RSS

Monthly Archives: ಜುಲೈ 2011

ಶೀಘ್ರವೇ ನಿಮ್ಮ ಮುಂದೆ….

ಪ್ರಿಯ ಸ್ನೇಹಿತರೆ,ನಾನು ಈ ಬ್ಲಾಗಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ನಿಮಗೆಲ್ಲಾ ಹೇಳಿದ್ದೆ, ಆದಷ್ಟು ಬೇಗ ಬ್ಲಾಗಿಗೆ ಹೊಸ ರೂಪ,  ವಿಶಿಷ್ಟ ರೀತಿಯ ಬರವಣಿಗೆ ನೀಡುತ್ತೇನೆ ಎಂದು. ಅಂದರ ಒಂದು ಪ್ರಯತ್ನವಾಗಿ ಈ ಹೊಸ ವಿಭಾಗ ಜೀವ ತಳೆಯಲಿದೆ. ಇದು ನನ್ನ ಹಳೆಯ ಯೋಚನೆಗೆ ಒಂದಿಷ್ಟು ಹೊಸ ರೂಪ ತುಂಬುವ ಕೆಲಸ. ಹೆಸೆರೇನು ಎಂದು ಕೇಳಬೇಡಿ. ಅದು ಅಂದೇ ಕಾಣಿಸಿಕೊಳ್ಳುತ್ತದೆ. ಇದು ಅತ್ಯದ್ಭುತ ಆಲೋಚನೆ  ಎಂದು ಹೇಳುತ್ತಿಲ್ಲ. ಆದರೆ ವಿಶಿಷ್ಟ ಬರವಣಿಗೆಯ ಮೂಲಕ ನಿಮ್ಮಲ್ಲೊಂದು ನಗೆ ಬುಗ್ಗೆ ಹುಟ್ಟಿಸುವ ಪ್ರಯತ್ನ. ನೀವು ಈ ಅನುಭವಕ್ಕೆ ಒಳಗಾಗಿರುತ್ತೀರಿ ಅದನ್ನು ಮರಳಿ ನೆನಪಿಸುವ ಮತ್ತು ಆ ಅನುಭವಕ್ಕೆ ಮತ್ತೆ ಯತ್ನಿಸುವಂತೆ ಮಾಡುವ ಸಾಹಸ ಅಷ್ಟೇ!

ಗೆಳೆಯರೇ, ಶೀಘ್ರದಲ್ಲೆ ಆ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸುತ್ತೇನೆ. ನಿಮ್ಮ ಹಾರೈಕೆ ಮತ್ತು ಬೆಂಬಲ ಎಂದಿನಂತಿರಲಿ……..

Advertisements
 

ಟ್ಯಾಗ್ ಗಳು:

ವಿದಾಯ ಹೇಳಿ ಬಂದರು ನವಾಬ ನಗರಿಯಲ್ಲಿನ ಆಯ-ವ್ಯಯದ ಲೆಕ್ಕ ಇನ್ನು ನಿಂತಿಲ್ಲ…

ಸರಿಯಾಗಿ 20 ದಿನಗಳಾಯ್ತು, ನಾನು ಹೈದ್ರಾಬಾದನ್ನು ತೊರೆದು ಬಂದು. ಓದು ಮುಗಿಸಿ ಅವಕಾಶದತ್ತ ಮುಖ ಮಾಡಿ ನಿಂತಾಗ ಹೈದ್ರಾಬಾದನ “ಈ ಟೀವಿ” ಚಾನೆಲ್ ಕೈ ಬೀಸಿ ಕರೆದಿತ್ತು. ನೂರಾರು ಕನಸು ಕಟ್ಟಿಕೊಂಡು ಸಂದರ್ಶನಕ್ಕೆ ಹಾಜರಾದ ನನಗೆ ನಿರಾಶೆ ಕಾದಿರಲಿಲ್ಲ. ನನ್ನ ನಂಬಿಕೆಯಂತೆ ಕೆಲಸ ಅರಸಿ ಬಂದಿತ್ತು. ಆದರೆ ಸಂಬಳ ಮಾತ್ರ ಕೈ ತುಂಬಾ ಎಂಬಂತಿರಲಿಲ್ಲ. ಇದೇ ವಿಷಯಕ್ಕೆ ರಾಘಣ್ಣ ಹೈದ್ರಾಬಾದ್ ಗೆ ಹೋಗುತ್ತೇನೆ ಎಂದಾಗ ಮೂಗು ಮುರಿದಿದ್ದ. ಆದರೆ ನಾನು ನಿರ್ಧಾರಗಳನ್ನು ಬದಲಿಸುವುದು ತೀರಾ ವಿರಳ.ಒಂದು ಸಾರಿ ನಿರ್ಧರಿಸಿದ್ದೇನೆಂದರೆ ಆ ಕೆಲಸವನ್ನು ಮಾಡದೆ ಬಿಡುವನಲ್ಲ. ಹೀಗಾಗಿ ಓಡೋಡಿ ಈ ಟೀವಿ ಸಮೂಹಕ್ಕೆ ಸೇರ್ಪಡೆಯಾದೆ. ಗೊತ್ತಿಲ್ಲದ ಕೆಲಸವಾದರು ನನ್ನ ಹಠದ ಮುಂದೆ ಅದು ಬಾಗಲೆ ಬೇಕಾಯಿತು. ಮೆತ್ತಗೆ ಪಟ್ಟುಗಳು ಕರಗತವಾಗಲಾರಂಭಿಸಿದವು. ಹಲವು ಅಡೆತಡೆ, ಮುನಿಸು, ಅನಗತ್ಯ ಟೀಕೆ, ವಿರೋಧಾಭಾಸ ಮತ್ತು ನಿರಾಕರಣ ಪ್ರೀತಿ ಎಲ್ಲವು ನನ್ನನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಅನುಭವದ ರುಚಿ ತೋರಿಸಿದವು. ಅದಕ್ಕಾಗಿ 5 ವರ್ಷ 9 ತಿಂಗಳು ನವಾಬ ನಗರಿಯಲ್ಲಿ ಇನ್ನಿಲ್ಲದಂತೆ ಬಂಧಿಯಾಗಿದ್ದೆ.

ಬದುಕು ಹಾಗೆ ಅಲ್ಲವೆ. ಇಲ್ಲಿ ಎಲ್ಲವು ಅನಿರೀಕ್ಷಿತ. ನಾನು ಹೈದ್ರಾಬಾದ್ ಬಿಟ್ಟು ಹೋಗುತ್ತೇನೋ ಇಲ್ಲವೋ ಎಂಬ ದುಗುಡ ತುಂಬಾ ಗಟ್ಟಿಯಾಗಿ ಬೇರೂರಲಾರಂಭಿಸಿದಾಗ ಯಾವುದೋ ಕರೆ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆತಂದಿತು. ಆದರೆ ನಾನು ಕಳೆದ ಅಷ್ಟು ವರ್ಷಗಳ ಪಯಣವಿದೆಯಲ್ಲ ನನಗೆ ಅನೇಕ ಬದುಕಿನ ಪಾಠ ಹೇಳಿ ಕೊಟ್ಟಿದೆ. ಅದಕ್ಕೆ ನಾನು ಕೃತಜ್ಞ. ಖಂಡಿತ ನನಗೆ ನಾನು ಮಾಡುತ್ತಿದ್ದ ಕೆಲಸದ ಬಗ್ಗೆ ಮೊದಲು ಗಂಧ ಗಾಳಿಯು ತಿಳಿದಿರಲಿಲ್ಲ. ಧಾರಾವಾಹಿ ನೋಡುವ ಹುಚ್ಚಿತ್ತು ಎಂಬದನ್ನು ಬಿಟ್ಟರೆ ಆ ಕೆಲಸಕ್ಕೆ ಬೇಕಾದ ಬೇರೆ ಯಾವ ಅರ್ಹತೆಗಳು ನನ್ನಲ್ಲಿ ಇವೆ ಎಂದು ನನಗೆ ಗೊತ್ತಿರಲಿಲ್ಲ. But thanks to E TV. ಅದು ನನ್ನೊಳಗಿನ ನಾನನ್ನು ಗುರುತಿಸಲು ಸಹಾಯ ಮಾಡಿತು. ಹಲವು ಅಪರೂಪದ ಸ್ನೇಹ ಬಳಗಕ್ಕೆ ತಂತಾಯಿತು. ನನ್ನಲ್ಲಿ ಅಲ್ಲಿನ ವಾತಾವರಣ ಮತ್ತು ಕೆಲವು ಬೆಳವಣಿಗೆಗಳ ಬಗ್ಗೆ ಬೇಸರಗಳಿವೆ. ಆದರೆ ಅವುಗಳೆಲ್ಲ ಮುಕ್ತ ಚರ್ಚೆಗೆ ಯೋಗ್ಯವಲ್ಲ ಹಾಗೂ ಅವುಗಳನ್ನು ಪ್ರಸ್ತಾಪಿಸುವ ಮನಸ್ಥಿತಿಯು ನನ್ನಲ್ಲಿ ಇಲ್ಲ. ಜೋ ಹೋಗಯಾ, ಸೋ ಹೋಗಯಾ ಎಂಬಂತೆ ಎಲ್ಲವನ್ನು ನನ್ನೊಳಗೆ ಹುದುಗಿಸಿಕೊಂಡು ಅವುಗಳನ್ನು ನೆನಪಿನ ಪುಟದ ಯಾವುದೋ ಮೂಲೆಗೆ ತಳ್ಳಬೇಕು ಎಂದು ನಿರ್ಧರಿಸಿಯಾಗಿದೆ. ಹೀಗಾಗಿ ಆ ವಿಚಾರಗಳ ಪ್ರಸ್ತಾಪ ಅನಗತ್ಯ. ನೆನಪಿಸಿಕೊಳ್ಳಲು ಹಲವು ಸಂಗತಿಗಳಿರುವಾಗ ಅವುಗಳ ಗೊಡವೆ ಬೇಡ.

ಮನಸಿನ  ಪುಟದಲ್ಲಿ ನೆನಪುಗಳು ಹಾಗೇ ಅಚ್ಚೊತ್ತಿವೆ....(ಕೃಪೆ:trygothic.deviantart.com)

ಮನಸಿನ ಪುಟದಲ್ಲಿ ನೆನಪುಗಳು ಹಾಗೇ ಅಚ್ಚೊತ್ತಿವೆ....(ಕೃಪೆ:trygothic.deviantart.com)

ಟಾಟಾ ಹೇಳಿ ಬಂದು 15 ದಿನಗಳ ಮೇಲಾದರು ನೆನಪುಗಳ ತಪನೆ ನಿಂತಿಲ್ಲ. ಹೈದ್ರಾಬಾದ್ ಎಂದ ತಕ್ಷಣ ಅಕ್ಷಿ ಪಟದ ಮುಂದೆ ನೂರೆಂಟು ಚಿತ್ರಗಳು ಸುಳಿದು ಹೋಗುತ್ತವೆ. ಅದರಲ್ಲಿ ಬೇಕಾದ್ದು, ಬೇಡಾದ್ದು ಎರಡು ಉಂಟು. ಆದರೆ ಆ ಹತ್ತಿರದ 6 ವರ್ಷಗಳ ಸುಧೀರ್ಘ ದಾರಿಯಲ್ಲಿ ಕೆಲವು ಅಪರೂಪದ ವ್ಯಕ್ತಿ ಮತ್ತು ಸ್ಥಳಗಳ ನೆನಪು ತೀರಾ ಅಗತ್ಯ. ಹೈದ್ರಾಬಾದ್ ಗೆ ಹೋದ ತಕ್ಷಣ ದೇವು ತನ್ನ ಮನೆಯಲ್ಲಿ ಜಾಗ ಕೊಟ್ಟ. ಗೋಪಿ ಯಾವ ವಿರೋಧವಿಲ್ಲದೆ ನನ್ನನ್ನು ಒಪ್ಪಿಕೊಂಡ ನಾವು ಮೂವರು ನಮ್ಮ ಗೂಡಿನಲ್ಲಿ ಒಂದು ಪ್ರಪಂಚವನ್ನ ಸೃಷ್ಟಿಸಿಕೊಂಡು ಇದ್ದು ಬಿಟ್ಟೇವು. ಅದಾದ ನಂತರ ನನ್ನ ವಿಭಾಗಕ್ಕೆ ಹೆಚ್ಚು ಕಡಿಮೆ ನನ್ನದೆ ವಯೋಮಾನದ ಒಂದು ದಂಡು ಬಂದಿತು. ಪರಕೀಯನೆಂಬ ಭಾವನೆ ದೂರಾವಾಗಿಸಿದ್ದೆ ಆ ಗೆಳಯರ ಬಳಗ. ಅದರಲ್ಲಿ ಪ್ರಭಾ ತುಂಬಾ ಆಪ್ತವಾದಳು. ಮನಸಿನ ಭಾವನೆಗಳಿಗೆ ಸಮಾಧಾನ ಹೇಳುವ ಕೌಶಲ್ಯ ಅದು ಹೇಗೋ ಅವಳಲ್ಲಿ ಕರಗತವಾಗಿತ್ತು. ಹೀಗಾಗಿ ಒಬ್ಬ ಆಪ್ತ ಸ್ನೇಹಿತೆ ಸಿಕ್ಕಿದ್ದು, ಅಲ್ಲಿ ದಿನ ದೂಡುವುದು ಕಷ್ಟವಲ್ಲ ಎಂಬ ಭಾವನೆ ದೂರ ಮಾಡಿತು. ಹಾಗೆಯೇ ಆ ಗುಂಪಿನ ದಿನೇಶ್, ಶ್ವೇತಾ ಮತ್ತು ಸುಧಿಂದ್ರ ಬೇಗ ಈ ಟೀವಿಗೆ ವಿದಾಯ ಹೇಳಿ ಹೋದರು. ಶಶಿಕಾಂತ, ರವಿ, ಪ್ರಭಾ ಮತ್ತು ನಾನು ಹಾಳೂರಿಗೆ ಉಳಿದವನೆ ಗೌಡ ಎಂಬಂತಾಗಿ ಹೋದೆವು ಎಂದು ಈಗ ಅನಿಸುತ್ತಿದೆ. ಕಾಲ ಚಕ್ರ ಉರುಳಿದಂತೆ ಪ್ರಭಾ ಬೆಂಗಳೂರಿಗೆ ತನ್ನ ಕೆಲಸವನ್ನು ವರ್ಗಾಯಿಸಿಕೊಂಡಳು. ಚಾನೆಲ್ ನ ಪ್ರಾರಂಭದಿಂದಿದ್ದ ಬಾಲು ಸರ್ ಕೆಲಸ ತೊರೆದ ನಂತರ ನಾವೇ ಎಲ್ಲಾ ಆಗಿ ಹೋದೆವು. ಅದು ಸುಮಾರು ಹತ್ತು ತಿಂಗಳ ಸ್ಥಿತಿ. ನಂತರ ನಮ್ಮ ನಾಯಕನಾಗಿ ಚಂದ್ರು ಇಳಿದು ಬಂದ (6ನೇ ಮಹಡಿಯ ರಿಸರ್ಚ ವಿಭಾಗದಿಂದ 3ನೇ ಮಹಡಿಯ ಮನರಂಜನಾ ವಿಭಾಗಕ್ಕೆ ಬಂದಿದ್ದು)  ನಮಗಿಂತ ವಯಸ್ಸಿನಲ್ಲಿ ಹಿರಿಯರಾದ ಜಯಶ್ರೀ ನಮ್ಮ ಜೊತೆ ಇದ್ದರು. ಅವರದು ಚಾನೆಲ್ ಪ್ರಾರಂಭದಿಂದಲು ಇರುವ ಒಡನಾಟ. ಅವರ ಜೊತೆ ಮೊದಲಿನಿಂದಲು ಕೊಂಚ ಮುನಿಸು, ಕೊಂಚ ನಗಿಸು ಎಂಬ ಸಂಬಂಧ. ಹೀಗಾಗಿ ಅವರೊಡನೆಯ ಸ್ನೇಹ ಭಾವ ಒಮ್ಮೆ ಆರಕ್ಕೆ ಮಗದೊಮ್ಮೆ ಮೂರಕ್ಕೆ.  ಈ ರೀತಿಯಾಗಿ ನಡೆದಾಗ ನಾನು ದಿಢೀರ್ ಎಂದು ಮದುವೆ ಎಂಬ ಹಳ್ಳಕ್ಕೆ ಬಿದ್ದೆ. ರೂಪಾ ನನ್ನನ್ನ ವರಸಿ ಬಂದಳು. ಅವಳದು ಮುಗ್ಧ ಪ್ರೀತಿ. ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರು ಮತ್ತೆ ನನ್ನೆಡೆಗೆ ಅಪ್ಯಾಯತೆಯಿಂದ ಓಡಿ ಬರುವ ಜೀವ ಅದು. ಅವಳಿಗೆ ನಾನೆ ಪ್ರಪಂಚ. ಆದರೆ ನಮ್ಮಿಬ್ಬರ ಭವಿಷ್ಯದ ಸುಂದರ ಕನಸುಗಳಿಗೆ ಅಲ್ಲಿ ಹೆಚ್ಚು ಸ್ಥಳ ಲಭ್ಯವಿರಲಿಲ್ಲ. ನಿತ್ಯ ಬದುಕಿನಲ್ಲಿ ಬದಲಾವಣೆಗಳು ಅವಶ್ಯ. ಅದು ನಾವು ಮಾಡುವ ವೃತ್ತಿಗು ಅನ್ವಯಿಸುತ್ತದೆ. ಏಕತಾನತೆಯಿಂದ ಹೊರ ಬರುವ ಅಗತ್ಯ ಮನಗಂಡು ಈ ಟೀವಿಗೆ ಗುಡ್ ಬಾಯ್ ಹೇಳಬೇಕಾಯಿತು. ಸದಾ compromise ಎಂದರೆ ಬದುಕು ಹಿಂಸೆ ಎನಿಸಿ ಬಿಡುತ್ತದೆ. ಹೀಗಾಗಿ ಬೆಂಗಳೂರಿನತ್ತ ಮುಖ ಮಾಡದೆ ನನಗೆ ಬೇರೆ ದಾರಿಯಿರಲಿಲ್ಲ. ಆಳಕ್ಕೆ ಇಳಿದ ಹಳೆಯ ಬೇರುಗಳು ಮೂಲ ಸ್ಥಾನಕ್ಕೆ ಎಳೆಯುತ್ತಿದ್ದವು. ಅದಕ್ಕೆ ಬೆಂಗಳೂರಿಗೆ ಓಡಿ ಬಂದೆ. ಇಬ್ಬರು ಮತ್ತೆ ಬದುಕನ್ನುರಿನಿವಲ್ ಮಾಡಿಕೊಳ್ಳುವ, ಅದಕ್ಕೊಂದಷ್ಟು ಎನರ್ಜಿ ರೀಫಿಲ್ ಮಾಡುವ ಪ್ರಯತ್ನದಲ್ಲಿದ್ದೇವೆ. ಮತ್ತೆ ಹೊಸ ಕನಸುಗಳು ಗರಿ ಗೆದರುತ್ತಿವೆ.

ಆದರೆ ಹೈದ್ರಾಬಾದ್ ತೊರೆದು ಬಂದ ನಂತರ ಕೆಲವು ಮುಖಗಳು ಇನ್ನು ಕಾಡುತ್ತಲೆ ಇವೆ. ಅದು ನಾವಿಬ್ಬರು ದಾಂಪತ್ಯಕ್ಕೆ ಕಾಲಿಟ್ಟ ನಂತರ ಸೇರಿದ ಮನೆಯ ಓನರ್ ಶರ್ಮಾ ಅಂಕಲ್ ಮತ್ತು ಆಂಟಿ. ಮೂರು ಮಕ್ಕಳು ವಿದೇಶದಲ್ಲಿದ್ದದ್ದರಿಂದ ಅಂಕಲ್ ಗೆ ನಮ್ಮ ಬಗ್ಗೆ ತುಂಬಾ ಒಲವಿತ್ತು. ತುಂಬಾ ಪಾಪದ ಜೀವಗಳು ಅವರು ಎನಿಸುತ್ತದೆ. ಏಕೆಂದರೆ ಮುಪ್ಪಿನ ಕಾಲದಲ್ಲಿ ಮಕ್ಕಳು ಜೊತೆ ಇಲ್ಲ ವಾದರೆ ಆ ಹಿಂಸೆ ಹೇಳಿಕೊಳ್ಳಲಾರದಂತಹದ್ದು. ಅವರ ಮನೆಯಲ್ಲಿನ ಪೂರ್ಣ ವರ್ಷ ಒಂದೇ ಒಂದು ಸಾರಿಯು ಯಾವದಕ್ಕು ತೊಂದರೆ ಮಾಡದ ಹಿರಿಯ ಜೀವಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೆ. ಅವರ ಮನೆಯನ್ನು ಅನಿವಾರ್ಯವಾಗಿ ಖಾಲಿ ಮಾಡಬೇಕಾಯಿತು. ಸಂಬಂಧಿಗಳ ಮದುವೆಗೆಂದು ಅಂಕಲ್ ಮನೆ ಖಾಲಿ ಮಾಡಲು ಮನವಿ ಮಾಡಿಕೊಂಡರು. ಮನಸಿರದಿದ್ದರು ಅನಿವಾರ್ಯವಾಗಿ ಬಿಟ್ಟು ಬೇರೆ ಮನೆಗೆ ಹೋದೆವು. ಆದರೆ ನಾವು ಹೈದ್ರಾಬಾದ್ ಬಿಟ್ಟು ಬರುವ ಸಮಯದಲ್ಲಿ ಅಂಕಲ್ ಮತ್ತು ಆಂಟಿ ಬಹು ಖುಷಿಯಿಂದ ಮಕ್ಕಳನ್ನು ನೋಡಲು ವಿದೇಶಕ್ಕೆ ಹಾರಿದ್ದರು. ಹೀಗಾಗಿ ಅವರ ಭೇಟಿ ಸಾಧ್ಯವಾಗಲೇ ಇಲ್ಲ. ಇವರ ಜೊತೆಗೆ ಆ ಮನೆಯ ಹತ್ತಿರವಿದ್ದ XEROX ಅಂಗಡಿ ಅಂಕಲ್ ಕೂಡಾ ನೆನಪಿನ ಪುಟದಲ್ಲಿ ಹಾಗೆ ಉಳಿದು ಹೋಗಿದ್ದಾರೆ. ಅದೇ ರೀತಿ ಅಂಕಲ್ ಮನೆ ಮುಂದಿನ ದುರ್ಗಾ ದೇವಸ್ಥಾನ, ವಿರಳವಾಗಿ ಹೋಗುತ್ತಿದ್ದ ರಾಯರ ಮಠ, ಪ್ರೀತಿಯ ಪ್ರಸಾದ ಸಿಗುತ್ತಿದ್ದ ರಾಮ ದೇವರ ದೇವಸ್ಥಾನ, ಮನದ ಬೇಸರ ದೂರ ಮಾಡುತ್ತಿದ್ದ ಸಾಂಘಿ ಟೆಂಪಲ್, ಎಲ್ ಬಿ ನಗರದಲ್ಲಿನ ಮೋರ್ ಶಾಪಿಂಗ್ ಮಾಲ್, ಮನೆಯ ಹತ್ತರದ ರಿಲಾಯನ್ಸ ಮತ್ತು ಫ್ರೆಶ್ ಎಟ್ ಹೀಗೆ ವ್ಯಕ್ತಿಗಳ ಜೊತೆ ಸ್ಥಳಗಳು ಮನಸಿಗೆ ಹತ್ತಿರವಾಗಿದ್ದವು. ಅಂತಯೇ ತುಂಬಾ ಲೆಕ್ಕಚಾರದ ಮನುಷ್ಯ ದಿನಸಿ ಅಂಗಡಿ ವಿರೇಶ ಕೂಡಾ ಸುಮಾರು 4-5 ವರ್ಷ ಉದ್ರಿ ಲೆಕ್ಕದ ಮೇಲೆ ದಿನ ಬಳಕೆ ವಸ್ತು ನೀಡಿ ಸಹಕರಿಸಿದ್ದಾ. ಹಾಗೆಯೇ ತುಂಬಾ ಪ್ರೀತಿಯಿಂದ ನೆನೆಯ ಬೇಕಾದದ್ದು ಖಾಲಿ ಆದ ತಕ್ಷಣ ಸಿಲೆಂಡರ್ ಒದಗಿಸುತ್ತಿದ್ದ HP GAS ನ ಶ್ರೀನಿವಾಸನನ್ನು. ಯಾವುದೇ ಅಪೇಕ್ಷೆ ಇಲ್ಲದೆ ಹೇಗೋ ಸಿಲೆಂಡರ್  adjust ಮಾಡಿಕೊಂಡು ಬಂದು ನೀಡುತ್ತಿದ್ದ. ಬರುವಾಗ ನಾನು ಪ್ರೀತಿಯ ಧನ್ಯವಾದ ಹೇಳಿದಾಗ ಶ್ರೀನಿವಾಸ “ಮಾಕು ಮಂಚಿ ಕಸ್ಟಮರ್ ಮಿಸ್ ಆಯಿಂದಿ ಸರ್” ಎಂದಾಗ ನನಗೆ ಮಾತೇ ಹೊರಡಲಿಲ್ಲ. ಈಗಲೂ ಕಣ್ಣಾಲಿಗಳಲ್ಲಿ ನೀರು ತುಂಬುತ್ತಿದೆ. ಈ ರೀತಿಯಾಗಿ ಕೇವಲ ವ್ಯವಹಾರಿಕ ಸಂಬಂಧ ಒಂದರಿಂದಲೇ ತಮ್ಮ ಪ್ರೀತಿಯನ್ನು ನಮ್ಮೊಂದಿಗೆ ಹಂಚಿಕೊಂಡು ಹೃದಯಕ್ಕೆ ತೀರಾ ಸನಿಹರಾದ ಇವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬಹುದಿತ್ತೊ ನಾ ಕಾಣೆ. ಆದರೆ ಇವರೆಲ್ಲ ಹೃದಯದ ಆಳಕ್ಕೆ ಇಳಿದು ಪ್ರೀತಿಯ ಮನೆ ಮಾಡಿಬಿಟ್ಟಿದ್ದಾರೆ. ವೃತ್ತಿಯ ಭಾಗವಾಗಿದ್ದರು ವೈಯಕ್ತಿಕ ಬದುಕಿನ ಸುಖ ದುಃಖ ಹಂಚಿಕೊಂಡ ಗೆಳೆಯರು ಒಂದು ಕಡೆ. ದಿನದ ಬದುಕಿನ ಅವಶ್ಯಕತೆಗಳ ಮೂಲಕ ಹತ್ತಿರವಾದ ಬಳಗ ಇನ್ನೊಂದು ಕಡೆ. ಇವರೆಲ್ಲರಿಗು ಈ ಮೂಲಕ ಪ್ರೀತಿಯ ಧನ್ಯವಾದಗಳು…..

ಅಲ್ಲಿನ ನೆನಪುಗಳ ಛಾಯೆಯಲ್ಲಿ ಮೂಡಿದ ಚಿತ್ರಗಳು ಹಲವು. ಅವುಗಳನ್ನೆಲ್ಲಾ ಮುಂದೆ ಬರುವ ದಿನಗಳಲ್ಲಿ ಆಗಾಗ ಹಂಚಿ ಕೊಳ್ಳುತ್ತಾಹೋಗುತ್ತೇನೆ. ಯಾಕೆಂದರೆ ವಿಷದವಾಗಿ ಇಲ್ಲಿ ಯಾರ ಬಗ್ಗೆಯು ಬರೆಯಲು ಆಗಿಲ್ಲ. ಅವರೆಲ್ಲರ ಪ್ರೀತಿಯಲ್ಲಿ ಪಡೆದ ಪಾಲನ್ನು ನೆನಪಿಸಿಕೊಳ್ಳಲೇ ಬೇಕು.

 

ಟ್ಯಾಗ್ ಗಳು:

 
%d bloggers like this: