RSS

Monthly Archives: ಜೂನ್ 2011

ಸಣ್ಣ..ಸಣ್ಣ ಖುಷಿಗಳೆ ಬದುಕಿನ ನೂರೆಂಟು ಸಂಭ್ರಮದ ಕ್ಷಣಗಳು…

ಇದೊಂದು ಸಂತಸ ಹಂಚಿಕೊಳ್ಳಲೆಬೇಕೆಂದು ಈ ಒಕ್ಕಣಿ. ಯಾವುದೇ ಕೆಲಸವನ್ನು ಹಿಡಿದಷ್ಟು ಶ್ರದ್ಧೆಯಿಂದ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸವಲ್ಲ. ದೈನಂದಿನ ಒತ್ತಡಗಳು ನಮ್ಮ ಬದುಕಿನ ಓಘವನ್ನೆ ಬದಲಿಸಿ ಬಿಡುತ್ತವೆ. ಏನೋ ಮಾಡುವ ಉತ್ಸಾಹದಲ್ಲಿ ಮುನ್ನುಗ್ಗುತ್ತೇವೆ. ಆದರೆ ಯಾವುದೋ ಶಕ್ತಿ ನಮ್ಮನ್ನ ಮತ್ತೆಲ್ಲೋ ಏಳೆದು ಕೊಂಡು ಹೋಗಿರುತ್ತದೆ. ಎಲ್ಲೋ ಒಂದು ಕಡೆ ತಗುಲಿಕೊಳ್ಳಬೇಕಲ್ಲ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಲೆ ತಗ್ಗಿಸಿಕೊಂಡು ಹೊರಟು ಬಿಡುತ್ತೇವೆ. ಅದಕ್ಕೆ ಡಿವಿಜಿ ಹೇಳಿದ್ದು, “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ..” ಎಂಬುದು ನಮ್ಮೆಲ್ಲರ ಘೋಷವಾಕ್ಯವೇ!

ಈ ನನ್ನ “ಕಟುಗ ರೊಟ್ಟಿ”ಗೆ ಇಂದು ವರ್ಷದ ಸಂಭ್ರಮ. ಮಗು ಮೊದಲ ಕಿರು ಹೆಜ್ಜೆ ಇಟ್ಟ ಕ್ಷಣದಲ್ಲಿ ಪುಳಕಗೊಂಡಂತೆ ನಾನಾಗಿದ್ದೇನೆ. ಇದೊಂದು ದೊಡ್ಡ ಸಾಹಸವಲ್ಲ ಎಂಬುದು ನನಗೆ ಗೊತ್ತು. ಆದರೆ ನನ್ನ ಹಲವು ಪ್ರಯತ್ನಗಳು ಮೂರು ತಿಂಗಳಿಗೆ ಕಣ್ಣು ಮುಚ್ಚುವುದು ಸಾಮಾನ್ಯ. ಹಾಗಿರುವಾಗ ಈ ಕೆಲಸವು ಅವುಗಳಲ್ಲಿ ಒಂದಾಗಿ ಬಿಡುವುದೋ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಆದರೆ ನನ್ನ ಪರಿಚಯದಲ್ಲಿ ಹೇಳಿದ ಹಾಗೆ ಬರೆಯುವುದು ನನಗೆ ಪ್ರೀತಿಯ ಹವ್ಯಾಸ. ಆದರೆ ಎಷ್ಟು ಬರೆಯುತ್ತೇನೆ. ಏನು ಬರೆಯುತ್ತೇನೆ ಎಂಬುದನ್ನು ಹೇಳಲಾರೆ. ಮನಸೆಂಬ ಮಂಗ್ಯಾ ಸಿಕ್ಕ, ಸಿಕ್ಕ ಮರಕ್ಕ್ಯಲ್ಲ ನೇತಾಡುವಂಗ ನಾನು ಏನೇನೋ ಅನಿಸಿದ್ದನ್ನೆಲ್ಲ ಗೀಚಿದೆ. ಅದರಲ್ಲಿ ಪ್ರಬುದ್ಧ, ಅಪ್ರಬುದ್ಧ ವಿಚಾರಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವ ಗೋಜಿಗೆ ಹೋಗಲಿಲ್ಲ. ಯಾಕೆಂದರೆ ಅದು ನನ್ನ ಕೈಯನ್ನ ಹಿಡಿದೆಳೆಯುವ ಸಾಧ್ಯತೆಯಿತ್ತು. ಹೀಗಾಗಿ ನನ್ನ ಯೋಚನಾ ಲಹರಿ ಮತ್ತು ಬುದ್ಧಿಮತ್ತೆಗೆ ನಿಲುಕಿದಷ್ಟು ವಿಚಾರಗಳನ್ನ ಮಂಡಿಸುತ್ತಾ ಮುನ್ನಡೆದೆ. ಮಧ್ಯ ಕೆಲವು ತಿಂಗಳು ಬ್ಲಾಗ್ ಲೇಖನಗಳಿಲ್ಲದೆ ಬಿಕೋ ಎಂದದ್ದಿದೆ. ಆದರೆ ಅದ್ಯಾವುದೋ ಶಕ್ತಿ ಮತ್ತೆ ಹಿಡಿದೆಳದು ಬರೆಯಲು ಪ್ರೇರೇಪಿಸಿತು. ಆ ಹಟಕ್ಕೆ ಈ ಮೊದಲ ಹುಟ್ಟು ಹಬ್ಬದ ಸಂಭ್ರಮ.

ನನಗಿಂದು ಮೊದಲ ಹುಟ್ಟು ಹಬ್ಬ (ಕೃಪೆ:flickr.com)

ನನಗಿಂದು ಮೊದಲ ಹುಟ್ಟು ಹಬ್ಬ (ಕೃಪೆ:flickr.com)

 ಖಂಡಿತಾ ನಾನು ಇನ್ನು ಬ್ಲಾಗಿಗೆ ಹೊಸ, ಹೊಸ ಬರವಣಿಗೆಗಳನ್ನ ಸೇರಿಸುತ್ತಿದ್ದೇನೆಂದರೆ ಅದಕ್ಕೆ ಓದುಗರಾದ ನೀವು ಕಾರಣ. ನಿಮಗೆ ಕೃತಜ್ಞತೆ ಸಲ್ಲಲೆಬೇಕು. ನನ್ನ ತುಮಲಗಳನ್ನು ಇಲ್ಲಿ ಬಿಡಿಸಿದ ಪ್ರತಿ ಸಾರಿಯು ನೀವು ಭೇಟಿ ಕೊಟ್ಟು ಹೋಗಿದ್ದೀರಿ. ನಿಮಗೆ ಇಷ್ಟವಾದಷ್ಟು ಅಕ್ಷರಗಳ ಮೇಲೆ ಕಣ್ಣಾಡಿಸಿದ್ದೀರಿ. ನಾನು ಬರೆದಿರುವುದು ನಿಮಗೆ ತೃಪ್ತಿ ನೀಡಿದೆಯೋ ಇಲ್ಲವೋ, ಇಂದಿಗು ಹೊಸ ಪೋಸ್ಟ ಹಾಕಿದಾಗ ಹಣಕಿ ಹಾಕಿ ಹೋಗ್ತೀರಿ. ಅದಕ್ಕೆ ಬ್ಲಾಗ 1,173 ಹಿಟ್ಸಗಳನ್ನು ಕಂಡಿರುವುದಲ್ಲವೇ! ಇದೇನು ದೊಡ್ಡ ಸಂಖ್ಯೆಯಲ್ಲದಿರಬಹುದು. ಆದರೆ ಅಷ್ಟು ಮಾತ್ರಕ್ಕೆ ನನ್ನ ಬರವಣಿಗೆ ಹಬ್ಬಿದೆಯಲ್ಲ ಎಂಬುದೆ ನನನ್ನು ಕುಣಿದು ಕುಪ್ಪಳಿಸುವಂತೆ ಮಾಡಿರುವುದು. ನಮ್ಮ ಬದುಕಿನಲ್ಲಿ ಚಿಕ್ಕ, ಚಿಕ್ಕ ಸಂತಸಗಳೆ ದೊಡ್ಡ ಸಂಭ್ರಮವನ್ನ ತಂದು ಕೊಡುವುದಲ್ಲವೆ. ಅದಕ್ಕೆ ನನಗಿಂದು ನನ್ನ ಮೊದಲ ಹುಟ್ಟು ಹಬ್ಬದಷ್ಟೆ ಖುಷಿಯಾಗಿರುವುದು.

ನಿಮ್ಮೆಲ್ಲರಿಗು ಧನ್ಯವಾದಗಳು...

ನಿಮ್ಮೆಲ್ಲರಿಗು ಧನ್ಯವಾದಗಳು...

ಮತ್ತೊಮ್ಮೆ ಹಣಕಿ ಹಾಕಿದ ನಿಮಗೆಲ್ಲ ಪ್ರೀತಿ ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸಲು ಬಯಸುತ್ತೇನೆ. ಪ್ರಾರಂಭದಲ್ಲಿ ಬೆನ್ನು ತಟ್ಟಿದ ಶೆಟ್ಟರ್ ಅವರಿಗೆ, ಸದಾ ನನ್ನ ಬರವಣಿಗೆಗಳ ಮೇಲೆ ಕಣ್ಣಾಡಿಸುವ ತಮ್ಮನಂತಿರುವ ವಾಸು.ಪುರೋಹಿತ್ ಗೆ, ಮೆಚ್ಚುಗೆಯ ಮಾತುಗಳನ್ನಾಡಿದ ರಂಜಿತ್ ಮತ್ತು ವಿನಾಯಕ ಕೋಡ್ಸರ ಅವರಿಗೆ, ದೂರದ ಅಮೆರಿಕಾದಲ್ಲಿದ್ದರು ಕನ್ನಡದ ಬಗ್ಗೆ ತುಂಬು ಅಭಿಮಾನ ಹೊಂದಿದ, ನನ್ನ ಲೇಖನಗಳ ಶೈಲಿಗೆ ಹೆಮ್ಮೆ ಪಟ್ಟ ಮಲ್ಲಿ ಸಣ್ಣಪ್ಪನವರಿಗೆ, ಕೆಲವು ದಿನಗಳಿಂದೀಚಿಗೆ ನನ್ನ ಪ್ರತಿ ಬರವಣಿಗೆಗೆ ಸ್ಪಂದಿಸುವ ಅಣ್ಣನ ಮಗಳಾದ ಸ್ಮೀತಾಳಿಗೆ, ಫೇಸ್ ಬುಕ್ನಲ್ಲಿ ನನ್ನ ಪೋಸ್ಟಗಳಿಗೆ ಲೈಕ್ ಬಟನ್ ಒತ್ತುವ ರಾಘು ಮತ್ತು ಹರ್ಷನಿಗೆ ಇವರೆಲ್ಲರ ಜೊತೆ ನಾನು ಬರೆದಾದ ನಂತರ ನನ್ನ ಬರವಣಿಗೆಯ ಓದಿಗೆ ಮೊದಲ ಕಿವಿಯಾಗುವ, ಅದನ್ನು ಕೇಳಿ ಸ್ಪೂರ್ತಿಯ ಮಾತುಗಳನ್ನಾಡುವ, ತೆಲಗು ನಾಡಲ್ಲಿ ಹುಟ್ಟಿ ಬೆಳದದ್ದಕ್ಕೆ  ಕನ್ನಡ ಭಾಷೆಯ ಅಷ್ಟೊಂದು ಪರಿಚಯವಿಲ್ಲದ ನನ್ನ ಪ್ರೀತಿಯ ಪತ್ನಿ ರೂಪಾಗೆ, ಇವರೆಲ್ಲರಿಗು ನನ್ನ ಮನದುಂಬಿದ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ನನ್ನ ವೃತ್ತಿ ಕೊಂಚ ಮಗ್ಗಲು ಬದಲಿಸಿದೆ. ಬದಲಾವಣೆ ಜಗದ ನಿಯಮ. ಅದು ನನ್ನ ವೃತ್ತಿಗು ಅನ್ವಯವಾಗಿದೆ. ವೃತ್ತಿಯ ಜೊತೆಗು ನಾನಿದ್ದ ಸ್ಥಳವು ಬದಲಾಗುತ್ತಿದೆ. ಮುಂದಿನ ಜುಲೈಗೆ ಹೊಸ ಇನ್ನಿಂಗ್ಸ ಪ್ರಾರಂಭವಾಗಲಿದೆ. ಅದನ್ನೆಲ್ಲ ಇಷ್ಟರಲ್ಲೆ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತೇನೆ. ಹಾಗೇ ಬ್ಲಾಗ್ ಗೆ ಕೂಡಾ ಹೊಸ ವಿನ್ಯಾಸ ಹಾಗು ಬರವಣಿಗೆ ನೀಡುವ ಉತ್ಸಾಹದಲ್ಲಿರುವೆ. ಎಲ್ಲವು ಅಂದುಕೊಂಡಂತೆ ಆದರೆ ನನ್ನ ಬದುಕಿನ ಕ್ಯಾನವಾಸಗೆ ಮತ್ತಷ್ಟು ರಂಗು ತುಂಬಲಿದೆ. ನಿಮ್ಮ ಅಭಿಮಾನ ಹೀಗೆ ಇರಲಿ ಎಂದಷ್ಟೆ ನನ್ನ ಕೋರಿಕೆ.

Advertisements
 

ಟ್ಯಾಗ್ ಗಳು:

ಕಳ್ಳನ ಮನಸ್ಸು…ಹುಳ್ಳ..ಹುಳ್ಳಗೆ… ಎಂಬುದು ಇದಕ್ಕೇನಾ!?

ಕೊನೆಗೂ ನಮ್ಮನ್ನಾಳುವ ಘನ (ಗಟ್ಟಿ ಪಿಂಡ) ರಾಜಕಾರಣಿಗಳು ತಮ್ಮ ಬಂಡವಾಳವನ್ನ ತೆರೆದಿಟ್ಟಿದ್ದಾರೆ. ಖಂಡಿತ ಇದರಲ್ಲಿ ಯಾವ ವಿಶೇಷವೂ ಇಲ್ಲ. ನಮಗಿಂದು ಗೊಸುಂಬೆಗಳು ಕಾಣದಿರಬಹುದು. ಆದರೆ ಜಿರಲೆಗಳಂತೆ ಅಸಹ್ಯ ಹುಟ್ಟಿಸುವ ರಾಜಕಾರಣಿಗಳನ್ನು ಆ ಮೂಲಕ ನೋಡಬಹುದಾಗಿದೆ. ಒಂದು ಪಳೆಯುಳಿಕೆ ಜೀವಂತವಾಗಿಟ್ಟಿರುವ ಹೆಮ್ಮೆ ಈ ವರ್ಗಕ್ಕೆ ದಕ್ಕಬಹುದೇನೋ. ಖಂಡಿತಾ ಇದು ಕೇವಲ ರಾಜ್ಯ ರಾಜಕಾರಣಕ್ಕೆ ಅನ್ಯಯಿಸುವುದಿಲ್ಲ. ಇದಕ್ಕೆ ಕೇಂದ್ರದವರು ಸಮಾನ ಪಾಲುದಾರರು.

ನಿಜಕ್ಕೂ ಇದಕ್ಕಿಂತ ತಲೆ ತಗ್ಗಿಸುವಂತಹ ವಿಚಾರಗಳು ಬೇರೆ ಇರಲಾರವು. ಈಗ ಎಲ್ಲೆಡೆ ಲೋಕಪಾಲ ಮಸೂದೆಯ ಬಗ್ಗೆ ಬಿಸಿ,ಬಿಸಿ ಚರ್ಚೆ ಆರಂಭವಾಗಿದೆ. ಇದು ಅದೆಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತದೋ ದೇವರೆ ಬಲ್ಲ  ಆದರೆ, ಈ ಮಸೂದೆ ಬರುವುದರಿಂದ ದೇಶಕ್ಕೆ ಕೊಂಚವಾದರು ಒಳಿತಾದೀತು ಎಂಬುದು ಸಾಮಾನ್ಯ ಜನರ ಆಶಯ. ಅದಕ್ಕಾಗಿಯೇ ಒಕ್ಕೂರಲಿನಿಂದ ಬ್ರಷ್ಟಾಚಾರದ ವಿಷಯದಲ್ಲಿ ಯಾರು ಧ್ವನಿ ಎತ್ತಿದರು ನಮ್ಮ ಮನಸ್ಸು ಅವನನ್ನು ನಿಜ ನಾಯಕನಂತೆ ಹಿಂಬಾಲಿಸುತ್ತದೆ.ಅದು ಅಣ್ಣಾಜೀ ಇರಬಹುದು, ಬಾಬಾ ರಾಮದೇವ್ ಇರಬಹುದು. ಬ್ರಷ್ಟಾಚಾರದ ವಿಷಯದಲ್ಲಿ ಮನಸ್ಸು ಎಷ್ಟೊಂದು ರೋಸಿ ಹೋಗಿದೆಯೆಂದರೆ ಮನೆಯಲ್ಲಿ ಹಾವು ಹೊಕ್ಕರೆ ಹುಡುಕಾಡಿ ಹೊಡೆದು ಹಾಕುವಂತೆ ಈ ವಿಷ ಜಂತುವನ್ನು ನಿರ್ನಾಮ ಮಾಡಲು ಜನ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ.

ಯಾವುದೇ ದೇಶದಲ್ಲಾಯ್ತು ಅಭಿವೃದ್ಧಿಯ ಮಂತ್ರ ಜಪಿಸಬೇಕಾದದ್ದು ಮತ್ತು ಸಾಧಿಸಿ ತೋರಿಸಬೇಕಾದದ್ದು ಆ ಪ್ರದೇಶವನ್ನು ಪ್ರತಿನಿಧಿಸುವ ಸರಕಾರ. ನಾಲಿಗೆ ಒಳ್ಳೆಯದಾಗಿದ್ದರೆ ನಾಡೆಲ್ಲ ಒಳ್ಳೆಯದು ಎಂಬಂತೆ ನಮ್ಮ ಸರಕಾರಗಳೆ ಗಬ್ಬೆದ್ದು ಹೋಗಿರುವಾಗ ಮೂಗಿಗೆ ರಾಚುವುದೆಲ್ಲ ದುರ್ನಾತವೇ ಅಲ್ಲವೇ!

ವಿಪರ್ಯಾಸವೆಂದರೆ ಯಾರು ತನಿಖೆಗೆ ಹೆಚ್ಚು ಅರ್ಹರೊ, ಅವರನ್ನೆ ಇದರಿಂದ ಹೊರಗಿಡಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಲೋಕಪಾಲ ಮಸೂದೆ ರೂಪಿಸಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳ ವರ್ತನೆಗೆ ಅದೆಲ್ಲಿಂದ ಉಗಿಯ ಬೇಕೋ ಗೊತ್ತಾಗುತ್ತಿಲ್ಲ. ನಮ್ಮಲ್ಲಿ ಅತಿ ಭ್ರಷ್ಟಾಚಾರ ಇರುವುದೆ ರಾಜಕೀಯದಲ್ಲಿ, ಇನ್ನು ಅವರನ್ನೆ ಹೊರಗಿಟ್ಟು ಮಸೂದೆ ಮಾಡುವ ಔಚಿತ್ಯವಾದರು ಏನು? ಇದಕ್ಕೆ ನಮ್ಮ ನಾಯಕರೆ ಉತ್ತರಿಸಬೇಕು. ಯಾವಾಗಲು ಮಸೂದೆ ಮಾಡ ಹೊರಟಾಗ ಕರಡು ಸಮಿತಿ ಮತ್ತು ಸರಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ಕಾಯ್ದೆ ಜಾರಿಯಾಗಬೇಕಾದರು ಆಡಳಿತ ಪಕ್ಷ ಅದರಿಂದ ತನಗಾಗುವ ಒಳಿತು, ಕೆಡಕುಗಳನ್ನು ಅಂದಾಜಿಸಿಯೆ ಅಂಕಿತ ಒತ್ತುವುದು. ಹಾಗಿರುವಾಗ ಲೊಕಪಾಲ ಮಸೂದೆಯಲ್ಲಿನ ಕೆಲವು ನಿಯಮಗಳ ಜಾರಿಗೆ ಧೈರ್ಯ ತೋರದಿರುವ ಹಿಂದಿನ ಮರ್ಮ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ!

ಈ ರಾಷ್ಟ್ರದ ಸಂವಿಧಾನ ಮತ್ತು ಅದು ಒಳಗೊಂಡಿರುವ ಕಾನೂನಿನ ಮುಂದೆ ಎಲ್ಲರು ಸಮಾನರು ಎಂದು ಹೇಳಿದ ಮೇಲೆ, ಈ ಮಸೂದೆಗೆ ಪ್ರದಾನಿ, ಮುಖ್ಯ ನ್ಯಾಯಾಧೀಶರು, ಸಂಸತ್ತಿನ ಸದಸ್ಯರೂ ಒಳಪಟ್ಟರೆ ಅದರಲ್ಲಿ ತಪ್ಪೇನಿದೆ. ಇದೆಂಥ ಸಮಾನತೆಯ ಪಾಠ ಎಂಬುದು ಅರಿವಾಗುತ್ತಿಲ್ಲ. ಇವರೆಲ್ಲರೂ ಇಲ್ಲಿನ ಸಂವಿಧಾನಕ್ಕೆ ಬದ್ಧರಾದವರು ಮತ್ತು ಅದರ ವ್ಯಾಪ್ತಿಗೆ ಒಳಪಡುವವರು ಎಂದ ಮೇಲೆ ವಿಚಾರಣೆಗೆ ಹಿಂದೇಟೇಕೆ. ಅಂದರೆ ಇವರಿಗೆಲ್ಲ ಭವಿಷ್ಯದಲ್ಲಿ ಇದರಿಂದಾಗುವ ಅಪಾಯದ ಅರಿವಿರಲೇಬೇಕಲ್ಲವೆ.  ಇಲ್ಲದಿದ್ದರೆ ಕಳ್ಳನ ಮನಸ್ಸು ಹುಳ್ಳ..ಹುಳ್ಳಗೆ…ಏಕೆ ಆಗುತ್ತಿತ್ತು. ಇಷ್ಟೆ ಇವರೆಲ್ಲರ ಯೋಗ್ಯತೆ. ಯಾವುದೆ ಕಾಯ್ದೆಯಾದರು ಅದರಿಂದ ತಮ್ಮನ್ನು ಹೊರಗಿಟ್ಟು ನೋಡುವದಾದರೆ ನೀವು ಏನು ಭೂಲೋಕದ  ದೇವಮಾನವರೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಇಂತಹ ಕಾನೂನಿನಿಂದ ಯಾವ ಲಾಭವಾಗುತ್ತದೆ. ಹಿಡಿದರೆ ತಿಮಿಂಗಲೆ ಹಿಡಿಯಬೇಕು. ಅದು ಅಪಾಯಕಾರಿ. ಸಣ್ಣ ಪುಟ್ಟ ಮೀನುಗಳು ಯಾವಾಗ ಬೇಕಾದರು ಬಲೆಗೆ ಬೀಳಬಲ್ಲವು. ಇದಕ್ಕೆಲ್ಲಾ ಕಾರಣ ಇಚ್ಛಾಶಕ್ತಿಯ ಕೊರತೆ ಅಷ್ಟೇ! ಯಾವೊಬ್ಬ ರಾಜಕಾರಣಿಯು ಭ್ರಷ್ಟಾಚಾರದ ವಿಷಯದಲ್ಲಿ ಧ್ವನಿ ಎತ್ತರಿಸಿ ಮಾತನಾಡಲಾರ. ನಾನು ಸತ್ಯವಂತ ಎಂಬ ಸೋಗು ಹಾಕಲು ಮೇಲ್ಮಟ್ಟದ ಹೇಳಿಕೆಗಳನ್ನು ಕೊಡುತ್ತಿರಬಹುದು. ಆದರೆ ಮೂಲತಃ ಎಲ್ಲರು ಒಂದೇ ಜಾತಿಗೆ ಸೇರಿದವರು. ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತಹ ಅಸಡ್ಡೆತನ ನಮ್ಮ ನಾಯಕರದ್ದು.

ಅಣ್ಣಾ ಹಜಾರೆ ಸೇರಿದಂತೆ ನಾಗರಿಕ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ಬಿಗಿಪಟ್ಟು ಹಿಡಿದು ಕಾಯ್ದೆಯನ್ನು ಕಠಿಣಗೊಳಿಸಲು ಹೆಣಗುತ್ತಿದ್ದರೆ, ಸರ್ಕಾರದ ಪ್ರತಿನಿಧಿಗಳು ತಮ್ಮನ್ನು ಹೊರಗಿಟ್ಟುಕೊಂಡು ಕಾಯ್ದೆ ಮಾಡುವ ಸರ್ಕಸ್ ಮಾಡುತ್ತಿವೆ. ಹಾಗಾದಲ್ಲಿ ಲೋಕಪಾಲ ಮಸೂದೆಗೆ ಅರ್ಥವಾದರು ಇದ್ದೀತಾ! ಇದು ನಮ್ಮ ದೇಶದ ದುರಂತ. ಹಲ್ಲಿಲ್ಲದ ಹಾವಿಗೆ ಯಾರು ಅಂಜುವುದಿಲ್ಲ. ಹಾಗೇ ಈ ಕಾನೂನು ಆಗುವುದು ಎಂಬುದರಲ್ಲಿ ಯಾವ ಸಂದೇಹವಿದೆ. ಜನರ ಕಿಚ್ಚು, ರಾಷ್ಟ್ರದ ಏಳ್ಗೆ, ಒಂದು ಸುಂದರ ಸಮಾಜದ ಪರಿಕಲ್ಪನೆ ಈ ಯಾವ ಭಾವನೆಗಳು ಅರ್ಥವಾಗದ ಸರಕಾರ ನಾಮಾಕಾವಾಸ್ತೆ ಎಂಬಂತೆ ಮಸೂದೆಯನ್ನು ರೂಪಿಸಲು ಹೊಂಚು ಹಾಕಿದೆ. ಹೀಗಾಗಿಯೇ ಅದು ದಿಗ್ವಿಜಯ್ ಸಿಂಗನಂತಹ ಬಕೀಟ್ ರಾಜಕಾರಣಿ, ಕಪಿಲ್ ಸಿಬಲ್ ನಂತಹ ಎರಡು ನಾಲಿಗೆಯ ವ್ಯಕ್ತಿಗಳ ಮುಖಾಂತರ ನಾಗರಿಕ ಸಮಿತಿಯ ಸದಸ್ಯರ ವೈಯಕ್ತಿಕ ನಿಂದನೆಯಂತಹ ಕೀಳು ಮಟ್ಟಕ್ಕೆ ಇಳಿಯುತ್ತಿದೆ. ಇವರನ್ನೆಲ್ಲಾ ಸರಕಾರ ಮತ್ತು ಆ ಸರಕಾರವನ್ನ ನಿಯಂತ್ರಿಸುವ ವ್ಯಕ್ತಿಗಳು ಛೂ ಬಿಟ್ಟಿದ್ದಾರೆ ಎಂಬುದು ಸರ್ವವಿದಿತ. ಹಾಗಿರುವಾಗ ಮಸೂದೆ ರೂಪಿಸುವಲ್ಲಿ ಸರಕಾರಕ್ಕೆ ಯಾವುದೆ ಹಿಂಜರಿಕೆಯಿಲ್ಲ ಎಂಬ ಅವಿವೇಕದ ಹೇಳಿಕೆ ಬೇಕೆ.

ನಾವು ಎಷ್ಟೇ ಕೂಗು ಹಾಕಿದರು ಕಿವುಡ ಮತ್ತು ಭಂಡ ಜನ ಪ್ರತಿನಿಧಿಗಳ ಮುಂದೆ ಅದು ಅರಣ್ಯ ರೋಧನವಾಗುತ್ತದೆ. ಈಗಿನ ರಾಜಕಾರಣಿಗಳಿಂದ ಸುಶಿಕ್ಷಿತ ಮತ್ತು  ಸ್ವಚ್ಛ ಸಮಾಜದ ನಿರೀಕ್ಷೆಯೆ ಹಾಸ್ಯಾಸ್ಪವಾದದ್ದು. ಅದಕ್ಕಾಗಿ ನಾಯಿ ಬಾಲ ಡೊಂಕೆ ಎಂದು ಹಳ ಹಳಿಸುವದನ್ನು ಬಿಟ್ಟು ನಮಗೆ ಬೇರೆ ದಾರಿಯಿದೆಯೇ?

 

ಟ್ಯಾಗ್ ಗಳು:

ದೇವರಾಣೆ…!!! ಸಂವಿಧಾನ ಎಲ್ಲಿ ಹೋಯ್ತೋ ನಾ ಕಾಣೆ…!!!

ಇದು ವಿಪರ್ಯಾಸವೋ, ವಿಚಿತ್ರವೋ ಎಂಬ ದ್ವಂದ್ವ ನನ್ನನ್ನು ಕಾಡುತ್ತಿದೆ. ಈ ರಾಷ್ಟ್ರಕ್ಕೆ ಸಂವಿದಾನವೇ ದೊಡ್ಡ ದೇವರು ಎಂದು ಓದುತ್ತಾ ಬಂದ ನನಗೆ ಈಗಿನ ರಾಜಕಾರಣಿಗಳ ಆಣೆ, ಪ್ರಮಾಣದ ಡೊಂಬರಾಟಗಳು ನನ್ನ ತಿಳುವಳಿಕೆಯ ಬುಡವನ್ನೆ ಅಲ್ಲಾಡಿಸುತ್ತೀವೆ.Please help me..!

ರಾಜಕಾರಣಿಗಳು ದಿನಕ್ಕೊಂದು, ಯಾಕೆ ಕ್ಷಣಕ್ಕೊಂದು ಬಣ್ಣ ಬದಲಿಸುವ ಗೊಸುಂಬೆಗಳು ಎಂಬುದು ಬಹು ಚಾಲ್ತಿಯಲ್ಲಿರುವ ಮಾತು. ಆದರೆ ಅಧಿಕಾರದ ತುಟ್ಟ ತುದಿಯಲ್ಲಿ ಕುಳಿತಿರುವವರು, ಅಲ್ಲಿಂದ ಎದ್ದು ಬಂದವರು ತಮ್ಮ ತಮ್ಮ ಸಾಚಾತನದ ಪ್ರದರ್ಶನಕ್ಕೆ ಈ ದೇಶದ ಸಂವಿದಾನಕ್ಕೆ ಕಿಂಚಿತ್ತು ಬೆಲೆ ಕೊಡದೆ, ದೇವರು, ಆಣೆ, ಪ್ರಮಾಣ ಎಂದೆಲ್ಲ ಮಾತನಾಡುತ್ತಿರುವುದು ಈ ರಾಜ್ಯದ ದುರ್ದೈವ ಎಂದು ಭಾವಿಸಬೇಕಾಗುತ್ತದೆ.  ಇದು ಕೇವಲ ಆಸ್ತಿಕ, ನಾಸ್ತಿಕದ ಪ್ರಶ್ನೆ ಅಲ್ಲ. ದೈವಿಕ ಭಾವನೆಗಳು ವೈಯಕ್ತಿಕವಾದವು. ಅವುಗಳು ಒಂದು ರಾಜ್ಯವನ್ನಾಳುವ ನಾಯಕನ ಸತ್ಯವಂತಿಕೆಯ ಸಾಬೀತಿಗೆ ಗುರಾಣಿಗಳಾಗುವದಿಲ್ಲ. ಇಲ್ಲಿ ಯಾರು ಪ್ರಾಮಾಣಿಕರೋ, ಅಪ್ರಮಾಣಿಕರೋ ಆ ಭಗವಂತನೆ ಬಲ್ಲ. ಆದರೆ ಈ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿಯ ಮೇಲೆ ಆಪಾದನೆ ಮಾಡುತ್ತಾನೆ. ಅದಕ್ಕೆ ಸಂವಿಧಾನಿಕ ಚೌಕಟ್ಟಿನಲ್ಲಿ ಉತ್ತರಿಸ ಬೇಕಾದ ಮುಖ್ಯಮಂತ್ರಿಗಳು ಎಲ್ಲಾ ಬಿಟ್ಟು ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಲು ಪಂಥಾಹ್ವಾನ ಕೊಡುತ್ತಾರೆ. ಅವರು ಅದನ್ನು ಸ್ವೀಕರಿಸಿ ನಿಗದಿತ ದಿನಕ್ಕೂ ಮೊದಲೆ ಅಲ್ಲಿರುವೆ ಎಂದು ತಿರುಮಂತ್ರ ಕೊಡುತ್ತಾರೆ. ಭಪ್ಪರೆ ನಾಯಕರೆ!

ಪ್ರಿಯ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳೆ ನಮ್ಮದು ಸಾಂವಿಧಾನಿಕ ರಾಷ್ಟ್ರ. ನೀವು ಹೇಗೆ ಶಾಸಕಾಂಗದ ಪ್ರತಿನಿಧಿಗಳೋ, ಹಾಗೆ ಇಲ್ಲಿ ನ್ಯಾಯಾಂಗ ವ್ಯವಸ್ಥೆಯು ಇದೆ. ಇದು ಇಲ್ಲಿನ ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿದೆ. ನಿಮ್ಮ ಹರಿಶ್ಚಂದ್ರ ಅವತಾರದ ಅಂಕಗಳನ್ನೆಲ್ಲ ಕಾನೂನಿನ ಪರಿ(ದೆ)ಧಿಯೊಳಗೆ ಸಿದ್ಧ ಮಾಡಿ ತೋರಿಸ ಬೇಕು. ಅದನ್ನು ಬಿಟ್ಟು ದೇವರ ಮೇಲೆ ಆಣೆ ಮಾಡಲು ತೊಡೆ ತಟ್ಟಿ ನಿಂತಿರುವ ನೀವೆಲ್ಲ ನಮ್ಮ ಸಂವಿಧಾನಕ್ಕೆ ಮಾಡಿದ್ದು ಅಪ್ಪಟ ಅವಮಾನವಲ್ಲವೇ! ಹಾಗಾದರೆ ನಮ್ಮ ನ್ಯಾಯ ವ್ಯವಸ್ಥೆಗೆ ಬೆಲೆಯಾದರು ಏನು? ರಾಜ್ಯದ ಜನಕ್ಕೆ ನೀವು ಹೇಳಿ ಕೊಡುವ ನೈತಿಕತೆ ಇದೇನಾ? ಯಾವುದೆ ತಪ್ಪು-ಒಪ್ಪುಗಳಿಗೆ ಆಣೆ ಮಾಡಿಬಿಟ್ಟರೆ ಅಲ್ಲಿಗೆ ಎಲ್ಲವೂ  ಇತ್ಯರ್ಥವೇ?

ಇದು ಯಾವ ನ್ಯಾಯ ಸ್ವಾಮಿ!

ಇದು ಯಾವ ನ್ಯಾಯ ಸ್ವಾಮಿ!

 ಈ ಪ್ರಶ್ನೆಗಳಿಗೆಲ್ಲ ಮಂಜುನಾಥ ಸ್ವಾಮಿಯೇ ಉತ್ತರ ಹೇಳಬೇಕು.

ಆದರೆ ಅತಿ ದೊಡ್ಡ ಅನಾಚಾರ ನಮ್ಮ ಮೇಲ್ಪಂಕ್ತಿಯ ನಾಯಕರಿಂದಲೇ ನಡೆದದ್ದು ಈ ರಾಜ್ಯದ ದುರಂತ ಎನ್ನಬೇಕು.  ನಿಜಕ್ಕೂ ಇದು ನ್ಯಾಯ ವ್ಯವಸ್ಥೆಗೆ ಮಾಡಿದ ಅತಿ ದೊಡ್ಡ ಅವಮಾನ. ಇಷ್ಟಕ್ಕೆ ಮುಗಿಯದೆ ನಮ್ಮ ಮುಖ್ಯಮಂತ್ರಿಗಳು ಈ ಆಣೆಯ ಆಹ್ವಾನಕ್ಕೆ ಬಳಸಿಕೊಂಡದ್ದು ರಾಜ್ಯದ ಖಜಾನೆಯನ್ನ. ಈ ಜಾಹೀರಾತು ಪ್ರಕಟವಾಗಿದ್ದು ಕರ್ನಾಟಕ ವಾರ್ತಾ ಇಲಾಖೆಯ ಅಡಿಯಲ್ಲಿ. ಇದರ ಔಚಿತ್ಯವಾದರು ಏನಿತ್ತು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳೆ ಹೇಳಬೇಕು.

ಯಾಕೆಂದರೆ ಆಣೆ, ಪ್ರಮಾಣದ ಮೂಲಕ ಸತ್ಯವಂತ ಎಂದು ಸಾಬೀತು ಮಾಡಲು ಇದು ಮಕ್ಕಳಾಟವಲ್ಲ. ಇದಕ್ಕಾಗೆ ನೀವು ವೆಚ್ಚ ಮಾಡಿದ ಕೋಟಿ ರೂಪಾಯಿಗಳು ಇಲ್ಲಿನ ಪ್ರತಿಯೊಬ್ಬ ಪ್ರಜೆಯ ಜೇಬಿಂದ ಬಸಿದುಕೊಂಡದ್ದು. ಅಷ್ಟು ಪ್ರಾಮಾಣಿಕತೆ ತೋರಿಸದ ನೀವೂ ದೇವರ ಮೇಲೆ ಯಾವ ನೈತಿಕತೆಯಿಂದ ಆಣೆ ಮಾಡುತ್ತೀರಿ. ನಿಮ್ಮಿಬ್ಬರ ಆಣೆಯಿಂದ ಈ ರಾಜ್ಯಕ್ಕೆ ಆಗುವ ಲಾಭವಾದರು ಏನು. ಇಷ್ಟಕ್ಕು ನೀವು ಮಾಡಿದ ಪ್ರಮಾಣದ ಸತ್ಯಾಸತ್ಯತೆಯನ್ನು ಆ ದೇವರು ನೋಡಬಹುದು, ಅರಿಯಬಹುದು. ಆದರೆ ಈ ರಾಜ್ಯದ ಪ್ರಜೆಗಳಿಗೆ ನಿಮ್ಮ ಸತ್ಯವಂತೆಕೆಯ ದರ್ಶನವಾಗುವುದಾದರು ಹೇಗೆ. ಇವು ಮೂಲಭೂತ ಸಂಶಯಗಳು. ಖಂಡಿತಾ ಇವುಗಳಿಗೆ ಉತ್ತರ ಸಿಕ್ಕಲಾರದು.

ಆದರೆ ಪದೇ, ಪದೇ ನಮ್ಮ ರಾಜಕಾರಣಿಗಳು ಯಾಕೆ ಈ ಮಟ್ಟಕ್ಕೆ ಇಳಿಯುತ್ತಾರೋ ಎಂಬುದು ಚಿಂತೆಗೀಡು ಮಾಡುತ್ತದೆ. ಈ ಎಲ್ಲ ಬೆಳವಣಿಗೆಯ ನಂತರ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ ಹೀಗೂ.. ಉಂಟೇ…!!!

 

ಟ್ಯಾಗ್ ಗಳು:

 
%d bloggers like this: