RSS

Monthly Archives: ಆಗಷ್ಟ್ 2010

ಮುಗ್ಧ ಮನಸಿನ “ಮರ್ಯಾದ ರಾಮನ್ನ”

ಇಂದು ಚಿತ್ರರಂಗ ಎಂತಹ ದುಸ್ಥಿತಿಯಲ್ಲಿದೆ ಎಂದರೆ ಜನರನ್ನು ಪುಕ್ಕಟೆ ಬಂದು ಚಿತ್ರ ನೋಡಿ ಹೋಗಿ ಎಂದರು ಯಾರು ಚಿತ್ರಮಂದಿರದ ಕಡೆ ತಲೆ ಹಾಕಲು ಹೆದರುತ್ತಾರೆ. ಅದಕ್ಕೆ ಕಾರಣ ಹೊಸತನ ಮತ್ತು ಲವಲವಿಕೆ ಇಲ್ಲದ ಏಕರೂಪದ ಕೇವಲ ಅಧ್ಧುರಿತನವನ್ನೆ ಬಂಡವಾಳವಾಗಿಸಿಕೊಂಡ ಚಿತ್ರಗಳ ನಿರ್ಮಾಣ ಎಂದೇ ಹೇಳಬಹುದು. ಬಹು ನಿರೀಕ್ಷಿತ ಚಿತ್ರಗಳು ಕೂಡ ನೆಲ ಕಚ್ಚುತ್ತಿವೆ. ಇದಕ್ಕೆ ಯಾವ ಭಾಷೆಯು ಹೊರತಾಗಿಲ್ಲ ಎಂದೇ ಹೇಳಬಹುದು. ಪ್ರತಿ ಚಿತ್ರೋದ್ಯಮಿಗಳು ಸಿನಿಮಾ ಗೆಲ್ಲಿಸಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ಚಿತ್ರ 50 ದಿನ ಓಡಿಸಲು ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಹಿಂದಿಯಲ್ಲಿ ಕೈಟ್ಸ ಮತ್ತು ರಾವಣ್ ಅಂತಹ ಚಿತ್ರಗಳು ಒಂದೇ ವಾರಕ್ಕೆ ಎತ್ತಂಗಡಿ ಆಗುವಂತಹ ಸ್ಥಿತಿ ತಂದುಕೊಂಡವು ಎಂದರೆ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.

ಇಂತಹ ವಾತಾವರಣದಲ್ಲು ಅಲ್ಲೊಂದು, ಇಲ್ಲೊಂದು ಚಿತ್ರಗಳು ಗಮನ ಸೆಳೆಯುತ್ತಿರುವುದು ನಿಜಕ್ಕು ಅಭಿಮಾನದ ವಿಷಯವೇ. ಅಂತಹ ಚಿತ್ರಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ತೆಲಗು ಚಿತ್ರ “ಮರ್ಯಾದ ರಾಮಣ್ಣ”. ಇದು ತೆಲುಗಿನಲ್ಲಿ ಇತ್ತೀಚಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಅರ್ಕಾ ಮಿಡೀಯಾ ಅವರ ಎರಡನೇ ಕೊಡುಗೆ (ಮೊದಲ ನಿರ್ಮಾಣ “ವೇದಂ”. ಅದು ಕೂಡಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಿತ್ರ ಎಂಬುದು ಗಮನಾರ್ಹ). ಸತತ ಹಿಟ್ ಚಿತ್ರಗಳನ್ನು ನೀಡಿದ ರಾಜಮೌಳಿ (ಮಗಧೀರ, ವಿಕ್ರಮಾರ್ಕಡು, ಯಮದೊಂಗ…..) ನಿರ್ದೇಶನದಲ್ಲಿ ಬಂದ ಈ ಚಿತ್ರ ನಿಜಕ್ಕು ಕೊಂಚ ಭಿನ್ನವಾಗಿದೆ ಎಂದು ಹೇಳಬಹುದು. ಸರಳ ಕಥೆ, ಅಷ್ಟೇ ಸರಳ ನಿರೂಪಣೆ. ತಿಳಿ ಹಾಸ್ಯ, ಕೊಂಚ ಬೆರಗಾಗಿಸುವ ಸಾಹಸ, ಮುದ ನೀಡುವ ಛಾಯಾಗ್ರಹಣ, ಸಂದರ್ಭಕ್ಕೆ ಸರಿಯಾದ ಹಿನ್ನೆಲೆ ಸಂಗೀತ ಹಾಗು ಇಂಪಾದ ಹಾಡುಗಳು. ಒಟ್ಟಾರೆಯಾಗಿ ಎಲ್ಲ ವಿಭಾಗದಲ್ಲು ತನ್ನ ಗಟ್ಟಿತನದಿಂದಲೆ ಚಿತ್ರ ನೋಡುಗರನ್ನು ಕೊನೆಯ ಕ್ಷಣದವರೆಗು ಹಿಡಿದಿಡುತ್ತದೆ.

ಚಿತ್ರ ಕೃಪೆ : ಟಾಲಿ2ಬಾಲಿ.ಕಾಂ

ಇಷ್ಟಕ್ಕು ಯಾವ ಚಿತ್ರದಲ್ಲಿಯು ಇಲ್ಲದ ಕತೆ ಇಲ್ಲೇನಿದೆ ಎಂಬ ಪ್ರಶ್ನೆ ಸಹಜ. ಆದರೆ ಕತೆ ಇರುವುದು ಇಷ್ಟೆ. ರಾಮು (ಸುನೀಲ್) ಅನಾಥ. ಅವನಿಗೆ ಒಂದು ಗೂಡ್ಸ ಆಟೋ ಖರೀದಿಸುವ ಕನಸು. ಅದಕ್ಕಾಗಿ ಹನಿ ಹನಿ ಕುಡಿದರೆ ಹಳ್ಳ ಎಂಬಂತೆ ತನ್ನ ಪ್ರೀತಿಯ ಸೈಕಲ್ ಮೇಲೆ ಮೂಟೆ ಹೊರುತ್ತಾ ಕೂಲಿ ಕೆಲಸ ಮಾಡಿ ಹಣ ಕೂಡಿಸುವ ಉದ್ದೇಶ. ಆದರೆ ಅದು ಕೈಗೂಡದು ಎಂದು ತಿಳಿಯುತ್ತದೆ. ಅದೇ ಸಮಯಕ್ಕೆ ಹಳ್ಳಿಯಲ್ಲಿರುವ 5 ಏಕರೆ ಭೂಮಿ ಸರಕಾರದಿಂದ ಸಿಕ್ಕಿರುವ ಟೆಲಿಗ್ರಾಂ ಬರುತ್ತದೆ. ಆ ಜಮೀನನ್ನು ಮಾರಿ ಬಂದ ಹಣದಿಂದ ಾಟೋ ಖರೀದಿಸುವ ಕನಸಿನೊಂದಿಗೆ ರಾಮು ತನ್ನ ಹುಟ್ಟುರಾದ ರಾಯಲಸೀಮೆಯ ೊಂದು ಹಳ್ಳಿಗೆ ಹೊರಡುತ್ತಾನೆ.

ರೈಲಿನಲ್ಲಿ ಹೋಗುತ್ತಿರುವಾಗ ನಾಯಕಿ ಅರ್ಚನಾಳ ಮುಂದೆ ಅವನ ಮುಗ್ಧತೆಯ ದರ್ಶನ, ಸುಂದರ ಹಾಡು ಮತ್ತು ದೃಶ್ಯ ಕಾವ್ಯ, ಅವಳು ಟ್ರೇನ್ ಇಳಿಯುವಾಗ ಚಿತ್ರ ಬಿಡಿಸಿರುವ ಬುಕ್ ಕೆಳಗೆ ಬೀಳುತ್ತದೆ. ಅದನ್ನು ಗಮನಿಸಿದ ರಾಮು ಆ ಬುಕ್ ಹುಡುಕಿ ಅವಳಿಗೆ ಕೊಡಬೇಕೆನ್ನುವಷ್ಟರಲ್ಲಿ ಟ್ರೇನ್ ಹೋಗುತ್ತದೆ. ಇದೆಲ್ಲಾ ಆಗುವ ಮೊದಲೆ  ನಾಯಕಿಯ ಮನೆತನ ಅವರ ಶ್ರೀಮಂತಿಕೆ ರಾಯಲಸೀಮೆಯ ಕ್ರೌರ್ಯ ಅನಾವರಣಗೊಂಡಿರುತ್ತದೆ. ಅವಳು ಟ್ರೇನ್ ಇಳಿದು ಹೋಗುವಾಗ ಮನೆಯಲ್ಲಿ ಅವಳನ್ನು ಮದುವೆಯಾಗುವ ಹುಡುಗನಿದ್ದರು ಇಬ್ಬರಿಗೂ ತಾವಿಬ್ಬರು ಗಂಡ ಹೆಂಡತಿ ಆಗುವ ಆಸೆ ಇರುವುದಿಲ್ಲ. ಮಾತುಕತೆ ಕೇವಲ ಹಿರಿಯರ ಹಂತದಲ್ಲಿ ನಿರ್ಧಾರವಾಗಿರುತ್ತದೆ.

ಮರ್ಯಾದ ರಾಮಣ್ಣ

ಚಿತ್ರ ಕೃಪೆ : ಚಕ್ರಿ ಮಸ್ತಿ.ಕಾಂ

ರಾಮು ತನ್ನ ಹಳ್ಳಿಗೆ ಬಂದಾಗ ಮೊದಲು ಅವನಿಗೆ ನಾಯಕಿಯ ಅಣ್ಣನೇ ಪರಿಚಯವಾಗುತ್ತದೆ. ರಾಮು ಹೇಳಿದ ಕಡೆ ಅವನನ್ನು ಡ್ರಾಪ್ ಮಾಡಿದ ನಂತರ ರಾಮು ತಮ್ಮ ವೈರಿಗಳ ಮಗನೆಂದು ಗೊತ್ತಾಗಿ ಅವನನ್ನು ಸೀಳಿ ಹಾಕಲು ಬೆನ್ನ ಹತ್ತುತ್ತಾನೆ. ತನಗೆ ಗೊತ್ತಿಲ್ಲದಂತೆ ರಾಮು ಅವನಿಂದ ಪಾರಾಗುತ್ತಾನೆ. ಭೂಮಿ ಮಾರಿಸುವ ಏಕೈಕ ವ್ಯಕ್ತಿ ನಾಯಕಿಯ ತಂದೆ. ಆ ಮನೆತನ ಕ್ರೌರ್ಯಕ್ಕೆ ಹೆಸರಾದಷ್ಟು, ಅತಿಥಿಗಳಿಗೆ ಗೌರವ ಮಾಡುವುದರಲ್ಲಿಯು ಅಷ್ಟೇ ಎತ್ತಿದ ಕೈ. ರಾಮುನನ್ನು ತಮ್ಮ ಮನೆಗೆ ಅತಿಥಿ ಸತ್ಕಾರಕ್ಕೆ ಕರೆದುಕೊಂಡು ಹೋಗುವ ನಾಯಕಿಯ ತಂದೆಗೆ ನಂತರ ಅಂದರೆ ರಾಮುವಿನ ಜತೆಗೆ ಊಟಕ್ಕೆ ಕುಳಿತಾಗ ಹಿರಿ ಮಗ ಬಂದು ಅವನು ತಮ್ಮ ಬದ್ಧ ವೈರಿಗಳ ಮಗನೆಂದು ತಿಳಿಯುತ್ತದೆ. ಆ ಕುಟುಂಬದಲ್ಲಿ ಈಗ ಉಳಿದವನು ರಾಮು ಮಾತ್ರ ಅವನನ್ನು ಕೊಂದರೆ ಅವರ ಸೇಡು ಪೂರ್ಣವಾಗುತ್ತದೆ. ಆದರೆ ಒಂದು ಸಂಪ್ರದಾಯ ಎಂದರೆ ಅತಿಥಿ ಮನೆಯೊಳಗೆ ಇರುವವರೆಗು ಅವನಿಗೆ ರಾಜ ಮರ್ಯಾದೆ ಮಾಡಲೆ ಬೇಕು. ಅವನು ಹೊಸ್ತಿಲು ದಾಟಿದರೆ ಅವನ ಕತ್ತು ಕತ್ತರಿಸಿ ಹಾಕಬೇಕೆಂದು ಇಡೀ ಕುಟುಂಬವೇ ಸಜ್ಜಾಗುತ್ತದೆ. ಮನೆಗೆ ಬಂದ ಕೆಲವೆ ಸಮಯದಲ್ಲಿ ರಾಮುಗೆ ವಿಷಯ ತಿಳಿದು ಅವನು ಮನೆ ಹೊಸ್ತಿಲು ದಾಟಿ ಹೋಗಲೆ ಕೂಡದು ಎಂದು ನಿರ್ಧರಿಸುತ್ತಾನೆ. ಆದರೆ ನಾಯಕಿಯ ತಂದೆ, ಅಣ್ಣಂದಿರು ಅವನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಹರಸಾಹಸ ಮಾಡುತ್ತಾರೆ. ಆದರೆ ಈ ಯಾವುದೆ ವಿಷಯ ನಾಯಕಿಗೆ ತಿಳಿಯುವದೆ ಇಲ್ಲಾ. ರಾಮು ಹೇಗೆ ಆ ಮನೆಯಲ್ಲಿ ಉಳಿಯಲು ಯೋಜನೆಗಳನ್ನು ರೂಪಿಸುತ್ತಾನೆ. ನಾಯಕಿ ಮತ್ತು ಅವಳ ಭಾವ ಮದುವೆಯಾಗ್ತಾರಾ. ಇದರಲ್ಲಿ ರಾಮುವಿನ ಪಾತ್ರವೇನು. ಅವರ ಸೇಡು ಪೂರ್ಣವಾಗುತ್ತಾ, ಈ ಎಲ್ಲ ಕುತೂಹಲಗಳಿಗೆ ಚಿತ್ರವನ್ನೆ ಗಮನಿಸಬೇಕು.

ಮುಗ್ಧ ರಾಮುವಿನ ಪಾತ್ರದಲ್ಲಿ ಸುನೀಲ್ ಅಭಿನಯ ಮನೋಜ್ಞವಾಗಿದೆ. ನಾಯಕಿ ಹಳ್ಳಿಗು ಸೈ, ದಿಲ್ಲಿಗು ಸೈ ಎಂಬಂತಿದ್ದಾಳೆ. ಅವಳ ತಂದೆ, ಅಣ್ಣಂದಿರು ರಾಯಲಸೀಮೆಯ ಕ್ರೌರ್ಯತೆಗೆ ಥೇಟು ಜೀವ ತುಂಬಿದಂತೆ ಅಭಿನಯಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ರಾಜಮೌಳಿಯ ನಿರ್ದೇಶನ ಮತ್ತು ಸಿ ರಾಂ ಪ್ರಸಾದ ಛಾಯಾಗ್ರಹಣ ಅದ್ಭುತ ಎಂಬಂತಿದೆ. “ಅಮ್ಮಾಯಿ ಕಿಟಕಿ ಪಕ್ಕನ….” ಹಾಡು ಇಡೀ ಚಿತ್ರದ ಹೈಲೈಟ್ಸ ಎಂದೇ ಹೇಳಬಹುದು.  ಒಟ್ಟಾರೆಯಾಗಿ ಅರ್ಕಾ ಮಿಡೀಯಾ ನಿರ್ಮಾಣದಲ್ಲಿ ಮತ್ತೊಂದು ಯಶಸ್ವೀ ಚಿತ್ರ. ಈಗ ಶೋಬು ಮತ್ತು ಪ್ರಸಾದ ಹ್ಯಾಟ್ರಿಕ್ ಕನಸಿನಲ್ಲಿದ್ದಾರೆ.

Advertisements
 
 

ಟ್ಯಾಗ್ ಗಳು:

ಅಂದಿನ ಮತ್ತು ಇಂದಿನ ಜೊತೆಗಿನ ಎರಡು ಸತ್ಯಗಳು

ಹೊರಗಡೆ ಧೋ ಮಳೆ. ಆದರೆ ಮನಸು ಮಾತ್ರ ಬರಡು ಭೂಮಿ. ಅವಳು ಕೈ ಜಾರಿ ಹೋಗಿ ಎಷ್ಟು ತಿಂಗಳುಗಳು ಕಳೆದವು. ಲೆಕ್ಕ ಹಾಕುವುದು ಕೂಡಾ ನನ್ನಲ್ಲಿ ನಡುಕ ಉಂಟು ಮಾಡುತ್ತೆ. ಅಸಲಿಗೆ ಅವಳು ನನ್ನಿಂದ ದೂರ ಹೋಗುತ್ತಾಳೆ ಎಂಬ ಕಲ್ಪನೆಯೆ ಇಲ್ಲದ ನಾನು, ಅದೆಷ್ಟೊ ಕ್ಷಣಗಳನ್ನು ಅವಳ ಬೆಚ್ಚಗಿನ ಅಪ್ಪುಗೆಯಲ್ಲಿ ಕಳೆದುಬಿಟ್ಟೆನೋ ಲೆಕ್ಕ ಇಟ್ಟವರ್ಯಾರು. ಅಸಲಿಗೆ ಅವಳು ಅದನ್ನೆಲ್ಲಾ ಯೋಚಿಸಲು ಸಮಯವಾದರು ಕೊಟ್ಟಿದ್ದೆಲ್ಲಿ. ನಮ್ಮದು ಕೇವಲ ಮಕ್ಕಳು ಮರಳಿನ ರಾಶಿಯಲಿ ಕಾಲು ಹುದುಗಿಸಿ ಗೂಡು ಕಟ್ಟಿ ಆಟ ಆಡುವ ಮನಸು. ಹೀಗಾಗಿ ವಿಧಿ ತಟ್ಟನೆ ಬಂದು ನಾವು ಪ್ರಿತಿಯಿಂದ, ಜೋಪಾನವಾಗಿ ಕಟ್ಟಿದ ಗೂಡನ್ನು ಕೆಡಸಿ ಹೋಗಬುದು ಎಂಬ ಯೋಚನೆಯೆ ಅವಾಸ್ತವ ಎಂದು ಕೊಂಡಿದ್ದೇವು. ಅದನ್ನೆ ಅಲ್ಲವಾ ಭ್ರಮಾ ಜಗತ್ತು ಎನ್ನುವುದು.

ಅವಳು ನಿಜವಾಗಿಯು ಹಾಗಿದ್ದಳಾ. ಅದು ನನ್ನನ್ನು ಇಂದಿಗು ಬಿಡದೆ ಕಾಡುತ್ತಿರುವ ? ಅವಳು ಪ್ರೀತಿಗೆ ಇನ್ನೊಂದು ಅರ್ಥದಂತಿದ್ದಳು. ಮಮತೆಗೆ ಬರೆದ ಭಾಷ್ಯದಂತಿದ್ದಳು. ಸ್ನೇಹಕ್ಕೆ ನೀಡಬಹುದಾದ ಸಾಕ್ಷಿಯಂತಿದ್ದಳು. ನಿಜ ಗುರುವಿನಂತೆ ಕೈ ಹಿಡಿದು ನಡೆಸುತ್ತಿದ್ದಳು. ಆದರೆ… ಇಂದೆಲ್ಲಿ ಒಂಟಿ ಪಯಣ. ಅವಳಿಲ್ಲದ ಈ ಬದುಕು ಹಸಿರು ಹೊದ್ದಿಲ್ಲದ ಕಾಡಿನಂತೆ. ಬದುಕಿನಲಿ ಏನೋ ಒಂದು ಅಭಾಸ ಸದ್ದಿಲ್ಲದೆ ಜರುಗಿ ಹೋದುದರ ಪಳೆಯುಳಿಕೆಯೆ ಈ ನೆನಪುಗಳು ಎಂದು ನನಗೆ ಆಗಾಗ ಅನಿಸುತ್ತಿರುತ್ತದೆ. ಪ್ರಿತಿ ಎಂಬ ಜಲಪಾತದಡಿ ನಿಂತಿದ್ದ ನಮಗೆ ಬೆಟ್ಟದ ಮೇಲಿನ ಕಲ್ಲುಬಂಡೆ ನೀರಿನ ಭೋರ್ಗರೆತಕ್ಕೆ ಸರಿದು ಬಂದು ನಮ್ಮ ಮೇಲೆಯೆ ಬೀಳಬಹುದು ಎಂಬ ಸಣ್ಣ ಯೋಚನೆಯು ಇರಲಿಲ್ಲ. ಇದ್ದಿದ್ದರೆ ಏನಾಗುತ್ತಿತ್ತು. ಬಹುಶಃ ನಾನು ಅವಳ ಸಾಮೀಪ್ಯಕ್ಕೆ ಸರಿಯುತ್ತಿರಲಿಲ್ಲವೇನೋ. ಒಂದು ಗಜ    ಅಂತರ ಸೃಷ್ಟಿಸಿಕೊಂಡು ಬಿಡಬಹುದಾಗಿತ್ತು. ಆಗ ನೋವುಗಳ ತಪನೆಯಾದರು ನಿಲ್ಲುತ್ತಿತ್ತು. ಆದರೆ ಬದುಕಿನ ಒಂದು ಅಮೂಲ್ಯ   ಅನುಭವದ ಕೊಂಡಿ ನನ್ನ ಜೀವನಕ್ಕೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ ಎಂಬುದು ಸತ್ಯವಲ್ಲವೆ.

“ನೀನಿಲ್ಲದೆ ನನದೇನಿದೆ.. ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ, ಕನಸೆಲ್ಲಾ ನಿನ್ನಲ್ಲೆ ಸೆರೆಯಾಗಿದೆ… ” ಎಷ್ಟು ಸಾರಿ ಇಬ್ಬರು ಕುಳಿತು ಈ ಹಾಡು ಕೇಳಿದ್ದೇವು. ಯಾವತ್ತು ಇದರ ಸತ್ಯಾ  ಸತ್ಯತೆಯ ಪರಾಮರ್ಶೆ ಮಾಡಿಕೊಂಡಿರಲಿಲ್ಲ. ಯಾಕೆಂದರೆ ನಿನ್ನಲ್ಲಿ ನಾನಿದ್ದೆ, ನನ್ನಲ್ಲಿ ನೀನಿದ್ದೆ. ಅದನ್ನು ಬಾಯಿ ಬಿಟ್ಟು ಹೇಳುವ  ಔಚಿತ್ಯ ಇಬ್ಬರಿಗು ಕಂಡುಬಂದಿರಲಿಲ್ಲ. ಬದುಕಿನ ಬಂಡಿ ನಡೆದದ್ದೆ ಹಾಗಲ್ಲವೆ. ಆದರು ಕೊಂಡಿ ಕಳಚಿದ್ದಾದರು ಎಲ್ಲಿ ಎಂದು ಮಹಜರು ಮಾಡುತ್ತಲೆ ಇದ್ದೇನೆ. ಇಂದಿಗು ಸಾಕ್ಷಿ ಸಿಕ್ಕಿಲ್ಲ. ಹಾಗೆ ನೀನು ಕೂಡಾ ಮತ್ತೆ ನನಗೆ ಸಿಗಲೆ ಇಲ್ಲಾ. “ಹೇಳಿ ಹೋಗು ಕಾರಣ ಹೋಗುವ ಮೊದಲು…” ಎಂಬಂತೆ ಯಾರು, ಯಾರಿಗೆ, ಏತಕ್ಕಾಗಿ, ಯಾವ ಕಾರಣವನ್ನು ಹೇಳಬೇಕಿತ್ತು ಎಂದು ಕೆದಕುವ ತಾಳ್ಮೆ ಮತ್ತು ಮನಸ್ಸು ಎರಡು ಇಲ್ಲಾ.  ಅದು ಕೇವಲ ಊರಿಯುವ ಜ್ವಾಲೆಗೆ ತುಪ್ಪ ಸುರಿದಂತೆ ಎಂಬುದು ನನ್ನ ಭಾವ. ಻಻ ಅವಳೇನೋ ದೂರ ಹೋದಾಯ್ತು. ಆದರೆ ನೆನಪು  ಅದು ಯಾರ ಸ್ವತ್ತು. ಬೇಡವೆಂದಾಗ ದೂರ ತಳ್ಳಿ, ಬೇಕೆಂದಾಗ ಬಿಗಿದಪ್ಪಲು.

ಹೊರಗೆ ಮಳೆ ಇನ್ನು ಜಿನುಗುತ್ತಿದೆ. ಹಳೆಯ ನೆನಪುಗಳು ಆಗಾಗ ಬಂದು ಕಾಡುವಂತೆ ಇತ್ತು. ಅಂದು ಹೀಗೆ ಆಗಿತ್ತಲ್ವಾ. ಮಳೆ ಜಿನಗ್ತಾ ಇತ್ತು. ತಂಪು ಹವೆ ಮನೆ, ಮನ ಆವರಿಸ್ತಾ ಇತ್ತು. ಎಂದೋ ಕೇಳಿದ್ದ “ಕೊರೆವ ಮಾಗಿ ಮಂಜು ನೀನು…ಸುಡು ಸುಡುವ ಕೆಂಡ ನಾನು…” ಎಂದು ಹಾಡಿದ್ದೆ.  ಅದಕೆ ನೀನು ಒಳಗಿಂದ ಬಂದು ಬೆಚ್ಚಗಿನ ಬೊಂಡಾ ಬಾಯಿಗೆ ಇಟ್ಟಿದ್ದೆ. ಆಗ ಹೇಳಿದ ಮಾತು, ನನ್ನನ್ನು ಇಷ್ಟು ಸರಿಯಾಗಿ ಯಾರಿಂದಲು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದೆ…

ಪಾ ಹೇಗಿದೆ ಬೊಂಡಾ ಎಂದು 6 ವರ್ಷದ ಮಗ ಮೃಣಾಲ್  ಬಾಯಿಗೆ ಇಡುತ್ತಿದ್ದಂತೆ ಅರ್ಧಾಂಗಿ ನನ್ನ ಮುಂದೆ ಐದಾರು ಬೊಂಡಾ ಇರುವ ತಟ್ಟಯನ್ನೆ ಹಿಡಿದಿದ್ದಳು. ಇಂದು ಮತ್ತೆ ಅದೇ ಮಾತು ನೆನಪಾಯ್ತು. ಆದರೆ ಹೇಳದೆ ವಿಧಿ ಇರಲಿಲ್ಲ.  ಅವೇ ಅಣಿಮುತ್ತುಗಳನ್ನು ಸುರಿಸಿದೆ. ನನ್ನವಳು ಕೆಂಪಾದಳು. ಆದರೆ ಬೊಂಡಾ ಇನ್ನಷ್ಟು ಕೆಂಪಾಗುವವರೆಗು ಕರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳೋಣ ಎಂದು ಕೊಂಡೆ, ಹೊರಗಡೆ ಮಳೆ ನಿಸ್ತೇಜವಾಗಿತ್ತು….

 

ಟ್ಯಾಗ್ ಗಳು:

 
%d bloggers like this: