RSS

Monthly Archives: ಮೇ 2011

ನಮ್ಮ ವಿದ್ಯುನ್ಮಾನ ಮಾಧ್ಯಮಗಳಿಗೆ ಕಾರಕೂನರು ಬೇಕಾಗಿದ್ದಾರೆ; ಪತ್ರಕರ್ತರಲ್ಲ

“There are two kinds of journalists. One kind are journalists, the other are stenographers.” ಖ್ಯಾತ ಪತ್ರಕರ್ತ ಪಿ.ಸಾಯಿನಾಥ ಅವರು ಹೇಳಿದ ಸಾಲುಗಳಿವು. ಕೇವಲ ಗ್ರಾಮೀಣ ಪತ್ರಿಕೋದ್ಯಮಕ್ಕೆ ತಮ್ಮ ಸೇವೆಯನ್ನ ಕೇಂದ್ರೀಕರಿಸಿದ, ಪ್ರಗತಿ ಪತ್ರಿಕೋದ್ಯಮದ ಬಗ್ಗೆ ತೀಕ್ಷ್ಣ ಗಮನ ಸೆಳೆದ ಸಾಯಿನಾಥ ನಮ್ಮ ಮಾಧ್ಯಮಗಳು ಮತ್ತು ಪತ್ರಕರ್ತರು ಗ್ರಾಮೀಣ ಪ್ರದೇಶಗಳ ಬಗ್ಗೆ ತಳದಿರುವ ಧೋರಣೆ ಹಾಗೂ ಅವರ ಸೀಮಿತ ಜ್ಞಾನದ ಬಗ್ಗೆ ಈ ರೀತಿ ವ್ಯಾಖ್ಯಾನಿಸುತ್ತಾರೆ. ಇಂದಿನ ನ್ಯೂಸ್ ಚಾನೆಲ್ ಗಳನ್ನು ಗಮನಿಸಿದರೆ ಖಂಡಿತಾ ಅವರ ಮಾತು ಅಕ್ಷರಶಃ ಸತ್ಯವಾಗಿದೆ ಎಂದೆನಿಸದೆ ಇರದು.

“ಸಂಪಾದಕೀಯ” ಬ್ಲಾಗ್ ಕೂಡಾ ನಮ್ಮ ಕನ್ನಡ ನ್ಯೂಸ್ ಚಾನೆಲ್ಗಳ “ಪಾಂಡಿತ್ಯ”ದ ಬಗ್ಗೆ ಅಪಸ್ವರ ಎತ್ತಿ ಲೇಖನ ಪ್ರಕಟಿಸಿದೆ. ಆದರೆ ಸತ್ಯ ಒಪ್ಪಿಕೊಳ್ಳಬೇಕಾದದ್ದೆ. ಅವುಗಳ ಮಿತಿ ಅಡಗಿರುವುದು ಅಷ್ಟರಲ್ಲೆ. ಕೇವಲ ಕೆಲವು ರಾಜಕಾರಣಿಗಳನ್ನು ಸಂಜೆಯ ಹೊತ್ತಿಗೆ ಗುಡ್ಡೆ ಹಾಕಿಕೊಂಡು ಕೇಳಿದ ಪ್ರಶ್ನೆಯನ್ನೆ ಉಲ್ಟಾ, ಸೀದಾ ಮಾಡುತ್ತಾ ಕೇಳಿ ಒಂದು ಚರ್ಚೆಗೆ ವಿದಾಯ ಹೇಳಿಬಿಟ್ಟರೆ ಅಲ್ಲಿಗೆ ಒಂದು ಗಂಟೆಯ ಸಮಯವನ್ನ ನಿಭಾಯಿದೆವು ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಚರ್ಚೆಯ ಹೂರಣ ಮಾತ್ರ ಅದೇ ತೌಡು! ಇಂದು ಕನ್ನಡ ನ್ಯೂಸ್ ಚಾನೆಲ್ ಗಳಿಗೆ ವೃತ್ತಿಪರತೆ ಅಂತ ಬಂದಿದ್ದು 5 ವರ್ಷಗಳ ಈಚೆಗೆ. ಅಲ್ಲಿಯವರೆಗು ಇದ್ದ ಎರಡು ವಾಹಿನಿಗಳು Doctor ಹೇಳುವ Prescriptionನಂತೆ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು ಹಾಗೂ ರಾತ್ರಿಯೊಂದು ಮಾತ್ರೆಗಳಂತೆ ಅರ್ಧ ಗಂಟೆಯ ಒಂದೊಂದು ಬುಲಿಟಿನ್ ಗಳನ್ನ ಓದಿಬಿಟ್ಟರೆ ಮುಗಿಯಿತು. ವಾರ್ತಾ ವಿಭಾಗಕ್ಕೆ ನ್ಯಾಯ ಸಲ್ಲಿಸಿದಂತೆ. ಅದಾದ ನಂತರ ಬಂದಿದ್ದು, ಹೇಳಿದ್ದೆ, ಹೇಳೋ ಕಿಸಬಾಯಿ ದಾಸ  ಎಂಬಂತೆ ಗಂಟೆಗೊಮ್ಮೆ 5 ನಿಮಿಷಗಳ ಸುದ್ದಿ ಪ್ರಸಾರವಾಗಲಾರಂಭಿಸಿತು. ಅದರಲ್ಲೆ 2 ನಿಮಿಷ ಜಾಹೀರಾತುಗಳಿಗೆ ಮೀಸಲು. ಅಷ್ಟಕ್ಕು ಆ ಸುದ್ದಿಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುವುದು ಉದ್ಘಾಟನೆ, ಮಂತ್ರಿ ಮಹೋದಯರ ಭೇಟಿಗಳು, ಪ್ರತಿಭಟನೆಗಳು ಕೊನೆಯದಾಗಿ ಯಥಾರೀತಿ ಪ್ರೆಸ್ ಮೀಟ್ ಗಳು. ಇದು ನಮ್ಮ ಕನ್ನಡ ಚಾನೆಲ್ ಗಳು ನ್ಯೂಸ್ ಗಾಗಿ ಕೊಟ್ಟ ಪ್ರಾಧಾನ್ಯತೆ. ಈ ಸಂದರ್ಭದಲ್ಲಿ ಪಕ್ಕಾ ವೃತ್ತಿಪರರಂತೆ ಕಂಡದ್ದು ಸಧ್ಯದ ಕನ್ನಡದ ನಂ 1 ನ್ಯೂಸ್  ಚಾನೆಲ್. ಆದರೆ ವಲಸೆ ಸಂಸ್ಕೃತಿಯ ಕಾಣಿಕೆಯಾಗಿ ಹಿಂದಿನ ಸೋ ಕಾಲ್ಡ ಅನುಭವವನ್ನ ಇಟ್ಟುಕೊಂಡು ಬಂದವರಿಗೆ ಮಣೆ ಹಾಕಲಾಯಿತು. ಅವರಲ್ಲಿ ಪತ್ರಕರ್ತ ಅದೆಷ್ಟು ಜಾಗ್ರತನಾಗಿದ್ದಾನೆ ಎಂಬುದನ್ನು ಹೆಕ್ಕಿ ನೋಡುವ ಕೆಲಸ ಯಾರು ಮಾಡಲಿಲ್ಲ. ಹೀಗಾಗಿ ಇದು ಬೇರೆ, ಬೇರೆ ನ್ಯೂಸ್ ಚಾನೆಲ್ ಗಳು ಕಣ್ಣು ಬಿಟ್ಟಾಗ ಎಲ್ಲರು ಸಂಬಳದ ಮೇಲೆ ಕಣ್ಣು ನೆಟ್ಟವರೆ ಹೊರತು ಆದರ್ಶ ಮತ್ತು ವೃತ್ತಿಪರತೆ ಪದಗಳು Edit ಆಗಿ ಹೋಗಿದ್ದವು. ಹೀಗಿದ್ದಾಗ ಪಕ್ಕಾ ಪತ್ರಕರ್ತರು ಕಾಣ ಸಿಕ್ಕದ್ದು ಅಪರೂಪ. ಹಾಗಂತ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಲ್ಲರು By default journalist ಅಂತ ಜನರಲೈಸ್ ಮಾಡುತ್ತಿಲ್ಲ. ಅಲ್ಲಿಯು ವೃತ್ತಿಪರತೆಯನ್ನು ರೂಢಿಸಿಕೊಂಡು, ಅಗತ್ಯ ತಯಾರಿ ಮಾಡಿಕೊಂಡು ಕುಳಿತವರಿದ್ದಾರೆ. ನಿಜಕ್ಕೂ ಅವರು ನ್ಯೂಸ್ ಚಾನೆಲ್ ಗಳ ದೊಡ್ಡ ಆಸ್ತಿಯೆ. ಆದರೆ ಆ ಸಂಖ್ಯೆ ತೀರಾ ಬೆರಳೆಣಿಕೆಯಷ್ಟು ಮಾತ್ರ. ರಾಜ್ಯ ಅಥವಾ ರಾಷ್ಟ್ರ ರಾಜಕಾರಣದ ಏಳು ಬೀಳುಗಳನ್ನು ಗಮನಿಸುತ್ತಾ ಬಂದ, ಅವುಗಳ ಬಗ್ಗೆ ನಿರ್ದಿಷ್ಟ ಅಂದಾಜುವುಳ್ಳ ಹಿರಿಯ ಪತ್ರಕರ್ತರು ಯಾರು ಇಂದು ನ್ಯೂಸ್ ಚಾನೆಲ್ ಗಳಲ್ಲಿ ಕಾಣಿಸುವದಿಲ್ಲ. ಅವರೆಲ್ಲ ಮುದ್ರಣ ಮಾಧ್ಯಮದ ಸುದ್ದಿ ಮನೆಗಳಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿ ಕೊಂಡಿದ್ದಾರೆ. ಹೀಗಾಗಿ ಈಗ ರಾಜ್ಯದಲ್ಲಿ ಆದಂತಹ ಸಂವಿಧಾನಿಕ ಬಿಕ್ಕಟ್ಟು, ಬೊಮ್ಮಾಯಿ ಕೇಸ್, ಕಲಂ 356 ಎಂದೆಲ್ಲ ಮೇಲ್ಮಟ್ಟದ ಚರ್ಚೆಗಳಾಗುತ್ತಿವೆಯೇ ಹೊರತು ಅಥವಾ ಆಯಾ ಪಕ್ಷದ ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇವುಗಳನ್ನು ವಿಶ್ಲೇಷಿಸುತ್ತಿದ್ದಾರೆ ವಿನಹ ನಿಜಾಂಶ ಏನು ಎಂಬುದು ಎಲ್ಲಿಯು ಸ್ಪಷ್ಟವಾಗಿ ಜನರಿಗೆ ತಿಳಿ ಪಡಿಸುತ್ತಿಲ್ಲ. ಕಾರಣ ಮತ್ತದೆ ಉತ್ತರ ಇವುಗಳ ಸಾರಾಂಶವನ್ನು ಬಿಚ್ಚಿಡುವ ಯಾವ ಹಿರಿ ತಲೆಗಳು ನ್ಯೂಸ್ ಚಾನೆಲ್ ಗಳಲ್ಲಿ ಇಲ್ಲ.

ಈಗ ನೀವು ಏನು ಹೇಳಲು ಬಯಸ್ತೀರಾ!?

ಈಗ ನೀವು ಏನು ಹೇಳಲು ಬಯಸ್ತೀರಾ!?

ಒಂದು ಆತಂಕಕಾರಿ ಬೆಳವಣಿಗೆ ಎಂದರೆ ಇಂದು ಚಾನೆಲ್ ಗಳ ಡೆಸ್ಕನಲ್ಲಿ ಕುಳಿತ ಎಷ್ಟೋ ಯುವ ಜರ್ನಲಿಸ್ಟಗಳಿಗೆ ರಿಪೋರ್ಟರ್ ಕಳಿಸಿದ ಕಾಪಿಯನ್ನು ಕೊಂಚ ಕುಗ್ಗಿಸುವುದು, ನ್ಯೂಸ್ ಏಜೆನ್ಸಿಗಳ ವಿವರಗಳನ್ನು ತರ್ಜುಮೆ ಮಾಡುವುದು ಹೊರತು ಪಡಿಸಿದರೆ ಹೆಚ್ಚಿನ ಮಾಹಿತಿ ಅಲಭ್ಯ. ಅವರು ತಮ್ಮನ್ನು ಅಷ್ಟಕ್ಕೆ ಸೀಮಿತಗೊಳಿಸಿ ಕೊಂಡಿದ್ದಾರೆ. ನಿಜಕ್ಕೂ ಕೆಲವು ಉತ್ಸಾಹಿ ಯುವಕರು ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಜನರಲ್ಲಿ ಜಾಗ್ರತೆ ಮುಡಿಸಿದ್ದು ಸುಳ್ಳಲ್ಲ. ಆದರೆ ಅದು ಕೂಡಾ ಅಷ್ಟಕ್ಕಷ್ಟೆ! ಹೀಗಾಗಿ ಕೀಲಿಮಣೆ ಕುಟ್ಟಿ ಒಂದಿಷ್ಟು ಅಕ್ಷರಗಳನ್ನ ಜೋಡಿಸಿ, ದೃಶ್ಯವನ್ನ ಬುಲಿಟಿನ್ ಪ್ರೊಡ್ಯಸರ್ ಹೇಳಿದಷ್ಟು ಸಮಯಕ್ಕೆ ಎಡಿಟ್ ಮಾಡಿ ಹಾಕಿದರೆ ಮುಗಿಯಿತು ಕರ್ತವ್ಯ. ಅದರಾಚೆಯ ಗಂಭೀರ ಚರ್ಚೆಗಳು, ಸಾಧ್ಯಾ, ಸಾಧ್ಯತೆಗಳು ಆಗುತ್ತಿಲ್ಲ ಎಂಬುದು ಮಾತ್ರ ವಿಷಾದ. ಕೆಲವು ವರ್ಷಗಳ ಹಿಂದೆ ನಾನು ಮನರಂಜನಾ ವಿಭಾಗದಿಂದ, ಅತಿಯಾಗಿ ಪ್ರೀತಿಸುವ ನ್ಯೂಸ್ ವಿಭಾಗಕ್ಕೆ ಹೋಗಬೇಕೆಂದು ಆಗ ತಾನೆ ಕಣ್ಣು ಬಿಡಲು ಸಿದ್ಧ ಮಾಡಿಕೊಳ್ಳುತ್ತಿದ್ದ ನ್ಯೂಸ್ ಚಾನೆಲ್ ಒಂದಕ್ಕೆ ಎಡತಾಕಿದ್ದೆ. ಅಲ್ಲಿ ಕುಳಿತ ಕೆಲವು “ಹಿರಿಯ” ತಲೆಗಳು ನಾನು ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಿದ್ದರೆ, ಅದನ್ನು ಅರ್ಧಕ್ಕೆ ತುಂಡರಿಸಿ ಟಿಆರ್ ಪಿ ತರುವಂತಹ ಐಡಿಯಾಗಳೇನಾದರು ಇದ್ದರೆ ಹೇಳಿ ನೋಡೋಣ ಎಂದು ಬಾಯಿ ಚಪ್ಪರಿಸಿದರು. ದುರಂತ ಎಂದರೆ ಇಂತಹ  ಎಷ್ಟೋ ಜನಕ್ಕೆ TRP ಹೇಗೆ ಬರುತ್ತೆ, TAM ಯಾವ ರೀತಿ ಕೆಲಸ ಮಾಡುತ್ತೆ, Reach ಅಂದರೆ ಏನು, Time Spend ಹೇಗೆ TVR ಹೆಚ್ಚಲು ಸಹಕರಿಸುತ್ತೆ ಎಂಬ ಗಂಧ ಗಾಳಿ ಇಲ್ಲದಿದ್ದರು, ಇವರಿಗೆ ಟಿಆರ್ ಪಿ ಬರುವಂತಹ ಕಾರ್ಯಕ್ರಮಗಳ ಐಡಿಯಾಗಳು ಬೇಕು. ಇದೆ ಅಲ್ಲವೆ ಬೌದ್ಧಿಕ ದಿವಾಳಿತನ. ಕೇವಲ ಬ್ರೆಕಿಂಗ್ ನ್ಯೂಸ್, ಫ್ಲಾಷ್ ನ್ಯೂಸ್ ಕೊಡುವುದರಲ್ಲಿಯೆ ಮಗ್ನವಾಗಿರುವ ಚಾನೆಲ್ ಗಳಿಗೆ ಅವುಗಳಲ್ಲಿ ಕಾಣುವ ಕಾಗುಣಿತ ದೋಷಗಳು, ಅನರ್ಥಗಳನ್ನು ಪತ್ತೆ ಹಚ್ಚುವ ಗೋಜಿಗೆ ಹೋಗುವದಿಲ್ಲ. ಇಂದಿಗು ನಾನು ಯಾವುದಾದರು ನ್ಯೂಸ್ ಚಾನೆಲ್ ನ ಕದ ತಟ್ಟಿದರೆ ಅನ್ಯ ಗ್ರಹ ಜೀವಿಯಂತೆ ನೋಡುತ್ತಾರೆ. ಅಲ್ಲಿ ಹಿಂದೆ ನೀವು ನ್ಯೂಸ್ ವಿಭಾಗದಲ್ಲಿ ಕೆಲಸ ಮಾಡಿದ್ದರೆ ಮಾತ್ರ ಒಳಗೆ ಕಾಲಿಡಲು ಅರ್ಹರು. ಇಲ್ಲದಿದ್ದರೆ ನಿಮಗೆ ಪ್ರವೇಶ ನಿಶಿದ್ಧ.  ನಿಮಗೆ ನಿಮ್ಮ ಪತ್ರಿಕೋದ್ಯಮದ ಜ್ಞಾನವನ್ನು ಹೊರ ಹಾಕುವ ಸಣ್ಣ ಅವಕಾಶವನ್ನು ಕೊಡದೆ EXIT ತೋರಿಸುತ್ತಾರೆ. ಹೀಗಿರುವಾಗ ವೃತ್ತಿಪರತೆ ಕಾಣಿಸುವುದಾದರು ಹೇಗೆ.

ಇದು ಕೇವಲ ಕನ್ನಡ ನ್ಯೂಸ್ ಚಾನೆಲ್ ಗಳ ಕಥೆ ಮಾತ್ರವಲ್ಲ, ಎಲ್ಲ ಪ್ರಾದೇಶಿಕ ಮತ್ತು ಹಿಂದಿ ಚಾನೆಲ್ ನ ಕತೆಯು ಇದೇ. ಒಂದು ಸಣ್ಣ ಎಳೆ ಸಿಕ್ಕರೆ ಸಾಕು ಅದನ್ನು ಯರ್ರಾ ಬಿರ್ರಿ ಎಳೆದಾಡಿ ಇದ್ದದ್ದು, ಇಲ್ಲದ್ದು ಎಲ್ಲವನ್ನು ಪುಂಖಾನುಪುಂಖವಾಗಿ ಹೇಳುತ್ತಾರೆ. ಗಣ್ಯ ವ್ಯಕ್ತಿಗಳು ತೀರಿಕೊಂಡರೆ ಪ್ರತಿಕ್ರಿಯೆ ಬಯಸುವ ವಾರ್ತಾ ವಾಚಕರು ನೇರವಾಗಿ ಅತಿಥಿಗಳಿಗೆ ಕೇಳುವ ಪ್ರಶ್ನೆ ಇಂತಹವರು ನಮ್ಮನ್ನಗಲಿದ್ದಾರೆ, ನಿಮಗೆ ಹೇಗೆ ಅನಿಸ್ತಾ ಇದೆ, ಅಥವಾ ನೀವು ಏನು ಹೇಳಲು ಬಯಸ್ತೀರಾ ಎಂದು. ಇಂತಹ ರೆಡಿಮೇಡ್ ಪ್ರಶ್ನೆಗಳು ಎಗ್ಗಿಲ್ಲದಂತೆ ಸಿಗುತ್ತವೆ.   ವಯೋ ಸಹಜ ಅನಾರೋಗ್ಯದಿಂದ ರಜನಿ ಆಸ್ಪತ್ರೆ ಸೇರಿದರೆ ನಮ್ಮ ಮಾಧ್ಯಮಗಳಿಗೆ ಅದು ನಾಗವಲ್ಲಿಯ ಕಾಟದಂತೆ ಕಾಣಿಸುತ್ತದೆ. ಅದಕ್ಕೆ ಸೌಂದರ್ಯ, ವಿಷ್ಣು ಅವರ ಅಕಾಲಿಕ ಮರಣದ ರೆಫೆರೆನ್ಸ ಸಾಕು, ಸತ್ಯದ ತಲೆಯ ಮೇಲೆ ಹೊಡೆದಂತೆ ವಿಷಯವನ್ನ ಸಾರಿ, ಸಾರಿ ಹೇಳಲು. ಆದಕಾರಣ ನಿಮಗೆ ಗಂಭೀರ ಹಾಗೂ ವಸ್ತು ನಿಷ್ಠ ಚರ್ಚೆಗೆ ಇಂಗ್ಲೀಷ್ ಚಾನೆಲ್ ಗಳ ಮೊರೆ ಹೋಗದೆ ಬೇರೆ ದಾರಿಯಿಲ್ಲ. ನಮ್ಮಲ್ಲೆನಿದ್ದರು ಅದೇ ರಾಗ, ಅದೇ ಹಾ(ತೌ)ಡು.

Advertisements
 

ಟ್ಯಾಗ್ ಗಳು:

ಹೀಗೊಂದು ಅಪರೂಪದ ಸನ್ನಿವೇಶ ನಮ್ಮ ಧಾರಾವಾಹಿಯಲ್ಲಿ…

ಈ  ದಿನ ಟಿವಿ ಹೇಗೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆಯೋ, ಹಾಗೇ ಅದರಲ್ಲಿ ಬರುವ ಧಾರಾವಾಹಿಗಳು ಚಾನೆಲ್ ಗಳಿಗೆ ಅತಿ ಹೆಚ್ಚು ದುಡ್ಡು ಮತ್ತು ಟಿಆರ್ ಪಿ ತರುವ ಸರಕುಗಳಾಗಿವೆ. ಭಾರತದ ಹೆಚ್ಚಿನ ಮನರಂಜನಾ ವಾಹಿನಿಗಳಲ್ಲಿ ದಿನದ ಹೆಚ್ಚು ಸಮಯ ಮೀಸಲಾಗಿದ್ದು ನೀವು ಹೇಳುವಂತೆ ಚುಯಿಂಗ್ ಗಮ್ ನಂತೆ ಎಳೆಯುವ ಧಾರಾವಾಹಿಗಳಿಗೆ. ಮಧ್ಯಾಹ್ನ ಮರುಪ್ರಸಾರವಾದರೆ ಸಂಜೆಯಿಂದ ಫ್ರೆಶ್ ಎಪಿಸೊಡ್ ಗಳು ನಿಮ್ಮ ಮುಂದೆ ಹಾಜರಾಗುತ್ತವೆ. ಕ್ಷಮಿಸಿ ನೀವು ಅವುಗಳ ಮುಂದೆ ಹಾಜರಾಗುತ್ತೀರಿ. ಆದರೆ ಹಲವು ಜನರಿಗೆ ಧಾರಾವಾಹಿಗಳನ್ನ ವೀಕ್ಷಿಸುವುದು ಸಮಯ ಕಳೆಯುವದಕ್ಕೆ ಅಥವಾ ದಿನಾ ನೋಡಿ ಅದೇ ಅಭ್ಯಾಸ ಆಗಿ ಹೋಗಿರುವುದಕ್ಕೆ. For a change ನನಗೆ ಧಾರಾವಾಹಿ ವೀಕ್ಷಣೆ ಕಾಯಕ. ಅದು ನನ್ನ ಫುಲ್ ಟೈಮ್ ವೃತ್ತಿ. ಚಾನೆಲ್ ನ ಆಫೀಸ್ ನಲ್ಲಿ ಕುಳಿತು ಬೆಳಗ್ಗೆಯಿಂದ ಸಂಜೆಯವರೆಗೆ ಧಾರಾವಾಹಿಗಳ ಗುಣಮಟ್ಟ ಅಳೆಯುವುದೆ ನನ್ನ ಕೆಲಸದ ಪರಿ. ಇಷ್ಟೇಲ್ಲಾ ಹೇಳಿದ್ದು ನಾನೇನು ವೃತ್ತಿ ಮಾಡುತ್ತೇನೆ ಎಂದು ಹೇಳಿಕೊಳ್ಳುವುದಕ್ಕಲ್ಲ. ದಿನ ನಿತ್ಯ 08,10 ಎಪಿಸೋಡ್ ಗಳನ್ನು ನೋಡುವ ನನಗೆ ಎಷ್ಟೋ ಸನ್ನಿವೇಶಗಳು ಬದುಕಿನ ಪಾಠ ಹೇಳಿವೆ, ಮನದ ಬೇಸರ ಓಡಿಸಿವೆ, ಕಣ್ಣಾಲಿಗಳಲ್ಲಿ ನೀರು ತರಿಸಿವೆ, ಇನ್ನು ಎಷ್ಟೋ ಸಾರಿ ಚಾದರ ಹೊದ್ದು ಮಲಗುವಂತೆ ಪ್ರೆರೇಪಿಸಿವೆ. ಕುರ್ಚಿಯಿಂದ ಕೆಳಕ್ಕೆ ಬೀಳುವಷ್ಟು ನಿದ್ರೆ ತರಿಸಿವೆ. ಇವುಗಳೆಲ್ಲಾ ಕಳೆದ 6 ವರ್ಷಗಳಲ್ಲಿ ನನಗಾದ ವಿ(ಚಿತ್ರ)ವಿಧ ಅನುಭವಗಳು.

ಹಲವು ಸಾರಿ ವೃತ್ತಿ ಏಕತಾನತೆ ತಂದೊಡ್ಡುವುದು ಸಾಮಾನ್ಯ. ಅದು ನನಗು ಆಗಾಗ ಕಾಡುತ್ತದೆ. ಆದರೆ ಅದೇ hangoverನಲ್ಲಿರುವಾಗ ನನಗೆ ಕೆಲವು ಧಾರಾವಾಹಿಗಳು ನೀಡುವ ಟಾನಿಕ್ ಮತ್ತಷ್ಟು ದಿನ ಕುದುರೆಯಂತೆ ಓಡಿಸಿಕೊಂಡು ಹೋಗುತ್ತವೆ. ಅಂತಹ ಒಂದು ಸನ್ನವೇಶ ನಿಮ್ಮ ಜೊತೆಗೆ ಹಂಚಿಕೊಳ್ಳುವ ಬಯಕೆಯಿಂದ ಅದನ್ನಿಲ್ಲಿ ದಾಖಲಿಸುತ್ತಿದ್ದೇನೆ. ಧಾರಾವಾಹಿಗಳೆಂದರೆ ಗ್ಲಿಸರಿನ್ ಹಚ್ಚಿಕೊಂಡು ಅಳುವ ಪಾತ್ರಧಾರಿಗಳು, ಸಣ್ಣದಕ್ಕು ತರಹೇವಾರಿ ರಿಯಾಕ್ಷನ್ ಕೊಡುವ ಪಾತ್ರಧಾರಿಗಳು ಎಂಬುದು ಹೆಚ್ಚಿನವರ ಅನಿಸಿಕೆ. ಆದರೆ ತುಂಬಾ ಸಾರಿ ಅಲ್ಲಿನ ವಿಷಯಗಳು ಕೃತ್ರಿಮ ಎಂದು ತಿಳಿದಿದ್ದರು ಅವುಗಳು ಹೊಮ್ಮಿಸುವ ಭಾವ ನಮ್ಮನ್ನು ಹಾಗೆ ಹಿಡಿದಿಡುತ್ತವೆ. ಅಂತಹ ಒಂದು ಸನ್ನಿವೇಶವನ್ನು ಕಟ್ಟಿಕೊಟ್ಟದ್ದು “ಮನೆಯೊಂದು ಮೂರು ಬಾಗಿಲು” ಧಾರಾವಾಹಿ.

ಕುಸಿಯುತ್ತಿರುವ ಸಂಬಂಧಗಳು, ಬದಲಾಗುತ್ತಿರುವ ಮಾನವೀಯ ಮೌಲ್ಯಗಳು, ಮಾಸುತ್ತಿರುವ ಹಳೆಯ ಸಂಪ್ರದಾಯಗಳು ಇವುಗಳನ್ನೆಲ್ಲಾ ವಿಜ್ರಂಭಿಸಿ ತೋರಿಸುವ ಧಾರಾವಾಹಿಗಳೆ ಇವೆಲ್ಲವುಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವುದು ಎಂದರೆ ನೀವು ನಂಬುತ್ತೀರಾ…? ಹೌದು ಆ ಒಂದು ಸನ್ನಿವೇಶ ಹೀಗಿದೆ ನೋಡಿ.ಒಬ್ಬ ಸಂಪ್ರದಾಯಸ್ಥ ತಾಯಿ, ಮಗ ತಪ್ಪು ದಾರಿ ಹಿಡಿದು, ಕಟ್ಟಿಕೊಂಡ ಅಮಾಯಕ  ಹೆಂಡತಿಗೆ ಡಿವೋರ್ಸ ಕೊಟ್ಟು ಬೇರೆ ಹೆಣ್ಣನ್ನು ಮದುವೆಯಾಗಲು ಪ್ರಯತ್ನಿಸುತ್ತಿರುವಾಗ ಅವನನ್ನು ಕರೆದುಕೊಂಡು ಬಂದು ಒಂದು ದೊಡ್ಡ ಅಗ್ನಿ ಪರೀಕ್ಷೆಗೆ ಒಡ್ಡುತ್ತಾಳೆ. ಅದೇನಪ್ಪ ಎಂಬುದೆ ಈ ದೃಶ್ಯದ ವೈಚಿತ್ರ್ಯ ಮತ್ತು ವಿಶೇಷ.

ಕಟ್ಟಿದ ತಾಳಿಯನ್ನು ಕತ್ತರಿಸುವುದು ಅಷ್ಟು ಸರಳವೇ!?

ಕಟ್ಟಿದ ತಾಳಿಯನ್ನು ಕತ್ತರಿಸುವುದು ಅಷ್ಟು ಸರಳವೇ!?

 ಆ ಅಗ್ನಿ ಪರೀಕ್ಷೆ ಏನಪ್ಪಾ ಅಂದರೆ ಮಗ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾನೆ. ಹಿಂದು ಧರ್ಮದ ಎಲ್ಲ ವಿಧಿ ವಿಧಾನಗಳನ್ನು ಪೂರೈಸಿ ಹುಡುಗಿಯ ಕತ್ತಿಗೆ ತಾಳಿ ಕಟ್ಟಿದ್ದಾನೆ. ಅದಕ್ಕೆ ಈಗ ಆ ಎಲ್ಲ ಸಂಪ್ರದಾಯಗಳನ್ನು ತಿರುಗಾ ಮುರಗಾ ಮಾಡಬೇಕು. ಧಾರ್ಮಿಕವಾಗಿ ಮದುವೆಯಾಗಿದ್ದೀಯಾ ಅದಕ್ಕೆ ಬಿಡುಗಡೆ ಕೂಡಾ ಧಾರ್ಮಿಕವಾಗಲಿ ಎಂಬುದು ಅವಳ ಶರತ್ತು. ಇದು ಮೇಲ್ನೋಟಕ್ಕೆ ನಾಟಕೀಯ ಹಾಗೂ ಹಾಸ್ಯಾಸ್ಪದ ಎಂಬಂತೆ ಕಾಣಿಸಬಹುದು. ಆದರೆ ಒಂದು ಕ್ಷಣ ಯೋಚಿಸಿ, ನಮ್ಮ ವಿಧಿ ವಿಧಾನಗಳಲ್ಲಿ ಇಲ್ಲದ ನಡಾವಳಿಯ ಮೂಲಕ ಮದುವೆಯನ್ನು ಕಡಿದು ಕೊಳ್ಳುವುದು ಎಷ್ಟು ಕಷ್ಟದ ಕೆಲಸ ಎಂದು. ಏಕೆಂದರೆ ಇಲ್ಲಿ ಹುಡುಗ ಸ್ವಲ್ಪ ಧೈರ್ಯ ಮಾಡಿ ಸಪ್ತಪದಿಯನ್ನು ಅಳುತ್ತಿರುವ ಹೆಂಡತಿಯೊಂದಿಗೆ ಉಲ್ಟಾ ತಿರುಗುತ್ತಾನೆ. ಆದರೆ ಸವಾಲು ಎದುರಾಗುವುದೆ ಆಗ. ತಾಯಿ ನೀನು ಕಟ್ಟಿರುವ ತಾಳಿಯನ್ನು ನಿನ್ನ ಕೈಯಾರೆ ನೀನೆ ಕತ್ತರಿಸು ಎಂದು ಹೇಳಿದಾಗ.

ಹೀಗೊಂದು ವಿಶಿಷ್ಟ ಡಿವೋರ್ಸ ಪದ್ಧತಿ

ಹೀಗೊಂದು ವಿಶಿಷ್ಟ ಡಿವೋರ್ಸ ಪದ್ಧತಿ

 ನಿಜಕ್ಕು ಎಷ್ಟೇ ಸಂಪ್ರದಾಯ ವಿರೋಧಿಗಳಾದರು ನಮ್ಮ ಆಚರಣೆಗಳು ನಮ್ಮನ್ನು ಕೆಲವೊಮ್ಮೆ ಭಾವನಾತ್ಮಕವಾಗಿ ಬಂಧಿಸಿ ಬಿಡುತ್ತವೆ. ಸರಾಗವಾಗಿ ಕಟ್ಟಿದ ತಾಳಿಯನ್ನ ಕೈಯಿಂದ ಕಿತ್ತೊಗೆಯುವದು ಎಂತಹವರಿಗಾದರು ಹಿಂಸೆಯ ಕೆಲಸವೇ. ಹೆಂಡತಿ ಎಂಬುವವಳು ತನ್ನ ಇತಿ ಮಿತಿಗಳನ್ನ ದಾಟಿದ್ದರೆ ರೋಸಿ ಹೋದ ಗಂಡಸು ತಾಳಿ ಕಿತ್ತೊಗೆಯಬಹುದು. ಆದರೆ ಅಮಾಯಕ ಹೆಂಡತಿಯ ಕೊರಳಲ್ಲಿರುವ ತಾಳಿಯನ್ನು ಅಷ್ಟೇ ಸರಳವಾಗಿ ಕತ್ತರಿಸುವುದು ಕಸಿವಿಸಿಯ ವಿಚಾರವೇ. ಇದು ಕಾನೂನಿಗೆ ವಿರುದ್ಧವಾದದ್ದಲ್ಲ. ಆದರೆ ಸಂಪ್ರದಾಯವಾಗಿ ಮದುವೆಯಾಗುವ ನಾವು ಡಿವೋರ್ಸ ವಿಚಾರ ಬಂದಾಗ ಕಾನೂನಿನ ಮೋರೆ ಹೋಗುತ್ತೇವೆ. ಏಕೆಂದರೆ ಅಲ್ಲು ಕೆಲವು ಧರ್ಮ ಸೂಕ್ಷ್ಮಗಳಿವೆ. ಅವುಗಳನ್ನು ಅದೇ ದಾರಿಯಲ್ಲಿಯೆ ಪರಿಹರಿಸಿ ಕೊಳ್ಳಬೇಕು. ಆದರೆ ಒಂದು ಸಾರಿ ಮದುವೆಯನ್ನ ಧಾರ್ಮಿಕವಾಗಿಯೆ ಧಿಕ್ಕರಿಸಬೇಕು, ಮುರಿದು ಹಾಕಬೇಕು ಎಂದಾಗಿದ್ದರೆ ಎಷ್ಟು ಮುಜುಗರಕ್ಕೆ ಒಳಪಡಬೇಕಿತ್ತಲ್ಲವೇ. ಇದನ್ನು ಹೇಳುವುದಕ್ಕೆ ಇಷ್ಟೇಲ್ಲ ಹೇಳಬೇಕಾಯಿತು. ತಲತಲಾಂತರದಿಂದ ಬಂದ ಸಂಪ್ರದಾಯಗಳು ನಮ್ಮ ನೈತಿಕತೆಯನ್ನು ಉಳಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ ಎಂಬುದು ಎಷ್ಟು ಸತ್ಯ ಅಲ್ಲವೇ!

ಅವನು ಹೆಂಡತಿ ಕತ್ತಿನ ತಾಳಿಯನ್ನು ಕಿತ್ತೆಸೆದನಾ, ಹಾಗಾದರೆ ಅಲ್ಲಿ ನಡೆದದ್ದಾದರು ಏನು ಎಂಬ ಕುತೂಹಲಕ್ಕೆ ಮೇ 19, ಮತ್ತು 20, 2011ರಂದು ಸಂಜೆ 7.00 ಕ್ಕೆ ಈ ಟೀವಿಯಲ್ಲಿ ಪ್ರಸಾರವಾಗುವ ಮನೆಯೊಂದು ಮೂರು ಬಾಗಿಲು ಧಾರಾವಾಹಿಯನ್ನು ವೀಕ್ಷಿಸಿ, ಹೇಗಿತ್ತು ಎಂದು ನನಗು ಹೇಳಿ.

 

ಟ್ಯಾಗ್ ಗಳು:

ಸರ್ಕಾರಿಯಾಗಲಿ,ಖಾಸಗಿಯಾಗಲಿ..ಬಕೇಟ್ ಸಂಸ್ಕೃತಿಗೆ ಜಯವಾಗಲಿ…

ಇದೊಂದು ವಿಕ್ಷಿಪ್ತ ಶೀರ್ಷಿಕೆ ಎಂದೆನಿಸಿದರು, ಹೇಳಲು ಹೊರಟಿರುವುದರ ಭಾವಕ್ಕೆ ಸೂಕ್ತ  ಎಂದೆನಿಸಿದ್ದರಿಂದ ಬಳಸಿಕೊಳ್ಳಬೇಕಾಗಿ ಬಂದಿದೆ. ಕೆಲವೊಂದು ಮನಸ್ಥಿತಿಗಳು ಎಲ್ಲಿ ಹೋದರು ಬದಲಾಗುವುದಿಲ್ಲ. ಪ್ರಾಶಸ್ತ್ಯ  ಎಂಬ ಪದವನ್ನ  ಎಗ್ಗಿಲ್ಲದೆ ಬಳಸಿ ಕೆಲವು “ಅಂಡುಗಳು” ಎಲ್ಲೆಲ್ಲಿಯೋ ಜಾಗವನ್ನ ಆಕ್ರಮಿಸಿದ್ದರ ಆಕ್ರೋಶಕ್ಕೆ  ಈ  ಚರ್ಚೆ. ಸರಿ ತಪ್ಪುಗಳ ಗಂಭೀರ ವಿಚಾರ ವಿನಿಮಯ ಬೇಕು ಎಂದು ಹೇಳಲು ಹೊರಟಿರದಿದ್ದರು, ಎಲ್ಲೋ ಒಂದು ಕಡೆ  ಕೌಶಲ್ಯ, ಅರ್ಹತೆಗಳನ್ನು ಬದಿಗೊತ್ತಿ, ಯೋಗ್ಯತೆಯೆ ಇಲ್ಲದ ವ್ಯಕ್ತಿಗಳಿಗೆ ಮಣೆ ಹಾಕಿ ಕುಳಿತು ಕೊಳ್ಳಲು ಅನುವು ಮಾಡಿ ಕೊಡುವ ಬಕೇಟ್ ಸಂಸ್ಕೃತಿಯ ಬಗ್ಗೆ ಮಾತನಾಡುವ ಧಾಡಸಿತನ ತೋರಬೇಕಾಯಿತು.

ಇಂದು ನೀವು ಯಾವುದೆ ಸಂಸ್ಥೆಗೆ ಹೋಗಿ ಅಲ್ಲಿ ಸೇವಾ ಜೇಷ್ಠತೆ ಅಥವಾ ಅನುಭವದ ವ್ಯಕ್ತಿ ಸೂಕ್ತ ಹುದ್ದೆಯಲ್ಲಿದ್ದಾನೆ ಎಂದು ಖಡಾ ಖಂಡಿತವಾಗಿ ಹೇಳುವುದು ಕಷ್ಟ. ಹೆಚ್ಚಾನು, ಹೆಚ್ಚು ಸ್ಥಳಗಳಲ್ಲಿ ಬಕೀಟ್ ರಾಜರೇ ವಿರಾಜಮಾನರಾಗಿದ್ದಾರೆ. ಮೇಲಿನವರನ್ನು ಓಲೈಸುವುದು ನಿಮಗೆ ಗೊತ್ತಿದ್ದರೆ, ಅದು ಕಡ್ಡಾಯವಾಗಿ ವೃತ್ತಿಯ ಹೊರತಾದ ನೈಪುಣ್ಯತೆ ನಿಮ್ಮಲಿದ್ದರೆ, ನೀವು ಬಕೀಟ್ ವೀರರೆಂದು ಕೊಳ್ಳಬಹುದು.ನಿಮಗೆ ಆಗಾಗ್ಗೆ ಪ್ರಮೋಷನ್, ಬೇಕಾದ ಪೊಜಿಷೆನ್, ಕೇಳಿದಷ್ಟು ಸಂಬಳ,  ಇನ್ ಕ್ರಿಮೆಂಟ್, ವಗೈರೆಗಳು ಲಭಿಸಿದವೆಂದೆ ಅಂದುಕೊಳ್ಳಬಹುದು.

ಅದೊಂದು ಸಮಯವಿತ್ತು. ಸರಕಾರಿ ಕೆಲಸಗಳಿಗೆ ಜೊಂಡು ಹಿಡಿದಿದೆ ಎಂದು ಖಾತ್ರಿಯಾಗಿತ್ತು. ಉದಾರೀಕರಣದ ಕೊಡುಗೆಯಾಗಿ ಹಲವು ಕಂಪನಿಗಳು ನೆಲೆಯೂರಲಾರಂಭಿಸಿದವು. ಇದು ಖಾಸಗೀಕರಣಕ್ಕು ದಾರಿ ಮಾಡಿಕೊಟ್ಟಿತು. ನಿತ್ರಾಣವಾದ ಹಲವು ಸರಕಾರಿ ಸ್ವಾಮ್ಯದ ಕಂಪನಿಗಳು ಖಾಸಗಿ ಒಡೆತನಕ್ಕೆ ಬಿದ್ದವು. ಇದರಿಂದ ನಮ್ಮಲ್ಲಿ ಅವಕಾಶಗಳ ಬುಗ್ಗೆಯೆ ಚಿಮ್ಮುತ್ತದೆ   ಎಂದು ಭಾವಿಸಲಾಯಿತು. ಆದರೆ ಅದೇನೋ ಸತ್ಯ! ಇದರಿಂದ ಉಂಟಾದ ಹಲವು ದುಷ್ಪರಿಣಾಮಗಳ ಪಟ್ಟಿಯಲ್ಲಿ ಹೊಸದಾಗಿ ಬಕೀಟ್ ಕಲ್ಚರ್ ಒಂದನ್ನು ಸೇರಿಸಿದರೆ ತಪ್ಪಾಗಲಾರದೇನೋ.ಪ್ರತಿಭೆಗಷ್ಟೆ ಖಾಸಗಿ ಸಂಸ್ಥೆಗಳಲ್ಲಿ ಅವಕಾಶ ಎಂಬ ಪದ ಈಗ ಸವಕಲು. ರೆಫರೆನ್ಸ  ಎಂಬ ಪ್ರತಿಷ್ಠಿತ ಪದ ಹುಟ್ಟು ಹಾಕಿ ಎಂತಹ ಕೊಡಂಗಿಯನ್ನಾದರು ಇಂದು ಆಯಕಟ್ಟಿನ ಹುದ್ದೆಗಳಲ್ಲಿ ಕೂಡಿಸಬಹುದಾಗಿದೆ. ಅದು ಆ ವ್ಯಕ್ತಿ ತನ್ನ ಮೇಲಿನವರನ್ನು ಎಷ್ಟು ಜಾಣ್ಮೆಯಿಂದ ಮರಳು ಮಾಡುತ್ತಾನೆ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ. ಖಾಸಗಿ ಸಂಸ್ಥೆಗಳಲ್ಲಿಯೆ ಇಂದು ಹೆಚ್ಚಾಗಿ ಈ “ಬಕೀಟ್ ಕಲ್ಚರ್” ತಲೆ ಎತ್ತಿದೆ ಎಂಬುದು ಅಚ್ಚರಿ ಉಂಟು ಮಾಡುತ್ತದೆ. ಎಷ್ಟೋ ಸಾಫ್ಟವೇರ್ ಕಂಪನಿಗಳಲ್ಲಿ ಮ್ಯಾನೇಜರ್  ಕಣ್ಣ ಹಾಕಿದ ಹುಡುಗಿಗೆ ಅವನ ಜೂನೀಯರ್ ಕಾಳು ಹಾಕುತ್ತಿದ್ದಾರೆ ಎಂದು ಫೈರ್ ಆದ  ಉದಾಹರಣೆಗಳನ್ನು ಕೇಳಿದ್ದೇನೆ. ನೀನೆ ಇಂದ್ರ, ಚಂದ್ರ  ಎಂದು ಪೂಸಿ ಹೊಡೆದು ಪ್ರತಿ ವರ್ಷ ಪ್ರಮೋಷನ್ ಗಿಟ್ಟಿಸಿದ ಶೂರರಿದ್ದಾರೆ. ಹಾಗಿರುವಾಗ ಬುದ್ದಿವಂತಿಕೆಗೆ, ಪರಿಶ್ರಮಕ್ಕೆ ಮನ್ನಣೆ ಸಿಗಲು ಸಾಧ್ಯವಾಗುವದಾದರು ಹೇಗೆ. ಒಳಗೊಳಗೆ  ಒಡಂಬಡಿಕೆಗಳು ಗೊತ್ತಿಲ್ಲದೆ ಫಿಕ್ಸಾಗಿ ಹೋಗುತ್ತವೆ. ಇಂದು ಹಲವು ಹುದ್ದೆಗಳಲ್ಲಿ ಮೇಲಿನವರ  ಪ್ರಿತಿಗೆ ಪಾತ್ರರಾಗಲು ಮಾಡುವ ಕಸರತ್ತುಗಳು ಊಹಿಸುವದಕ್ಕು ಕಷ್ಟವಾಗುತ್ತವೆ. ಏನಾದರು ಮಾಡಿ ಬಾಸ್ ಗೆ ಹತ್ತಿರವಾಗಲು ಬಯಸುವ  ಒಂದು ದೊಡ್ಡ ಹಿಂಡೆ ಪ್ರತಿ ಆಫೀಸ್ ನಲ್ಲಿರುತ್ತದೆ. ಶಂಭೋ ಶಿವ ಶಂಭೋ…

Yes Boss..! You are always right...!!!
Yes Boss..! You are always right…!!!

ನಿಜಕ್ಕೂ ನಾಚಿಕೆಯಾಗುತ್ತದೆ.ನಿಮಗೆ ಕೆಲಸ ಗೊತ್ತಿರದಿದ್ದರು ಅಡ್ಡಿಯಿಲ್ಲ. ನೀವು ಹಲವು ವರ್ಷಗಳಿಂದ  ಆಫಿಸ್ ನಲ್ಲಿ ಏನು ಕಲಿಯದಿದ್ದರು ಚಿಂತೆ ಇಲ್ಲ. ನೀವು ಬಾಸ್ ಗೆ ಹತ್ತಿರವಾಗಿದ್ದರೆ ಅಷ್ಟೇ ಸಾಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಇದೆ ಎಂದರೆ ನಂಬಲೆ ಬೇಕು. ಆಫೀಸ್ ನಲ್ಲಿ ಯಾರು ಬಾಸ್ ನ ಬೈಯ್ಯುತ್ತಾರೆ, ಯಾರ್ಯಾರು ಯಾವ ಯಾವ ಹುಡುಗಿಯರಿಗೆ ಕಾಳು ಹಾಕುತ್ತಾರೆ, ಲೇಟೆಸ್ಟ ಗಾಸಿಪ್ ಏನು, ಬಾಸ್ ಆಸೆ ಆಕಾಂಕ್ಷೆಗಳೇನು ಎಂದು ತಿಳಿದು ಕಾಲ ಕಾಲಕ್ಕೆ ಇವುಗಳನ್ನು ನಿರ್ವಹಿಸುತ್ತಿದ್ದರೆ, ನಿಮ್ಮ ಬಾಸ್ ನ ಕೃಪಾ ಕಟಾಕ್ಷ ನಿಮಗೆ ಲಭಿಸಿತೆಂದೇ ಖಾತ್ರಿ. ಹೀಗಾಗಿ ಇಂದು ಬಕೀಟ್ ಕಲ್ಚರ್ ಹೆಚ್ಚು ಪ್ರಾಮುಖ್ಯತೆ ಪಡೆದು ಕೊಳ್ಳುತ್ತಿದೆ. ಕತ್ತೆ ಹಾಗೆ ದುಡಿದರು ನಿಮ್ಮ ಶ್ರಮದ ಫಲವನ್ನ ಮತ್ತ್ಯಾರೊ ಬಂದು ಕಿತ್ತು ಕೊಂಡಿರುತ್ತಾರೆ. ಅದಕ್ಕಿಂತ ದೌರ್ಭಾಗ್ಯ ಬೇಕೆ…!!!

ಕೆಲಸ  ಉಳಿಸಿಕೊಳ್ಳುವ ತಾಕತ್ತು ಮತ್ತು ವೃತ್ತಿಯಲ್ಲಿ ಮೇಲೆರುವ ಜಾಣ್ಮೆ ನೀವು ನಿಮ್ಮ ಬಾಸ್ ಗೆ ಎಷ್ಟು ಬೇಕಾಗಿದ್ದೀರಿ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ. ಕಾರ್ಯತತ್ಪರತೆ ಎಂಬುದು ನೆಪ ಮಾತ್ರ. ಮೇಲಿನವನ ಬೇಕು, ಬೇಡಗಳನ್ನು ಇಡೇರಿಸುತ್ತಾ, ಅವರ ಮನದಿಂಗಿತ ಅರಿತು ಅದರಂತೆ ನಡೆದುಕೊಂಡರೆ ನೀವು ಸೇಫ..  ಇಲ್ಲ ಅಂದರೆ ಕಿಕ್ ಆಫ್… ಅದಕ್ಕೆ ಹೇಳುವುದು ಬಕೀಟ್ ಮಹಾರಾಜರಿಗೆ ಜಯವಾಗಲಿ…ಬಕೀಟ್ ಸಂಸ್ಕೃತಿ ಅಜರಾಮವಾಗಲಿ…….!!!

 

ಟ್ಯಾಗ್ ಗಳು:

ವಿಶ್ವದ ಅಣ್ಣ ಹೊಡೆದುರುಳಿಸಿದ ಪಾತಕಿ ಬಿನ್ ಲಾಡೆನ್ ನ

” The cause of securing our country is not complete. But tonight, we are once again reminded that America can do whatever we set our mind to. That is the story of our history, whether it’s the pursuit of prosperity for our people, or the struggle for equality for all our citizens; our commitment to stand up for our values abroad, and our sacrifices to make the world a safer place”.

ಈ ಮೇಲಿನ ಸಾಲುಗಳು ವಿಶ್ವದ ಹಿರಿಯಣ್ಣ ಎಂದು ಬೀಗುವ ಅಮೆರಿಕಾ ಅಧ್ಯಕ್ಷ ಬರಾಕ ಓಬಮಾ ತನ್ನ ರಾಷ್ಟ್ರದ ಬಲಿಷ್ಠ  ಸೈನ್ಯ ಅಲ್ ಖೈದಾ ನಾಯಕ, ಉಗ್ರಗಾಮಿ ಒಸಮಾ ಬಿನ್ ಲಾಡೆನ್ ನ್ನು ಪಾಕಿಸ್ತಾನದ ಅಬ್ಬೊಟ್ಟಾಬಾದ್ ನಲ್ಲಿ ಗುಂಡಿಕ್ಕಿ ಕೊಂದ ನಂತರ ಸಂಭ್ರಮದಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ (http://www.youtube.com/watch?v=ZNYmK19-d0U&feature=featured) ಹೇಳಿದ್ದು.

ಸುಮಾರು ಹತ್ತು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾದು ಕುಳಿತ ಅಮೆರಿಕಾ ಸೈನ್ಯ ನಿರ್ದಿಷ್ಟ ಮಾಹಿತಿ ಆಧರಿಸಿ ರಾಷ್ಟ್ರಧ್ಯಕ್ಷರ ಅಣತಿಯಂತೆ ನಡೆಸಿದ ಕಾರ್ಯಾಚರಣೆಯಲ್ಲಿ ವಿಶ್ವಕ್ಕೆ ಮೋಸ್ಟ ವಾಂಟೆಡ್ ಆಗಿದ್ದ ಲಾಡೆನ್ನನ್ನ ಹೊಸಕಿ ಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 09/11 ನ ಘೋರ ದುರಂತಕ್ಕೆ ಅಮೆರಿಕಾ ಸೇಡು ತೀರಿಸಿಕೊಂಡಂತಾಗಿದೆ. ಆದರೆ ಅಲ್ಲಿನ ಅಧ್ಯಕ್ಷರು ಹೇಳುವಂತೆ ಕಳೆದು ಹೋದ ಜೀವಗಳನ್ನು ಮರಳಿ ಪಡೆಯಲು ಆಗದಿದ್ದರು, ಸತ್ಯ ಮತ್ತು ಹೋರಾಟಕ್ಕೆ ಯಶ ಸಿಕ್ಕಂತಾಗಿದೆ.

ಇದಕ್ಕಿಂತ ಒಳ್ಳೆಯ ಸಾವು ದೊರಕುವುದಕ್ಕಾದರು ಹೇಗೆ ಸಾಧ್ಯ!!!

ಇದಕ್ಕಿಂತ ಒಳ್ಳೆಯ ಸಾವು ದೊರಕುವುದಕ್ಕಾದರು ಹೇಗೆ ಸಾಧ್ಯ!!!

 ಲಾಡೆನ್ ಇಂದು ಜಗತ್ತಿನ ಪಾಲಿಗೆ ದೊಡ್ಡ ವಿಲನ್ ಆಗಿ ಕಾಡಿದ್ದ. ಅಲ್ ಖೈದಾ ಎಂಬ ದುಷ್ಟರ ಗುಂಪಿನ ನಾಯಕನಾಗಿ ಮಾಡಿದ ಅನಾಹುತಕ್ಕೆ ತೆತ್ತ ಬೆಲೆಯಿದು. ಇಡೀ ವಿಶ್ವವನ್ನ ಮುಸ್ಲಿಂ ರಾಷ್ಟ್ರವಾಗಿ ಮಾಡುವ ದುರುದ್ದೇಶದ ಒಬ್ಬ ಧರ್ಮಾಂಧ ಮಾಡಿದ ಅನಾಹುತಕ್ಕೆ ಬಲಿಯಾದ ಜೀವಿಗಳ ಸಂಖ್ಯೆ ಸಾವಿರಾರು. ಇಲ್ಲಿ ನಿಜಕ್ಕೂ ಅಮೆರಿಕಾದ ಕಾಳಜಿ ಮತ್ತು ಭದ್ರತೆಗೆ ಕೊಡುವ ಆದ್ಯತೆ ಮೆಚ್ಚುವಂತಹದ್ದೆ.ಅಮೆರಿಕಾ ರೂಪಿಸಿದ  ಈ ಕಾರ್ಯಾಚರಣೆ ಇವತ್ತು ನಿನ್ನೆಯದಲ್ಲ. ಕಳೆದ ವರ್ಷ ಫೆಬ್ರವರಿಯಿಂದ ವಿಷಯ ಕಲೆ ಹಾಕುತ್ತಾ, ಆಗಸ್ಟನಲ್ಲಿ ಖಚಿತ ಮಾಹಿತಿ ದೊರೆತು ಅಂದಿನಿಂದ ಲಾಡೆನ್ ನ ಮುಗಿಸಲು ರಣತಂತ್ರ ರೂಪಿಸಲಾಗುತ್ತಿತ್ತಂತೆ. ಇದು ಅಂದು ಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ. ಲಾಡೆನ್ ತುಂಬಾ ಚಾಣಾಕ್ಷ. ಉಗ್ರರ ತಾಣ ಪಾಕಿಸ್ತಾನ  ಎಂಬುದು ಎಲ್ಲರಿಗೆ ಗೊತ್ತಿರುವಂತೆ ಲಾಡೆನ್ ಅದನ್ನು ತನ್ನ ಅಡುಗುದಾಣದಂತೆ ಬಳಸಿದ್ದಾನೆ. ಇದರ ಸುಳಿವು ಅಮೆರಿಕಾದ ಗುಪ್ತಚರ  ಇಲಾಖೆಗೆ ತಿಳಿಯದೆ ಇರಲಿಲ್ಲ. ತುಂಬಾ ಪೂರ್ವ ತಯಾರಿ ಮಾಡಿಕೊಂಡು ದಾಳಿ ನಡೆಸಿದ ಸೈನ್ಯಕ್ಕೆ ಲಾಡೆನ್ ಹೊಸಕಿ ಹಾಕುವುದು ಸರಳವಾಯಿತೆಂದೆ ಹೇಳಬಹುದು.ತನ್ನ ರಾಷ್ಟ್ರದ ಜನತೆಗೆ ಅನ್ಯಾಯವೆಸಗಿದ ಲಾಡೆನ್ ನ್ನು ಮುಗಿಸುವದರೊಂದಿಗೆ ಅಮೆರಿಕಾ ವಿಶ್ವಕ್ಕೆ ತನ್ನ ವಿರುದ್ಧ ತಿರುಗಿ ಬಿದ್ದವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದರ ಸ್ಪಷ್ಟ ಸಂದೇಶ ನೀಡಿದೆ ಎಂಬುದು ಖಾತ್ರಿಯಾಗುತ್ತದೆ.

ನಿಜಕ್ಕೂ ಎಲ್ಲರು ಓಬಮಾ ಕಾರ್ಯಾಚರಣೆ ನಂತರ ಮಾಡಿದ ಭಾಷಣ (ಮೇಲೆ ಕೊಟ್ಟ ಲಿಂಕ್ ಬಳಸಿ) ಕೇಳಲೆಬೇಕು. ಒಬ್ಬ ರಾಷ್ಟ್ರ ನಾಯಕ ತನ್ನ ಜನರ  ಸುರಕ್ಷತೆಗೆ ಅದೆಷ್ಟು ಪ್ರಾಧಾನ್ಯತೆ ನೀಡುತ್ತಾನೆ. ಅವರ ನೋವಿಗೆ ಹೇಗೆ ಸ್ಪಂದಿಸುತ್ತಾನೆ.ದೇಶದ ಹಿತ ಕಾಪಾಡುವುದು ಅವನ ಪ್ರಥಮ  ಆದ್ಯತೆ ಎಂಬುದನ್ನು ಹೇಗೆ ಸಾಧ್ಯ ಮಾಡಿ ತೋರಿಸುತ್ತಾನೆ ಎಂಬುದು ವೇದ್ಯವಾಗುತ್ತದೆ.ಈಗ ತಾನೇ NDTVಯಲ್ಲಿ ಬರ್ಖಾ ಲಂಡನ್ ನಲ್ಲಿರುವ ಪಾಕಿಸ್ತಾನದ ರಾಯಭಾರಿ ವಾಜಿದ್ ಅವರನ್ನು ನಿಮಗೆ ಈ ಕರ್ಯಾಚರಣೆ ಬಗ್ಗೆ ತಿಳಿದಿತ್ತೆ ಎಂದು ಕೇಳಿದರೆ, ನಮ್ಮ ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿತ್ತಾದರು ಹೇಗೆ ಎಂದು ಪ್ರಶ್ನೆ ಹಾಕಿ ಹುಳುಕು ಮುಚ್ಚಿ ಕೊಳ್ಳಲು ಹವಣಿಸುವಂತಿತ್ತು. ಈ ಕಾರ್ಯಚರಣೆ ನೀವೇಕೆ ಮಾಡಲಿಲ್ಲ ಎಂದಾಗ ಇದು ಅಮೆರಿಕಾದ ಪ್ರಾಧಾನ್ಯತೆಯಾಗಿತ್ತು ಎಂದು ಹೇಳಿ ಕೈ ತೊಳೆದುಕೊಂಡರು. ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯಿಂದ ಕೇವಲ 1ಕೀಮೀ ದೂರದಲ್ಲಿ ಅಡಗಿಕೊಂಡದ್ದು ತನಗೆ ಗೊತ್ತೇ ಇರಲಿಲ್ಲ ಎಂದು ಹೇಳಿದರು ನಂಬುವುದಾದರು ಹೇಗೆ ಸಾಧ್ಯ ಅಲ್ಲವಾ!

ಅದೇ ಎನೇ ಇರಲಿ ಅಮೆರಿಕಾ ಮಿಲಿಟರಿ ಲಾಡೆನ್ ನ ಶವದ ಚಿತ್ರವನ್ನ ಬಿಡುಗಡೆ ಮಾಡಿದೆ. ಆದಾಗ್ಯೂ  ಡಿಎನ್ ಎ ಪರೀಕ್ಷೆ ನಂತರವೇ ಅದು ಲಾಡೆನ್ ಎಂದು ಖಚಿತವಾಗಿ ಬಾಯಿ ಬಿಟ್ಟಿದೆ.  ಈಗ  ಎಲ್ಲೆಡೆ ಈ ಕಾರ್ಯಾಚರಣೆ ನಡೆದದ್ದಾದರು ಹೇಗೆ?  ನಿಜಕ್ಕೂ ಪಾಕ್ ಇದಕ್ಕೆ ಸಹಕಾರ ನೀಡಿತ್ತಾ? ಈ ಮಾಹಿತಿ ಅದಕ್ಕೂ ಇತ್ತಾ? ಹೀಗೆ ಇನ್ನೂ ನೂರೆಂಟು ಪ್ರಶ್ನೆಗಳು ಉದ್ಭವಿಸುತ್ತಲೆ ಇವೆ. ಅಮೆರಿಕಾ ಈ ವಿಷಯದಲ್ಲಿ ಹೆಚ್ಚೇನು ಬಾಯಿ ಬಿಡದಿರುವುದು ಎಲ್ಲ ಪ್ರಶ್ನೆಗಳಿಗೆ ಎಡೆ ಮಾಡಿ ಕೊಡುತ್ತಿದೆ ಎಂದೇ ಹೇಳಬಹುದು.  ಈಗ ಬರೀ ಊಹಾಪೋಹಗಳದ್ದೆ ಸಂತೆ. ಇಷ್ಟೇಲ್ಲಾ ನಡೆದರು ಪಾಕಿಸ್ತಾನ  ಏನನ್ನು ಬಾಯಿ ಬಿಡದಿರುವುದನ್ನು ನೋಡಿದರೆ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬಂತಿದೆ. ಈ ನಿಟ್ಟಿನಲ್ಲಿ ಅದೆಷ್ಟೋ ಸತ್ಯಗಳಿಗೆ ಮಾತು ಬರಬೇಕಿದೆ. ಎಲ್ಲ ಮಾಧ್ಯಮಗಳು ಇದರ ಹಿಂದಿನ ಸಂದೇಹಗಳನ್ನು ಬೆನ್ನಟ್ಟಿವೆ. ಸತ್ಯ ಅದ್ಯಾರ ಬಾಯಲ್ಲಿ ಅಡಗಿ ಕುಳಿತಿದೆಯೋ ಕಾಲವೇ ಉತ್ತರಿಸಬೇಕು. ಆದರೆ ಒಂದು ವಿಷ ಜಂತು ಸರ್ವನಾಶವಾದದ್ದು ಮಾತ್ರ ಭಯೋತ್ಪಾದನೆಯ ವಿನಾಶದತ್ತ ದಿಟ್ಟ ಹೆಜ್ಜೆ ಎಂದು  ಹೇಳಬಹುದು.

ಇದೆಲ್ಲ ನೋಡಿದ ಮೇಲೆ ಒಂದು ಸಂದೇಹ ಕಾಡದಿರದು.ಅದೇನೆಂದರೆ ಅಮೆರಿಕಾ ತನ್ನ ಶತೃಗಳಿಗೆ ಸ್ಪಷ್ಟ ಸಂದೇಶ ರವಾನಿಸಿ ಅದನ್ನು ತಡವಿಕೊಳ್ಳುವವರ ಪರಿಣಾಮ  ಏನಾಗಬಹುದು ಎಂಬುದನ್ನು ಸಾಧ್ಯ ಮಾಡಿ ತೋರಿಸಿದೆ. ಆದರೆ ನಮ್ಮ ದೇಶದಲ್ಲಾದ ಅದೆಷ್ಟೋ ಉಗ್ರರ ದಾಳಿಗೆ ನಾವು ಇಟ್ಟ ಹೆಜ್ಜೆಗಳೇನು. ಅದರತ್ತ ಕಂಡ ಜಯದ ಪ್ರಮಾಣವಾದರು ಏನು ಎಂದು ಕೆದಕಿ ನೋಡಿ ಉತ್ತರಗಳೆಲ್ಲಾ ಹಾಳೆಯ ಮೇಲೆ. ಕಾರ್ಯರೂಪಕ್ಕೆ ಬಂದ ಉದಾಹರಣೆಗಳಿಲ್ಲ. ಒಬ್ಬ ಕಸಬ್ ನ ಗಲ್ಲಿಗೇರಿಸಲು ನಮ್ಮ ಕಾರ್ಯಾಂಗ ಮತ್ತು ನ್ಯಾಯಾಂಗ  ಇನ್ನು ಮೀನಾಮೇಷ  ಎಣಿಸುತ್ತಲೆ ಇವೆ. ಕಸಬ್ ಒಬ್ಬ ಸಾಧಾರಣ ಭಯೋತ್ಪಾದಕ. ಯಾರದೋ ಅಣತಿಯಂತೆ ನಡೆದುಕೊಂಡ ಮುಠ್ಠಾಳ. ಆದರೆ ಇಂತಹ ಮುಠ್ಠಾಳರ ನಾಯಕನನ್ನ ಹೊಡೆದುರಳಿಸಿದ ಅಮೆರಿಕಾ ಇಂತಹ ವಿಷಯಗಳಲ್ಲಿ ಅನುಸರಿಸಬೇಕಾದ ನಡೆಯನ್ನು ಸ್ಪಷ್ವವಾಗಿ ತೋರಿಸಿ ಕೊಟ್ಟಿದೆ. ನಮ್ಮ ಘನ ಪ್ರಧಾನಿ ಮತ್ತು ಗೃಹ ಸಚಿವರ ಹೇಳಿಕೆಗಳನ್ನ ಗಮನಿಸಿ. ಕೈಲಾಗದ ನಾಯಕರ ಅಣಿ ಮತ್ತುಗಳು ಹೇಗೆ ಉದುರುತ್ತಿವೆ. ಇವರು ದಾವುದ್ ನನ್ನು ಮುಗಿಸಲು ಅಮೆರಿಕಾಕ್ಕೆ ಗುತ್ತಿಗೆ ಕೊಡುತ್ತಿದ್ದಾರೆ. ಅದರರ್ಥ ನಮ್ಮ ಕೈಯಲ್ಲಿ ಆಗುವುದಿಲ್ಲ  ಎಂದೇ ಅಲ್ಲವೇ! ಭಯೋತ್ಪಾದನೆಯ ನಿಟ್ಟಿನಲ್ಲಿ ನಿಮ್ಮ ದಿಟ್ಟ ಹೆಜ್ಜೆಗಳೇನು ಮೊದಲು ಅದನ್ನ ಕಾರ್ಯ ರೂಪಕ್ಕೆ ತರಬೇಕಲ್ಲವೇ. ಒಬ್ಬ ಕಸಬ್ ನನ್ನು ಹಣಿದು ಮುಗಿಸಲಾಗದ  ಇವರಿಂದ  ಒಬಮಾ ತರಹದ ನಾಯಕತ್ವವನ್ನ ನಿರೀಕ್ಷಿಸಲಾದರು ಸಾಧ್ಯವೇ! ತನ್ನ ಜನತೆಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಆ ನಿಟ್ಟಿನಲ್ಲಿ ಯಶಸ್ವೀಯಾಗಿ ಬೀಗುತ್ತಿರುವ  ಒಬಮಾ ತಮ್ಮ ಭಾಷಣದಲ್ಲಿ ಇದರಿಂದ ರಾಷ್ಟ್ರದ ಜನತೆ ಪೂರ್ಣ ಸುರಕ್ಷಿತ  ಎಂದು ಹೇಳುವುದು ಸಾಧ್ಯವಿಲ್ಲ  ಎಂಬ ಮಾತುಗಳನ್ನಾಡಿದ್ದಾರೆ. ಇಂತಹ ನಿಲುವು ಮತ್ತು ಪ್ರಾಮಾಣಿಕತೆ ನಮ್ಮ ನಾಯಕರಲ್ಲಿ ಮೂಡುವುದೇ ಇಲ್ಲಾ. ಎಂತಹ ದುರಾದೃಷ್ಟ ಅಲ್ಲವೇ….!!!!

ಓಬಮಾ ಭಾಷಣದ ಕೆಲವು ಸಾಲುಗಳನ್ನು ನಿಮ್ಮ ಅವಗಾಹನೆಗಾಗಿ ನೀಡುತ್ತಿದ್ದೇನೆ. ಈ ಸಾಲುಗಳ ಮೂಲಕ ಅಮೆರಿಕಾ ಹೇಗೆ ಎದೆಯುಬ್ಬಿಸಿ ನಿಲ್ಲುತ್ತೆ ಎಂದು ನೀವೂ ಕೂಡಾ ಮನಗಾಣಬಹುದು : And tonight, let us think back to the sense of unity that prevailed on 9/11. I know that it has, at times, frayed. Yet today’s achievement is a testament to the greatness of our country and the determination of the American people.

ಕೃತಜ್ಞತೆ : ಓಬಮಾ ಭಾಷಣದ ಪೂರ್ಣಪಾಠ “ಸಂಪಾದಕೀಯ”  http://sampadakeeya.blogspot.com/2011/05/blog-post_02.html  ಬ್ಲಾಗ್ ನಲ್ಲಿ ಪ್ರಕಟಗೊಂಡಿದೆ.ಅಲ್ಲಿಂದ ಕೆಲವು ಸಾಲುಗಳನ್ನು ಇಲ್ಲಿ ಬಳಸಿಕೊಂಡಿದ್ದಕ್ಕೆ ಸಂಪಾದಕೀಯ ಬಳಗಕ್ಕೆ ಕೃತಜ್ಞತೆಗಳು.

 

ಟ್ಯಾಗ್ ಗಳು:

 
%d bloggers like this: