜ್ರೀವಾಲಾರನ್ನು ಹಾಕಿದ್ದಾರೆ. ಭೇಷ್! ನಿಷ್ಠಾವಂತ ಹೋರಾಟಗಾರರನ್ನು ಅದೆಷ್ಟು ಮಾರ್ಯಾದಾ ಪೂರ್ವಕವಾಗಿ ಈ ಸರಕಾರ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನ ಸಾಕಲ್ಲವೇ! ಇನ್ನು ಮುಂದೆ ವಂದೇ ಮಾತರಂ ಎಂದು ಹೇಳುವುದು ಕೂಡಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಎಂಬ ಆಜ್ಞೆ ಹೊರಬಿದ್ದರೂ ಆಶ್ಚರ್ಯವಿಲ್ಲ ಬಿಡಿ. “……… ಮೇರಾ ಭಾರತ್ ಮಹಾನ್!?”

Advertisements
 

ಟ್ಯಾಗ್ ಗಳು:

“ಸದಾ” ನಗುಮೊಗಕ್ಕೆ ಒಲಿದು ಬಂದ ಮುಖ್ಯಮಂತ್ರಿ ಪದವಿ;ಇನ್ನು ಸಿಡಿಯಲಿದೆ ಅಸಮಾಧಾನದ ಕಿಡಿ

ಕೊನೆಗೂ ಯಡಿಯೂರಪ್ಪ ಹೊಡೆದ ಗುಂಡು ಹೈಕಮಾಂಡ್ ಗೆ ಭರ್ಜರಿಯಾಗಿಯೇ ತಗುಲಿದೆ ಎಂದೇ ಹೇಳಬಹುದು. ಒಲ್ಲದ ಮನಸಿನಿಂದ ಕುರ್ಚಿ ಬಿಟ್ಟು ಕೆಳಗಿಳಿದ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಸದಾನಂದಗೌಡ್ರು ಎಂದು ದಾಳ ಉರುಳಿಸಿದಾಗ ಎಲ್ಲರಿಗೂ ಇದು ಆಗೋ, ಹೋಗೋ ಕೆಲಸವಲ್ಲ ಎಂದು ಅನಿಸಿದ್ದು ಸುಳ್ಳಲ್ಲ. ಕಾರಣ ಗೌಡ್ರು ಪಕ್ಷದ ಅಧ್ಯಕ್ಷರಾಗಿರಬಹುದು, ಅವರ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರಬಹುದು, ಆದರೆ ಅವರ ನಗು ಮೊಗಕ್ಕೆ ಅಂತಹ ಹಿಂಬಾಲಕರ ಪಡೆ ಇರಲಿಲ್ಲ ಎಂಬುದಂತು ಒಪ್ಪಲೆಬೇಕು. ಹೋಗಲಿ ಅವರು ಜಾತಿ ರಾಜಕಾರಣ ಮಾಡಿದ ಉದಾಹರಣೆಗಳು ಕೂಡಾ ಇಲ್ಲ. ಬಿಜೆಪಿ ಎಂದರೆ ಲಿಂಗಾಯಿತ ಬೆಂಬಲ ಎಂಬ ಅಲೆಯಿರುವಾಗ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಸಿಕ್ಕೀತೆ ಎಂಬ ಸಂದೇಹ ಕಾಡುತ್ತಿತ್ತು. ಆದರೆ ಇಲ್ಲಿ ಗಮನಿಸಬೇಕಾದದ್ದೆಂದರೆ ತಮ್ಮ ಹುದ್ದೆಯಿಂದ ಕೆಳಗಿಳಿದ ಮೇಲೂ ಯಡಿಯೂರಪ್ಪ ಅನೇಕ ಶಾಸಕರ, ಸಂಸದರ ಬೆಂಬಲ ಹೊಂದಿದ್ದರು. ಆದರೆ ಇವರ ಬಗ್ಗೆ ಒಳಗೊಳಗೆ ಅಸಮಾಧಾನ ಇರುವ ಈಶ್ವರಪ್ಪ, ಶೆಟ್ಟರ್ ಮತ್ತು ಅನಂತಕುಮಾರ್ ಒಂದು ಬಣ ಕಟ್ಟಿಕೊಂಡು ಶೆಟ್ಟರ್ ಮುಖ್ಯಮಂತ್ರಿ ಆಗಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರು. ಖಂಡಿತ ಇದು ಹೈಕಮಾಂಡ್ ಗೆ ದೊಡ್ಡ ನುಂಗಲಾರದ ತುತ್ತಾಗಿತ್ತು ಎಂಬುದು ಈ ಮೂರು ದಿನಗಳ ಬೆಳವಣಿಗೆ ಗಮನಿಸಿದ ಯಾರಿಗಾದರೂ ಈ ವಿಷಯ ಅರ್ಥವಾಗಿರುತ್ತದೆ.

ಯಾವುದೇ ನಿರ್ಧಾರವನ್ನು ಅಖೈರು ಗೊಳಿಸಲು ಹೆಣಗಿದ ವರಿಷ್ಠರು ಗುಪ್ತ ಮತದಾನದ ಮೂಲಕ ಸದಾನಂದಗೌಡ (62 ಮತಗಳು) ಮುಂದಿನ ಸಿಎಂ, ಜಗದೀಶ ಶೆಟ್ಟರ್ (55 ಮತಗಳು) ಉಪ ಮುಖ್ಯಮಂತ್ರಿ ಎಂದು ಘೊಷಿಸುವ ಮೂಲಕ ಯಡಿಯೂರಪ್ಪ ಓಡಿಸಿದ ಕುದರೆ ರೇಸ್ ಗೆದ್ದಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಅದರ ಬೆನ್ನ ಹಿಂದೆ ಶೆಟ್ಟರ್ ಉಪ ಮುಖ್ಯಮಂತ್ರಿ ಹುದ್ದೆ ತಮಗೆ ಬೇಡ ಎನ್ನುವುದರ ಮುಖಾಂತರ ಭಿನ್ನಮತ ಇನ್ನು ಶಮನವಾಗಿಲ್ಲ. ಇದು ಜ್ವಾಲಾಮುಖಿ ಎಂಬ ಸಂದೇಶ ರವಾನಿಸಿದ್ದಾರೆ. ಇದು ಮತ್ತೊಂದು ತಲೆ ನೋವಿಗೆ ನಾಂದಿ ಹಾಡುವುದರಲ್ಲಿ ಸಂಶಯವಿಲ್ಲ.

ಅಂತು,ಇಂತು ನಗು ಕೊಗಕ್ಕೆ ದಕ್ಕಿತು ಸಿಎಂ

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಹಲವು ಸಂದೇಹಗಳು ಕಾಡುವುದಂತು ಸತ್ಯ. ಮೊದಲು ಪಕ್ಷದಲ್ಲಿ ಸ್ಪಷ್ಟವಾಗಿ ಗುಂಪುಗಾರಿಕೆ ಮನೆ ಮಾಡಿದೆ ಎಂಬುದು ಸರ್ವವಿದಿತವಾಗಿದೆ. ಎರಡನೇಯದಾಗಿ ಆಯ್ಕೆಯಾದ ಸಿಎಂ, ಯಡಿಯೂರಪ್ಪ ಅವರ ಕೈಗೊಂಬೆ. ಅವರೇ ಸೂಪರ್ ಸಿಎಂ ಎಂಬುದು. ಇದರೊಂದಿಗೆ ಯಡ್ಡಿ ನಿಷ್ಠರೇ ಮಂತ್ರಿ ಮಂಡಲದಲ್ಲಿ ಹೆಚ್ಚು ಸ್ಥಾನ ಗಿಟ್ಟಿಸಿ ಕೊಳ್ಳುತ್ತಾರೆ. ಈ ಬೆಳವಣಿಗೆ ಇನ್ನೊಂದು ಬಣದ ಶಾಸಕರ ಬಂಡಾಯಕ್ಕೆ ರಹದಾರಿ ಆಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಲಿಂಗಾಯತ ಪ್ರಾಬಲ್ಯವಿರುವ ಉತರ ಕರ್ನಾಟಕದಲ್ಲಿ ಸದಾನಂದಗೌಡರ ನಗು ಮೊಗ ಯಾವುದೋ ಟೂತ್ ಪೇಸ್ಟ್ ಕಂಪನಿ ಮನುಷ್ಯ ಎಂಬ ಭಾವನೆ ಮೂಡಿಸುತ್ತದೆ. ಕಾರಣ ಅವರ ಪರಿಚಯ ಸಾಕಷ್ಟು ಜನಕ್ಕೆ ತಿಳಿದೇ ಇಲ್ಲ. ಹಾಗೆಯೇ ಲಿಂಗಾಯತ ನಾಯಕನಿಗೆ ತಪ್ಪಿದ ಸಿಎಂ ಪದವಿ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಕೊಂಚ ಹಿನ್ನೆಡೆ ಉಂಟು ಮಾಡಿದರು ಆಶ್ಚರ್ಯವಿಲ್ಲ. ಏಕೆಂದರೆ ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಿರಲಿಲ್ಲ. ಈ ಮೂಲಕ ಒಬ್ಬ ಜನಪ್ರಿಯ ನಾಯಕನನ್ನು ಆಯ್ಕೆ ಮಾಡುವುದರ ಜೊತೆಗೆ ಒಂದು ಬಲಿಷ್ಠ ಜಾತಿಯ ಮತಗಳನ್ನು ಹಾಗೆಯೇ ಡಿಪಾಸಿಟ್ ಮಾಡಿಕೊಂಡ ಲಾಭವಾಗುತ್ತಿತ್ತು.ಆದರೆ ಈ ಆಯ್ಕೆ ಬಿಜೆಪಿಗೆ ಯಾವ ರೀತಿ ಲಾಭ ತಂದು ಕೊಡುತ್ತದೋ ಹೇಳುವುದು ಕಷ್ಟ.

ಇಷ್ಟಕ್ಕು ಬಿಜೆಪಿಯ ನಿಜವಾದ ನಾಯಕರೆಲ್ಲರು ಆರ್ ಎಸ್ಎಸ್ ಹಿನ್ನೆಲೆಯುಳ್ಳವರಾಗಿದ್ದು, ಹೈಕಮಾಂಡ್ ಮಾತಿಗೆ ತುಟಿ ಬಿಚ್ಚುತ್ತಿರಲಿಲ್ಲ. ಆದರೆ ಅದೇ ಹಿನ್ನೆಲೆಯಿಂದ ಬಂದ ಯಡ್ಡಿ ತೊಡೆ ತಟ್ಟಿ ನಿಂತಿದ್ದರಿಂದ ವರಿಷ್ಠರು ತೀವ್ರ ಮುಖಭಂಗ ಎದುರಿಸ ಬೇಕಾಯಿತು. ಇದು ಸ್ಪಷ್ಟ ಶಿಸ್ತಿನ ಉಲ್ಲಂಘನೆ ಎಂದು ತಿಳಿದಿದ್ದರು ನಾಯಕರು ಅಸಹಾಯಕರಾಗಿದ್ದರು. ಇದರ ಲಾಭವನ್ನು ಯಡ್ಡಿ ಸದ್ವಿನಿಯೋಗ ಮಾಡಿಕೊಂಡಿದ್ದಾರೆ. ತಮ್ಮ ಬ್ರಷ್ಟಾಚಾರದ ಆಪಾದನೆಗಳಿಗೆ ಸಿಎಂ ಆಗುವವರು ಗುರಾಣಿಯಾಗುವ ಅವಶ್ಯಕತೆ ಇತ್ತು. ಅದಕ್ಕೆ ಅವರು ಸದಾನಂದರ ಹೆಸರು ಅಖೈರು ಮಾಡಿದ್ದರು. ಆ ಮೂಲಕ ಲೋಕಾಯುಕ್ತ ಸಲ್ಲಿಸಿದ ವರದಿಯನ್ನು ತಿರಸ್ಕರಿಸಬಹುದು ಮತ್ತು ಯಾವುದೇ ಕಾನೂನಾತ್ಮಕ ಹೋರಾಟಗಳಿಗೆ ಸರಕಾರದ ಬೆಂಬಲ ಇಟ್ಟುಕೊಳ್ಳುವುದು ಅವರ ಉದ್ದೇಶವಾಗಿತ್ತು. ಈ ಮೂಲಕ ಅದು ಈಡೇರಿದೆ. ಆದರೆ ಈಗಾಗಲೇ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವದರ ಬಾಣದಿಂದ ತಪ್ಪಿಸಿಕೊಳ್ಳಲು ಯಡ್ಡಿ ಹೊಸ ಮುಖ್ಯಮಂತ್ರಿ ಮೂಲಕ ಮಾರ್ಗ ಹುಡುಕಬೇಕಿದೆ. ಇದು ಅಷ್ಟು ಸುಲಭದ್ದಲ್ಲ ಎಂಬುದು ಬೇರೆ ಮಾತು. ಅದೇನೆ ಇರಲಿ ಸಧ್ಯಕ್ಕೆ ಎಲ್ಲ ಸರಿ ಹೋಯಿತು ಎಂದು ವರಿಷ್ಠರು ನಿಟ್ಟುಸಿರು ಬಿಡುವಂತಿಲ್ಲ. ಆಟ ಈಗ ಶುರು. ಅದು ದೊಡ್ಡಾಟವೋ, ಬಯಲಾಟವೋ ನೀವೆ ನೋಡಿ ಆನಂದಿಸಿ.

 
2 ಟಿಪ್ಪಣಿಗಳು

Posted by on ಆಗಷ್ಟ್ 3, 2011 in ರಾಜ್ಕೀಯ

 

ಟ್ಯಾಗ್ ಗಳು:

 
%d bloggers like this: