RSS

Monthly Archives: ಏಪ್ರಿಲ್ 2011

ಅಂದು ಭೋರ್ಗರೆದ ತುಂಗೆ:ಇಂದು ಸದ್ದಿಲ್ಲದೆ ಸರಿದು ಹೋಗುತ್ತಿದ್ದಳು ತಣ್ಣಗೆ…

ನಿಮಗೆ ಈ ಸಂಗತಿ ಖಂಡಿತಾ ಮರೆಯಲು ಸಾಧ್ಯವಿಲ್ಲ. ಕಷ್ಟದಲ್ಲಿರುವವರ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಮಂತ್ರಾಲಯ ತುಂಗೆಯ ಮುನಿಸಿಗೆ ಬಲಿಯಾಗಿ ಭಾಗಶಃ ನೀರಿನಲ್ಲಿ ಮುಳುಗಿ ಹೋಗಿತ್ತು. ನೂರಾರು ಭಕ್ತರು ಜಲಪ್ರಳಯಕ್ಕೆ ಸಿಲುಕಿ ಜೀವ ಉಳಿಸಿ ಕೊಳ್ಳಲು ಎಲ್ಲೆಲ್ಲೋ ಏರಿ ಕುಳಿತಿದ್ದರು. ಸ್ವತಃ ಸುಶಮಿಂದ್ರ ತೀರ್ಥರು ಈ  ನೆರೆ ಹಾವಳಿಗೆ ಸಿಕ್ಕಿಕೊಂಡಾಗ ಕರ್ನಾಟಕದಿಂದ ಶೋಭಾ ಕರಂದ್ಲಾಜೆ ಹೆಲಿಕಾಪ್ಟರ್ ಮೂಲಕ ಬಂದು ಸ್ವಾಮಿಜಿಗಳನ್ನು ಮತ್ತು ಅವರ ಜೊತೆಗಿನ ರಾಮದೇವರನ್ನು ಸುರಕ್ಷಿತವಾಗಿ ಕರೆದು ಕೊಂಡು ಹೋಗಿದ್ದರು.

ಇದೆಲ್ಲ ಮತ್ತೆ ನೆನಪಿಸಿ ಕೊಳ್ಳಲು ಕಾರಣ ಕಳೆದ ವಾರ ಕುಟುಂಬದೊಂದಿಗೆ ಮಂತ್ರಾಲಯಕ್ಕೆ ತೆರಳಿದ್ದೆ. ಖಂಡಿತಾ ನನಗೆ ಇದೇ ಕ್ಷೇತ್ರವಾ ಸಂಕಟದ ದ್ವಾರ ಬಾಗಿಲಿಗೆ ಬಂದು ನಿಂತದ್ದು ಎಂಬ ಪ್ರಶ್ನೆ ಧೂತ್ತನೆ ಎದ್ದು ಕುಳಿತಿತು. ಅಂದಿನ ಆರ್ಭಟದಿಂದ ನಲುಗಿದ್ದ ಮಂತ್ರಾಲಯ ನನ್ನ ಕಣ್ಣಿಗೆ ಮಿರಿ ಮಿರಿ ಮಿರುಗುವಂತೆ ಕಾಣುತ್ತಿತ್ತು . ಗುರು ರಾಯರ ದರ್ಶನವು ಸಾಂಗವಾಗಿ, ಸಾಮಿಪ್ಯದಿಂದ ನೇರವೇರಿತು. ಒಂದು ದಿನ ಅಲ್ಲೇ ಉಳಿದುಕೊಂಡು ಮರುದಿನ ಬೆಳ್ಳಂಬೆಳಗ್ಗೆ ನದಿ ತೀರಕ್ಕೆ ಹೋದೆ. ಅಬ್ಬಾ! ನನ್ನ ಕಣ್ಣನ್ನ ನಾನೇ ನಂಬಲಾಗಲಿಲ್ಲ. ಅಂದು ಅಬ್ಬರಿಸಿದ್ದು ಇದೇ ತುಂಗೆಯೇ ಎಂಬ ಅನುಮಾನ ಕಾಡಲಾರಂಭಿಸಿತು. ಕಾರಣ ನನಗೆ ತುಂಗೆ ಹರಿಯುವದಿರಲಿ, ಕೊಂಚ ಸರಿದಾಡಿದಂತೆಯೇ ಕಾಣಿಸಲಿಲ್ಲ. ಎಂಥ ವಿಚಿತ್ರ ಅಲ್ಲವೇ!!!

ಆದರೆ ಅದೆಲ್ಲಕ್ಕಿಂತ ಗಾಢವಾಗಿ ನನ್ನನ್ನು ಕಾಡಿದ್ದು ಅಲ್ಲಿನ ಸ್ವಚ್ಛತೆಯದ್ದು. ನಮ್ಮ ರಾಷ್ಟ್ರದಲ್ಲಿರುವ  ಎಲ್ಲ ಪುಣ್ಯಕ್ಷೇತ್ರಗಳಲ್ಲಿನ ನದಿಯ ಬಳಿ ಸುಳಿಯಲು ಧೈರ್ಯ ಮಾಡಬೇಕು. ಭಯ ನೀರಿನ ಸೆಳೆತದ್ದಲ್ಲ. ಜನರ ಅಜ್ಞಾನ ಮತ್ತು ಬೇಜವಾಬ್ದಾರಿತನದ್ದು. ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರ ಕೊಡುಗೆ “ಅಪಾರ”! ಅವರ ದೈಹಿಕ ಕೊಳೆಯಲ್ಲ ಅಲ್ಲೇ ವಿಸರ್ಜಿಸಿದ್ದರ ಫಲವಾಗಿ  ಸೂಕ್ಷ್ಮ ಮತಿಗಳ ಮನದಲ್ಲಿ ಹೇಸಿಗೆ ಹುಟ್ಟಿಸುತ್ತದೆ. ಇಂತಹ ಸ್ಥಿತಿಯಲ್ಲಿ ಪಾವಿತ್ರ್ಯದ ಮನಸ್ಥಿತಿಯಾದರು ಹುಟ್ಟಲು ಹೇಗೆ ಸಾಧ್ಯ ಅಲ್ಲವಾ!!!

ಬಂಡೆಯ ಅಡಿಯಲ್ಲಿ ಸರಿಯುತಿಹ ತುಂಗಮ್ಮ

ಬಂಡೆಯ ಅಡಿಯಲ್ಲಿ ಸರಿಯುತಿಹ ತುಂಗಮ್ಮ

ತುಂಗೆ ತನ್ನನ್ನು ತಾನು ಶುಚಿಗೊಳಿಸಿಕೊಳ್ಳಲು ಮತ್ತೊಮ್ಮೆ ಭೊರ್ಗರೆಯದೆ ಬೇರೆ ದಾರಿಯಿಲ್ಲ.ಈ ಪರಿ ಕಿರಿಕಿರಿಯಿಂದಲೇ ಇರಬೇಕು ಅವಳು ಮುನಿಸಿಕೊಂಡು ಅಬ್ಬರಿಸಿದ್ದು. ಇಷ್ಟೆಲ್ಲ ಆದರು ನಮ್ಮ ಜನಗಳು ಎಚ್ಚೆತ್ತುಕೊಂಡಿಲ್ಲ.ಕ್ಷೇತ್ರದ ಪಾವಿತ್ರ್ಯತೆ ನದಿ ತೀರದಲಿ ಯಾಕೆ ಜಾಗೃತವಾಗುವುದಿಲ್ಲವೋ ಆ ಭಗವಂತನೇ ಉತ್ತರಿಸಬೇಕು….!!!!

ಮೇಲೆ ಸುಂದರ ಬೆಳಗು, ಅದರಡಿ ತುಂಗೆ ಬರಡು...

ಮೇಲೆ ಸುಂದರ ಬೆಳಗು, ಅದರಡಿ ತುಂಗೆ ಬರಡು...

Advertisements
 

ಟ್ಯಾಗ್ ಗಳು: ,

ಹುಟ್ಟಿ ಬರಲಿ ಸುಧಾರಕ ಸತ್ಯಸಾಯಿ, ಅಂತ್ಯವಾಗಲಿ ಪವಾಡ ಬಾಬಾ ಯುಗ…

ಸಾವನ್ನು ಗೆದ್ದವರು ಯಾರೂ ಇಲ್ಲಾ. ಅದಕ್ಕೆ  ಬುದ್ದ ಸಾವು ಇರದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ಹೇಳಿದ್ದ. ಜನನವಾದ ಪ್ರತಿ ಜೀವಿಯು ಸಾವಿನಿಂದ ಹೊರತಾಗಿಲ್ಲ. ಅದಕ್ಕೆ ದೇವ ಮಾನವರು ಕೂಡಾ ತಮ್ಮ ಸುಭೀಕ್ಷೆಯ ಬದುಕಿಗೆ ಅಂತಿಮ ಸಲಾಂ ಹೇಳಿ ಸಾವಿನಡೆಗೆ ನಡೆದು ಹೋಗಿದ್ದಾರೆ.

ಸುಮಾರು ಅರ್ಧ ಶತಮಾನಕ್ಕು ಅಧಿಕ ಕಾಲ ತಮ್ಮ ಪವಾಡ ಮತ್ತು ಮಾಂತ್ರಿಕತೆಯಿಂದ ಲಕ್ಷಾಂತರ ಭಕ್ತರ ಪಾಲಿನ ದೇವಮಾನವ ಎಂದೆನಿಸಿದ್ದ ಪುಟ್ಟಪರ್ತಿಯ ಸಾಯಿಬಾಬಾ ಅವರ ಪ್ರಾಣಪಕ್ಷಿ  ಭಾನುವಾರ ಬೆಳಗ್ಗೆ 7.40ರ ಸುಮಾರಿಗೆ ಪ್ರಶಾಂತಿ ನಿಲಯದ ಅಂಗಳದಿಂದ ಹಾರಿ ಹೋಗಿದೆ. ಸತತ 28 ದಿನಗಳ ಕಾಲ ಸಾವಿನೊಂದಿಗೆ ಶತಾಯ ಗತಾಯ ಹೋರಾಡಿದ ಬಾಬಾ ಕೊನೆಗು ಮರಣದ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ಬಾಬಾ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.

ಇದು ತುಂಬಾ ಸಿಂಪಲ್ ಕಥೆ. ಆದರೆ ನಮ್ಮ ಜನಗಳ ಬಾಯಿಗೆ ಸಿಕ್ಕು ಅನೇಕ ರೋಚಕ ತಿರುವುಗಳನ್ನು ಪಡೆದು ಭಕ್ತಿಯ ಪರಾಕಾಷ್ಠೆಯ ತುದಿಗೆ ತಲುಪಿದೆ. ಆದರೆ ಸತ್ಯ ನಾರಾಯಣರಾಜು ತನ್ನ 14ನೇ ವಯಸ್ಸಿಗೆ ಸ್ವಯಂ ಘೋಷಿತ ಶಿರಡಿ ಸಾಯಿಬಾಬಾನ ಅವತಾರ ಎಂದು ಹೇಳಿಕೊಂಡಾಗ ನಿಜಕ್ಕೂ ಆತನಿಗೆ ಅದನ್ನು ಸಮರ್ಥಿಸಿಕೊಳ್ಳಲು ಕೆಲವು ವಿದ್ಯೆಗಳ ಅಗತ್ಯವಿತ್ತು. ಹೀಗಾಗಿ ಔಪಚಾರಿಕ ಶಿಕ್ಷಣ, ಸಂಗೀತ, ಧ್ಯಾನದಿಂದ ತಾನು ಅತ್ಯುನ್ನತೆಗೆ ಏರುವುದು ಅಸಾಧ್ಯ ಎಂದು ಮನವರಿಕೆಯಾಗಿತ್ತು. ಆದ್ದರಿಂದಲೆ ಸಾಯಿಬಾಬಾ, ಪವಾಡ ಬಾಬಾ ಆಗಿ ಲೋಕ ಖ್ಯಾತಿ ಪಡೆದದ್ದು. ನಮ್ಮ ಸಮಾಜದಲ್ಲಿ ಜನರನ್ನ ತನ್ನೆಡೆಗೆ ಸೆಳೆಯಬೇಕೆಂದರೆ, ಅವರು ಮರು ಮಾತಿಲ್ಲದೆ ತನ್ನನ್ನು ದೈವೀಕ ವ್ಯಕ್ತಿ ಎಂದು ಒಪ್ಪಿ ಕೊಳ್ಳಬೇಕಾದರೆ ಯಾವ ರೀತಿಯ ಸಿದ್ಧತೆ ಮಾಡಿ ಕೊಳ್ಳಬೇಕಾಗಬಹುದು ಎಂಬುದನ್ನ ಸ್ಪಷ್ಟವಾಗಿ ಅರಿತಿದ್ದ ಬಾಬಾ ತಮ್ಮ ಕೈಯಿಂದ ವಿಭೂತಿ, ಉಂಗುರ, ಚೈನ್ ಹೀಗೆ ಜನಗಳನ್ನು ಓಲೈಸುವಂತಹ ನಾಜೂಕಿನ ಕೆಲಸಕ್ಕೆ ಕೈ ಹಾಕಿದರು. ಒಬ್ಬ ಯಕ್ಷಣಿ ವಿದ್ಯೆ ಕಲಿತವನು ಮಾಡಬಹುದಾದಂತಹ ಕೆಲಸಗಳಿವು ಎಂದು ಮೇಲ್ನೋಟಕ್ಕೆ ಯಾರಿಗೆ ಬೇಕಾದರು ಅರ್ಥವಾಗಬಲ್ಲದು. ಹೀಗೆ ಬಾಬಾ ಪವಾಡಗಳನ್ನು ಮಾಡುತ್ತಾ ಪ್ರಶಾಂತಿ ನಿಲಯದ ಅಂಗಳದ ಸುತ್ತ ಭದ್ರ ಕೋಟೆಗಳನ್ನು ಕಟ್ಟುತ್ತಾ ಬಂದರು.

ಸತ್ತ ವ್ಯಕ್ತಿ ಬಗ್ಗೆ ಕೆಟ್ಟದ್ದನ್ನು ಆಡಬಾರದು ಎಂಬ ಅಲಿಖಿತ ಸೌಜನ್ಯದ ನಿಯಮ ಇದ್ದರು, ಇಂದು ಸಾಯಿಬಾಬಾ ಬಗ್ಗೆ ನಮ್ಮ ಮಾಧ್ಯಮಗಳ ದೃಷ್ಟಿಕೋನದೆಡೆಗೆ ಗಮನ ಹರಿಸಿದಾಗ ಕೊಂಚ ಆತ್ಮಾವಲೋಕನದ ಅಗತ್ಯ ಅವರೆಲ್ಲರಿಗಿದೆ ಎಂಬ ಅಭಿಪ್ರಾಯದಲ್ಲಿ ಈ ಲೇಖನಕ್ಕೆ ಅಕ್ಷರ ಹೆಣೆಯ ಬೇಕಾಯಿತು. ಇಲ್ಲಿ ನನ್ನ ಅಪಸ್ವರ ಇರುವುದು ಬಾಬಾ ಪವಾಡಗಳಿಂದ ಕಟ್ಟಿದ ಹುಸಿ ಸಾಮ್ರಾಜ್ಯದ ಬಗ್ಗೆ ಮಾತ್ರ. ಆದರೆ ಅದಾದ ನಂತರ ಅವರು ಮಾಡಿದ ಸಾಮಾಜಿಕ ಕ್ರಾಂತಿ ಇದೆಯಲ್ಲ ಅದು ಪ್ರಶ್ನಾತೀತ. ಬಾಬಾ ನಮ್ಮ ನಿಮ್ಮಂತೆ ತೀರಾ ಸಾಮಾನ್ಯ ವ್ಯಕ್ತಿ ಎಂಬುದನ್ನು ನಾವು ಮನವರಿಕೆ ಮಾಡಿ ಕೊಳ್ಳಬೇಕು. ಇಂದು ಮಾಧ್ಯಮಗಳು ಹೊಣೆಗಾರಿಕೆಯನ್ನು ಮರೆತು ಬಾಬಾ ಭೂಲೋಕದ ದೇವರು ಎಂಬಷ್ಟರ ಮಟ್ಟಿಗೆ ಬಿಂಬಿಸುತ್ತಿವೆಯಲ್ಲ, ಇದು ಜನರನ್ನು ಮತ್ತಷ್ಟು ಮೌಢ್ಯತೆಗೆ ತಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇನ್ನು 5, 6 ವರ್ಷಗಳಲ್ಲಿ ಇನ್ನೊಬ್ಬ ಯಾರಾದರು ಬಾಬಾ ನನಗೆ ಸ್ವಪ್ನದಲ್ಲಿ ಬಂದಿದ್ದರು, ನೀನೆ ಉತ್ತರಾಧಿಕಾರಿ ಎಂದು ಹೇಳಿದರು ಎಂದರೆ ನಮ್ಮ ಜನ ಕುರಿಗಳಂತೆ ಆತನನ್ನು ಹೀಗೆ ಹಿಂಬಾಲಿಸುತ್ತಾರೆ. ಅದು ಒಂದು ಆರೋಗ್ಯಯುತ ಸಮಾಜ ಹಳ್ಳ ಹಿಡಿಯುವದಕ್ಕೆ ಅವಕಾಶ ಮಾಡಿ ಕೊಟ್ಟಂತಲ್ಲವೆ.

ಬಾಬಾ ಬಂಗಾರದ ಮನುಷ್ಯನೆ...!?

ಬಾಬಾ ಬಂಗಾರದ ಮನುಷ್ಯನೆ...!?

 ಆದರೆ ಇಲ್ಲಿ ಬಾಬಾ ಮಾಡಿದ ಪವಾಡಗಳು, ಜನರಿಗೆ ತಾನೇ ದೇವರು ಎಂಬಂತೆ ದಾರಿ ತಪ್ಪಿಸಿದ್ದು, ಹಲವು ವಿವಾದಗಳು ತಲೆ ಎತ್ತಿದಾಗ ಬಾಬಾ ಮೌನವಹಿಸಿದ್ದು ಇವೆಲ್ಲ ಪ್ರಜ್ಞಾವಂತರಲ್ಲಿ ಅನೇಕ ಪ್ರಶ್ನೆಗಳೆಳುವಂತೆ ಮಾಡುತ್ತವೆ. ಬಾಬಾ ಇವನ್ನೆಲ್ಲಾ ಮಾಡದೆ ಜನಪ್ರಿಯರಾಗುತ್ತಿರಲಿಲ್ಲ, ಲೋಕ ಕಲ್ಯಾಣದ ಕೆಲಸ ಮಾಡಲಾಗುತ್ತಿರಲಿಲ್ಲ ಎಂದು ಹೇಳಬಹುದು. ಆದರೆ ಜನೋದ್ದಾರಕ್ಕಾಗಿ ಬಾಬಾ ಹಿಡಿದ ಮಾರ್ಗ ನಿಜವಾಗಿಯೂ ದೇವಮಾನವನಿಗೆ ಒಪ್ಪುವಂತಹದ್ದಲ್ಲ ಎಂಬುದಂತು ಸತ್ಯ. ಮೊದಲಿನಿಂದಲೂ ಬಾಬಾ ವಿವಾದತೀತರಾಗಿ ಲೋಕ ಖ್ಯಾತಿ ಪಡೆದವರಲ್ಲ. ಹಾಗಿದ್ದ ಮೇಲೆ. ಅವರು ಅತೀತರು ಎಂದು ಹೇಳುವುದು ಅಸಾಧ್ಯ. ಇಂದು ಬಾಬಾ ಕಟ್ಟಿದ ಸಾಮ್ರಾಜ್ಯ ಇದೆಯಲ್ಲ ಅದರತ್ತ ಯಾರು ಕಣ್ಣು ಹಾಕಿದರು ಒಂದು ಅಂದಾಜು ದಕ್ಕಬಲ್ಲದು. ಸುಮಾರು 40 ಸಾವಿರ ಕೋಟಿಯಿಂದ 1.50 ಲಕ್ಷ ಕೋಟಿಯ ಆಸುಪಾಸಿನಲ್ಲಿ ಇರಬಹುದಾದ ಸಂಪತ್ತಿಗೆ ಒಡೆಯರಾಗಿದ್ದರು ಬಾಬಾ ಎಂದರೆ ಇದೆಲ್ಲದರ ಮೂಲ ಹುಡುಕಿಕೊಂಡು ಹೋಗಲು ಸಾಧ್ಯವಿದೆಯೇ! ಅದಕ್ಕೆ ದಯವಿಟ್ಟು ಬಾಬಾ ಮಾಡಿದ MAGIC ಗಳ ಬಗ್ಗೆ ಮೌಢ್ಯತೆಯಿಂದ ಮಾತನಾಡುವುದು ಬೇಡ. ಇದೆಲ್ಲದರ ಹೊರತಾಗಿ ಜನ ಕಲ್ಯಾಣಕ್ಕಾಗಿ ಸಾಯಿಬಾಬಾ ಮಾಡಿದ ಪವಾಡವಿದೆಯಲ್ಲ ಆದು ಶ್ಲಾಘನೀಯ.

ಪುಟ್ಟಪರ್ತಿಯ ಸುತ್ತಲ ಹಳ್ಳಿಗಳಲ್ಲಿ ಇಂದೇನಾದರು ಜಲಕ್ರಾಂತಿಯಾಗಿದೆ ಎಂದರೆ ಅದರ ಹಿಂದೆ ಇರುವುದು ಬಾಬಾ ಪವಾಡವೇ. ಸುಮಾರು 700ಕ್ಕು ಹೆಚ್ಚು ಗ್ರಾಮಗಳಿಗೆ ಬಾಬಾ ತಮ್ಮ ಟ್ರಸ್ಟ ವತಿಯಿಂದ ಜೀವ ಜಲವನ್ನ ಹರಿಸಿದ್ದಾರೆ. ಒಂದು ಸಾರಿ ಅಲ್ಲಿನ ಕೈಂಕರ್ಯದತ್ತ ಕಣ್ಣು ಹಾಯಿಸಿದರೆ ಒಂದು ಸರಕಾರ ಮಾಡಬಹುದಾದಂತಹ ಕೆಲಸವನ್ನ ಬಾಬಾ ಹೇಗೆ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟು ಫಲಾನುಭವಿ ಗ್ರಾಮಗಳು 750
ಇದರ ಲಾಭ ಪಡೆದ ಒಟ್ಟು ಜನಸಂಖ್ಯೆ 900,000
ಲಾಭ ಪಡೆಯಬಹುದಾದ ಜನಸಂಖ್ಯೆ 1,250,000
ಯೋಜನೆಗೆ ತಗುಲಿದ ವೆಚ್ಚ US$63 million

ಇದು ಬಾಬಾ ಅವರಲ್ಲಿದ್ದ ಸಾಮಾಜಿಕ ಕಾಳಜಿಗೆ ಒಂದು ಉದಾಹರಣೆ. ಆದರೆ ಅವರ ಕಳಕಳಿ ಇಷ್ಟಕ್ಕೆ ಸೀಮಿತವಾಗಲಿಲ್ಲ. ಬಾಬಾ ಕಟ್ಟಿಸಿದ ಆಸ್ಪತ್ರೆಗಳಿವೆಯಲ್ಲ ಅವು ನಿಜಕ್ಕೂ ಬಡವರ ಪಾಲಿನ ಸಂಜೀವಿನಿ. ಪುಟ್ಟಪರ್ತಿ ಮತ್ತು ಬೆಂಗಳೂರಿನ ವೈಟ್ ಫಿಲ್ಡನಲ್ಲಿರುವ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯ ವೆಚ್ಚ ಎಷ್ಟೆ ಇದ್ದರೂ, ಯಾವುದೇ ರೀತಿಯ ಚಿಕಿತ್ಸೆ ಬೇಕಿದ್ದರೂ ಅದು ಉಚಿತವಾಗಿಯೇ ಲಭ್ಯವಿದೆ. ಇದು ಬಾಬಾ ಮಾಡಿದ ಪವಾಡವಲ್ಲದೆ ಇನ್ನೇನು! ಕೆಲವೊಮ್ಮೆ ಮಾನಸಿಕವಾಗಿ ಕುಗ್ಗಿದ ಜೀವಗಳಿಗೆ ಹಿಡಿ ಭರವಸೆಯ ಮಾತುಗಳು ಎಂತಹ ಜಾಢ್ಯವನ್ನಾದರು ಹೊಡೆದೊಡಿಸಬಲ್ಲವು. ಅದನ್ನು ಬಾಬಾ ತಮ್ಮ ಪ್ರವಚನಗಳ ಮೂಲಕ ಮಾಡುತ್ತಿದ್ದರು. ಅದು ನಿಜಕ್ಕೂ ಸತ್ಕಾರ್ಯವೇ. ಅದರೆಡೆಗೆ ಯಾರು ಬೊಟ್ಟು ಮಾಡಿ ತೋರಿಸರು. ಒಬ್ಬ ಮನಶಾಸ್ತ್ರಜ್ಞ ಮಾಡಬೇಕಾದ ಕೆಲಸವನ್ನ ಬಾಬಾ ಮಾಡುತ್ತಿದ್ದರು ಅಷ್ಟೇ! ವಿಶ್ವವ್ಯಾಪಿ ಹರಡಿದ ಬಾಬಾ ಅವರ ಆಶ್ರಮಗಳು ನೂರಾರು ಕೋಟಿಯನ್ನ ಪ್ರಶಾಂತಿಧಾಮದೆಡೆಗೆ ಹರಿಸಿರಬಹುದು. ಆದರೆ ಅದು ಸತ್ಕಾರ್ಯಗಳಿಗೆ ವಿನಿಯೋಗವಾಗುತ್ತಿದೆಯೆಂದರೆ ಅದಕ್ಕಿಂತ ಹೆಮ್ಮೆಯ ವಿಷಯ ಬೇರಿಲ್ಲ. ಬಾಬಾ ಕಟ್ಟಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರೇ ಇಂದು ಬಾಬಾ ಅವರ ಸೇವಾ ಕಾರ್ಯಗಳಿಗೆ ಹೆಗಲು ಕೊಡುತ್ತಿದ್ದರು. ಒಂದು ಸುಶಿಕ್ಷಣ ವ್ಯವಸ್ಥೆಯ ನಿರ್ಮಾಣಕ್ಕೆ ಇಷ್ಟು ಕಾಣಿಕೆ ಸಾಕು.

ಇನ್ನು ಬಾಬಾ ಬಿಟ್ಟು ಹೋದ ಒಡೆತನಕ್ಕೆ ಅಧಿಪತ್ಯ ಸಾಧಿಸಲು ಒಳಗೊಳಗೆ ಹವಣಿಕೆ ನಡೆದಿದೆ. ಬಾಬಾಗೆ ತೀರಾ ಆಪ್ತನಾಗಿದ್ದ ಸತ್ಯಜಿತ್ ಉತ್ತರಾಧಿಕಾರಿ ಎಂಬ ಗುಲ್ಲು ಹರಡಿದೆಯಂತೆ. ಯುವ ಸತ್ಯಜಿತ್ ಸುಮಾರು ವರುಷಗಳಿಂದ ಬಾಬಾ ಜೊತೆಗಿದ್ದ. ಅವರ ಕುಶಲೋಪರಿ ನೋಡಿಕೊಳ್ಳುತ್ತಿದ್ದ. ಹೀಗಾಗಿ ಪಟ್ಟ ಒಲಿದರು ಒಲಿಯಬಹುದು. ಆದರೆ ಯಾರೆ ಉತ್ತರಾಧಿಕಾರಿಯಾಗಲಿ ಬಾಬಾ ಮಾಡಿದ ಸೇವಾ ಕಾರ್ಯಗಳಿವೆಯಲ್ಲ ಅವುಗಳು ಅಬಾಧಿತವಾಗಿ ನಡೆದುಕೊಂಡು ಹೋಗಲಿ. ಆ ಉನ್ನತ ಕಾರ್ಯಗಳಿಂದಾಗಿ ಬಾಬಾ ಸದಾ ಎಲ್ಲರ ಮನದಲ್ಲಿ ಹಸನ್ಮಖಿಯಾಗಿ ಮಿಂಚುತಿರಲಿ. ಪ್ರೇಮಸಾಯಿಯಾಗಿ ನಾನು ಹುಟ್ಟಿ ಬರುತ್ತೇನೆ ಎಂದು ಬಾಬಾ ಹೇಳಿದ್ದರಂತೆ. ಸಮಾಜೋಪಕಾರಿ ಕೆಲಸಗಳನ್ನು ಮಾಡುವ ಪ್ರೇಮಸಾಯಿ ಪ್ರತಿ ಮನೆಯಲ್ಲಿ ಹುಟ್ಟಿ ಬರಲಿ.ಅದು ಪ್ರತಿ ಪ್ರಜ್ಞಾವಂತರ ಮನದ ಇಂಗಿತ.

ಈಗಾಗಲೇ ಕತ್ತಲೆ ಕೂಪಗಳು ಹರಡಿವೆ. ನಿನ್ನ ಕೈಗಳಿಂದ ಉದುರುತ್ತಿದ್ದ ಉಂಗುರ, ಲಿಂಗುಗಳ ಪವಾಡಗಳು ಪುನರಾವರ್ತನೆಯಾಗಲು ನೀ ಬರುವಂತಾಗದಿರಲಿ. ಬೆಳಕಿನಡೆಗೆ ನಡೆಸಲು ನೀ ಧರೆಗೆ ಬಾ…

 

ಟ್ಯಾಗ್ ಗಳು:

ಬದುಕೆಂಬ ಟೆಂಟ್ ಥಿಯೇಟರ್ ನಲ್ಲಿ ನೂರೆಂಟು ಸಿನಿಮಾಗಳು

ನಿಜ! ಜೀವನದುದ್ದಕ್ಕು ಬದುಕಿನಲ್ಲಿ ಸರಣಿಯಾಗಿ ನಡೆಯುವ ಘಟನೆಗಳೆಲ್ಲ ಒಂದು ಸುಂದರ ಸಿನಿಮಾದಂತೆ. ಸಂತೋಷವಿದೆ, ಸಾಹಸವಿದೆ. ಕಷ್ಟಗಳಿವೆ, ಅವುಗಳಿಗೆ  ನೂರೆಂಟು ತಿರುವುಗಳಿವೆ. ಈ ಜೀವನದ ಜಾತ್ರೆ ಮುಗಿದಾಗಲೇ ಶುಭಂ ಹೇಳುವುದು.

ನನಗೊಬ್ಬನಿಗೆ ಅಲ್ಲ ಎಲ್ಲರಿಗೂ ಅವರ ಬಾಲ್ಯ ರಸಪೂರಿ ಮಾವಿನ ಹಣ್ಣಿನಷ್ಟೆ ಅಪ್ಯಾಯಮಾನ. ಆಗ ಎಷ್ಟೋ ಸಾರಿ ಬೇಗ ದೊಡ್ಡವರಾಗ ಬೇಕು, ಅವರಂತೆ ಪ್ಯಾಂಟ್ ಹಾಕಬೇಕು, ಮೀಸೆ ಬಿಡಬೇಕು, ರಾಜಾ ರೋಷವಾಗಿ ತಿರುಗಾಡ ಬೇಕು ಎಂಬ ಹುಚ್ಚು ಕನಸಿನ ಕುದುರಿ ಓಡುತ್ತಲೆ ಇರುತ್ತದೆ. ಆದರೆ ಒಂದು ಸಾರಿ ದೊಡ್ಡವರಾಗಿ ನೋಡಿ ಆಮೇಲೆ ಈ ಜಂಜಡಗಳ ಸಹವಾಸವೇ ಬೇಡ. ಬದುಕು ಒಂದು ಸಾರಿ REWIND ಆದರೆ ಎಷ್ಟು ಚೆನ್ನ ಅಲ್ಲವಾ ಎಂದೆನಿಸದೇ ಇರದು. ಅದು ಬಾಲ್ಯಕ್ಕಿರುವ ಮುಗ್ಧತೆ.

ಸಿಟಿಯೊಳಗ ಬೆಳದ ಹುಡುಗ್ರಿಗೆ ಇದೆಲ್ಲಾ ಅನುಭವ ಆಗಿರಂಗಿಲ್ಲ. ಅದಕ ನಾನು ಸಣ್ಣವಿದ್ದಾಗ ನಮ್ಮೂರ ಹೆಂಗಿತ್ತ ಅಂತ ಸುಮ್ಮನೆ ಒಂದು ಸಲ ನೆನಪು ಮಾಡಿಕೊಂಡು ಅದರ ಸವಿ ಸವಿಯೋಣ ಅಂತ ಇಲ್ಲಿ ಬರೀಲಿಕತೀನಿ. ಒಂದಷ್ಟು ತುಂಟಾಟ, ಮತ್ತಷ್ಟು ಕಿತ್ತಾಟ, ಮೊಗದಷ್ಟು ಹುಡುಗಾಟ ಅಂದ್ರನ ಬಾಲ್ಯ ನೋಡ್ರೀ. ಅದಕ ನಾವು ಎಷ್ಟು ಎತ್ರಕ್ಕ ಹೋದ್ರು ಹಳೀ ನೆನಪು ಮರೆಯಂಗಿಲ್ಲ. ಅದರಾಗ ನನಗ ನನ್ನ ಹಳಿ ನೆನಪು ಮಾಡಿಕೊಳ್ಳದಂದ್ರನ ಹೋಳಿಗಿ ಊಟ ಮಾಡಿದಂಗ. ಆ ಬುಟ್ಟಿಯಾಗಿನ ಒಂದು ನೆನಪು ಅಂದ್ರ ನಮ್ಮ ಕಿನ್ನಾಳಾಗಿನ ಸಿನಿಮಾ ಟಾಕೀಸ್.

ಈಗೇನ ಬಿಡ್ರಿ PVR, I-MAX ಅಂತ ಏನೇನೋ ಥೇಟರ  ಬಂದಾವ. ಓಳಗ ಹೋದ್ರ ಭಾರೀ ಇಂದ್ರನ ಆಸ್ಥಾನದಾಗಿನ ಸಿಂಹಾಸನ ಇದ್ದಾಂಗ ಇರ್ತಾವ. ತಣ್ಣಗ ಎಸಿ, ಸುತ್ತರೆ ಮ್ಯೂಸಿಕ್ ಕೇಳಿಸ್ತಿರ್ತದ. ಸೀಟಿಗೆನ ಬಾಟಲಿ (ಕೂಲ್ಡ್ರೀಂಕ್ಸ) ಇಟುಗೊಳ್ಳಕ ಒಂದು ಸಣ್ಣ ತೂತ ಇರ್ತದ. ಹಾಯ್ ಅಂತ ಸಿನಿಮಾ ನೋಡಿ ಬರಬಹುದು. ಆದ್ರ  ಕಿಸೇದಾಗಿನ ರೊಕ್ಕ ಸೈತ ಹಂಗ ಹಾಯ್ ಅಂತ ಖರ್ಚಾಗಿರ್ತದ ಆ ಮಾತ ಬ್ಯಾರೇ. ಏನಪ ಅಂದ್ರ ಐಷಾರಾಮಿಯಾಗಿ ಸಿನಿಮಾ ನೋಡಿ ಬರಬಹುದು. ಅಷ್ಟ ಆರಾಮು. ಆದ್ರ ನಾನು ಹೇಳಕ್ಕ ಹೊಂಟಿದ್ದು ಇದಕ ವಿರುದ್ಧ ಇರೋ ಅನುಭವ. ನಮ್ಮೂರಾಗ ಟಾಕೀಸ ಹೆಂಗಿತ್ತಪ ಅಂದ್ರ ಅದರ ಮಜಾನ ಬ್ಯಾರೆ.

ಯಾವಾಗ ನಾನು ಒಂಚೂರು ದೊಡ್ಡವನಾದೆ ಆಗಿನಿಂದ ಸೆಕೆಂಡ್ ಷೋ ಸಿನಿಮಾಕ ಹೋಗ್ತಿದ್ದೆ. ಅದಕು ಮುಂಚೆ ನಮ್ಮದೇನಿದ್ರು ಮೊದಲೇ ಆಟಾನ. ಆಗ ಈಗಿನಂಗ ಸಿಲ್ವರ್ ಕ್ಲಾಸ್, ಗೋಲ್ಡ ಕ್ಲಾಸ್, ಬಾಲ್ಕನಿ ಅಂತೆಲ್ಲ ಇರಲಿಲ್ಲ. ಆದ್ರ ನಮ್ಮ ಕಿನ್ನಾಳಾಗ ಬಾಲ್ಕನಿ ಇತ್ತು. ಅದು ಬರೀ ಹೆಂಗಸರಿಗೆ ಮೀಸಲು. ಗಂಡಸರ ಹಿಂದ ಹೆಂಗಸರ ಸೆಪರೇಟ್ ಆಗಿ ಕುತ್ಗೊಬೇಕು. ದೊಡ್ಡ ಮನಿ ಹೆಣ್ಮಕ್ಕಳು ಬಂದ್ರು ಅಷ್ಟ. ಅವರಿಗೆ ಮ್ಯಾಲೇನ ಚೇರ್ ಹಾಕಿ ಕೂಡ್ಸೊರು. ನಾವಿದ್ದವಲ ನಮ್ಮದೇನಿದ್ರು ಗಾಂಧೀ ಕ್ಲಾಸರೀ. ಶಿವಾ ಅಂತ ಕಾಲ ಚಾಚಿಕೊಂಡು ಪಿಚ್ಚರ ನೋಡದ್ರಾಗಿನ ಮಜಾ ಅವನವ್ವನ ಈಗಿನ ಮಲ್ಟಿಪ್ಲೆಕ್ಸನಾಗು ಸಿಗಂಗಿಲ್ರೀ. ಆಗಿನ್ನು ನಮ್ಮೂರಿನ ಟಾಕೀಸ್ ನಾಗ ಮಾರ್ನಿಂಗ್, ಮ್ಯಾಟ್ನಿ ಶೋ ಇದ್ದಲ್ರೀ. ಏನಿದ್ದರು ಪಸ್ಟ ಶೋ, ಸೆಕೆಂಡ್ ಶೋ ಅಷ್ಟನ. ನಾವು ಇನ ಸಣ್ಣರಿದ್ದವಲ ಅದಕ ಪಸ್ಟ ಶೋಗೆ ಹೋಗ್ತದ್ವಿ. ಟಿಕೀಟ ಅಂದ್ರ ನೋಡ್ರಪ ಬರೀ ಹನ್ನೆಲ್ಡಾಣೆ. ಗೊತ್ತಾಗಲಿಲ್ಲ ಅದರೀಪ 75 ಪೈಸೆ ಅಷ್ಟೇ. ಮುಂಜಾನೆ ಎತ್ತಿನ ಬಂಡಿಗ ಆ ಕಡೆ ಈ ಕಡೆ ಒಂದು ಸಣ್ಣ ಪೋಸ್ಟರ್ ಕಟ್ಟಿರೊರ್ರು. ಅದರಾಗ ಕೂತ್ಕೊಂಡು ಕೂಗ್ತಾ ಬರೋರು. “ಅಂದು ಮುಂದೆನ್ನದೆ ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಶೈಲಸಿರಿ ಟಾಕೀಸ್ ನಲ್ಲಿ ಹೊಚ್ಚ ಹೊಸ ಚಲನ ಚಿತ್ರ ಬಂಗಾರದ ಗುಡಿ. ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ”. ಅಬ್ಬಾ ಆ ಕೂಗ ಕೇಳೀದ್ರನ ನಮ್ಗ ಸಿನಿಮಾಕ್ಕ ಹೋಗಂಗ ಅನಿಸ್ತಿತ್ತ.  ಅದು ಮ್ಯಾಲಿನ ಬಜಾರ್ದಾಗ ಒಂದ ದೊಡ್ಡ ಪೋಸ್ಟರ್ ಕಟ್ಟೋರು. ಅದು ಏನ ಅಂದ್ರ ನಾವಿದ್ದ ವಠಾರದಾಗಿಂದ ನಾಕ ಹೆಜ್ಜಿ ಹೊರಗ ಬಂದ್ರ ಭರ್ತಿ ಕಾಣದ. ಆಗನ ನಮ್ಮ ಮನಸಿನಾಗ ನೂರೆಂಟ ಸಿನಿಮಾ ಬಂದು ಹೋಗದ.

ಇಂತಿಪ್ಪ ಸಮಯದೊಳ್ ನಾನು ಅಪ್ಪನ ಕಾಡಿ, ಅಮ್ಮನ ಹತ್ರ ಗೋಗರೆದು ಹನ್ನಲ್ಡಾಣಿ ಗಿಟ್ಟಿಸ್ಗೊಂಡು ಸಿನಿಮಾ ನೋಡಕ ಹೋಗೊದು. ಸಿನಿಮಾ ಅಂದ್ರ ಸಾಕ ಹೋಟಲ್ ಮಂಜು ನೆನಪಾಗ್ತಿದ್ದ. ಯಾಕಂದ್ರ ಬರೋ ಎಲ್ಲಾ ಸಿನಿಮಾನು ಮೊದ್ಲ ನೋಡೊ ಕ್ಯಾಂಡಿಡೇಟ ಅಂದ್ರ ನಮ್ಮ ಮಂಜಣ್ಣ. ನಾವೆಲ್ಲ ಸೇರಿ ಸಿನಿಮಾಕ ಹೋಗೊರ್ರು. ಟಾಕೀಸ್ನಾಗ ಮೊದ್ಲು ಹಾಡು ಕೇಳಸದು. ಹಾಡ ಹತ್ತೆದ ಅಂದ್ರ ಇನು ಸಿನಿಮಾ ಶುರು ಆಗಿಲ್ಲ  ಅಂತನ. ಆದ್ರ ಆ ಮ್ಯುಸಿಕ್ ಇತ್ತ ನೊಡ್ರಿ ಅದು ಬಂತಂದ್ರ ಗಾಂಧೀ ರೀಲು ಚಲುವು ಆಗೇದಂತನ. ಟೂಡುಡು.. ಟೂಡುಡು.. ಟಟ್ಟುಟ್ಟು…ಟೂಡುಡು.. ಟೂಡುಡು.. ಟಟ್ಟುಟ್ಟು… ಅಂತ ಮ್ಯೂಸಿಕ ಬಂತಂದ್ರ ಸತ್ನೋ ಕೆಟ್ನೋ ಅಂತ ಓಡ್ತಿದ್ವಿ. ಹೋಗಿ ಒಂದ ನೆಲ ಕೊಡ್ರಿ ಅಂತ ಕೇಳಿ ಟಿಕೆಟ್ ಕೈಗ ಬಂತಂದ್ರ ಲಾಟರಿ ಹೊಡದಷ್ಟ ಖುಷಿ ಆಗೋದು. ಅಷ್ಟಕ್ಕು ನೆಲ ಅಂದ್ರ ಮೊಸಾಯಿಕ್, ಗ್ರಾನೈಟ್ ಹಾಸು ಅಂತ ಅನ್ಕೋಬ್ಯಾಡ್ರೀ. ಅದು ಉಸಿಗಿನ ನೆಲ ಅಷ್ಟ. ಅದರ ಮ್ಯಾಲ ಶಿವಾ ಅಂತ ಕೂತು ಸಿನಿಮಾ ನೋಡ್ತಿದ್ವೀ. ಒಬ್ಬರ ಕಾಲ ಮ್ಯಾಲ ಒಬ್ಬರ ಮಲಕೊಂಡು ನೋಡೊದು ಮಸ್ತಾಗಿತ್ರೀ.

ಹಿಂಗಿದ್ದಿರಬಹುದು ಅಂದುಕೊಳ್ಳಿ ನಮ್ಮ ಟಾಕೀಸು.

ಹಿಂಗಿದ್ದಿರಬಹುದು ಅಂದುಕೊಳ್ಳಿ ನಮ್ಮ ಟಾಕೀಸು.

ಅದೇನಾಯ್ತೊ ಗೊತ್ತಿಲ್ಲ ನಮ್ಮ ಸಿನಿಮಾದ ಸಂಕಪ್ಪ (ಟಾಕೀಸ್ ಓನರ್) ಉಸುಗ ತಗದು ಕರಿ ಬಂಡಿ (ಅದಕ ಪಾಟೀಕಲ್ಲು ಅಂತ ಹೇಳ್ತೀವಿ) ಹಾಕಿಸಿದ. ಅಲೆಲೆಲೆಲೆಲೆ, ಅದ್ರ ಮಾತ ಏನ ಹೇಳ್ತಿರಿ. ಅದು ಹೆಂಗ ಇತ್ತಪ ಅಂದ್ರ ಒಂತರ ಜಾರ ಬಂಡಿ ತರಹ ಇರೋದು. ಹಿಂದ ಒಂಚುರು ಎತ್ರ ಇದ್ರ ನೋಡಕ ಅನುಕೂಲ ಆಗ್ತದ ಅಂತ ಮಾಡಿದ್ರಪ. ಆದ್ರ ಏನ ಮಾಡ್ತೀರಿ ಮ್ಯಾಲಿಂದ ಸುಯ್ಯ ಅಂತ ತೀರ್ಥೋದ್ಭವ ಆದರೆ, ಮುಂದ ಕುತ ನಮಗ ಅಭೀಷೇಕನ ಗ್ಯಾರಂಟಿ. ಯಾವಾನಾದ್ರ ತಲೆ ಕೆಟ್ಟಿದ್ರ ಪರದಿ ಮ್ಯಾಲ ಸೆಂಟಿಮೆಂಟ್ ಇದ್ರು, ಇಲ್ಲಿ ದೊಡ್ಡ ಫೈಟಿಂಗ್. ಹಿಂಗಿಂಗೆಲ್ಲ ಮಾಡ ಬಾರ್ದು ಅಂತ ಗೊತ್ತಾಗಕ ಒಂದು ಹತ್ತ, ಹನ್ನ್ಯಾಲ್ಡ ಸಿನಿಮಾನ ಚೆಂಜ್ ಆಗಬೇಕಾತ.

ಆಮೇಲಿ ನಮಗ ಪ್ರಮೋಷನ್ ಸಿಗ್ತ. ಏನು ಅಂತೀರಾ.ನಾವು ನೆಲಕ್ಕ ಹೋಗರ್ರು,  ಬೆಂಚಿಗ ಹೋಗಕ್ಕತ್ತಿದ್ವಿ. ಆಗ ಟಾಕೀಸ್ ಗೆ ಫ್ಯಾನ್ ಹಾಕಿಸಿದ್ರು. ನಮ್ಮ ಅದೃಷ್ಟ ನೋಡ್ರೀ. ಫ್ಯಾನ್ ಏನಿದ್ರು ಬೆಂಚಿಗ ಮತ್ತ ಚೇರಿಗೆ ಅಷ್ಟ. ಹಂಗ ಸ್ವಲ್ಪ ವರ್ಷ ಹೋತು ಮತ್ತೊಂದು ಪ್ರಮೋಷನ್. ಆಗ ಚೇರಿಗೆ ಹೋಗಲಿಕ್ಕ ಹತ್ತಿದ್ವೀ. ಆ ಗತ್ತ ಬ್ಯಾರೇರೀ. ಆದ್ರ ಏನ ಹೇಳ್ರೀ ನೆಲದಾಗ ಕೂತ ನೋಡ ಮಜಾ ಮತ್ತ ಬರಲಿಲ್ರೀ. ಅಲ್ಲಿ ಕೂತ ಮಲಕೊಂಡು ನೋಡಿದ ಸಿನಿಮಾಗಳಿಗೆ ಲೆಕ್ಕ ಇಲ್ರೀ. ನನ್ನೊಳಗ ಒಂದು ಕಲ್ಪನಾ ಲೋಕ ಕಟ್ಟಿ ಕೊಟ್ಟದ್ದ ನಮ್ಮ ಕಿನ್ನಾಳ ಶೈಲಸಿರಿ ಟಾಕೀಸ್ ಅಂತ ಹೆಮ್ಮಿಂದ ಹೇಳಬಹುದು.

ಭಾಳ ವರ್ಷದಿಂದ ಅರ್ಧಕ್ಕ ನಿಂತಿದ್ದ,  ಏನೇನೋ ರೋಚಕ ಕತಿ (ಅದರಾಗ ಏಳು ಮಕ್ಕಳ ತಾಯಿ ದೆವ್ವದ, ಅದಕ ಎಷ್ಟು ಕಟ್ಟಿದ್ರು ನಿಂತುಗೊಳ್ಳಲ್ಲ ಅಂತಿದ್ರು. ಆದರ ಅದನ್ನ ಯಾರ ಕಟ್ಟಕ ನೋಡಿದ್ರು ಅಂತ ಸ್ವತಃ ಮಾಲೀಕ ಸಂಕಪ್ಪಗ ಗೊತ್ತಿರಲಿಲ್ಲ) ಹುಟ್ಟ ಹಾಕಿದ್ದ ಸಿನಿಮಾದ ಸಂಕಪ್ಪನ ಹೊಸ ಟಾಕೀಸ್ ನಾನು ಡಿಗ್ರಿ ಒಳಗ ಇರಬೇಕಾದ್ರ ರೆಡಿ ಆಗಿತ್ತು. ಓದ್ಲಿಕ್ಕೆ ಬೆಂಗಳೂರ್ನಾಗಿದ್ದ ನಾನ ಒಂದ ಸಲ ಊರಿಗ ಹೋದಾಗ “ವಂದೇ ಮಾತರಂ” ಅನ್ನೋ ಸಿನಿಮಾ ನೋಡಕ ಹೋಗಿದ್ದೆ. ಆದ್ರ ಏನ ಹೇಳ್ರೀ ಆ ಹಳೆ ಟಾಕೀಸ್ನಾಗ ನೆಲ್ದ ಮ್ಯಾಲ ಕುತ ನೋಡಿದ್ದ ಮಜಾ ಈ ಹೊಸ ಟಾಕೀಸ್ನನ ಕುರ್ಚಿ ಮ್ಯಾಲ ಕೂತ ನೋಡಿದಾಗ ಸಿಗಲಿಲ್ರೀ. ಆಗಿನ ನೆನಪುಗಳು ಈಗಲು ರಂಗ ರಂಗಾಗಿ ಹಂಗ ಉಳಿದ ಹೋಗ್ಯಾವ. ಹೊಸ ಪಿಚ್ಚರ ಅಂದ್ರ ಬಂಡಿ, ಟ್ರ್ಯಾಕ್ಟರ್ ತಗೊಂಡು ಬರೋ  ಜನ. ಪರದಿ ಮ್ಯಾಲಿನ ಕಷ್ಟ ತಂಬದ ಅಂತ ಗೋಳೋ ಅಂತ ಅಳೋ ಹೆಂಗಸ್ರು. ಬಲು ಗತ್ತಿಲೆ ಸಿನಿಮಾಕ್ಕ ಬರೋ ಕೆಲವು ಪುಢಾರಿ ಯುವಕ್ರು. ಹೆಣ್ಣು ದೇವತೆಗಳ ಸಿನಿಮಾ ಅಂದ್ರ ಹೆಂಗಸ್ರಿಗೆ ಸಿಗೋ ಹಸಿರು ಬಳಿಗಳು. ಅಬ್ಬಾ! ಆದೆಷ್ಟು ಚೆಂದಾಗಿತ್ರಿ ಆ ಜಮಾನಾ. ನೆನಪಿನ ಬುತ್ಯಾಗ ಇನ್ನು ಎಷ್ಟೋ ವಿಷಯಗಳು ಹಂಗ ಉಳಿದಾವು. ಅದನ್ನ ಇನ್ನೊಮ್ಮೆ ಯಾವತ್ತಾದ್ರು ಕುಂತು ಮತ್ತ ಬರೋಬ್ಬರಿ ಹೇಳ್ತೀನಿ. ಏನಂತಿರ್ರೀ……

 

ಟ್ಯಾಗ್ ಗಳು:

ಗೂಗಲ್ ಎಂಬ ಸರ್ಚ ಇಂಜಿನ್ ನ್ನು ಹೀಗೆ ಹುಡುಕಿಕೊಂಡು ಹೋದಾಗ

ಅಬ್ಬಾ! ಹೈದರಾಬಾದಿಗೆ ಕಾಲಿಟ್ಟು ಸುಮಾರು 5 ವರೆ ವರ್ಷಗಳು ಕಳೆದಿವೆ. ಆದರು ನನಗೆ ನವಾಬ ನಗರಿ ಇನ್ನು ಅಪರಿಚಿತವೇ. ಕಾರಣ ಬೆಂಗಳೂರು ಎಂಬ ಮೋಹಕ ಹುಡುಗಿಯ ಮುಂದೆ ಹೈದರಾಬಾದ್ ನನಗೆ ಸದಾ ವಯೋವೃದ್ಧೆ ತರವೇ ಕಾಣುತ್ತಿತ್ತು. ಒರಟು ಬಿಸಿಲು, ದಿಕ್ಕು, ದೆಸೆಯಿಲ್ಲದ ಟ್ರಾಫಿಕ್ ನನ್ನನ್ನು ಹೊರಗೆ ಸುತ್ತದಂತೆ ಕಟ್ಟಿ ಹಾಕಿದ್ದವು. ಆದರೆ ಒಂದೆರಡು ಸಾರಿ ಹೈಟೆಕ್ ಸಿಟಿಯ ಕೊಂಚ ಹತ್ತಿರದವರೆಗು ಹೋಗಿ ಬಂದಿದ್ದೆ. ಮುಂದೆ ಹೋಗುವ ವ್ಯವಧಾನ, ವೇಳೆ ಎರಡು ಇರಲಿಲ್ಲ. ಆದರೆ ಇಂದು ಹೋಗುವ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡು ಒದಗಿ ಬಂದಿದ್ದರ ಫಲವಾಗಿ ಸಾಫ್ಟವೇರ್ ಓಣಿ, ಹೈಟೆಕ್ ಸಿಟಿಗೆ ಕಾಲಿರಸಬೇಕಾಯಿತು. ಈ ಒಂದು ವಿಸಿಟ್ ಹೈದ್ರಾಬಾದ್ ನ ಹೊಸ ರೂಪವನ್ನೆ ನನ್ನ ಮುಂದೆ ತೆರದಿಟ್ಟಿತು. ಆ ಅನುಭಕ್ಕೆ ನಾನು ನಿಜವಾಗಿಯೂ ಪುಳಕಗೊಂಡಿದ್ದೆ.

ಈ ನಗರ ಎಂದರೆ ನನ್ನ ಕಣ್ಣ ಮುಂದೆ ಸುತ್ತಲು ಕೊಳಕು, ಗಿಡಗಳಿಲ್ಲದೆ ಭಣಗುಡುವ ರಸ್ತೆಗಳು. ಬೇಕಾಬಿಟ್ಟಿ ವಾಹನ ಚಾಲನೆ. ಹಳೆ ಆಕಾರ ಕಳೆದುಕೊಂಡು ವಿಕಾರವಾದ ಬಿಲ್ಡಿಂಗ್ ಗಳು. ಛೇ! ನನಗೆ ಮೈಯೆಲ್ಲಾ ಪರ ಪರನೆ ಕೆರದಂತಾಗುತ್ತಿತ್ತು. ಆದರೆ ಇಂದಿನ ಅನುಭವ ಇದಕ್ಕೆ ವಿರುದ್ಧವಾಗಿತ್ತು. ಫಳ, ಪಳ ಹೊಳೆಯುವ ಮಹಡಿಗಳು, ನೀಟಾದ ರಸ್ತೆಗಳು, ಆಚೀಚಿಗೆ ನೆರಳು, ನಿಜಕ್ಕೂ ಹೈಟೆಕ್ ಸಿಟಿ ಕೊಂಚ ಹೈ, ಫೈ ಆಗೇ ಇದೆ ಎಂದೆನಿಸಿದ್ದು ಸುಳ್ಳಲ್ಲ.

ಅಂತರ್ಜಾಲ ಬಳಸುವ ಯಾರಿಗೆ ಗೂಗಲ್ ಗೊತ್ತಿರಲಿಕ್ಕೆ ಸಾಧ್ಯವಿಲ್ಲ ಹೇಳಿ. ಹುಡುಕಾಟದ ಪದಕ್ಕೆ ಅನ್ವರ್ಥ  ಎಂಬಂತೆ ನಮಗೆ ಅನಿವಾರ್ಯವಾಗಿರುವ “ಗೂಗಲ್” ಸರ್ಚ  ಇಂಜಿನ್ ಗೆ ಯಾವ ಪದ ಹಾಕಿದರು ಕ್ಷಣದಲ್ಲೆ ನೂರಾರಲ್ಲ, ಕೆಲವು ಸಾರಿ ಲಕ್ಷಗಳಷ್ಟು ಲಿಂಕ್ ಗಳನ್ನು ಹೆಕ್ಕಿ ತೆಗೆದು ನಮ್ಮ ಮುಂದಿಡುತ್ತದೆ. ಅಂತಹ ಗೂಗಲ್ ಆಫೀಸ್ ನ್ನೆ ನಾನು ಹುಡುಕಿಕೊಂಡು ಹೋಗಬೇಕಾಗಿ ಬಂತು. ವಿಪರ್ಯಾಸ ಅಂದರೆ ಇದೇ ಅಲ್ಲವೆ. ಅಂತು ತುಂಬಾ ಕಷ್ಟವೇನು ತೆಗೆದು ಕೊಳ್ಳದೆ ಆಫೀಸ್ ನ್ನು ನಾನು ಮತ್ತು ನನ್ನ ಹೆಂಡತಿ ಪತ್ತೆ ಹಚ್ಚಿದೇವು. ವಾವ್! ಆಫೀಸ್ ಎಂದರೆ ಅದು. ಸುಂದರ  ಒಳಾಂಗಣ, ತಣ್ಣನೆ ಮೈಗೆ ರಾಚುವ ಎಸಿಯ ತಂಪು, ಮೆತ್ತನೆ ಕುಷನ್, ಒಟ್ಟಿನಲ್ಲಿ ಸೂಪರ್ ಅನುಭವ. ಅದರಲ್ಲು ಇನ್ನು ಮೂರು ದಿನಗಳು ಹಿಂದುಗಳ ಹೊಸ ವರ್ಷ ಯುಗಾದಿಗೆ ಬಾಕಿ ಇದೆ ಎನ್ನುವಾಗಲೇ, ಅಲ್ಲಿ ಯುಗಾದಿಯ ಆಚರಣೆಯ ಸಡಗರ ಮನೆ ಮಾಡಿತ್ತು. ಅಲ್ಲಿನ ಯುವಕ, ಯುವತಿಯರ ಹಾವ, ಭಾವಗಳಲ್ಲಿ ವಿದೇಶಿತನ ತುಂಬಿದ್ದರು, ವಾತಾವರಣ ಶುದ್ಧ ಸ್ವದೇಶಿ ಮಯವಾಗಿದ್ದು ನೋಡಿ ನಿಜಕ್ಕೂ ನನಗೆ ಕಾರ್ಪೋರೇಟ್ ಕಂಪನಿಗಳುವರು  ಇಲ್ಲಿನ ಸಂಪ್ರದಾಯಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿದ್ದಾರಲ್ಲ ಎಂದು ಅಚ್ಚರಿಯಾಯಿತು. ಅಷ್ಟೇ ಸಂತಸವು ಮೂಡಿತು.ನಮ್ಮತನ  ಇನ್ನು ಜೀವಂತ  ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹೆಮ್ಮೆಯಾಯಿತು. ಅಲ್ಲಿನ ಸಡಗರವನ್ನು ನಾನು ಅಕ್ಷರಗಳಲ್ಲಿ ಹೇಳುವುದಕ್ಕಿಂತ, ನೀವು ಕಣ್ನಾರೆ ಕಾಣುವುದೇ ಸೂಕ್ತ  ಎಂದು ನನ್ನ ಮೊಬೈಲ್ ಕ್ಯಾಮಾರವನ್ನ ಕ್ಲಿಕ್ಕಿಸಿದೆ. ಅದರ ಕಣ್ಣಿಗೆ ಸೆರೆ ಸಿಕ್ಕ ಚಿತ್ರಗಳನ್ನು ನೀವೆ ನೋಡಿ ಆನಂದಿಸಿ.

ಯುಗಾದಿ ಸಡಗರ, ಗೂಗಲ್ ಮುಂದೆ ಕಂಡಿದ್ದು ಹೀಗೆ ಅಲಂಕಾರ
ಯುಗಾದಿ ಸಡಗರ, ಗೂಗಲ್ ಮುಂದೆ ಕಂಡಿದ್ದು ಹೀಗೆ ಅಲಂಕಾರ

ಕೇವಲ ಬಿಗಿದಪ್ಪುವ ಜೀನ್ಸ ಮತ್ತು ಅರೆ, ಬರೆ ಮೈ ಕಾಣುವ ಟಾಪ್ ನೇತು ಹಾಕಿಕೊಂಡು ಬರುವ ಹುಡುಗಿಯರ ಮಧ್ಯ ನನಗಿಂದು ಅಪ್ಪಟ ಭಾರತೀಯ ನಾರಿಯರಂತೆ ಸೀರೆ ಉಟ್ಟು, ಕುಂಕುಮ ತೊಟ್ಟ ಯುವತಿಯರು ಕಂಡರು. ಹಿರಿ, ಹಿರಿ  ಹಿಗ್ಗಲು ಇನ್ನೇನು ಬೇಕು ಹೇಳ್ರೀ….

ಹೂವಿನೊಂದಿಗೆ ರಂಗವಲ್ಲಿ ಚೆಲುವೆಲ್ಲ ನಂದೇ ಎಂದಿತು
ಹೂವಿನೊಂದಿಗೆ ರಂಗವಲ್ಲಿ ಚೆಲುವೆಲ್ಲ ನಂದೇ ಎಂದಿತು
 

ಟ್ಯಾಗ್ ಗಳು:

 
%d bloggers like this: