RSS

ನೀರಾಡಂಬರ ಯೋಗಿಯ ನಿರಪೇಕ್ಷ ನಿರ್ಗಮನ

(ಈಗ್ಗೆ ಮೂರುವರೆ ವರ್ಷಗಳ ಹಿಂದೆ ನನ್ನ ಮೆಚ್ಚಿನ ಕ್ರಿಕೆಟರ್ ರಾಹುಲ್ ದ್ರಾವಿಡ್ ನಿವೃತ್ತಿ ಘೋಷಿಸಿದಾಗ ಬರೆದ ಲೇಖನವಿದು. ಆದ್ರೆ ಅನಿವಾರ್ಯ ಕಾರಣಗಳಿಂದ ಇದನ್ನ ಪೂರ್ಣಗೊಳಿಸುವದಕ್ಕೆ ಆಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ನನ್ನ ಡ್ರಾಫ್ಟ್ ಬಾಕ್ಸ್ನಲ್ಲಿ ಬೆಚ್ಚಗೆ ಕುಳಿತಿದ್ದು ಕಾಣಿಸಿತು. ಹೀಗಾಗಿ ಅಂದು ಬರೆದಿದ್ದನ್ನೆ ಯಾವುದೇ ಬದಲಾವಣೆ ಇಲ್ಲದೆ ಯಥಾವತ್ತಾಗಿ ಪಬ್ಲಿಷ್ ಮಾಡುತ್ತಿದ್ದೇನೆ. ಲೇಖನ ಅಪೂರ್ಣವಾಗಿದೆ, ಕ್ಷಮೆ ಇರಲಿ).

ಅವನಿಗೆ ಕೇವಲ ಆಟ ಒಂದು ವೃತ್ತಿಯಾಗಿರಲಿಲ್ಲ.ಅದನ್ನು ತಪಸ್ಸಿನಂತೆ ಆರಾಧಿಸಿದ. ಕ್ರಿಕೆಟ್ ಎಂಬ ಕ್ರೀಡೆಯನ್ನು ಯಾವುದೇ ವೈಯಕ್ತಿಕ ದಾಖಲೆಗಳಿಗೆ ಬಳಸಿಕೊಳ್ಳದೆ, ಗೆಲುವಿನ ಏಕಮೇವ ಉದ್ದೇಶಕ್ಕೆ ಹೋರಾಡಿದ. ಸತತ 16 ವರ್ಷಗಳ ಕ್ರಿಕೆಟ್ ಬದುಕಿಗೆ ಭಾರವಾದ ಹೃದಯದಿಂದ ಗೌರವಯುತ ವಿದಾಯ ಹೇಳಿದ ದ್ರಾವಿಡ ಕ್ರಿಕೆಟ್ ಗೆ ಒಂದು ಸಜ್ಜನಿಕೆ ಕಲಿಸಿದ ಮಹಾನ್ ಕ್ರೀಡಾಳು ಎಂಬುದು ಅತಿಶಯೋಕ್ತಿ ಪದವಾಗಲಿಕ್ಕಿಲ್ಲ.

ರಾಹುಲ್ ಶರತ್ ದ್ರಾವಿಡ ತನ್ನ 23ನೇ ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ಆಗ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರು. ಕ್ರಿಕೆಟ್ ನ ಸ್ವರ್ಗ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಬ್ಯಾಟು ಹಿಡಿದು ಆಟಕ್ಕೆ ಇಳಿದ ರಾಹುಲ್ ಮುಂದೊಂದು ದಿನ ಭಾರತದ ಗೋಡೆ ಎಂಬ ಜವಾಬ್ದಾರಿಯುತ ಪದದಿಂದ ಬಣ್ಣೀಸಬಹುದಾದಂತಹ ವ್ಯಕ್ತಿಯಾಗುತ್ತಾನೆ ಎಂದು ಯಾರು ಊಹಿಸಿರಲಿಲ್ಲ. ಅಂದು ದ್ರಾವಿಡ್ ಗಳಿಸಿದ್ದು ಬರೋಬ್ಬರಿ 96 ರನ್ಸ್. ಅಂದು ಗಾವಸ್ಕರ್ ಹೇಳಿದ್ದು ಭಾರತಕ್ಕೆ ಒಬ್ಬ ಭರವಸೆಯ ಆಟಗಾರನಾಗಿ ದ್ರಾವಿಡ್ ಬಹುಕಾಲ ತಂಡದಲ್ಲುಳಿಯಬಲ್ಲ ಎಂಬ ಮಾತುಗಳನ್ನಾಡಿದ್ದರು. ಅದರ ಮುಂದಿನ ಇತಿಹಾಸ ಈಗ ರಾಹುಲ್ ನಿವೃತ್ತಿ ಘೊಷಿಸುವ ಮೂಲಕ ಎಲ್ಲೆಡೆ ಮೆಲುಕು ಹಾಕಲಾಗುತ್ತಿದೆ.

ಕ್ರಿಕೆಟ್ ನ ಮರೆಯದ ಮಾಣಿಕ್ಯ

ಕ್ರಿಕೆಟ್ ನ ಮರೆಯದ ಮಾಣಿಕ್ಯ

ಆದರೆ ದ್ರಾವಿಡ್ ನ ಕಲಾತ್ಮಕ ಆಟವನ್ನ ಮೊದ, ಮೊದಲು ತೆಗಳಿದವರೆ ಹೆಚ್ಚು ಜನ. ಇಂದು ಗೋಡೆ. Mr.dependent ಎಂದೆಲ್ಲಾ ಬಣ್ಣೀಸುವವರು ಅಂದು ಇದೇ ದ್ರಾವಿಡ್ ನ  ನಿತ್ರಾಣ ಎಂದು ಮೂಗು ಮುರಿದಿದ್ದರು. ಅದು ಕ್ರಿಕೆಟ್ ಒಂಡೇ ಎಡೆಗೆ ವಿಮುಖಗೊಳ್ಳುವ ಪರ್ವಕಾಲ ಎಂದೇ ಹೇಳಬಹುದು. ಅದು ಸಚಿನ್ ನಂತೆ, ಜಡೇಜಾನಂತೆ, ರಾಬಿನ್ ಸಿಂಗ್ ತರಹ ಅಷ್ಟೇ ಏಕೆ ಗಂಗೂಲಿಯಂತೆ ಬೀಡು, ಬೀಸಾಗಿ ಬ್ಯಾಟ್ ಬೀಸುವವರೆಗೆ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತಿತ್ತು. ಆದರೆ ದ್ರಾವಿಡ್ ಎಂದರೆ ಕೇವಲ ಟೆಸ್ಟ್ ಗೆ ಮಾತ್ರ ಸೀಮಿತ ಎಂಬ ಅಭಿಮತ ಎಲ್ಲರದ್ದಾಗಿತ್ತು. ಅವರ ತಾಳ್ಮೆಯ ಆಟ, ಕಲಾತ್ಮಕ ಹೊಡೆತಗಳು,ಒಂದೊಂದೆ ರನ್ ಗಳ ಮೂಲಕ ಇನ್ನಿಂಗ್ಸ್ ಕಟ್ಟುವ ಛಾತಿ ಯಾರೊಬ್ಬರಿಗು ಇಷ್ಟವಾಗುತ್ತಿರಲಿಲ್ಲ. ದ್ರಾವಿಡ್ ಬಂದ ಎಂದರೆ Entertainment ಮುಗಿಯಿತು ಎಂದು ಟಿವಿ ಬಿಟ್ಟು ಎದ್ದು ಹೋಗುತ್ತಿದ್ದರು. ಆದರೆ ದ್ರಾವಿಡ್  ಇದೆಲ್ಲಾ ಗೊತ್ತಿದ್ದರು ಅವರು ಎಂದು ಅಸಂಪ್ರದಾಯಿಕ ಹೊಡೆತಗಳಿಗೆ ಮುಂದಾಗಲಿಲ್ಲ. ತಮ್ಮ ನೈಜ ಆಟದಿಂದ ವಿಮುಖರಾಗಲಿಲ್ಲ. ಹಾಗಂತ ದ್ರಾವಿಡ್ ತಮಗೆ ಭರ್ಜರಿ ಹೊಡೆತ ಹೊಡೆಯುವದಕ್ಕು ಬರುತ್ತದೆ ಎಂಬುದನ್ನು ಕಲಾತ್ಮಕ ಶೈಲಿಯಲ್ಲಿಯೆ ಆಡಿ ಪ್ರಚುರ ಪಡಿಸಿದ ಅಪರೂಪದ ಆಟಗಾರ.

ಸಜ್ಜನ, ಸಂಭಾವಿತ ಎಂದೆಲ್ಲ ಬಣ್ಣಿಸುವ ದ್ರಾವಿಡ್ ಒಮ್ಮೆ ಚೆಂಡು ವಿರೂಪಗೊಳಿಸಿದ ಆಪಾದನೆಗೆ ಒಳಗಾಗಿದ್ದರು ಎಂದು ಕೇಳಿದರೆ ನಂಬಲಸಾಧ್ಯ ಎಂದೆನಿಸುವುದು ಸುಳ್ಳಲ್ಲ. ಆದರೆ ಇದು ಉದ್ದೇಶಪೂರ್ವಕ ಕಾರ್ಯ ಅಲ್ಲದಿದ್ದರೂ, ಮ್ಯಾಚ್ ರೆಫ್ರಿ ವಿಧಿಸಿದ ದಂಡವನ್ನು ತೆರುವುದು ತಪ್ಪಲಿಲ್ಲ. ಹಾಗೆಯೇ ಸಚಿನ್ ಅವರು 196 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೆರ್ಡ್ ಮಾಡಿಕೊಂಡು ದ್ವಿಶತಕ ತಪ್ಪಿಸಿದರು ಎಂಬ ಆಪಾದನೆಗೊಳಗಾಗಿದ್ದರು. ಇದನ್ನು ಹೊರತು ಪಡಿಸಿದರೆ ದ್ರಾವಿಡ್ ಹತ್ತಿರ ಯಾವುದೇ ವಿವಾದದ ಗುಂಜು ಸುಳಿಯಲಿಲ್ಲ.

ತಂಡದಲ್ಲಿ ಎಲ್ಲ ರೀತಿಯಿಂದಲೂ ಸೇವೆ ಸಲ್ಲಿಸಿದ ಏಕೈಕ ಆಟಗಾರನೆಂದರೆ ಅದು ರಾಹುಲ್ ಮಾತ್ರ ಎಂಬುದು ನನ್ನ ಅನಿಸಿಕೆ. ಅವರು ಎಲ್ಲ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಎಲ್ಲ ಫೀಲ್ಡ್ ಪಾಯಿಂಟ್ ಗಳಲ್ಲಿ

Advertisements
 

ಟ್ಯಾಗ್ ಗಳು: , , ,

ಕಷ್ಟ ಮೆಟ್ಟಿ ನಿಂತು ಯಶಸ್ಸಿನ ಬೆಟ್ಟ ಹತ್ತಿದವಳು ಲಿಜ್

ಲಿಜ್ ಮುರ್ರೆ. ಹುಟ್ಟಿದ್ದು ಸೆಪ್ಟಂಬರ್ ೨೩, ೧೯೮೦ರಂದು. ನ್ಯೂಯಾರ್ಕ್‌ನ ಬ್ರೋಂಕ್ಸ್ ಪಟ್ಟಣದಲ್ಲಿ. ಕಣ್ಣಬಿಟ್ಟಾಗ ಕಂಡಿದ್ದು ಕತ್ತಲಿನಲ್ಲಿದ್ದ ಬದುಕು. ಕೊನೆಗಾಣವೆನೋ ಎಂದೆನಿಸುವ ಸಮಸ್ಯೆಗಳು. ಯಾವ ಬಾಲ್ಯ ಬದುಕಿನುದ್ದಕ್ಕು ನೆಮ್ಮದಿಯ ನೆರಳಾಗಿ ಹಿಂಬಾಲಿಸಬೇಕಿತ್ತೊ, ಅದೇ ಬಾಲ್ಯ ಮರೆಯಾಗದ ಬವಣೆಗಳನ್ನ ಬೆನ್ನಿಗೆ ಕಟ್ಟಿಬಿಡ್ತು. ಆಡಿ, ನಲಿದು ಬೆಳೆಯಬೆಕಿದ್ದ ಕಂದಮ್ಮ ಬೇಡಿ, ಹಸಿದು ಮಲಗುವ ಸ್ಥಿತಿ ಮನೆಯಲ್ಲಿತ್ತು.

ಅಗಿನ್ನು ಅವಳಿಗೆ ಕೇವಲ ಮೂರರ ಆಸು, ಪಾಸು. ಆಗ ಅದೊಂದು ಅರ್ಥವೇ ಆಗದ ಸಂಗತಿ ಅವಳ ಗಮನಕ್ಕೆ ಬಂದಿತ್ತು. ಕೈ ಹಿಡಿದು ನಡೆಸಬೇಕಾದ ಅಪ್ಪ ಅಮ್ಮನೆ, ಹೆಜ್ಜೆ ತಪ್ಪಿ ನಡೆಯುತ್ತಿದ್ದಾರೆ ಎಂಬುದು ಮನವರಿಕೆಯಾಗಿದ್ದು, ಯಾಕಂದ್ರೆ ಅವರಿಬ್ಬರು ಮಾದಕ ವ್ಯಸನಿಗಳಾಗಿದ್ರು. ಅಡುಗೆಮನೆ ಸೇರಿಬಿಡುತ್ತಿದ್ದ ಲಿಜ್ನ ಅಪ್ಪ ಅಮ್ಮ ಮಕ್ಕಳ ಹಸಿವೆಯ ಪರಿವೇ ಇಲ್ಲದಂತೆ ಮಾದಕ ಲೋಕದಲ್ಲಿ ಮುಳುಗಿಬಿಡುತ್ತಿದ್ದರು.

ಲಿಜ್ಳ ತಾಯಿಗೆ ಹುಟ್ಟಿನಿಂದಲೇ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಜೊತೆಗೆ ವಿಪರೀತ ಬಡತನ. ತೀರದ ಸಮಸ್ಯೆಗಳಿಂದ ಪಾರಾಗುವದಕ್ಕೆ ಆಕೆ ಮೊರೆ ಹೋಗಿದ್ದು ಡ್ರಗ್ಸ್‌ನ ಚಟಕ್ಕೆ. ಸಾಲದ್ದಕ್ಕೆ ಮೈಮಾರುವ ದಂಧೆ. ಹೀಗೆ ವೇಶಾವೃತ್ತಿಯಲ್ಲಿದ್ದಾಗ ಸಾಂಗತ್ಯ ಬಯಸಿ ಬಂದವನೆ ಆಕೆಯ ಸಂಗಾತಿ ಆದ.

Featured image

ಲಿಜ್ ಎಂಬ ಛಲದಂಕ ಮಲ್ಲೆ

ಲಿಜ್ ಬೆಳೆದು ದೊಡ್ಡವಳಾಗುತ್ತಿದ್ದಂತೆ ಅವಳಿಗೆ ಮನೆಯ ಸ್ಥಿತಿ ಮೆಲ್ಲನೆ ಅರ್ಥವಾಗುತ್ತಾ ಹೋಯ್ತು. ಕುರುಡು ತಾಯಿಗೆ ಸರ್ಕಾರ ನೀಡುವ ಮಾಸಾಶನಕ್ಕೆ ಮನೆಮಂದಿಯೆಲ್ಲಾ ಬಾಯಿಬಿಟ್ಟು ಕುಳಿತುಕೊಂಡಿರುತ್ತಿದ್ರು. ತಿಂಗಳಿನ ಮೊದಲ ವಾರ ಮನೆಯಲ್ಲೆಲ್ಲ ಹಬ್ಬ. ವಾರ ಕಳೆದ್ರೆ ಸಿಗುತ್ತಿದ್ದದ್ದು ಐಸ್ ಕ್ಯೂಬ್‌ಗಳು, ಟೂಥ್‌ಪೇಸ್ಟ್, ಹಾಳಾದ ಮೊಟ್ಟೆಗಳು. ಮಕ್ಕಳು ಹೊಟ್ಟೆಗಿಲ್ಲದೆ ಪರಿತಪಿಸ್ತಿದ್ರೆ, ಪಾಲಕರು ನಶೆಯ ಪರಕಾಷ್ಠೆಯಲ್ಲಿ ತೇಲಿಹೋಗಿರುತ್ತಿದ್ರು.

ಲಿಜ್ ಅಪ್ಪ ಕದ್ದು ತಂದ ಪುಸ್ತಕದೆಡೆಗೆ ಮಸ್ತಕ ತಿರುಗಿಸಿದ್ದು. ಓದಿನೆಡೆಗೆ ಅವಳಿಗೆ ತೀರದ ಕುತೂಹಲ ಆರಂಭಗೊಂಡುಬಿಡ್ತು. ಈ ಸಮಯದಲ್ಲಿಯೇ ಲಿಜ್ ಅಪ್ಪ ಅಮ್ಮ ಬೇರೆಯಾಗಿಬಿಟ್ರು. ಆಗ ಲಿಜ್ಳ ತಾಯಿಗೆ ಮತ್ತೊಬ್ಬ ವ್ಯಕ್ತಿಯ ಪರಿಚಯವಾಯ್ತು. ಹೊಸ ಬದುಕು ಅವನೊಡನೆ ಪ್ರಾರಂಭವಾದ್ರು, ಹಳೆಯ ಚಟಗಳು ದೂರಸರಿದಿರಲೇಯಿಲ್ಲಾ. ಲಿಜ್ಗೆ ತಂದೆಯ ಜೊತೆಗಿರುವುದು ತುಸು ಕಷ್ಟವೇ ಆಗಿ ಮತ್ತೆ ಅಮ್ಮನೆಡೆಗೆ ತಿರುಗಿ ಬಂದುಬಿಟ್ಟಳು.

ಆದ್ರೆ ಹೊಸ ಅಪ್ಪನ ಕಟ್ಟುನಿಟ್ಟು ಲಿಜ್ಳಿಗೆ ಉಸಿರುಗಟ್ಟಿಸುತ್ತಿತ್ತು. ದಿನದ ಅಧಿಕ ಸಮಯವನ್ನ ಆಕೆ ಸ್ನೇಹಿತರ ಜೊತೆಗೆ ಕಳೆಯುತ್ತಿದ್ದಳು. ಹಗಲು ಕಳೆದು ಕತ್ತಲು ಆವರಿಸಿದ್ರೆ ಲಿಜ್ ರಾತ್ರಿ ಪಾಳೆಯ ಟ್ರೇನ್‌ನಲ್ಲೋ, ಪಾರ್ಕಿನ ಬೆಂಚಿನ ಮೇಲೆಯೋ ಮಲಗಿ ನಿದ್ರೆಗೆ ಜಾರುತ್ತಿದ್ದಳು. ಬದುಕು ಅಕ್ಷರಶಃ ಬೀದಿಗೆ ಬಿದ್ದುಬಿಟ್ಟಿತ್ತು. ಅವಳು ಮನೆಯ ಕಡೆ ಹೆಜ್ಜೆ ಹಾಕುವುದನ್ನೆ ಮರೆತು ಬಿಟ್ಟಿದ್ದಳು. ಈ ಸಮಯದಲ್ಲಿಯೇ ಲಿಜ್ಳ ತಾಯಿ ಏಡ್ಸ್‌ಗೆ ಬಲಿಯಾಗಿಬಿಟ್ಟಳು.

ತಾಯಿ ತೀರಿಕೊಂಡ ಮೇಲೆ ಬದುಕು ಮತ್ತಷ್ಟು ತಲ್ಲಣಗೊಂಡಿತು. ಆದ್ರೆ ಕಡಿತಗೊಂಡ ಓದನ್ನು ಹೇಗಾದ್ರು ಮಾಡಿ ಮುಂದುವರೆಸಬೇಕು ಎಂಬ ಛಲ ಚಿಗುರೊಡೆದುಬಿಡ್ತು. ಲಿಜ್ಳನ್ನ ಓದಿಸಲು ಪೆರ್ರಿ ವೈನರ್ ಎಂಬ ವ್ಯಕ್ತಿ ಸಹಾಯಕ್ಕೆ ಮುಂದಾದ. ಅಲ್ಲಿಂದ ಲಿಜ್ಳ ಬದುಕು ಮೆಲ್ಲನೆ ಗರಿಗೆದರಲಾರಂಭಿಸಿತು.

ಲಿಜ್ ತರಗತಿಗೆ ಅತೀ ಹೆಚ್ಚಿನ ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿಬಿಟ್ಟಳು. ನಾಲ್ಕು ವರ್ಷದ ಹೈಸ್ಕೂಲ್ ಎರಡೇ ವರ್ಷಕ್ಕೆ ಮುಗಿದು ಬಿಟ್ಟಿತ್ತು. ಮೊಟ್ಟ ಮೊದಲ ಬಾರಿಗೆ ಲಿಜ್ ಬೋಸ್ಟನ್‌ಗೆ ಕರೆದುಕೊಂಡು ಹೋಗುವ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿ ಆಯ್ಕೆಯಾಗಿಬಿಟ್ಟಳು.

ಹಾರ್ವರ್ಡ್‌ನ ಹುಲ್ಲು ಹಾಸಿನ ಮೇಲೆ ಪಾದ ಇಟ್ಟವಳಿಗೆ ನಾನು ಮುಂದೆ ಓದುವುದಾದ್ರೆ ಅದು ಇಲ್ಲಿಯೇ ಎಂಬ ಆಸೆ ಗಟ್ಟಿಯಾಗಿಬಿಡ್ತು. ಆದ್ರೆ ಹಾರ್ವರ್ಡ್‌ನಲ್ಲಿ ಓದುವುದು ಅವಳಿಗೆ ಅಕ್ಷರಶಃ ಗಗನ ಕುಸುಮವಾಗಿತ್ತು. ಒಪ್ಪತ್ತಿನ ಊಟಕ್ಕೆ ಪರಿತಪಿಸುತ್ತಿರುವವಳಿಗೆ ಹಾರ್ವರ್ಡ್‌ನ ಹಾದಿ ಏಳು ಬೆಟ್ಟ ಏರಿದಷ್ಟೆ ದುರ್ಭರವಾಗಿತ್ತು.

ಆದ್ರೆ ಅರ್ಜಿ ಕೈಗೆತ್ತಿಕೊಂಡವಳಿಗೆ ಗೋಚರಿಸಿದ್ದು ಬದುಕಿನ ಕಷ್ಟ ಹೇಳಿಕೊಳ್ಳಬೇಕಾದ ಪುಟ್ಟದೊಂದು ಪ್ರಭಂಧ ಬರೆಯಬೇಕಾಗಿದ್ದು. ಪೆನ್ ಕೈಗೆತ್ತಿಕೊಂಡ್ರೆ ಹಾಳೆಯ ಮೇಲೆ ಅಕ್ಷರಗಳ ಮಹಾಪೂರವೇ ಹರಿದುಬಿಡ್ತು. ನ್ಯೂಯಾರ್ಕ್‌ಟೈಮ್ಸ್, ಬಡತನದಲ್ಲಿ ನಲುಗುತ್ತಿರುವ ಪ್ರತಿಭಾವಂತರಿಗೆ ಹಾರ್ವ್‌ರ್ಡ್‌ನಲ್ಲಿ ಓದುವುದಕ್ಕೆ ೧೨ ಸಾವಿರ ಡಾಲರ್‌ಗಳನ್ನ ನೀಡುತ್ತಿತ್ತು. ಆದ್ರೆ ಇರುವ ಆರು ಸ್ಕಾಲರ್‌ಶಿಪ್‌ಗೆ ಆಯ್ಕೆಬಯಸಿದವರು ಮೂರು ಸಾವಿರ ಹೈಸ್ಕೂಲ್ ವಿದ್ಯಾರ್ಥಿಗಳು.

ಕೊನೆಗು ಆ ಸಮಯ ಬಂದೇಬಿಡ್ತು. ನ್ಯೂಯಾರ್ಕ್‌ಟೈಮ್ಸ್‌ನ ಸ್ಕಾಲರ್‌ಶಿಪ್ ಲಿಜ್ಳನ್ನ ಅರಸಿ ಬಂದೇಬಿಡ್ತು. ಲಿಜ್ ೨೦೦೯ರಲ್ಲಿ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಹಾರ್ವರ್ಡ್‌ನಿಂದ ಪದವಿ ದಕ್ಕಿಸಿಕೊಂಡುಬಿಟ್ಟಳು. ನಿರ್ಗತಿಕಳಾದವಳು ನಿಬ್ಬೆರಗಾಗುವಂಥಹ ಸಾಧನೆ ಮಾಡಿಬಿಟ್ಟಳು. ಖುದ್ದು ಲಿಜ್ ತನ್ನ ಯಶೋಗಾಥೆಯನ್ನ ಪುಸ್ತಕವಾಗಿ ಹೊರತಂದ್ರೆ ಬಿಸಿದೋಸೆಯಂತೆ ಖರ್ಚಾಗಿ ಅದು ಕೂಡಾ ದಾಖಲೆಯ ಪುಟ ಸೇರಿಬಿಡ್ತು. ಅದೊಮ್ಮೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದವಳು, ಇಂದು ಸಂತಸದ ಅಲೆಯಲ್ಲಿ ತೇಲುತ್ತಿದ್ದಾಳೆ. ಕಷ್ಟಗಳು ಎದುರಾದವೆಂದು ಬದುಕಿಗೆ ಬೆನ್ನುತೋರಿಸದೆ ದಿಟ್ಟವಾಗಿ ಎದುರಿಸಿ ಗಟ್ಟಿಗಿತ್ತಿ ಎಂದು ಲೋಕಕ್ಕೆಲ್ಲಾ ಸಾರಿಬಿಟ್ಟಳು.

 

ಟ್ಯಾಗ್ ಗಳು: ,

ಬರವಣಿಗೆಗೆ ಬರ ಇಲ್ಲದಿದ್ದರೂ, ಇತ್ತ ಬರುವದಕ್ಕೆ ಆಗಿರಲೇ ಇಲ್ಲ.

ಹತ್ತಿರ, ಹತ್ತಿರ ಮೂರು ವರ್ಷಗಳು ಆಗುತ್ತಾ ಬಂತು. ನನ್ನ ಬ್ಲಾಗ್ ಗೆ ಒಂದೇ ಒಂದು ಬರವಣಿಗೆಯನ್ನು ಹಾಕಲಿಕ್ಕೆ ಆಗಲಿಲ್ಲ. ಈ ನಡುವೆ ಮೂರು, ಮೂರು ಚಾನೆಲ್ಗಳಿಗೆ ಭರಪೂರ ಬರವಣಿಗೆ ಕೃಷಿ ಮಾಡಿದ ನನಗೆ, ನನ್ನದೆ ಬ್ಲಾಗ್ ಗೆ ಒಂದೇ, ಒಂದು ಅಂಕಣ ಬರೆಯಲಿಕ್ಕೂ ಆಗಲಿಲ್ಲ. ಯಾಕೋ ಬರೆಸಿಕೊಳ್ಳುವ ಅದೃಷ್ಟ ಬ್ಲಾಗ್ ಗೆ ಇರಲಿಲ್ಲವೋ, ಅಥವಾ ಬರೆಯುವ ತೀವ್ರತೆ ನನ್ನಲ್ಲಿ ಹುಟ್ಟಲಿಲ್ಲವೋ ತಿಳಿಯದು. ಬರೋಬ್ಬರಿ 32 ತಿಂಗಳಿನಿಂದ ಬ್ಲಾಗ್ ಒಂದೇ ಒಂದು ಹೊಸ ಲೇಖನವಿಲ್ಲದೆ ಭಣಗುಟ್ಟುತ್ತಿದೆ. ಮನಸ್ಸು ಮಾಡಿದ್ರೆ ಬರೆಯುವದಕ್ಕೆ ತಲೆಯಲ್ಲಿ ಲೆಕ್ಕವಿಲ್ಲದಷ್ಟು ವಿಷಯಗಳು ಗಿರಕಿ ಹೊಡೆಯುತ್ತಿವೆ. ಆದರೆ ಅದೆಂಥದ್ದೊ ಜಾಢ್ಯ ಬರೆಯುವದಕ್ಕೆ ಪ್ರೆರೇಪಿಸುತ್ತಲೇ ಇರಲಿಲ್ಲ. ತುಂಬಾ ಆಸ್ಥೆಯಿಂದ ಪ್ರಾರಂಭಿಸಿದ ಕೆಲಸವೊಂದು ಪದೇ, ಪದೇ ಅರ್ಧಕ್ಕೆ ಬೋರಲು ಬೀಳುತ್ತಿದೆ. ಆದ್ರೆ ಇನ್ನು ಮುಂದಾದರು ತಿಂಗಳಿಗೆ ಒಂದು ಲೇಖನವನ್ನಾದ್ರು ಬ್ಲಾಗ್ ನಲ್ಲಿ ಪೋಸ್ಟ್ ಮಾಡಲೇಬೇಕು ಎಂದು ನಿರ್ಧರಿಸಿದ್ದೇನೆ. ಸಮೃದ್ಧಿ ಸಿಗದಿದ್ದರೂ ಅಡ್ಡಿಯಿಲ್ಲ, ಬರ ವಕ್ಕರಿಸದಿದ್ದರೆ ಅಷ್ಟೇ ಸಾಕು. ಅದಕ್ಕೆ  ಛಲದಂಕ ಮಲ್ಲೆಯ ಪ್ರೇರಣೆಯ ಜೀವನಗಾಥೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುವದರೊಂದಿಗೆ  ಮತ್ತೆ ಪಯಣವನ್ನ ಮುಂದುವರೆಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ……..

 
ನಿಮ್ಮ ಟಿಪ್ಪಣಿ ಬರೆಯಿರಿ

Posted by on ಜೂನ್ 13, 2015 in ಅವಿಭಾಗೀಕೃತ

 

ಇಲ್ಲಿ ‘ಭರ’ಪೂರ ವನವಾಸ ; ಅಲ್ಲಿ ಭರ್ಜರಿ ಪ್ರವಾಸ

ಇಂತಹ ನಾಯಕರನ್ನು ಚುನಾಯಿಸಿದ್ದು ನಮ್ಮ ದುರಂತವೋ ಅಥವಾ ಇವರು ಆಯ್ಕೆಯಾಗಿದ್ದೆ ನಮ್ಮ ದುರಾದೃಷ್ಟವೋ ದೇವರೆ ಬಲ್ಲ. ಆದರೆ ಕನಿಷ್ಠ ಹೊಣೆಗಾರಿಕೆಯನ್ನು ಮರೆತು ಮನಸೋ ಇಚ್ಛೆ ವರ್ತಿಸುವವರು ನಮ್ಮ ನಡುವಿನ ಚುನಾಯಿತ ಪ್ರತಿನಿಧಿಗಳು ಎಂದು ಹೇಳಿಕೊಳ್ಳ ಬೇಕಾಗಿರುವುದು ಈ ನಾಡಿನ ದೌರ್ಭಾಗ್ಯ..

ಎಲ್ಲ ಅಡೆತಡೆಗಳನ್ನು ಮೀರಿ 13 ಜನ ಶಾಸಕರು ವಿದೇಶ ಪ್ರವಾಸದಲ್ಲಿ ವಿಹರಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಆದಿಯಾಗಿ ಮಾಧ್ಯಮ, ಸಾರ್ವಜನಿಕ ವಲಯದಿಂದಲೂ ತೀವ್ರ ವಿರೊಧ ವ್ಯಕ್ತವಾದರು ಕೂಡಾ ಇವರ ಪ್ರವಾಸಕ್ಕೆ ಯಾವುದು ಅಡ್ಡ ‘ಬರ’ಲಿಲ್ಲ. ಇಷ್ಟಕ್ಕೂ ಈ ಶಾಸಕರು ವಿದೇಶ ಸುತ್ತಿ ಬಂದು ಕಡಿದು ಕಟ್ಟೆ ಹಾಕುವುದು ಏನು ಎಂಬುದು ಮಾತ್ರ ಅನುಮತಿ ಇತ್ತ ಶೆಟ್ಟರ್ ಮತ್ತು ಬೋಪಯ್ಯ ಆಣೆಯಾಗಿ ಯಾರಿಗು ಗೊತ್ತಿಲ್ಲ. ಕಾರಣ ಪ್ರತಿ ಸರ್ಕಾರದಲ್ಲು ಒಂದು ವಿದೇಶ ಪ್ರವಾಸ, ಎರಡು ದೇಶಿ ಪ್ರವಾಸಗಳಿಗೆ ಹೋಗಲು ಅವಕಾಶವಿದ್ದಿದ್ದರಿಂದ ತಮ್ಮ ಕೋಟಾ ಯಾಕೆ ಸುಖಾಸುಮ್ಮನೆ ಕಳೆದುಕೊಳ್ಳಬೇಕು ಎಂದು ಶಾಸಕರು ಇದನ್ನು ಅವ್ಯಾಹತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವೇ ಈಗ ‘ಸಾರ್ವಜನಿಕ ಉದ್ದಿಮೆಗಳ ಸಮಿತಿ’ಯ ಸದಸ್ಯರು ದಕ್ಷಿಣ ಅಮೆರಿಕಾಕ್ಕೆಹಾರಿದ್ದು.

ಇದು ಅಪರಾಧವಾಗಿರಲಿಕ್ಕಿಲ್ಲ, ಆದರೆ ಇಂತಹ ಹೊಣೆಗೇಡಿ ವರ್ತನೆಯ ಅಗತ್ಯವಿತ್ತೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ರಾಜ್ಯದಲ್ಲಿ ಹಿಂಗಾರು ಕೈಕೊಟ್ಟು ಭೀಕರ ಬರಗಾಲ ತಾಂಡವವಾಡ್ತಿದೆ. ಜನ ಕೂಲಿ ಸಿಗದೆ ಪಟ್ಟಣದೆಡೆಗೆ ಗುಳೆ ಹೋಗ್ತಿದ್ದಾರೆ. ರೈತರು ಪಾಳು ಬಿದ್ದ ಹೋಲಕ್ಕೆ ಹನಿ ನೀರಾದರು ಚೆಲ್ಲಲಿ ಎಂದು ಮೋಡಗಳೆಡೆಗೆ ನೆಟ್ಟ ಕಣ್ಣು ಮಿಟುಕಿಸದೆ ನೋಡುತ್ತಿರುವಾಗ ನಮ್ಮ ಜನಪ್ರತಿನಿಧಿಗಳಿಗೆ ವಿದೇಶದ ಮೋಹ ಬೇಕಿತ್ತಾ? ಯಾವನಿಗ್ಗೊತ್ತು…! ಬರಗಾಲ ಕಾಮಗಾರಿ, ನರೇಗಾ ಅಂತ ಎನೇನೋ ಯೋಜನೆಗಳು ಜನ್ಮ ತಾಳುತ್ತವೆ. ಆದರೆ ಅವೆಲ್ಲ ಎಷ್ಟು ಸಾದ್ಯಂತವಾಗಿ ಉಸಿರಾಡುತ್ತಿವೆ ಎಂಬುದು ದೊಡ್ಡ ಯಕ್ಷಪ್ರಶ್ನೆ. ಕೂಲಿಗಾಗಿ ಕಾಳು ಅಂತಾರೆ. ಆದರು ಹೊಟ್ಟೆಗಿಲ್ಲದೆ ಜನ ಒದ್ದಾಡುವುದು ತಪ್ಪಿಲ್ಲ. ನೂರಾರು ಆಳಕ್ಕೆ ಬೊರ್ ವೆಲ್ ಕೊರೆದರು ಹನಿ ನೀರು ಜಿನುಗುವುದಿಲ್ಲ. ಕೆರೆಗಳಲ್ಲಿ ಹೂಳು ತುಂಬಿಕೊಂಡು ಬೊಗಸೆ ನೀರು ನಿಲ್ಲುವುದು ದುಸ್ತರ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವಾಗ ಇನ್ನು ಅಂತರ್ಜಲದ ಮಾತೇ ಉದ್ಭವವಾಗದು. ಹೇಳುತ್ತಾ ಹೋದರೆ ಸಮಸ್ಯೆಗಳಿಗೆ ಬರವೇ ಇಲ್ಲಾ. ಆದರೆ ನಮ್ಮ ನಾಯಕರ ವಿವೇಚನೆಗೇಕೆ ಇಷ್ಟೊಂದು ಬರ ಆವರಿಸಿದೆಯೋ ಬಿಡಿಸದಾಗದು.

ನಾಡಲ್ಲಿ ಬರ... ಶಾಸಕರ ವಿದೇಶ ಸಂಚಾರ

ನಾಡಲ್ಲಿ ಬರ… ಶಾಸಕರ ವಿದೇಶ ಸಂಚಾರ
ಕೃಪೆ:daijiworld

ನಾಡಿನ ಪ್ರಖ್ಯಾತ ಸಾಹಿತಿ ಕಂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 13 ಜನ ಮಹಾನ್ ಘನಂದಾರಿ ಕೆಲಸಕ್ಕೆ ಹೊರಟವರಂತೆ ನಾಡಿನ ಜನರ ಸಮಸ್ಯೆಗಳನ್ನೆಲ್ಲಾ ಎಡಗಾಲಲ್ಲಿ ಒದ್ದು, ಬಲು ಸಂಭ್ರಮದಿಂದ ವಿಮಾನದಲ್ಲಿ ಬಲಗಾಲಿಟ್ಟು ವಿದೇಶಕ್ಕೆ ಹಾರಿದ್ದಾರೆ. ಆ ಸಮಯದಲ್ಲಿ ಮಾಧ್ಯಮಗಳಿಗೆ ಒಬ್ಬ ಶಾಸಕ ಮಹಾಶಯರು ಹೇಳಿದ್ದು, “ರೂ. 6 ಲಕ್ಷದಿಂದ ಯಾವ ಬರಗಾಲ ನೀಗಿಸಲು ಆಗಲ್ಲ. ಜನ ಬರಗಾಲ ಇದೆ ಅಂತ ಊಟಾ, ಮದುವೆ ನಿಲ್ಲಿಸಿದ್ದಾರಾ” ಎಂದು ಬರ ಪರಿಸ್ಥಿತಿಯನ್ನು ಬಲು ಸಮರ್ಥವಾಗಿ ವಿಶ್ಲೇಷಿಸಿದರು. ಸ್ವಾಮಿ ತಮ್ಮ ಅವಗಾಹನೆಗೆ ಇರಲಿ ಎಂದು ಈ ಮಾತು, 6 ಲಕ್ಷ ರೂಪಾಯಿ ಬರಕ್ಕೆ ತುತ್ತಾದ ಅನ್ನದಾತನ 8-10 ವರ್ಷಗಳ ವಾರ್ಷಿಕ ವರಮಾನ. ಕೆಲವು ಪರಿಸ್ಥಿತಿಯಲ್ಲಿ ಇದು 15 ವರ್ಷಗಳಿಗಾದರು ಅಚ್ಚರಿಯಿಲ್ಲ. ಹಾಗಿರುವಾಗ ತಮಗೆ 6 ಲಕ್ಷ ರೂಪಾಯಿ ಕೇವಲವಾಗಿ ಕಂಡಿದ್ದು ವಿಪರ್ಯಾಸ. ಟ್ಯಾಂಗೋ ಡ್ಯಾನ್ಸು, ಮಾಚು ಪೀಕು ಪರ್ವತವೇ ತಲೆಯಲ್ಲಿ ತುಂಬಿಕೊಂಡಿರುವವರಿಗೆ ಬಡವನ ಒಂದೊಪ್ಪತ್ತಿನ ಊಟಕ್ಕಾಗಿನ ತತ್ವಾರ ಅರ್ಥವಾಗುವುದಾದರು ಹೇಗೆ ಸಾಧ್ಯ ಬಿಡಿ.

ಇನ್ನು ಈ ಶಾಸಕೋತ್ತಮರ ಅಧ್ಯಯನದ ವಿಷಯಕ್ಕೆ ಬರೋಣ. ಇಲ್ಲಿಯವರೆಗೆ ಅದೆಷ್ಟು ಶಾಸಕರು ವಿದೇಶ ಪ್ರವಾಸ ಕೈಗೊಂಡು ವರದಿ ಒಪ್ಪಿಸಿದ್ದಾರೆ ಮತ್ತು ಅವುಗಳ ಅನುಷ್ಠಾನವಾಗಿದೆ ಎಂಬುದೆ ವಿಶೇಷವಾಗಿ ಅಧ್ಯಯನ ಮಾಡಬೇಕಾದ ವಿಷಯವಾಗಿದೆ. ಕೇವಲ ಸರ್ಕಾರದ ಹಣದಲ್ಲಿ ಮೊಜು ಮಾಡುವುದಷ್ಟೆ ಈ ಪ್ರವಾಸದ ಒನ್ ಲೈನ್ ಅಜೆಂಡಾ ಎಂದರೆ ತಪ್ಪಲ್ಲ. ಇಲ್ಲಿಯವರೆಗು ನಿರ್ದಿಷ್ಟವಾಗಿ ಯಾವ ಅಧ್ಯಯನಕ್ಕೆಂದು ಈ 13 ಶಾಸಕರು ವಿದೇಶಕ್ಕೆ ಹೊರಟರು ಎಂಬುದು ಎಲ್ಲಿಯೂ ಕೇಳಿ ಬರುತ್ತಿಲ್ಲ. ಕೊನೆ ಪಕ್ಷ ಮಾಧ್ಯಮಗಳಿಂದ ಇಷ್ಟೊಂದು ಟೀಕೆಗಳು ಬಂದ ನಂತರವಾದರು ವಿಮಾನ ನಿಲ್ದಾಣದಲ್ಲಿ ಈ ಶಾಸಕರು ತಮ್ಮ ವಿದೇಶ ಪ್ರವಾಸದ ಉದ್ದೇಶ ಮತ್ತು ಅಧ್ಯಯನದ ವಸ್ತು ವಿಷಯವನ್ನು ವಿವರಿಸಿ ಅದನ್ನು ಸಮರ್ಥಿಸಿಕೊಳ್ಳಬಹುದಿತ್ತಲ್ಲವೆ. ಯಾಕೆ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಇಷ್ಟೊಂದು ಟೀಕೆಗೆ ಗ್ರಾಸವಾದರು. ಅಸಲಿಯತ್ತು ಏನೆಂದರೆ ಮುಖ್ಯವಾಗಿ ಹೋಗುವುದಕ್ಕೆ ಕಾರಣವೇ ಇಲ್ಲಾ. ಅಧ್ಯಯನ ಎಂಬುದು ಕೇವಲ ನೆಪವಷ್ಟೆ. ಇಷ್ಟಕ್ಕು ಅಧ್ಯಯನಕ್ಕೆ ಹೋಗುವವರ ಜೊತೆ ಹೆಂಡತಿ, ಮಕ್ಕಳ ಅಗತ್ಯವಾದರು ಏನಿತ್ತು. ಹೋಗಲಿ ಇವರ ಅಧಿಕೃತ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ ಅಧ್ಯಯನದ ವಾಸನೆ ಎನಾದರು ಬಡಿಯುತ್ತಾ ಎಂದು ಮೂಸಿದರೆ ಅಲ್ಲಿ ಬರೀ ವಿದೇಶಿ ಐಷಾರಾಮಿ ಹೋಟೆಲ್ ಗಳ ಘಮಲು. ಇದು ನಮ್ಮ-ನಿಮ್ಮೆಲ್ಲರ ದುರಾದೃಷ್ಟ ಮತ್ತು ಎಂದಿಗು ತೊಲಗದ ಅನಿಷ್ಟ.

ಸರ್ಕಾರ ಖಡಾಖಂಡಿತವಾಗಿ ವರ್ತಿಸಿದ್ದರೆ ಇಂದು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವಂತಹ ಸನ್ನವೇಶ ಸೃಷ್ಟಿಯಾಗುತ್ತಿರಲಿಲ್ಲ. ಇಷ್ಟಕ್ಕು ಸರ್ಕಾರದ ಬೊಕ್ಕಸದಿಂದ ಎತ್ತಿ ದುಡ್ಡು ಕೊಟ್ಟು ವಿದೇಶ ಪ್ರವಾಸ ಮಾಡಿಸುವ ದುರ್ದು ಯಾರಿಗೂ ಇರಲಿಲ್ಲ. ಅದ್ಯಾಕೋ ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಜನ ಮೆಚ್ಚುಗೆಯ ನಿರ್ಧಾರ ತೆಗೆದು ಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಂತು ಸ್ಪಷ್ಟ. ಆದರೆ ಈ ಎಲ್ಲ ಶಾಸಕರ ವಿದೇಶಿ ವೆಚ್ಚವನ್ನು ಅವರ ಜೇಬಿನಿಂದಲೇ ಭರಿಸುವಂತೆ ಮಾಡಿ ಆದ ಅವಮಾನವನ್ನು ಕೊಂಚ ಮಟ್ಟಿಗಾದರು ತಗ್ಗಿಸುವ ಧೈರ್ಯ ಸರ್ಕಾರ ತಾಳಲಿ ಎಂಬುದೆ ಎಲ್ಲ ಜನರ ಆಶಯ. ಆದರೆ ಇವೆಲ್ಲವುಗಳ ಮಧ್ಯೆ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ಇನ್ನು ಐದಾರು ತಿಂಗಳಿಗೆ ಚುನಾವಣೆ ಘೋಷಣೆಯಾಗಿ ಮತ್ತೆ ಈ ಎಲ್ಲ ಮಹಾನುಭಾವರು ಮತ ಕೇಳಲು ನಮ್ಮ ಮುಂದೆ ಬಂದು ನಿಲ್ಲುತ್ತಾರೆ. ಒಂದು ವೇಳೆ ಮತ್ತೆ ಇವರೆ ಶಾಸಕರಾಗಿ ಚುನಾಯಿತರಾದರೆ…… ಶಂಭೋ…. ಶಂಕರಾ…

 
1 ಟಿಪ್ಪಣಿ

Posted by on ಸೆಪ್ಟೆಂಬರ್ 8, 2012 in ರಾಜ್ಕೀಯ

 

ಟ್ಯಾಗ್ ಗಳು:

ಪೇಜ್ 3 ಜರ್ನಲಿಸ್ಟ್ ಗಳ ತಿಳುವಳಿಕೆಯ “ಬರ”

ಇಂಗ್ಲೀಷ್ ಪತ್ರಿಕೆಗಳಿಗೆ ಅಂಟಿದ ಈ ಜಾಢ್ಯ ಅದೆಂದು ಗುಣಮುಖವಾಗುತ್ತದೆಯೋ ದೇವರೆ ಬಲ್ಲ. ಇತ್ತೀಚಿನ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಕುರಿತಾದ ತಿಳುವಳಿಕೆ ಅದೆಷ್ಟಿದೆ ಎಂಬುದು ಆಗಾಗ ಜಗಜ್ಜಾಹೀರಾಗುತ್ತಿರುತ್ತದೆ. ಅದರ ಒಂದು ಸ್ಯಾಂಪಲ್ ಇಲ್ಲಿದೆ ನೋಡಿ. ರಾಜ್ಯದ ಅಗ್ರಗಣ್ಯ ಆಂಗ್ಲ ದಿನಪತ್ರಿಕೆ ಎಂಬ ‘ಹೆಗ್ಗಳಿಕೆ’ ಹೊಂದಿದವರ ಇಂದಿನ ಪುರವಣಿಯಲ್ಲಿ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಹೆಸರನ್ನು ಪರಗುರು ಎಂದು ಪ್ರಕಟಿಸಿದ್ದಾರೆ. ಅದು ಈ ತಪ್ಪು ಎರಡು ಕಡೆ ಪುನರಾವರ್ತನೆಯಾಗಿದೆ. ಪತ್ರಿಕೆಯ ತುಣುಕನ್ನು ಒಂದು ಸಾರಿ ಗಮನಿಸಿ…..(ಮುಂದಿನ ಕೆಂಪು ಅಕ್ಷರಗಳ ಮೇಲೆ ಕ್ಲಿಕ್ ಮಾಡಿ) ಆತುರದ ಅವಘಡವೋ..ಅರೆ ತಿಳುವಳಿಕೆಯ ಪ್ರತಿಫಲನವೋ..?

 

ಜುಗಾರಿ ಕ್ರಾಸ್ : ‘ವಿನಮ್ರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ..’

‘ಅವಧಿ’ ವೆಬ್ ಸೈಟ್ ನಲ್ಲಿ ಡಬ್ಬಿಂಗ್ ಕುರಿತಾದ ಚರ್ಚೆಯಲ್ಲಿ ಬಿ.ಸುರೇಸ್ ರವರ ಪ್ರತಿಕ್ರಿಯೆಗೆ ನನ್ನ ಮರು ಪ್ರತಿಕ್ರಿಯೆಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿದ್ದೇನೆ. (http://avadhimag.com/?p=54489)

ಒಂದು ಚರ್ಚೆಯನ್ನು ಯಾವುದೇ ತಾರ್ಕಿಕ ಅಂತ್ಯ ಕಾಣೀಸದೆ ಎಷ್ಟು ಶತಮಾನಗಳವರೆಗೆಯಾದರು ಎಳೆದುಕೊಂಡು ಹೋಗಬಹುದು. ಏಕೆಂದರೆ ಚರ್ಚೆ ದಿನಕಳೆದಂತೆ ವಾದಕ್ಕೆ ತಿರುಗುತ್ತೆ. ಅದರ ಜೊತೆಗೆ ಒಣ ಅಹಂಗಳು ಜನ್ಮ ತಾಳುತ್ತವೆ. ಇದಮಿತ್ಥಂ ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತವನನ್ನು ಜಪ್ಪಯ್ಯ ಅಂದರು ಮನವೊಲಿಸಲು ಸಾಧ್ಯವಿಲ್ಲ. ಹೀಗಾಗಿಯೇ ಇಂದು ನಮ್ಮಲ್ಲಿ ಹಲವು ಮಹತ್ವದ ನಿಲುವುಗಳು ಯಾವ ಪರಿಹಾರ ಕಾಣದೆ ಪ್ರಶ್ನಾರ್ಥಕವಾಗಿ ಉಳಿದು ಹೋಗಿವೆ. ಅವುಗಳ ನಡುವೆ ಡಬ್ಬಿಂಗ್ ವಾದ ಕೂಡಾ ಒಂದು.

ಮೊದಲೆ ತಿಳಿಸಿ ಬಿಡುತ್ತೇನೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಗೆ ಹಾನಿಯಾಗದಂತೆ ಡಬ್ಬಿಂಗ್ ಮಾಡುವುದು ಯಾವುದೇ ಅಪರಾಧವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಮತ. ಈ ನಿಟ್ಟಿನಲ್ಲಿ ನಾನು ಕೂಡಾ ಡಬ್ಬಿಂಗ್ ಪರವಾಗಿಯೇ ಇದ್ದೇನೆ. ಅದಕ್ಕೆ ಯಾರದೋ ಏಜೆಂಟ್ ಎಂಬ ಹಣೆಪಟ್ಟಿ ಹಚ್ಚಿದರು ಚಿಂತೆಯಿಲ್ಲ. ಇನ್ನು ಅವಧಿಯಲ್ಲಿ ಸತತವಾಗಿ ಈ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇನೆ. ದಿನೇಶ್ ಮತ್ತು ಹರ್ಷ ಅವರು ಮುಂದಿಟ್ಟ ವಾದದಲ್ಲಿ ನಿಚ್ಚಳವಾಗಿ ಯಾವುದು ಪೂರ್ವಾಗ್ರಹಗಳಿರಲಿಲ್ಲ ಮತ್ತು ವಿತ್ತಂಡವಾದದ ಘಮಲು ಕಾಣಿಸುವುದಿಲ್ಲ. ಹೀಗಿರುವಾಗ ಸುರೇಶ್ ಸರ್ ಅವರು ವಾದವನ್ನು ಆ ನಿಟ್ಟಿನಲ್ಲಿ ಸಮರ್ಥಿಸಿ ಕೊಳ್ಳದೆ ತಮ್ಮದೆ ನೆಲೆಗಟ್ಟಿನಲ್ಲಿ ಮಂಥಿಸಿದ್ದು ಏಕ ಪಕ್ಷೀಯವೆಂದೆನಿಸುವದರಲ್ಲಿ ಯಾವ ಸಂಶಯವಿಲ್ಲ. ಇನ್ನೂ ಚರ್ಚೆಯೊಳಗೆ ನುಸುಳೆನು ಎನ್ನುತ್ತಾ ನುಸುಳಿದ ಸೀತಾರಾಂ ಸರ್ ಕೂಡಾ ಹೇಳಿದರು ಹೇಳದಂತೆ ಇರುವ ಹಾಗೆ ಕೊನೆಗೆ ಅಮೀರ್ ನಡೆಸಿ ಕೊಡುವ ಸತ್ಯ ಮೇವ ಜಯತೆಯ ಬಡ್ಜೆಟ್ ಕುರಿತು ಪ್ರಸ್ತಾಪಿಸಿದ್ದಾರೆ. ಒಂದು ವಿಷಯ ಇಲ್ಲಿ ಗಮನಿಸ ಬೇಕು ಈ ಇಬ್ಬರು ಒಂದೊಂದು ವಾಹಿನಿಯಲ್ಲಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ಅತೀ ಪ್ರಭಾವಿ ನಿರ್ದೇಶಕರುಗಳು (ನಿರ್ಮಾಪಕರು ಕೂಡಾ ಇವರೇ). ಈ ಧಾರಾವಾಹಿ ಪ್ರಪಂಚದಲ್ಲಿ ಸುಮಾರು ಆರು ವರ್ಷ ಮಿಂದೆದ್ದು ಬಂದ ನನಗೆ ಇದರ ಆಳ ಅಗಲದ ಸಂಪೂರ್ಣ ಅರಿವು ಇದೆ. ಹೀಗಾಗಿ ನಾನು ಈ ವಿಷಯದಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಸೀತಾರಾಂ ಸರ್ ಮತ್ತು ಸುರೇಶ್ ಸರ್, ಅಮೀರ್ ನ SJM ಬಗ್ಗೆ ಎತ್ತಿದ ಅಪಸ್ವರ ನಿಜಕ್ಕು ನನ್ನಲ್ಲಿ ಅನೇಕ ಅಚ್ಚರಿಗಳನ್ನು ಉಂಟು ಮಾಡಿದೆ.

ಮೊದಲು ಸುರೇಶ್ ಸರ್ ಪತ್ರಿಕೆಗೆ ಬರೆದ ಲೇಖನ ಓದಿದ ದಿನ ನನಗೆ ನಿಜಕ್ಕು ಶಾಕ್ ಆಗಿದ್ದು, ಸುರೇಶ್ ಸರ್ ಏಕೆ ಈ ರೀತಿ ವ್ಯರ್ಥ ಪ್ರಲಾಪಕ್ಕೆ ಕೈ ಹಾಕಿದ್ದಾರೆ ಎಂಬುದು. ಯಾಕೆಂದರೆ ಇದೇ ಟೆಲಿವಿಷನ್ ಜಗತ್ತಿನಲ್ಲಿ ಅಪಾರ ಅನುಭವವುಳ್ಳ ಅವರಿಗೆ ಒಂದು ಕಾರ್ಯಕ್ರಮದ ಹಿಂದಿನ ವ್ಯಾಪಾರಿ ಮನೋಭಾವದ ವಿವಿಧ ಸ್ಥರಗಳ ಸಂಪೂರ್ಣ ಅರಿವು ಇಲ್ಲದಿಲ್ಲ. ಹೀಗಾಗಿ ಮೊದಲು ಈ “ಸೋಗಲಾಡಿ” ಎಂಬ ಪದ ಬಳಕೆಯ ಅನಿವಾರ್ಯತೆ ಬೇಕಿತ್ತೆ ಎಂಬುದು. ಅವರೇ ನಿರ್ಮಿಸಿ, ನಿರ್ದೇಶಿಸಿದ ತಕಧಿಮಿತಾ ಮತ್ತು ನಾಕುತಂತಿ ಧಾರಾವಾಹಿಗಳ ಅನೇಕ ಸಂಚಿಕೆಗಳನ್ನು ನಾನು ವೀಕ್ಷಿಸಿದ್ದೇನೆ. ಅವುಗಳ ಮೂಲಕ ಹಲವು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಸಾಧ್ಯತೆಯನ್ನು ಅವರು ನಿರೂಪಿಸಿದ್ದಾರೆ. ಹೀಗಿರುವಾಗ ಅಮೀರ್ ಮಾಡಿದ್ದು ಸೋಗಲಾಡಿತನ ಎಂದು ಬಣ್ಣಿಸುವುದಾರೆ, ನಿಮ್ಮ ಕಾಳಜಿಯಲ್ಲು ಅದೇ ಅನುಮಾನ ಕಾಡಬಹುದಲ್ಲವೇ?

Image

ಅವಧಿಯಲ್ಲಿ ಪ್ರಕಟಗೊಂಡ ಲೇಖನದ ಸ್ಕ್ರೀನ್ ಶಾಟ್

ಸರ್ ನಿಮ್ಮಿಬ್ಬರ ಸಾಮಾಜಿಕ ಕಾಳಜಿ ಮತ್ತು ಈ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ನಿಮಗಿರುವ ಅಪಾರ ಅಧ್ಯಯನದ ಕುರಿತು ಮಾತಾನಾಡುವ ದಾಷ್ಟ್ಯ ಖಂಡಿತ ನನಗಿಲ್ಲ. ಏಕೆಂದರೆ ನಿಮ್ಮ ಧಾರಾವಾಹಿಗಳ ಮೂಲಕವೇ ನಾನು ನನ್ನ ಜ್ಞಾನ ಸಂಪತ್ತನ್ನು ವೃದ್ಧಿಸಿ ಕೊಂಡಿದ್ದು. ಹೀಗಾಗಿ ವಿನಮ್ರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ಪ್ರಸ್ತುತ ಎಲ್ಲಾ ವಾಹಿನಿಗಳ ಏಕಮೇವ ಗುರಿ ಏನಾದರು ಮಾಡಿ ಟಿಆರ್ ಪಿ ತರುವ ಕಾರ್ಯಕ್ರಮ ರೂಪಿಸಿ ಎಂಬುದು. ಸುರೇಶ್ ಸರ್ ಗೆ ಇದರ ಪ್ರಾಮುಖ್ಯತೆ ನಾನು ವಿವರಿಸ ಬೇಕಿಲ್ಲ. ಏಕೆಂದರೆ 3.30 ಮತ್ತು 4.00 ಗಂಟೆಯಂತಹ very low viewership ಇರುವಂತಹ Time Band ನಲ್ಲಿ ಅವರು ಸುಮಾರು 8 ಹಾಗೂ 9ಕ್ಕಿಂತ ಹೆಚ್ಚು (Total Market 4+) ಟಿಆರ್ ಪಿ ಸಾಧಿಸಿದ್ದಾರೆ. ಕೇವಲ 3, 4 ಬಂದರೆ ಹೆಚ್ಚೆನ್ನುವ ಇಂತಹ ಸಮಯದಲ್ಲಿ ಅದರ ಮೂರ್ನಾಕು ಪಟ್ಟು ಅಧಿಕ ಸಂಖ್ಯೆಗಳನ್ನು(Weekdays) ಸಾಧಿಸಿದ್ದು ಅದು ಕೇವಲ ಸುರೇಶ್ ಸರ್ ಮಾತ್ರ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅಂತಹವರಿಗೆ ಒಂದು ಕಾರ್ಯಕ್ರಮವನ್ನು ಹೇಗೆ ಮಾರ್ಕೆಟ್ ಮಾಡಬೇಕಾಗುತ್ತದೆ ಎಂಬುದನ್ನು ವಿವರಿಸುವುದು ಮೂರ್ಖತನದ ಕೆಲಸ. ಹೀಗಿರುವಾಗ ಅಮೀರ್ ಮಾಡಿದ್ದು ಕೂಡಾ ಅದನ್ನೆ ಅಲ್ಲವೇ! ಆದರೆ ಈ ನೆಲದ ಜ್ವಲಂತ ಸಮಸ್ಯೆಗಳ ಗಂಭೀರತೆಯನ್ನು ಪರಿಚಯಿಸುವ ಧೈರ್ಯವನ್ನು ಎಲ್ಲಿಯೂ ಕೃತಕವಾಗದಂತೆ ರೂಪಿಸಿದ ಹೆಗ್ಗಳಿಕೆಯನ್ನು ನಿಮ್ಮಂತಹ ಸಹೃದಯಿಗಳು ಸ್ವಾಗತಿಸದೆ, ಅದನ್ನು ಕನ್ನಡದಲ್ಲಿ ಬಂದ ಬೀದಿ ಜಗಳವನ್ನು ಮೀರಿಸುವ ಕಾರ್ಯಕ್ರಮದ ಜೊತೆ ಹೋಲಿಸುವ ಅನಿವಾರ್ಯತೆ ನಿಜಕ್ಕೂ ನನಗೆ ಅರ್ಥವಾಗಲಿಲ್ಲ. ಒಂದು ಹೆಂಗಸು ತನಗೆ ಗಂಡ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದರೆ ನಮ್ಮ, ನಿಮ್ಮಂತಹವರ ಕಣ್ಣು ತೇವವಾಗುವುದು ಸಹಜವಲ್ಲವೇ. ನೀವು ಅದನ್ನು ನಾಟಕೀಯವೆನ್ನುವುದಾದರೆ ನಾವೆಲ್ಲ ಸಹಜ ಸ್ಪಂದನೆಯನ್ನೆ ಕಳೆದು ಕೊಂಡಿದ್ದೇವೆ ಎಂದೆನಿಸುವುದಲ್ಲವೇ? ಇನ್ನು ನೀವು ಬ್ರ್ಯಾಂಡರ್ ಬಗ್ಗೆ ಮಾತನಾಡಿದ್ದೀರಿ, ಅಮೀರ್ ನ ಕೊಕೊಕೋಲಾ, ಟೈಟಾನ್ ವಾಚ್ ಜಾಹೀರಾತಿಗೂ ಈ ಕಾರ್ಯಕ್ರಮಕ್ಕು ಥಳಕೂ ಹಾಕಿದ್ದೀರಿ, ಕ್ಷಮೆ ಇರಲಿ ನಿಮ್ಮ “ಪುಟ್ಟಕ್ಕನ ಹೈವೇ” ಬಿಡುಗಡೆಗೊಂಡಿದ್ದು, ಈ ದೇಶಕ್ಕೆ ಮಾಲ್ ಸಂಸ್ಕೃತಿಯ ಪರಿಚಯದೊಂದಿಗೆ ಉದಯಿಸಿದ ಪಿವಿಆರ್ ಮತ್ತು ಐನಾಕ್ಸನಂತಹ ಸಿನಿಮಾ ಮಂದಿರಗಳಲ್ಲಿ ಅಲ್ಲವೇ! ನೀವು ಕೂಡಾ ಅಪಾರ ಕಾಳಜಿಯೊಂದಿಗೆ ನಿರ್ಮಿಸಿದ ಚಿತ್ರವನ್ನು ಸಮಾಜಕ್ಕೆ ಮುಟ್ಟಿಸಲು ಆಯ್ದುಕೊಂಡ ಮಾರ್ಗ ಇದು ಅಷ್ಟೇ! ಅದರಲ್ಲಿ ಸಿನಿಕತನ ಹುಡುಕುವುದು ನ್ಯಾಯಸಮ್ಮತವಲ್ಲ ಅಲ್ಲವೇ? ಹಾಗೆಯೇ ನೀವು ನಿರ್ಮಿಸುವ, ನಿರ್ದೇಶಿಸುವ ಟಿವಿ ಕಾರ್ಯಕ್ರಮಗಳಿಗೆ ಜಾಹೀರಾತನ್ನು ನಿಗದಿ ಪಡಿಸುವುದು ಚಾನೆಲ್ ಗೆ ಬಿಟ್ಟ ವಿಷಯ ಅದು ಅದರ ವ್ಯಾಪಾರಿ ತಂತ್ರವನ್ನು ಅವಲಂಭಿಸಿರುತ್ತದೆ. ಅದಕ್ಕೆ ಅಮೀರ್ ಹೇಗೆ ಜವಾಬ್ದಾರಿಯುತನಾಗುತ್ತಾನೆ. ಇನ್ನು ಅವನು ಸತ್ಯಸಂಧನಂತೆ ಎಲ್ಲು ಫೋಸು ಕೊಟ್ಟಿಲ್ಲ. ಹೊಟ್ಟೆ ಪಾಡಿಗೆ ಮಾಡುವ ಅನೇಕ ನ್ಯಾಯ ಸಮ್ಮತ ಹಾದಿಯಲ್ಲಿಯೇ ಜಾಹೀರಾತು ಆಯ್ದುಕೊಂಡಿದ್ದಾನೆ. ಇದರಲ್ಲಿ ಅದ್ಯಾವ ಅಪರಾಧ ಅಡಗಿದೆ. ಅಮೀರ್ ತನ್ನ ಇತ್ತೀಚಿನ ಹಲವು ಚಿತ್ರಗಳ ಮೂಲಕ ಸಾಮಾಜಿಕ ಸ್ಪಂದನೆ ಹಾಗೂ ಜವಾಬ್ದಾರಿ ತನಗೂ ಇದೆ ಎಂಬುದನ್ನು ಸ್ಪಷ್ಟವಾಗಿ ತೆರೆದಿಟ್ಟ ಏಕೈಕ ನಟ. ಹೀಗಿರುವಾಗ ಅಮೀರ್ ನ ನೈತಿಕತೆಯನ್ನು ಅದ್ಯಾಕಾಗಿ ಪ್ರಶ್ನಿಸುವುದು ಅರ್ಥವಾಗುತ್ತಿಲ್ಲ. ಸೀತಾರಾಂ ಸರ್ ಬಡ್ಜೆಟ್ ವಿಷಯಕ್ಕೆ ಈಗಾಗಲೇ ಒಬ್ಬರು ಕಾಮೆಂಟ್ ಬರೆದಿದ್ದ ನೆನಪು.ಅದಕ್ಕೆ ಅದರ ಚರ್ಚೆ ಅಗತ್ಯವೆನಿಸುವದಿಲ್ಲ.

ಕೊನೆಯ ಮಾತು ನನ್ನ ಅಲ್ಪ ಬುದ್ಧಿಗೆ ಹೊಳೆದಂತೆ ಸುರೇಶ್ ಸರ್ ಡಬ್ಬಿಂಗ್ ವಿರೋಧಿಸುವ ಧಾವಂತದಲ್ಲಿ ಅಮೀರ್ ನ SJM ನಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದೆನಿಸುತ್ತದೆ. ಏಕೆಂದರೆ ಡಬ್ಬಿಂಗ್ ಟೆಲಿವಿಷನ್ ಗೆ ಕಾಲಿಟ್ಟರೆ ಇಲ್ಲಿನ ಹಲವು ಪ್ರತಿಭಾವಂತ ನಿರ್ದೇಶಕರು ಅಸ್ತಿತ್ವದ ಬಗ್ಗೆ ಯೋಚಿಸ ಬೇಕಾಗುತ್ತದೆ. ಏಕೆಂದರೆ ಚಲನಚತ್ರ ನಿರ್ಮಿಸಲು ಯಾರ ಮುಲಾಜಿಗು ಕಾಯಬೇಕಿಲ್ಲ, ಆದರೆ ಧಾರಾವಾಹಿಗಳನ್ನು ನಿರ್ಮಿಸಬೇಕೆಂದರೆ ಅದಕ್ಕೆ ಚಾನೆಲ್ ನವರ ಮರ್ಜಿ ಕಾಯಲೇ ಬೇಕು. ಏಕೆಂದರೆ ಈಗ ಕನ್ನಡದ ಎಲ್ಲಾ ಚಾನೆಲ್ (ಕಸ್ತೂರಿ ಹೊರತು ಪಡಿಸಿ)ಪರ ಭಾಷೆಯವರ ಸ್ವತ್ತು ಎಂಬುದು ಇಲ್ಲಿ ಗಮನಾರ್ಹ.

 

ಒಳ್ಳೆಯ ಸಿನಿಮಾ ಮಾಡದ ನಮ್ಮ ಚಿತ್ರರಂಗದವರಿಗೆ “ಡಬ್ಬಿಂಗ್” ಡೊಂಕೆ..!

ಮೊದಲೆ ಸತತ ಸೋಲು ಹಾಗೂ ವಿವಾದಗಳಿಂದ ಕಂಗೆಟ್ಟ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸುಂಟರಗಾಳಿ ಎದ್ದಿದೆ. ಅದು ಡಬ್ಬಿಂಗ್ ಬೇಕೋ, ಬೇಡವೋ ಎಂಬ ಕೊನೆಗಾಣದ ವ್ಯರ್ಥ ಕಸರತ್ತಿನ ಚರ್ಚೆ. ಇಷ್ಟಕ್ಕೂ ಇದು ಕೇವಲ ನಿನ್ನೆ, ಮೊನ್ನೆ ಉದ್ಭವವಾದದ್ದಲ್ಲ, ಆಗಾಗ ಗುಮ್ಮನಂತೆ ಚಿತ್ರರಂಗದ ಕೆಲವರನ್ನು ಕಾಡುತ್ತಿದೆ. ಇಷ್ಟಕ್ಕೂ ಎಲ್ಲಿಯೂ ಸಮಸ್ಯೆಯನ್ನೆ ಸೃಷ್ಟಿಸಿದ ಡಬ್ಬಿಂಗ್ ವಿಷಯ ಕನ್ನಡ ಚಿತ್ರರಂಗದವರನ್ನು ಬೆಚ್ಚಿ, ಬೀಳಿಸುತ್ತಿರುವುದಾದರು ಯಾಕೆ?

ನಿಜಕ್ಕೂ ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಮಾರಕ, ಭಾಷೆ, ಕಾರ್ಮಿಕರು ಎಂದೆಲ್ಲ ಉದಾತ್ತತೆಯ ಬಗ್ಗೆ ಗಂಟಲು ಹರಿದುಕೊಳ್ಳುವ, ಪ್ರಾಣ ತ್ಯಾಗಕ್ಕು ಸಿದ್ಧರಾದ ನಮ್ಮ ಚಿತ್ರರಂಗದವರಿಗೆ ಕೆಲವು ಅಪಥ್ಯದ ಪ್ರಶ್ನೆಗಳು…

ನಿಜಕ್ಕೂ ಇಂದು ಯಾರೆಲ್ಲ ಡಬ್ಬಿಂಗ್ ಬೇಕು ಎಂದು ಹೇಳುತ್ತಿದ್ದೇವೋ ನಾವೆಲ್ಲ ಕನ್ನಡದ ಮೇಲೆ ಪ್ರೀತಿ ಇರುವವರು ಮತ್ತು ಹೆಚ್ಚಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೆ. ಆದರೆ ಭಾಷೆಯನ್ನೆ ಗುರಾಣಿಯಾಗಿಟ್ಟುಕೊಂಡು ಡಬ್ಬಿಂಗ್ ವಿರೋಧಿಸುವ ನೀವು ಕನ್ನಡದ ಉಳಿವಿಗೆ ಅದೆಂತಹ ಮಹಾತ್ಕಾರ್ಯಗಳನ್ನು ಕೈಗೊಂಡಿದ್ದೀರಿ ಸ್ವಲ್ಪ ವಿಶದವಾಗಿ ವಿವರಿಸಿ. ಹಾಗೆಯೇ ನಮ್ಮ ಇತ್ತೀಚಿನ ಕನ್ನಡ ಚಿತ್ರಗಳು ( ಏಕೆಂದರೆ ನಿಜುಕ್ಕೂ ಭಾಷೆಯನ್ನು ಸಮೃದ್ಧಗೊಳಿಸುವಂತಹ ಉತ್ತಮ ಸದುಭಿರುಚಿಯ ಚಿತ್ರಗಳು ಕನ್ನಡಕ್ಕೆ ಕಲಶದಂತಿದ್ದವು ಅದು ಆ ಕಾಲ) ಭಾಷೆಯನ್ನ ಕಾಪಾಡುವಲ್ಲಿ ಹೇಗೆಲ್ಲಾ ಶ್ರಮಿಸುತ್ತಿವೆ ಎಂದು ತಿಳಿಸಿ ಕೊಡಿ. ಅದ್ಯಾವ ಮಹಾನುಭಾವ ಇತ್ತೀಚಿನ ಕನ್ನಡ ಚಿತ್ರಗಳನ್ನು ನೋಡಿ ಕನ್ನಡದ ಭಾಷೆಯ ಬಗ್ಗೆ ಅಪ್ರತಿಮ ಅಭಿಮಾನವನ್ನು ಪ್ರದರ್ಶಿಸಿದ ಉದಾಹರಣೆಗಳಿದ್ದರೆ ನಮಗೂ ಸ್ವಲ್ಪ ಹೇಳಿ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಐದಾರು ದಶಕದೀಚೆಗೆ ಕಣ್ಣುಬಿಟ್ಟ ಚಿತ್ರರಂಗ ಸಾಕಿ, ಸಲುಹುತ್ತಿದೆ ಎಂಬೆಲ್ಲಾ ಬಿಲ್ಡ್ ಪ್ ಗಳು ದಯವಿಟ್ಟು ಬೇಡ. ಕನ್ನಡ ಭಾಷೆ ವಜ್ರ ಕಾಯವುಳ್ಳದ್ದು, ಅದರ ಒಂದಂಗುಲವನ್ನು ಡಬ್ಬಿಂಗ್ ಎಂಬ ಶಬ್ದ ಮಿಸುಕಾಡಿಸಲಾಗದು. ಅದಕ್ಕೆ ಚಿತ್ರರಂಗದವರ ರಕ್ಷಣೆಯ ಅಗತ್ಯವಿಲ್ಲ.

ಇನ್ನು ಎರಡನೇಯದಾಗಿ ತಾವು ಸೃಜನಶೀಲತೆಯ ಬಗ್ಗೆ ಮಾತನಾಡುತ್ತೀರಿ. ದಯವಿಟ್ಟು ಸ್ವಲ್ಪ ಮಾಹಿತಿ ಕೊಡಿ ಒಂದು ದಶಕದಿಂದೀಚೆಗೆ ಬಂದ ಅದೆಷ್ಟು ಕನ್ನಡ ಚಿತ್ರಗಳಲ್ಲಿ ಸ್ವಂತಿಕೆಯ ಘಮಲು ತುಂಬಿದೆ ಎಂದು ಹೇಳಬಲ್ಲಿರಾ? ನೀವು ಅದ್ಯಾವ ಚಿತ್ರದ ಕಥೆ, ಸಂಗೀತ, ಸಾಹಿತ್ಯ, ದೃಶ್ಯ ಕಲ್ಪನೆ, ಹಾಸ್ಯ, ಸಂಭಾಷಣೆ, ಕದಿಯುವದರ ಜೊತೆಗೆ ಅನ್ಯ ಭಾಷೆಯ ಇಡೀ ಚಿತ್ರವನ್ನೆ ಕನ್ನಡಕ್ಕೆ ಭಟ್ಟಿ ಇಳಿಸಿದ್ದೀರಿ ಎಂಬುದರ ಸಂಪೂರ್ಣ ವಿವರಗಳನ್ನು ಕನ್ನಡದ ಪ್ರೇಕ್ಷಕರು ನಿಮಗೆ ಇಂಚಿಂಚೂ ನೀಡಬಲ್ಲರು. ಸವಾಲು ಎದುರಿಸುವ ಧೈರ್ಯವಿದೆಯೇ? ಇಷ್ಟಕ್ಕೂ ಅದೆಷ್ಟು ಚಿತ್ರಗಳನ್ನು ಪ್ರೇಕ್ಷಕರ ಸದುಭಿರುಚಿಗಾಗಿ ಮಾಡಿದ್ದೀರಿ ಎಂಬುದನ್ನು ಹೇಳಬಲ್ಲಿರಾ? ಇಂದು ಕನ್ನಡ ಚಿತ್ರಗಳಲ್ಲಿ ಕಾಣುವ ಕೆಟ್ಟಾತೀಕೆಟ್ಟ ಐಟಂ ಸಾಂಗ್, ರಕ್ತದೋಕುಳಿ, ಕಥೆಯೇ ಇಲ್ಲದ ಚಿತ್ರಗಳು, ಕೀಳು ಅರ್ಥದ ಸಂಭಾಷಣೆಗಳು ಇವೆಲ್ಲಾ ಮೂಲತಃ ಕನ್ನಡ ಚಿತ್ರಗಳ ಪರಂಪರೆಯ ಪ್ರತೀಕವೇ? ಇವುಗಳನ್ನೆಲ್ಲಾ ಎಲ್ಲಿಂದ ಆಮದು  ಮಾಡಿ ಕೊಂಡಿರಿ ಎಂಬುದರ ಜಾತಕ ಬಿಚ್ಚಿಡುತ್ತೀರಾ? ಇಷ್ಟೆಲ್ಲಾ ಕದ್ದು ಚಿತ್ರ ಮಾಡುವ ಜನಗಳೆ ತುಂಬಿರುವ ಕನ್ನಡ ಚಿತ್ರರಂಗದವರು ಸೃಜನಶೀಲತೆಯ ಬಗ್ಗೆ ಮಾತನಾಡಿದರೆ ಅದೆಲ್ಲಿಂದ ನಗೋಣಾ ಸ್ವಾಮಿ.

ನಿಮ್ಮ ಬತ್ತಳಿಕೆಯಲ್ಲಿರುವ ಇನ್ನೊಂದು ಅಸ್ತ್ರ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ ಎಂಬುದು. ಇದಂತು ಮಹಾ ದೊಡ್ಡ ಜೋಕು. ಕಾರಣ ಇಂದಿನ ಪರಿಸ್ಥಿತಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಸೇರಿಸಿದರೆ ವರ್ಷಕ್ಕೆ 10 ಕನ್ನಡ ಭಾಷೆಗೆ ಡಬ್ಬಿಂಗ್ ಆಗಬಲ್ಲ ಚಿತ್ರಗಳು ದೊರಕುವುದು ದುರ್ಲಭ. ಅಂತಹದ್ದರಲ್ಲಿ ದಿನ ಬೆಳಗಾಗುವುದುರೊಳಗೆ ಕನ್ನಡ ಚಿತ್ರರಂಗ ಮುಚ್ಚಿಕೊಂಡು ಹೋಗಿ ಬಡುತ್ತದೆ ಎಂಬಂತೆ ಬೊಬ್ಬೆ ಹಾಕುವ ಅಗತ್ಯವಾದರು ಏನು? ಇಷ್ಟಕ್ಕೂ ತೆರೆ-ಮರೆಯಲ್ಲಿ ಬೆವರು ಸುರಿಸುವ ಕಾರ್ಮಿಕ ವರ್ಗಕ್ಕೆ ಇಂದು ಡಬ್ಬಿಂಗ್ ವಿರೋಧಿಸುವ ಜನ, ಕಾರ್ಮಿಕರು ಉಪವಾಸವಿದ್ದಾಗ ಊಟ ಕೊಟ್ಟು ಸಲುಹಿದ ನಿದರ್ಶನಗಳೇನಾದರು ಇವೆಯಾ? ಅದೆಷ್ಟೋ ಆಗಿನ ಸಹ ಕಲಾವಿದರು, ನಿರ್ದೇಶಕರು, ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದ ವ್ಯಕ್ತಿಗಳು ಇಂದು ಬದುಕಿನ ಒಂದೊಂದು ದಿನವನ್ನುಪಡಬಾರದ ಕಷ್ಟ ಪಟ್ಟು ಮುಂದೂಡುತ್ತಿರುವಾಗ ಯಾವ್ಯಾವ ನಿರ್ಮಾಪಕರು ಅವರ ಬೆಂಬಲಕ್ಕೆ ಹೋಗಿದ್ದಿದೆ ನೀವೆ ಹೇಳಿ. ತಮ್ಮದೆ ಚಿತ್ರದಲ್ಲಿ ದುಡಿದ ಎಲ್ಲಾ ಕಾರ್ಮಿಕರಿಗೆ ಅದೆಷ್ಟು ನ್ಯಾಯಬದ್ಧ ವೇತನ ನೀಡುತ್ತಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವೇ?

ಇನ್ನು ಟೆಲಿವಿಷನ್ ಅವರ ವಿಷಯಕ್ಕೆ ಬಂದರೆ ಇಲ್ಲಿಯೂ ಅದೇ ರಾಗ ಅದೇ ಹಾಡು. ಪರಭಾಷಾ ಧಾರಾವಾಹಿಗಳನ್ನು ಚಾನೆಲ್ ನವರಿಂದ ಎರವಲು ಪಡೆದು ಹೇಗಾದರು ಮಾಡಿ ಒಂದು ಸ್ಲಾಟ್ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ನಿರ್ಮಾಪಕರು ಅದೆಷ್ಟು ಉತ್ತಮ ಧಾರಾವಾಹಿಗಳನ್ನು ದಿನ ನಿತ್ಯ ಉಣ ಬಡಿಸುತ್ತಿದ್ದಾರೆ ಹೇಳಿ ನೋಡೋಣ. ಇಂದು ಕನ್ನಡದಲ್ಲಿರುವ ಎಲ್ಲಾ ಮನರಂಜನಾ (ಕಸ್ತೂರಿ ಹೊರತು ಪಡಿಸಿ) ಚಾನೆಲ್ಗಳು ಮೂಲತಃ ಬೇರೆ ರಾಜ್ಯದವರದ್ದು. ಅವರ ಒಡೆತನದ ಬೇರೆ, ಬೇರೆ ಭಾಷೆಯ ಧಾರಾವಾಹಿಗಳೆ ಇಂದು ಆಯಾ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ರಿಮೇಕ್ ನ್ನು ನೀವು ಅಷ್ಟೊಂದು ಆಪ್ತತೆಯಿಂದ ಅಪ್ಪಿಕೊಂಡಿರುವಾಗ ಅದರ ಬದಲು ಮೂಲ ಧಾರಾವಾಹಿಯನ್ನೆ ಡಬ್ಬಿಂಗ್ ಮಾಡಿ ನೋಡಬಹುದಲ್ವೆ. ಅದ್ಯಾವ ಘನ ಅಭಿಮಾನಕ್ಕೆ ನಿಮ್ಮ ನಿರ್ಮಾಣವನ್ನು ಬೆಂಬಲಿಸಬೇಕು.

ಇದೊಂದು ಕೈಲಾಗದವರು ಮೈಯೆಲ್ಲಾ ಪರಿಚಿ ಕೊಳ್ಳುವ ಪರಿ ಅಷ್ಟೆ. ಉತ್ತಮವಾದದ್ದು ಎಲ್ಲಿಯೇ ಇರಲಿ, ಯಾವ ಭಾಷೆಯಲ್ಲಾದರು ಇರಲಿ ಅದನ್ನು ಒಪ್ಪಿಕೊಳ್ಳಬೇಕು. ರಿಮೇಕ್ ಹೇಗೆ ಸ್ವೀಕರಿಸಿದ್ದೇವೋ, ಡಬ್ಬಿಂಗ್ ಕೂಡಾ ಹಾಗೆಯೇ. ಒಂದು ವೇಳೆ ನಿಮಗೆ ಚಿತ್ರರಂಗದ ಬಗ್ಗೆ ಅಷ್ಟೊಂದು ಕಾಳಜಿ ಇರುವುದಾದರೆ ರಿಮೇಕ್ ನ್ನು ಬಹಿಷ್ಕರಿಸಿ, ಅದನ್ನೂ ನಮ್ಮಲ್ಲಿ ಬ್ಯಾನ್ ಮಾಡೋಣ. ಅದು ಬಿಟ್ಟು “ ಕುಣಿಯಲು ಬರದವನಿಗೆ ನೆಲ ಡೊಂಕು “ ಎಂಬಂತೆ ನಿಮ್ಮ ಸ್ವ ಹಿತಾಸಕ್ತಿಗೆ ಡಬ್ಬಿಂಗ್ ವಿರೋಧದ ಮುಖವಾಡವೇಕೆ.

ಇಂದು ನಮ್ಮ ಸಂಸ್ಕೃತಿಯನ್ನೆ ಮರೆಸುತ್ತಿರುವ ತಲೆ ಬುಡವಿಲ್ಲದ ಚಿತ್ರಗಳ ಉದ್ಧಾರಕ್ಕೆ ಎನ್ ಜಿ ಸಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ನಲ್ಲಿ ಬರುವ ಅಪರೂಪದ ಮಾಹಿತಿಯೊಳಗೊಂಡ ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲಿಯೂ ಪ್ರಸಾರವಾಗಿ ಮಕ್ಕಳ ಜ್ಞಾನ ಬಂಢಾರ ಉತ್ತಮಗೊಳ್ಳಲಿ. ನಮ್ಮವರಿಂದ ಎಂದು ನಿರ್ಮಿಸಲಾಗದ ಹಾಲಿವುಡ್ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಆ ಅದ್ಭುತ ಅನುಭೂತಿಯನ್ನು ನಾವು ಅನುಭವಿಸುವಂತಾಗಲಿ. ಈಗಾಗಲೇ ಡಬ್ಬಿಂಗ್ ಗೆ ಬೆಂಬಲ ವ್ಯಕ್ತಪಡಿಸಿರುವ ಹಲವರು ಡಬ್ಬಿಂಗ್ ಯಾಕೆ ಬೇಕು ಎಂಬ ಪ್ರಬುದ್ಧ ಸಮರ್ಥನೆಯನ್ನು ಹಂಚಿಕೊಂಡಿದ್ದಾರೆ. ಜ್ಞಾನ ವೃದ್ಧಿಗೆ, ಹೊಸ ತನಕ್ಕೆ ಸದಾ ತೆರೆದು ಕೊಳ್ಳಲೆ ಬೇಕು. ಇಲ್ಲದಿದ್ದರೆ ನಿಂತ ನೀರು ರಾಡಿಯಾಗುತ್ತದೆ, ಕೊಚ್ಚೆಯಾಗುತ್ತದೆ. ಅದರ ಪ್ರತಿ ಫಲನ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಮ್ಮ ಬೇಳೆ ಬೇಯೋದಿಲ್ಲ ಎಂಬ ಒನ್ ಲೈನ್ ಅಜೆಂಡಾ ಇಟ್ಟಕೊಂಡವರು ಮಾತ್ರ ಡಬ್ಬಿಂಗ್ ನ್ನು ಹೇಗಾದರು ದೂರ ಇಡೋಣ ಎಂದು ಇಲ್ಲದ ಗುಲ್ಲೆಬ್ಬಿಸುತ್ತಿದ್ದಾರೆ. ಡಬ್ಬಿಂಗ್ ಬೇಕೋ, ಬೇಡವೋ ಎಂಬುದರ ಆಯ್ಕೆ ಪ್ರೇಕ್ಷಕರದ್ದೆ ಹೊರತು ಚಿತ್ರರಂಗದವರದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿಗೆ ಡಬ್ಬಿಂಗ್ ಅಪರಾಧವಲ್ಲ. ನ್ಯಾಯಾಲಯದ ಮೆಟ್ಟಿಲೇರಿದರೆ ತೀರ್ಪು ಏನಾಗಬಹುದು ಎಂಬುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಅಲ್ಲವೇ!

 
 
%d bloggers like this: