RSS

Monthly Archives: ಫೆಬ್ರವರಿ 2011

ಕಥೆಯೊಳಗಿನ ವ್ಯಥೆ, ಅದರಲ್ಲಿರುವ ಸತ್ಯಾಸತ್ಯತೆ…

ನಿಮಗೆಲ್ಲಾ ನೆನಪಿರಬಹುದು ಗಣೇಶ ಕಾಸರಗೋಡ ಅವರು “ಬಣ್ಣ ಮಾಸಿದ ಬದುಕು” ಎಂಬ ಲೇಖನ ಸರಣಿಯನ್ನು ವಿಜಯ ಕರ್ನಾಟಕದಲ್ಲಿ ಬರೆದಿದ್ದರು. ಮುಂದೆ ಅದು ಪುಸ್ತಕ ರೂಪವಾಗಿ ಹೊರಬಂತು ನಂತರ ಈ ಟೀವಿಗಾಗಿ ಪ್ರತಿ ಭಾನುವಾರ ಅರ್ಧಗಂಟೆ ಕಾರ್ಯಕ್ರಮವನ್ನು ರೂಪಿಸಿದರು. ಅದು ಸಿನಿಮಾ ಪ್ರಪಂಚದಲ್ಲಿ ಒಂದು ಕಾಲಕ್ಕೆ ತೆರೆಯ ಮೇಲೆ ಮೆರೆದವರ ಇಂದಿನ ಕರುಣಾಜನಕ ಜೀವನದ ಪರಿಚಯವಿತ್ತು. ಅದು ಬಣ್ಣದ ಬದುಕಿನ ಒಂದು ಮಗ್ಗಲು. ಈ ಪ್ರಸ್ತಾಪಕ್ಕೆ ಕಾರಣ ಇಷ್ಟೇ, ನೀವು ಗಮನಿಸಿದಂತೆ ತೆಲುಗಿನಲ್ಲಿ ರಾಮ್ ಗೋಪಾಲ ವರ್ಮಾ ಹೊಸ ಚಿತ್ರ ಬಿಡುಗಡೆಯಾಗಿದೆ. ಇದರ ಹೆಸರು “ಅಪ್ಪಲ್ರಾಜ”.  ಇಮಾಮ್ ಸಾಬಗು, ಗೋಕುಲಾಷ್ಠಮಿಗು ಎತ್ತಣ ಸಂಬಂಧ ಎಂಬ ಜಿಜ್ಞಾಸೆ ಮೂಡಬಹುದು. ಕತೆಯ ಹೂರಣವೇ ಅಲ್ಲಿದೆ.

ಹಿಂದಿನ ಕಾಲಕ್ಕೆ ಚಿತ್ರರಂಗ ಹೇಗಿತ್ತು. ಪ್ರಾಮಾಣಿಕವಾಗಿ ದುಡಿದ ಕಲಾವಿದರು ಇಂದು ಅದೆಷ್ಟು ದುರ್ಬರ ಬದುಕು ನಡೆಸುತ್ತಿದ್ದಾರೆ ಎಂದು ಗಣೇಶ ಕಾಸರಗೋಡು ಅವರು ನಮ್ಮ ಮುಂದೆ ತೆರೆದಿಟ್ಟಿದ್ದರು. ಅದೇ ಚಿತ್ರರಂಗ ಇಂದು ಅದೆಷ್ಟು ಕೆಳ ಮಟ್ಟಕ್ಕೆ ಕುಸಿದಿದೆ.  ಒಂದು ಸಿನಿಮಾ ನಿರ್ಮಾಣದ ಹಿಂದೆ ಅದೆಷ್ಟು ನಾಟಕಗಳು ನಡೆಯುತ್ತವೆ ಎಂಬುದನ್ನು ಹಿರಿಯ ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳುತ್ತಾ ಹೋಗುತ್ತಾರೆ.

ಸ್ವತಃ  ನಿರ್ದೇಶಕ, ನಿರ್ಮಾಪಕರಾದ ವರ್ಮಾ ತಮ್ಮನ್ನು ಒಳಗೊಂಡು ಇಡೀ ಚಿತ್ರರಂಗವನ್ನು ಟೀಕಿಸುತ್ತಾ, ಅದರಲ್ಲಿನ ಒಳ ಜಾಲಗಳನ್ನು ಎಳೆ..ಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಒಟ್ಟಾರೆಯಾಗಿ ನೋಡುವುದಾದರೆ ಇದೊಂದು ತೀರಾ ಸಾಧಾರಣ ಕಥೆ. ಆದರೆ ಜಾಣ ವರ್ಮಾ ಈ ಕಥೆಯನ್ನು ಚಿತ್ರರಂಗದ ಕರಾಳ ಮುಖವನ್ನು ಪರಿಚಯಿಸಲು ಬಳಸಿಕೊಂಡಿರುವುದು ವ್ಯವಹಾರಿಕ ದೃಷ್ಟಿಯಿಂದಲೋ, ಅಥವಾ ವೃತ್ತಿ ಜವಾಬ್ದಾರಿ ಮೆರೆಯಲೋ ಎಂಬ ಗೊಂದಲ ಕಾಡದೆ ಇರದು. ಈ ಚಿತ್ರದ ಒಂದು ಹಾಡಿನ ಸಾಲನ್ನು ಹೇಳಿ ಕಥೆಯನ್ನು ಪರಿಚಯಿಸುವುದು ಹೆಚ್ಚು ಸೂಕ್ತ  ಎಂದು ನನಗೆ ಅನಿಸುತ್ತದೆ. ಅದೆನೆಂದರೆ “ಹಿಚ್ಕಾಕ ಸಿನಿಮಾ ಚೂಸಿ.. ದಯ್ಯಾಲು ಸಿನಿಮಾ ತೇಸೆ..ರಾಮ ಗೋಪಾಲ ವರ್ಮಾ ಡೈರೆಕ್ಟರ್ ಕರ್ಮಾ”.

ಕಥಾ-ಸ್ಕ್ರಿನ್ ಪ್ಲೇ-ದರ್ಶಕತ್ವಂ ಅಪ್ಪಲ್ರಾಜ

ಕಥಾ-ಸ್ಕ್ರಿನ್ ಪ್ಲೇ-ದರ್ಶಕತ್ವಂ ಅಪ್ಪಲ್ರಾಜ

ಇಂತಹ ವರ್ಮಾ ಹೆಣೆದ ಕಥೆಯಲ್ಲಿ ಅಮಲಾಪುರಂನ ಥೇಟರ್ ನಲ್ಲಿ ಕೆಟ್ಟ ಸಿನಿಮಾಗಳನ್ನು ನೋಡಿ ಬೇಸತ್ತ ಒಬ್ಬಯುವಕ ತಾನೇ ಒಂದು ಅದ್ಭುತ ಸೆಂಟಿಮೆಂಟ್ ಕಥೆ ಇಟ್ಟುಕೊಂಡು ಹೈದರಾಬಾದಗೆ ಬರುತ್ತಾನೆ. ತಾನು ಹುಡುಕಿಕೊಂಡು ಬಂದ ಗೆಳೆಯ ಸಿನಿಮಾದಲ್ಲಿ ಹೀರೋ ಅಂದುಕೊಂಡವನಿಗೆ ನಂತರ ಅವನು ಅತಿಯಲ್ಲೇ, ಅತಿಯಾದ ಸಣ್ಣ ಪಾತ್ರ ಮಾಡುವನು ಅಂತ ಗೊತ್ತಾಗುತ್ತದೆ. ನಂತರ ಹಾಗು ಹೀಗು ಮಾಡಿ ಒಬ್ಬ ಕಾಸಿಲ್ಲದ ನಿರ್ಮಾಪಕನನ್ನು ಹುಡುಕುತ್ತಾನೆ. ಅವನ ಜೊತೆ ಇರುವ ಲಾಜಿಕ್ ಗೊತ್ತಿರದ ಕ್ರಿಯೇಟಿವ್ ಹೆಡ್, ನಂತರ ಸಿನಿಮಾಕ್ಕೆ ಹಣ ಹಾಕಲು ಮುಂದಾಗುವ  ತಲೆ ಮಾಸಿದ ಫೈನಾನ್ಷಿಯರ್ ಗಳು, ಕೊನೆಗೂ ಅಂಡರ್ ವರ್ಲ್ಡ ಡಾನ್ ಸುರಿಯುವ ಹಣ, ಆ ಕಾರಣಕ್ಕೆ ತೇವಲು ತೀರಿಸಿಕೊಳ್ಳಲು ಬರೆಯುವ ಸಾಹಿತ್ಯ, ಅದಕ್ಕೆ ರಿಂಗ್ ಟೋನ್ ಗಳಿಗೆ ಸಂಗೀತ ಕೊಡುವವನು ಈ ಚಿತ್ರಕ್ಕೆ ಮ್ಯೂಸಿಕ್  ಡೈರೆಕ್ಟರ್ ಆಗುವುದು. ಚೋಟುದ್ದಾ ಬಟ್ಟೆ ಹಾಕುವ ನಾಯಕಿ ಅಪ್ಪಟ ಸೆಂಟಿಮೆಂಟ್ ಚಿತ್ರದ “ನಾಯಕಿ”(ಚಿತ್ರದಲ್ಲಿನ ಚಿತ್ರದ ಹೆಸರು)ಯಾಗುವುದು. ಅವಳ ಕೃಪೆಯಿಂದ ಜೊತೆಗಿರುವ ಮತ್ತೊಬ್ಬ ದೊಡ್ಡ ನಟ ಹಿರೋ ಆಗುವುದು. ಅವರಿಬ್ಬರ ಸಂಬಂಧ ಮುರಿದು ಬಿದ್ದಾಗ ಇನ್ನೊಬ್ಬ ಬಾಯ್ ಪ್ರೆಂಡ್ ಆ ಜಾಗ ತುಂಬುವುದು.ನಾಯಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೊದಲು ಒಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದು. ಹೀಗೆ ಎಲ್ಲರು ಸೇರಿ ಮೂಲ ಚಿತ್ರಕ್ಕೆ ತಮ್ಮ ಕೈಯ್ಯಲ್ಲಾದ “ಕೊಡುಗೆ”? ಸಲ್ಲಿಸುತ್ತಾರೆ. ಹಾಡುಗಳು ಹಿಟ್ ಆಗುತ್ತವೆ. ನಾಯಕಿಯ ಮೊದಲ ಬಾಯ್ ಫ್ರೆಂಡ್ ಕೂಡಾ ಚಿತ್ರರಂಗದಲ್ಲಿ ಪ್ರಭಾವಶಾಲಿಯಾಗಿದ್ದರಿಂದ ಡಿಸ್ಟ್ರಿಬ್ಯೂಟರ್, ಫಿಲ್ಮ ಜರ್ನಲಿಸ್ಟ್ ಮೂಲಕ ಸೇಡು ತೀರಿಸಿ ಕೊಳ್ಳಲು ಇನ್ನಿಲ್ಲದ ಯೋಜನೆಗಳನ್ನು ರೂಪಿಸುತ್ತಾನೆ. ಅವೆಲ್ಲವುಗಳನ್ನು ದಾಟಿ ಮೊದ, ಮೊದಲು ಫ್ಲಾಫ್ ಎಂದು ಹೇಳಲ್ಪಟ್ಟ ಚಿತ್ರ ನಂತರ ಸೂಪರ್ ಹಿಟ್ ಆಗುತ್ತೆ. ಎಲ್ಲ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತೆ. ಚಿತ್ರದ ನಿಜವಾದ ಉದ್ದೇಶ ಅಡಗಿರುವುದೇ ಇಲ್ಲಿಯೇ…

ಚಿತ್ರದ ಉದ್ದಕ್ಕು ವರ್ಮಾ ಚಿತ್ರರಂಗದ ಕರಾಳ ಮುಖವನ್ನು ಕೊಂಚ ಅತಿ ರಂಜಿತವಾಗಿಯೇ ತೋರಿಸುತ್ತಾ ಹೋಗುತ್ತಾರೆ. ಹಿರೋ ಕಥೆ ಹಿಡಿದುಕೊಂಡು ಬಂದ ನಂತರ ಬರುವ ಎಲ್ಲ ಪಾತ್ರಗಳು ಕಥೆಯಲ್ಲಿ ಹೇಗೆ ಪುಕ್ಕಟೆ ಸಲಹೆ  ನೀಡುತ್ತತವೆ. ಕಥೆ ಹೇಗೆ ಬೇರೆ, ಬೇರೆ ಆಯಾಮ ಪಡೆದು ಕೊಳ್ಳುತ್ತೆ ಎಂಬುದನ್ನು ಹಾಸ್ಯದ ಲೇಪನದ ಮೂಲಕ ಬಿಂಬಿಸುತ್ತಾ ಹೋಗುತ್ತಾರೆ.

ಒಟ್ಟಿನಲ್ಲಿ ವರ್ಮಾ  ತಾನೇನು ಸಾಚಾ ಅಲ್ಲ ಎಂಬುದನ್ನು ಹೇಳುತ್ತಾ ಸಿನಿಮಾದವರು ಮತ್ತು ಅವರ ಸುತ್ತದ ಪ್ರಪಂಚವನ್ನು ಬೆತ್ತಲೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಆದರೆ ಅವರ ಕೆಲವು ಪಾತ್ರಗಳು ಮತ್ತು ಕಠೋರ ನಿರೂಪಣೆ ಹೊಸ ವಿವಾದಕ್ಕೆ ಕಾರಣವಾಗಿವೆ. ಸಿನಿಮಾ ಕಳಪೆಯಾಗಿದೆ. ವರ್ಮಾಗೆ ಸಕ್ಸೆಸ್ ಪಿತ್ತ ನೆತ್ತಿಗೇರಿ ಬೇಕಾ ಬಿಟ್ಟು ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚಿಗೆ TV9 ಪ್ರಸಾರ ಮಾಡಿದ ವಿಶೇಷ ಕಾರ್ಯಕ್ರಮದ ವಿರುದ್ಧ ವರ್ಮಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆ ವಿವಾದದ ಮಾಹಿತಿಯನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸುತ್ತೇನೆ. ಸಧ್ಯ ಸಾಧ್ಯವಾದರೆ ನೀವು ಒಂದು ಸಾರಿ ಅಪ್ಪಲ್ರಾಜನ ನೊಡಬಹುದು.

Advertisements
 

ಟ್ಯಾಗ್ ಗಳು: ,

ಸುಲಗ್ನ ಸಾವಧಾನ.. ಸುಮುಹೂರ್ತ ಸಾವಧಾನ….

ಬದುಕಿನ ನಡಿಗೆಯಲ್ಲಿ ಅನೇಕರು ನನ್ನ ಸ್ನೇಹ ವಲಯಕ್ಕೆ ಸೇರಿಕೊಂಡಿದ್ದಾರೆ. ಕೆಲವರು ಭೇಟಿ ಕೊಟ್ಟು ಹೋಗಿದ್ದಾರೆ. ಕೆಲವರು ಹಸ್ತ ಚಾಚಿದಂತೆ ಮಾಡಿ ಬೆನ್ನು ತಿರುಗಿಸಿ ನಡೆದವರಿದ್ದಾರೆ. ಆದರೆ ನನ್ನನ್ನ ಇಲ್ಲಿಯವರೆಗು ಸ್ನೇಹವೊಂದೇ ಪೊರೆದದ್ದು. ಮಾನಸಿಕವಾಗಿ ಗಟ್ಟಿ ಮಾಡಿದ್ದು. ನನ್ನಲ್ಲಿ ಛಲವೆಂಬ ಬೆಂಕಿಯ ಕಿಡಿ ಹೊತ್ತಿಸಿದ್ದು. ಅಚಾನಕ್ ಆಗಿ ನನ್ನ 20ನೇ ವಯಸ್ಸಿಗೆ ಮೊದಲ ಬಾರಿ ಅಪ್ಪ-ಅಮ್ಮ ಅಣ್ಣಂದಿರು, ಅಕ್ಕಂದಿರು ಮತ್ತು ಬಾಲ್ಯ ಸ್ನೇಹಿತರನ್ನು ತೊರೆದು ಓದಿಗಾಗಿ ಬೆಂಗಳೂರಿಗೆ ಹೋದಾಗ ಅಕ್ಷರಶಃ ನನ್ನನ್ನು ಕೈ ಹಿಡಿದು ನಡೆಸಿದ್ದು, ಈ ಸ್ನೇಹ ಮಾತ್ರ. ಹಾಗಯೇ ವೆಂಕಣ್ಣ ಅಪ್ಪಟ ಗೆಳೆಯನಂತೆ ಬೆನ್ನಿಗೆ ನಿಂತಿದ್ದರಿಂದಲೇ ನಾನು ನಿರಾಯಾಸವಾಗಿ ಬೆಂಗಳೂರಲ್ಲಿ ನೆಲೆ ನಿಂತದ್ದು.

ಇಷ್ಟೇಲ್ಲಾ ಹೇಳಲು ಕಾರಣವಿದೆ. ಏಕೆಂದರೆ ಬೆಂಗಳೂರಿಗೆ ಕಾಲಿಟ್ಟ ಮೇಲೆ ಸಿಕ್ಕ ಹಲವು ಗೆಳೆಯರು ನನ್ನ ಬದುಕಿನುದ್ದಕ್ಕು ನಡೆದು ಬರಬಲ್ಲರು ಎಂಬ ದೃಢ ವಿಶ್ವಾಸ ನನ್ನಲ್ಲಿದೆ. ಆ ಆಪ್ತವಲಯದಲ್ಲಿರುವ ಜಯತೀರ್ಥನ ಬಗ್ಗೆ ಹೇಳಲೆಬೇಕಾದ ಒಂದು ಬೆಳವಣಿಗೆಗೆ ಈ ಬರಹ. ಅದಕ್ಕು ಮೊದಲು ನನ್ನ ಮತ್ತು ಜಯು ಮಧ್ಯದ ಸ್ನೇಹ ಬೆಳದದ್ದೆ ವಿಚಿತ್ರ ಎಂದು ಹೇಳಬಹುದು.

ಜಯು! ನಾನು ವಿರೋಧಿಸುವ ಕೆಲವು ಅಭಿಪ್ರಾಯಗಳು ಅವನಲ್ಲಿ ದಟ್ಟವಾಗಿವೆ. ಆದರು ನನಗೆ ಅವನೆಂದರೆ ತುಂಬಾ ಅಭಿಮಾನ, ಪ್ರೀತಿ ಮತ್ತು ಮೆಚ್ಚುಗೆ. ಹಾಗೆ ಒಂದು ಒಳ್ಳೆಯ ಹೊಟ್ಟೆಕೆಚ್ಚು. ಅವನು ಸ್ವಲ್ಪ ಹೆಚ್ಚೆ ಸೋಮಾರಿ. ಕಾಲೇಜಿಗೆ ಹೋಗಲು ಅದೆಷ್ಟು ಕಷ್ಟ ಪಡುತ್ತಿದ್ದನೋ ಈಗ ಆಫೀಸ್ ಗೆ ಹೋಗಲು ಅಷ್ಟೆ ಕಷ್ಟ ಪಡುತ್ತಾನೆ ಅಂತ ಗೆಳೆಯರು ಆಗಾಗ ಹೇಳ್ತಾ ಇರ್ತಾರೆ. ಅವನು ಅಪ್ಪಟ ದೈವೀ ಭಕ್ತ. ಸಂಪ್ರದಾಯಸ್ಥ ಮನಸ್ಸು. ಅತೀಯಾದ ಒಳ್ಳೆತನ. ಆದರೆ ಇದ್ಯಾವುದು ನನ್ನಿಂದ ಸಾಧ್ಯವಿಲ್ಲ. ತೀರಾ ನಾಸ್ತಿಕನಲ್ಲದಿದ್ದರು ನಾನು ದೇವರ ಬಗ್ಗೆ ಅಷ್ಟು ಪ್ರಬಾವಕ್ಕೆ ಒಳಗಾದವನಲ್ಲ. ಸಂಪ್ರದಾಯಿಕ ಮನಸ್ಸುಗಳು ಮನೆಯಲ್ಲಿದ್ದರು, ನಾನು ಅವರಿಂದ ಕೊಂಚ ಭಿನ್ನವಾಗಿಯೇ ನನ್ನ ಯೋಚನೆಗಳನ್ನು ಬೆಳಸಿಕೊಳ್ಳುತ್ತಾ ಬಂದೆ. ಆದರೆ ಜಯುನ ಮಡಿವಂತಿಕೆ, ಆಚರಣೆಗಳು ನನಗೆ ಹಿಡಿಸದಿದ್ದರು ಅವುಗಳು ಯಾವತ್ತು ನನ್ನನ್ನು ಬಾಧಿಸಲಿಲ್ಲ. ಅವನೆಡೆಗೆ ಆ ಕಾರಣಕ್ಕೆ ಅಸಡ್ಡೆಯನ್ನು ಬೆಳಸಿಕೊಳ್ಳಲಿಲ್ಲ. ನನಗಾಗದ ಹಲವು ರೂಢಿಗಳು ಅವನಲ್ಲಿದ್ದರು ಅವೆಲ್ಲವುಗಳ ಮಧ್ಯ ಜಯು ನನಗೆ ಆಪ್ತನಾದ. ನಾನು, ಶ್ರೀಧರ್, ಜಯು 2 ವರ್ಷ ಜೊತೆಯಾಗಿ ರೂಮ್ ಮಾಡಿಕೊಂಡಿದ್ದೇವು. ಆದರೆ ಪ್ರಾಮಾಣಿಕವಾಗಿ ನನಗ್ಯಾವತ್ತು ಆ ಹುಡುಗರು ಬೇಸರ ಆಗುವಂತೆ ನಡೆದುಕೊಳ್ಳಲಿಲ್ಲ. ನಮ್ಮ ಮಧ್ಯ ಅಭಿಪ್ರಾಯ ಭೇಧಗಳಿದ್ದವು. ಅವು ನಮ್ಮನ್ನು ದೂರ ಮಾಡಲಿಲ್ಲ. ಆ ಎರಡು ವರ್ಷಗಳು ನನಗೆ ತುಂಬಾ ಖುಷಿ ಕೊಟ್ಟ ದಿನಗಳು. ಆ ಕಾರಣಕ್ಕೆನಾನು ಶ್ರೀಧರ್ ಮತ್ತು ಜಯುಗೆ ಋಣಿ. ಜಯು ಕೇವಲ ನನಗೊಬ್ಬನಿಗಲ್ಲ ನಮ್ಮಸ್ನೇಹವಲಯದಲ್ಲಿಯೇ ಎಲ್ಲರಿಗು ಇಷ್ಟವಾಗುವ ಹುಡುಗ.

ಬಾಳಸಂಗಾತಿ ಶರಧಿಗೆ ಮಾಂಗಲ್ಯಧಾರಣ

ಮಾಂಗಲ್ಯಂ ತಂತು ನಾನೇನ....

ನಮ್ಮೆಲ್ಲರ ಪ್ರೀತಿಗೆ ಇಷ್ಟು ಹತ್ತಿರವಾದ ಜಯು ಫೆಬ್ರವರಿ 8 ರಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ. ಬಾಳಸಂಗಾತಿಯ ಆಯ್ಕೆಯಲ್ಲು ಹೃದಯ ವೈಶಾಲ್ಯತೆ ಮೆರೆದ ಮೃದು ಹೃದಯಿಗಳು ಜಯು ಮತ್ತು ಅವನ ಅಪ್ಪ ಅಮ್ಮ.

ಮದುವೆಯ ಹಿಂದಿನ ದಿನದ ಫೋಟೋ
ಸ್ನೇಹ ಬಳಗದ ಎಲ್ಲ ಸದಸ್ಯರು…

ತುಂಬಾ ಸಾಂಪ್ರದಾಯಿಕ ಮತ್ತು ಅಚ್ಚುಕಟ್ಟಾಗಿ ಧಾರವಾಡದಲ್ಲಿ ಮದುವೆ ಸಡಗರ, ಸಂಭ್ರಮಗಳಿಂದ ನೆರವೇರಿತು. ನಾನು ಮತ್ತು ರೂಪಾ ತುಂಬಾ ದಿನದಿಂದ ಮದುವೆ ದಿನಕ್ಕೆ ಕಾಯುತ್ತಿದ್ದವರು ಉತ್ಸಾಹದಲ್ಲೇ ದಿಬ್ಬಣಕ್ಕೆ ಹೋಗಿದ್ದೇವು. ಬೆಂಗಳೂರಿನಿಂದ ಪತ್ನಿ ರಮ್ಯಾ ಸಮೇತ ತುಂಟ ಗೆಳೆಯ ಶ್ರೀಧರ್ ಬಂದಿದ್ದ. ಮೇ ತಿಂಗಳಿನಲ್ಲಿ ಅದೇ ಮಂಟಪದಲ್ಲಿ ಸಪ್ತಪದಿ ತುಳಿಯಲಿರುವ ಪ್ರಭಾಸ್ ಕೈ ಹಿಡಿಯಲಿರುವ ಸಂಗಾತಿಯೊಂದಿಗೆ ಆಗಮಿಸಿದ್ದ. ಜಂಟಲಮನ್ ಪ್ರಶಾಂತ, ಎಲ್ಲವನ್ನು ಪ್ರಶ್ನಿಸುವ ಗೆಳೆಯ ಅಪ್ಪಾರಾವ್, ಪವನ್, ಪದ್ಮರಾಜ್ ಎಲ್ಲರು ಈ ಮದುವೆಗೆ ಸಾಕ್ಷಿಯಾದರು. ಆದರೆ ಇನ್ನೊಬ್ಬ ಗೆಳೆಯ ಶ್ರೀನಿವಾಸ ಕಡೂರು ದೂರದ ಸೌತ್ ಆಫ್ರೀಕಾದಲ್ಲಿರುವದರಿಂದ, ಪ್ರಶಾಂತ್ ಯುಕೆದಲ್ಲಿರುವದರಿಂದ ಅವರಿಬ್ಬರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆದಾಗ್ಗ್ಯೂ ಕಡೂರು SouthAfrica ದಿಂದಲೆ ಫೋನ್ ಮಾಡಿ ಎಲ್ಲರ ಜೊತೆ ಸುಮಾರು ಹೊತ್ತು ಹರಟೆ ಹೊಡೆದ.

ಅಂತು ಬಳಗದಿಂದ ಮೂರು ವಿಕೆಟ್ಗಳು ಊರುಳಿದಂತಾಯಿತು. ಮೇನಲ್ಲಿ ಪ್ರಭಾಸ ಹಸೆಮಣೆ ಎರಲಿದ್ದಾನೆ. ಒಬ್ಬೊಬ್ಬರೆ ನಮ್ಮ, ನಮ್ಮ ವಲಯದೊಳಗೆ ತೂರಿಕೊಳ್ಳುತ್ತಿದ್ದೇವೆ. ಬದುಕಿನ ಹಂತಗಳೆ ಹಾಗಲ್ಲವೆ. ನಿರಂತರ ಬದಲಾವಣೆ. ಬೆಳವಣಿಗೆ ಆಗದಿದ್ದರು……

ಈ ಮೂಲಕ ಮತ್ತೊಮ್ಮೆ “ಜಯು” ಮತ್ತು “ಶರಧಿ”ಗೆ ವೈವಾಹಿಕ ಜೀವನಕ್ಕೆ ಶುಭ ಹಾರೈಕೆಗಳನ್ನು ಹೇಳುತ್ತಿದ್ದೇನೆ. ನಿಮ್ಮಿಬ್ಬರ ಬದುಕು ನಗು ಮತ್ತು ನೆಮ್ಮದಿಯಿಂದ ತುಂಬಿರಲಿ ಎಂದು ಆಶಿಸುತ್ತೇನೆ ಜಯು…..

 

ಟ್ಯಾಗ್ ಗಳು:

ಬೆಲ್ಲದ ಕರಣಿ ಕೊಡುತ್ತಿದ್ದ ಮಂಜಕ್ಕ ಇದ್ದಕ್ಕಿದ್ದಂತೆ ನೆನಪಾದಳು…..

ಕಾಮನೂರು! ಈ ಊರಿಗೆ ಅದ್ಯಾಕೆ ಈ ಹೆಸರ ಇಟ್ಟಾರ ಗೊತ್ತಿಲ್ಲ. ಯಾಕಂದ್ರ ಇದರ ಅರ್ಥ ಮತ್ತ ಹಿನ್ನೆಲೆ ತಿಳ್ಕೋಳ್ಳ ವಯಸ್ಸು ಆಗದರೊಳಗ ಅಪ್ಪಗ ವರ್ಗ ಆಗಿತ್ತು. ಅದಾದ ಮ್ಯಾಲ ಆ ಪ್ರಸಂಗನ ಬಂದಿಲ್ಲ ಅಂದ್ಕೋಳ್ರಿ. ಅಲ್ಲಿನ ಅದೆಷ್ಟೋ ಮುಖಗಳು ಇನ್ನು ಹಚ್ಚು ಹಸರಾಗ್ಯವ.

ಮಂಜಕ್ಕ! ನನಗೆ ಇವತ್ತು ಥಟ್ಟನೇ ನೆನಪಾದ ಮುಖ. ಮಕ್ಕಳಿಲ್ಲದ ವೃದ್ಧ ದಂಪತಿಗಳಿಗೆ ಬೇರೆಯವರ ಮಕ್ಕಳೆ ಒಡಲಲ್ಲಿ ಹುಟ್ಟಿದವರು. ಅವರ ಬದುಕಿನ ಪರಿಚಯ ನನಗಿಲ್ಲ. ಕಾರಣ ನನಗೆ ಆಗ ಕೇವಲ 6,7 ವಯಸ್ಸು. ಮನೆ ಸುತ್ತಲಿನ ಪರಿಸರ ನನಗೆ ಈಗಲು ಸ್ಪಷ್ಟ. ಅದು ನನ್ನ ಹುಟ್ಟೂರು. ಅಲ್ಲಿನ ಬಡಿಗೇರ ಕನಕ ನನಗ ಒಂದು ಸಣ್ಣ “ಬಂಡಿ” ಮಾಡಿಕೊಟ್ಟಿದ್ದ. ವೇಮಲಿ ಎಂಕಣ್ಣ ಮಗ ಸಂಗಣ್ಣ ಅಂಗಡಿಯೊಳಗಿನ ಪೆಪ್ಪರ ಮೆಂಟು ಕೊಡ್ತೀದ್ರು. ಇದೇ ಸಂಗಣ್ಣ ದುರುಗಮ್ಮನ ಗುಡಿ ಮುಂದ ನನ್ನ ನಿಲ್ಲಿಸಿ ಫೋಟೋ ತೆಗಿದಿದ್ದ. ಅದಕ್ಕ  ನಾನು ಉತ್ತತ್ತಿ ಚೋಟ್ಯಾ ಅಂತಿದ್ದೆ. ಕಾಮಣ್ಣನ ಬೆಂಕಿಯಲ್ಲಿ ಸುಟ್ಟ ಶೇಂಗಾನ ಚೆನ್ನಕ್ಕ ನಮಗ ಕೊಟ್ಟು ತಮ್ಮ ಮನಿಗ್ಯ ತೊಗೊಂಡು ಹೋಗ್ತಿದ್ದಳು. ವಿಠಲಾಚಾರ್ ಮಂತ್ರಾಲಯ ಪಾದಯಾತ್ರೆಗೆ ಸಾಲಿ ಹಿಂದಿನ ಗುಡಿಯಿಂದ(ಯಾವ ದೇವ್ರದು ನೆನಪಿಲ್ಲ)  ಬೀಳ್ಕೊಡುತ್ತಿದ್ದದ್ದು.  ಗೌಡ್ರ ಮನಿಯೊಳಗ ಶೇಂಗಾ ವಡಿತಿದ್ದದ್ದು, ಜೀವಕ್ಕಜ್ಜಿ ಮನಿ ಹಿತ್ತಿಲದಾಗ  ಕರೀಬೇವು ಗೊತ್ತಾಗದಂಗ ಹರೀತಿದ್ದದ್ದು,  ನಾರಾಯಣರಾಯರ ಮನಿ ಹಿತ್ತಲ್ದಾಗ ಬಾರಿ ಹಣ್ಣು ಹೊಡಿತ್ತಿದ್ದದ್ದು… ಒಂದೇ …ಎರಡೇ…ಬಿಚ್ಚಿದರೆ ನೆನಪಿನ ಬುತ್ತಿ ಹಾಗೇಯೇ ಬಿಚ್ಚಿಕೊಳ್ಳುತ್ತೆ.

ಆದರೆ ಈ ಎಲ್ಲ ರಾಶಿ ಒಳಗ ಮಂಜಕ್ಕ ಯಾಕ ನೆನಪಾದಳೋ ಗೊತ್ತಿಲ್ಲ…..?

ನಾನು ಒಂದೋ, ಎರಡೋ ಕ್ಲಾಸ್ನಾಗ  ಓತ್ತಿರಬೇಕಾದ್ರ ನಡೀತಿದ್ದ ದಿನಚರಿ ಇದು. ಮುಂಜಾನೆ ಸ್ನಾನ ಮಾಡಿ ಸೀದಾ ಮಂಜಕ್ಕನ ಮನೆಗೆ ಓಡುತ್ತಿದ್ದೆ. ಅಲ್ಲಿ ಒಂದು ಪುಟ್ಟ ಬಾಕ್ಸ ಒಳಗ ಕುಂಜಿ ಕೊಡೋ ಅಲಾರಾಮ. ಆ ಬಾಕ್ಸನ ಮ್ಯಾಲೆ ಹೊಂದಿಕೊಂಡಂತೆ ಚಿತ್ತಾರ. ಅದರ ಹಿಂದ ಇರ್ತಿತ್ತ ನೋಡಿ ನನ್ನ ಬೆಲ್ಲದ ಕರಣಿ.  ಓಡಿ ಹೋಗಿ ನಾನು ಕೈ ಹಾಕುತ್ತಿದ್ದದ್ದೆ ಅಲ್ಲಿ. ಅದು ಮಂಜಕ್ಕ ನನಗೆಂತ ಎತ್ತಿ ಇಡುತ್ತಿದ್ದ ಸಣ್ಣ ಬೆಲ್ಲದ ಕರಣಿ. ಬ್ರಾಹ್ಮಣ ಸಂಪ್ರದಾಯದ ಮನೆಗಳಲ್ಲಿ ಹೆಂಗಸರು ಬೆಳಗ್ಗೆ ಸ್ನಾನ ಮಾಡಿ ತುಳಸಿಗೆ ನೀರು ಹಾಕುವುದು ವಾಡಿಕೆ. ಆ ಸಮಯದಲ್ಲಿ ತುಳಸಿಗೆ ನೈವೇದ್ಯ  ಎಂದು. ಬೆಲ್ಲದ ಕರಣಿ ಇಡುತ್ತಾರೆ. ಹಾಗೆ ತುಳಸಿಗೆ ನೈವೇದ್ಯಕ್ಕೆ ಎಂದು ಮಂಜಕ್ಕ ಇಡುತ್ತಿದ್ದ ಬೆಲ್ಲ ನನ್ನ ಹೊಟ್ಟೆಗೆ ಇಳಿಯುತ್ತಿತ್ತು. ಮುಪ್ಪು ಜೀವ ರಾಘಣ್ಣ ಮತ್ತು ಮಂಜಕ್ಕ ನನ್ನ ಕಣ್ಣಿಗೆ ಆದರ್ಶ ದಾಂಪತ್ಯದ ಕುರುಹುಗಳಂತೆ ಕಾಣುತ್ತಿದ್ದರು. ಸತ್ಯ ಅರ್ಥವಾಗುವ ವಯಸ್ಸು ನನಗಿರಲಿಲ್ಲ.

ಮಂಜಕ್ಕ ಕೊಡುತ್ತಿದ್ದ ಬೆಲ್ಲದ ಕರಣಿ

ಮಂಜಕ್ಕ ಕೊಡುತ್ತಿದ್ದ ಬೆಲ್ಲದ ಕರಣಿ

ಮಕ್ಕಳಿಲ್ಲದ ಹಿರಿ ಜೀವಗಳು ಒಂದೊಕ್ಕೊಂದು ಆಸರೆಯಾಗಿದ್ದರು. ರಾಘಣ್ಣನಿಗೆ ಮುಪ್ಪು. ಆದರೆ ಮಂಜಕ್ಕ ಇನ್ನು ಗಟ್ಟಿ ಮುಟ್ಟಿಯಾಗಿದ್ದಳು. ಅವರಿಬ್ಬರ ಮಧ್ಯ ವಯಸ್ಸಿನ ಅಂತರ ಭಾಳ ಇತ್ತು ಎಂಬುದು ಮಸುಕು, ಮಸುಕಾಗಿ ನೆನಪದ. ನಮಗೆಲ್ಲ ಅವರಿಬ್ಬರು ಯಾಕ ಇಷ್ಟ ಆಗ್ತಿದ್ರು ಅಂದ್ರ ಅವರ ಮನೆಯ ಹಿಂದಿನ ಸಣ್ಣ ಹಿತ್ತೆಲಿನಾಗ ನಾವುಗಳು “ಅಡಿಗಿ ಆಟ” ಆಡ್ತಿದ್ವಿ. ಲೀಲಕ್ಕ, ಅಚ್ಚಕ್ಕ,  ವಿಠಲಾಚಾರ ಮಗಳು ಉಷಾ, ನಾರಾಯಣರಾವ್ ಮಗಳು ವೀಣಾ, ವಿದ್ಯಾ, ಗೌಡ್ರ  ಎಂಕಣ್ಣಾರ ಮಗಳು ಕವಿತಾ ಇವರೆಲ್ಲರು ಆ ಗುಂಪಿನ ಮೆಂಬರ್ರು. ನನಗ ನೆನಪಿದ್ದಾಂಗ ನಾನು ಗಂಡು ಹುಡುಗರ ಜೊತೆ ಆಡಿ ಬೆಳದದ್ದು ಕಾಮನೂರಿನಲ್ಲಿ ಖಂಡಿತಾ ನೆನಪಿಲ್ಲ. ಅಲ್ಲಿ ಏನಿದ್ದರು ನನ್ನ ಅಕ್ಕಂದಿರ ಗುಂಪಿನ ಜೊತೆಗೆ ಆಟ. ಅದು ಬಿಟ್ಟರೆ ವಿದ್ಯಾ ಮತ್ತು ನಾನು, ನಮ್ಮೊಡನೆ ನಮ್ಮ ಬಾಲ್ಯದ ಪ್ರಪಂಚ.

ವಿಷಯಕ್ಕೆ ಬರುತ್ತೇನೆ. ಹಾಗೇ ನಮ್ಮ ಬಾಲ್ಯದ ಆಟಕ್ಕೆ ವೇದಿಕೆ ಮಾಡಿ ಕೊಡುತ್ತಿದ್ದ ಮಂಜಕ್ಕ, ನನ್ನ ಬಾಯಿಗೆ ಸಿಹಿಯಾದ ಬೆಲ್ಲದ ಕರಣಿ ಎತ್ತಿ ಇಡುತ್ತಿದ್ದ ಮಂಜಕ್ಕ ಇವತ್ತು ಆಫೀಸ್ಗೆ ಹೋಗುವಾಗ ಇದ್ದಕ್ಕಿದ್ದಂತೆ ನೆನಪಾದಳು. ಬಾಯಿಗೆ ಆ ಕರಣಿ ಬೆಲ್ಲದ ಜಿಡ್ಡು ರಾಚಿದ ಅನುಭವವಾಯಿತು. ಈಗ ರಾಘಣ್ಣ ಇಲ್ಲಾ. ಆದರ ಮಂಜಕ್ಕ ಖಂಡಿತಾ ಇದ್ದಾಳು ಎಂದು ನನಗನಿಸುತ್ತದೆ.ಆದರೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆ ಊರಿನ ಹಲವು ನೆನಪುಗಳಲ್ಲಿ ಮಂಜಕ್ಕನ ಮನೆಯ ತುಂಟಾಟಗಳು ಮಾಸದೆ ಇನ್ನು ಹಾಗೆ ಉಳಿದು ಕೊಂಡಿವೆ. ಇದರ ಜೊತೆಗೆ ನಾನು ಅಪರೂಪಕ್ಕೆ ಬರ್ತಿದ್ದ ಎಂಕಣ್ಣ, ರಾಘಣ್ಣ, ವಿಠಲಾಚಾರ್ ಮಗ ರಘು ಇನ್ನು ಯಾರ್ಯಾರೊಂದಿಗೆ ಗುಡ್ಡದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದು, ಚಿಕ್ಕಮಾನೂರಿನ ಹನುಮಪ್ಪನ ಗುಡಿಗೆ ಹೋದಾಗ ಸಬ್ಬಸ್ಗಿ ಹರಿದು ಕೊಂಡು ಬರುತ್ತಿದ್ದದ್ದು, ಸಾಲಿ ಹಿಂದಿನ ಹುಂಚಿ ಗಿಡಕ್ಕೆ ಕಲ್ಲು ಹೊಡಿತದ್ದದ್ದು ಇನ್ನು ಅದೆಷ್ಟೋ ನೆನಪುಗಳನ್ನು ಮುಂದೆಂದಾದರು ಹಂಚಿಕೊಳ್ಳುತ್ತೇನೆ. ನನ್ನ ಬಾಯಿಗೆ ಬೆಲ್ಲ ಇಡುತ್ತಿದ್ದ ಮಂಜಕ್ಕನ ಒಂಟಿ ಬದುಕು ಸಿಹಿ, ಸಿಹಿಯಾಗಿರಲಿ ಎಂಬುದು ನನ್ನ ಆಶಯ.

 

ಟ್ಯಾಗ್ ಗಳು:

 
%d bloggers like this: