RSS

Monthly Archives: ಮಾರ್ಚ್ 2011

ಗೆದ್ದದ್ದು ಕ್ರಿಕೆಟ್ ಆದರು,ಮೆರದದ್ದು ಅಪ್ಪಟ ದೇಶಾಭಿಮಾನ

ಅವು ರೋಚಕದಲ್ಲಿಯೆ, ರೋಚಕ ಕ್ಷಣಗಳು. ಎದೆ ಬಡಿತವನ್ನ ಸ್ತಬ್ಧಗೊಳಿಸುವಂತಹ ಕ್ಷಣಗಳು. ತುಟಿ ಪಿಟಕ್ಕೆನ್ನದೆ, ಕುರ್ಚಿಯ ತುದಿಯಲ್ಲಿ ಕಣ್ಣರೆಪ್ಪೆ ಬಡಿಯದೆ ತದೇಕ ಚಿತ್ತದಿಂದ ವೀಕ್ಷಿಸಿದ ಕ್ಷಣಗಳು. ಅವು  ಬೇರೆ ಏನು ಅಲ್ಲಾ, ನಿನ್ನೆಯ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯದ ಉಸಿರು ಬಿಗಿ ಹಿಡಿದು ನೋಡಿದ ಕ್ಷಣಗಳು.

ನಿಜಕ್ಕೂ ಇದು ಅರ್ಹ ಜಯ ಎಂದು ಎದೆ ತಟ್ಟಿ ಹೇಳಬಹುದು. ಇಲ್ಲಿ ಯಾರೊಬ್ಬರ ಪರಿಶ್ರಮವನ್ನು ಪ್ರಶ್ನಿಸುವಂತಿಲ್ಲ. ಇಡೀ ತಂಡವಾಗಿ ಆಡುವುದು ಹೇಗೆ ಎಂಬುದನ್ನು ಭಾರತದ ಆಟಗಾರರು ತಮ್ಮ ಏರಡನೇ ಸರದಿ ಅಂದರೆ ಬೌಲಿಂಗ್ ಮಾಡುವಾಗ ತೋರಿಸಿ ಕೊಟ್ಟರು. ಕೇವಲ  ಒಬ್ಬಿಬ್ಬ ಆಟಗಾರರ ದಿಟ್ಟ ಹೋರಾಟದಿಂದ ಗೆಲುವಿನ ಅಂಚಿಗೆ ತಲುಪುತ್ತಿದ್ದ ಟೀಂ ಇಂಡಿಯಾ For A Change ನಿನ್ನೆ ಮಾತ್ರ ಗೆಲುವಿನ ಬಳಿ ಸುಳಿದದ್ದು ಒಟ್ಟಾಗಿ ಆಡಿದ್ದರಿಂದಲೇ ಎಂಬುದು ಪಂದ್ಯದ ನೋಡಿದ ಯಾರಿಗಾದರ ವೇದ್ಯವಾಗದೆ ಇರದು. ಕೇವಲ 260 ರನ್ಗಳಾ ಎಂದು ಮೂಗು ಮುರಿದು ಕೊಂಡೆ ಭಾರತದ ಬೌಲಿಂಗ್ ನೋಡಲು ಕುಳಿತ ನಮಗೆ ಇಂತಹ ಒಂದು ಅಚ್ಚರಿಯ ಫಲಿತಾಂಶ ದೊರಕಲಿದೆ ಎಂದು ಊಹಿಸಲು ಕಷ್ಟವಾಗಿತ್ತು. ಡಿಡಿ ಚಾನೆಲ್ ನ ಫೊರ್ತ ಅಂಪೈರ್ ನಲ್ಲಿ ಭಾರತ ಇನ್ನು 20-30 ರನ್ನಗಳನ್ನು ಹೆಚ್ಚಿಗೆ ಗಳಿಸಬಹುದಾಗಿತ್ತು. ಆದರೆ ಆ ಕೊರತೆಯೆ ಖಂಡಿತಾ ಮುಳುವಾದರೆ ಆಶ್ವರ್ಯವಿಲ್ಲ ಎಂಬಂತೆ ಮಾತನಾಡಿದಾಗ ನಿಜಕ್ಕೂ ಭಾರತ ಗೆಲ್ಲುತ್ತಾ ಎಂಬ ಅನುಮಾನ ಮೂಡಿದ್ದು ಸುಳ್ಳಲ್ಲ. ಆದರೆ ಯಾವಾಗ ಕಮ್ರಾನ್ ಅಕ್ಮಲ್, ಜಹೀರ್ ಬೌಲಿಂಗ್ ನಲ್ಲಿ ಯುವರಾಜ್ ಕೈಗೆ ಕ್ಯಾಚಿತ್ತನೋ ಆಗ ಸ್ಟೇಡಿಯಂನಲ್ಲಿ ಹಾರಾಡಿದ ತ್ರಿವರ್ಣ ಧ್ವಜಗಳು ಪಂದ್ಯ ಕೈವಶವಾಗುವವರೆಗು ಅವಿರತವಾಗಿ ಹಾರಾಡುತ್ತಲೆ ಇದ್ದವು. ವಿಜಯಲಕ್ಷ್ಮೀ ನಮ್ಮವಳು, ಅವಳನ್ನು ನಿಮ್ಮೊಡನೆ ಕಳಿಸಿ ಕೊಡುವಷ್ಟು ಉದಾರಿಗಳು ನಾವಲ್ಲ ಎಂದು ಟೀಂ ಇಂಡಿಯಾ ತೊರಿಸಿ ಕೊಟ್ಟಿತು.

ನನ್ನ ಹಿಂದಿನ ಲೇಖನದಲ್ಲಿ ನಾನು ಹೇಳಿದ್ದೆ, ಇದು ಕದನವಲ್ಲ, ಕೇವಲ ಕ್ರಿಕೆಟ್ ಪಂದ್ಯ. ನಮ್ಮವರು ಯುದ್ಧ ಮಾಡುವಷ್ಟು ಸದೃಢರಲ್ಲ ಎಂದು. ನಿಜ ನಾನು ಕ್ರಿಕೆಟ್ ನ್ನು ದೇಶ ಉಳಿಸಿ ಕೊಳ್ಳಲು ಹೋರಾಡುವ ಯುದ್ದಕ್ಕೆ ಹೋಲಿಸುವದು ಸರಿಯಲ್ಲ ಎಂಬ ಅಭಿಮತ ಪಟ್ಟಿದ್ದೆ. ಅದಕ್ಕೆ ಈಗಲು ಬದ್ದ ಆಗಿದ್ದೇನೆ. ಆದರೆ ನಮ್ಮ ಆಟಗಾರರು ಹೋರಾಡಿದ ರೀತಿ ಇದೆಯಲ್ಲ ಅದು ಒಬ್ಬ warriorಗೆ ಇರಲೆಬೇಕಾದ fighting Instinct. ಆ ಕಿಚ್ಚು, ಸದೆ ಬಡಿಯಬಲ್ಲೆ ಎಂಬ ಆತ್ಮ ವಿಶ್ವಾಸ, ಇಡೀ ತಂಡವಾಗಿ ಒಗ್ಗಟ್ಟಿನಿಂದ ಮೇಲೆರಗಿದ್ದರ ಫಲ ನಿನ್ನೆಯ ಗೆಲುವು ಎಂದು ಹೇಳಬಹುದು. ಗೆದ್ದಾಗ ಹೊಗಳುವ, ಸೋತಾಗ ತೆಗಳುವದು ಸಾಮಾನ್ಯ. ಆದರೆ ನಾನು ಇಲ್ಲಿ ತೆಗಳುವ ಕೆಲಸ ಮಾಡಿ ಹೊಗಳುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಒಂದು ಅರ್ಹ ಜಯ ಹೇಗೆ ನಮ್ಮ ದೇಶಾಭಿಮಾನವನ್ನ ಬಡೆದೆಬ್ಬಿಸಿತು ಎಂಬುದನ್ನು ಹೇಳಲಷ್ಟೆ ಬಯಸುತ್ತೇನೆ. ಪಂದ್ಯದ ರೋಚಕತೆ ಯಾವ ಹಂತ ತಲುಪಿತ್ತೆಂದರೆ ಇಡೀ ಕ್ರೀಡಾಂಗಣದ ತುಂಬಾ ಬರೀ ಸಾಮಾನ್ಯ ಪ್ರೇಕ್ಷಕರಷ್ಟೇ ನೆರದಿರಲಿಲ್ಲ, ಅಲ್ಲಿ ಎರಡು ರಾಷ್ಟ್ರಗಳ ರಾಜ ತಾಂತ್ರಿಕರಿದ್ದರು. ಖುದ್ದು ಎರಡು ದೇಶಗಳ ಪ್ರಧಾನಿಗಳಿದ್ದರು. ಕಾಂಗ್ರೇಸ್ ನ ಸೂಪರ್ ಪವರ್ ಸೋನಿಯಾ ಮತ್ತು ಪುತ್ರ ರಾಹುಲ್ ಉಪಸ್ಥಿತರಿದ್ದರು. ಅಮೀರ್, ವಿವೇಕ್ ಆದಿಯಾಗಿ ಹಲವು ಸಿನಿಮಾ ತಾರೆಗಳಿದ್ದರು. ದೇಶದ ಹೆಮ್ಮೆಯ ವಾಣಿಜ್ಯೋದ್ಯಮಿ ಮುಖೇಶ್ ಅಂಬಾನಿ ದಂಪತಿ ಸಮೇತರಾಗಿ ಪಂದ್ಯ ವೀಕ್ಷಿಸಿದರು. ರಾಷ್ಟ್ರದ ಸುಮಾರು ಶೇ 80ಕ್ಕಿಂತಲೂ(ಒಂದು ಅಂದಾಜು ಮಾತ್ರ) ಹೆಚ್ಚು ಟಿವಿ ಸೆಟ್ಗಳಲ್ಲಿ ಕಂಡಿದ್ದು ಕೇವಲ ಕ್ರಿಕೆಟ್ ಪಂದ್ಯ ಎಂದರೆ ಉತ್ಪ್ರೇಕ್ಷೆ ಎನಿಸದು. ಅಷ್ಟು ಕುತೂಹಲ ಮೂಡಿಸಿದ್ದಕ್ಕೆ ಕಾರಣ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ನಮ್ಮ ದೇಶ ಸೋಲುಣಬಾರದು ಎಂಬ ಅಪ್ಪಟ ದೇಶ ಭಕ್ತಿ ಮಾತ್ರ.

ಅಪನಿ ಜೀತ್ ಹೋ..ಉನಕಿ ಹಾರ್ ಹಾ!

ಅಪನಿ ಜೀತ್ ಹೋ..ಉನಕಿ ಹಾರ್ ಹಾ!

ಪಂದ್ಯದ ಆರಂಭದಿಂದಲೂ, ಅಂತ್ಯದವರೆಗೆ ಪ್ರತಿ ಭಾರತೀಯನ ಮನಸ್ಸು ಪಿಸುಗುಟ್ಟುತ್ತಿದ್ದು ಗೆಲುವಿನ ಮಂತ್ರವನ್ನೆ. ಶತಕೋಟಿ ಭಾರತೀಯರ ಹಾರೈಕೆ, ಹೋಮ, ಹವನಗಳು, ಪೂಜೆ, ಪುನಸ್ಕಾರಗಳು ಎಲ್ಲವು ಫಲಿಸಿದವು. ಒಂದು ಗೆಲವು ಎಲ್ಲರ ಒಟ್ಟು ಬೇಡಿಕೆಯನ್ನು ಸಾರ್ಥಕಗೊಳಿಸಿತು. ಮೊದಲ ವಿಕೆಟ್ ತೆಗೆದ ಜಾಕ್ ನೆ(ಜಹೀರ್), ಮಿಸ್ಬಾನ  ಕೊನೆಯ ವಿಕೆಟ್ ಕೀಳುವುದರೊಂದಿಗೆ ಭಾರತದ ಬೀದಿ,  ಮನೆ, ಮನನಗಳಲ್ಲಿ 1000 ಸರಣಿಯ ಪಟಾಕಿ ಪಟ,ಪಟನೆ ಹೊಡೆದ ಅನುಭವ. ಹೂಕುಂಡ ಹೊತ್ತಿ ನಕ್ಷತ್ರ ಚಿಮ್ಮಿದ ಸಂಭ್ರಮ. ಆಹಾ! ಆ ಗೆಲುವಿನ ಕ್ಷಣದ ಪುಳಕ ಹೇಳಲಸಾಧ್ಯ. ಅಬ್ಬರಿಸಿ, ಬೊಬ್ಬಿರಿದರೆ ಇಲ್ಲಿ ಹೆದರುವರ್ಯಾರು ಇಲ್ಲಾ ಎಂಬ ಬಬ್ರುವಾಹನ ಚಿತ್ರದ ಸಂಭಾಷಣೆಯಂತೆ ಪಾಕಿಸ್ತಾನದ ಯಾವ ಆರ್ಭಟಕ್ಕು ಮಣಿಯದೆ ಭಾರತೀಯ ಆಟಗಾರರು ಶಿಸ್ತು ಬದ್ಧ ಆಟ ಪ್ರದರ್ಶಿಸಿ ಗೆಲುವಿನ ನಗೆ ಬೀರಿದರು. ಸಚಿನ್ ಆಡಿದರೆ ಇಂಡಿಯಾ ಸೋಲುತ್ತೆ ಎಂಬ ಮಾತು ಸುಳ್ಳಾಯಿತು. ಬೇಕಾಬಿಟ್ಟೆ ಬೌಲ್ ಎಸೆಯುತ್ತಾನೆ ಎಂಬ ನೇಹ್ರಾ ಮೇಲಿನ ಅಪವಾದ ಹುಸಿಯಾಯಿತು. ಲೈನ್ ಕಂಡು ಕೊಳ್ಳಲು ಮುನಾಫ ಹೆಣಗಾಡುತ್ತಿದ್ದಾನೆ ಎಂಬ ವಾದಕ್ಕೆ ಸಾಕ್ಷಿ ಇರಲಿಲ್ಲ. ಬಜ್ಜಿಗೆ ವಿಕೆಟ್ ಬೀಳಲ್ಲ ಎಂದು ಹೇಳುವ ಹಾಗೆ ಆಗಲಿಲ್ಲ. ಹೋಂ ಗ್ರೌಂಡ್ ನಲ್ಲಿ ಜಿರೋಕ್ಕೆ ಔಟಾದರೆನಂತೆ ಬೌಲಿಂಗ್ ನಲ್ಲಿ ಹಿಂದಿರುಗೆ ನೋಡುವ ಪ್ರಶ್ನೆಯೆ ಇಲ್ಲಾ ಎಂಬುದನ್ನು ಯುವಿ ಪ್ರೂವ್ ಮಾಡಿದ. ಅಬ್ಬಾ! ಡಿಸಿಪ್ಲೇನ್ಡ ಗೇಮ್ ಅಂದರೆ ಇದೇ ಅಲ್ಲವೆ. ಇಂತಹ ಆಟವನ್ನೆ ನಾವೆಲ್ಲಾ ಬಯಸಿದ್ದು. ಅದು ನೇರವೇರಿದಂತಾಗಿದೆ. ಗೆದ್ದು ಬಾ ಭಾರತ ಎಂದು ಮತ್ತೊಮ್ಮೆ ಹುರಿದುಂಬಿಸೋಣ. ಯಾಕೆಂದರೆ ಈ ಸಾರಿಯ ಸಾರ್ವಭೌಮತ್ವಕ್ಕೆ ಒಂದೇ ಮೆಟ್ಟಿಲು ಏರಬೇಕಾಗಿದ್ದು. ಅವಕಾಶ ಕೈ ತಪ್ಪುವುದು ಬೇಡ ಅಲ್ಲವೇ! ಆಡು ಇಂಡಿಯಾ ಭಯ ಬಿಟ್ಟು ಛಲ ತೊಟ್ಟು ಕೆಚ್ಚೆದೆಯ ಆಟ ಆಡು…..

Advertisements
 

ಟ್ಯಾಗ್ ಗಳು:

ಇಷ್ಟಕ್ಕು ನಮ್ಮವರೇನು ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದಾರಾ…!!!

ಕ್ರೀಡೆ ದೇಶದ ಅಭಿಮಾನ ಎತ್ತರಕ್ಕೊಯ್ಯ ಬಲ್ಲದು, ಎರಡು ರಾಷ್ಟ್ರಗಳ ಮಧ್ಯ ಮಧುರ ಬಾಂಧವ್ಯಕ್ಕೆ ಭಾಷ್ಯ ಬರೆಯಬಲ್ಲದು. ಅನ್ಯ ರಾಷ್ಟ್ರಗಳು ತನ್ನ ಕಡೆ ತಿರುಗಿ ನೋಡುವಂತೆ ಒಂದು ಚಮತ್ಕಾರ ಮಾಡಬಹುದು. ಒಂದು ಆಟ ಯಾವ, ಯಾವದಕ್ಕೆ ನಾಂದಿ ಹಾಡಬಲ್ಲದು ಎಂದು ಹೇಳುವುದು ಕಷ್ಟ. ಯಾಕೆಂದರೆ ಕ್ರೀಡೆ ಎಂತಹ ಸಮೂಹ ಸನ್ನಿಯನ್ನಾದರು ಹಿಡಿಸಬಲ್ಲದು ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ಕಣ್ಣಾಡಿಸಿದರೆ ನಿಮ್ಮ ಗಮನಕ್ಕು ಬರಬಹುದು. ಇದು ಒಂದು ಆಟಕ್ಕೆ ಇರಬಹುದಾದ ಘನತೆ ಮತ್ತು ಬಲಹೀನತೆ. ಇಷ್ಟಕ್ಕೂ ಈ ಕ್ರಿಕೆಟ್ ಇದೆಯಲ್ಲ ನಮ್ಮ ದೇಶಾಭಿಮಾನದ ಪ್ರತಿಬಿಂಬವಾದಂತೆ ನಮ್ಮನ್ನು ಆವಾಹಿಸಿಕೊಂಡ ರೀತಿ ಇದೆಯಲ್ಲ ಇದು ಬೇರೆ ಯಾವ ಕ್ರೀಡೆಗು ಬಹುಶಃ ಭವಿಷ್ಯದಲ್ಲಿ ದಕ್ಕಲಿಕ್ಕಿಲ್ಲ. ಅಷ್ಟು ಕ್ರಿಕೆಟ್, ದೇಸಿಯ ಕ್ರೀಡೆಗಳನ್ನು ಸೇರಿ ಬೇರೆ ಕ್ರೀಡೆಗಳನ್ನು  ಆಪೋಷನ ತೆಗೆದುಕೊಂಡಿದೆಯೆಂದರೆ ಅತಿಶಯೋಕ್ತಿ ಎನಿಸದು.

ನಾಳೆ ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಸೆಣಸಲು ತಯಾರಿ ನಡೆಸಿವೆ. ಆದರೆ ಇದು ಕೇವಲ ಕ್ರಿಕೆಟ್ಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಆಯಾ ದೇಶಗಳ ಅಭಿಮಾನದ, ಪ್ರತಿಷ್ಠೆಯ ಪ್ರಶ್ನೆ ಅಡಗಿದೆ. ರಾಜತಾಂತ್ರಿಕ ಮಾತುಗಳಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲೆಲ್ಲಿಯು ಭಾರತವೇ ಗೆಲ್ಲಬೇಕೆಂದು ಪೂಜೆ, ಹೋಮ-ಹವನಗಳು ನಡೆಯುತ್ತಿವೆ. ಇಂದು ಖುದ್ದು ನಮ್ಮ ಮಾಜಿ ಪ್ರದಾನಿ ದೇವೆಗೌಡ ಅವರು ಗೆಲುವಿಗಾಗಿ ನಡೆಸಿದ ಹೋಮದಲ್ಲಿ ಪಾಲ್ಗೊಂಡಿದ್ದರು. ಯಾಕೆ ಹೀಗೆ?

ಗಡಿಯಲ್ಲಿ ಕಣ್ಣರೆಪ್ಪೆಯು ಬಡಿಯದೆ ಕೈಯಲ್ಲು ತುಪಾಕಿ ಹಿಡಿದು ಒಳಗೆ ನುಸುಳುವ ಕಿರಾತಕರನ್ನು ಸದೆಬಡಿಯಲು ತಯಾರಾದ ನಮ್ಮ ಯೋಧರ ಯೋಗಕ್ಷೇಮ, ಅವರ ಗೆಲುವು ನಮ್ಮ priority ಆಗ ಬೇಕಿತ್ತಲ್ಲವೇ? ಆದರೆ ಕೇವಲ 11 ಜನ ಕ್ರೀಡಾಳು ಪಾಕಿಸ್ತಾನದ ಮೇಲೆ ಕ್ರಿಕೆಟ್ ಆಡುತ್ತಿದ್ದಾರೆ ಎಂದರೆ ನಾವ್ಯಾಕೆ ಪಾಕ್ ಮೇಲೆ ಯುದ್ದ ಸಾರಿದಂತೆ ಆಡುತ್ತಿದ್ದೇವೆ. ಇಷ್ಟಕ್ಕು ಇವರು ನಮ್ಮ ದೇಶಾಭಿಮಾನಕ್ಕೆ ಆದರ್ಶರಾದವರಾ! ಆದರ್ಶರಾಗಬೇಕಾದವರ ಕಣ್ಣಿನಲ್ಲಿ ಕೇವಲ ದೇಶಾಭಿಮಾನ ಇಣುಕುತ್ತದೆ. ಜಾಹೀರಾತಿನ ಕಾಂಟ್ರಾಕ್ಟಗಳಲ್ಲ ಎಂಬುದು ನೆನಪಿರಲಿ.

ಇದು ಕ್ರಿಕೆಟ್ ಪಂದ್ಯ..ಕದನವಲ್ಲ...(ಚಿತ್ರ ಕೃಪೆ:ಗೂಗಲ್)

ಇದು ಕ್ರಿಕೆಟ್ ಪಂದ್ಯ..ಕದನವಲ್ಲ...(ಚಿತ್ರ ಕೃಪೆ:ಗೂಗಲ್)

ಖಂಡಿತಾ ಇದು ಕೇವಲ ಕ್ರಿಕೆಟ್ ಪಂದ್ಯ ಎಂಬುದನ್ನು ನಾವು ಮರೆಯಬಾರದು. ನಿಜ ಗೆದ್ದರೆ ಭಾರತ ವಿಶ್ವಕಪ್ ನ ಸನಿಹಕ್ಕೆ ಸುಳಿಯುತ್ತದೆ. ನಮ್ಮ ಪಕ್ಕದಲ್ಲೇ ಇರುವ ಮತ್ತೊಂದು ಅಂಗೈ ಅಗಲದ ರಾಷ್ಟ್ರ ಶ್ರೀಲಂಕಾವನ್ನು ಎದುರಿಸುತ್ತದೆ. ಅಷ್ಟಕ್ಕೆ ಗೆದ್ದು ಬಾ ಭಾರತೀಯ ಎಂದು ಹೇಳೋಣ. ಆದರೆ ಇದು ನಮ್ಮ ಮನದ ಮೂಲೆಯಲ್ಲಿ ಪಾಕಿಸ್ತಾನದ ಬಗೆಗೆ ಅಡಗಿದ ಪ್ರತಿಕಾರಕ್ಕೆ ವೇದಿಕೆಯಾಗುವುದು ಬೇಡ. ಆಗ ನಿಜವಾದ ಕ್ರೀಡಾ ಮನೋಭಾವ ಸತ್ತು ಹೋಗಿ ಕೇವಲ ಕಾಳಗ ಕಣವಾಗಿ ಗೋಚರಿಸುತ್ತದೆ. ನಿಜ ನಾಳೆ ನಾವು ಗೆಲ್ಲಬೇಕು.ಪಂದ್ಯದ ಪ್ರತಿ ರೋಚಕ ಕ್ಷಣಗಳನ್ನು ಬಾಯಿ ಚಪ್ಪರಿಸಿ ಆಸ್ವಾದಿಸಬೇಕು. ನಮ್ಮವರು ತಿರುಗೇಟು ನೀಡಿದಾಗ ಕುಣಿದು ಕುಪ್ಪಳಿಸಬೇಕು. ನಾವೇಕೆ ರಣಹೇಡಿ ಪಾಕ್ ನಮ್ಮ ಮೇಲೆ ಯುದ್ಧಕ್ಕೆ ಬಂದಿದೆ ಎಂದುಕೊಳ್ಳುವುದು. ಅಷ್ಟಕ್ಕು ಆ ಕಸುವು ಅದರ ಹತ್ತಿರ ಎಲ್ಲಿದೆ. ಕಣ್ಣಿಗೆ ಮಣ್ಣೆರಚಿ ದೇಶದೊಳಗೆ ಭಯೋತ್ಪಾದಕರನ್ನು ನುಸುಳಲು ಬಿಡುವ ರಾಷ್ಟ್ರದ ಜೊತೆಗಿನ ಆಟವನ್ನ ನಾವು ಸಮರದಂತೆ ಕಾಣುವ ಅಗತ್ಯವಾದರು ಏನಿದೆ. ಕಾರಣ ಸೋಲು, ಗೆಲುವು ಆಟದಲ್ಲಿ ಸಾಮಾನ್ಯ. ಪಂದ್ಯದ ಫಲಿತಾಂಶ ನಮ್ಮ ದೇಶಾಭಿಮಾನದ ಛಲವನ್ನ ಅಲುಗಾಡಿಸುವದು ಬೇಕಿಲ್ಲ ಅಲ್ಲವೇ!

ಒಂದು ಸಾರಿ ಈ ಎರಡು ರಾಷ್ಟ್ರಗಳ ಮಧ್ಯದ ಪಂದ್ಯಗಳ ಬಲಾಬಲವನ್ನ ಗಮನಿಸೋಣ. ವಿಶ್ವಕಪ್ನಲ್ಲಿ ಎರಡು ರಾಷ್ಟ್ರಗಳು ನಾಲ್ಕೂ ಬಾರಿ ಮುಖಾಮುಖಿಯಾಗಿವೆ. ನಾಲ್ಕೂ ಸಲ ಪಾಕ್ ಗೆ ಮುಖಭಂಗವಾಗಿದೆ. ಎಲ್ಲದರಲ್ಲು ಭಾರತದ್ದೆ ಮೇಲುಗೈ. ಒಟ್ಟಾರೆಯಾಗಿ ಎಷ್ಟು ಪಂದ್ಯಗಳಲ್ಲು ಯಾರ್ಯಾರು ಎಷ್ಟು ಜಯ ಸಾಧಿಸಿದ್ದಾರೆ ಎಂಬ ಪಟ್ಟಿ ಇಂತಿದೆ..

ಬಲಾಬಲ ಇಂತಿದೆ....

ಬಲಾಬಲ ಇಂತಿದೆ....

ನಾವು ಈಗ ಕೇವಲ ನಾಳೆ ಭಾರತದ ಜೈತ್ರಯಾತ್ರೆಯನ್ನು ಸವಿಯಲು ಸನ್ನದ್ಧರಾಗೋಣ. ಅದನ್ನು ಬಿಟ್ಟು ಯುದ್ಧಕ್ಕೆ ಎದ್ದು ಹೋದವರಂತೆ ಆರ್ಭಟಿಸುವುದು ಬೇಡ.ಈಗಾಗಲೇ ಬಾಯಿಗ ಬಂದತೆ ಹೇಳಿಕೆಗಳನ್ನು ಕೊಡುತ್ತಾ ಪಾಕ್ ಆಟಗಾರರು Pressure tactics  ಪ್ರಯೋಗಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಮ್ಮವರ ಆತ್ಮವಿಶ್ವಾಸ ಕುಂದುವುದು ಬೇಡ. ಯಾವ ಯುದ್ದವನ್ನು ಗೆದ್ದು ಬರುವಷ್ಟು ಸದೃಢವಾಗಿಲ್ಲ ಟೀಂ ಇಂಡಿಯಾ. ಅದು ಕೇವಲ ಕ್ರಿಕೆಟ್ ಗೆದ್ದು ಬರಲಿ ಸಾಕು. ಅಷ್ಟೇ ಕಟ್ಟ ಕಡೆಯ ಬಾರತೀಯನ ಆಶಯ ಕೂಡಾ.

 

ಟ್ಯಾಗ್ ಗಳು:

ಇದ್ದು ಇಲ್ಲದ ಸಂಬಂಧಗಳು..ಯಾರಿಗೆ ಯಾರೋ ಪುರಂದರ ವಿಠಲ…

“ವಯಸ್ಸಿನಲ್ಲಿ ಕನಸುಗಳು ಬೆನ್ನು ಹತ್ತುತ್ತವೆ, ಆದರೆ ವಯಸ್ಸಾದ ಮೇಲೆ ಆಸೆಗಳು ಬೆನ್ನು ಹತ್ತುತ್ತವೆ. ನಿಮಗೆ ಸಾಕೆನಿಸಿರಬಹುದು, ಆದರೆ ನಮ್ಮದಿನ್ನು ಮುಗಿದಿಲ್ಲವಲ್ಲ. ದಿನ ರಾತ್ರಿ  ಸಾಕಿನ್ನು ಅಂತ ಮಲಗ್ತೀವಿ, ಆದರೆ ಏನು ಮಾಡ್ತೀಯಾ, ಬೆಳಕಾಗುತ್ತೆ, ಎಚ್ಚರವಾಗುತ್ತೆ, ಹಸಿವು, ನೀರಡಿಕೆ ಆಗುತ್ತೆ. ಅವಶ್ಯಕತೆ ಮೀರಿ ಉಳಿದುಕೊಂಡೆವೇನೋ….” ಇದು ಸೇತುರಾಂ ಅವರ (ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಅವರ ಕ್ಷಮೆ ಕೇಳುತ್ತಾ) ನಿರ್ದೇಶನದಲ್ಲಿ ಮೂಡಿಬರಲು ಸಿದ್ಧವಾಗಿರುವ ಹೊಸ ಧಾರಾವಾಹಿಯ ಸಾಲುಗಳು. ಹಳ್ಳಿಯಲ್ಲಿ ಗಂಡನೊಂದಿಗೆ ದಿನ ದೂಡುತ್ತಿರುವ ಆತನ ಹೆಂಡತಿ ಹತಾಶಳಾಗಿ ಪಟ್ಟಣದಲ್ಲಿರುವ ಮಗನಿಗೆ ಫೋನ್ ಮಾಡಿ ಬಂದು ಮುಖ ತೋರಿಸಿ ಹೋಗು ಎಂದು ಕೇಳಿಕೊಳ್ಳುವ ಪರಿ.

ಇದು ಭಾರತ. ಇಲ್ಲಿ ಕೌಟುಂಬಿಕ ಮೌಲ್ಯಗಳಿವೆ.ಪ್ರತಿ ಬಾಂಧವ್ಯಕ್ಕು ಗಟ್ಟಿ ನೆಲಗಟ್ಟು ಹಾಕಲಾಗುತ್ತದೆ. ತಂದೆ ತಾಯಿಗಳಲ್ಲಿ ಸಾಕ್ಷಾತ್ ದೇವರನ್ನೆ ಕಾಣಲಾಗುತ್ತದೆ. ಅದಕ್ಕೆ ಮಾತೃ ದೇವೋ ಭವ..ಪಿತೃ ದೇವೋ ಭವ…ಎಂಬುದು ನಮ್ಮ ಪುರಾತನ ಗ್ರಂಥಗಳಲ್ಲಿಯೆ ರಚಿತವಾಗಿದೆ. ನಮ್ಮದು ಮಹಾನ್ ಸುಸಂಸ್ಕೃತ ರಾಷ್ಟ್ರ. ಏನೇ ಹೇಳಿ ಮೇರಾ ಭಾರತ್ ಮಹಾನ್…

ಈ ಪದಗಳನ್ನು ಕೇಳಿ..ಕೇಳಿ…ಸವೆದು ಹೋಗಿದ್ದಷ್ಟೇ ಅಲ್ಲ, ರೇಸಿಗೆ ಬಂದು ಹೋಗಿದೆ. ಆದರೆ ಇದನ್ನು ಬೇಸರದಿಂದ ಹೇಳುತ್ತಿಲ್ಲ. ತುಂಬಾ ದುಃಖ ಮತ್ತು ಹತಾಶೆಯೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಅತಿಶಯೋಕ್ತಿ ಎಂಬುದು ಏನು ಇಲ್ಲ. ಇಡೀ ಸಮಾಜವೇ ಬೆತ್ತಲೆಯಾಗಿ ನಿಂತಿರುವಾಗ ಮಾನ ಮುಚ್ಚುವ ಪ್ರಯತ್ನವಾದರು ಯಾಕೆ…!!!

ಮಕ್ಕಳೆ, ನೀವೆ ನಮ್ಮ ಬಾಳಿನ ಊರುಗೋಲು!

ಮಕ್ಕಳೆ, ನೀವೆ ನಮ್ಮ ಬಾಳಿನ ಊರುಗೋಲು!

ಲೀಲಕ್ಕ ಹೇಳುತ್ತಿದ್ದಳು ನಮಗೆ ಪರಿಚಿತರೊಬ್ಬರ ಮನೆಯಲ್ಲಿ ಹೆಂಡತಿಯನ್ನು ಕಳೆದುಕೊಂಡ ವಯಸ್ಸಾದ ವ್ಯಕ್ತಿಯೊಬ್ಬರು ಒಂಟಿಯಾಗಿ ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾ ಕೆಳ ಮನೆಯಲ್ಲಿ ವಾಸವಾಗಿದ್ದರೆ, ಅದೇ ಮನೆಯ ಮೇಲಿನ ಮಹಡಿಯಲ್ಲಿ ಅವರ ರಕ್ತವನ್ನು ಹಂಚಿಕೊಂಡು ಹುಟ್ಟಿದ ಸುಪುತ್ರ ತನ್ನ ಪತ್ನಿಯೊಂದಿಗೆ ತನಗು ಅವರಿಗು ಸಂಬಂಧವೇ ಇಲ್ಲ ಎಂಬಂತೆ ಬದುಕುತ್ತಿದ್ದಾನಂತೆ. ಇದು ಆಧುನಿಕ ಸಮಾಜದ ಪ್ರತಿಬಿಂಬ. ನಮ್ಮ ಮೌಲ್ಯಗಳು ಅದೆಷ್ಟು ಅಧಃಪತನಕ್ಕೆ ಇಳಿದಿದ್ದಾವೆ ಎಂಬುದಕ್ಕೆ ಸರಳ ಉದಾಹರಣೆ. ಇದಕ್ಕು ಹೇಯವಾದ ಪ್ರಕರಣಗಳಿವೆ. ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವ, ನಿಟ್ಟುಸಿರು ಬಿಡುವ ಯಾವ ದುರ್ದು ಇಲ್ಲ.ನಾನಿಲ್ಲಿ ಹಂಚಿಕೊಳ್ಳ ಹೊರಟಿರುವುದು ಮೌಲ್ಯಗಳ ಕುರಿತಾದದ್ದಲ್ಲ. ಸವೆದು ಹೋಗುತ್ತಿರುವ ರಕ್ತ ಸಂಬಂಧಗಳ ಬಗ್ಗೆ. ಇದಕ್ಕಿಂತ ದುರಂತ ಮತ್ತೊಂದಿರಲಾರದು ಅಲ್ಲವೇ.

ನಿಮಗೆಲ್ಲ ಖಂಡಿತಾ ನೆನಪಿದೆ ಅಂದುಕೊಳ್ಳುತ್ತೇನೆ. ಹೇಗೆ ನಮ್ಮ ಕುಟುಂಬ ವ್ಯವಸ್ಥೆ ಗಟ್ಟಿಯಾಗಿ ಬೇರು ಬಿಟ್ಟಿತ್ತು. ಮೊದ ಮೊದಲು ಊರಿಗೆ ಊರೇ ಕುಟುಂಬದಂತೆ ಬದುಕುತ್ತಿದ್ದವು. ನಂತರ ಅದು ಒಂದು ಮನೆತನದ ಮಟ್ಟಿಗೆ ಇಳಿಯಿತು. ಅಣ್ಣ, ತಮ್ಮಂದಿರು ಒಟ್ಟಿಗೆ ಬಾಳಲಾರಂಭಿಸಿದರು. ನಮ್ಮ ಸಮಾಜ ಶಾಸ್ತ್ರಜ್ಞರು ಅದನ್ನು ಅವಿಭಕ್ತ ಕುಟುಂಬ ಎಂದು ಕರೆದರು. ಬೆಳದಿರದ ಪ್ರಪಂಚ, ಚೆನ್ನಾಗಿ ಬೆಳೆಯುತ್ತಿದ್ದ ಹೊಲ, ತೋಟ ಮನೆಯಲ್ಲಿ ಕೆಲವರನ್ನು ಸೋಮಾರಿಗಳಾಗಿ ಪರಿವರ್ತಿಸಿದರು, “ಕುಲಗೌರವ” ಅದನ್ನೆಲ್ಲಾ ಹೊಟ್ಟೆಯೊಳಗೆ ಮುಚ್ಚಿಟ್ಟು ಕೊಳ್ಳುತ್ತಿತ್ತು. ಯಾವುದೇ ಕಾರಣಕ್ಕು “ಮನೆಯೊಂದು ಮೂರು ಬಾಗಿಲು” ಆಗಲು ಬಿಡುತ್ತಿರಲಿಲ್ಲ. ಕುಟುಂಬದ ಹಿರಿಯರು ಯಾರ “ಬದುಕು” ಎಂದಿಗೂ “ಗಾಳಿಪಟ”ವಾಗದಂತೆ ನೋಡಿಕೊಳ್ಳುವರು. ಅದರೆ ಬೇರುಗಳಾದರು ಎಷ್ಟು ದಿನ ಅಂತ ಮರವನ್ನ ಗಟ್ಟಿಯಾಗಿ ಹಿಡಿದಾವು. ಅವು ಮುಕ್ಕಾದ ಮೇಲೆ ಬುಡ ಸಮೇತ ಗಿಡ ನೆಲಕ್ಕುರುಳಲೆ ಬೇಕು ಅಲ್ಲವೆ! ಅದೇ ಆಗಿದ್ದು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದವು. ಎಲ್ಲ ಮಕ್ಕಳು ಬೇರೆ, ಬೇರೆ ಮನೆಗಳಲ್ಲಿ ವಾಸಿಸಲಾರಂಬಿಸಿದರು. ಅದು ಆಧುನೀಕರಣಕ್ಕೆ ನಾಂದಿ, ಜಾಗತೀಕರಣ ಹಾಕಿದ ಕುಣಿಕೆ ಎಂದು ಆಗ ತಿಳಿದಿರಲಿಲ್ಲ. ಅಪ್ಪ-ಅಮ್ಮ ಸರದಿಯಂತೆ ಒಬ್ಬೊಬ್ಬರ ಮನೆಯಲ್ಲಿರಲಾರಂಭಿಸಿದರು. ಆದರೆ ಇಂದಿನ ಕುಟುಂಬ ವ್ಯವಸ್ಥೆಗೆ ಅದ್ಯಾವ ನಾಮಕರಣ ಮಾಡಬೇಕೋ ಭಗವಂತನೇ ಹೇಳಬೇಕು. ಮಕ್ಕಳು ಸ್ವತಂತ್ರರಾದರು, ವಯಸ್ಸಾದ ತಂದೆ,ತಾಯಿ ಅತಂತ್ರರಾದರು.

ಯಾಕೆ ಬದುಕು ಯಾಂತ್ರಿಕೃತವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ದೊರಕಲಾರದು.ಏನೇ ಹೇಳಿದರು ಕೂಡಾ ಅದು ಕೇವಲ ಸಮರ್ಥನೆಯ ಪ್ರತಿರೂಪದಂತಿರುತ್ತದೆ ಅಷ್ಟೇ. ಯಾಕೆ ವಯಸ್ಸಾದ ತಂದೆ ತಾಯಿಗಳು ನಮ್ಮ ಜನಾಂಗಕ್ಕೆ Extra burden ಎಂದೆನಿಸುತ್ತಿದ್ದಾರೆ ಅರ್ಥವಾಗದು. ಬದುಕಿನುದ್ದಕ್ಕು ಮಕ್ಕಳ ಹಿತಕ್ಕಾಗಿಯೆ ಪರಿತಪಿಸುವ ಅಪ್ಪ, ಅಮ್ಮಂದಿರು ಒಂದು ಹಂತದಲ್ಲಿ ಅವರ ಆಸರೆಗೆ ಹಪಹಪಿಸಬೇಕಾಗಿ ಬರುವುದು ಹೃದಯ ಹಿಂಡಿದ ಅನುಭವವಲ್ಲವೆ. ಎಲ್ಲರಿಗೂ ತಮ್ಮ, ತಮ್ಮ ಬದುಕೆ ಪ್ರಾಮುಖ್ಯ ಎಂಬುದಾದರೆ ಇಡೀ ಬದುಕನ್ನೆ ನಮಗಾಗಿ ತೇಯ್ದ ಅಪ್ಪ, ಅಮ್ಮಂದಿರು ಅನಾದರಕ್ಕೆ ಇಡಾಗಬೇಕೆ? ಬದುಕಿನ ದುರಂತವೇ ಇದಲ್ಲವೆ! ಇನ್ನೂ ಅಚ್ಚರಿಯ ವಿಷಯವೆಂದರೆ ಇಂದು ಎಷ್ಟೋ ಮಕ್ಕಳು ಹೆತ್ತವರನ್ನು ತಾವೇ ಕೈಹಿಡಿದು ವೃದ್ಧಾಶ್ರಮದವರೆಗು ಬಿಟ್ಟು ಬರುವ ಔದಾರ್ಯ ತೋರಿಸುತ್ತಾರೆ. ಇದು ಹೃದಯ ಹೀನತೆ, ನೈತಿಕ ದಾರಿದ್ರ್ಯ ಎಂದಷ್ಟೆ ಹೇಳಿ ಕೈ ತೊಳೆದುಕೊಳ್ಳುಲು ಸಾಧ್ಯವೇ!

ಜೊತೆಯಲ್ಲಿದ್ದರು ಕಣ್ಣಿತ್ತಿ ನೋಡದ ಮಕ್ಕಳು ಒಂದು ರೀತಿಯಾದರೆ, ತಂದೆ ತಾಯಿಯನ್ನು ಒಂಟಿಯಾಗಿ ಬಿಟ್ಟು ತಮ್ಮ ಭವಿಷ್ಯ ಅರಿಸಿ ಪಟ್ಟಣಕ್ಕೊ, ವಿದೇಶಕ್ಕೊ ಹಾರಿ ಹೋಗುವ ವರ್ಗ ಇನ್ನೊಂದು ಕಡೆ. ಕೊನೆಯುಸಿರಿರುವವರೆಗು ದಕ್ಕದ ಮಕ್ಕಳಿಗಾಗಿ ಬಿಕ್ಕಳಿಸುತ್ತಾ ಕಾಲ ಕಳೆಯುವುದೊಂದೆ ಆ ಮುದಿ ಜೀವಗಳಿಗೆ ಒದಗಿ ಬರುವ ದೌರ್ಭಾಗ್ಯ. ಜೀವನ ರೂಪಿಸಿಕೊಳ್ಳುವ ಭರದಲ್ಲಿ, ಜೀವ ಕೊಟ್ಟವರನ್ನೆ ಮರೆತು ಮುಂದೆನಡೆಯುವುದು ತೀರಾ ಸರ್ವೇ ಸಾಮಾನ್ಯ ವಿಷಯವಾಗಿದೆ. ಕಳೆದು ಹೊದ ಬದುಕು ಮತ್ತೆ ಮರಳಿ ಪಡೆಯುವದು ಹೇಗೆ ಅಸಾಧ್ಯವೋ, ಹಾಗೇ ಕಾಲ ಗರ್ಭದಲಿ ಮಿಂಚಿ ಮರೆಯಾಗಿ ಹೋಗುವ ಅಪ್ಪ ಅಮ್ಮ ಕೂಡಾ. ಪುಟ್ಟ ಬೆರಳು ಹಿಡಿದು ನಡೆಯಲು ಕಲಿಸಿದ ಅವರ ಮಾಗಿದ ಕೈ ಹಿಡಿದು ಕಾಳಜಿಯಿಂದ ಕಾಣುವುದು ನಮ್ಮ ಬದುಕಿನ ಒಂದು ಭಾಗವಾಗಬೇಕಲ್ಲವೆ….

 

ಟ್ಯಾಗ್ ಗಳು:

ಹೊರಟದ್ದೆಲ್ಲಿಗೆಂದು ತಿಳಿಯದು..ಆದರು ಪ್ರಯಾಣ ಜಾರಿಯಲ್ಲಿದೆ…

ಎಂಥಾ ವಿಚಿತ್ರ! ಹಾಗಂತ ಅನ್ನಿಸದೆ ಇರದು.ನಮ್ಮ ಪ್ರತಿ ಪ್ರಯಾಣಕ್ಕು ಒಂದು ದಡ ಇದ್ದೇ ಇರುತ್ತದೆ. ಇಂದಿನ ಬದುಕು ಎಷ್ಟು ಸ್ಕೆಡ್ಯೂಲ್ಡ ಆಗಿದೆ ಎಂದರೆ ನಾವು ಯಾವುದನ್ನು ಯೋಚಿಸದೆ ಮನೆಯ ಹೊಸ್ತಿಲು ಕೂಡಾ ದಾಟುವುದಿಲ್ಲ. ರಾತ್ರಿ ಹಾಸಿಗೆಗೆ ಮೈ ಚೆಲ್ಲುವವರೆಗು ಏನೆಲ್ಲಾ ಮಾಡಬೇಕೆಂದು ಟೈಮ್ ಟೇಬಲ್ ಸಿದ್ಧ ಮಾಡಿಕೊಂಡೆ ಎಲ್ಲದಕ್ಕು ಅಣಿಯಾಗುತ್ತೇವೆ. ಖ್ಯಾತ ಪತ್ರಕರ್ತ ಮತ್ತು ಬರಹಗಾರ ರವಿ ಬೆಳಗೆರೆಯವರು ಒಬ್ಬ ಇಂಗ್ಲೀಷ್ ಲೇಖಕಿಯ ಕೆಲವು ಅಭಿಪ್ರಾಯಗಳನ್ನು ಕೋಟ್ ಮಾಡಿದ್ರು. ಆಕೆ ಹೇಳುವಂತೆ ಮೈಥುನಕ್ಕು ವೇಳಾಪಟ್ಟಿ ತಯಾರು ಮಾಡಿಕೊಂಡು ಅದೇ ಸಮಯಕ್ಕೆ ಗಂಡ ಹೆಂಡತಿ ಸೇರಬೇಕಂತೆ. ಇಂತಿಪ್ಪ ಕಾಲದೋಳ್ ನಾವಿರುವಾಗ ಗೊತ್ತು ಗುರಿಯಿಲ್ಲದ ಜೀವನ ಶೈಲಿ ಎಷ್ಟು ಬೇಜವಾಬ್ದಾರಿಯ ಪರಮಾವಧಿ ಎಂದೆನಿಸದೆ.

ಆದರೆ ದಯವಿಟ್ಟು ಕ್ಷಮಿಸಿ. ನಾನಿಲ್ಲಿ ಹೇಳ ಹೊರಟಿರುವುದು ಅನ್ ಪ್ಲಾನ್ಡ ನಿತ್ಯ ಜೀವನದ ವಿವರಗಳನ್ನಲ್ಲ. ಇದು ಕೊಂಚ ಯೋಚನೆಯ ಅತಿರೇಕ ಎಂಬ ಭಾವ ಮೂಡಿದರು ನನಗೆ ತುಂಬಾ ಗಂಭೀರ ಮತ್ತು ಸ್ಪಟಿಕದಷ್ಟೇ ಸತ್ಯ ಎಂಬ ನಂಬಿಕೆ. ಅದು ಹುಟ್ಟಿನಿಂದ ಆರಂಭವಾಗಿ ಸಾವಿನಲ್ಲಿ ಅಂತ್ಯವಾಗುವ ಈ ಶರೀರದ ಹಣೆಬರಹದ್ದು.

ಬದುಕು ಬಂದಂತೆ ಸ್ವೀಕರಿಸಬೇಕು ಎಂಬ ಮಾತು ಫಿಲಾಸಫಿಕಲ್ ಆಗಿ ಕಂಡರು, ಅದೇ ಖಚಿತ. ನಾಳೆಯ ಅನಿರೀಕ್ಷಿತಗಳು ನಿನ್ನೆಯ ಗತಕಾಲದ ಪುಟಗಳಲ್ಲಿ ದಾಖಲಾಗಿರಲಿಲ್ಲ ಎಂಬುದು ನಂಬಲೆ ಬೇಕಲ್ಲವೆ. ಲಾರಿ ಏರಿ ಮುಂಬೈಗೆ ಹೋದ ಅಂಬಾನಿ ವಿಶ್ವವೇ ನಿಬ್ಬೆರಗಾಗುವಂತೆ ಬೆಳೆದು ನಿಂತದ್ದು ಶುದ್ಧ ಪರಿಶ್ರಮದಿಂದಲೇ ಎಂಬುದು ಎಷ್ಟು ನಿಜವೋ, ಅಷ್ಟೇ ನಿಜ ಅವರು ಆ ಎತ್ತರಕ್ಕೆ ಬೆಳೆದು ನಿಲ್ಲಬಹುದಾ ಎಂದು ಊಹಿಸಲು ಅಸಾಧ್ಯವಾದದ್ದು. ಈ ರೀತಿಯ ಪಟ್ಟಿ ಮಾಡುತ್ತಾ ಹೋದರೆ ಇಂತಹ ಸಾಧ್ಯತೆಗಳು ಕಾಲಿಗೆ ಸಾಕಷ್ಟು ತೊಡರುತ್ತವೆ. ಆದರೆ ವಿಷಯ ಅದಲ್ಲ. ನಾವು ನಾಳೆಗೆ ಏನು ಆಗುತ್ತೇವೆ ಎಂಬ ಸಣ್ಣ ಸುಳಿವು ಸಿಗದಿದ್ದರು ಕೂಡಾ ಅದ್ಯಾವ ಭರವಸೆ ನಮ್ಮನ್ನ ಹುರಿದುಂಬಿಸಿ, ಬಡಿದೆಬ್ಬಿಸಿ ಮುಂದಕ್ಕೆ ತಳ್ಳುತ್ತದೆ ಎಂಬುದು ನನ್ನಲ್ಲಿ ಕೌತುಕ ಮೂಡಿಸುತ್ತದೆ. ಗುರಿಯಿಲ್ಲದ ಈ ಜೀವನ ಶೈಲಿಯಲ್ಲಿ ನಾವು ಅದೆಷ್ಟು ಆತ್ಮ ವಿಶ್ವಾಸದಿಂದ ಬದುಕುತ್ತೇವೆ ಅಲ್ಲವೇ!!! ಮಹಾಯುದ್ದಕ್ಕೆ ಮೈಯೊಡ್ಡಿ ನಿಂತು ಛಿದ್ರಗೊಂಡ ಜಪಾನಿಗೆ ಹಾಗೆ ತಲೆಯೆತ್ತಿ ನಿಲ್ಲಬಲ್ಲೆ ಎಂಬ ನಿರೀಕ್ಷೆ ಇದ್ದಿರಬಹುದು, ಆದರೆ ಮತ್ತೆ ಸುನಾಮಿ ಅದರ ಬುಡಕ್ಕೆ ಪೆಟ್ಟುಕೊಡುತ್ತೆ ಎಂದು ಅಂದುಕೊಂಡಿರಲಿಕ್ಕೆ ಸಾಧ್ಯವೇ?? ಖಂಡಿತ ಮತ್ತೆ ಅದು ತನ್ನ ಬದುಕು ಕಟ್ಟಿ ಕೊಳ್ಳಬಹುದು ಆದರೆ ನಡೆದ ಅನಿರೀಕ್ಷಿತಕ್ಕೆ ಏನು ಹೇಳಲು ಸಾಧ್ಯ. ಅದೇ ನನ್ನ ಪ್ರಶ್ನೆ? ನಮಗೆ ಯಾವ ಸೂಚನೆಗಳು ಇಲ್ಲದೆ ಹೇಗೆ ಇನ್ನೂ ಹತ್ತು ವರ್ಷ, ಇಪ್ಪತ್ತು, ಮೂವತ್ತು, ನಲವತ್ತು ಎಂದು ಬದುಕಲು ಹಪಿ, ಹಪಿಸುತ್ತೇವೆ.

ಕೊನೆಗಾಣದ ಪಯಣ (ಕೃಪೆ: ಗೂಗಲ್)

ಕೊನೆಗಾಣದ ಪಯಣ (ಕೃಪೆ: ಗೂಗಲ್)

ನೀವು ಹೇಳಬಹುದು. ಒಂದು ಅಚಲ ವಿಶ್ವಾಸ ಅಲ್ಲಿಯವರೆಗು ಸಲಹುತ್ತೆ, ಸಣ್ಣ ಆಸೆ ಕೈ ಹಿಡಿದು ನಡೆಸುತ್ತೆ. ಗಟ್ಟಿ ನಂಬಿಕೆ ಮುನ್ನುಗ್ಗಿಸುತ್ತೆ ಎಂದು. ಆದರೆ ಗೆಳೆಯ ಕಾಲ ಕಾಲಕ್ಕೆ ನಮ್ಮ ಆಸೆಗಳು ಬದಲಾಗುತ್ತವೆ. ಡಾಕ್ಟರ್ ಆಗಲು ಹೋದವನು, ಇಂಜಿನೀಯರ್ ಆಗುತ್ತಾನೆ. ಟೀಚರ್ ಆಗಬೇಕೆಂದವನು ಕ್ಲರ್ಕ ಆಗುತ್ತಾನೆ. ಐಎಎಸ್ ಅಂದುಕೊಂಡವನಿಗೆ ಐಪಿಎಸ್ ದಕ್ಕುತ್ತೆ. ಆಗ ನಮ್ಮ ನಿರೀಕ್ಷೆ ತಲೆಕೆಳಗಾದಂತೆ ಅಲ್ಲವೇ. ಹಾಗೆ ಅಂದುಕೊಂಡಂತೆ ಆದೆವು ಅಂದು ಕೊಳ್ಳೋಣ ಆದರೆ ಅಲ್ಲಿಗೆ ಮುಗಿಯಿತೆ. ಬದುಕಿನುದ್ದಕ್ಕು ಪ್ಲಾನ್ ಮಾಡಿ ಹಾಗೆ ಎಲ್ಲವನ್ನು ದಕ್ಕಿಸಿ ಕೊಳ್ಳುತ್ತಾ ಹೋಗಲು ಸಾಧ್ಯವೇ? ಅದು ನನ್ನ ಮೂಲ ಪ್ರಶ್ನೆ.

ಇದರ ಉದ್ದೇಶ ಇಷ್ಟೇ. ನಾವು ನಮ್ಮ ಮನದ ಗುರಿಗಳನ್ನು ಸಾಧಿಸಿ ಮುನ್ನುಗ್ಗಬಹುದು. ಆದರೆ ಎಲ್ಲವು ಹಾಗೆ ನಡೆಯುವದಿಲ್ಲ. ಕೇವಲ  ಅಂದಾಜಿನ ಮೇಲಷ್ಟೆ ಬದುಕು ನಡೆಯುತ್ತಿರುವುದು. ಮಿಲಿಯನರ್ ಗಳು ಲಾಭ ಬರುತ್ತೆ ಎಂಬ ಒಂದು ಅಂದಾಜು ಲೆಕ್ಕಾಚಾರ ಹಾಕಿಕೊಂಡಷ್ಟೆ ಬಂಡವಾಳ ಹೂಡಲು ಸಾಧ್ಯ. ಲಾಭ ಶತ ಸಿದ್ಧ ಎಂದಲ್ಲ. ಎಲ್ಲರು ಮೊದಲನೆ Rank ಎಂದೆ ಓದುತ್ತಾರೆ. ಆದರೆ ಅದು ದಕ್ಕುವುದು ಒಬ್ಬನಿ(ಳಿ)ಗೆ. ಮೇಲೆ ಕೈ ತೋರಿಸಿ ಎಲ್ಲವೂ ಅವನ ಪೂರ್ವ ನಿಯೋಜಿತದಂತೆ ನಡೆಯುತ್ತದೆ ಎಂಬುದು ನನ್ನ ಅಭಿಪ್ರಾಯವಲ್ಲ. ಕೆಲವು ನಡೆಗಳು ತುಂಬಾ ಗೌಪ್ಯ. ಅವು ನಮ್ಮ ನಿಮ್ಮ ವೇಳಾಪಟ್ಟಿಗೆ ದಕ್ಕಲಾರವು ಎಂಬುದಷ್ಟೆ ನನ್ನ ಅಭಿಮತ. ಸ್ವಲ್ಪ ಗೊಂದಲವೆಬ್ಬಿಸಿದೆ ಎಂದು ನನಗೂ ಗೊತ್ತು. ಹಾಗೆ ಸರಳವಾಗಿ ಹೇಳಲು ಇದು ನನ್ನ ಪ್ಲಾನ್ಡ ಲೇಖನ ಅಲ್ಲ ಅದಕ್ಕೆ. ಕ್ಷಮೆ ಇರಲಿ. ಗೊತ್ತು ಗುರಿ ಇಲ್ಲದಂತೆ ಬರೆದದ್ದಕ್ಕೆ……

 

ಟ್ಯಾಗ್ ಗಳು:

 
%d bloggers like this: